ಸಾವು

ಈಗ ಸಾವು
ಹೊಸ್ತಿಲಿಗೆ ಬಂದು ನಿಂತಿದೆ
ಅದನ್ನು ಒಳ ಕರೆಯಬೇಕೋ
ನಾನೇ ಹೊರ ಹೋಗಬೇಕೋ ತಿಳಿಯುತ್ತಿಲ್ಲ

ಕೊನೆಯದಾಗೊಮ್ಮೆ ನಿನ್ನೊಂದಿಗೆ
ಕಳೆದ ಪುರಾತನ ಕ್ಷಣವೊಂದನ್ನು
ಸೋರುವ ಮೊಲೆತೊಟ್ಟಿನ ಬುಡದಲ್ಲಿ ಹಚ್ಚಿಟ್ಟು
ಎರೆಡೆಸಳು ಚಿಗುರುವವರೆಗೂ
ಅದನ್ನು ಕಾಯಿಸಬೇಕೆನಿಸುತ್ತಿದೆ

ನೀ ನನ್ನ ಸುಪ್ತ ತಿಳುವಳಿಕೆ
ಮರು ಕ್ಷಣ ನಿನ್ನ ದೇಹ
ಯಾವ ಪಲ್ಲಟಕ್ಕೆ ಹೊರಳಬಹುದೆನ್ನುವ
ಸಣ್ಣ ಸೂಕ್ಷವೂ ಅರಿವಿಲ್ಲದೇ
ತಿಳಿದುಹೋಗುತ್ತದೆ ನನಗೆ
ಇದೇ ಈಗ ನೀನು
ರತಿ ಶಿಖರ ಮುಟ್ಟಿ
ಸ್ಖಲಿಸಬಹುದೆನ್ನುವುದೂ ಸಹ

ನಿಲ್ಲು ಸಾವೇ
ನನ್ನ ದೇಹದ ಮೇಲಿನ ಅವನ
ಬೆರಳಚ್ಚುಗಳ ಎಣಿಕೆಯಿನ್ನೂ ಮುಗಿದಿಲ್ಲ
ಅವನು ಆಸೆ ಪಡುವ ನಡುವಿನ
ಮಡಿಕೆಗಳು ಅವನ ಕೊನೆ
ಸ್ಪರ್ಷಕ್ಕಾಗಿ ಕಾಯುತ್ತಿವೆ
ಒಂದಿಡೀ ದಿನ ಹಾದರ ಮಾಡಿ
ಅವನ ನಿಷ್ಠೆಯನ್ನು ಹೊತ್ತು ತರುತ್ತೇನೆ
ನಿಂತು ಬಿಡು

ಅವನುದರದಲ್ಲಿ ಕಡಿದ ಕರುಳ
ಹೂತಿಟ್ಟು ಮಮತೆಯ
ಮೊಳೆಯಿಸಲು ಹೇಳಿಬರುತ್ತೇನೆ
ಒಂಟಿ ರಾತ್ರಿಗಳ ಇರುಳಲ್ಲಿ
ಗಾಳಿಯಾಗಿ ಮೆಟ್ಟುತ್ತೇನೆಂದು
ಹಸಿ ತುಟಿಗಳಿಂದೊಮ್ಮೆ
ಪಿಸುಗುಟ್ಟಿ ಬರುತ್ತೇನೆ

ಮತ್ತೆ ಅವನು
ನಾನು ಮಲಗಿದ
ಇದೇ ಹಾಸಿಗೆಯ ಮೇಲೆ
ಮತ್ಯಾರೊಂದಿಗೋ ಸುಖಿಸುವ
ಕಲ್ಪನೆಯಲ್ಲಿ ನಿನ್ನನ್ನು
ಒಳ ಕರೆಯದೆ
ನಾನೂ ಹೊರ ಬರದೆ
ಹೊಸ್ತಿಲ ಮೇಲೆ ನಿಂತು

ನಿನ್ನನ್ನೇ
ಅಪ್ಪುತ್ತೇನೆ

ಅರ್ಥಾತ್

ನನ್ನ ಕೂದಲ ಕೊನೆಯಲ್ಲಿ
ಕೊನರುತ್ತಿರುವ
ನೀನಾದರೂ ಯಾರು
ಕನಸುಗಳ ರಾಶಿಮಾಡಿ
ಅಗ್ಗಿಷ್ಟಿಕೆಯ ಹುಡುತ್ತಿರುವೆ
ಏಕೋ

ಅರ್ಧಂಬರ್ಧ ಬರೆದ ರಸೀತಿಯಲ್ಲಿ
ಪರಿಹಾರಕ್ಕಾಗಿ ಅರ್ಜಿ
ಗುಜರಾಯಿಸಿದ್ದೇನೆ
ಅರೆ ನೆಂದ ಅಥವಾ ಅರೆ ಒಣಗಿದ
ಪೇಪರಿನ ಮೇಲೆ
ಬರೆದುದೆಲ್ಲವೂ ಅಳಿಸಿಹೋಗಿದೆ

ಕೂದಲ ಬುಡ ಬಲಿತು
ಬಲಿಷ್ಟವಾಗಿದೆ
ಕೊಡಲಿಯಿಂದಲ್ಲದೆ ತುಂಡಾಗದು
ಮತ್ತೆ ನಿನ್ನ ಕೈಲಿರುವುದು
ಇಬ್ಬದಿಯ ಅಲಗು

ಸುಶಾಂತ ಕ್ಷಣಗಳಲ್ಲಿ
ನಿನ್ನ ನಗು ಸಣ್ಣದೊಂದು
ನೆಮ್ಮದಿಯ ಅಮಲೇರಿಸಿಕೊಂಡು
ಅರಳುತ್ತದೆ
ಮತ್ತಾಕ್ಷಣಗಳಿಗಾಗಿ
ನಾ ಮನ್ವಂತರಗಳನ್ನೂ
ಇದೇ ಹೀಗೆ ಸಲೀಸಾಗಿ
ಜಿಗಿಯುತ್ತಾ ಸಾಗುತ್ತೇನೆ
ಅರ್ಥಾತ್ ನಾನು ನಾನಾಗಿದ್ದು
ನಿನ್ನ ನಗುವ ಕಾಣುವುದು
ನನ್ನಿಚ್ಛೆಯಾಗಿದ್ದಾಗ

ಬಿಡು ನೀನಲ್ಲಿ ಪಟ್ಟಾಗಿ ಕೂತಿರುವುದು
ನನ್ನ ಬರಿಗಣ್ಣಿಗೆ ನಿಚ್ಚಳವಾಗಿ
ಕಾಣುತ್ತಿದೆ
ನಡೆಯದೇ ದಾರಿ ಸವೆಯುವುದಿಲ್ಲ
ಮತ್ತೆ ನಿನ್ನ ಕೈಯಲ್ಲೆಂತದದು
ಹ……ತ್ಯಾ…..ರು…….

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)