Advertisement
ಇಲ್ಲಿ ಎಲ್ಲವೂ ಸರಕೇ!: ಸುಕನ್ಯಾ ಕನಾರಳ್ಳಿ ಅಂಕಣ

ಇಲ್ಲಿ ಎಲ್ಲವೂ ಸರಕೇ!: ಸುಕನ್ಯಾ ಕನಾರಳ್ಳಿ ಅಂಕಣ

ಕೆಲವೇ ನಿಮಿಷಗಳಲ್ಲಿ ಕಳ್ಳತನದಿಂದ ಅವರನ್ನು ಒಳಗೆ ಕರೆದುಕೊಂಡು ಒಳಗಿಂದ ಬಾಗಿಲು ಜಡಿದುಕೊಂಡು ಇಡೀ ಕಟ್ಟಡಕ್ಕೆ ಆಧಾರವಾಗಿರುವ ಗೋಡೆಯ ಭಾಗವನ್ನು ಉರುಳಿಸಿದಳು. ಮುಂದಿನದೆಲ್ಲ ರಣರಂಪ. ಅದರ ಕೆಳಗೆ ಮತ್ತು ಮೇಲೆ ಇದ್ದ ಫ್ಲಾಟಿನವರು ಬಂದು ಏನು ಏನು ಎಂದು ನೋಡುವ ಹೊತ್ತಿಗೆ ಗೋಡೆ ಉರುಳಿತ್ತು. ನಮ್ಮ ಕಾಲವೇ ಹಾಗೆ ಅಂತನ್ನಿಸುತ್ತೆ. ಉರುಳಿಸುವುದಾದರೆ ದಕ್ಷತೆಗೇನು ಕಮ್ಮಿ!
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಹದಿನಾಲ್ಕನೆಯ ಬರಹ

ಗಿರೀಶ್ ಕಾಸರವಳ್ಳಿಯವರ ‘ಮನೆ’ ಚಿತ್ರದಲ್ಲಿ ಮಲ್ಟಿನ್ಯಾಷನಲ್ ಉದ್ಯೋಗಿಯಾಗಿರುವ ರಾಜಣ್ಣನ ಹೆಂಡತಿ ಗೀತಾ ಕೊನೆಯಲ್ಲಿ ಸಿಡಿದು ಬೀಳುತ್ತಾಳೆ:

‘ನೀವು ಯಾವುದೇ ಸಂಬಂಧವನ್ನು ಕಟ್ಟಿಕೊಳ್ಳುವ ಶಕ್ತಿಯನ್ನ ಕಳೆದುಕೊಂಡಿದೀರಿ. ಮನೆ ಬಾಡಿಗೆಗೆ ಬೇಕಾದಾಗ ಚಿಕ್ಕಮ್ಮನನ್ನ ಬಳಸಿಕೊಂಡಿರಿ. ಶೆಡ್ಡಿನ ಮಂದಿಯನ್ನ ಖಾಲಿ ಮಾಡಿಸೋದಕ್ಕೆ ಇನ್ಸ್ಪೆಕ್ಟರನ್ನು ಬಳಸಿಕೊಂಡಿರಿ. ಕೊನೆಗೆ ನನ್ನನ್ನೂ ಸಹ ನೀವು ಬಿಡಲಿಲ್ಲ. ನನಗೆ ಇಷ್ಟವಿಲ್ಲದಿದ್ದರೂ ಇನ್ಸ್ಪೆಕ್ಟರನ್ನ ಭೇಟಿ ಮಾಡೋದಕ್ಕೆ ನನ್ನ ಕಳಿಸಿದ್ರಿ. ನಮಗಿಂತ ಆ ಇನ್ಸ್ಪೆಕ್ಟರ್-ಚಿಕ್ಕಮ್ಮನ ಸಂಬಂಧವೇ ಎಷ್ಟೋ ವಾಸಿ…’

ಮಾರಲು ಯಾವ ಮಟ್ಟಿಗೆ ಸುಳ್ಳು ಹೇಳಿದರೂ ಪರವಾಗಿಲ್ಲ ಎನ್ನುವ ಸರಕು ಸಂಸ್ಕೃತಿ ತಾನೇ ತಾನಾಗಿ ಮೆರೆದಿರುವ ಈ ಕಾಲದಲ್ಲಿ ಆಪ್ತ ಸಂಬಂಧಗಳನ್ನು ತಮ್ಮ ಕೆಲಸಕ್ಕೆ ಬಳಸಿಕೊಂಡರೆ ಏನು ಎಂಬ ಉಡಾಫೆಯೂ ಇರುತ್ತದೆ. ಕೆಲಸ ಆದ್ರೆ ಸಾಕಲ್ಲ? ನಾನು ಮೊನ್ನೆ ನಡೆಸಿದ ದೀರ್ಘ ಸಂದರ್ಶನದಲ್ಲಿ ಕಾಸರವಳ್ಳಿಯವರು, ‘ಜಾಹೀರಾತಿನ ಉದ್ದೇಶ ಸುಳ್ಳು ಹೇಳಿ ಮಾರುವುದೇ. ಗಾಂಧೀಜಿ ಅದನ್ನು ಯಾವತ್ತೂ ಒಪ್ಪಿರಲಿಲ್ಲ,’ ಎಂಬ ಅಂಶದ ಬಗ್ಗೆ ಗಮನ ಸೆಳೆದಿದ್ದರು.

ಸ್ವಲ್ಪ ಹಿಂದೆ ನಮ್ಮ ಅಪಾರ್ಟ್ಮೆಂಟಿನಲ್ಲಿ ಹೊಸದಾಗಿ ಫ್ಲಾಟ್ ಕೊಂಡ ಒಬ್ಬ ಚಾಣಾಕ್ಷೆ ಕೆಲಸಗಾರರನ್ನು ಕರೆದುಕೊಂಡು ಬಂದಿದ್ದಳು. ಸೆಕ್ಯೂರಿಟಿ ತಡೆದು ಏನು ಕೆಲಸ ಎಂತೆಲ್ಲ ವಿಚಾರಿಸಿ ಕಟ್ಟಡದ ಸುಭದ್ರತೆಯ ದೃಷ್ಟಿಯಿಂದ ಯಾವುದೇ ಬದಲಾವಣೆಗಳನ್ನು ಮಾಡಲು ಸಮಿತಿಯ ಒಪ್ಪಿಗೆ ಬೇಕು ಎಂದರು. ನೀವು ಬೇಕಿದ್ದರೆ ನಿಮ್ಮ ಮನೆಯ ಒಳಗೆ ಹೋಗಿ, ಅವರು ಹೋಗಲು ಅನುಮತಿಯಿಲ್ಲ ಎಂದರು. ಅವಳ ಅದೃಷ್ಟಕ್ಕೆ ಮಳೆ ಹನಿಯಲಾರಂಭಿಸಿತು. ಅವರು ಕಟ್ಟಡದ ಮೆಟ್ಟಿಲ ಮೇಲೆ ಕೂರುವುದಕ್ಕೆ ಅನುಮತಿ ಕೊಡಿ ಎಂದು ಕೇಳಿಕೊಂಡಳು. ಪಾಪ, ಅವರಿಗೇನು ಗೊತ್ತು? ಕೊಟ್ಟರು.

ಕೆಲವೇ ನಿಮಿಷಗಳಲ್ಲಿ ಕಳ್ಳತನದಿಂದ ಅವರನ್ನು ಒಳಗೆ ಕರೆದುಕೊಂಡು ಒಳಗಿಂದ ಬಾಗಿಲು ಜಡಿದುಕೊಂಡು ಇಡೀ ಕಟ್ಟಡಕ್ಕೆ ಆಧಾರವಾಗಿರುವ ಗೋಡೆಯ ಭಾಗವನ್ನು ಉರುಳಿಸಿದಳು. ಮುಂದಿನದೆಲ್ಲ ರಣರಂಪ. ಅದರ ಕೆಳಗೆ ಮತ್ತು ಮೇಲೆ ಇದ್ದ ಫ್ಲಾಟಿನವರು ಬಂದು ಏನು ಏನು ಎಂದು ನೋಡುವ ಹೊತ್ತಿಗೆ ಗೋಡೆ ಉರುಳಿತ್ತು.

ನಮ್ಮ ಕಾಲವೇ ಹಾಗೆ ಅಂತನ್ನಿಸುತ್ತೆ. ಉರುಳಿಸುವುದಾದರೆ ದಕ್ಷತೆಗೇನು ಕಮ್ಮಿ!

ಪೋಲೀಸ್ ಕೇಸ್ ಆಗಿ ಮುಂದಿನ ಕೆಲಸ ನಿಂತುಹೋಯಿತು. ಆಕೆಗೊಬ್ಬ ಎಳೆಯ ಮಗಳು. ಆರು ವರ್ಷವಿರಬಹುದು. ಆ ಮಗುವನ್ನು ಸಿಂಪತಿ ಕಾರ್ಡ್ ತರಹ ಆಕೆ ಬಳಸಿಕೊಂಡ ರೀತಿಯೋ! ಸಿಗ್ನಲ್ಲುಗಳಲ್ಲಿ ಮಗುವನ್ನು ಹಿಡಿದುಕೊಂಡು ಭಿಕ್ಷೆ ಬೇಡುವವರೂ ನಾಚಬೇಕು. ತನಗೆ ಇರಲು ಮನೆಯಿಲ್ಲ, ಬೆಂಗಳೂರಿನಲ್ಲಿ ತಿಂಗಳಿಗೆ ಐವತ್ತು ಸಾವಿರ ಬಾಡಿಗೆ ಕೊಟ್ಟು ಬದುಕುತ್ತಿದ್ದೇನೆ, ಅಲ್ಲಿ ಇನ್ನು ಕೆಲವೇ ದಿನಗಳಲ್ಲಿ ಖಾಲಿ ಸಹ ಮಾಡಬೇಕು, ಇಲ್ಲಿ ತನ್ನದೇ ಮನೆಗೆ ಬಂದು ಬದುಕಲು ಬಿಡುತ್ತಿಲ್ಲ, ಎಂದೆಲ್ಲಾ ದುರಂತ ನಾಯಕಿಯ ತರಹ ಗೋಳಾಡಿದಳು. ಮೈಸೂರಿನ ಮೇಯರು, ಕಮಿಷನರು ಎಲ್ಲರೂ ತನಗೆ ಗೊತ್ತು ಎಂದು ಬಡಿವಾರ ಮಾಡುತ್ತಾ ಅತ್ತೂ ಅತ್ತೂ ಬಳಲಿರುವ ಮೇಕಪ್ ಮಾಡಿಕೊಂಡು ಮಗಳನ್ನೂ ಜೊತೆಗೆ ಎಳೆದುಕೊಂಡು ಹೋದಳು. ಆ ಮಗು ಗೊಳೋ ಎಂಬ ದನಿಯಲ್ಲಿ ಹಾಡು ಹೇಳುತ್ತಿರುವುದನ್ನು ರೆಕಾರ್ಡ್ ಮಾಡಿ ಅಪಾರ್ಟ್ಮೆಂಟಿನ ವಾಟ್ಸಾಪ್ ಗುಂಪಿನಲ್ಲಿ (ಆ ಗುಂಪಿನಲ್ಲಿ ಆಕೆಯ ಹೆಸರು ‘ಸನ್ ಶೈನ್’ ಅಂತಿತ್ತು) ಹಾಕಿದಳು.

ಇದು ತಲೆಹಿಡುಕತನದ ಒಂದು ರೂಪವಲ್ಲವೇ?

ಅಷ್ಟೆಲ್ಲಾ ಅತ್ತೂ ಕರೆದು ಕೆಲಸ ಮಾಡಿಸಿಕೊಂಡು, ಕೊನೆಗೆ ಫ್ಲಾಟನ್ನು ಬಾಡಿಗೆ ಕೊಟ್ಟಳು! ಈಗ ಎಲ್ಲಿದಾಳೋ ಗೊತ್ತಿಲ್ಲ. ಬಡ ಸೆಕ್ಯೂರಿಟಿ ಮಾತ್ರ ಕೆಲಸ ಕಳೆದುಕೊಂಡರು. ದಡ್ಡರು ಕಟ್ಟಿದ ಮನೆಯಲ್ಲಿ ಬಾಡಿಗೆಗೆ ಬರುವ ಜಾಣರು ಬುದ್ಧಿ ಕಲಿಸಲಿ ಎಂಬ ಹಾರೈಕೆಯಂತೂ ಇದೆ.

ನಾನಿರುವ ಅಂತಸ್ತಿನಲ್ಲಿ ಪುಟ್ಟ ಅವಳಿ ಮಕ್ಕಳ ಕುಟುಂಬವೊಂದು ಇದೆ. ಪರಿಚಯವಾದ ಮೊದಲ ದಿನವೇ, ‘ಒಬ್ರೇ ಇದೀರಾ, ಹೇಗೆ ಟೈಮ್ ಪಾಸ್ ಮಾಡ್ತೀರಾ?’ ಎಂದು ಆಕೆ ಕೇಳಿದ್ದಳು. ತಮ್ಮಂತೆ ಇಲ್ಲದವರ ಬಗ್ಗೆ ಕುತೂಹಲವಷ್ಟೇ ಅಲ್ಲ, ಅವರನ್ನು ‘ನಾರ್ಮಲ್’ ಆಗಿರುವ ತಾವು ಹೇಗೆ ಬಳಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರವೂ ಅಲ್ಲಿ ಸೇರಿರುತ್ತದೆ. ನಮ್ಮ ಹೌಸ್ ಕೀಪಿಂಗಿನವರು ‘ನಿಮಗೂ ಟೈಮ್ ಪಾಸ್ ಆಗುತ್ತೆ, ಬಿಡಿ,’ ಎಂದಾಗ ‘ನಿಮಗೆ ಟೈಮಿದ್ದರೆ ಬೇಕಿದ್ದರೆ ಕರೆದುಕೊಂಡು ಹೋಗಿ,’ ಎಂದು ಗುರಾಯಿಸಿದ ಮೇಲೆ ತೆಪ್ಪಗಾಗಿದ್ದರು.

ಸರಿ, ಹೊತ್ತುಗೊತ್ತಿಲ್ಲದೆ ಆ ಮಕ್ಕಳನ್ನು ನನ್ನ ಮನೆಗೆ ಕಳುಹಿಸುವ ರೂಢಿಯಾಗಿದ್ದಷ್ಟೇ ಅಲ್ಲ, ‘ಇವತ್ತು ನಮ್ಮ ಕೆಲಸದವಳು ಬಂದಾಗ ನಾವಿರುವುದಿಲ್ಲ, ನೀವು ಬಂದು ಅಲ್ಲಿ ಸ್ವಲ್ಪ ಅರ್ಧ-ಮುಕ್ಕಾಲು ಗಂಟೆಯಷ್ಟು ಹೊತ್ತು ಇರಲಾಗುವುದಾ?’

ಆ ಮುಕ್ಕಾಲು ಗಂಟೆ ಎರಡೂವರೆ ಗಂಟೆಗಳಾಗಿ ಎಳೆದಿತ್ತು. ಸಂಜೆ ಕೀಲಿಕೈ ತೆಗೆದುಕೊಳ್ಳಲು ಬಂದ ಆತ ‘ನಾವು ಕ್ರಿಕೆಟ್ ಟೂರ್ನಮೆಂಟಿನಲ್ಲಿ ಗೆದ್ದೆವು!’ ಎಂದು ಸಂಭ್ರಮದಿಂದ ಹೇಳಿದಾಗ ಏನದು ಎಂದು ವಿಚಾರಿಸಿದೆ. ಕೆಲಸದಾಕೆ ಕೆಲಸ ಮಾಡಬೇಕು, ನಾನು ಅಲ್ಲಿದ್ದು ನೋಡಿಕೊಳ್ಳಬೇಕು, ಈತ ಕ್ಲಬ್ಬಿನಲ್ಲಿ ಕ್ರಿಕೆಟ್ ಆಡಲು ಹೋಗಬೇಕು!

ಸ್ನೇಹವೂ ಇಲ್ಲಿ ಒಂದು ಸರಕು!

ವಿಧಿವಿಧಾನಗಳನ್ನು ಸಹ ಬಳಸಿಕೊಳ್ಳಲು ಕಲಿಯಬೇಕು. ನಾನು ಹೋಗುವ ಯೂನಿವರ್ಸಲ್ ಆಶ್ರಮದಲ್ಲಿ ಪರಮಭಕ್ತೆಯೊಬ್ಬಳು ಸಂಧ್ಯಾರತಿ ಮುಗಿದ ತಕ್ಷಣ ತತ್ತರಬತ್ತರ ಎದ್ದು ಪಕ್ಕದ ಬಾಗಿಲಿನಿಂದ ಓಡಿ, ಹಿಂಬಾಗಿಲಿನಿಂದ ಬರುವ ಸನ್ಯಾಸಿಗಳಿಗೆ ಢಿಕ್ಕಿ ಹೊಡೆದು, ನಮಸ್ಕಾರ ಮಾಡುವ ನೆಪದಲ್ಲಿ ಮಾತಾಡಿಸುತ್ತಾ ನಿಲ್ಲುತ್ತಿದ್ದಳು. ದಿನದಿನವೂ ಇದೇ ನಾಟಕ! ಸ್ವಾಮಿಕಾರ್ಯ, ಸ್ವಕಾರ್ಯ! ಭಕ್ತಿ, ನಮಸ್ಕಾರಗಳ ನೆಪವಿಲ್ಲದೆ ನುಲಿಯಲು ಸಾದ್ಯವಿತ್ತೆ?

‘ಉತ್ತಮ ಸರಕಿದು ಅತಿ ಲಾಭ ತರುವಂಥ’ ಎಂದು ಪುರಂದರದಾಸರು ಕೃಷ್ಣನ್ನು ಸ್ತುತಿಸಿರುವುದು ಭಕ್ತಿ ಎನ್ನುವುದು ಸರಕಾಗಬಾರದು ಎಂಬ ಸತ್ಯವನ್ನು ನೆನಪಿಸುವುದಕ್ಕೆಂದೇ.

ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ,
ಒತ್ತೊತ್ತಿ ಗೋಣಿಯೊಳ್ ತುಂಬುವುದಲ್ಲ.
ಎತ್ತ ಹೋದರೂ ಬಾಡಿಗೆ ಸುಂಕವಿದಕಿಲ್ಲ,
ಉತ್ತಮ ಸರಕಿದು ಅತಿ ಲಾಭ ತರುವಂಥ || 1, 3 ||

ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ,
ಕಲ್ಲು ಸಕ್ಕರೆ ಕೊಳ್ಳಿರೋ.
ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು,
ಪುಲ್ಲಲೋಚನ ಶ್ರೀಕೃಷ್ಣ ನಾಮವೆಂಬ || 1, 2 ||

About The Author

ಸುಕನ್ಯಾ ಕನಾರಳ್ಳಿ

ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕಿ, ಲೇಖಕಿ, ಮತ್ತು ಭಾಷಾಂತರಕಾರ್ತಿ. ವೈದೇಹಿ (An Afternoon with Shakuntala and Other Stories) ಮತ್ತು ಅಗ್ರಹಾರ ಕೃಷ್ಣಮೂರ್ತಿಯವರ ಕೃತಿಗಳು (Love and Water Flow Together) [(ಕುವೆಂಪು ಭಾಷಾಭಾರತಿ ಪ್ರಶಸ್ತಿ  (2023) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಅನುವಾದಿತ ಪುಸ್ತಕ ಪ್ರಶಸ್ತಿ (2023)] ಇಂಗ್ಲೀಷಿಗೆ ಅನುವಾದಿಸಲ್ಪಟ್ಟ ಕೃತಿಗಳು.  ‘ಹೇಳುತೇನೆ ಕೇಳು: ಮಹಿಳೆಯರ ಆತ್ಮಕಥೆಗಳು’; ‘ಕಥೆ ಹೇಳುವೆ’; ‘ಬರ್ತಿಯಾ?… ಎಷ್ಟು?…: ಭಾರತೀಯ ಸೂಳೆಲೋಕದಕಥೆಗಳು’; ನಯನತಾರ ಸೆಹಗಲ್ ಅವರ ‘ಚಿಟ್ಟೆಗಳ ಪಾಡು’ ಇತ್ಯಾದಿ ಅವರ ಕನ್ನಡ ಭಾಷಾಂತರ ಕೃತಿಗಳು. ಮೌಲಾನಾ ಜಲಾಲುದ್ದೀನ್ ರೂಮಿಯ ಕಾವ್ಯದ ಭಾಷಾಂತರ ಕೃತಿ ‘ದಿವ್ಯದಲ್ಲಿ ಹಿಸ್ಸೆಯಿಲ್ಲ: ಕಡುಪ್ರೇಮಿಯ ಎದೆಯ ಹಾಡು ಇತ್ತೀಚೆಗೆ ಬಿಡುಗಡೆಯಾದ ಕೃತಿ. 'ಕನ್ನಡ-ಕಾಸರವಳ್ಳಿಯವರ ಸಿನಿಮಾಗಳಲ್ಲಿ ರಾಷ್ಟ್ರ ಮತ್ತು ಹೆಣ್ಣು' ಎರಡು ಪುಸ್ತಕಗಳಾಗಿ ಸದ್ಯದಲ್ಲೇ ಬೆಳಕು ಕಾಣಲಿದೆ. 

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ