ಇವರು ಕನ್ನಡದ ಕಥೆಗಾರ್ತಿ ರಾಜಲಕ್ಷ್ಮಿ ಎನ್. ರಾವ್.
ನವ್ಯಕಾಲದ ಕನ್ನಡ ಬರಹಗಾರರ ನಡುವೆ ತಂಗಾಳಿಯ ಹಾಗೆ ಇದ್ದವರು. ತಮ್ಮ ಇಪ್ಪತ್ತೆರಡರ ವರ್ಷದಲ್ಲಿ ‘ಸಂಗಮ, ಎಂಬ ಕಥಾ ಸಂಕಲನ ಪ್ರಕಟಿಸಿ ಆನಂತರ ಇದುವರೆಗೆ ಅಜ್ಞಾತರಾಗಿ ಇರುವವರು.
ಇವರಿಗೆ ಈಗ ಎಂಬತ್ತೆಂಟು ವರ್ಷ.
ಕನ್ನಡ ನವ್ಯ ಸಾಹಿತ್ಯದ ಪ್ರವರ್ತಕರಾದ ಅಡಿಗ, ಶರ್ಮ, ಸದಾಶಿವ, ರಾಘವ, ರಾಮಾನುಜಂ ಇವರ ನಡುವೆ ಸಂಕೋಚ ತುಂಬಿಕೊಂಡು ಬರೆಯುತ್ತಿದ್ದ ರಾಜಲಕ್ಷ್ಮಿ ಎಂಬ ಚುರುಕು ಯುವತಿ ಆನಂತರದ ಕಾಲದಲ್ಲಿ ಜೀವನದ ಸುಳಿಯೊಳಗೆ ಸಿಕ್ಕು ಇದ್ದಕ್ಕಿದ್ದ ಹಾಗೆ ಹಿಮಾಲಯದ ಉತ್ತರ ಕಾಶಿಗೆ ಹೊರಟವರು ಎಷ್ಟೋ ವರ್ಷಗಳ ನಂತರ ತಿರುಗಿ ಬಂದರು.

ಈಗ ಇವರಿಗೆ ಬರೆಯುವ ಹಂಗೂ ಇಲ್ಲ. ಬದುಕಿನ ಮೋಹವೂ ಇಲ್ಲ. ಉಳಿದಿರುವುದು ಜಗತ್ತು ಎಂಬ ಈ ಅಸಾಧ್ಯ ವಿಸ್ಮಯದ ಕುರಿತ ಪುಟ್ಟ ಹುಡುಗಿಯೊಬ್ಬಳ ಅದೇ ಕುತೂಹಲ.
ವಿಶೇಷ ಎಂದರೆ ರಾಜಲಕ್ಷ್ಮಿ ಎನ್. ರಾವ್ ಅವರು ಕನ್ನಡದ ಆಚಾರ್ಯ ಪುರುಷ ಬಿ.ಎಂ.ಶ್ರೀಕಂಠಯ್ಯನವರ ಮೊಮ್ಮಗಳು.

ಇದು ಏನು ಸುಕೃತವೋ ಗೊತ್ತಿಲ್ಲ. ಕೊಳ್ಳೇಗಾಲದ ಬಳಿಯ ಆಶ್ರಮವೊಂದರಲ್ಲಿ ಹಕ್ಕಿಗಳ ಸದ್ದಿನ ನಡುವೆ ಬದುಕುತ್ತಿರುವ ಇವರು ನನಗೆ ಆಗಾಗ ಮಾತಿಗೆ ಸಿಗುತ್ತಿದ್ದಾರೆ.
ಏನೂ ಗೊತ್ತು ಗುರಿಯಿಲ್ಲದ ನಾನೂ ಅವರನ್ನು ಮಾತನಾಡಿಸುತ್ತಿದ್ದೇನೆ.
ಕನ್ನಡದ ಅಪರೂಪದ ಚೇತನವೊಂದರ ಸಾಮೀಪ್ಯ ನನಗೂ ವಿವರಿಸಲಾಗದ ಅನುಭೂತಿ ನೀಡುತ್ತಿದೆ.
ಈ ತಾಯಿಗೂ ಅದೇನೋ ನನ್ನ ಮೇಲೆ ವಿನಾಕಾರಣ ಅಕ್ಕರೆ!
ಏನೂ ಉದ್ಧಿಶ್ಯವಿಲ್ಲದೆ ಅವರು ಅನುಮತಿಸಿದಾಗಲೆಲ್ಲ ಅವರು ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದೇನೆ.
ಅವರು ಅನುಮತಿ ಕೊಟ್ಟರೆ ನಿಮ್ಮ ಮುಂದಿಡುತ್ತೇನೆ
ಅವರ ವಿನಂತಿ ಏನೆಂದರೆ ಯಾರೂ ಅವರ ಏಕಾಂತಕ್ಕೆ ಭಂಗ ತರಬಾರದು.
ಸುಮ್ಮ ಸುಮ್ಮನೇ ಅವರನ್ನು ಹುಡುಕಿಕೊಂಡು ಹೋಗಿ ಕಷ್ಟ ಕೊಡಬಾರದು.
ದಯವಿಟ್ಟು ಇದನ್ನು ಗಮನಿಸಿ.
ಇದು ನನ್ನದೂ ಪ್ರಾರ್ಥನೆ