ಸರ್ಕಾರದಿಂದ ನಡೆಯುವ ಯಾವುದೇ ಪರೀಕ್ಷೆಗಳನ್ನು ನಡೆಸಲು ನಮ್ಮ ಜೂನಿಯರ್ ಕಾಲೇಜಿನ ಕೊಠಡಿಗಳನ್ನ ಕಡ್ಡಾಯವಾಗಿ ತೆಗೆದುಕೊಳ್ಳುತ್ತಿದ್ದುದರಿಂದ ಆಗೆಲ್ಲ ನಮಗೆ ದೀರ್ಘ ರಜೆ ಸಿಗುತ್ತಿತ್ತು. ಚೆನ್ನಾಗಿ ಓದಬೇಕೆಂಬ ಕನಸು ಹೊತ್ತು ಬಂದಿದ್ದ ನಮಗೆ ಇಲ್ಲಿನ ವಿಪರೀತ ರಜೆಗಳಿಂದಾಗಿ ನಿರಾಸೆ ಉಂಟಾಗಿತ್ತು. ಪ್ರಥಮ ಪಿ.ಯು.ಸಿ. ಮುಗಿಸಿಕೊಂಡು ಊರಿಗೋಗಿದ್ದ ನಮಗೆ ಇತ್ತ ಕೆಲ ತಿಂಗಳು ಕಳೆದರೂ ಕಾಲೇಜು ಪ್ರಾರಂಭ ಆಗದೆ ಊರಲ್ಲೆ ಉಳಿದಾಗ, ಪಕ್ಕದ ಮನೆ ಕೇಸುದೊಡಪ್ಪ ‘ಎಲ್ಲೊ ಪೇಲಾಗವೆ ಅದ್ಕೆ ಹೋಗಿಲ್ಲ’ ಎಂದು ಅನುಮಾನ ಪಟ್ಟುಕೊಳ್ಳುತ್ತಿತ್ತು.
ಗುರುಪ್ರಸಾದ್‌ ಕಂಟಲಗೆರೆ ಬರೆಯುವ ‘ಟ್ರಂಕು ತಟ್ಟೆ’ ಸರಣಿಯ ಹದಿನೇಳನೆಯ ಕಂತು

 

ಹೀಗೆ ಹಲವು ಸ್ವಾರಸ್ಯಕರ ಸಂಗತಿಗಳೊಂದಿಗೆ ನಮ್ಮ ಸೈನ್ಸ್ ಹಾಸ್ಟೆಲ್ ಜೀವನ ರಸಾನುಭೂತಿಯನ್ನ ನೀಡುತ್ತಿದ್ದರೆ ಇತ್ತ ಕಾಲೇಜಿನ ಅನುಭವ ಮತ್ತೊಂದು ಬಗೆಯದಾಗಿತ್ತು. ರಂಗಧಾಮಯ್ಯ, ಕರ್ಣಕುಪ್ಪೆ ಹರೀಶ, ಹ್ಯಾಂಡ್ ಪೋಸ್ಟ್ ಮಂಜು, ತಿಪ್ಪೆಸ್ವಾಮಿ, ಜಯಣ್ಣ, ಜುಂಜಪ್ಪ, ಓಂಕಾರ, ಚಂದ್ರ, ವಿರಪಸಂದ್ರ ರಾಮಾಂಜಿ, ಸೂರಿ ಮುಂತಾದ ದೊಡ್ಡ ಗೆಳೆಯರ ದಂಡೆ ಇಲ್ಲಿತ್ತು. ಭಗತ್ ಇದ್ದ ‘ಸಿ’ ಸೆಕ್ಷನ್ ಒಂದರಲ್ಲಿ ಮಾತ್ರ ಹುಡುಗಿಯರಿದ್ದು, ಉಳಿದ ಯಾವ ತರಗತಿಯಲ್ಲೂ ಹುಡುಗಿಯರು ಇರಲಿಲ್ಲ. ಹೆಣ್ಣುಮಕ್ಕಳಿಗಾಗಿಯೇ ಎಂಪ್ರೆಸ್ ಕಾಲೇಜು ಇದ್ದುದರಿಂದ ಇಲ್ಲಿ ಹುಡುಗರು ಮಾತ್ರವೇ ಇದ್ದರು. ಹೀಗಾಗಿ ಹುಡುಗಿಯರಿದ್ದ ‘ಸಿ’ ಸೆಕ್ಷನ್‍ಗೆ ಭಾರೀ ಬೇಡಿಕೆ ಇತ್ತು. ಭಗತ್, ರಾಮಾಂಜಿ, ಸೂರಿ, ರಂಗಧಾಮಯ್ಯ ಇವರೆಲ್ಲರೂ ‘ಸಿ’ ಸೆಕ್ಷನ್ನಿನವರೇ ಆಗಿದ್ದರು. ಆಗ ಸಿನಿಮಾ ನಟ ಉಪೇಂದ್ರನ ಹವ ಎಲ್ಲೆಲ್ಲೂ ಜೋರಾಗಿತ್ತು. ಆತನ ಚಿತ್ರದ ಹಾಡುಗಳು, ವಿಲಕ್ಷಣ ವೇಷ ಭೂಷಣ ಇವೆಲ್ಲವೂ ಯುವಕರ ಆಕರ್ಷಣೆಯಾಗಿತ್ತು.

ಆತನ ಪಕ್ಕ ಅಭಿಮಾನಿಯಾಗಿದ್ದ ಸೂರಿ ಅವನಂತೆಯೇ ಜುಟ್ಟು ಗಡ್ಡ ಬಿಟ್ಟು, ವೇಷ ಭೂಷಣ ತೊಟ್ಟು ಸೇಮ್ ಅವನೇ ಆಗಿದ್ದ. ವಿಚಿತ್ರವೆಂದರೆ ಉಪೇಂದ್ರನ ಸಿನಿಮಾ ಭಾಷೆಯನ್ನೇ ಸಾರ್ವಜನಿಕವಾಗಿ ಬಳಸುತ್ತ ಹಲವರಲ್ಲಿ ಭಯ ಹುಟ್ಟಿಸಿಕೊಂಡು ತಿರುಗಾಡುತ್ತಿದ್ದ. ಕಾಲೇಜ್ ಕಾಂಪೌಂಡ್ ಮೇಲೆ ಕೈಲೊಂದು ರೋಸ್ ಹಿಡಿದು ಕೂತಿರುತ್ತಿದ್ದ ಸೂರಿ ಹೋಗಿ ಬರೊ ಹೆಣ್ಣು ಮಕ್ಕಳನ್ನೆಲ್ಲ ಚುಡಾಯಿಸುತ್ತ, ಐ ಲವ್ ಯು ಹೇಳುತ್ತಿದ್ದ. ಇವನ ಈ ವರಸೆ ನೋಡಿ ಹಲ ಹುಡುಗಿಯರು ಇವನನ್ನು ಕಂಡರೆ ಸಾಕು ತಪ್ಪಿಸಿಕೊಂಡು ಓಡಿದರೆ, ಕೆಲ ಹುಡುಗಿಯರು ಸ್ನೇಹಿತರಾಗಿ ಸಲುಗೆಯಿಂದಿರುತ್ತಿದ್ದರು. ಆತನ ಜುಟ್ಟು ಕತ್ತರಿಸಲು ಶಿಸ್ತಿನ ಸಿಪಾಯಿ ಇಂಗ್ಲಿಷ್ ಲೆಕ್ಚೆರರ್ ವಿ.ಎಸ್.ಪಿ. ಹಲವು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು. ಸೂರಿ ಕೇರ್ ಮಾಡದೆ ತಿರುಗಾಡುತ್ತಿದ್ದ. ಆತನ ಕೇರ್‌ಲೆಸ್ ವರ್ತನೆಗೆ ಮತ್ತೊಂದು ಕಾರಣ ಆತ ತುಮಕೂರಿನ ರೌಡಿ ಗುಂಪಿನಲ್ಲೂ ಗುರುತಿಸಿಕೊಂಡಿದ್ದನೆನ್ನಲಾಗಿತ್ತು. ಯಾವಾಗೆಂದರೆ ಆವಾಗ ಅವನ ಸ್ನೇಹಿತರು ಗಾಡಿಯಲ್ಲಿ ಬಂದು ಕೂರಿಸಿಕೊಂಡು ಹೋಗುತ್ತಿದ್ದರು.

ಕಾಲೇಜಿನ ಆಕರ್ಷಣೆ ಸೂರಿಗೂ, ವಿರುಪಸಂದ್ರದ ರಾಮಾಂಜಿಗೂ ಬಿಟ್ಟು ಬಿಡಲಾರದ ಸ್ನೇಹ. ವಯಸ್ಸಿನಲ್ಲಿ ಹಿರಿಯನಾದ ರಾಮಾಂಜಿ ಹಲವು ವರ್ಷ ಹತ್ತನೇ ತರಗತಿಯನ್ನೇ ಓದಿ, ಅವನಿಗಿಂತ ಆರೇಳು ವರ್ಷ ಕಿರಿಯರಿಗೆ ಸಮನಾಗಿ ಪಿಯುಸಿಗೆ ಸೇರಿದ್ದ. ವೇಷ ಬಣ್ಣ ಎಲ್ಲದ್ದರಲ್ಲೂ ಸೂರಿಗಿಂತ ಭಿನ್ನವಾಗಿದ್ದ ರಾಮಾಂಜಿ ಒಂದು ವಿಷಯದಲ್ಲಿ ಮಾತ್ರ ಸಾಮ್ಯತೆ ಹೊಂದಿದ್ದ. ರಾಮಾಂಜಿ ತನ್ನ ‘ಸಿ’ ಸೆಕ್ಷೆನ್ ಸಹಪಾಟಿ ಕಾಂತಮ್ಮ ಎಂಬುವರನ್ನ ಲವ್ ಮಾಡಲು ಪ್ರಾರಂಭಿಸಿದ್ದ. ಲವ್ ಮಾಡುವುದು ಸಹಜವೆನಿಸಿದರೂ ರಾಮಾಂಜಿಯ ಲವ್‌ನ ವಿಶಿಷ್ಠತೆ ಇರುವುದು ಆತ ಅದನ್ನ ಖಾಸಗಿಯಾಗಿಡದೆ ಸಾರ್ವಜನಿಕಗೊಳಿಸಿದ್ದ. ಹೇಗೆಂದರೆ ಕಾಂತಮ್ಮಳ ಮೇಲೆ ಸ್ವತಃ ಹಾಡುಗಳನ್ನ ಕಟ್ಟಿ ರಾಗವಾಗಿ ಹಾಡುತ್ತಿದ್ದ. ತಾನು ಹಾಡುವ ಪ್ರತೀ ಹಾಡಿನಲ್ಲೂ ಆಕೆಯ ಹೆಸರು ಕಡ್ಡಾಯವಾಗಿ ಸೇರಿರುವಂತೆ ನೋಡಿಕೊಳ್ಳುತ್ತಿದ್ದ. ತರಗತಿ ಕೋಣೆಯಲ್ಲಿ ಮಾತ್ರವಲ್ಲದೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲೂ ವೇದಿಕೆಯ ಮೇಲೆ ಲೆಕ್ಚರರ್‌ಗಳ ಮುಂದೆಯೇ ಹಾಡುತ್ತಿದ್ದ. ಆಕೆ ಸಂಬಂಧವೇ ಇಲ್ಲವೆನ್ನುವಂತೆ ಕತ್ತು ಬಗ್ಗಿಸಿಕೊಂಡು ಹೋಗಿಬಿಡುತ್ತಿದ್ದರು. ಸುಮಾರು ವರ್ಷ ಒನ್ ವೆ ಯಾಗಿದ್ದ ರಾಮಾಂಜಿಯ ಲವ್, ಅದ್ಯಾವಾಗ ಕುದುರಿತೋ ಏನೊ, ಕೆಲ ವರ್ಷಗಳ ಕೆಳಗೆ ಅವರಿಬ್ಬರಿಗೂ ಮದುವೆ ಆಗಿ ಈಗ ಬೆಳೆದು ನಿಂತಿರುವ ಮುದ್ದಾದ ಮಕ್ಕಳಿದ್ದಾರೆ. ಈಗ ದಲಿತ ಚಳುವಳಿ ಮತ್ತು ರಾಜಕಾರಣದೊಳಗೆ ರಾಮಾಂಜಿ ಸಕ್ರಿಯವಾಗಿದ್ದಾರೆ.

ಮಧುಗಿರಿ ತಾಲ್ಲೋಕಿನ ಜನಕಲೋಟಿಯಿಂದ ಕಗ್ಗಲ್ಲಿನಂತೆ ಬಂದಿದ್ದ ರಂಗಧಾಮಯ್ಯನೂ ಈ ವಿಷಯದಲ್ಲಿ ಹಿಂದೆ ಬಿದ್ದಿರಲಿಲ್ಲ. ಅವನಂತೆಯೇ ಇದ್ದ ಸಹಪಾಠಿಯೊಬ್ಬರೊಂದಿಗೆ ಸ್ನೇಹದಿಂದಿದ್ದು, ಪರಸ್ಪರ ನೋಟ್ಸ್ ಬದಲಾಯಿಸಿಕೊಳ್ಳುತ್ತಲೇ ಇದ್ದರು. ಹುಡುಗಿಯರನ್ನು ಕಂಡರೆ ಪುಳಕಗೊಳ್ಳುತ್ತಿದ್ದ ನನ್ನಂಥವರಿಗೆ ನಮ್ಮ ಕಾಲೇಜಿನ ಕೆಲ ಹುಡುಗ ಹುಡುಗಿಯರು ಅವಶ್ಯಕತೆಗೂ ಮೀರಿ ಸಲುಗೆಯಿಂದಿದ್ದುದು ಬೆರಗು ಮೂಡಿಸುತ್ತಿತ್ತು.

ಸರ್ಕಾರದಿಂದ ನಡೆಯುವ ಯಾವುದೇ ಪರೀಕ್ಷೆಗಳನ್ನು ನಡೆಸಲು ನಮ್ಮ ಜೂನಿಯರ್ ಕಾಲೇಜಿನ ಕೊಠಡಿಗಳನ್ನ ಕಡ್ಡಾಯವಾಗಿ ತೆಗೆದುಕೊಳ್ಳುತ್ತಿದ್ದುದರಿಂದ ಆಗೆಲ್ಲ ನಮಗೆ ದೀರ್ಘ ರಜೆ ಸಿಗುತ್ತಿತ್ತು. ಚೆನ್ನಾಗಿ ಓದಬೇಕೆಂಬ ಕನಸು ಹೊತ್ತು ಬಂದಿದ್ದ ನಮಗೆ ಇಲ್ಲಿನ ವಿಪರೀತ ರಜೆಗಳಿಂದಾಗಿ ನಿರಾಸೆ ಉಂಟಾಗಿತ್ತು. ಪ್ರಥಮ ಪಿ.ಯು.ಸಿ. ಮುಗಿಸಿಕೊಂಡು ಊರಿಗೋಗಿದ್ದ ನಮಗೆ ಇತ್ತ ಕೆಲ ತಿಂಗಳು ಕಳೆದರೂ ಕಾಲೇಜು ಪ್ರಾರಂಭ ಆಗದೆ ಊರಲ್ಲೆ ಉಳಿದಾಗ, ಪಕ್ಕದ ಮನೆ ಕೇಸುದೊಡಪ್ಪ ‘ಎಲ್ಲೊ ಪೇಲಾಗವೆ ಅದ್ಕೆ ಹೋಗಿಲ್ಲ’ ಎಂದು ಅನುಮಾನ ಪಟ್ಟುಕೊಳ್ಳುತ್ತಿತ್ತು.

ಇವನ ಈ ವರಸೆ ನೋಡಿ ಹಲ ಹುಡುಗಿಯರು ಇವನನ್ನು ಕಂಡರೆ ಸಾಕು ತಪ್ಪಿಸಿಕೊಂಡು ಓಡಿದರೆ, ಕೆಲ ಹುಡುಗಿಯರು ಸ್ನೇಹಿತರಾಗಿ ಸಲುಗೆಯಿಂದಿರುತ್ತಿದ್ದರು. ಆತನ ಜುಟ್ಟು ಕತ್ತರಿಸಲು ಶಿಸ್ತಿನ ಸಿಪಾಯಿ ಇಂಗ್ಲಿಷ್ ಲೆಕ್ಚೆರರ್ ವಿ.ಎಸ್.ಪಿ. ಹಲವು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು.

ಜಯರಾಮನ ಅಡಾಕ್ ಅಮೌಂಟ್ ಮತ್ತು ಕೇಬಿ

ನಮ್ಮ ಊರಿನಿಂದಲೇ ಬಂದಿದ್ದ ಜಯರಾಮನಿಗೆ ತಡವಾಗಿ ಬಂದದ್ದಕ್ಕೊ ಏನೊ ಸರ್ಕಾರಿ ಹಾಸ್ಟೆಲ್‌ನಲ್ಲಿ ಸೀಟು ದೊರಕದೆ ಸಿದ್ದಾರ್ಥ ಹಾಸ್ಟೆಲ್‌ನಲ್ಲಿ ಸಿಕ್ಕಿತ್ತು. ಆ ಹಾಸ್ಟೆಲ್‌ನ ವಾರ್ಡನ್ ಆ ವರ್ಷದ ಮಟ್ಟಿಗೆ ಕವಿ ಕೆ.ಬಿ. ಸಿದ್ದಯ್ಯನವರಾಗಿದ್ದರು. ನಮ್ಮ ಮಾವನ ಇನ್ಫ್ಲುಯನ್ಸ್‌ ಮೇರೆಗೆ ಡಿಗ್ರಿಯಲ್ಲಿ ಫೇಲಾಗಿದ್ದ ನಮ್ಮ ಸೀನಿಯರ್ ರಂಗಸ್ವಾಮಿ ಅಲ್ಲಿ ಅಕೌಂಟೆಟ್ ಆಗಿ ಊಟ ತಿಂಡಿ ನೋಡಿಕೊಳ್ಳುತ್ತಿದ್ದ. ರಜೆಯಲ್ಲಿ ಹಾಸ್ಟೆಲ್ ನಡೆಯುತ್ತಿಲ್ಲದುದರಿಂದ ಆ ಹಣವನ್ನ ಅಡಾಕ್ ಅಮೌಂಟ್ ಎಂದು ಹುಡುಗರಿಗೆ ಕೊಡುತ್ತಿದ್ದರು. ನಮ್ಮ ಜಯರಾಮನಿಗೆ ಅದು ಹೇಗೊ ದೊರೆಯದೆ, ವಾರ್ಡನ್ ಮತ್ತು ಅಕೌಂಟೆಂಟರನ್ನ ಕೇಳಿ ಕೇಳಿ ಸಾಕಾಗಿ ನಮ್ಮ ಕುಟುಂಬಕ್ಕೆ ಖಾಸಗಿಯಾಗಿ ಪರಿಚಯವಿದ್ದ ಕೆ.ಬಿ. ಸಿದ್ದಯ್ಯನವರ ಹತ್ತಿರ ಹಣ ಕೊಡಿಸಬೇಕೆಂದು ಭಗತ್‌ಗೆ ದುಂಬಾಲು ಬಿದ್ದಿದ್ದ. ನಾವು ಒಂದು ದಿನ ಸಿದ್ದಾರ್ಥ ಹಾಸ್ಟೆಲ್ ಹತ್ತಿರ ಹೋದೆವು. ಉಳ್ಳಿ ಕಾಳು ಸಾರು ಮಾಡಿಸಿದ್ದ ಸಿದ್ದಯ್ಯನವರು ನಾವು ಬಂದ ಕಾರಣ ಆಲಿಸಿ, ಊಟ ಮಾಡಿಸಿ ಕಳಿಸಿದರು.

ಇಂಗ್ಲಿಷ್ ಮೀಡಿಯಮ್‌ನಲ್ಲಿ ಇದ್ದಾಗ ಹಿಂದುಳಿದ ವಿದ್ಯಾರ್ಥಿಯಾಗಿದ್ದ ನಾನು ಪಿಯುಸಿಯಲ್ಲಿ ಆರ್ಟ್ಸ್‌ ತೆಗೆದುಕೊಂಡ ನಂತರ ಕಲಾ ವಿಭಾಗದ ಓದು ನನ್ನ ಸುತ್ತಮುತ್ತಲಿನದೇ ಎನಿಸಿ ನೀರು ಕುಡಿದಂತೆನಿಸುತ್ತಿತ್ತು. ಪರೀಕ್ಷೆಗಳಲ್ಲಿ ಅಂಕ ತೆಗೆಯುವುದರಲ್ಲಿ ತರಗತಿಗೇ ಏಕೆ ಇಡೀ ಕಾಲೇಜಿಗೆ ಮೊದಲಿಗರ ಸಾಲಿನಲ್ಲಿ ಇದ್ದೆ. ಅತ್ತ ಭಗತ್ ಕೂಡ ಚೆನ್ನಾಗಿ ಓದುತ್ತ, ನಮ್ಮ ನೋಟ್ಸ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ನಿಜ ಹೇಳಬೇಕೆಂದರೆ ನಮ್ಮ ಓದಿನ ಹಂಬಲಕ್ಕೆ ತಕ್ಕಂತೆ ಆ ಕಾಲೇಜಿನಲ್ಲಿ ಆಹಾರ ಸಿಗುತ್ತಿರಲಿಲ್ಲ. ಅರ್ಥಶಾಸ್ತ್ರ ಪಾಠ ಮಾಡುವವರು ಎಕ್ಸಾಂ ಹತ್ತಿರ ಬಂದರೂ ಬದಲಾಗುತ್ತಲೇ ಇದ್ದು, ಯಾರನ್ನ ಫಾಲೊ ಮಾಡಬೇಕೆಂಬುದೇ ತಿಳಿಯುತ್ತಿರಲಿಲ್ಲ.

ಇತಿಹಾಸಕ್ಕೆ ಗಂಗರಾಜು ಎಂಬುವರು ಡೆಪ್ಟೇಷನ್ ಮೇಲೆ ಬಂದಿದ್ದರು. ಸರಳ ಹಾಗು ಕುತೂಹಲಕರವಾಗಿ ಚರಿತ್ರೆಯನ್ನು ಬೋಧಿಸುತ್ತಿದ್ದ ಅವರ ತರಗತಿಗೆ ಉಳಿದೆಲ್ಲ ತರಗತಿ ಹುಡುಗರು ಹೋಗಿ ಜಮಾಯಿಸುತ್ತಿದ್ದರು. ಇಂಗ್ಲಿಷ್ ಅಂತೂ ನಾವು ಹೇಗೊ ನಮ್ಮ ಲೆಕ್ಚರ್ಸು ಹಾಗೆ ಎನಿಸುವಷ್ಟರ ಮಟ್ಟಿಗೆ ಸುಸ್ತಾಗಿ ಬಿದ್ದಿತ್ತು. ಸಮಾಜ ಶಾಸ್ತ್ರಕ್ಕೆ ಎಸ್.ಆರ್. ಅಶ್ವತ್ಥನಾರಾಯಣ್ ಎಂಬುವವರು ಬರುತ್ತಿದ್ದರು. ವಿವಾಹ, ದಾಂಪತ್ಯ ಮುಂತಾದ ಸಾಮಾಜಿಕ ಸಂಬಂಧಗಳ ಕುರಿತು ರಸವತ್ತಾಗಿ ಹೇಳುತ್ತಿದ್ದರೆ ಹುಡುಗರು ಮುಸಿ ಮುಸಿ ನಗುತ್ತ ಬೆಚ್ಚಗೆ ಕೇಳಿಸಿಕೊಳ್ಳುತ್ತಿದ್ದರು. ನಮ್ಮ ಸೆಕ್ಷನ್ನಿನ ಓಂಕಾರ ಒಮ್ಮೆ ‘ಸಾರ್ ಬೇರೆ ಬೇರೆ ಜಾತಿಯ ಗಂಡು ಹೆಣ್ಣು ಮದ್ವೆ ಆದ್ರೆ ಏನಾಗುತ್ತೆ?’ ಎಂದು ಏನೊ ಎಜಿಪ್ ಹಾಕಿಕೊಂಡು ಕೇಳಿದ್ದ. ಅದಕ್ಕೆ ಅಷ್ಟೆ ಸರಳವಾಗಿ ‘ಮಕ್ಕಳಾಗುತ್ತವೆ’ ಎಂದು ಹೇಳಿದ್ದರು.

ನಮ್ಮ ಜೂನಿಯರ್ ಕಾಲೇಜು ಮೈದಾನ ವಿಶಾಲವಾಗಿತ್ತು. ಹೆಚ್ಚು ಜನಸಂದಣಿ ಸೇರುವ ಯಾವುದೇ ಕಾರ್ಯಕ್ರಮಗಳು ಇಲ್ಲಿ ಆಯೋಜನೆಗೊಳ್ಳುತ್ತಿದ್ದವು. ಒಮ್ಮೆ ಅಲ್ಲಿ ಚಿತ್ರನಟ ವಿಷ್ಣುವರ್ಧನ್‌ರವರ ಹುಟ್ಟು ಹಬ್ಬಕ್ಕೆ ವೇದಿಕೆ ಸಜ್ಜಾಗಿತ್ತು. ಅವರ ‘ಸೂರ್ಯವಂಶ’ ಚಿತ್ರ ಅಪಾರ ಜನಮನ್ನಣೆ ಕಂಡು ಉತ್ತುಂಗದಲ್ಲಿತ್ತು. ಬಾಲ್ಯದಲ್ಲಿ ‘ನಮ್ಮ ಗುರು ವಿಷ್ಣುವರ್ಧನ್’ ಎಂದು ಹೇಳಿಕೊಳ್ಳುತ್ತಿದ್ದ ನನಗೆ ನಮ್ಮ ನೆಚ್ಚಿನ ನಟನನ್ನು ನೋಡುವ ಕಾತರ. ಅಂದು ಅನೇಕ ಹುಡುಗರು ಬೆಳಗಿನಿಂದಲೇ ಕಾಲೇಜು ತೊರೆದು ವೇದಿಕೆ ಸುತ್ತಮುತ್ತ ಜೋಶ್ ಆಗಿ ಅಂಡಲೆಯುತ್ತಿದ್ದರು. ಕಾಲೇಜು ಸಹ ಅರ್ಥಮಾಡಿಕೊಂಡು ಸ್ವಯಂ ಘೋಷಿತವಾಗಿ ಸಂಭ್ರಮಕ್ಕೆ ಅವಕಾಶಿಸಿ ಸುಮ್ಮನಾಗಿತ್ತು. ಆದರೆ ನಮ್ಮ ಸಮಾಜ ಶಾಸ್ತ್ರದ ಎಸ್.ಆರ್. ಅಶ್ವತ್ಥನಾರಾಯಣ ಸರ್‌ರವರು ಅಂದು ಪೋಷನ್ ಕವರ್ ಆಗಿಲ್ಲ ಎಂದು ನಮ್ಮ ತರಗತಿಯವರಿಗೆಂದೆ ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದರು. ಅರ್ಧಕ್ಕಿಂತ ಕಡಿಮೆ ಇದ್ದ ಹುಡುಗರಿಗೆ ಸತತ ಎರೆಡು ಗಂಟೆಗೂ ಮೀರಿ ಅವರ ಬೋಧನೆ ಮುಂದುವರೆದಿತ್ತು.

ಮೊದಲ ಬಾರಿಗೆ ನನಗೂ ಅಂದು ಕಾಲೇಜಿಗೆ ಬಂಕ್ ಮಾಡಿದ್ದರೆ ಎಷ್ಟೋ ಚನ್ನಾಗಿತ್ತು ಎನಿಸಿತ್ತು. ಅತ್ತ ವೇದಿಕೆಯಲ್ಲಿ ವಿಷ್ಣುವರ್ಧನ್ ನಟನೆಯ ಹಾಡುಗಳು ಮತ್ತು ಬಿಲ್ಡಪ್ ಮಾತುಗಳು ಜನರನ್ನ ಉನ್ಮಾದಗೊಳಿಸುತ್ತಿದ್ದರೆ, ಇತ್ತ ಪಾಠ ಕೇಳುತ್ತಿದ್ದ ನಮ್ಮ ಎದೆಯಲ್ಲಿ ಕಳವಳ. ನಿರೂಪಕ ಇನ್ನೇನು ಕೆಲವೇ ಕ್ಷಣಗಳಲ್ಲಿ ಸಾಹಸ ಸಿಂಹ ವೇದಿಕೆಗೆ ಆಗಮಿಸಲಿದ್ದಾರೆ ಎಂದಾಗ ಹೇಳದೆ ಕೇಳದೆ ಓಡಿಬಿಡಬೇಕೆನಿಸಿತು. ಅಂತೂ ಅಶ್ವತ್ಥನಾರಾಯಣ ಸರ್ ಕ್ಲಾಸು ಬಿಟ್ಟರು. ನಾನು ಓಡಲು ಶುರುವಾದಾಗ ಹಿಡಿದಿದ್ದ ಉಸಿರನ್ನ ವೇದಿಕೆ ಬಳಿ ಬಂದಾಗ ಬಿಟ್ಟೆ. ಜನರ ನೂಕು ನುಗ್ಗಲು ಜೋರಾಗಿತ್ತು. ಲಾಟಿದಾರಿ ಪೋಲೀಸರು ಜನರನ್ನ ಎತ್ತೆಂದರತ್ತ ತಳ್ಳುತ್ತಿದ್ದರು. ವಿಷ್ಣುವರ್ಧನ್ ಅದಾಗಲೆ ಅರ್ಧ ಭಾಷಣ ಮುಗಿಸಿದ್ದರು. ಈಗ ಅನಿಸುತ್ತಿದೆ ತರಗತಿಯ ಬಿಡುವಿನ ವೇಳೆಯಲ್ಲಿ ಅಶ್ವತ್ ನಾರಾಯಣ್ ಸರ್ ಡಾ.ರಾಜ್ ಕುಮಾರ್ ರವರ ಹಾಡುಗಳನ್ನು ಉಲ್ಲಾಸಿತರಾಗಿ ಹಾಡುತ್ತಿದ್ದರು. ಅದೇನಾದರೂ ಅಂದು ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳಲು ಕಾರಣವಿರಬಹುದ ಎಂದು!

ಹೀಗೆ ನವಿರಾದ ಅನುಭವಗಳ ಮೂಲಕ ಪಿಯುಸಿ ಕೊನೆ ಹಂತಕ್ಕೆ ತಲುಪಿತು.