ಪೆಂಟೆಯ ಸರಸಿಯರು ನನ್ನ ತಾಯಿಯ ಬಗ್ಗೆ ವಿಪರೀತ ಕುತೂಹಲ ತೋರುತ್ತಿದ್ದರು. ‘ಒಮ್ಮೆ ಕರೆದುಕೊಂಡು ಬಾ’ ಎನ್ನುತ್ತಿದ್ದರು.  ಆಕೆ ಹೊಸಿಲು ದಾಟಿ ಬರುವಂತಿರಲಿಲ್ಲ. ತಾಯಿಗೆ ಮನೆಯೇ ಸೆರೆಯಾಗಿತ್ತು. ಹಾಗೆ ಹೊರಗೆ ತಾಯಿ ಹೋಗುವಂತಿದ್ದರೆ ಅಪ್ಪ ತಲೆಕಡಿಯುತ್ತಿದ್ದನೇನೊ. ನನಗೆ ಆ ಹೆಂಗಸರ ಬಗ್ಗೆ ಕೆಡುಕಿರಲಿಲ್ಲ. ಹೊಳೆಯಲ್ಲಿ ಅವರು ಈಜಾಡುತ್ತಿದ್ದರು. ಈಜು ಕಲಿಸಲು ನೀರಿಗಿಳಿಸಿ ಕೈಕಾಲು ಬಡಿಸುತ್ತಿದ್ದರು. ಗತಕಾಲದ ನನ್ನ ಹಳೆಯ ಚಡ್ಡಿ ನಿಲ್ಲುತ್ತಿರಲಿಲ್ಲ. ಅದನ್ನತ್ತ ಬಿಚ್ಚಿ ದಂಡೆಗೆ ಎಸೆಯುತ್ತಿದ್ದರು. ‘ಹಕ್ಕಿ ಮರಿ ಎಲ್ಲೊ’ ಎನ್ನುತ್ತಿದ್ದರು.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ, ‘ನನ್ನ ಅನಂತ ನೀಲಿ ಆಕಾಶ’ ಸರಣಿಯ ಹೊಸ ಬರಹ 

 

ಪೆಂಟೆಯ ಆ ಎಂಡದ ಲೋಕವೇ ಒಂದು ಸ್ವರ್ಗ. ರೂಢಿಗತ ಸಮಾಜದಂತೆ ಅದಿರಲಿಲ್ಲ. ಹೆಣ್ಣು ಎಂಡ ಜೂಜು ಮೋಜು ಸಿನಿಮಾ ಅವರವರದೇ ಸುಖ ದುಃಖಗಳಿಗೆ ಮಿತಿ ಇರಲಿಲ್ಲ. ಎಂಡದ ಬಾಬತ್ತೇ ಅಂತಾದ್ದು. ಶಿಸ್ತು ಶೀಲ ಶಂಕೆಯ ಊರು ಕೇರಿ ಮನೆಗಳಲ್ಲಿ ವಿಪರೀತ ವೈಪರೀತ್ಯಗಳಿದ್ದವು. ಎಲ್ಲೆಲ್ಲಿಂದಲೊ ಪೆಂಟೆಗೆ ಹೊಟ್ಟೆಪಾಡಿಗೆ ಬಂದು ಸೇರಿಕೊಂಡಿದ್ದವರಲ್ಲಿ ಜಗಳಗಳೆ ಇರಲಿಲ್ಲ. ಆಸ್ತಿಪಾಸ್ತಿಯ ಕಿತ್ತಾಟವಿರಲಿಲ್ಲ. ಮೇಲು ಕೀಳಿನ ಹಮ್ಮು ಬಿಮ್ಮುಗಳಿರಲಿಲ್ಲ. ಬಡತನವೇ ಅವರ ಸಿರಿತನವಾಗಿತ್ತು. ಕೂಡಿಟ್ಟು ಉಣ್ಣುವ ಜಾಯಮಾನವೇ ಇರಲಿಲ್ಲ. ಹೆಚ್ಚೆಂದರೆ ಮೂವತ್ತು ನಲವತ್ತು ಕುಟುಂಬಗಳಷ್ಟೆ. ಎಲ್ಲವೂ ತಾತ್ಕಾಲಿಕ ಗುಡಿಸಲು ಮನೆಗಳು. ಸಾಲು ಎದುರು ಬದುರ ಜೋಪಡಿಗಳ ಬೀದಿಯೋ ಅದು ಅವರ ಪಾಲಿನ ಸ್ವರ್ಗದ ಹಾದಿಯೇ. ಯಾವತ್ತೂ ಹಸನಾಗಿ ಸಗಣಿಯಿಂದ ಸಾರಿಸಿ ರಂಗೋಲಿ ಬಿಟ್ಟು ದೂಳು ಕಸ ಕಡ್ಡಿ ಇಲ್ಲದಂತೆ ಮಾಡಿಕೊಂಡಿದ್ದರು. ಅದೇ ಬೀದಿಯಲ್ಲಿ ಈಚಲು ಚಾಪೆ ಹಾಸಿ ಮಲಗಿ ಅವರೆಲ್ಲ ಇಡೀ ಆಕಾಶವನ್ನು ಹೊದ್ದುಕೊಂಡಂತೆ ಬಹಳ ಹೊತ್ತಿನ ತನಕ ಮಾತನಾಡುತ್ತಿದ್ದರು. ಆ ನಗೆ ಆ ಕೇಕೆ ಆ ಪದ ಮುಗಿಯುತ್ತಲೇ ಇರಲಿಲ್ಲ. ಆ ಸಡಗರದಲ್ಲಿ ಹೆಂಗಸರದೇ ಯಜಮಾನಿಕೆ. ಗಂಡಸರು ಅಷ್ಟಕ್ಕೆ ಅಷ್ಟೇ. ನಿಸ್ಸೀಮ ಎಂಡಗುಡುಕರು; ಆದರೆ ಅಸಭ್ಯ ವರ್ತನೆಯೇ ಇಲ್ಲ. ಗ್ರೀಕ್ ತತ್ವಜ್ಞಾನಿಗಳಂತೆ ಕಾಣುತ್ತಿದ್ದರು. ಎಂಡ ಇಳಿಸುವ ಜಾತಿಯವರಂತೇ. ಕಟ್ಟು ಮಸ್ತಾಗಿದ್ದರು. ಅವರ ಕೆನ್ನೆಗಳು ಹೊಳಪಾಗಿದ್ದವು. ಆ ಹೆಂಗಸರೇ ಸ್ವಲ್ಪ ಕಪ್ಪು. ಕೆಲವರು ನೀಲಿಗಪ್ಪು ಏನೊ ಚೆಂದ. ದಿಟ್ಟೆಯರು. ಚತುರ ಲಲನೆಯರು. ಸದಾ ಒದ್ದೆಯಾದ ಭಾವದವರು.

ಅಂತಹ ಪೆಂಟೆ ಹಗಲಲ್ಲಿ ವ್ಯರ್ಥ ಜೋಪಡಿಗಳಂತೆ ಕಾಣುತ್ತಿತ್ತು. ಹಿಂಡಾಗಿ ಕೋಳಿಗಳು ಅಡ್ಡಾಡುತ್ತಿದ್ದವು. ಅವರ ಮನೆಗಳಿಗೆ ಬೀಗಗಳೆ ಇರಲಿಲ್ಲ. ಕದ್ದು ಹೊತ್ತೊಯ್ಯುವಂತದ್ದೇನೂ ಇರಲಿಲ್ಲ. ಕಳ್ಳರ ಕಾಯಲೆಂದೇನೊ ಅವರು ನಾಯಿ ಸಾಕಿರಲಿಲ್ಲ. ಆ ಜನರ ಮೇಲಿನ ವಿಶೇಷ ಪ್ರೀತಿಯಿಂದ ನಾಯಿಗಳೆ ಬಂದು ಸೇರಿಕೊಂಡಿದ್ದವು. ಸಾಕಿರುವ ನಾಯಿಗಳು ಬೊಬ್ಬಿರಿದು ಬೊಗಳುತ್ತಿರುತ್ತವೆ. ಮನೆಯ ಮಾಲೀಕನೇ ಕಳ್ಳನಿರಬಹುದು ಎಂದು ಕೂಗಾಡುತ್ತಿರುದ್ದವೊ ಏನೋ! ತತ್ವಜ್ಞಾನಿಗಳಂತಿದ್ದ ಆ ಎಂಡದ ಗಂಡಸರು ಹೆಂಡಂದಿರ ಮೇಲೆ ಒಮ್ಮೆಯೂ ಕೈ ಮಾಡುತ್ತಿರಲಿಲ್ಲ. ನನಗಂತೂ ಪೆಂಟೆಯಲ್ಲೇ ಇರಬೇಕು; ಯಾವುದಾದರೂ ಅಜ್ಜಿಯ ಸೇವೆ ಮಾಡಿಕೊಂಡು ಎಂಡ ಹೊತ್ತು ಪೀಪಾಯಿಗೆ ಸುರಿದು; ಮತ್ತೆ ಲಾರಿಗೆ ತುಂಬಿ ಅವರು ಕೊಟ್ಟಷ್ಟು ಚಿಲ್ಲರೆ ಕಾಸಿಗೆ ಬದುಕಿಕೊಳ್ಳಬೇಕು ಎಂಬ ಆಸೆ ನೆತ್ತಿಯ ತನಕ ಬಂದು ತುಳುಕುತಿತ್ತು.

ಅಪ್ಪನಿಂದ ಅದು ಅಸಾಧ್ಯವಾಗಿತ್ತು. ಕದ್ದುಮುಚ್ಚಿ ಅಲ್ಲಿ ಕಾಲ ಕಳೆಯುವುದೆ ಸ್ವರ್ಗವಾಗಿತ್ತು. ಎಂತಹ ಸುಂದರ ಆಯಕಟ್ಟಿನ ಜಾಗ! ಅಲ್ಲೇ ಹೊಳೆ; ಅಷ್ಟು ದೂರ ನಡೆದರೆ ಅಲ್ಲೊಂದು ತಾವರೆ ಕೆರೆ. ಅದರ ಮುಂದೆಯೇ ತರಾವರಿ ಪೇರಲ ಹಣ್ಣಿನ ವನ. ಮೈತುಂಬ ಹೊದ್ದ ಹಣ್ಣುಗಳಲ್ಲಿ ಯಾವುದನ್ನು ಕಿತ್ತು ತಿನ್ನುವುದು? ಬಾಳೆ ಭತ್ತ ಕಬ್ಬು ತೆಂಗು ಅಡಿಕೆ ತೋಟಗಳ ವಿಶಾಲ ಬಯಲು. ತಾತ ಹೇಳುತ್ತಿದ್ದ; ಇಡೀ ಸೀಮೆಯನ್ನು ಹೀಗೆ ತೋಟಗಳಾಗಿ ಪರಿವರ್ತಿಸಿದ್ದವನು ಟಿಪ್ಪುಸುಲ್ತಾನ್ ಅಂತೇ. ಆ ಕಾಲ ನನಗೆ ಗೊತ್ತಿಲ್ಲ. ಅಪ್ಪನಿಗೆ ಪೆಂಟೆಯಲ್ಲಿ ತುಂಬಾ ಸಲಿಗೆಯಿತ್ತು. ಹೆಂಗಸರು ಅವನಿಗಾಗಿ ಕಾಯುತ್ತಿದ್ದರು. ಒಬ್ಬರೇ ಇಬ್ಬರೇ! ಹತ್ತಾರು ಮಂದಿ. ಅವರ ಲೆಕ್ಕದಲ್ಲಿ ಅಪ್ಪ ಯಾವತ್ತೂ ಒಳ್ಳೆಯವನೇ. ಶೂರ ಧೀರ ರಸಿಕನೇ! ನನ್ನ ತಾಯಿಗೆ ಹೇಳಿದರೆ “ಅಯ್ಯೋ” ಎಂದು ನಿಟ್ಟುಸಿರಿಟ್ಟು; ಅದೇನನ್ನೂ ನನಗೆ ಹೇಳಬೇಡ ಎಂದು ಕಳಿಸಿಬಿಡುತ್ತಿದ್ದಳು.

ಹೆಂಗಸರು ಮಧ್ಯೆ ಕೂರಿಸಿಕೊಂಡು ಚೆಂದದ ಸಿಹಿ ಎಂಡವ ಕುಡಿಸುತ್ತಿದ್ದರು. ಮಾಂಸವನ್ನು ಸುಟ್ಟುಕೊಡುತ್ತಿದ್ದರು. ಕಪ್ಪು ಚಲುವೆಯರು ನಗುವುದೇ ಒಂದು ಚೆಂದ. ಬೆಳ್ಳನೆಯ ಅವರ ಹಲ್ಲುಗಳು ಕೆಂಪು ತುಟಿಗಳ ನಡುವೆ ಕಿಸಕ್ಕೆನ್ನುತ್ತಿದ್ದವು. ಎಂಡದ ವೇದಾಂತವನ್ನೇ ಹೀರಿದಂತಿದ್ದ ಆ ಎಂಡಿಗರು ಯಾವ ಆಕ್ಷೇಪವನ್ನು ಮಾಡುತ್ತಿರಲಿಲ್ಲ. ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದರು. ಹುಲು ಬಯಕೆ ಬಾ ಎನ್ನಲು ಅಪ್ಪ ‘ಓಹೋ’ ಎಂದು ಬಾಯಿ ಬಿಡುತ್ತಿದ್ದ. ಅಪ್ಪ ರಂಗಾಗಿದ್ದ. ಅಂತಹ ಪಾತಕಿಯ ಆಪ್ತನಾಗಿದ್ದು ಅವನಿಗೇ ದಾರಿ ತೋರಿಸಿ ಬಿಟ್ಟಿದ್ದ ಅಪ್ಪನಲ್ಲಿ ಬಿಡಿಗಾಸಿನ ಪಾಪ ಪ್ರಜ್ಞೆಯು ಇರಲಿಲ್ಲ. ಅಷ್ಟೊಂದು ಸಂತೋಷ ಅವನ ಸುತ್ತ ಇಟ್ಟಾಡುತ್ತಿತ್ತು. ಆ ಹೆಂಗಸರು ಸಂಕೋಚವಿಲ್ಲದೆ ನನ್ನನ್ನೂ ಅಪ್ಪನ ಸಮ್ಮುಖದಲ್ಲೆ ಜೊತೆಗಿರಿಸಿಕೊಳ್ಳತ್ತಿದ್ದರು. ತಾತನ ಹೋಟೇಲಿನ ಬಿಸಿ ತಿಂಡಿಗಳ ತರಿಸಿಕೊಳ್ಳಲು ನನ್ನನ್ನು ಖಾಯಂ ಮಾಡಿಕೊಂಡಿದ್ದರು. ಅಪ್ಪ ಮುಲಾಜಿಗೆ ಸಹಿಸಿಕೊಳ್ಳುತ್ತಿದ್ದ. ಒಮ್ಮೊಮ್ಮೆ ಅಮಲು ಮೀರಿದಾಗ ಹತ್ತಿರ ಕರೆದು ಕೂರಿಸಿಕೊಳ್ಳುತ್ತಿದ್ದ. ಅವನ ಯಾವ ರಕ್ಷಣೆಯ ತಂತ್ರವೊ ಏನೊ. ಆ ಹೆಂಗಸರಲ್ಲಿ ಮುದುಕಿಯರು ತಮ್ಮ ಎದೆಗಳಿಗೆ ಮೂರು ಪೈಸೆಯ ಬೆಲೆಯನ್ನೂ ಕೊಡುತ್ತಿರಲಿಲ್ಲ. ತುಂಡು ಮುಂಡಾಸಿನಂತೆ ಒಂದು ಬಿಳಿ ಬಟ್ಟೆ ಧರಿಸುತ್ತಿದ್ದರು. ಅಪ್ಪನ ರಸಿಕತೆಗೆ ಸರಸಿಯನ್ನು ಅವರೇ ಅಣಿ ಮಾಡುತ್ತಿದ್ದುದು.

ಆ ಸರಸಿಯರೂ ಅಪ್ಸರೆಯರು. ಹಾದರದವರಲ್ಲ. ಸಮ್ಮತಿಯ ಸಮಾಗಮ. ಪರಸ್ತ್ರೀ ವ್ಯಾಮೋಹ ಅವರಲ್ಲಿ ತಪ್ಪು ಎನಿಸಿರಲಿಲ್ಲ. ಪರೋಕ್ಷವಾಗಿ ಸ್ತ್ರೀ ಆಳ್ವಿಕೆಯಿತ್ತು. ಹೆಣ್ಣಿಗೆ ದಾಸರಾಗುವುದು ದುರ್ಬಲ ಸ್ಥಿತಿ ಎಂದು ಎಂಡದ ಜ್ಞಾನಿಗಳು ವೈರಾಗ್ಯದ ಮಾತಾಡುತ್ತಿದ್ದರು. ಅಪ್ಪ ಕ್ಷುಲ್ಲಕ. ಕೈಲಾಗದವರು ಎಂದು ಭಾವಿಸಿದ್ದ ಸ್ವತಃ ಅವನೇ ಅಸಮರ್ಥನಾಗಿದ್ದ ಸುಮ್ಮನೆ ವಿಪರೀತ ಹೆಣ್ಣಿನ ಚಟದವನು. ಮುಟ್ಟುತ್ತಲೇ ಮುದುಡಿದಂತಾಗಿ ಬಿಡುತ್ತಿದ್ದ. ಆಸೆಬುರುಕ. ಸರಸವತಿಯರು ಸಾಮೂಹಿಕವಾಗಿ ಅಪ್ಪನ ಮೈಗೆ ಎಣ್ಣೆ ನೀವುತ್ತಿದ್ದರು. ಅರೆಬೆತ್ತಲೆಯಾಗಿರುತ್ತಿದ್ದರು.

ತಾಯ ದೇಹವನ್ನು ಆಕೆ ತೊರೆಯಲ್ಲಿ ಸ್ನಾನ ಮಾಡುವಾಗ ಸಾಕಷ್ಟು ಬಾರಿ ಕಂಡಿದ್ದೆ. ಅವಳ ಬೆನ್ನನ್ನು ಕಲ್ಲಲ್ಲಿ ಉಜ್ಜಿ ಕೊಳೆ ತೆಗೆದಿದ್ದೆ. ಯಾರಾದರೂ ಗಂಡಸರು ಬಂದು ಬಿಟ್ಟರೆ ಎಂದು ದಂಡೆ ಬಳಿ ಕೂತು ತಾಯ ಮಾನ ಕಾಪಾಡುತಿದ್ದೆ. ಹಳೆ ಸೀರೆ ತೊಟ್ಟು ಒದ್ದೆಯಾದ ಮೈಯನ್ನು ನೀರ ತಡಿಯ ಕಲ್ಲ ಮೇಲೆ ಕೂತು ತೊಳೆದುಕೊಳ್ಳುತ್ತಿದ್ದಳು. ಆ ಹೆಂಗಸರೇ ಬೇರೆ ತರ. ಮಿಥುನ ಮೈಯವರು. ಬಿಗಿದ ಮೈಕಟ್ಟು. ಅವರು ಯಾವಾಗಲೂ ಮೈಗೆ ಹರಿಶಿಣ ಹಚ್ಚಿಕೊಂಡಿರುತ್ತಿದ್ದರು. ತುಂಡು ಬಟ್ಟೆ. ಚೂಪು ಮೂಗು ಮಿನುಗುವ ನತ್ತು. ಗುಂಗುರು ಕೂದಲು. ಕಲಕಲ ನಗು. ವಯ್ಯಾರದ ನೋಟ. ಮೀನ ಕಂಡ… ಬೆಳೆಸಲಾಗದು ಅವರ ಸಿರಿಯ. ಅವರು ಎಲ್ಲಿಂದಲೊ ಬಂದವರು. ಸ್ವಂತ ಸಂಸಾರವಿಲ್ಲ. ಅನೇಕರು ಗಂಡಂದಿರ ಬಿಟ್ಟಿದ್ದರು. ಆ ಬಗ್ಗೆ ಕಿಂಚಿತ್ ಪಶ್ಚತ್ತಾಪವಿಲ್ಲ. ಆ ಹೆಂಗಸರು ದೂರದ ಸಂಬಂಧಿಕರ ಮಕ್ಕಳನ್ನು ಸಾಕಿಕೊಂಡಿದ್ದರು. ಎಗರಾಡಿದ ಗಂಡಸರ ಮಿಸುಕಾಡದಂತೆ ಮಾಯ ಮಾಡಿಬಿಡುತ್ತಿದ್ದರು. ಅಪ್ಪ ಕೈ ತುಂಬ ಹಣ ಚೆಲ್ಲುತ್ತಿದ್ದ. ಅವರ ಪಾಲಿಗೆ ಅವನು ನಿಜಕ್ಕೂ ಸುಂದರ. ಪಾತಕಿಗೇ ಪಾತಕಿಯಾದ ಅಪ್ಪ ಕೋಮಲ ಪ್ರೇಮಿಯಂತೆ ಕಂಡಿದ್ದ.

ಹೇಗೆ ಸಾಧ್ಯವಾಯಿತು? ತಾಯಿಯ ಪಾಲಿಗೆ ಯಮನಾಗಿದ್ದ. ಮಾವಿನ ಮರದ ಕೆಳಗೆ ಬೇವಿನ ಗಿಡ ಹುಟ್ಟಿತು ಎಂದು ಹೀನವಾಗಿ ನನ್ನನ್ನು ನಿರಾಕರಿಸುತ್ತಿದ್ದನಲ್ಲಾ… ಅದು ಆ ಸರಸಿಯರಿಗೆ ಗೊತ್ತೇ ಆಗುತ್ತಿರಲಿಲ್ಲ. ಸರಸಿಯರ ಜೊತೆ ಅಪ್ಪ ಸುಮ್ಮನೆ ಸರಸವಾಡುತ್ತಿದ್ದನೇ? ಅಷ್ಟೊಂದು ಹೆಣ್ಣಗಳ ಅವನು ಹೇಗೆ ನಿಭಾಯಿಸುವನು ಎಂದು ಎಂಡದ ವೇದಾಂತಿಗಳು ಜಿಜ್ಞಾಸೆಯಲ್ಲಿ ತೊಡಗುತ್ತಿದ್ದರು. ಮಾರ್ಮಿಕವಾಗಿ ನಗುತ್ತಿದ್ದರು. ಕಡಿಲಾರದ ನಾಯಿ ಮೂಳೆಗಳ ಗುಡ್ಡೆ ಹಾಕಿಕೊಂಡಂತೆ ಎಂದು ಯಾರೊ ಹಂಗಿಸುತ್ತಿದ್ದರು.

ಎಂಡದ ಪೆಂಟೆಯಲ್ಲಿ ತಮಿಳರದೇ ಆಡಳಿತವಿತ್ತು. ಹೆಂಗಸರಿಗೆ ವಾರದ ಸಂಬಳ. ಎಲ್ಲರ ಲೆಕ್ಕವನ್ನೂ ಮೇಸ್ತ್ರಿ ಬರೆದಿಡುತ್ತಿದ್ದ. ಯಾರು ಎಷ್ಟಾದರೂ ಕುಡಿಯಬಹುದಿತ್ತು. ಅವರಿಗೆ ಬೇಕಾದ ಒಂದೊಂದು ಮರವ ನಿಗಧಿ ಮಾಡಿಕೊಂಡು ಅದರ ಎಂಡವ ಮಾತ್ರ ಕುಡಿಯುತ್ತಿದ್ದರು. ಎತ್ತರದ ಮರವ ಒಂದೇ ಬಾರಿಗೆ ಸರ್ರನೆ ಜಾರಿ ಹಾರಿ ಬಂದಂತೆ ಇಳಿಯುತ್ತಿದ್ದರು. ಅವರ ಕಾಲು ಕೈ ಎಷ್ಟು ಒರಟಾಗಿದ್ದವು ಎಂದರೆ; ಸುಮ್ಮನೆ ಒಂದೇಟು ಬಿಟ್ಟರೆ ತಲೆ ತಿರುಗಿ ಬಿದ್ದು ಹೋಗಬೇಕಾಗುತ್ತಿತ್ತು. ಅಲ್ಲಲ್ಲಿ ತೋಟ ಮಾಳಗಳಲ್ಲಿ ಪೆಂಟೆಗಳಿದ್ದವು. ನಮ್ಮ ಊರಿಗೆ ಅಂಟಿಕೊಂಡಿದ್ದೇ ದೊಡ್ಡ ಪೆಂಟೆ. ಅಲ್ಲಿ ಒಂದು ಸಿನಿಮಾ ಟೆಂಟೇ ಇತ್ತು. ಎಂಡ ಕಟ್ಟುವರಲ್ಲಿ ಕೆಲವರು ಬ್ರಾಂದಿ ವಿಸ್ಕಿ ಕುಡಿಯುವವರೂ ಇದ್ದರು. ಬಾಟ್ಲಿಯಲ್ಲಿ ಕುಡಿಯುವವರು ದೊಡ್ಡವರು. ಪೆಂಟೆಗೆ ವಿದ್ಯುತ್ ವ್ಯವಸ್ಥೆ ಇತ್ತು. ಎಂ.ಜಿ.ಆರ್. ಸಿನಿಮಾಗಳ ಗದ್ದಲ ಅದ್ಧೂರಿಯಾಗಿತ್ತು. ಅನೇಕ ವ್ಯವಹಾರಗಳು ಅಲ್ಲಿ ಕುದುರುತ್ತಿದ್ದವು.

ಚಳಿಗಾಲದಲ್ಲಿ ಬೀದಿಯಲ್ಲಿ ಬೆಂಕಿ ಹಾಕಿ ಬೆಚ್ಚಗೆ ಕಾದು ಹಳಬರು ಹೇಳುತ್ತಿದ್ದ ಕತೆಗಳ ಕೇಳುವುದೇ ಒಂದು ಕಿನ್ನರ ಲೋಕವಾಗಿತ್ತು. ರಾತ್ರಿ ನಾಲ್ಕು ಗಂಟೆಗೇ ಮರ ಏರಿ ಎಂಡ ಇಳಿಸಿಕೊಳ್ಳುವ ಕಳ್ಳರ ಹಾವಳಿ ವಿಪರೀತ ಇತ್ತು. ಅಪ್ಪ ಅವರನ್ನೆಲ್ಲ ರಕ್ಷಿಸುತ್ತಿದ್ದ. ಯಾವ ರೀತಿಯಲ್ಲೂ ಗೊತ್ತಾಗುತ್ತಿರಲಿಲ್ಲ. ತಮಿಳರ ಈ ಬಾಬತ್ತಲ್ಲಿ ನಮ್ಮವರು ಕುಡಿದು ಮಜಾ ಮಾಡಲಿ ಬಿಡೂ ಎನ್ನುತ್ತಿದ್ದ. ಪೆಂಟೆಯ ಗುಮಾಸ್ತರಿಗೆ ಮೋಡಿ ಮಾಡಿ ಬೇರೆ ಊರಿಂದ ಕಳ್ಳರು ಬರುತ್ತಾರೆ ಎಂದೇ ಅವರ ನಂಬಿಸಿದ್ದ. ಚಿಲ್ಲರೆ ಕಳ್ಳರು ಕದ್ದು ಮಾರುತ್ತಿರಲಿಲ್ಲ. ಲಾರಿಗಟ್ಟಲೆ ಎಂಡ. ಪೀಪಾಯಿಗಳು ನೊರೆಯಿಂದ ತುಂಬಿರುತ್ತಿದ್ದವು. ಕೆಲವರಂತೂ ಎಂಡ ಕುಡಿಯಲೆಂದೇ ಹಗಲಿರುಳು ಅಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬಿದ್ದಿರುತ್ತಿದ್ದರು. ಆಗ ನಮ್ಮ ಊರಿಂದ ಬಳ್ಳಾರಿ ಜಿಲ್ಲೆಗೇ ಎಂಡ ಸಪ್ಲೈ ಆಗುತ್ತಿತ್ತು. ಗಂಗಾವತಿ ಎಂಡದ ನಗರ ಎಂದು ಆಗ ಖ್ಯಾತವಾಗಿತ್ತು. ನಮ್ಮ ಅಜ್ಜಿಯ ತಮ್ಮನೊಬ್ಬ ಲಾರಿಯ ಜೊತೆ ಅಲ್ಲಿಗೆ ಹೋಗಿ; ಲಿಂಗಾಯಿತ ಎಂದು ಸುಳ್ಳು ಹೇಳಿಕೊಂಡು ಗಂಗಾವತಿಯವನೇ ಆಗಿಬಿಟ್ಟಿದ್ದ. ಅವನಿಗೆ ತನ್ನ ಮಗಳ ಕೊಟ್ಟು ಮದುವೆ ಮಾಡಿಸುವ ಆಸೆ ಅಜ್ಜಿಗಿತ್ತು. ಅಪ್ಪನ ದರ್ಬಾರಿನ ಮುಂದೆ ಅಜ್ಜಿ ಸೋತು ಹೋಗಿದ್ದಳು.

ಪೆಂಟೆಯ ಸರಸಿಯರು ನನ್ನ ತಾಯಿಯ ಬಗ್ಗೆ ವಿಪರೀತ ಕುತೂಹಲ ತೋರುತ್ತಿದ್ದರು. ಒಮ್ಮೆ ಕರೆದುಕೊಂಡು ಬಾ ಎನ್ನುತ್ತಿದ್ದರು. ಹೊಸಿಲು ದಾಟಿ ಬರುವಂತಿರಲಿಲ್ಲ. ತಾಯಿಗೆ ಮನೆಯೇ ಸೆರೆಯಾಗಿತ್ತು. ಹಾಗೆ ಹೊರಗೆ ತಾಯಿ ಹೋಗುವಂತಿದ್ದರೆ ಅಪ್ಪ ತಲೆಕಡಿಯುತ್ತಿದ್ದನೇನೊ. ನನಗೆ ಆ ಹೆಂಗಸರ ಬಗ್ಗೆ ಕೆಡುಕಿರಲಿಲ್ಲ. ಹೊಳೆಯಲ್ಲಿ ಅವರು ಈಜಾಡುತ್ತಿದ್ದರು. ಈಜು ಕಲಿಸಲು ನೀರಿಗಿಳಿಸಿ ಕೈಕಾಲು ಬಡಿಸುತ್ತಿದ್ದರು. ಗತಕಾಲದ ನನ್ನ ಹಳೆಯ ಚಡ್ಡಿ ನಿಲ್ಲುತ್ತಿರಲಿಲ್ಲ. ಅದನ್ನತ್ತ ಬಿಚ್ಚಿ ದಂಡೆಗೆ ಎಸೆಯುತ್ತಿದ್ದರು. ‘ಹಕ್ಕಿ ಮರಿ ಎಲ್ಲೊ’ ಎಂದು ಕೈ ಹಾಕುತ್ತಿದ್ದರು. ಅವರ ತೋಳುಗಳಲ್ಲಿ ತೇಲಾಡುತ್ತಿದ್ದೆ. ಆ ಸ್ವರ್ಗ ಕ್ಷಣಿಕವಾಗಿತ್ತು. ಇದ್ದಕ್ಕಿದ್ದಂತೆ ಆ ಸರಸಿಯರಲ್ಲಿ ಕೆಲವರು ಮಾಯವಾಗುತ್ತಿದ್ದರು. ಊರಿಗೆ ಹೋದರೆಂದು ಹೇಳುತ್ತಿದ್ದರಷ್ಟೇ. ಏನೇನೋ ಗುಸುಗುಸು ಕಥೆಗಳಿದ್ದವು. ಸರಸವತಿಯರ ಮಾರಿಬಿಡುತ್ತಿದ್ದರು. ಅದವರಿಗೆ ಇಷ್ಟ ಇತ್ತೊ ಇಲ್ಲವೊ ಗೊತ್ತಿರಲಿಲ್ಲ. ನನ್ನ ಅತ್ತೆಯರಿಗೆ ಈ ಜಾಡು ಗೊತ್ತಿತ್ತು. ಹೊಸಬರು ಬರುತ್ತಿದ್ದರು, ಚಿಕ್ಕವಯಸ್ಸಿನವರೇ ಹೆಚ್ಚು ಅವರು ಯಾರೊ, ಎಲ್ಲಿದ್ದರೊ ಹೇಗೆ ಒಂದು ರಾತ್ರಿ ಬಂದಿಳಿಯುತ್ತಿದ್ದರೊ; ಅದು ಹೇಗೆ ಆ ಬಲೆಗೆ ಒಗ್ಗಿಕೊಳ್ಳುತ್ತಿದ್ದರೊ… ಅತ್ತೆಯರ ಕೇಳಿದರೆ ಅವರು ಬಾಯಿ ಬಿಡುತ್ತಿರಲಿಲ್ಲ.

ಎಷ್ಟೋ ಬಾರಿ ಆ ಎಂಡಿಗರ ಭಯ ತರಿಸುತ್ತಿದ್ದರು. ಒಂದು ತುಂಡು ಬಣ್ಣದ ಲುಂಗಿಯನ್ನು ದಪ್ಪ ಹೊಟ್ಟೆಗೆ ನುಲಿದುಕೊಂಡು ಪೆಂಟೆಯಲ್ಲಿ ಗಸ್ತು ತಿರುಗುತ್ತಿದ್ದರು. ಕನ್ನಡವನ್ನೇ ಮಾತಾಡುತ್ತಿರಲಿಲ್ಲ. ಎಂಡದ ಕಸುಬಿನ ಅಂಗೈಯಗಲದ ಮಚ್ಚು ಯಾವಾಗಲು ಅವರ ಸೊಂಟದಲ್ಲಿ ಇದ್ದೇ ಇರುತ್ತಿತ್ತು. ಕೆಲವು ಬಣ್ಣದ ಕುಳಿಕುಳಿ ಅಲಂಕಾರದ ನೆಟ್ ಬನಿಯನ್‍ಗಳ ಧರಿಸಿ ಕುತ್ತಿಗೆಗೆ ಕೆಂಪು ಕರ್ಚೀಪನ್ನು ಸಿಕ್ಕಿಸಿಕೊಂಡಿರುತ್ತಿದ್ದರು. ಪೆಂಟೆಯಲ್ಲಿ ತಮಿಳು ಸಿನಿಮಾ ಗೀತೆಗಳು ಮೊಳಗುತ್ತಲೇ ತೋಟಮಾಳವನ್ನೆಲ್ಲ ಆವರಿಸಿಕೊಳ್ಳುತ್ತಿದ್ದವು. ಅಪ್ಪ ಚಾಣಾಕ್ಷ. ಹೊರಗಿಂದ ಬಂದಿದ್ದವರಿಗೂ ಅಪ್ಪ ಬೇಕಿದ್ದ. ಕೆಲವೊಮ್ಮೆ ಆ ಪೆಂಟೆಯ ಹೆಂಗಸರ ಜೊತೆ ಇದ್ದುಬಿಡುತ್ತಿದ್ದೆ. ಟೆಂಟಿನ ಸಿನಿಮಾಕಿಂತಲೂ ಅಲ್ಲಿ ತರಾವರಿ ಮುದುಕಿಯರು ಯಾವುದೊ ಗತಕಾಲದ ತಮಿಳು ಪದಗಳ ಅನಾದಿ ಸ್ವರದಲ್ಲಿ ಹಾಡುವುದೇ ಮಾಂತ್ರಿಕವಾಗಿತ್ತು. ಆಗ ತಾನೆ ಆದಿ ಮಾನವ ದುಃಖಕ್ಕೆ ಎಂತದೊ ಒಂದು ಲಯವನ್ನು ಕಂಡುಕೊಂಡಂತೆ ಅವರ ನಾಭಿಯಾಳವು ಆ ಕಾಲದ ಜೊತೆ ಮಿಡಿಯುತ್ತಿತ್ತು. ನನಗೆ ಅರ್ಥ ಬೇಕಿರಲಿಲ್ಲ. ಭಾವದ ತೀವ್ರತೆ ಸೊಡರಿನಂತೆ ಕಗ್ಗತ್ತಲ ಗವಿಯೊಳಗೆ ಮೂಡುವಾಗ ನನ್ನ ಎದೆಯೊಳಗೆ ಏನೊ ಆಗುತ್ತಿತ್ತು.

ಇಡೀ ಸೀಮೆಯನ್ನು ಹೀಗೆ ತೋಟಗಳಾಗಿ ಪರಿವರ್ತಿಸಿದ್ದವನು ಟಿಪ್ಪುಸುಲ್ತಾನ್ ಅಂತೇ. ಆ ಕಾಲ ನನಗೆ ಗೊತ್ತಿಲ್ಲ. ಅಪ್ಪನಿಗೆ ಪೆಂಟೆಯಲ್ಲಿ ತುಂಬಾ ಸಲಿಗೆಯಿತ್ತು. ಹೆಂಗಸರು ಅವನಿಗಾಗಿ ಕಾಯುತ್ತಿದ್ದರು. ಒಬ್ಬರೇ ಇಬ್ಬರೇ! ಹತ್ತಾರು ಮಂದಿ. ಅವರ ಲೆಕ್ಕದಲ್ಲಿ ಅಪ್ಪ ಯಾವತ್ತೂ ಒಳ್ಳೆಯವನೇ. ಶೂರ ಧೀರ ರಸಿಕನೇ! ನನ್ನ ತಾಯಿಗೆ ಹೇಳಿದರೆ “ಅಯ್ಯೋ” ಎಂದು ನಿಟ್ಟುಸಿರಿಟ್ಟು; ಅದೇನನ್ನೂ ನನಗೆ ಹೇಳಬೇಡ ಎಂದು ಕಳಿಸಿಬಿಡುತ್ತಿದ್ದಳು.

ಮುಂಜಾವಿಗೇ ಇನ್ನೊಂದು ಲೋಕ. ಇಬ್ಬನಿ ಹೊಗೆಯಂತೆ ಮುಚ್ಚಿಕೊಂಡಿರುತ್ತಿತ್ತು. ಸೌದೆಗೆ ಬರವೇ ಇರಲಿಲ್ಲ. ಬೀದಿಯಲ್ಲಿ ಬೆಂಕಿ ಹಾಕಿ ಕಾಯಲು ಕೂತರು ಎಂದರೆ ಚಳಿರಾಯನಿಗೆ ಯಜ್ಞ ಮಾಡಿದಂತಾಗುತ್ತಿತ್ತು. ಗಂಡಸರು ಬರುತ್ತಿರಲಿಲ್ಲ. ಹಾಗೆ ಬೆಂಕಿಕಾಯಲು ಬಂದಿದ್ದಾನೆ ಎಂದರೆ; ‘ಇವನಿಗೆ ದಮ್ಮಿಲ್ಲಾ; ಇವನತ್ರ ಕೆಲ್ಸ ನಡೆಯಲ್ಲಾ’ ಎಂಬ ಅಪಖ್ಯಾತಿಯ ಪದವಿಗಳಿಗೆ ತುತ್ತಾಗಬೇಕಿತ್ತು. ಆ ಕೆಲ ಹೆಂಗಸರೊ; ಇನ್ನೂ ಮಬ್ಬುಗತ್ತಲು ಇದ್ದಿದ್ದರಿಂದ ತೊಡೆತನಕ ತುಂಡು ಸೀರೆಯ ಎತ್ತಿ ಬೆಚ್ಚಗೆ ನೊಚ್ಚಗೆ ಕಾಯಿಸಿಕೊಳ್ಳುತ್ತಿದ್ದರು. ಬೆಂಕಿ ಬೆಳಕಲ್ಲಿ ಅವರ ದುಂಡು ತೊಡೆಗಳು ಕೆಂಪಗೆ ಕಾಣುತ್ತಿದ್ದವು. ಕೆಲ ಮುದುಕಿಯರು ಹಿಂತಿರುಗಿ ಪೂರಾ ಸೀರೆಯ ಬೆನ್ನಿನತ್ತ ಎತ್ತಿ ಹಿಂಬದಿಯ ಕೆರೆದುಕೊಳ್ಳುತ್ತ ಸಡಿಲವಾದ ಕುಂಡಿಗಳ ಬೆಂಕಿಗೆ ತೋರುತ್ತಿದ್ದರು. ಹುಡುಗಿಯರು ಆಕ್ಷೇಪಿಸುತ್ತಿದ್ದರು. ‘ಬೆಳಬೆಳಿಗ್ಗೆಯೇ ನಿನ್ ತಿಕಾ ನೋಡ್ಬೇಕೆ ನಾನೂ… ದರಿದ್ರ ಮುಕುಳಿಯ ಮುಚ್ಚುಕೊ’ ಎಂದು ರೇಗುತ್ತಿದ್ದರು. ‘ನಾಳಕೆ ನಿಮ್ದೂ ಅದೇನೆ ಕನಾ ಬಿಡ್ರಮ್ಮಿ’ ಎಂದು ಮುದುಕಿಯರು ಕುಟುಕುತ್ತಿದ್ದರು. ಪೋಲಿ ಮಾತುಗಳನ್ನು ಎಗ್ಗಿಲ್ಲದೆ ಆಡುತ್ತಿದ್ದರು. ಆ ಮುದುಕ ಬೋರಯ್ಯ ಬರಬಾರದಿತ್ತು. ಬರೀ ಬಾಯಿ ರತಿಕ. ಹರಕು ಬಾಯಿ. ಮಾಜಿ ಎಂಡಿಗ. ಕಸುಬು ಕಲಿಸುವಲ್ಲಿ ನಿಸ್ಸೀಮನಿದ್ದ. ಗುರುದಕ್ಷಿಣೆ ಎಂದರೆ ಅದೇ! ಯಾವಳನ್ನಾದರೂ ಒಬ್ಬಳನ್ನು ಅವನ ಮಗ್ಗಲಿಗೆ ಕಳಿಸಬೇಕಿತ್ತು. ಅದೂ ಸಲೀಸಾಗಿ ಆಗಿಬಿಡುತಿತ್ತು. ಅರೇ! ಅದು ಎಷ್ಟು ಸುಲಭ ಇತ್ತಲ್ಲಾ… ಬಲವಂತವಾಗಿ ಕಸುಬು ಬಿಡಿಸಿದ್ದರು. ಮುಪ್ಪಾದರೂ ದುಡಿಯುತ್ತಿದ್ದ. ಎಂಡದ ಅಮಲು ನೆತ್ತಿಗೆ ಏರಿದ ಮೇಲೆ ಆತ ನರಮನುಷ್ಯ ಅಲ್ಲ. ಅತಿಮಾನುಷ. ಪುರಾಣ ಕಾಲಕ್ಕೆ ಹೊರಟು ಹೋಗುತ್ತಿದ್ದ. ಹಲವು ನಾಟಕಗಳು ಅವನ ಬಾಯಲ್ಲೇ ಇದ್ದವು. ಸತ್ಯಹರಿಶ್ಚಂದ್ರನೇ ಅವನ ಪರಮ ಪ್ರಿಯ ಪಾತ್ರ. ಒಮ್ಮೊಮ್ಮೆ ಮರದ ಮೇಲೆ ಎಂಡ ಇಳಿಸುತ್ತಲೇ ಅಲ್ಲೇ ನಾಟಕ ಶುರುಮಾಡಿ ಬಿಡುತ್ತಿದ್ದ. ಅಹಾ; ಎಂತಹ ರಂಗ ಮಂಚಾನು ಮಂಟಪ!

‘ಬೆಂಕಿ ಹೆಚ್ಚು ಮಾಡ್ರಮ್ಮಾ’ ಎಂದು ಕುಕ್ಕುರುಗಾಲಲ್ಲಿ ಹೆಂಗಸರಿಗೆ ಒತ್ತಿಕೊಂಡು ಕೂತ. ಸ್ವಾಗತ ಎಂಬಂತೆ ಮಡಕೂಸಮ್ಮ ಜೋರಾಗಿಯೆ ಊಸಿದಳು. ಅವಳ ಹೆಸರೇ ಹಾಗೆ. ಮಡಕೆಯಷ್ಟು ಊಸುವವಳು. ‘ಯೇನಮ್ಮೀ? ಮಮ್ಮಕ್ಕಳು ಮುಮ್ಮಕ್ಕಳು ಬಂದ್ರೂ ಯಿನ್ನೂ ನಿನ್ನೊಸ್ಗೆ ಮುಪ್ಪಾಗ್ಲಿಲ್ಲವಲ್ಲಾ’ ಎಂದ ಬೋರಯ್ಯ. ‘ಕೊತ್ತಿಗೆ ಜ್ವರಾ ಬರೊ ಮಾತಾಡ್ತಯೆ ನೋಡು… ಸತ್ತಾಗ್ಲೇ ವೂಸು ಗೋಮಿಂದಾ ಶಿವಾ ನಾರಾಯಣಾ ಅಂತಾ ವಂಟೋಗುದೂ… ಮುಪ್ಪಂತೆ ಮುಪ್ಪು… ಯಲ್ಲ ಮುದುರ್ಕಂದದೆ ನಿನ್ಗೆ! ಅದ್ಕೇ ಅಂಗತಿಯೇ’. ‘ಮೇಯ್, ಮಟ್ಟಾಗಿ ಮಾತಾಡಮ್ಮೀ… ಮುದುರ್ಕಂದದೆ ನಿಜಾ… ಅದಾ ವೊಸಿ ಕೆದಿರ್ಸಿಕೊಡು’. ‘ನಾಚ್ಕಿಲ್ದೋನೆ. ವೊಸಿಡಿಯುಕೆ ವೋಗಿ ಮಂಡಿ ಮುರ್ಕಂದ್ರಂತೇ… ಮಂಡಿಯೆಲ್ಲ ಸವೆದೋಗವೆ ಸುಮ್ನಿರೊ’. ಅವರಿಬ್ಬರದು ಪ್ರಾಚೀನ ಕಾಲದ ಜೋಡಿ. ತೆಗಳಾಡಿಕೊಳ್ಳುವುದರಲ್ಲೇ ಏನೊ ಅವರಿಗೊಂದು ಸುಖ. ಬಿಸಿಲೇರಿದಂತೆ ಅವರವರ ಕಾಯಕದಲ್ಲಿ ಚದುರಿ ಹೋಗುತ್ತಿದ್ದರು. ಮಡಕೊಸಮ್ಮ ರಮ್ಯ ಕಥೆಗಳ ಕಣಜ. ಅದೆಲ್ಲ ಈಗ ಯಾರಿಗೂ ಬೇಡ. ಅವಳು ಬೋರಯ್ಯನ ಒಂದು ಕಾಲದ ಉಪ ಪತ್ನಿ. ಬೇಕಾದಾಗ ಬೇಕು; ಬೇಡವಾದಾಗ ಬೇಡ. ಆ ಎಂಡದ ಪೆಂಟೆ ಎಲ್ಲೆಲ್ಲಿಗೆ ಹೋಗುತ್ತದೊ ಅಲ್ಲಲ್ಲಿಗೆ ಮುದುಕರು ಅನಿವಾರ್ಯವಾಗಿ ಹಿಂಬಾಲಿಸುತ್ತಿದ್ದರು. ಅವರು ಏನಾದರೊಂದು ಕೆಲಸ ಮಾಡಿಕೊಳ್ಳುತ್ತಿದ್ದರು. ಅದೇ ಅವರ ಜೀವನ. ಸಂತೋಷವೂ ಇಲ್ಲಾ ದುಃಖವೂ ಇಲ್ಲಾ. ದಿನದಿನದ ಹಗಲು ರಾತ್ರಿಗಳ ಜೊತೆ ಸುಮ್ಮನೆ ಕಾಲ ಕಳೆದು ಬಿಡುತ್ತಿದ್ದರು. ಯಾರಾದರೂ ಸತ್ತಾಗ ಅಂತಹ ಮುಪ್ಪಿಗರು ಮರಣಗೀತೆಗಳ ಮಹಾ ಕವಿಗಳೇ ಆಗಿ ಬಿಡುತ್ತಿದ್ದರು. ಒಬ್ಬರಿಗೊಬ್ಬರು ಒಟ್ಟುಗೂಡಿ ಸತ್ತವನ ಸುತ್ತ ಮನುಷ್ಯರ ಪಾಡನ್ನು ಗಾಢವಾದ ಶೋಕದಲ್ಲಿ ಹಾಡುತ್ತಿದ್ದರು. ಕಾವ್ಯದ ಆವೇಶವನ್ನು ದುಃಖದ ಲಯಕ್ಕೆ ತಂದು ರಾಗ ಪಾಡುವುದು ಅವರಿಗೇ ವಿಶೇಷವಿತ್ತು. ಅನುಕರಿಸಲು ಬರುತ್ತಿರಲಿಲ್ಲ.

ಹೆಣವ ಮಣ್ಣು ಮಾಡಿದ ನಂತರ ಎಂತಹ ನಿರಾಳ! ಅವರ ಶೋಕವೆಲ್ಲ ಸುಖದ ಮಾತಾಗಿ ಬದಲಾಗುತ್ತಿದ್ದವು. ಹುಟ್ಟು ಸಾವು ಅವರಲ್ಲಿ ಅಷ್ಟು ಸಲೀಸಾಗಿದ್ದವು. ಹಾಗೆ ನಿರಾಳವಾಗಿ ಮರೆವ ಶಕ್ತಿಯನ್ನು ದೇವರು ಇವರಿಗೆ ಹೇಗೆ ಕೊಟ್ಟ. ಅಲ್ಲೇ ಆಕ್ರಂದನ; ಅಲ್ಲೇ ಘಹಘಹಿಸುವ ನಗು! ವೈರುಧ್ಯಗಳೆ ಇರಲಿಲ್ಲ. ನನ್ನ ಅಳತೆಗೆ ಮೀರಿದ್ದ ಲೋಕ. ಅಪ್ಪನಿಗೆ ಅಲ್ಲಿ ಯಾರೂ ಶತ್ರುಗಳೆ ಇರಲಿಲ್ಲ. ಇದ್ದರು ಸಮಯ ಕಾದು ಹದ ಹಾಕುತ್ತಿದ್ದರು. ಪೆಂಟೆಯ ಮೇಸ್ತ್ರಿಯ ಕೈ ಕೆಳಗೆ ಹತ್ತಾರು ಆಳುಗಳಿದ್ದರು. ಹೆಣ್ಣುಗಳ ವಿಷಯದಲ್ಲಿ ಅಪ್ಪನಿಗೂ ಮೇಸ್ತ್ರಿಗೂ ಮುಸುಕಿನ ಗುದ್ದಾಟವಿತ್ತು.

ಅವತ್ತೊಂದು ದಿನ ಬೆಳದಿಂಗಳ ಹಬ್ಬವಿತ್ತು. ಅದು ಮಿಥುನ ಜಾತ್ರೆ ಎಂದು ದೊಡ್ಡವರು ಉತ್ಸಾಹದಲ್ಲಿ ಭಾಗವಹಿಸುತ್ತಿದ್ದರು. ನಾಮರ್ದ ಮುದುಕರೂ ಜೊಲ್ಲು ಸುರಿಸಿಕೊಂಡು ಬೆಳದಿಂಗಳಲ್ಲಿ ಅಡ್ಡಾಡುತ್ತಿದ್ದರು. ಇದೇ ಸುಸಂದರ್ಭ ಎಂದು ನಮ್ಮ ಊರುಕೇರಿಯ ಹೆಂಗಸರು ಕದ್ದು ಮುಚ್ಚಿ ಬೆಳದಿಂಗಳ ಹಬ್ಬವನ್ನು ಮಾಡಿಕೊಳ್ಳುತ್ತಿದ್ದರು. ಆ ಮಿಥುನ ಜಾತ್ರೆಗೆ ಜಾತಿಯೇ ಇರಲಿಲ್ಲ. ನಾವು ಹಾಗೆ ಮಾಡಿದೆವು ಹೀಗೆ ಮಾಡಿದೆವು ಎಂದು ಕಲ್ಪನೆಯಲ್ಲಿ ಊರ ಚೆಲುವೆಯರ ಜೊತೆ ರಾತ್ರಿ ಎಲ್ಲಾ ಮಲಗಿದ್ದೆ ಎಂದು ಜಂಬಕೊಚ್ಚಿಕೊಳ್ಳುತ್ತಿದ್ದರು. ಅದೆಷ್ಟು ನಿಜವೊ ಸುಳ್ಳೋ… ಮರುದಿನ ಇಡೀ ಊರ ಹೆಂಗಸರು ಗಪ್‌ಚಿಪ್ಪಾಗಿರುತ್ತಿದ್ದರು. ಅವರಿಗೆ ಮಾತ್ರ ಸತ್ಯ ಗೊತ್ತಿರುತ್ತಿತ್ತು. ಅದೊಂದು ಹಿರಿಯರ ಕಾಲದ ಸಭ್ಯ ಮೋಹದ ಆಚರಣೆಯಾಗಿತ್ತು. ತಪ್ಪೆನಿಸಿರಲಿಲ್ಲ. ‘ಹಬ್ಬದಲ್ಲೂ ಹಳೇ ಗಂಡನೇ’ ಎಂಬ ಗಾದೆಯೇ ಇತ್ತು. ಆ ಒಂದು ದಿನ ಕತ್ತಲಲ್ಲಿ ಮುಗಿದ ಮೇಲೆ ಮತ್ತೆ ಆ ಹೆಣ್ಣು ಗಂಡುಗಳು ಸಂದಿಸುವಂತಿರಲಿಲ್ಲ. ಯಾರಿಗೂ ಗೊತ್ತಾಗುತ್ತಿರಲಿಲ್ಲ. ಅಪ್ಪನದೇ ಕಿತಾಪತಿ. ಅವಳನ್ನು ಮುಟ್ಟಿರುವೆ ಎಂದು ಬಹಿರಂಗ ಮಾಡಿ ತಾನು ಬಾರೀ ಗಂಡಸು ಎಂದು ಬೀಗುತ್ತಿದ್ದ. ಪೆಂಟೆಯ ಮೇಸ್ತ್ರಿಯ ಹೆಂಡತಿ ತನಗಾಗಿ ಯಾವಾಗ ಕರೆದರೂ ಬರುತ್ತಾಳೆ ಎಂದು ಹಗುರವಾಗಿ ಹೋಟೆಲ ಗಿರಾಕಿಗಳ ಮುಂದೆ ಬೊಗಳಿದ್ದ. ಮೇಸ್ತ್ರಿಗೆ ಅಪಮಾನವಾಗಿತ್ತು. ಹೆಂಡತಿಯ ವಿಚಾರಿಸಿದ್ದ. ಅಪ್ಪಟ ಸುಳ್ಳು ಎಂದು ತಾಳಿ ಹಿಡಿದು ಪ್ರಮಾಣ ಮಾಡಿದ್ದಳು. ಮಾನವಂತೆ ಅವಳು. ನಾನೆ ಕಡಿದು ಬಿಡುವೆ ಎಂದಳು. ಅಮಾಯಕ ಹೆಂಗಸರ ಮೇಲೆ ಹಾಗೆ ಅಪಮಾನಿಸುವುದು ಅಮಾನುಷ. ಹಿಂದಿನಿಂದಲೂ ನಡೆದು ಬಂದಿರುವ ಪದ್ಧತಿ. ನಾನವಳ ಸಹವಾಸ ಮಾಡಿದ್ದೇನೆ ಎಂಬ ಸುಳ್ಳಿಗೇ ಎಷ್ಟೊ ಸಂಸಾರಗಳು ಮುರಿದು ಹೋಗಿದ್ದವು. ಎದುರಾಳಿಯ ಕುಗ್ಗಿಸಲು ಅಂತಹ ಆಯುಧವ ಹೇಡಿ ಗಂಡಸರು ಬಳಸುತ್ತಿದ್ದರು. ಮನೆಮುರುಕ ಕೆಲಸ. ಅವನ ಹೆಂಡತಿ ಒಬ್ಬಳೇ ಸಿಕ್ಕಿದ್ದಳು; ಹಿಡಿದು ಕೆಡವಿಕೊಂಡಿದ್ದೆ ಎಂಬ ಒಂದೇ ಒಂದು ಸುಳ್ಳು ಎಷ್ಟೆಲ್ಲ ನರಕ ಸೃಷ್ಠಿಸಿದ್ದಿದೆ ಎಂಬುದು ಆ ಪಾಡು ಪಟ್ಟವರಿಗಷ್ಟೇ ಗೊತ್ತು.

ಸರಸಿಯರ ಜೊತೆ ಅಪ್ಪ ಹರಟುತ್ತಿದ್ದ. ದುತ್ತೆಂದು ಬಂದು ಮೇಸ್ತ್ರಿಯ ಹೆಂಡತಿ ಪೊರಕೆಯಲ್ಲಿ ಚಚ್ಚಿದಳು. ಮೇಸ್ತ್ರಿ ಕಡೆಯವರು ಹಿಡಿದು ಕಟ್ಟಿಹಾಕಿ ದೊಣ್ಣೆಯಿಂದ ಬಲವಾಗಿ ಬಡಿದಿದ್ದರು. ಸರಸಿಯರು ನಾಗಾಡುತ್ತಾ ಅತ್ತ ಹೋಗಿ ಬಚ್ಚಿಟ್ಟುಕೊಂಡರು. ಮೇಸ್ತ್ರಿ ಅಪ್ಪನ ಎದೆ ಮೇಲೆ ಕಾಲಿಟ್ಟು ತುಳಿದು; ನಿನ್ನೆಂಡ್ತಿನಾ ವೊತ್ಕಂದು ಬಂದು ನಿನ್ಮುಂದೆನೇ ಹಿಡ್ಕೊಳ್ಳಲಾ… ಅಂತಾ ಒಳ್ಳೆ ಹೆಂಗಸಿಗೆ ಎಂತಾ ಹಂದಿಯೊ ನೀನು’ ಎಂದು ಬೆಂಬಲಿಗರ ಮೂಲಕ ಬೆಲ್ಟಿನಿಂದ ಬಡಿಸಿದ. ಅಪ್ಪ ಚೀರುವಂತಿರಲಿಲ್ಲ. ಸರಸಿಯರ ಮುಂದೆ ಜಂಬದ ಹುಂಜ. ಆ ಚೆಲುವೆಯರೊ ಒಳಗೊಳಗೆ ಸಂತೋಷ ಪಟ್ಟಿದ್ದರು. ಮೇಸ್ತ್ರಿ ಎಚ್ಚರಿಕೆ ಕೊಟ್ಟಿದ್ದ. ಮಂಗಾಡಳ್ಳಿ ಹುಚ್ಚನ ಹತ್ಯೆಯ ನಂತರ ಅಪ್ಪನ ಪೊಗರು ಕಡಿಮೆ ಆಗಿತ್ತು. ಯಾರೂ ಹೆದರುತ್ತಿರಲಿಲ್ಲ. ಅಪ್ಪನನ್ನೂ ಅವನ ಜೊತೆಯೆ ಕೊಲ್ಲಬೇಕು ಎಂದು ಕೆಲವರು ಸಲಹೆ ನೀಡಿದ್ದರು. ಕೊನೆಗಳಿಗೆಯಲ್ಲಿ ಏನೇನೊ ಆಗಿತ್ತು.

ಅಪ್ಪ ಹೇಳಬೇಕೆಂದರೆ ಪುಕ್ಕಲ. ಜೊತೆಗೊಬ್ಬರು ಇದ್ದಾರೆ ಎಂದರೆ ಎಂತಹ ಕೃತ್ಯಕ್ಕು ಮುಂದಾಗುತ್ತಿದ್ದ. ಆ ದಿನ ಮೇಸ್ತ್ರಿ ಕಡೆಯವರು ಗುದ್ದಿ ಗುದ್ದಿ ಮೈ ತುಂಬಾ ‘ಒಳೇಟು’ ಮಾಡಿದಾಗ ನಾನು ಅಲ್ಲೇ ಗುಡಿಸಲ ಕಿಂಡಿಯಲ್ಲಿ ಕಂಡಿದ್ದೆ. ಐನಾತಿ ಏಟುಗಳು. ಅಪ್ಪ ಯಾರಲ್ಲು ಹೇಳಿಕೊಳ್ಳುವಂತಿರಲಿಲ್ಲ. ಪ್ರತಿ ಸೇಡಿಗೆ ಏನು ಮಾಡುವನೊ ಎಂದು ಯೋಚಿಸಿದ್ದೆ. ಅದು ಅಷ್ಟು ಸುಲಭ ಇರಲಿಲ್ಲ. ಸರಸಿಯರಿಗೆ ಕಟ್ಟಾಜ್ಞೆ ವಿಧಿಸಿದ್ದ. ಹೀಗಾಯ್ತು ಎಂದು ಅವರು ಯಾರಿಗೂ ಹೇಳಲಿಲ್ಲ. ಆಯಕಟ್ಟಿನಲ್ಲಿ ಮೇಸ್ತ್ರಿ ವಿಷಯ ಮುಟ್ಟಿಸಿದ್ದ. ಪೆಂಟೆಯ ಸಹವಾಸ ಕಡಿಮೆ ಮಾಡಿಕೊಂಡ.

ನಿಮ್ಮಪ್ಪನನ್ನು ಕರೆದುಕೊಂಡು ಬಾ ಎಂದು ಸರಸಿಯರು ಕೆನ್ನೆ ಚಿವುಟಿ ಮುತ್ತಿಕ್ಕಿಕೊಳ್ಳುತ್ತಿದ್ದರು. ವಿಚಿತ್ರ ಕಂಪಿನ ಬೆವರಿನ ಹೆಂಗಸರವರು. ಅವರ ಎದೆ ಮಧ್ಯೆ ಮುಖವಿಟ್ಟು ಆಘ್ರಾಣಿಸುತ್ತಿದ್ದೆ. ನನ್ನ ತಾಯಿ ನನ್ನನ್ನು ಹಾಗೆ ಅಪ್ಪಿ ಹಿಡಿದು ಎದೆಗೆ ಒತ್ತಿಕೊಳ್ಳುತ್ತಿದ್ದುದು; ಅವಳು ಅಪ್ಪನ ಹಿಂಸೆಗೆ ಈಡಾಗಿ ದುಃಖಿಸುತ್ತಿದ್ದಾಗ ಮಾತ್ರ. ಅಂತಲ್ಲಿ ಯಾವತ್ತೂ ರಕ್ತ ಬಸಿದಂತೆ ತಾಯಿ ಮೌನ ರೋಧನದಲ್ಲಿ ಕರಗುತ್ತಿದ್ದಳು. ಅಷ್ಟು ಚಿಕ್ಕ ವಯಸ್ಸಿಗೇ ದುಃಖ ಸಾಕಷ್ಟು ಕಲಿಸಿತ್ತು. ಅಪ್ಪ ಮಾತ್ರ ಯಾವುದರಿಂದಲೂ ಕಲಿಯುತ್ತಿರಲಿಲ್ಲ. ಯಾವುದರಿಂದ ತೊಂದರೆ ಆಯಿತೋ ಅದನ್ನೇ ಇನ್ನಷ್ಟು ಹೆಚ್ಚು ಮಾಡಿಕೊಳ್ಳುತ್ತಿದ್ದ. ಒಂದು ತಪ್ಪಿಗೆ ಹೆಚ್ಚುವರಿಯಾಗಿ ಇನ್ನತ್ತು ಲೋಪಗಳ ಎಸಗುತ್ತಿದ್ದ. ಒಳಗೊಳಗೇ ಕುದಿಯುತ್ತಿದ್ದ. ಅಮಾಯಕರ ಮೇಲೆ ಜಗಳ ತೆಗೆದು ಆ ನಿಶ್ಪಾಪಿಗಳಿಗೆ ಮುಖ ಊದಿಕೊಳ್ಳುವಂತೆ ಹೊಡೆದು ದಬ್ಬಾಳಿಕೆ ಮಾಡುತ್ತಿದ್ದ. ಯಾರೂ ಸಿಗಲಿಲ್ಲ ಎಂದರೆ ನನ್ನ ತಾಯಿ ಯಾವತ್ತೂ ಅವನ ಕೋಪ ಹತಾಶೆಗೆ ಈಡಾಗುತ್ತಿದ್ದಳು. ಅವನ ಮನಸ್ಸು ಯಾವತ್ತೂ ದಗ್ದವಾಗಿತ್ತು. ಹಿಂಸೆ ಅವನಿಗೆ ಪರಮಾನಂದ.

ಅವನು ಸುಖಿಸಲು ಎಷ್ಟೊಂದು ಸಂಪತ್ತಿತ್ತು! ಎರಚಾಡುವಷ್ಟು ಹಣವಿತ್ತು. ಗದ್ದೆ, ತೋಟ, ಹೊಲಗಳಿದ್ದವು. ಅವರ ಅಣ್ಣ ಆ ಕಾಲಕ್ಕೆ ಮೈಸೂರಿನಲ್ಲಿ ದೊಡ್ಡ ರೆವಿನ್ಯೂ ಅಧಿಕಾರಿಯಾಗಿದ್ದ. ಕುದುರೆಗಾಡಿಯಲ್ಲಿ ಅವರಣ್ಣ ಸಂಸಾರದ ಜೊತೆ ಮೈಸೂರಿನ ಮಹರಾಜನಂತೆ ಬರುತ್ತಿದ್ದ. ನನ್ನ ತಾತನಿಗೆ ಗಾಧೀಜಿಯ ಪ್ರಭಾವ ಇತ್ತು. ಆ ಕಾಲಕ್ಕೆ ಮನೆಗೆ ವಿದ್ಯುತ್ ಬಂದಿತ್ತು. ಓದು ಬರಹ ತಾತನಿಗೇ ಗೊತ್ತಿತ್ತು. ಒಮ್ಮೊಮ್ಮೆ ಅಪ್ಪ ರಾಮಾಯಣ ಮಹಾಭಾರತಗಳ ವಾಚಿಸಿ ವಿವರಿಸುತ್ತಿದ್ದ. ಎಷ್ಟೊಂದು ವಿಚಿತ್ರಗಳು ಅವನೊಳಗೆ! ಒಮ್ಮೊಮ್ಮೆ ನನಗೆ ಚನ್ನಾಗಿ ಕೋಲಿಂದ ಬಗ್ಗಿಸಿಕೊಂಡು ಬೆನ್ನ ಮೇಲೆ ಹೊಡೆದೊಡೆದು; ಸ್ವಲ್ಪ ಹೊತ್ತಾದ ನಂತರ ಅಂಗಿ ಬಿಚ್ಚಿ ಬೆನ್ನ ಮೇಲಿದ್ದ ಬರೆಗಳ ಕೂಲಂಕುಷವಾಗಿ ಲೆಕ್ಕಹಾಕಿ; ಸಹಜವಾಗಿ ಒಂದು ವಡೆಯೊ ಬೊಂಡವೊ ಕೊಟ್ಟು ತಿನ್ನು ಎಂದು ತನ್ನ ಕಾಲ ಬಳಿ ಕೂರಿಸಿಕೊಂಡು ದಿಟ್ಟಿಸುತ್ತಿದ್ದ. ನನಗೆ ತಿನ್ನಲು ಆಸೆಯೆ ಇರಲಿಲ್ಲ. ಉಚ್ಚೆ ಉಯ್ಯುವ ನೆಪ ಹೇಳಿ ಹಿತ್ತಲಿಗೆ ಬಂದು ಕೋಳಿಗಳಿಗೆ ತಿನ್ನಿಸಿ ಬಿಡುತ್ತಿದ್ದೆ.

ತಂದೆ ಎಂದರೆ ಏನು ಎಂಬುದೇ ಇವತ್ತಿಗೂ ನನಗೆ ಗೊತ್ತಿಲ್ಲ. ಅಪ್ಪನ ಪ್ರೀತಿಯೋ ಅದು ನನ್ನ ಕಲ್ಪನೆಗೆ ಮೀರಿದ್ದು. ನನ್ನನ್ನು ಶಾಲೆಗೆ ಸೇರಿಸಿದ್ದು ನನ್ನ ತಾತ. ಅಷ್ಟೊಂದು ದೊಡ್ಡ ಮನೆಯಲ್ಲಿ ತಾತನ ಬಳಿ ಮಾತ್ರ ನನಗೆ ಸಲಿಗೆ ಇತ್ತು. ಮಾರಣಾಂತಿಕವಾಗಿ ಬಡಿಯುವಾಗಲೆಲ್ಲ ತಾತನೇ ನನ್ನನ್ನು ಕಾಪಾಡುತ್ತಿದ್ದುದು. ಊರು ಬಿಟ್ಟು ಎಲ್ಲಿಯಾದರೂ ಬದುಕಿಕೊ ಎಂದು ಪೆಂಟೆಯ ಸರಸಿಯರೂ ಹೇಳಿದ್ದರು. ನಮ್ಮ ಊರಿಗೆ ಬರುವೆಯಾ; ಕರೆದುಕೊಂಡು ಹೋಗುತ್ತೇವೆ ಎಂದು ಮಾತು ಕೊಟ್ಟಿದ್ದರು. ಒಪ್ಪಿಕೊಂಡಿದ್ದೆ. ಅದು ಮುಂದೆ ಆಗಲಿಲ್ಲ. ಆ ಸರಸಿಯರ ಜೀವನವೇ ಕನ್ನಡಿಯಲ್ಲಿ ಬಂದು ಹೋಗುವಂತಿತ್ತು. ಮುಂದೆ ನಾನು ಹೈಸ್ಕೂಲಿಗೆ ಬರುವಷ್ಟರಲ್ಲಿ ಅತ್ತೆಯರ ಮೂಲಕ ಆ ದಂದೆ ಚೆನ್ನಾಗಿ ಗೊತ್ತಿತ್ತು. ಕಲ್ಪಿಸಿಕೊಳ್ಳುತ್ತಿದ್ದೆ; ಒಂದು ವೇಳೆ ಸರಸಿಯರ ಜೊತೆ ಮುಂಬೈಗೆ ಹೋಗಿದ್ದಿದ್ದರೆ; ಬಗೆಬಗೆಯ ತಿಂಡಿ, ಬಟ್ಟೆ, ಕೈ ತುಂಬಾ ಕಾಸು; ತರಾವರಿಜನಾ… ಅಪ್ಪನ ಕಾಟವೇ ಇಲ್ಲಾ; ಶಾಲೆಯ ಕಿರಿ ಕಿರಿಯೇ ಇಲ್ಲಾ… ಬೇಕಾದ ಎಲ್ಲಾ ಸಿನಿಮಾ ನೋಡಬಹುದೂ; ಬದುಕಲು ಸಾವಿರಾರು ದಾರಿ ಎಂದು ಕಲ್ಪಿಸಿಕೊಳ್ಳುತ್ತಿದ್ದೆ. ಆ ನನ್ನ ಕಲ್ಪನೆಗಳು ಅತ್ತೆಯರು ಚಿವುಟಿ ಹಾಕುತ್ತಿದ್ದರು. ತಪ್ಪಿಸಿಕೊಳ್ಳಲು ದಾರಿಗಳಿರಲಿಲ್ಲ; ಆದರೆ ಅಪಾರ ಕಲ್ಪನೆಗಳಿದ್ದವು. ಅವು ನನ್ನ ಕೈ ಹಿಡಿದು ನಡೆಸಿವೆ. ನನ್ನ ತಂದೆಯ ತಾಯಿ ಇದ್ದಳು. ಅವಳು ಸಾಧಾರಣ. ಅಯ್ಯೋ ಎಂಬಂತಿದ್ದಳು. ಅವಳ ಕೇಡುಗಣ್ಣಿಗೆ ಬಿದ್ದೆವೊ ಅಲ್ಲಿಗೆ ಮುಗಿದೇ ಹೋಗುತಿತ್ತು. ಅವಳ ಸಹವಾಸವಲ್ಲಾ; ಕಣ್ಣಗೇ ಬೀಳುತ್ತಿರಲಿಲ್ಲ. ಅಪ್ಪ ಅಜ್ಜಿಯ ಮಾತನ್ನು ಪ್ರಮಾಣ ಎಂದು ಒಪ್ಪಿಕೊಳ್ಳುತ್ತಿದ್ದ. ಹೆಂಗಸರ ಹಾದರದ ಮಾತುಗಳ ಹಬ್ಬಿಸುವುದರಲ್ಲಿ ಅವಳಿಗೆ ವಿಪರೀತ ಸುಖ. ಅಜ್ಜಿಯ ಗುಸು ಮಾತಿನಿಂದಲೇ ಯಾವ ಅನೈತಿಕತೆಯ ಸಂಬಂಧ ಇಲ್ಲದಿದ್ದರೂ ಅನೇಕರು ನಡತೆಗೆಟ್ಟವರೆ ಎಂಬ ಅಪಖ್ಯಾತಿಗೆ ಒಳಗಾಗಿದ್ದರು.

ನನ್ನ ತಾಯಿಯ ಬಗ್ಗೆಯೇ ಗುಲ್ಲು ಎಬ್ಬಿಸಿದ್ದಳು. ಅಪ್ಪ ಅದನ್ನು ನಂಬಿದ್ದ. ಅದೊಂದು ನರಕ. ಹೇಳಲಾಗದಷ್ಟು ಕಷ್ಟ. ಬರೆಯಲಾಗದಂತೆ ಬೆರಳುಗಳು ಕಂಪಿಸುತ್ತವೆ. ಅಂಕುಷವಿಟ್ಟು ಎಳೆದಂತಾಗುತ್ತದೆ. ಆ ಸರಸಿಯರು ನನ್ನ ತಾಯಿ ಪರವಾಗಿ ಎಷ್ಟೆಲ್ಲ ಒಳ್ಳೆಯ ಮಾತಾಡಿದರೂ ಅಪ್ಪ ಒಪ್ಪಿರಲಿಲ್ಲ, ‘ನಿಮ್ಮಂತೋರು ಅವಳ ಪರ ಇಲ್ದೆ ಇನ್ನೇನ್ ಮಾಡೀರಿ’ ಎಂದು ಅವರ ಮಾತ ಮುದುರಿ ಬಿಸಾಡಿದ್ದ. ಸೊಸೆಯರ ಕಂಡರೆ ಅಜ್ಜಿಗೆ ಆಗುತ್ತಲೇ ಇರಲಿಲ್ಲ. ಯಾವಾಗಲೂ ಕಾವಲು ಕಾಯುತ್ತಿದ್ದಳು. ಹಿತ್ತಲಲ್ಲಿ ಮಲ್ಲಿಗೆ ಮೆಳೆಗೆ ಏಣಿ ಹಾಕಿ ಹೂ ಕೊಯ್ಯುವಾಗ ಕದ್ದು ಗಮನಿಸುತ್ತಿದ್ದಳು. ದುಂಡು ಮಲ್ಲಿಗೆಯ ಸಿಂಬಿ ಮಾಡಿ ಮುಡಿದುಕೊಂಡರೆ; ‘ಏನಮ್ಮಿ ನಿನ್ನ ಸಿಂಗಾರ’ ಎಂದು ಕುಹಕವಾಡುತ್ತಿದ್ದಳು. ನನ್ನ ತಾಯಿ ಹೆದರಿ; ಅಷ್ಟು ಆಸೆಯಿಂದ ಮುಡಿದಿದ್ದ ಹೂವ ಕಿತ್ತು ಬೇಲಿಗೆ ಬಿಸಾಡಿ ಸಪ್ಪಗಾಗಿ ಬಿಡುತ್ತಿದ್ದಳು. ತಾತ ತನ್ನ ಆ ಹೆಂಡತಿಯನ್ನು ಯಾವತ್ತೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ. ಚಾಡಿಕೋರ ಹೆಂಗಸಿನ ಜೊತೆ ಆತ ಅಷ್ಟು ಕಾಲ ಸಂಸಾರ ಸಾಗಿಸಿದ್ದೇ ಪವಾಡ.