ವಿವಿಧ ಖಾದ್ಯಗಳು

ಸಾಲುಗಟ್ಟಿದ ಜನ
ತಮ್ಮ ತಮ್ಮ ತಟ್ಟೆಗಳನ್ನಿಡಿದು
ಸರದಿಯಲ್ಲಿ ನಿಂತಿದ್ದರು

ಒಪ್ಪ ಓರಣಮಾಡಿ ಜೋಡಿಸಿಟ್ಟ
ಪಾತ್ರೆಗಳಲ್ಲಿ ವಿವಿಧ ಖಾದ್ಯಗಳು
ಮಾರ್ಕ್ಸನ ಅರ್ಥ ಗಾಂಧಿಯ ಹೃದಯ
ಬುದ್ಧನ ಕರುಳು ಅಂಬೇಡ್ಕರ್ ಮೆದುಳು
ಬಸವನ ದಾಸೋಹ ದೊಳಗೆ
ವಿವಿಧ ತತ್ವಗಳ ಭಕ್ಷ್ಯಗಳೊಳಗೆ
ಯಾರಿಗೆ ಯಾವುದು ಬೇಕೋ ಅದನು
ಆಯ್ದು ಕೊಳ್ಳಬಹುದಿತ್ತು

ಅವರಿಗೆ ಅವರದೇ ಆಯ್ಕೆಗಳಿದ್ದವು
ಕೆಲವರಿಗೆ ಸೊಪ್ಪು ಸದೆ
ಬೆವರ ವಾಸನೆ
ನೆಂಚಿಕೊಳ್ಳಲು ನಾಲಿಗೆ ಚಪಲ
ಮಿಕ್ಕಂತೆ
ತಿಳಿಸಾರು ಮಜ್ಜಿಗೆ
ನೈವೇದ್ಯಕ್ಕಿಟ್ಟ ಎಡೆ

ಎಡೆಬಿಡದ ನೂಕುನುಗ್ಗಲು
ಮುಗಿಬಿದ್ದ ಜನ
ಸಿಕ್ಕಿದ್ದನ್ನು ಬಾಚಿಕೊಳ್ಳುತ್ತಿದ್ದರು
ಕಾಲಿಗೆ ಸಿಕ್ಕ ಅನ್ನ
ಕೈಗೆ ಮೆತ್ತಿದ ದೂಳು
ಉದರಕ್ಕಿಳಿಸುವ ಆತುರ
ಗಂಟಲಲಿ ಸಿಕ್ಕ ಕಬಾಬು
ಬಿಕ್ಕಿದರೆ ನೀರೂ ದಕ್ಕಲಿಲ್ಲ.