ಒಂದೂ ಅಲ್ಲ ಎರಡೂ ಅಲ್ಲ

ಎಲ್ಲೋ ಹರಿಯುತ್ತಿದ್ದ ನೋಟ
ತಿರುಗಿ ಸ್ಥಾಪಿತಗೊಂಡಿತು
ಹೆಣ್ಣಲ್ಲ ಗಂಡಲ್ಲ
ಏನಿದು
ಹೆಣ್ಣೆಂದು ಅಪ್ಪಿದರೆ ಗಂಡು
ಗಂಡೆಂದು ಸ್ಪರ್ಷಿಸಿದರೆ ಹೂಮೈಯಿ
ಕಾಣುವುದರಲ್ಲಿ ಕಾಣುತ್ತಿರುವುದೇ ಇಲ್ಲ
ಕಾಣುತ್ತಿರುವುದು ಕಾಣಬೇಕೆಂದಿರಲಿಲ್ಲ
ಎರಡು ಜೀವ ಒಂದು
ಒಂದು ಎನ್ನುವುದರಲ್ಲಿ ಒಂದೂ ಇಲ್ಲ
ಮಿಳಿತದಲಿ
ಲೋಕಕ್ಕೆ ಗಂಡೆಂಬ ಭೇದ
ಹೆಣ್ಣೆಂಬ ಭೇದ
ನೋಟವ ಸೆಳೆದದ್ದು ಅದೂ ಅಲ್ಲ ಇದೂ ಅಲ್ಲ
ಕಂಡು, ಕರಗಿದೆ ನೋಟ
ಕರಗಿರುವಲ್ಲಿ ರೂಪವಿಲ್ಲ ರೂಹಿಲ್ಲ
ಬೇರೆಯೇ ಇದೆ ನೋಟದಲ್ಲಿ
ಲೋಕ ಕಂಡದ್ದಕ್ಕಿಂತಲೂ
ಗಂಡು ಹುಡುಕಿದಲ್ಲಿ ಹೆಣ್ಣು
ಹೆಣ್ಣ ಹಂಬಲಿಸಿದಾಗ ಗಂಡು
ಒಂದೂ ಅಲ್ಲ ಎರಡೂ ಅಲ್ಲ.