ಮುಂಗಾರಿನ ಮಳೆಗಾಗಿ
ಕುಲುಮೆಯ ನಿಗಿನಿಗಿ ಕೆಂಡದಲ್ಲಿ
ನೇಗಿಲ ಕುಳ
ಕಾಯುತಿದೆ
ಮುಂದಿನ ಹೋಲಿಕೆ ಕೇಳಬೇಡ
ಗೆಳತಿ
ನಿನ್ನ ಕೆನ್ನೆಗಳು ಆಗಲೇ
ಗುಲಾಬಿಯ ಹಾಗಿವೆ

******

ಇಲ್ಲಿ ಎಲ್ಲವೂ ಹಳೆಯದು
ನಿನ್ನ ಪ್ರೀತಿಯನ್ನು ಹೊರತು ಪಡಿಸಿ
ಇಲ್ಲಿ ಎಲ್ಲವೂ ಹೊಸದು
ನಿನ್ನ ಪ್ರೀತಿಯನ್ನು ಹೊರತು ಪಡಿಸಿ

******

ಸೃಷ್ಟಿಯ ಪ್ರಥಮ ಪುಳಕದ
ಕ್ಷಣಗಳ ಗುರುತು
ನಿನ್ನ ತುಟಿಗಳಲ್ಲಿ
ಇನ್ನೂ

******
ಇಲ್ಲಿ ಎಲ್ಲ ಅಳಿದ ಮೇಲೆ
ಮಿಥುನದ ಗುರುತುಗಳು
ಅಣು ರೇಣುಗಳಲ್ಲಿ
ಕಲೆತು
ಕರಗಿ
ಹಾರುವವು ಆಕಾಶದಲ್ಲಿ
ನಿರಂತರ
ಕಾಲದ ಹಂಗಿಲ್ಲದೆ

******

ಪುಸ್ತಕದಲ್ಲಿನ ನವಿಲಗರಿ
ಮರಿಹಾಕುವುದಿಲ್ಲ
ಹದ್ದು ಉಗುರಿನ ಮೇಲೆ
ಅಕ್ಕಿ ಮೂಡಿಸುವುದಿಲ್ಲ
ನಕ್ಷತ್ರಗಳು ಭೂಮಿಗೆ ಇಳಿಯುವುದಿಲ್ಲ
ನೀನು ಹೋದ ಮೇಲೆ ಇದೆಲ್ಲ
ಅರ್ಥವಾಗುತ್ತಿದೆ.

******

ನಿನ್ನ ಕೆನ್ನೆಯ ಮೇಲಿನ
ಗುಲಗಂಜಿಯಂತಿನ ಮಿಂಚುವ ಮೊಡವೆ
ಎದೆಯಲ್ಲಿ ಬೆಂಕಿ ನದಿಯ
ಉಕ್ಕಿಸಿ ರಾತ್ರಿಯ ನಿದ್ರೆಯ ಚಾದರವ ಎತ್ತಿ
ಗಾಳಿಪಟವ ಹಾರಿಸುತ್ತಿರುವುದ
ನಕ್ಷತ್ರಗಳು ನೋಡಿ ನಗುತ್ತಿವೆ