ದೂರದ ಪರ್ವತಗಳಲ್ಲಿ ಹುಟ್ಟಿದ ನದಿಯೊಂದು ಅಲ್ಲಿಂದ ರಭಸದಿಂದಿಳಿದು ಬಂದು, ನಾನಾ ರೀತಿಯ ಪ್ರದೇಶಗಳಲ್ಲಿ ಹರಿದು, ಕಡೆಗೆ ಒಂದು ಮರುಭೂಮಿಯ ಅಂಚಿಗೆ ಬಂತು. ಇತರ ಅಡ್ಡಿ ಆತಂತಕಗಳನ್ನೆಲ್ಲ ಗೆದ್ದ ರೀತಿಯಲ್ಲೇ ನದಿ ಈಗ ತನ್ನೆದುರಿಗಿದ್ದ ಮರುಭೂಮಿಯನ್ನೂ ಗೆಲ್ಲಬೇಕೆಂದು ರಭಸದಿಂದ ನುಗ್ಗಿತು. ಆದರೆ ಅದು ಎಷ್ಟು ರಭಸದಿಂದ ನುಗ್ಗುತ್ತಿತ್ತೋ ಅಷ್ಟೇ ವೇಗವಾಗಿ ಆ ಮರುಭೂಮಿಯ ಮರಳಿನಲ್ಲಿ ಇಂಗಿಹೋಗುತ್ತಿತ್ತು.

ಆದರೆ ನದಿಗೆ ಮಾತ್ರ ತಾನು ಈ ಮರುಭೂಮಿಯನ್ನು ದಾಟಿಯೇ ದಾಟುತ್ತೇನೆ, ಅದು ತನ್ನ ಅದೃಷ್ಟದಲ್ಲಿ ಬರೆದಿದೆ ಎಂದೇ ಎನಿಸುತ್ತಿತ್ತು. ಆದರೆ ದಾಟುವ ವಿಧಾನ ಮಾತ್ರ ಅದಕ್ಕೆ ತಿಳಿದಿರಲಿಲ್ಲ. ಅದನ್ನೇ ಕುರಿತು ಯೋಚಿಸುತ್ತಿದ್ದಾಗ ಅದಕ್ಕೆ ಒಂದು ದನಿ ಕೇಳಿಸಿತು. ಆಪ್ತವಾದ ಆ ದನಿ ಮರಳಿನಿಂದಲೇ ಮೇಲೆದ್ದುಬರುತ್ತಿತ್ತು. ನದಿಗೆ ಮೆಲ್ಲಗೆ ಉಸುರಿತು ಆ ದನಿ: ಗಾಳಿ ಈ ಮರುಭೂಮಿಯನ್ನು ದಾಟಬಲ್ಲದು; ಹಾಗೆಯೇ ನದಿಯೂ ದಾಟಬಲ್ಲದು. ಆಗ ನದಿ ತನ್ನ ಕಷ್ಟ ಹೇಳಿಕೊಂಡಿತು:
‘ನಾನೆಷ್ಟು ವೇಗವಾಗಿ ಅದನ್ನು ದಾಟಲು ಪ್ರಯತ್ನಿಸುತ್ತಿದ್ದರೂ ಆ ಮರಳಿನಲ್ಲಿ ಇಂಗಿಹೋಗುತ್ತಿದ್ದೇನೆ. ಗಾಳಿ ಮೇಲೇರಿ ಹಾರಬಲ್ಲದು, ಆದರೆ ನಾನು ನೆಲದ ಮೆಲೇ ಹರಿಯಬೇಕು. ಅದರಿಂದಲೇ ನನಗೆ ಅದನ್ನು ದಾಟಲು ಆಗುತ್ತಿಲ್ಲ,’
ಆಗ ಮರಳು ಹೇಳಿತು:
‘ನಿನಗೆ ರೂಢಿಯುಳ್ಳ ಮಾರ್ಗವೊಂದನ್ನೇ ನೆಚ್ಚಿಕೊಂಡರೆ ನೀನು ಈ ಮರುಭೂಮಿ ದಾಟಲಾರೆ. ಆ ರೀತಿ ಪ್ರಯತ್ನಿಸಿದರೆ-ಇಲ್ಲ, ಇಂಗಿಹೋಗುವೆ, ಅಥವಾ ಒಂದು ಜೌಗು ಪ್ರದೇಶವಾಗುವೆ… ಗಾಳಿಗೆ ನಿನ್ನನ್ನು ಮೇಲೆತ್ತಿಕೊಂಡು ಹೋಗಿ ನೀನು ಹೋಗಬೇಕಾದಲ್ಲಿಗೆ ತಲುಪಿಸಲು ಅನುವುಮಾಡಿಕೊಡು.’
‘ಗಾಳಿಗೆ ನಾನು ಅನುವುಮಾಡಿಕೊಡುವುದೆ? ಅದು ಹೇಗೆ?’
‘ಅದರಲ್ಲಿ ಲೀನವಾಗಿಹೋಗುವುದರಿಂದ.’

ನದಿಗೆ ಮರಳಿನ ಈ ಸೂಚನೆ ಒಪ್ಪಿಗೆಯಾಗಲಿಲ್ಲ. ಇದುವರೆಗೆ ತಾನು ಯಾರಲ್ಲೂ ಸೇರಿಹೋಗಿರಲಿಲ್ಲ. ಆ ತನ್ನತನ ಒಂದು ಸಲ ಕಳೆದುಹೋದರೆ ಮತ್ತೆ ಸಿಕ್ಕೀತೇ, ಯಾರು ಬಲ್ಲರು? ಆಗ ಮರಳು ಮುಂದುವರೆಯಿತು:

‘ಗಾಳಿ ಈ ಕೆಲಸ ಮಾಡುತ್ತದೆ, ನೀರನ್ನು ಎತ್ತಿಕೊಂಡು ಮರುಭೂಮಿಯ ಮೇಲೆ ಹಾದು ಅದರ ಆಚೆ ಕಡೆ ಅದನ್ನು ಮತ್ತೆ ಮಳೆಯಾಗಿ ಸುರಿಸುತ್ತದೆ. ಆ ಮಳೆಯ ನೀರು ಮತ್ತೆ ಒಂದು ಸೇರಿ ನದಿಯಾಗುತ್ತದೆ.’
‘ಇದು ನಿಜವೇ?’ ಎಂದಿತು ನದಿ.
‘ಹೌದು, ನಿಜ. ನೀನು ಅದನ್ನು ನಂಬದೆ ಇದ್ದರೆ ವರ್ಷಗಳು ಕಳೆದರೂ ನೀನು ಇಲ್ಲಿಯೇ ಇರುವೆ. ಇಲ್ಲಿಯೇ ಇದ್ದು ರಾಡಿಯಾಗಿಹೋಗುವೆ. ಆಗಲಾದರೂ ನೀನೇನು ನದಿಯಾಗಿರುವುದಿಲ್ಲ.’
‘ನಾನು ಈಗಿರುವ ನದಿಯಾಗಿಯೆ ಇರುವುದು ಸಾಧ್ಯವೇ?’
‘ಹೇಗಾದರೂ ನೀನು ಈಗಿರುವ ನದಿಯಾಗಿಯೇ ಇರುವುದು ಸಾಧವಿಲ್ಲ. ಆದರೆ ನಿನ್ನ ಸತ್ವ ಏನಿದೆ, ಅದು ಇಲ್ಲಿಂದ ಹೋಗಿ ಮತ್ತೆ ಅಲ್ಲಿ ಪ್ರಕಾಶಕ್ಕೆ ಬರುತ್ತದೆ. ನಿನ್ನನ್ನು ಅಲ್ಲಿಯೂ ನದಿಯೆಂದೇ ಕರೆಯುತ್ತಾರೆ, ಏಕೆಂದರೆ ಅದು ನಿನ್ನ ಸತ್ವವೇ ಆಗಿರುತ್ತದೆ.’

ಇದನ್ನು ಕೇಳಿದಾಗ ನದಿಯ ಮನಸ್ಸಿನಲ್ಲಿ ಯಾವುದೋ ಗತಕಾಲದ ನೆನಪಿನ ಮಾರ್ದನಿಗಳೆದ್ದವು. ಹಿಂದೆ ಎಂದೋ ಒಮ್ಮೆ ತಾನು – ಅಥವಾ ತನ್ನ ಒಂದು ಭಾಗವೋ? – ಗಾಳಿಯ ತೋಳತೆಕ್ಕೆಯಲ್ಲಿದ್ದ  ಒಂದು ಸ್ಥಿತಿ ಮಸುಕು ಮಸುಕಾಗಿ ಕಾಣತೊಡಗಿತು. ಜೊತೆಗೆ, ಇದೇ ನಿಜವಾದ ಮಾರ್ಗ, ಕಣ್ಣಿಗೆ ಕಾಣಿಸದಿದ್ದರೂ ಸಹ ಎಂಬ ನೆನಪು – ಅಥವಾ ಅರಿವೋ? – ನದಿಗೆ ಬಂತು.

ನದಿ ಆಗ ತನ್ನನ್ನು ಆವಿಯಾಗಿ ಮಾರ್ಪಡಿಸಿಕೊಂಡು ತನ್ನನ್ನು ಅಕ್ಕರೆಯಿಂದ ಬರಮಾಡಿಕೊಳ್ಳಲು ಕೈಚಾಚಿ ಸಿದ್ಧವಾಗಿದ್ದ ಗಾಳಿಯ ತೋಳತೆಕ್ಕೆಗೆ ಸೇರಿತು. ಗಾಳಿ ಅದನ್ನು ಮೃದುವಾಗಿ ಎತ್ತಿಕೊಂಡು ಆಕಾಶದಲ್ಲಿ ಮೇಲಿನಮೇಲೆ ಏರಿ ನೂರಾರು ಮೈಲು ದೂರ ಸಾಗಿತು. ಕಡೆಗೆ ದೊಡ್ಡ ಪರ್ವತವೊಂದರ ಶಿಖರ ಕಂಡಾಗ ಅಲ್ಲಿ ಅದನ್ನು ಮೆಲ್ಲಗೆ ಕೆಳಗಿರಿಸಿತು. ಆವಿಯಾಗಿದ್ದ ನೀರೆಲ್ಲಾ ಅಲ್ಲಿ ಧಾರಾಕಾರವಾಗಿ ಮಳೆಗರೆಯಿತು. ನದಿ ಮೊದಲು ತಾನು ಈ ರೀತಿ ಮರುಭೂಮಿಯನ್ನು ದಾಟಬಹುದೇ ಎಂಬ ತೀವ್ರ ಸಂದೇಹಕ್ಕೆ ಒಳಗಾಗಿದ್ದುದರಿಂದ ಈಗ ಈ ಅನುಭವದ ಪ್ರತಿ ಅಂಶವೂ ಅದರ ಮನಸ್ಸಿನ ಮೇಲೆ ಮತ್ತಷ್ಟು ಆಳವಾಗಿ ಮೂಡಿತು. ಹೌದು, ನಾನೀಗ ನಿಜವಾಗಿಯೂ ನನ್ನ ಅನನ್ಯತೆಯನ್ನು ಕಂಡುಕೊಂಡಿದ್ದೇನೆ ಅನ್ನಿಸಿತು ನದಿಗೆ.

ನದಿಗೆ ಈ ಅರಿವು ಮೂಡಿದಾಗ ಮರಳು ಮತ್ತೆ ತನ್ನ ಮೆಲುದನಿಯಲ್ಲಿ ಉಸುರಿತು: ಇದನ್ನು ನಾವು ಚೆನ್ನಾಗಿ ಬಲ್ಲೆವು. ಏಕೆಂದರೆ, ನಾವು ಇದನ್ನು ಅನುದಿನವೂ ನೋಡುತ್ತಿರುತ್ತೇವೆ. ನದಿಯ ತೀರದಿಂದ ಪರ್ವತದ ವರೆಗೆ ಇರುವುದೆಲ್ಲ ನಾವೇ ಅಲ್ಲವೇ!

ಅದಕ್ಕೇ ಬಲ್ಲವರು ಹೇಳಿರುವುದು: ಈ ಜೀವನದ ನದಿಗೆ ಹೇಗೆ ಹರಿಯಬೇಕು ಎಂಬುದನ್ನು ಮರಳಿನಲ್ಲಿ ಬರೆದಿದೆ ನೋಡು ಎಂದು.

(ಈ ಕತೆ ನಾನಾ ಭಾಷೆಗಳಲ್ಲಿ ಪ್ರಚುರವಾಗಿದೆ. ಪ್ರಸ್ತುತ ರೂಪ ೧೮೭೦ ರಲ್ಲಿ ಕಾಲವಾದ ಟ್ಯುನೀಸಿಯಾದ ಸೂಫಿ ಸಂತ ಅವಾದ್ ಅಫೀಫ ಹೇಳಿದ ರೂಪ.)

[ಮೂಲ: ಇದ್ರೀಸ್ ಶಾ ಅವರ “Tales of the Dervishes”. ಕನ್ನಡಕ್ಕೆ – ಎಚ್. ವೈ. ರಾಜಗೋಪಾಲ್.]