ಕೆಂಪು ಹಳದಿ ಮಿಶ್ರಿತ ಬಣ್ಣ ಬಣ್ಣದ ಹಾವೊಂದು ಗೂಡಿರುವ ಬಳಿಯ ಕೊಂಬೆಯಲ್ಲಿ ನೇತಾಡುತ್ತಿತ್ತು. ಹಾವು ಸಪೂರವಾಗಿದ್ದರೂ ಅದರ ಉದ್ದ ಮತ್ತು ಮೈಮೇಲಿನ ಬಣ್ಣ ನನ್ನನ್ನು ಬೆವರುವಂತೆ ಮಾಡುತ್ತಿತ್ತು. ಹಾವು ಮೆಲ್ಲಗೆ ಅತ್ತಿತ್ತ ನೋಡುತ್ತಾ ಗೂಡಿನ ಬಳಿ ಹರಿಯಿತು. ಹಾವನ್ನು ಹೊಡೆದು ಹಾಕೋಣವೆಂದು ತೀರ್ಮಾನಿಸಿ, ಮಿಸುಕಾಡದೆ ಮರದ ಕೊರಡಿನಂತೆ ಕೂತು ಮುಂದೆ ನಡೆಯುವುದನ್ನೇ ನೋಡುತ್ತಿದ್ದೆ. ಹಾವು ಮೆಲ್ಲಗೆ ಗೂಡಿನೊಳಗೆ ಬಂದು ಮೊಟ್ಟೆಗೆ ಬಾಯಿ ಹಾಕಿ ಗುಳುಂ ಮಾಡುತ್ತಾ ಮತ್ತೆ ಬೇರೆ ಕೊಂಬೆಗೆ ಸರಿಯುವುದನ್ನೇ ಸುಮ್ಮನೆ ನೋಡುತ್ತ ನಿಂತಿದ್ದೆ. ನನ್ನ ಅಸಹಾಯಕತೆಗೆ ನಾನೇ ಹಳಿಯತೊಡಗಿದೆ.
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರದ ಕಥೆಗಳು.

ಕರಾವಳಿಯಲ್ಲಿ ಕೆಂಬೂತವೆಂದರೆ ಒಂದು ವಿಶಿಷ್ಟ ನಿಗೂಢ ಹಕ್ಕಿ. ಕಡುಗೆಂಪು ಕಣ್ಣಿನಿಂದ ಇತರ ಹಕ್ಕಿಗಳಿಗಿಂತ ಇದು ವಿಭಿನ್ನ. ಸಾಮಾನ್ಯವಾಗಿ ಇವುಗಳು ಹೊರಡಿಸುವ ವಿಚಿತ್ರ ಶಬ್ದ, ಕೆಂಪು ಕಣ್ಣು ಹೆದರಿಕೆ ಹುಟ್ಟಿಸುವಂಥದ್ದು. ಸಣ್ಣವರಿರುವಾಗಲೇ ಅವುಗಳು ಕಂಡಾಗಲೆಲ್ಲ ನಾವು ಹೆದರಿಕೆಯಿಂದಲೋ, ಪೂರ್ವಾಗ್ರಹದಿಂದಲೋ ಕಲ್ಲೆಸೆದು ಓಡಿಸುತ್ತಿದ್ದೆವು. ಇದಕ್ಕಾಗಿಯೇ ಪರಿಸರ ಪ್ರೇಮಿಯಾದ ಉಮ್ಮ ಹೊಸ ತಂತ್ರವೊಂದನ್ನು ಹೆಣೆದಿದ್ದರು. “ಕೆಂಬೂತಗಳು ಆಕ್ರಮಣಕಾರಿಗಳು ಮತ್ತು ಮನುಷ್ಯನ ಕಣ್ಣನ್ನೇ ಕಿತ್ತು ತಿನ್ನುತ್ತದೆಯೆಂದು” ಎಂಬ ಎಚ್ಚರಿಕೆ ಕೊಟ್ಟಂದಿನಿಂದ ನಾವು ಕೆಂಬೂತಕ್ಕೆ ಕಲ್ಲೆಸೆಯುವ ಚಾಳಿಯನ್ನು ಬಿಟ್ಟಿದ್ದೆವು. ಬ್ಯಾರಿ ಭಾಷೆಯಲ್ಲಿ “ಕುಪ್ಳು” ಎಂಬ ಹೆಸರಿನಲ್ಲೇ ಅವು ಪ್ರಸಿದ್ಧ. ಕಣ್ಣು ನೋವು, ನಿದ್ರಾಹೀನತೆಯ ಕಾರಣದಿಂದ ಕಣ್ಣು ಕೆಂಪಾದವರನ್ನು ಕಂಡರೆ ಸಾಕು, ನಾವು ನಮಗರಿವಿಲ್ಲದೆ “ಕೆಂಬೂತ” ದ ಥರಾನೇ ಕಾಣ್ತೀಯಲ್ವಾ ಮಾರಾಯ” ಅನ್ನುತ್ತಾ ಛೇಡಿಸುತ್ತಿದ್ದೆವು. ನಮ್ಮಲ್ಲಿ ಕಣ್ಣು ಅಲರ್ಜಿಗೊಳಗಾದ ಒಬ್ಬ ಹುಡುಗನಿದ್ದ. ಅವನ ಕಣ್ಣು ಯಾವಾಗಲೂ ಕೆಂಪಾಗಿ ಇರುತ್ತಿದ್ದರಿಂದ ಅವನಿಗೆ ‘ಕುಪ್ಳು’ ಎಂಬ ಅಡ್ಡ ಹೆಸರಿನ್ನಿಟ್ಟಿದ್ದೆವು. ಈಗಲೂ ಅದೇ ಹೆಸರಿನಲ್ಲಿ ಆತನನನ್ನು ಕೇಳದಿದ್ದರೆ ಊರಿನವರಿಗೆ ಬೇಗನೆ ಗೊತ್ತಾಗುವುದೇ ಇಲ್ಲ.

ಒಂದು ದಿನ ಶಾಲೆಗೆ ಜಾದೂಗಾರನೊಬ್ಬ ಬಂದ. ಅವನ ಜಾದೂ ಪ್ರದರ್ಶನಕ್ಕೆ ಎಲ್ಲರಿಂದಲೂ ಮೂರು ರೂಪಾಯಿ ಕೊಡುವುದು ನಿಗದಿಯಾಯಿತ್ತು. ಶಾಲೆಯಲ್ಲಿ ಮುಖ್ಯಮಂತ್ರಿ ನಾನೇ ಆಗಿದ್ದರಿಂದ ಆ ಹಣವನ್ನು ಸಂಗ್ರಹಿಸುವ ಜವಾಬ್ದಾರಿಯೂ ನನ್ನ ಹೆಗಲಿಗೆ ಬಿದ್ದಿತ್ತು. ನನಗೆ ಕೆಲವೊಮ್ಮೆ ಹೀಗನಿಸಿದ್ದುಂಟು, ‘ಇಷ್ಟೆಲ್ಲಾ ಮಂತ್ರ ಮಾಡ್ತಾರಲ್ವಾ ಇವ್ರಿಗೆಲ್ಲಾ ಹಣಕ್ಕೆ ಯಾವ ತೊಂದ್ರೆ, ಅವನಿಗೆ ಸ್ವತಃ ಹಣವನ್ನು ಮಂತ್ರದಲ್ಲೇ ತಯಾರಿಸಬಾರದೇಕೆ?’. ಕೊನೆಗೂ ಜಾದೂಗಾರನ ಪ್ರದರ್ಶನದ ದಿನ ಬಂತು. ಎಲ್ಲರೂ ಬೆರಗುಗಣ್ಣಿನಿಂದಲೇ ಅವನ ಜಾದೂ ಪ್ರದರ್ಶನವನ್ನು ನೋಡಿದರು. ಜಾದೂಗಾರನು ಟೀಚರೊಬ್ಬರ ಕೈಯುಂಗುರ ಕಾಣೆ ಮಾಡಿ, ಬಾಳೆ ಹಣ್ಣು ತಿನ್ನಲು ಹೇಳಿ ಅದರೊಳಗಿನಿಂದ ಪ್ರತ್ಯಕ್ಷ ಮಾಡಿದ. ಮತ್ತೆ ಗೆಳೆಯನೊಬ್ಬನ ಕಿವಿಯೊಳಗೆ ದೊಡ್ಡ ಬಾಟಲನ್ನೇ ತುಂಬಿ ಬಿಟ್ಟಿದ್ದ. ಒಟ್ಟಾರೆ ಎಲ್ಲರೂ ಆತನ ಕಣ್ಕಟ್ಟಿಗೆ ಮನಸೋತು, ಸುಮಾರು ದಿನಗಳ ವರೆಗೂ ನಾವ್ಯಾರೂ ಅದರ ಗುಂಗಿನಿಂದ ಹೊರಬಂದಿರಲಿಲ್ಲ.

(ಕೆಂಬೂತ)

‘ಅಷ್ಟಕ್ಕೆ ಜಾದೂಗಾರನಾಗುವುದು ಹಾಗೇ ಹೀಗೆ’ ಎಂಬ ತರಹೇವಾರಿ ಕಥೆಗಳು ಮಕ್ಕಳ ನಡುವೆ ಹರಿದಾಡತೊಡಗಿದ್ದವು. ಒಂದು ದಿನ ನಿರಂಜನ ಎಂಬ ಹುಡುಗ ಹೊಸ ವಿಷಯವನ್ನು ನಮ್ಮ ಬಳಿ ಹೇಳಿ ನಮ್ಮನ್ನು ಕುತೂಹಲದಲ್ಲಿ ಕೆಡವಿದ. ‘ಜಾದೂಗಾರನಾಗುವುದು ಬಹಳ ಸುಲಭವಂತೆ. ಕೆಂಬೂತ ಗೂಡು ಕಟ್ಟುವಾಗ ಆ ಗೂಡಿನಲ್ಲಿ ವಿಶಿಷ್ಟ ಕೋಲೊಂದನ್ನು ಎಲ್ಲಿಂದಲೋ ಹೊತ್ತು ತರುವುದಂತೆ. ಅದು ಗೂಡುಕಟ್ಟಲು ಉಪಯೋಗಿಸುವ ಆ ಕೋಲು ಒಂದು ಮಂತ್ರದಂಡವಂತೆ, ಜಾದೂಗಾರರು ಅದನ್ನೇ ಹಿಡಿದು ಜಾದೂ ಮಾಡುತ್ತಾರಂತೆ’. ಇಷ್ಟೂ ಅಂತೆ-ಕಂತೆಗಳ ಸಂತೆಯನ್ನ ನಮ್ಮ ತಲೆಯೊಳಗೆ ತುಂಬಿ ಅವನು ಕೈತೊಳೆದುಕೊಂಡಿದ್ದ. ನಮಗಂತೂ ಮಾಂತ್ರಿಕ ದಂಡದ ಕಥೆಗಳೇ ಆ ದಿನಗಳಲ್ಲಿ ಜೀವಾಳ. ಪಿಶಾಚಿಯ ಕಥೆಗಳು, ಮಂತ್ರವಾದಿ ಮುದುಕಿ, ಮಾಂತ್ರಿಕ ಸುತ್ತಿಗೆಯ ಕಥೆಗಳು ಬಾಲಮಂಗಳ ತುಂತುರು ಮೂಲಕ ನಮ್ಮೊಳಗೆ ಹಾಸುಹೊಕ್ಕಾಗಿದ್ದವು. ಆ ದಂಡ ಸಿಕ್ಕಿದರೆ, ಈ ಶಾಲೆ ಕಲಿಯುವುದು ಓದುವುದು ಬರೆಯುವುದಕ್ಕೆಲ್ಲ ಒಮ್ಮೆ ಪೂರ್ಣ ವಿರಾಮ ಬೀಳುತ್ತಿತ್ತೆಂಬ ಆಸೆ. ನಿರಂಜನನ ಕತೆಯನ್ನು ಕೇಳಿದ ದಿನಗಳಿಂದ ನಾವು ಕಣ್ಣು ಹಾಕದ ಹಕ್ಕಿಯ ಗೂಡುಗಳಿರಲಿಲ್ಲ. ಕೆಂಬೂತ ಕಂಡರೆ ಹೊಂಚು ಹಾಕಿ ಅದರ ಚಲನವಲನಗಳನ್ನು ವೀಕ್ಷಿಸುವುದಂತೂ ನಮ್ಮ ದಿನಚರಿಯಲ್ಲೊಂದಾಗಿ ಉಳಿಯಿತು. ಗುಳೆ ಹೊರಟ ಹಕ್ಕಿಗಳ ಯಾವ ಗೂಡುಗಳನ್ನೂ ಬಿಡದೆ ಯಾವ ಹಕ್ಕಿಯದ್ದೆಂದೂ ಪೂರ್ವಾಪರ ನೋಡದೆ ಮಾಂತ್ರಿಕ ದಂಡವನ್ನು ಹುಡುಕುತ್ತಲೇ ಇದ್ದೆವು.

ಒಂದು ದಿನ ನಮ್ಮ ಮನೆಯ ಹತ್ತಿರದ ಕಾಡಿನಲ್ಲಿ ಪಿಕಳಾರ ಹಕ್ಕಿಯ ಗೂಡನ್ನು ಕಂಡು ಹಿಡಿದೆವು. ಅದು ನಮ್ಮದೇ ಹಕ್ಕಿ ಅನ್ನುವಷ್ಟು ನಾವು ಅದರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದೆವು. ನಮ್ಮಲ್ಲಿ ಯಾರು ಮೊದಲು ಹಕ್ಕಿ ಗೂಡನ್ನು ಕಂಡು ಹಿಡಿಯುತ್ತಾರೋ ಅದು ಅವರದೇ ಗೂಡಾಗಿ ಬಿಡುತ್ತಿತ್ತು. ಆ ದಿನಗಳಲ್ಲಿ ನಮ್ಮ ಮನೆಯ ದನಗಳಿಗೆ ಮೇವಾಗಿ ಬೈ ಹುಲ್ಲು ತರಿಸುತ್ತಿದ್ದರು. ನಾನು ನಮ್ಮ ಪರಿಸರದಲ್ಲೆಲ್ಲಾ ಮರದ ರೆಂಬೆಗಳ ಮಧ್ಯೆ ಬೈಹುಲ್ಲು ಸುರುಟಿ ಹಕ್ಕಿಗಳ ಗೂಡಿನಂತೆ ಚಂದದ ಗೂಡನ್ನು ನಿರ್ಮಿಸುತ್ತಿದ್ದೆ. ಹಾಗಾದರೂ ನನ್ನ ಸ್ವರಚಿತ ಗೂಡುಗಳನ್ನು ನಂಬಿ ಒಂದಾದರೂ ಹಕ್ಕಿ ವಾಸ ಆರಂಭಿಸಬಹುದೆಂಬ ಆಸೆ. ಕೆಲವೊಮ್ಮೆ ಕೆಲವು ಹಕ್ಕಿಗಳು ಸ್ವಲ್ಪ ಹೊತ್ತು ಅವುಗಳ ಸುತ್ತು ಸುತ್ತುತ್ತಿದ್ದವಾದರೂ ಅವು ಯಾವುವೂ ನನ್ನ ಗೂಡಲ್ಲಿ ವಾಸ ಮಾಡಿದ್ದೇ ಇಲ್ಲ.

ಆ ದಿನ ನಾನೊಬ್ಬನೇ ಕಾಡಿನಲ್ಲಿ ನಡೆಯುತ್ತಿದ್ದೆ. ನಮ್ಮ ಪಿಕಳಾರದ ಗೂಡಿನ ಬಳಿ ಹೊರಟಿದ್ದೆ. ಎರಡು ದಿನಗಳ ಹಿಂದೆ ಅದರಲ್ಲಿ ಎರಡು ತಿಳಿ ಬೂದು ಬಣ್ಣದ ಸಣ್ಣ ಮೊಟ್ಟೆ ನೋಡಿ ಬಂದಿದ್ದೆ. ಮಧ್ಯಾಹ್ನವಾಗಿರಬೇಕು, ಆ ಸಮಯದಲ್ಲಿ ಹಕ್ಕಿ ಗೂಡಿನ ಬಳಿ ಇರುತ್ತಿದ್ದುದು ಕಡಿಮೆ. ಎಲ್ಲೋ ದೂರ ಹೋಗಿತ್ತು. ಅವುಗಳ ಚಲನವಲನ ನಮಗೆ ಮೊದಲೇ ತಿಳಿದಿದ್ದರಿಂದ ನಮಗೆ ಹಕ್ಕಿಯ ದಿನಚರಿ ಬಗ್ಗೆ ಸಂಪೂರ್ಣ ಅರಿವಿತ್ತು. ಅದು ಇದ್ದ ಸಮಯದಲ್ಲಿ ನಾವು ಹೋದರೆ, ತಾನು ಅಸುರಕ್ಷಿತ ಸ್ಥಳದಲ್ಲಿ ಗೂಡು ಕಟ್ಟುತ್ತಿದ್ದೇನೆಂಬ ಹೆದರಿಕೆಯಿಂದ ಗೂಡು ಬಿಟ್ಟು ಹಾರಿ ಹೋಗಿಬಿಡಬಹುದೆಂಬ ಹೆದರಿಕೆಯೂ ನಮಗಿತ್ತು. ನಾನು ಗೂಡಿರುವ ಮರದ ಕೆಳಗೆ ನಿಂತಿದ್ದಾಗ ಒಮ್ಮೆಲೆ ಆ ಕೊಂಬೆಯ ಮೇಲೆ ಏನೋ ದೊಪ್ಪನೆ ಬಿದ್ದಂತಹ ಸದ್ದು! ನಾನು ಆ ದೃಶ್ಯ ಕಂಡು ಬೆಚ್ಚಿ ಬಿದ್ದೆ. ಕೆಂಪು ಹಳದಿ ಮಿಶ್ರಿತ ಬಣ್ಣ ಬಣ್ಣದ ಹಾವೊಂದು ಗೂಡಿರುವ ಬಳಿಯ ಕೊಂಬೆಯಲ್ಲಿ ನೇತಾಡುತ್ತಿತ್ತು. ನನ್ನ ಹೃದಯ ಬಡಿತ ಒಮ್ಮೆಲೆ ಜೋರಾಗಿತ್ತು. ಹಾವು ಸಪೂರವಾಗಿದ್ದರೂ ಅದರ ಉದ್ದ ಮತ್ತು ಮೈಮೇಲಿನ ಬಣ್ಣ ನನ್ನನ್ನು ಬೆವರುವಂತೆ ಮಾಡುತ್ತಿತ್ತು. ನಾನು ಕಿಂಕರ್ತವ್ಯ ಮೂಢನಾಗಿ ಸುಮ್ಮನೆ ನಿಂತೆ. ಮಿಸುಕಾಡದೆ ಮುಂದಿನ ಅಪಾಯವನ್ನು ನಿರೀಕ್ಷಿಸಿದೆ. ಹಾವು ಮೆಲ್ಲಗೆ ಅತ್ತಿತ್ತ ನೋಡುತ್ತಾ ಗೂಡಿನ ಬಳಿ ಹರಿಯಿತು. ನನಗೆ ಉದ್ವೇಗವನ್ನು ತಡೆಯಲಾಗಲಿಲ್ಲ. ಯಾರಾದರೂ ದೊಡ್ಡವರನ್ನು ಕರೆದುಕೊಂಡು ಬಂದು ಹಾವನ್ನು ಹೊಡೆದು ಹಾಕೋಣವೆಂದು ತೀರ್ಮಾನಿಸಿದ್ದೆ. ಅಷ್ಟು ಹೊತ್ತಿಗೆ ಹಾವು ತನ್ನ ಕೆಲಸ ಮುಗಿಸಿ ಪರಾರಿ ಕೀಳುವುದರಲ್ಲಿ ಯಾವ ಸಂಶಯವೂ ಉಳಿದಿರಲಿಲ್ಲ. ಅಪ್ರತಿಭನಾಗಿ ಮಿಸುಕಾಡದೆ ಮರದ ಕೊರಡಿನಂತೆ ಕೂತು ಮುಂದೆ ನಡೆಯುವುದನ್ನೇ ನೋಡುತ್ತಿದ್ದೆ. ಹಾವು ಮೆಲ್ಲಗೆ ಗೂಡಿನೊಳಗೆ ಬಂದು ಮೊಟ್ಟೆಗೆ ಬಾಯಿ ಹಾಕಿ ಗುಳುಂ ಮಾಡುತ್ತಾ ಮತ್ತೆ ಬೇರೆ ಕೊಂಬೆಗೆ ಸರಿಯುವುದನ್ನೇ ಸುಮ್ಮನೆ ನೋಡುತ್ತ ನಿಂತಿದ್ದೆ. ನನ್ನ ಅಸಹಾಯಕತೆಗೆ ನಾನೇ ಹಳಿಯತೊಡಗಿದೆ.

ಆ ಬಳಿಕ ಒಂದೆರಡು ದಿನ ಪಿಕಳಾರವನ್ನು ಅಲ್ಲೇ ಹತ್ತಿರದಲ್ಲೇ ನೋಡಿದ್ದೆನಾದರೂ ಮತ್ತದು ಕಣ್ಣಿಗೆ ಬೀಳಲೇ ಇಲ್ಲ. ತನ್ನ ಮೊಟ್ಟೆಗಳು ಸುರಕ್ಷಿತವಲ್ಲವಾದ್ದರಿಂದ ತನ್ನ ಪ್ರಾಣಕ್ಕೂ ಇಲ್ಲಿ ಸಂಚಾಕಾರವಿದೆಯೆಂದು ತೀರ್ಮಾನಿಸಿ ಅಲ್ಲಿಂದಲೇ ಗುಳೆ ಹೊರಟಿರಬಹುದು ಅದು. ನನ್ನ ಅಪರೂಪದ ಈ ದೃಶ್ಯದ ಬಗ್ಗೆ ನಾನೂ ಯಾರಲ್ಲೂ ಹೇಳಿಕೊಳ್ಳಲಿಲ್ಲ. ಹಾಗೇನಾದರೂ ಹೇಳಿದರೆ, ಅಣ್ಣನಿಂದ ನಾನೇ ಸ್ವತಃ ಆ ಹಕ್ಕಿಯನ್ನು ಅಲ್ಲಿಂದ ಓಡಿಸಿದ ಅಪಕೀರ್ತಿ ಹೊತ್ತುಕೊಳ್ಳಬೇಕಾಗುತ್ತದೆ ಎಂದು ಗೊತ್ತಿತ್ತು. ತರುವಾಯ ಖಾಲಿ ಗೂಡು ಹಾಗೆಯೇ ಉಳಿದಿತ್ತು. ಆದರೂ ಹಕ್ಕಿಯ ಬಗೆಗಿನ ಹಕ್ಕು ಸ್ಥಾಪನೆ, ತನ್ನದೆಂಬ ಗಲಾಟೆಗಳು ನಿಂತಿರಲಿಲ್ಲ. ಒಮ್ಮೆ ಮಾವನ ಮಗ ಆ ಹಕ್ಕಿ ಗೂಡು ಹರಿದಿದ್ದಕ್ಕೆ ಅಣ್ಣನಿಗೆ ಮತ್ತು ಅವನಿಗೆ ಕೈ ಕೈ ಮಿಸಲಾಯಿಸುವ ಮಟ್ಟಕ್ಕೆ ಜಗಳ ಬೆಳೆದು ಗಲಾಟೆ ಮಾಡಿದ್ದು ಈಗಲೂ ನನ್ನ ನೆನಪಲ್ಲಿದೆ.

ನಾನು ಕಂಡಿದ್ದ ಹಾವು ತೀರ ಅಪರೂಪದ ಹಾರುವ ಹಾವು. ಸಾಮಾನ್ಯವಾಗಿ ತೆಳ್ಳಗೆ ಉದ್ದವಾಗಿರುತ್ತದೆ, ನಿರುಪದ್ರವಿ ಜೀವಿ. ತನ್ನ ದೇಹವನ್ನು ಚಪ್ಪಟೆಯಾಕಾರ ಮಾಡಿಕೊಂಡು ಮರದಿಂದ ಮರಕ್ಕೆ ಹಾರುವಂತದ್ದು. ಇವುಗಳಲ್ಲಿ ರೆಕ್ಕೆಗಳಿರುವುದಿಲ್ಲ. ಆದರೆ ಹತ್ತಿರದಲ್ಲಿರುವ ಮರಕ್ಕೆ ಜಿಗಿಯಬಲ್ಲದಷ್ಟೇ. ಈ ವಿಚಾರ ನನಗೆ ತಿಳಿಯಬೇಕಾದರೆ ವರ್ಷಗಳೇ ಕಳೆದಿದ್ದವು. ಅವುಗಳ ವರ್ಣ ವೈಭವ ಅವುಗಳ ಜೀವಕ್ಕೆ ಕುತ್ತು ತರುವಂಥದ್ದು. ನಿರುಪದ್ರವಿಯಾದರೂ ಅವುಗಳ ಮೈ ಬಣ್ಣಕ್ಕೆ ಹೆದರಿ ಜನರು ಅವನ್ನು ಹೊಡೆದು ಕೊಲ್ಲುತ್ತಾರೆ. ಕೇರೆ ಹಾವನ್ನು ಯಾವ ರೀತಿ ನಿರುಪದ್ರವಿಯೆಂದು ಕೊಲ್ಲದೆ ಬಿಟ್ಟು ಬಿಡುತ್ತೇವೆಯೇ, ಅದೇ ರೀತಿ ನಮ್ಮ ಪರಿಸರದ ಹಲವಾರು ವಿಷ ರಹಿತ ಹಾವುಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಸಂರಕ್ಷಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ.

ಹಿಂದೊಮ್ಮೆ ಗೆಳೆಯನೊಬ್ಬ ಹಕ್ಕಿ ಹಿಡಿಯಲು ಹೊಸ ಉಪಾಯವೊಂದನ್ನು ಹೇಳಿಕೊಟ್ಟಿದ್ದ. ಬಸಳೆ ಬಳ್ಳಿಯ ಮಧ್ಯೆ ಎಸೆಯುತ್ತಿದ್ದ ಅಕ್ಕಿ ಕಾಳು ಹೆಕ್ಕಲು ‘ಪೊದ ಹಕ್ಕಿಗಳು’ (ಚೋರೆ ಹಕ್ಕಿ ) ಬರುತ್ತಿದ್ದವು. ನಾನು ಅದರ ಸುತ್ತ ಸ್ವಲ್ಪ ಕಾಳುಗಳನ್ನೆಸೆದು ಸಣ್ಣ ದಾರಕ್ಕೆ ಹಿಡಿಸೂಡಿ ಕಡ್ಡಿಗೆ ಕಟ್ಟಿ ಉರುಳು ಹಾಕಿಟ್ಟಿದ್ದೆ. ಎರಡು-ಮೂರು ಹಕ್ಕಿಗಳು ಉರುಳಿಗೆ ಸಿಕ್ಕಿದರೂ ಹಿಡಿಸೂಡಿ ಕಡ್ಡಿ ಸಮೇತ ಕಿತ್ತು ಹಾರುತ್ತಿದ್ದವು. ಸುಮಾರು ಬಾರಿ ಹೀಗೆಯೇ ಪ್ರಯತ್ನಿಸಿ ಸೋಲುವುದೇ ನನ್ನ ಕೆಲಸವಾಗಿ ಹೋಗಿತ್ತು. ದಿನ ಕಳೆದಂತೆ ಯಾವುದಾದರೊಂದು ಹಕ್ಕಿ ಹಿಡಿದು ಮನೆಯಲ್ಲಿ ಸಾಕಬೇಕೆಂಬ ಆಸೆ ಅಧಿಕವಾಗುತ್ತಲೇ ಹೋಯಿತು.

ಒಂದು ದಿನ ಮನೆಯಲ್ಲಿ ಸುಮ್ಮನೆ ಕುಳಿತಿರಬೇಕಾದರೆ ಉಮ್ಮ ನನ್ನನ್ನು ಸ್ಟೋರ್ ರೂಂ ಗೆ ಕರೆದರು. ಏನೋ ಬಿಟ್ಟಿ ಕೆಲಸಕ್ಕಿರಬೇಕೆಂದು ಸೋಮಾರಿತನದಿಂದ ಕೇಳಿದರೂ ಕೇಳಿಸದಂತೆ ನಟಿಸುತ್ತಿದ್ದೆ. “ಇಲ್ಲಿ ಬಾರೋ, ಹಕ್ಕಿಯೊಂದು ಮನೆಯೊಳಗಿದೆ ನೋಡುವಿಯಂತೆ” ಅಂದದ್ದನ್ನು ಕೇಳಿದ್ದೇ ತಡ, ಒಮ್ಮೆಲೆ ಸೋಮಾರಿತನವನ್ನೆಲ್ಲಾ ಕಿತ್ತೆಸೆದು ಎರಡು ನಿಮಿಷದಲ್ಲೇ ಅಲ್ಲಿ ಹಾಜರಾಗಿದ್ದೆ. ಒಂದು ಗುಬ್ಬಚ್ಚಿ, ತನ್ನ ರೆಕ್ಕೆಗೆ ಗಾಯ ಮಾಡಿಕೊಂಡು ಹಾರಲಾರದೆ ವಿಪರೀತ ಚಡಪಡಿಸುತ್ತಿತ್ತು. ಎರಡು ಬಾರಿ ಕೈಯಲ್ಲಿ ಹಿಡಿಯಲು ಪ್ರಯತ್ನಿಸಿದೆನಾದರೂ, ಹೆದರಿ ಕೈಗೆ ಸಿಗದೆ ದೂರ ಹಾರಲು ಪ್ರಯತ್ನಿಸುತ್ತಿತ್ತು. ಉಮ್ಮ ನಾನದಕ್ಕೆ ನೋವು ಕೊಡುತ್ತಿದ್ದೆನೆಂದು ನನ್ನನ್ನು ಸರಿಯಾಗಿ ಬೈಯ್ಯಲಾರಂಭಿಸಿದರು. ಉಮ್ಮನಿಗೆ ಸಮಜಾಯಿಷಿ ಕೊಟ್ಟು ಅವುಗಳಿಗೆ ನನ್ನ ಮೇಲೆ ಹೆದರಿಕೆಯಿಂದ ದೂರ ಹೋಗುತ್ತವೆಯೆಂದು ಹೇಳಿ ಮುಗಿಸಲು ಸಾಕು ಸಾಕಾಗಿತ್ತು. ಆಮೇಲೆ ಒಂದು ಮಧ್ಯಮ ಗಾತ್ರದ ರಟ್ಟಿನ ಪೆಟ್ಟಿಗೆಯನ್ನು ತಂದು ಹಾಗೂ-ಹೀಗೂ ಅದನ್ನು ಹಿಡಿದು ಆ ಡಬ್ಬದೊಳಕ್ಕೆ ಸೇರಿಸಿದೆ. ಹೊರಗೆ ಹಾರಿ ಹೋಗದಿರಲು ಸಣ್ಣ ಕವಾಟ ನಿರ್ಮಿಸಿ ಅದರ ಸುತ್ತ ಹಿಡಿ ಸೂಡಿ ಕಡ್ಡಿಗಳನ್ನು ಅಡ್ಡಲಾಗಿಟ್ಟೆ. ಜೊತೆಗೆ ಸ್ವಲ್ಪ ಅನ್ನ, ಅಕ್ಕಿ ಕಾಳು ಗೂಡಿನೊಳಗೆ ಚೆಲ್ಲಿ ಹಕ್ಕಿಯನ್ನು ಅದರೊಳಗೆ ಬಿಟ್ಟಿದ್ದೆ. ಆದರೆ ಅವ್ಯಾವುದೂ ಅದಕ್ಕೆ ಬೇಕಾಗಿರುವಂತೆ ಕಾಣಲಿಲ್ಲ. ಚೀಂಗುಟ್ಟುತ್ತಾ ಹೊಸ ಪರಿಸರದಿಂದ ಮುಕ್ತಿ ಹೊಂದಲು ಉಪವಾಸ ಸತ್ಯಾಗ್ರಹ ಕುಳಿತಂತಿತ್ತು. ಆ ದಿನ ಸಂಜೆ ಬಂದು ಗೂಡು ತೆರೆದೆ. ಒಂದು ಕಾಳನ್ನಾಗಲೀ, ಅನ್ನದ ಅಗಳನ್ನಾಗಲೀ ಯಾವುದನ್ನೂ ಅದು ತಿಂದಿರಲಿಲ್ಲ. ಸುಮ್ಮನೇ ಚೀಂಗುಟ್ಟುತ್ತಲೇ ಇತ್ತು. ಅದು ನನ್ನ ಕೈಯಲ್ಲಿ ಸಾಯುವುದು ನನಗಿಷ್ಟವಿರಲಿಲ್ಲ. ಗಾಳಿ ಬೆಳಕು ಬೀಳಲೆಂದು ಒಂದೆರಡು ಹಿಡಿಸೂಡಿ ಕಡ್ಡಿ ತೆಗೆದಿಟ್ಟೆ. ಪಾಪದ ಹಕ್ಕಿ, ಎಲ್ಲೋ ಹೋಗಿ ಬದುಕಬೇಕಾದುದು ನನ್ನ ಕೈಯಲ್ಲಿ ಅನ್ಯಾಯವಾಗಿ ಸಾಯುವುದು ಎಷ್ಟು ಮಾತ್ರವೂ ಇಷ್ಟವಿರಲಿಲ್ಲ. ಹಾಗಾಗಿ ಎತ್ತರದಲ್ಲಿರುವಂತೆ ಗೋಡೆಯ ಮೇಲೆ ಗೂಡನ್ನಿಟ್ಟು ಬಂದೆ.

ಮರುದಿನ ಬೆಳಗ್ಗೆ ಬೇಗನೆ ಹೋಗಿ ನೋಡುತ್ತೇನೆ, ನನಗೆ ದಿಗಿಲಾಯಿತು. ಹಕ್ಕಿಯ ಚೀಂಗುಟ್ಟುವಿಕೆ ಕೇಳುತ್ತಿರಲಿಲ್ಲ, ಅಲ್ಲದೇ ಗೂಡು ಸಹ ಕಾಣುತ್ತಿರಲಿಲ್ಲ. ಅತ್ತಿತ್ತ ಓಡಾಡಿ ಹತ್ತಿರದಲ್ಲೆಲ್ಲಾ ಪರೀಕ್ಷಿಸಿದೆ. ಗೂಡು ನೆಲದ ಮೇಲೆ ಬೋರಲಾಗಿ ಬಿದ್ದಿದ್ದು ಕಣ್ಣಿಗೆ ಬಿತ್ತು. ಎತ್ತಿ ನೋಡುತ್ತೇನೆ. ಹಕ್ಕಿಯಿಲ್ಲ, ಒಂದೆರಡು ಪುಕ್ಕಗಳು ಅಲ್ಲೇ ಬಿದ್ದಿವೆ. ದೂರದಲ್ಲಿ ಮನೆಯ ಬೆಕ್ಕು ಆರಾಮಭಂಗಿಯಲ್ಲಿ ಆಕಳಿಸುತ್ತಿದೆ. ನನಗೆ ಪರಿಸ್ಥಿತಿ ಅರ್ಥವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಅಲ್ಲೇ ಬಿದ್ದಿದ್ದ ದೊಡ್ಡ ಕೋಲು ಹಿಡಿದು ಬೆಕ್ಕನ್ನು ಅಟ್ಟಿದೆ. ಅಲ್ಲಿಗೆ ನನ್ನ ಹಕ್ಕಿ ಸಾಕುವ ಹುಚ್ಚು ಬಿಟ್ಟು ಬಿಟ್ಟೆ. ಆ ಬಳಿಕ ದೂರದಿಂದಲೇ ಹಕ್ಕಿಗಳನ್ನು ವೀಕ್ಷಿಸುವುದನ್ನು ರೂಢಿ ಮಾಡಿಕೊಂಡೆ.