ನಮ್ಮೂರ ಬಿಸಿಲು

ರಣ ಬಿಸಿಲಿಗೆ
ನನ್ನವ್ವ, ಮುಂಗಾರು ಮಳೆ‌ ಹೊಯ್ಯುವ
ನೀರಿಕ್ಷೆ ಇಟ್ಟು
ಬೇಸಾಯದ ಹಗ್ಗ, ಮಿಣಿ ಹೊಸೆಯುವ
ತಿರುಗಣಿ ಕಾಯಕದಲ್ಲಿ ನಿಲ್ಲಿಸಿದಾಗ
ಬಿಸಿಲ ಝಳ ತೆರೆ ತೆರೆಯಾಗಿ ಸುರಿಯುತ್ತಿತ್ತು.

ತಂಪಿಗಾಗಿ;
ಮಜ್ಜಿಗೆ, ನಿಂಬೆ ಪಾನಕ
ಚಿನಕುರಳಿ ಕಾಳು
ಮನೆಯ ಮುಂದೆ ತೆಂಗಿನ ಗರಿಯ
ಚಪ್ಪರ ಹೊಸದಾಗಿ ಹೆಣೆದು ನಿಲ್ಲುತ್ತಿತ್ತು.

ಯುಗಾದಿಯೂ ಬಂದು
ಗೋಡೆಗಳು ಹಾಲಿನ ಬಿಳುಪಿನಿಂದ
ಹೊಳೆಯುತ್ತಿದ್ದವು ಮಧ್ಯೆ ಜಾಜಿಯ ಗೆರೆ
ಬೇವಿನ ಹೂ ಘಮ, ಹಣ್ಣಿನ
ಅಂಟು ಅಂಟಾದ ರಸಕ್ಕೆ
ಮನೆ ತುಂಬಾ ನೊಣಗಳ ಗುಂಪಿನ ರಾಶಿ

ಬಿತ್ತನೆ ಬೀಜದ ಕಾಳು
ಸುಲಿದು ಅಸನು ಮಾಡುವ ಕಾಯಕದಲ್ಲಿ ಸೋಬಾನೆ ಪದ,
ಗಮಕಗಳ ನುಡಿ ನಡು ರಾತ್ರಿವರೆಗೂ ಪುರಾಣದ ಪಾರಾಯಣ
ಬಸವನ ಗುಡಿ ಮುಂದೆ ಸಾಗುತ್ತಲೇ ಇತ್ತು.

ಮದುವೆ ಸಂಭ್ರಮಗಳ ಸಾಲು
ಊರ ಆ ಬೀದಿ ಈ ಬೀದಿಯಲಿ
ಚಪ್ಪರ ತೋರಣ,
ಮೇಳದ ತುತ್ತೂರಿ
ಲಾಡು ತಿನ್ನುವ ಸಡಗರದ ಸಂಭ್ರಮ.

ಚಿನ್ನಿದಾಂಡು, ಚೌಕಾಬಾರ
ಕುಂಟಾಬಿಲ್ಲೆ, ಗೋಲಿ
ಆಟಗಳೊಳಗೆ ಹುದುಗಿದ ನಮ್ಮನ್ನು
ಅಮ್ಮ, ಹುಡುಕಿ ತರುವ ಪತ್ತೆದಾರಿಕೆಗೆ
ಸಿಕ್ಕು ಕಿವಿ ಹಿಂಡಿಸಿಕೊಳ್ಳುವಲ್ಲಿ
ಬೆಚ್ಚಗಿನ ಪ್ರೀತಿ ಒಳಗೊಳಗೇ ಕೆಂಪಾಡುತ್ತಿತ್ತು.

ಬಿಸಿಲು, ಅದೆಷ್ಟೊಂದು ಸೆಖೆ
ಅನಿಸದೇ,
ನೆಲ ಮಿದುವಿಗಾಗಿ ಮಳೆ ಕಾದು
ಬೆಳೆ ಬೆಳೆದುಕೊಳ್ಳುವ ಆಶಾಗೋಪುರ
ಮನೆ ಮನಗಳಲ್ಲೂ ತುಂಬಿ ತುಳುಕುತ್ತಿತ್ತು.
ಬಿಸಿಲು ಬೆವರ ಆಯಾಸವನ್ನು
ಕಳೆದುಕೊಳ್ಳುವ ಬಿಡುವಿನ ಸಂಧಿ ಕಾಲ.

 

ಎನ್. ಆರ್. ತಿಪ್ಪೇಸ್ವಾಮಿ ಚಿಕ್ಕಹಳ್ಳಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ವಾಸವಾಗಿದ್ದಾರೆ.
ತಾ.ಪಂ ಕಚೇರಿ, ಹಿರಿಯೂರು ಇಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಹಂಪಿಯ ಕನ್ನಡ ವಿ.ವಿ.ಯಲ್ಲಿ ಪಿ.ಹೆಚ್ ಡಿ ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ.