ಸಂಭಾಷಣೆ

ನಾನೊಮ್ಮೆ ಮುಟ್ಟಲೇ?
ಅವಳಂದಳು-ನನಗೆ ಭಯ
ಒಮ್ಮೆ ಮಾತ್ರ ಎಂಬುದು ಅವನ ಭರವಸೆ
ಹೊಸ ತಮಾಷೆ ಎಂಬ ಧೈರ್ಯ ಅವಳದ್ದು

ಅವನಂದ ನೇವರಿಸಿ ನೋಡಲೆ?
ಅವಳ ಕಣ್ಣಲ್ಲಿ ಎಷ್ಟೆಂಬ ಪ್ರಶ್ನೆ
ಅವನ ಉತ್ತರ ಅಪ್ರಸ್ತುತ
ಯಾಕೆ ಹಿಂಜರಿಕೆ ಎಂದಿತು ಅವಳ ಕಣ್ಣು

ಮುಂದೆ ಸಾಗುವ ಆಹ್ವಾನ ಅವನದ್ದು
ಅಷ್ಟು ಮುಂದಕ್ಕೇಕೆ ಎಂದವಳ ತಳಮಳ
ಅವನು ಕೇಳಿದ ಎಷ್ಟು
ನೀನೀಗ ಇರುವಷ್ಟು; ಅವಳ ಉತ್ತರ

ಅವನಂದ; ನಾನಿಲ್ಲೇ ಇರಲೇ
ಅದೆಲ್ಲಿರುವೆ ಎಂದವಳ ಕೇಳ್ವಿ
ಪಕ್ಕದಲ್ಲಿ ಎಂಬುದವನ ಹೇಳಿಕೆ
ನೀ ಚುಂಬಿಸಿದರೆ ಎಂದವಳ ಸಂಶಯ

ನಾ ಮುಂದೆ ಸಾಗಲೆ; ಅವನ ವಿನಂತಿ
ಇದು ಪ್ರೀತಿಯೇ? ಅವಳ ಅನುಮಾನ!
ನೀನೊಪ್ಪಿದರೆ ಎಂಬುದು ಅವನ ಓಲೈಕೆ
ನೀ ಕೊಲ್ಲುತಿರುವೆ; ಅವಳದು ಆರೋಪ

ಇದು ಬದುಕು ಎಂದನವ
ಪ್ರಣಯ? ಎಂಬುದವಳ ಪ್ರಶ್ನೆ
ಅವನ ಉತ್ತರ; ಈಗ
ಹೇಗೆ; ಅವಳ ಪ್ರಶ್ನೆ

ಶಿಖರದಿಂದ ಆರಂಭಿಸಿದ್ದು ಅವನು
ನಿಲ್ಲಿಸಬೇಡ ಎಂದದ್ದು ಅವಳು
ಅವನಂದ ಬಂದೇ ಬಿಟ್ಟೆ
ಅವಳು ಹೂಂಗುಟ್ಟಳಷ್ಟೆ

ಅವನಂದ ನೀ ದೇವತೆ
ಅವಳಂದಳು ನೀ ನನ್ನವನು

ಎನ್. ಎ.ಎಂ ಇಸ್ಮಾಯಿಲ್‌ ಮೂಲತಃ ಸಕಲೇಶಪುರದವರು.
ಕರಾವಳಿ ಅಲೆ, ಉದಯವಾಣಿ , ಪ್ರಜಾವಾಣಿ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದವರು.
ಪ್ರಸ್ತುತ ಕಲರ್ಸ್‌ ಕನ್ನಡವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.