ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಎಂದರೆ ನೆನಪಾಗುವುದು ಚಿ. ಶ್ರೀನಿವಾಸರಾಜು. ತಮ್ಮ ಗುರು ಜಿ.ಪಿ.ರಾಜರತ್ನ ಅವರ ಪರಂಪರೆಯಲ್ಲೇ ಕನ್ನಡದ ಪರಿಚಾರಿಕೆಯನ್ನು ಕೈಗೊಂಡ ರಾಜು ಮೇಷ್ಟ್ರ ಬಗ್ಗೆ ಕವಿ ಎಸ್ ಮಂಜುನಾಥ್…

೨೮-೧೨-೨೦೦೭ರಂದು ಕಣ್ಮರೆಯಾದ ಶ್ರೀನಿವಾಸರಾಜು ಅವರ ನೆನಪಿಗೆ ಈ ಲೇಖನ

ನನ್ನ ಮೊದಲ ಕವನ ಸಂಕಲನ ‘ಹಕ್ಕಿ ಪಲ್ಟಿ’ ಪ್ರಕಟವಾಗಿದ್ದು ಕ್ರೈಸ್ಟ್ ಕಾಲೇಜಿನಿಂದ. ಕ್ರೈಸ್ಟ್ ಕಾಲೇಜಿನಿಂದ ಕವನ ಸಂಕಲನ ಪ್ರಕಟವಾಗುವುದೆಂದರೆ ಕಷ್ಟದ ವಿಷಯವಾಗಿರಲಿಲ್ಲ: ಸುಲಭ ಮತ್ತು ಸಹಜವಾದ ಸಂಗತಿಯಾಗಿತ್ತು. ಅಂದರೆ, ಅವು ಒಳ್ಳೆಯ ಕವಿತೆಯಾಗಿರಬೇಕಿತ್ತು ಅಷ್ಟೆ. ನನಗೆ ತಗಲಿದ್ದು ಶ್ರೀನಿವಾಸರಾಜು ಅವರಿಗೆ ಒಂದು ಪತ್ರ. ನಂತರ ಹಸ್ತಪ್ರತಿಯನ್ನು ಶ್ರೀನಿವಾಸರಾಜು ಅವರೊಂದಿಗೆ ಎಚ್.ಎಸ್. ರಾಘವೇಂದ್ರರಾವ್ ಮತ್ತು ಕೆ.ವಿ. ನಾರಾಯಣ ನೋಡಿದರು ಅನಿಸುತ್ತದೆ. ನನ್ನ ಸಂಕಲನ ಪ್ರಕಟಣೆಗೆ ಒಪ್ಪಿತವಾಯ್ತು. ಇಡೀ ಪ್ರಕ್ರಿಯೆಯನ್ನು ಉತ್ತಮ ಕವಿತೆಗೆ ಹೀಗೆ ಸುಲಭವಾಗಿ ಇರಿಸಿದವರೆಂದರೆ ಶ್ರೀನಿವಾಸರಾಜು. ಹೆಣ್ಣಿಗೆ ಮೊದಲ ಹೆರಿಗೆ ತವರು ಮನೆಯಲ್ಲಾದಂತೆ ಅಷ್ಟು ಸರಳವಾಗಿ ನನ್ನಂತೆ ಅನೇಕರು ಸಂಕಲನಗಳ ಹೆರಿಗೆಗೆ ಚಿ.ಶ್ರೀ. ಸೂಲಗಿತ್ತಿಯಾಗಿ ಹೀಗೆ ಕಾರ್ಯನಿರ್ವಹಿಸಿದ್ದಾರೆ.

ತಾವೋನಲ್ಲಿ ಒಂದು ಕತೆಯಿದೆ. ಒಬ್ಬ ಯಜಮಾನನನ್ನು ಮನೆಯವರೆಲ್ಲರೂ ಗೌರವ ವಿಧೇಯತೆಯಿಂದ ಕಾಣುತ್ತಿರುತ್ತಾರೆ. ಹೇಗೆಂದರೆ ಅವರು ಹೊರಗಿಂದ ಬಂದರೆ ಅವನಿಗೆ ಕಾಲಿಗೆ ನೀರು ಕೊಡುವವರೊಬ್ಬರು, ನಂತರ ಕೈಕಾಲು ಒರೆಸಿಕೊಳ್ಳಲು ವಸ್ತ್ರ ಕೊಡುವವರೊಬ್ಬರು, ಆಮೇಲೆ ಅವರಿಗೆ ಬೀಸಣಿಗೆಯಿಂದ ಗಾಳಿ ಹಾಕುವವರೊಬ್ಬರು ಹೀಗೆ. ಆ ಯಜಮಾನ ತಾವೋ ತಿಳಿದು ಬರಲು ಹೊರಟು ಹೋಗುತ್ತಾನೆ. ಎಷ್ಟೋ ದಿನಗಳ ಬಳಿಕ ತಾವೋ ಅರಿತು ಬಂದಾಗ, ಯಾರೂ ಅವನನ್ನು ಭಯ ಗೌರವದಿಂದ ಕಾಣುವುದಿಲ್ಲ. ಚಾಪೆ ಮೇಲೆ ಎಲ್ಲರೂ ಅವನಿಗೆ ಮುತ್ತಿಕೊಂಡು ಕೂರುತ್ತಾರೆ. ಅವನೊಂದಿಗೆ ಎಲ್ಲರೂ ಸಲಿಗೆ ಪ್ರೀತಿಯಿಂದ ಮಾತಾಡುತ್ತಾರೆ.

ಶ್ರೀನಿವಾಸರಾಜು ಅವರ ವ್ಯಕ್ತಿತ್ವದ ಸುಲಭತೆಯೆಂದರೆ ಹೊಸ ಹುಡುಗ ಕವಿಗಳಿಗೆ ಇಂಥದೇ ಆಗಿತ್ತು. ಹಿರಿಯರಿಗೂ ಅವರೊಂದಿಗೆ ಸಹಜ ಪ್ರೀತಿ ಸಾಧ್ಯವಾಗುತ್ತಿತ್ತು. ಕವಿತೆ ಬರೆಯುವ ಎಳೆಯನನ್ನೂ ಅವರು ಹಾಗೆ ಗೌರವ ಅಭಿಮಾನದಿಂದ ಕಂಡಿದ್ದಾರೆ. ಅವನ ಕವಿತೆಯ ಬಗ್ಗೆ ಹೆಚ್ಚು ವಿಮರ್ಶಕರಾಗದೇ, ಬರೇ ಅವನ ಸೃಜನಶೀಲತೆಯ ಬಗ್ಗೆ ಬೆರಗು ಆದರಗಳಿಂದ ನಡೆದುಕೊಂಡಿದ್ದಾರೆ. ಇದರಿಂದ ಕವಿಗೆ ಅಗತ್ಯವಾದ ಆತ್ಮಪ್ರತ್ಯಯವನ್ನು ಅವರು ಅತ್ಯಂತ ಸುಲಭವಾಗಿ ಚಿಗುರಿಸಿಬಿಟ್ಟಿದ್ದಾರೆ. ಸಸಿ ನೆಟ್ಟು ಬೆಳೆಸಿದ ಹಾಗೇ ಅವರು ಹೊಸ ಕವಿಗಳನ್ನು ಗುರುತಿಸಿ ಬೆಳೆಸಿರುವುದು ಹಾಗೆ ಬೆಳೆಸುವುದರಲ್ಲೇ ಸಂತೋಷ ಮತ್ತು ಸಾರ್ಥಕತೆಯನ್ನು ಅವರು ಕಂಡಿದ್ದಾರೆ. ಅದೊಂದು ಅಹಂಕಾರ ರಹಿತವಾದ ವಿಶೇಷ ಮನೋಧರ್ಮ.

ನನ್ನ ‘ಹಕ್ಕಿ ಪಲ್ಟಿ’ ಬಿಡುಗಡೆಯಾಗಿದ್ದು ಕುವೆಂಪು ಅವರ ಹಸ್ತದಿಂದ, ಬೇಂದ್ರೆ ಹುಟ್ಟಿದ ದಿನ. ಇದನ್ನು ಮೈಸೂರಿನಲ್ಲಿ ಆಗಿಸಿದ್ದು ಶ್ರೀನಿವಾಸರಾಜು. ಅವತ್ತು ನಾವು ಅನೇಕರು ಕುವೆಂಪು ಅವರ ಮುಂದೆ ಕವಿತೆ ಓದುವಂತೆ ಮಾಡಿದರು, ರಾಜು. ನನ್ನ ಎರಡನೆಯ ಸಂಕಲನ ‘ಬಾಹುಬಲಿ’ಯನ್ನು ತಂದದ್ದು ಅವರೇ. ಆಗಲೂ, ಅಧಿಕೃತವಾದ ಸಭೆಯ ತರುವಾಯ ಕ್ರೈಸ್ಟ್ ಕಾಲೇಜಿನ ಹುಲ್ಲುಹಾಸಿನ ಮೇಲೆ ನಮ್ಮನ್ನೆಲ್ಲ ದುಂಡಗೆ ಕೂರಿಸಿ ಪದ್ಯ ಓದಿಸಿದ್ದರು ರಾಜು ಅವರು. ಯಾಕೋ ಆ ಸಮಾರಂಭಕ್ಕಿಂತಲು ನನಗೆ ರಾಜು ಅವರ ಅನಧಿಕೃತ ಅಧ್ಯಕ್ಷತೆಯ ಈ ಕವಿಗೋಷ್ಠಿಯೇ ಹೆಚ್ಚು ನೆನಪಲ್ಲಿದೆ. ಅಂದರೆ, ಕವಿತೆ ಓದಿಸಲು ಅವರು ಎಲ್ಲೆಂದರೆ ಅಲ್ಲಿ ಹೇಗೆಂದರೆ ಹಾಗೆ. ನಂತರ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಕವಿತಾ ಸ್ಪರ್ಧೆಯಲ್ಲಿ ಬಹುಮಾನಿತರಾದ ಹುಡುಗರ ಹಿಂಡನ್ನು ಕಟ್ಟಿಕೊಂಡು ಶ್ರೀ ರಾಜು ಅವರು ಪು.ತಿ.ನ. ಮನೆಗೆ ನಡೆದರು. ರಾಜು ಅವರ ಹಿಂದೆ ಹೊರಟ ಆ ಕವಿಗುಂಪನ್ನು ನೆನೆದೇ ನನಗೆ ಅವರು ಎಳೆಕವಿಗಳ ಕಿಂದರಿಜೋಗಿ ಎನ್ನುವ ರೂಪಕ ಉಚಿತವೆನಿಸುತ್ತಿದೆ.

ಬರೀ ಒಳ್ಳೆಯ ಮನಸ್ಸಿದ್ದರೆ ಒಳ್ಳೆಯ ಕವಿತೆ ಬಂದುಬಿಡುವುದಿಲ್ಲ. ಆದರೆ ಒಳ್ಳೆಯ ಮನಸ್ಸಿಲ್ಲದೆಯೂ ಅದು ಬರಲಾರದು. ಯಾಕೆಂದರೆ ಕವಿತೆ ಬರಿಯ ಕಲಾಕೌಶಲ್ಯವಷ್ಟೇ ಅಲ್ಲ. ಅದು ನಮ್ಮ ಅಹಂಕಾರವನ್ನು ಪಳಗಿಸುವ ಸಾಧನವೂ ಹೌದು. ಹಾಗಾಗಿ ಯಾವುದೋ ಹಂತದಲ್ಲಿ ನಮ್ಮ ಸೃಜನಶೀಲ ಸಂವೇದನೆ ಒಳಿತಿನಿಂದಲೇ ನಿಯಂತ್ರಿಸಲ್ಪಡುತ್ತದೆ ಎಂದು ನನ್ನ ನಂಬಿಕೆ. ಶಿವೇತರ ಕ್ಷತಿ ಮತ್ತು ಶಿವದ ಸಂಗ್ರಹ ಇವು ಕವಿತೆಯಿಂದ ಆಗತಕ್ಕದ್ದು.

ಶ್ರೀನಿವಾಸರಾಜು ಅವರು ತಮ್ಮ ವ್ಯಕ್ತಿತ್ವದಿಂದ ಕಾವ್ಯಕ್ಕೆ ಇಂಥ ಮಾದರಿಯೂ ಬೆಂಬಲವೂ ಸದಾ ಆಗಿದ್ದಾರೆ. ಶ್ರೀನಿವಾಸರಾಜು ಅವರೊಂದಿಗೆ ಅಹಂಕಾರದ ಸಂಘರ್ಷಕ್ಕಿಳಿದ ಸಾಹಿತಿಯ ಸುದ್ದಿ ಈವರೆಗೆ ಕೇಳಿ ಬಂದಿಲ್ಲ. ಕನ್ನಡದಲ್ಲಿ ಇದೊಂದು ಅಪೂರ್ವದ ವಿದ್ಯಮಾನವೇ. ಇದು ಹೀಗಿರಲು ರಾಜು ಅವರ ಸ್ವಭಾವದಲ್ಲಿರುವ ವಿಶೇಷ ಸತ್ಯವೇನು ಎಂಬುದನ್ನು ನಾವೆಲ್ಲರೂ ಧ್ಯಾನಿಸಬೇಕು ಮತ್ತು ಅದು ನಮ್ಮ ಸಾಂಸ್ಕೃತಿಕ ಪರಿಸರಕ್ಕೆ ಎಷ್ಟು ಹಿತಕಾರಿಯಾದದ್ದು ಎಂಬುದನ್ನೂ.

ನೆನೆದರೆ ಮನಸ್ಸು ಉಬ್ಬುವಂಥ ಹಿರಿಯ ಚೇತನ ಶ್ರೀ ಟಿ.ಎಸ್. ವೆಂಕಣ್ಣಯ್ಯನವರನ್ನು ಯಾರೋ ಒಮ್ಮೆ ಕೇಳಿದರಂತೆ: ‘ನೀವು ಇನ್ನೂ ಹೆಚ್ಚು ಬರೆದು ಸಾಹಿತ್ಯ ಲೋಕದಲ್ಲಿ ಶಾಶ್ವತ ಹೆಸರು ಮಾಡಬಹುದಲ್ಲ’ ಎಂದು, ಅದಕ್ಕೆ ವೆಂಕಣ್ಣಯ್ಯನವರು ಅರ್ಥಪೂರ್ಣವಾದ ಒಂದು ಮಾತು ಹೇಳಿದರಂತೆ: ‘ಶಾಶ್ವತವೆನಿಸಿಕೊಳ್ಳುವುದಕ್ಕಿಂತಲೂ ಮುಖ್ಯವಾದ್ದು ಇದೆ ಎಂದು ನಾನು ತಿಳಿದಿದ್ದೇನೆ’. ಅವರು ಮತ್ತೊಂದು ಮಾತೂ ಹೇಳಿದರಂತೆ, ಹೀಗೆ: ‘ನಾನು ದೊಡ್ಡ ಮೀನುಗಳನ್ನು ಬಲೆಹಾಕಿ ಹಿಡಿಯುವಂಥವನು (ಶ್ರೀ ಕುವೆಂಪುರವರನ್ನು ಸೂಚಿಸಿ); ಟಿ.ಎಸ್. ವೆಂಕಣ್ಣಯ್ಯನವರಂತೆ ಶ್ರೀ ರಾಜು ಅವರೂ ಕ್ರೈಸ್ಟ್ ಕಾಲೇಜು ಕನ್ನಡ ಸಂಘದಲ್ಲಿ ಕನ್ನಡದ ಹೊಸ ಕವಿಗಳಿಗಾಗಿ ಬಲೆ ಬೀಸಿ ಕೂತಿದ್ದಂತು ನಿಜ. ಅವರು ಹಿಡಿದ ಮೀನುಗಳಿಂದ ಅವರಿಗೆ ಸಮಧಾನವಾಗಿದೆಯೋ ಇಲ್ಲವೋ ಅವರನ್ನೇ ಕೇಳಬೇಕು !