ಪೆಟರ್ ಚುಹೊಫ್ (Petar Tchouhov) 

ಬಲ್ಗೇರಿಯಾ ದೇಶದ ಪ್ರಮುಖ ಆಧುನಿಕ ಕವಿಗಳಲ್ಲಿ ಒಬ್ಬರಾದ ಪೆಟರ್ ಚುಹೊಫ್ (ಜ. 1961) ಅವರು ಈವರೆಗೆ 12 ಕವನ ಸಂಕಲನಗಳನ್ನು (ಒಂದು ‘ಹೈಕು’ ಸಂಕಲನವೂ ಸೇರಿದಂತೆ), ಒಂದು ಕಾದಂಬರಿ, ಎರಡು ಸಣ್ಣ ಕಥೆಗಳ ಸಂಗ್ರಹಗಳು ಮತ್ತು ಒಂದು ಮಕ್ಕಳ ಪುಸ್ತಕವನ್ನು ಪ್ರಕಟಿಸಿದ್ದಾರೆ.

ಬಲ್ಗೇರಿಯಾ ದೇಶದ ರಾಜಧಾನಿ ‘ಸೋಫಿಯಾ’ ನಗರದಲ್ಲಿರುವ ಸೆಂಟ್ ಕ್ಲಿಮೆಂಟ್ ಒಹ್ರಿಡ್‌ಸ್ಕಿ ವಿಶ್ವವಿದ್ಯಾಲಯದಿಂದ ಲೈಬ್ರರಿ ಸೈನ್ಸ್‌ನಲ್ಲಿ ಬಿ.ಎ. ಮತ್ತು ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿಗಳನ್ನು ಪಡೆದ ಪೆಟರ್ ಚುಹೊಫ್ ಸೋಫಿಯಾದ ಸಿಟಿ ಲೈಬ್ರರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಚುಹೊಫ್-ರಿಗೆ ಕವನ-ವಾಚನ ಹಾಗೂ ರಾಕ್ ಬ್ಯಾಂಡ್‌ಗಳಲ್ಲಿ ಗಿಟಾರ್ ನುಡಿಸುವುದರಲ್ಲಿ ತುಂಬಾ ಆಸಕ್ತಿ. ಅವರು ಹಾಡುಗಳಿಗೆ ಸಂಗೀತ ಹಾಗೂ ಸಾಹಿತ್ಯವನ್ನು ಸಹ ಬರೆಯುತ್ತಾರೆ ಹಾಗೂ ವಿವಿಧ ರಾಕ್ ಬ್ಯಾಂಡ್‌ಗಳಲ್ಲಿ ತಮ್ಮ ಹಾಡುಗಳನ್ನು ಹಾಡಿದ್ದಾರೆ, ಗಿಟಾರ್ ನುಡಿಸುತ್ತಾರೆ. ಅವರು ಪ್ರಸ್ತುತ ಎಥ್ನೋ-ರಾಕ್ ಬ್ಯಾಂಡ್ ‘ಗೊಲೊಗನ್,’ ‘ಪಾರ್ ಏವಿಯನ್ ಬ್ಯಾಂಡ್,’ ಮತ್ತು ಆಲ್ಟರ್ನೇಟಿವ್ ರಾಕ್ ಬ್ಯಾಂಡ್ ‘ಲ-ಟೆಕ್ಸ್ಟ್‌’-ಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ಬಲ್ಗೇರಿಯನ್ PEN ಸೆಂಟರ್ ಮತ್ತು ಬಲ್ಗೇರಿಯನ್ ರೈಟರ್ಸ್ ಅಸೋಸಿಯೇಷನ್‌, ಹಾಗೂ ಹೈಕು ಸೊಸೈಟಿ ಆಫ್ ಅಮೇರಿಕಾ ಮತ್ತು ವರ್ಲ್ಡ್ ಹೈಕು ಅಸೋಸಿಯೇಷನ್-ಗಳ ಸದಸ್ಯರೂ ಆಗಿದ್ದಾರೆ.

ಚುಹೊಫ್-ರ ಕೃತಿಗಳನ್ನು 18 ಭಾಷೆಗಳಿಗೆ ಅನುವಾದಿಸಲಾಗಿದೆ ಹಾಗೂ 20 ದೇಶಗಳಲ್ಲಿ ಪ್ರಕಟವಾಗಿವೆ. ‘ಹೈಕು’ ಪದ್ಯರೂಪಕ್ಕಾಗಿರುವ ‘ಬಾಶೋ ಮ್ಯೂಸಿಯಂ ಪ್ರಶಸ್ತಿ’ (ಜಪಾನ್) ಸೇರಿದಂತೆ ಪತ್ತೇದಾರಿ ಕಥೆಗಾಗಿರುವ ‘ಅಗಾಥಾ’ ಪ್ರಶಸ್ತಿಯ ಜತೆಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಸ್ಲೋವಾಕಿಯಾ, ಮ್ಯಾಸಿಡೋನಿಯಾ, ಜಪಾನ್, ಕ್ರೊಯೇಷಿಯಾ, ಅಮೇರಿಕ, ಲಿಥುವೇನಿಯಾ, ಸ್ವಿಟ್ಜರ್ಲೆಂಡ್, ರೊಮೇನಿಯಾ, ಹಂಗೇರಿ, ಜರ್ಮನಿ ಮತ್ತು ರಷ್ಯಾದಲ್ಲಿ ಜರಗಿದ ಸಾಹಿತ್ಯ ಉತ್ಸವಗಳು ಮತ್ತು ಕಾವ್ಯಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಅವರ ಕವನ ಸಂಕಲನ “AДdicted” (2017) ಗಾಗಿ ಚುಹೊಫ್-ರಿಗೆ “ಇವಾನ್ ಪೇಚೆವ್” ರಾಷ್ಟ್ರೀಯ ಕವನ ಪ್ರಶಸ್ತಿಯನ್ನು ನೀಡಲಾಯಿತು. “Autumn Easter” (ಆಟಮ್ ಈಸ್ಟರ್-2021) ಅವರ ಇತ್ತೀಚಿನ ಕವನ ಸಂಕಲನ.

ಇಲ್ಲಿರುವ ಆರು ಕವನಗಳಲ್ಲಿ ಮೊದಲ ಕವನವನ್ನು ಕ್ಯಾಟರಿನಾ ಸ್ಟೊಯ್ಕೋವಾ-ರವರು (Katerina Stoykova), ಹಾಗೂ ಉಳಿದ ಐದು ಕವನಗಳನ್ನು ಆ್ಯಂಜೆಲಾ ರೊಡೆಲ್ ಮತ್ತು ಹ್ರಿಸ್ತೊ ಡಿಮೀಟ್ರೋವ್- ರವರು (Angela Rodel and Hristo Dimitrov) ಬಲ್ಗೇರಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ.

1
ಎಂದೇ
ಮೂಲ: That’s Why

ಇಲ್ಲಿದೆ ನೋಡು
ಆ ಬೆಳಕು –
ನನ್ನ ಪ್ರತಿಬಿಂಬಕ್ಕೆ
ಕಾರಣ,
ನನ್ನ ನೆರಳಿಗೆ
ಸಂದರ್ಭ.

ಇಲ್ಲಿದೆ ನೋಡು
ಒಂಟಿತನ –
ನನಗವಳು ಹೇಳುತ್ತಾಳೆ:
ನಿನ್ನ ನೆರಳು
ನಿನ್ನೊಳಗಿದೆ,
ನಿನ್ನ ಪ್ರತಿಬಿಂಬ
ನಿನ್ನನ್ನು ನೋಡಲ್ಲ.

ನೋಡು ನಾನೂ
ಇಲ್ಲಿದ್ದೇನೆ.
ನಾನೂ ಒಂದು ಸಂದರ್ಭ,
ಒಂದು ಕಾರಣವೂ ಕೂಡ.
ಆದರೆ, ನಾನಿದನ್ನು ಗಮನಿಸಿದೆ:
ನನ್ನ ಪ್ರತಿಬಿಂಬಕ್ಕೆ ಅದರ
ನೆರಳಿದೆ,
ನನ್ನ ನೆರಳಿಗೆ ಅದರ
ಪ್ರತಿಬಿಂಬವಿದೆ.

ಎಂದೇ,
ನಾನು ಹೋಗುತ್ತಿದ್ದೇನೆ.

2
ರಜಾ ದಿನಗಳಲ್ಲಿ ಶಹರು ಖಾಲಿಯಾಗಿರುತ್ತೆ
ಮೂಲ: On holidays the city is empty

ರಜಾ ದಿನಗಳಲ್ಲಿ
ಶಹರು ಖಾಲಿಯಾಗಿರುತ್ತೆ,
ನಡೆದಾಡುವವರು
ಪ್ರಿಯರಾಗುತ್ತಾರೆ.

ಹೀಗೂ ಆಗುತ್ತೆ ನೊಡಿ,
ಮಳೆಯು ಸೂರ್ಯನನ್ನು
ಭೇಟಿ ಮಾಡುತ್ತೆ,
ಇಬ್ಬರೂ ರಸ್ತೆ ಮೂಲೆಯವರೆಗೆ
ಅಡ್ಡಾಡಿಕೊಂಡು ಹೋಗುತ್ತಾರೆ,
ಅಲ್ಲಿ,
ಗುಡ್‌ಬೈ ಹೇಳುವ ಮುನ್ನ,
ಭಿಕ್ಷುಕನಿಗೆ ಒಂದು
ಕಾಮನಬಿಲ್ಲನ್ನು
ಕೊಡುತ್ತಾರೆ.

3
ಪದಗಳು ಯಾವಾಗ ಹುಟ್ಟುತ್ತವೆ
ಮೂಲ: When are words born

ಪದಗಳು
ಯಾವಾಗ ಹುಟ್ಟುತ್ತವೆ,
ಯಾವಾಗ ಬೆಳೆಯುತ್ತವೆ,
ಯಾವಾಗ ತಮ್ಮ ಶಾಂತ
ಕೌಮಾರ್ಯವನ್ನು ಕಳೆದುಕೊಳ್ಳುತ್ತವೆ,
ಯಾವಾಗ ಮದುವೆ ಮಾಡಿಕೊಳ್ಳುತ್ತವೆ,
ಅವುಗಳ ಕುಟುಂಬಗಳು
ಯಾವಾಗ ಕುಲಗೆಟ್ಟು
ಜಿಗುಟು ಕ್ಲೀಶೆಗಳಂತಾಗುತ್ತವೆ,
ಯಾವಾಗ ಅವು ಅಲ್ಲಿ ಇಲ್ಲಿ
ರತಿಯಾಡಲು ಶುರುಮಾಡಿ
ಹಾದರದ ಆಕಾಶಗಳನ್ನು ಹಡೆಯುತ್ತವೆ,
ಯಾವಾಗ ಅವುಗಳಿಗೆ ಹುಚ್ಚು ಹಿಡಿಯುತ್ತೆ,
ಯಾವಾಗ ಅವುಗಳು ಕೊಲೆಗೈಯುತ್ತವೆ,
ಯಾವಾಗ ತಮ್ಮ ಜೀವದ ಮೇಲೆಯೇ ಬೀಳುತ್ತವೆ,

ದಿಗಂತದಾಚೆ
ಒಬ್ಬ ಅಪ್ಪಟ ಕವಿಯನ್ನು
ಭೇಟಿಯಾಗುವ ಭರವಸೆಯಲ್ಲಿ.

4
ನಾನು ಏನೇ ಕಿರುಚಿದರೂ
ಮೂಲ: No matter what I shout

ನಾನು ಏನೇ ಕಿರುಚಿದರೂ
ಪ್ರತಿಧ್ವನಿ
‘ದೇವರು’ ಪದವ
ಉತ್ತರವಾಗಿ ಕೊಡುತ್ತೆ.

ನಾನು ‘ದೇವರು’ ಪದವನ್ನು
ಕಿರುಚಿದಾಗ
ಉತ್ತರ ಮಾತ್ರ
ಮೌನ

5
ಇಂದಲ್ಲ ನಾಳೆ
ಮೂಲ: Sooner or later

ಇಂದಲ್ಲ ನಾಳೆ
ಮೂಲ ಪದವು
ಒಡೆದು ಉಪಪದಗಳಾಗಿ ಚೂರುಚೂರಾಗುತ್ತೆ.
ಹಾಗೆಯೇ, ದೇವರು
ಒಡೆದು ಮನುಜರಾಗಿ ಚೂರುಚೂರಾಗುತ್ತಾನೆ.

ಮೌನಕ್ಕೆ ಶರಣಾಗದೆ
ಮೂಲ ಪದವನ್ನು
ಹಿಂಪಡೆಯಲಿಕ್ಕಾಗತ್ತಾ.

ಸಾವಿಗೆ ಶರಣಾಗದೆ
ದೇವರನ್ನು
ಹಿಂಪಡೆಯಲಿಕ್ಕಾಗತ್ತಾ.

ರಾತ್ರಿಯ ಆಗಮನವಾಗತ್ತೆ,
ಅಗಣಿತ ಮೂಕ ಮಡಿದ ತಾರೆಗಳಿಂದ
ತುಂಬಿದ ಆಕಾಶ ನಮ್ಮನ್ನು ನೋಡುತ್ತೆ.

6
ನನ್ನೊಳಗಿನ ಕೂಸು
ಮೂಲ: The child inside me

ನನ್ನೊಳಗಿನ ಕೂಸು ನಿದ್ರಿಸಲು
ಬಯಸುವುದಿಲ್ಲ.

ನಾನವನಿಗೆ ರಾಜಾ-ರಾಣಿ
ಕತೆಗಳ ಹೇಳುವೆ,
ಬೂಚಾಂಡಿ ಬರುತ್ತಾನೆಂದು
ಹೆದರಿಸುವೆ,
ಹಿತವಾಗಿ ಅಪ್ಪಿಕೊಂಡು
ಮುದ್ದಾಡುವೆ,
ಪ್ರೀತಿಯಿಂದ ಹೊದ್ದಿಗೆ
ಹೊದಿಸುವೆ.

ಎಲ್ಲಾ ವ್ಯರ್ಥ.

ರಾತ್ರಿಗಳು,
ದಿನಗಳು,
ವರುಷಗಳು,
ಹೀಗೆ ಕಳೆದು ಹೋಗುತ್ತವೆ.
ಆದರೂ ನನ್ನೊಳಗಿನ ಕೂಸು ನಿದ್ರಿಸಲು
ಬಯಸುವುದಿಲ್ಲ.

ಅವನಿಗೆ ತಾನು
ಎಂದೂ ನಿದ್ರೆಯಿಂದ
ಏಳಲಾರೆನೆಂಬ ಭಯವೇನೋ