(ಎ.ಎನ್. ಮುಕುಂದ)

ಜಯನಗರ ೩ನೇ ಬ್ಲಾಕ್‌ನಲ್ಲಿರುವ ಅವರ ಸಂಬಂಧಿಕರ ಮನೆಯಲ್ಲಿ ಎಂ ಕೆ ಇಂದಿರಾ ಇದ್ದರು. ಎಂದಿನಂತೆ ನಾನು ಹಾಗೂ ನನ್ನ ಮಡದಿ ಉಮಾ ಹೋಗಿ ಅವರನ್ನು ಮಾತಾನಾಡಿಸಿದಾಗ ಅವರು ಒಂದು ರೀತಿಯ ಒಂಟಿ ಭಾವದಲ್ಲಿ ಇರುವಂತೆ ಕಂಡರು. ಅವರ ಕಾದಂಬರಿ ಲೋಕದಿಂದ ಎದ್ದುಬಂದ ಮಲೆನಾಡಿನ ಒಂದು ಪಾತ್ರದ ಹಾಗೆ ಅವರು ಕಾಣಿಸುತ್ತಿದ್ದರು. ಅಂಗಳದಲ್ಲಿ ಚೆಂದದ ಬೆಳಕಿದ್ದುರಿಂದ ಅಲ್ಲಿಗೆ ಕರೆದು ಕೊಂಡು ಬಂದು ಹಲವು ಭಾವ ಚಿತ್ರಗಳನ್ನು ಸೆರೆಹಿಡಿದೆ. ಇಂದಿರಾ ಉಟ್ಟಿದ್ದ ಸೀರೆಯ ಬಣ್ಣ ಫೋಟೋಗೆ ಪೂರಕವಾಗಿ ಇಲ್ಲದಿದ್ದುದರಿಂದ ಅವರಿಗೆ ನಮ್ಮಲ್ಲಿದ್ದ ಶಾಲನ್ನು ಹೊದೆಯಲು ಕೊಟ್ಟೆವು. ಹೊರಡುವಾಗ ನಿಮಗೆ ಫೋಟೋಗಳನ್ನು ತಲುಪಿಸಲು ನಾಲ್ಕೈದು ದಿನದ ಬಳಿಕ ಬರುತ್ತೇನೆಂದು ಹೇಳಿದೆ. ಅದಕ್ಕೆ ಅವರು ಆಗ ನಾನು ಇಲ್ಲಿ ಇರುತ್ತೇನೋ ಇಲ್ಲವೋ ಎಂದರು.

ಕೆಲ ದಿನಗಳ ಬಳಿಕ ನಾನು ಅವರ ಮನೆಗೆ ಹೋದಾಗ ಅವರು ಅಲ್ಲಿರಲಿಲ್ಲ. ಬೇರೊಬ್ಬ ಸಂಬಂಧಿಕರ ಮನೆಗೆ ಹೋಗಿರುವುದು ತಿಳಿಯಿತು. ಫೋಟೋಗಳನ್ನು ಆ ಮನೆಯವರಿಗೆ ಕೊಟ್ಟು ಇಂದಿರಾ ಅವರಿಗೆ ತಲುಪಿಸಲು ಹೇಳಿದೆ. ಆದಾಗಿ ಸ್ವಲ್ಪ ದಿನಗಳ ನಂತರ ನನಗೊಂದು ಪೋಸ್ಟ್ ಕಾರ್ಡ್ ಬಂತು. ಅದು ಇಂದಿರಾ ಅವರ ಕೃತಜ್ಞತಾ ಪತ್ರ. ಅದು ತುಂಬ ಆತ್ಮೀಯ ಧಾಟಿಯಲ್ಲಿತ್ತು. ಹದಿನೈದೇ ದಿನಗಳಲ್ಲಿ ಇಂದಿರಾರವರು ತೀರಿಕೊಂಡ ವಾರ್ತೆ ತಲುಪಿತು.

(ಎ.ಎನ್. ಮುಕುಂದ ಅವರ ‘ಮುಖಮುದ್ರೆ’ ಪುಸ್ತಕದಿಂದ.ಈ ಪುಸ್ತಕವನ್ನು ನವ ಕರ್ನಾಟಕ ಪುಸ್ತಕದಂಗಡಿಯ ಮಳಿಗೆಗಳಿಂದ ಕೊಳ್ಳಬಹುದು. ಅಥವಾ MUP@MANIPAL.EDU ಈ ಮೇಲ್ ವಿಳಾಸಕ್ಕೆ ಬರೆದು ತರಿಸಿಕೊಳ್ಳಬಹುದು)