(ಎ.ಎನ್. ಮುಕುಂದ)

ಜಿ.ಬಿ.ಜೋಶಿ, ರಮಾಕಾಂತ ಜೋಶಿ ಮತ್ತು ಕೀರ್ತಿನಾಥ ಕುರ್ತಕೋಟಿ ಎಂಥ ಪ್ರಸಿದ್ಧ ತ್ರಿವಳಿ ಎಂದರೆ ಅನೇಕರು ಅವರನ್ನು ಫಾದರ್, ಸನ್ ಅಂಡ್ ದ ಹೋಲಿಘೋಸ್ಟ್ ಎಂದು ಗುರುತಿಸಿದ್ದಾರೆ. ಈ ಪೈಕಿ ನಾನು ಫಾದರ್ ಅವರನ್ನು ಭೆಟ್ಟಿಯಾಗಿದ್ದಿಲ್ಲ. ಸೆಮಿನಾರೊಂದಕ್ಕೆ ಬೆಂಗಳೂರಿಗೆ ಬಂದಿದ್ದಾರೆಂದು ತಿಳಿದ ಕೂಡಲೇ ರಮಾಕಾಂತರನ್ನು ಸಂಪರ್ಕಿಸಿ ಅವರ ಬಂಧುಗಳ ಮನೆಯಲ್ಲಿ ಭೇಟಿ ಮಾಡಿದೆ. ಧಾರವಾಡದ ತಮ್ಮ ಸುಪ್ರಸಿದ್ಧ ಅಟ್ಟದಂತೆ ಇಲ್ಲಿಯೂ ಅವರು ಅಟ್ಟವೊಂದನ್ನು ಹುಡುಕಿಕೊಂಡದ್ದನ್ನು ಗಮನಿಸಿದೆ. ನಾನು ಫೋಟೋ ತೆಗೆಯುವುದಕ್ಕೆ ಬರುತ್ತೇನೆಂದು ರಮಾಕಾಂತರು ಅವರಿಗೆ ಹೇಳಿದ್ದರು. ಆದರೆ ಜಿ.ಬಿ. ನಾನು ಅಲ್ಲಿದ್ದೇನೆಂಬುದನ್ನೂ ಮರೆತು ಮಗನೊಂದಿಗೆ ಜೋರು ಸಂಭಾಷಣೆ ನಡೆಸಿದ್ದರು. ಅವರು ಕನ್ನಡಲೋಕದ ಮಹಾಮೌನಿ ಎಂದು ಕೇಳಿದ್ದ ನನಗೆ ಅದೂ ಒಂದು ಆಶ್ಚರ್ಯವೇ. ನನ್ನ ಪಾಡಿಗೆ ನಾನು ಫೋಟೋ ತೆಗೆಯುತ್ತಿದ್ದೆ. ಜಿ.ಬಿ. ಮಾತ್ರ ನನ್ನ ಇರವನ್ನೇ ಲೆಕ್ಕಿಸದೆ ತಮ್ಮದೇ ಲಹರಿಯಲ್ಲಿದ್ದರು. ಮಾತಿನ ಮಧ್ಯೆ ‘ಗಿರೀಶ ಯಾಕೆ ಸಭೆಗೆ ಬಂದಿರಲಿಲ್ಲ?’ ಎಂದು ಮಗನನ್ನು ಕೇಳಿದರು. ರಮಾಕಾಂತರು ಆಶ್ಚರ್ಯದಿಂದ, ‘ನಿನ್ನ ಪಕ್ಕದಲ್ಲೇ ಕೂತಿದ್ನಲ್ಲ!’ ಎಂದರು. ಜಿ.ಬಿ. ದಿಗ್ಭ್ರಾಂತರಾಗಿ ‘ಅಂವ ಅಷ್ಟ್ ಖೊಟ್ಟಿಯಾಗ್ಯಾನೇನು! ಎಂದು ಉದ್ಗರಿಸಿದರು. ಆ ಕ್ಷಣ ನನ್ನ ಕ್ಯಾಮೆರಾದಲ್ಲಿ ಸೆರೆಯಾಯಿತು.