ಒಂದು ಮುಖ್ಯ ಪ್ರಕಟಣೆ
ನನ್ನ ಹೆಂಡತಿ ಕಾಣೆಯಾಗಿದ್ದಾಳೆ!

ಹುಡುಕಿ ಕೊಟ್ಟವರಿಗೆ
ಅಥವಾ ಸುಳಿವು ನೀಡಿದವರಿಗೆ
ಸೂಕ್ತ ಬಹುಮಾನವನ್ನು
ಧಾರಾಳವಾಗಿ ನೀಡಲಾಗುವುದು.

ಕೆಲವು ದಿನಗಳ ಹಿಂದೆ
ನ್ಯಾಯಬೆಲೆ ಅಂಗಡಿಯಿಂದ ಹಿಂದಿರುಗಿದಾಗ
ಅವಳ ಕಾಲುಗಳು ಕಾಣಲಿಲ್ಲ,
ಸೀಮೆಎಣ್ಣೆ ಕ್ಯೂನಲ್ಲಿ
ಖಾಲಿ ಡಬ್ಬದ ಬದಲಾಗಿ
ಕಾಲುಗಳನ್ನು ಬಿಟ್ಟು ಬಂದುದಾಗಿ ತಿಳಿಸಿದಳು.

ಗಾಬರಿಯಾಗಿ ನಾನು
ಅವಳ ಕೈ ಹಿಡಿದು
ಸಮಾಧಾನ ಮಾಡಲು ಹೋದರೆ
ಕೈಗಳೇ ಕಾಣಲಿಲ್ಲ,
ಸಕ್ಕರೆ ಕ್ಯೂನಲ್ಲಿ ಬಿಟ್ಟು ಬಂದಿದ್ದಳಂತೆ.

“ನಿನ್ನ ಹೃದಯವನ್ನು ಎಲ್ಲಿ ಬಿಟ್ಟು ಬಂದೆ?”
ಎಂದೆ.
“ಸಿನಿಮಾ ಥೇಟರಿನಲ್ಲಿ” ಎಂದಳು.

ಅಳಿದುಳಿದ ಹೆಂಡತಿ ಅವಳನ್ನು
ಗಂಟುಕಟ್ಟಿ ಅಡುಗೆ ಮನೆಗೆ ಎಸೆದೆ.
ಅಂದಿನಿಂದ ಅವಳೇ ಕಾಣುತ್ತಿಲ್ಲ.
ಕಂಡು ಹಿಡಿದು ಕೊಟ್ಟವರಿಗೆ
ತಕ್ಕ ಸನ್ಮಾನ ಮಾಡಲಾಗುವುದು
****

“ನನ್ನ ಪ್ರೀತಿಯ ಹೆಂಡತಿಯೇ
ನೀನು ಎಲ್ಲಿದ್ದರೂ ಕೂಡಲೆ
ಹಿಂದಿರುಗುವುದು.
ನೀನಿಲ್ಲದೆ ನಾವು ಪರಿತಪಿಸುತ್ತಿದ್ದೇವೆ.
ಇನ್ನು ಮೇಲೆ
ನಿನ್ನನ್ನು
ರೇಷನ್ ಅಂಗಡಿಗೆ, ಸಿನಿಮಾಕ್ಕೆ
ಕಳಿಸುವುದಿಲ್ಲ,
ನಾನೇ ಅಲ್ಲಿಗೆಲ್ಲ ಹೋಗಿ
ಕಳೆದು ಹೋಗುತ್ತೇನೆ,-

ಇಂತು,
ಇನ್ನೂ ಕಳೆದು ಹೋಗದೆ ಪರಿತಪಿಸುತ್ತಿರುವ
ನಿನ್ನ ಪ್ರೀತಿಯ ಮಕ್ಕಳು ಮತ್ತು ಪತಿ

 

ತಮಿಳು ಮೂಲ: ಪುವಿಯರಸು
ಅನುವಾದ: ಓ ಎಲ್ ನಾಗಭೂಷಣ ಸ್ವಾಮಿ
(ಮುಖಪುಟ ಕಲೆ: ರೂಪಶ್ರೀ ಕಲ್ಲಿಗನೂರ್)