ಬರೆದುಬದುಕಿದಕನ್ನಡದಬೆರಳೆಣಿಕೆಯಲೇಖಕರರಲ್ಲಿತ.ರಾ.ಸು.ಕೂಡಒಬ್ಬರು. ಜೊತೆಗೆ ಜನಪರ ಹೋರಾಟಗಳಲ್ಲಿ ಪಾಲ್ಗೊಳ್ಳುವಲ್ಲಿ ಅವರು ಸದಾ ಮುಂದು. ಅವರಿಗೆ ಅದರ ಕುರಿತು ವ್ಯಸನವಿರಲಿಲ್ಲ ಬದಲಾಗಿ ಹೆಮ್ಮೆಯಿತ್ತು. ಬಾಳಿನಲ್ಲಿ ಸುಖಕ್ಕಿಂತ ಹೆಚ್ಚಾಗಿ ಕಷ್ಟಗಳನ್ನೇ ಅನುಭವಿಸಿದ  ಅವರು ಯಾವತ್ತೂ ಸುಖಕ್ಕಾಗಿ ಹಂಬಲಿಸಿದವರಲ್ಲ. ದೇಶಪ್ರೇಮಕ್ಕೆ ಪ್ರತಿಫಲ ಪಡೆಯಬಾರದು ಎಂಬ ಕಾರಣಕ್ಕೆ ಪಿಂಚಣಿಯನ್ನೂ ನಿರಾಕರಿಸಿದವರು. ಅಪ್ರತಿಮ ಕಥನ ಶಕ್ತಿ ಹೊಂದಿದ್ದ ಅವರಿಗೆ ಕನ್ನಡ ಸಾಹಿತ್ಯದಲ್ಲಿ ಸಲ್ಲಬೇಕಾದ ಮನ್ನಣೆ ಸಂದಿಲ್ಲ ಎನಿಸುತ್ತದೆ.
ತ.ರಾ.ಸು. ಅವರ ಸಾಹಿತ್ಯ ಸಮೃದ್ಧಿಯ ಕುರಿತು ಬರೆದಿದ್ದಾರೆ
ವಿಕಾಸ ಹೊಸಮನಿ.

 

ತ.ರಾ.ಸು. ಹೆಸರು ಗೊತ್ತಿರದ ಕನ್ನಡಿಗರಿಲ್ಲ. ತ.ರಾ.ಸು. ಎಂಬ ಮೂರಕ್ಷರದ ಕಾವ್ಯನಾಮದಿಂದ ಖ್ಯಾತರಾದವರು ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್. ಕನ್ನಡದ ಅತ್ಯಂತ ಜನಪ್ರಿಯ ಕಾದಂಬರಿಕಾರರಲ್ಲೊಬ್ಬರಾದ ತ.ರಾ.ಸು. ಬದುಕಿದ್ದರೆ ಕಳೆದ ವರ್ಷ ಅಂದರೆ 2020ರ ಏಪ್ರಿಲ್ 21ಕ್ಕೆ ನೂರು ವರ್ಷಗಳನ್ನು ಪೂರೈಸುತ್ತಿದ್ದರು.

ಭಾರತದ ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಏಕೀಕರಣ ಚಳವಳಿ ಮತ್ತು ಪ್ರಗತಿಶೀಲ ಸಾಹಿತ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ತ.ರಾ.ಸು. ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. “ವಿಶ್ವ ಕರ್ನಾಟಕ”, “ಪ್ರಜಾವಾಣಿ” ದಿನಪತ್ರಿಕೆಗಳಲ್ಲಿ ಮತ್ತು “ಪ್ರಜಾಮತ”, “ವಾಹಿನಿ” ವಾರಪತ್ರಿಕೆಗಳಲ್ಲಿ ಕೆಲ ಕಾಲ ಪತ್ರಕರ್ತರಾಗಿ ಕೆಲಸ ಮಾಡಿದ ತ.ರಾ.ಸು. ನಂತರದ ದಿನಗಳಲ್ಲಿ ಬರವಣಿಗೆಯನ್ನೇ ಪೂರ್ಣ ಪ್ರಮಾಣದ ವೃತ್ತಿಯನ್ನಾಗಿ ಮಾಡಿಕೊಂಡರು.

ತ.ರಾ.ಸು. ಪ್ರಗತಿಶೀಲ ಸಾಹಿತ್ಯ ಚಳವಳಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಕಾದಂಬರಿಕಾರರಾಗಿ ಸಾಹಿತ್ಯ ರಂಗ ಪ್ರವೇಶ ಮಾಡಿದರು. “ಮನೆಗೆ ಬಂದ ಮಹಾಲಕ್ಷ್ಮಿ” ತ.ರಾ.ಸು. ಅವರ ಮೊದಲ ಪ್ರಕಟಿತ ಕಾದಂಬರಿ. ಅದು ಪ್ರಕಟವಾದ ಕೂಡಲೇ ಅವರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಲಾಯಿತು. ಹೊಸ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವಲ್ಲಿ ನಿಸ್ಸೀಮರಾದ ಅ.ನ.ಕೃ. ಇಂತಹ ಆರೋಪಗಳನ್ನೆಲ್ಲ ತಳ್ಳಿ ಹಾಕಿ ತ.ರಾ.ಸು. ಅವರ ಬೆಂಬಲಕ್ಕೆ ನಿಂತರು.

ಕಷ್ಟ ಕಾಲದಲ್ಲಿ ತಮಗೆ ಬೆನ್ನೆಲುಬಾಗಿ ನಿಂತ ಅ.ನ.ಕೃ. ಅವರನ್ನು ತಮ್ಮ ಸಾಹಿತ್ಯಿಕ ಗುರುವಾಗಿ ಸ್ವೀಕರಿಸಿದ ತ.ರಾ.ಸು. ನಂತರದ ವರ್ಷಗಳಲ್ಲಿ ಕನ್ನಡದ ಅತ್ಯಂತ ಜನಪ್ರಿಯ ಕಾದಂಬರಿಕಾರರಾಗಿ ಬೆಳೆದಿದ್ದು ಎಲ್ಲರಿಗೂ ತಿಳಿದ ಸಂಗತಿ. ಅ.ನ.ಕೃ. ಮತ್ತು ತ.ರಾ.ಸು. ಅವರು ಕಾದಂಬರಿಕಾರರೆಂದರೆ ಹೀಗೆಯೇ ಇರುತ್ತಾರೆ ಎಂಬುವಷ್ಟರ ಮಟ್ಟಿಗೆ ಕನ್ನಡ ಓದುಗರ ಮನದಲ್ಲಿ ತಮ್ಮ ಛಾಪನ್ನೊತ್ತಿದ್ದು ಗಮನಾರ್ಹ.

ತ.ರಾ.ಸು. ಅವರು ತಮ್ಮ ಗುರುಗಳಾದ ಅ.ನ.ಕೃ. ಅವರ ಬದುಕು – ಬರಹದ ಕುರಿತು ಬರೆದ “ಅ.ನ.ಕೃ” ಎಂಬ ಜೀವನ ಚರಿತ್ರೆ ಅ.ನ.ಕೃ. ಅವರ ಜೀವನ ಮತ್ತು ಸಾಹಿತ್ಯವನ್ನು ಸೊಗಸಾಗಿ ಪರಿಚಯಿಸುವ ಕೃತಿ. ಇದು ಅ.ನ.ಕೃ. ಅವರ ಕುರಿತು ಬಂದ ಅತ್ಯುತ್ತಮ ಕೃತಿಗಳಲ್ಲೊಂದು. ತಮ್ಮ ಸಾಹಿತ್ಯಿಕ ಜೀವನದ ಮೇಲೆ ತುಂಬ ಪ್ರಭಾವ ಬೀರಿದ ಸಿದ್ದವನಹಳ್ಳಿ ಕೃಷ್ಣ ಶರ್ಮ ಮತ್ತು ತಾವು ಲೇಖಕರಾಗಿ ಬೆಳೆಯಲು ಕಾರಣರಾದ ಅ.ನ.ಕೃ. ಅವರನ್ನು ತ.ರಾ.ಸು. ತುಂಬ ಕೃತಜ್ಞತೆಯಿಂದ ನೆನೆದಿದ್ದಾರೆ. *

“ಪತ್ರಿಕೋದ್ಯಮದ ಕಾಡಲೆತದಲ್ಲಿ ಹೇಗೋ ಹರಿಯುತ್ತಿದ್ದ ನನ್ನ ಬರಹಗಾರನ ಬುದ್ಧಿಗೆ ಒಂದು ಸಾಮಾಜಿಕ ಕ್ರಾಂತಿಯ ಗುರಿಯನ್ನು ತೋರಿಸಿಕೊಟ್ಟು ಕಾದಂಬರಿಕಾರನಾಗಲು ಬೆನ್ನು ತಟ್ಟಿ ಸ್ಫೂರ್ತಿ ನೀಡಿದ ಹಿರಿಯ ಜೀವ ಅ.ನ.ಕೃ.”

(ಅ.ನ.ಕೃ.)

“ಸಿದ್ದವನಹಳ್ಳಿ ಕೃಷ್ಣ ಶರ್ಮ, ಅ.ನ.ಕೃ. ನನ್ನ ಬಾಳ ಶಿಲ್ಪಕ್ಕೆ ಒಂದು ರೂಪ ಕೊಟ್ಟ ಇಬ್ಬರು ಕುಶಲ ರೂವಾರಿಗಳು. ವಾಸ್ತವವಾಗಿ ಕೃಷ್ಣಶರ್ಮರು ಒಂದು ಆಕಾರ ಕೊಟ್ಟ ನನ್ನ ಜೀವಮೂರ್ತಿಗೆ ಕುಸುರಿ ಕೆಲಸ ಮಾಡಿ ಅದನ್ನೊಂದು ವಿಶಿಷ್ಟ ಶಿಲ್ಪವನ್ನಾಗಿ ಮಾಡಿದ ಕೀರ್ತಿ ಅ.ನ.ಕೃ. ಅವರಿಗೇ ಸಲ್ಲಬೇಕು. ನನ್ನ ಬಾಳಿನ ಮೇಲೆ ನನ್ನ ಚಿಂತನೆಯ ಮೇಲೆ ಅಭ್ಯಾಸ ಆಳವಾಗಿಸುವುದರ ಮೇಲೆ, ಓದಿದ ಓದನ್ನು ಜೀವನಕ್ಕೆ ಅಳವಡಿಸಿಕೊಂಡು ‘ಬದುಕು ಕೇವಲ ವೈಯಕ್ತಿಕ ಸಾಧನೆಯಲ್ಲ, ಒಂದು ಕ್ರಾಂತಿಯ ಅಸ್ತ್ರ’ ಎಂಬ ಖಚಿತ ನಂಬಿಕೆಯನ್ನು ಮೂಡಿಸಿದವರು – ಅ.ನ.ಕೃ.”
(ಪುಟ 99, ‘ಹೃದಯ ಮಂಥನ’)

ಆದರ್ಶಗಳ ಬೆನ್ನು ಹತ್ತಿದ್ದ ತ.ರಾ.ಸು. ಅವರದು ಹೋರಾಟದ ಬದುಕು. ಭಾರತದ ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಏಕೀಕರಣ ಚಳವಳಿ ಮತ್ತು ಪ್ರಗತಿಶೀಲ ಸಾಹಿತ್ಯ ಚಳವಳಿಯಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ತ.ರಾ.ಸು. ತಮ್ಮ ಗುರುಗಳಾದ ಅ.ನ.ಕೃ. ಅವರೊಂದಿಗೆ ಸೇರಿ ಕನ್ನಡ ನಾಡು – ನುಡಿಯ ಏಳಿಗೆಗಾಗಿ ಕರ್ನಾಟಕದಾದ್ಯಂತ ಸುತ್ತಾಡಿದರು.

ತ.ರಾ.ಸು. ಅತ್ಯುತ್ತಮ ಲೇಖಕರಷ್ಟೇ ಅಲ್ಲ ಅದ್ಭುತ ವಾಗ್ಮಿಯೂ ಆಗಿದ್ದರು. ಕರ್ನಾಟಕದ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಸಾಹಿತ್ಯದ ಬಗ್ಗೆ ಅಪಾರ ಪ್ರೀತ್ಯಾದರ ಹೊಂದಿದ್ದ ತ.ರಾ.ಸು. ಕೇಳುಗರ ಮನಮುಟ್ಟುವಂತೆ ಗಂಟೆಗಟ್ಟಲೇ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು. ಅವರು ತಮ್ಮ ಬರಹ ಮತ್ತು ಭಾಷಣಗಳಿಂದ ಕನ್ನಡಿಗರಲ್ಲಿ ಕನ್ನಡದ ಕುರಿತು ಜಾಗೃತಿ ಮೂಡಿಸಲು ಶ್ರಮಿಸಿದರು.

ಜನಪರ ಹೋರಾಟಗಳಲ್ಲಿ ಪಾಲ್ಗೊಳ್ಳುವಲ್ಲಿ ತ.ರಾ.ಸು. ಸದಾ ಮುಂದು. ಅವರಿಗೆ ಅದರ ಕುರಿತು ವ್ಯಸನವಿಲ್ಲ ಬದಲಾಗಿ ಹೆಮ್ಮೆಯಿದೆ. ಬಾಳಿನಲ್ಲಿ ಸುಖಕ್ಕಿಂತ ಹೆಚ್ಚಾಗಿ ಕಷ್ಟಗಳನ್ನೇ ಅನುಭವಿಸಿದ  ಅವರು ಯಾವತ್ತೂ ಸುಖಕ್ಕಾಗಿ ಹಂಬಲಿಸಿದವರಲ್ಲ. ಅವರು ತಮ್ಮ ಹೋರಾಟದ ದಿನಗಳ ಕುರಿತು ಆಡಿದ ಮಾತುಗಳು ತುಂಬ ಮನೋಜ್ಞವಾಗಿವೆ.

“ಆ ಕಾಲ – ಹೋರಾಟದ ಬದುಕು.
ಬದುಕೂ ಹೋರಾಟವಾಗಿತ್ತು ಆ ಕಾಲದಲ್ಲಿ.

ಕಂಡ ಕಂಡ ಬೆಟ್ಟವನ್ನೆಲ್ಲ ಮೇಲೇರಿದೆವು, ಹತ್ತಿದೆವು, ಎಷ್ಟೋ ಬಾರಿ ಗೆಲುವು ನಮ್ಮದಾಯಿತು, ಬಹಳಷ್ಟು ಬಾರಿ ಮೈಕೈ ನೋವಾಯಿತು. ಆದರೆ ಆ ನೋವು ಮಾತ್ರ ಎಂದೂ ನೋವಾಗಿ ಕಾಣಲಿಲ್ಲ. ಗೆಲುವು ಎಂದೂ ತಲೆ ತಿರುಗಿಸಲಿಲ್ಲ. ಕ್ರಾಂತಿಯ ಕನಸು – ಎಂದೂ ತನ್ನ ಕಾಂತಿ ಕಳೆದುಕೊಳ್ಳಲಿಲ್ಲ. ನಿಜಕ್ಕೂ ಎಂಥ ಸುಂದರ ದಿನಗಳು ಅವು. ಆ ಕಾಲದಲ್ಲಿ ನಿಂದನೆಗಳೂ ಎಷ್ಟು ಖುಷಿ ಕೊಡುತ್ತಿದ್ದವು. ಇವತ್ತು ನಾನು ಪಡೆದ ನೂರಾರು ಪ್ರಶಸ್ತಿ ಪತ್ರಗಳು ಖಂಡಿತವಾಗಿಯೂ ನನ್ನ ಮನಸ್ಸಿಗೆ ಆ ದಿನ ಅನ್ನಿಸಿಕೊಂಡ ಬೈಗುಳದ ಸುಖ ಕೊಟ್ಟಿಲ್ಲ.”
(ಪುಟ 101, ‘ಹೃದಯ ಮಂಥನ’)

ಬರವಣಿಗೆಯನ್ನು ವೃತ್ತಿಯನ್ನಾಗಿ ಸ್ವೀಕರಿಸಿದ ತ.ರಾ.ಸು. ಅವರ ನಿರ್ಧಾರದಿಂದ ಕನ್ನಡ ಓದುಗರಿಗೆ ಸಾಕಷ್ಟು ಲಾಭವಾಯಿತು. ಆದರೆ ವೈಯಕ್ತಿಕವಾಗಿ ತ.ರಾ.ಸು. ಮತ್ತು ಅವರ ಕುಟುಂಬ ವರ್ಗದವರು  ಕಷ್ಟಗಳನ್ನು ಅನುಭವಿಸಬೇಕಾಯಿತು. ದೇಶಕ್ಕಾಗಿ ಹೋರಾಟ ಮಾಡಿದ್ದಕ್ಕೆ ಪ್ರತಿಫಲ ಪಡೆಯಬಾರದೆಂಬ ನಿಲುವಿನ ನಿಸ್ವಾರ್ಥ ಮನೋಭಾವದ ದೇಶಭಕ್ತರಾದ ತ.ರಾ.ಸು. ಅವರು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುವ ಪಿಂಚಣಿಯನ್ನು ನಿರಾಕರಿಸಿದರು.

ತ.ರಾ.ಸು. ಬರೆದು ಬದುಕಿದ ಕನ್ನಡದ ಬೆರಳೆಣಿಕೆಯ ಲೇಖಕರಲ್ಲೊಬ್ಬರು. ಬರವಣಿಗೆ ವೃತ್ತಿಯಾದಾಗ ಪ್ರಮಾಣ ಹೆಚ್ಚಾದರೂ ಗುಣಮಟ್ಟ ಕುಸಿಯುವುದು ಸಹಜ. ತ.ರಾ.ಸು. ಅವರ ವಿಷಯದಲ್ಲೂ ಇದು ನಿಜವಾಯಿತು. ತ.ರಾ.ಸು. ಉನ್ನತ ಪ್ರತಿಭೆಯ, ಪ್ರಥಮ ದರ್ಜೆಯ ಕಾದಂಬರಿಕಾರರಾದರೂ ಸಹ ಆರ್ಥಿಕ ತೊಂದರೆಗಳನ್ನು ನಿಭಾಯಿಸಲು ಒಂದರ ಮೇಲೊಂದರಂತೆ ಹಲವು ಸಾಧಾರಣ ಕಾದಂಬರಿಗಳನ್ನು ಬರೆದರು. ಇಂತಹ ಅನೇಕ ಜನಪ್ರಿಯ ಕಾದಂಬರಿಗಳು ಸಾಮಾನ್ಯ ಓದುಗರ ಮನತಣಿಸುವಲ್ಲಿ ಯಶಸ್ವಿಯಾದವು.

ನಾಡಿನ ಖ್ಯಾತ ಕಾದಂಬರಿಕಾರರಾದರೂ ತ.ರಾ.ಸು. ಜೀವನದ ತುಂಬ ಕಷ್ಟಗಳನ್ನೇ ಅನುಭವಿಸಿದರು. ತಮ್ಮ ಅದ್ಭುತ ಕಥನಕಲೆಯಿಂದ ಓದುಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ದು ಓದುಗರು ತಮ್ಮೆಲ್ಲ ದುಃಖ ದುಮ್ಮಾನ ಮರೆತು ಸಂತೋಷ ಪಡುವಂತೆ ಮಾಡುತ್ತಿದ್ದ ತ.ರಾ.ಸು. ತಮ್ಮ ಜೀವನದ ಕೊನೆಯವರೆಗೂ ಆರ್ಥಿಕ ಸಂಕಷ್ಟದಿಂದ ಹೊರಬರಲಾಗಲಿಲ್ಲ. ಆರ್ಥಿಕ ಸಂಕಷ್ಟದಿಂದಾಗಿ ತ.ರಾ.ಸು. “ಶಿಶು ದೈತ್ಯ” ಎಂಬ ಕಾದಂಬರಿಯ ಸಂಪೂರ್ಣ ಹಕ್ಕುಗಳನ್ನು ಪ್ರಕಾಶಕರೊಬ್ಬರಿಗೆ ಮಾರಾಟ ಮಾಡಬೇಕಾಗಿ ಬಂದದ್ದು ವಿಪರ್ಯಾಸ. ಕನ್ನಡದ ಬಹುದೊಡ್ಡ ಲೇಖಕರಾದ ತ.ರಾ.ಸು. ಅವರ ಪತ್ನಿ ಶ್ರೀಮತಿ ಅಂಬುಜಾ ತ.ರಾ.ಸು. ಅವರು ತಮ್ಮ ಕುಟುಂಬ ಅನುಭವಿಸಿದ ಕಷ್ಟಗಳ ಕುರಿತು ಆಡಿದ ಮಾತುಗಳು ಓದುಗರ ಮನ ಕಲಕುವಂತಿವೆ. **

“ಎಲ್ಲರೂ ಹೇಳುವಂತೆ, ಎಲ್ಲರಿಗೂ ಕಾಣುವಂತೆ ನಮಗೆ ಮನೆ ಇದೆ, ಯಜಮಾನರಿಗೆ ದೊಡ್ಡ ಹೆಸರಿದೆ, ಸ್ಥಾನ – ಮಾನ ಎಲ್ಲಾ ಇದೆ, ಬಹಿರಾಡಂಬರಕ್ಕೆ ಬೇಕಾದದ್ದೆಲ್ಲಾ ಇದೆ. ಈ ಘಟ್ಟಕ್ಕೆ ತಲುಪುವಷ್ಟಕ್ಕೆ ತೆತ್ತ ಬೆಲೆ, ಅನುಭವಿಸಿದ ಕಷ್ಟ – ನಷ್ಟಗಳು ಎಷ್ಟು? ಸಾಹಿತಿಗಳ ಲೇಖನಿಯಿಂದ ಮೂಡಿಬಂದ ಪಾತ್ರಗಳ ಕಥೆ ಓದಿ ಕಣ್ಣೀರಿಡುವ ಎಷ್ಟು ಜನ ಸಾಹಿತಿಗಳ ಸಂಸಾರದ ಅಂತರಾಳ ಅರಿಯಲು ಯತ್ನಿಸಿದ್ದಾರೆ? ಅಷ್ಟು ವಿಶಾಲ ಮನಸ್ಸು ಯಾರಿಗಿದೆ?”

“ನೆಮ್ಮದಿಯಿಂದ ಬದುಕಲು ಅವಶ್ಯವಾದದ್ದೊಂದನ್ನು ಬಿಟ್ಟು, ಮಿಕ್ಕೆಲ್ಲವನ್ನು ದಯಪಾಲಿಸಿ ಹೆಜ್ಜೆ ಹೆಜ್ಜೆಗೂ ಪರೀಕ್ಷೆ ಮಾಡಿದ ಭಗವಂತನಲ್ಲಿ ನನ್ನ ಪ್ರಾರ್ಥನೆಯಿಷ್ಟೆ. ‘ಜೀವನದ ವಿವಿಧ ಮುಖಗಳನ್ನು ತೆರೆದು ತೋರಿಸಿದ ನೀನು ಎಷ್ಟು ಕರುಣಾಳು? ಇನ್ನು ಈ ಜನ್ಮವೆತ್ತದಂತೆ ಕೃಪೆ ಮಾಡು. ಇದಕ್ಕಿಂತ ನಿನ್ನಲ್ಲಿ ಬೇರೇನು ಬೇಡಲಿ?’ ಹೀಗೆ ಬೇಡುವ ಬುದ್ಧಿಯನ್ನು ತಂದು ಕೊಟ್ಟು ನನ್ನ ಬದುಕನ್ನು ಸಾರ್ಥಕ ಮಾಡಿದ ನನ್ನ ಯಜಮಾನರಿಗೆ ಎಷ್ಟು ಕೃತಜ್ಞತೆಯನ್ನು ಅರ್ಪಿಸಿದರೂ ಸಾಲದು.”
(ಪುಟ 94, ‘ಯಜಮಾನರು – ಜೀವನ’)

*****

ತ.ರಾ.ಸು. ಸುಮಾರು ಎಪ್ಪತ್ತು ವೈವಿಧ್ಯಮಯ ಕಾದಂಬರಿಗಳನ್ನು ಬರೆದಿದ್ದಾರೆ. ಕನ್ನಡದ ಅತ್ಯಂತ ಜನಪ್ರಿಯ ಲೇಖಕರಾದ ತ.ರಾ.ಸು. ಅವರ ಕಾದಂಬರಿಗಳಿಗೆ ಇಂದಿಗೂ ಸಹ ಓದುಗರಿಂದ ಸಾಕಷ್ಟು ಬೇಡಿಕೆಯಿದ್ದು ಅವರ ಬಹುತೇಕ ಕಾದಂಬರಿಗಳು ಮತ್ತೆ ಮತ್ತೆ ಮರುಮುದ್ರಣ ಕಾಣುತ್ತಿರುವುದೇ ಕಾದಂಬರಿಕಾರರಾಗಿ ಅವರ ಜನಪ್ರಿಯತೆಗೆ ಸಾಕ್ಷಿ.

ಚಿತ್ರದುರ್ಗದ ಪಾಳೆಯಗಾರರ ಇತಿಹಾಸದ ಕುರಿತು ಬರೆದ ಐತಿಹಾಸಿಕ ಕಾದಂಬರಿ ಮಾಲೆ ಅವರಿಗೆ ಅಪಾರ ಖ್ಯಾತಿ ತಂದುಕೊಟ್ಟಿತು. “ಕಸ್ತೂರಿ ಕಂಕಣ”, “ಕಂಬನಿಯ ಕುಯಿಲು”, “ರಾಜ್ಯದಾಹ”, “ರಕ್ತ ರಾತ್ರಿ”, “ತಿರುಗುಬಾಣ”, “ಹೊಸ ಹಗಲು”, “ವಿಜಯೋತ್ಸವ” ಮತ್ತು “ದುರ್ಗಾಸ್ತಮಾನ” ಕಾದಂಬರಿಗಳು ಈ ಐತಿಹಾಸಿಕ ಕಾದಂಬರಿ ಮಾಲೆಯಲ್ಲಿ ಬಂದ ಕೃತಿಗಳು. ಚಿತ್ರದುರ್ಗದ ಪಾಳೆಯಗಾರರ ಚರಿತ್ರೆಗೆ ಕನ್ನಡ ಸಾಹಿತ್ಯದಲ್ಲಿ ಶಾಶ್ವತ ಸ್ಥಾನ ಸಿಗುವಂತೆ ಮಾಡಿದ ಕೀರ್ತಿ ತ.ರಾ.ಸು. ಅವರಿಗೆ ಸಲ್ಲುತ್ತದೆ.

1982ರಲ್ಲಿ ಪ್ರಕಟವಾದ “ದುರ್ಗಾಸ್ತಮಾನ” ತ.ರಾ.ಸು. ಅವರ ಮಹತ್ವಾಕಾಂಕ್ಷೆಯ ಕೃತಿ. ಚಿತ್ರದುರ್ಗದ ಕೊನೆಯ ಪಾಳೆಯಗಾರನಾದ ರಾಜಾ ವೀರ ಮದಕರಿ ನಾಯಕನ ಕುರಿತ ಈ ಬೃಹತ್ ಕಾದಂಬರಿ ಓದುಗರ ಮನಸೂರೆಗೊಂಡಿತ್ತು. ಓದುಗ ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದ “ದುರ್ಗಾಸ್ತಮಾನ” ಕಾದಂಬರಿಗಾಗಿ ತ.ರಾ.ಸು. ಅವರಿಗೆ ಮರಣೋತ್ತರವಾಗಿ 1985ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು.

ಕನ್ನಡ ನಾಡಿನ ಇತಿಹಾಸದ ಗತವೈಭವದ ಬಗ್ಗೆ ಅಪಾರ ಅಭಿಮಾನ ಮತ್ತು ಕನ್ನಡ ನಾಡಿನ ಭವಿಷ್ಯದ ಬಗ್ಗೆ ಸಾಕಷ್ಟು ಭರವಸೆಯಿದ್ದ ತ.ರಾ.ಸು. ಚಿತ್ರದುರ್ಗದ ಪಾಳೆಯಗಾರರ ಚರಿತ್ರೆಗೆ ಸಂಬಂಧಿಸಿದ ಕಾದಂಬರಿಗಳ ಜೊತೆ ಜೊತೆಗೆ ಕನ್ನಡ ನಾಡು – ನುಡಿಯ ವೈಭವವನ್ನು ಮೆರೆಸಿದ ಐತಿಹಾಸಿಕ ಪುರುಷರಾದ ನೃಪತುಂಗ, ವಿಷ್ಣುವರ್ಧನ, ಚಾವುಂಡರಾಯ ಮತ್ತು ಅಲ್ಲಮಪ್ರಭುವಿನ ಕುರಿತು ಐತಿಹಾಸಿಕ ಕಾದಂಬರಿಗಳನ್ನು ರಚಿಸಿದರು.

ಐತಿಹಾಸಿಕ ಕಾದಂಬರಿಗಳನ್ನು ರಚಿಸುವುದರಲ್ಲಿ ತ.ರಾ.ಸು. ಅಗ್ರಗಣ್ಯರು. ರಾಷ್ಟ್ರಕೂಟರ ಪ್ರಖ್ಯಾತ ಅರಸ ಅಮೋಘವರ್ಷ ನೃಪತುಂಗನ ಕುರಿತ “ನೃಪತುಂಗ”, ಹೊಯ್ಸಳ ವಿಷ್ಣುವರ್ಧನನ ಬಗೆಗಿನ “ಸಿಡಿಲಮೊಗ್ಗು” ಮತ್ತು “ಹೊಯ್ಸಳೇಶ್ವರ ವಿಷ್ಣುವರ್ಧನ”, ಶ್ರವಣಬೆಳಗೊಳದ ವಿಶ್ವವಿಖ್ಯಾತ ಗೊಮ್ಮಟೇಶ್ವರನ ಪ್ರತಿಮೆಯ ರೂವಾರಿಯಾದ ಚಾವುಂಡರಾಯನ ಜೀವನಾಧಾರಿತ “ಶಿಲ್ಪಶ್ರೀ” ಮತ್ತು ಅಲ್ಲಮಪ್ರಭುವಿನ ಜೀವನಾಧಾರಿತ “ಅಗ್ನಿರಥ ಮುಕ್ತಿಪಥ” ಕಾದಂಬರಿಗಳು ತ.ರಾ.ಸು. ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿವೆ.

“ಹಂಸಗೀತೆ” ತ.ರಾ.ಸು. ಅವರ ವಿಶಿಷ್ಟ ಕಾದಂಬರಿ. ಭೈರವಿ ವೆಂಕಟಸುಬ್ಬಯ್ಯನೆಂಬ ಸಂಗೀತಗಾರನ ಜೀವನವನ್ನು ಚಿತ್ರಿಸುವ ಈ ಕಾದಂಬರಿ ತನ್ನ ವಸ್ತು ಮತ್ತು ತಂತ್ರದಿಂದಾಗಿ ಗಮನ ಸೆಳೆಯುತ್ತದೆ. ಚಿತ್ರದುರ್ಗದ ಕೊನೆಯ ಪಾಳೆಯಗಾರ ರಾಜಾ ವೀರ ಮದಕರಿ ನಾಯಕನ ಕಾಲದಲ್ಲಿ ಬಾಳಿಹೋದ ಭೈರವಿ ವೆಂಕಟಸುಬ್ಬಯ್ಯನೆಂಬ ಕಾಲ್ಪನಿಕ ಸಂಗೀತಗಾರನ ಉದಾತ್ತ ಜೀವನವನ್ನು ಕಟ್ಟಿಕೊಟ್ಟಿರುವ ‘ಹಂಸಗೀತೆʼ ಕನ್ನಡದ ಶ್ರೇಷ್ಠ ಕಾದಂಬರಿಗಳಲ್ಲೊಂದು. ಅನೇಕ ಓದುಗರು ಭೈರವಿ ವೆಂಕಟಸುಬ್ಬಯ್ಯ ಐತಿಹಾಸಿಕ ವ್ಯಕ್ತಿಯೆಂದೇ ತಿಳಿದಿದ್ದರು. ಕಾಲ್ಪನಿಕ ಪಾತ್ರವೊಂದನ್ನು ನಿಜವಾದ ವ್ಯಕ್ತಿಯಂತೆ ಚಿತ್ರಿಸಿ ಓದುಗರು ನಂಬುವಂತೆ ಮಾಡಿರುವುದು ತ.ರಾ.ಸು. ಕಥನದ ಶಕ್ತಿಯ ಪರಿಚಯ ನೀಡುತ್ತದೆ.

ಪ್ರಗತಿಶೀಲ ಲೇಖಕರಾದ ತ.ರಾ.ಸು. ತಮ್ಮ ಬಹುತೇಕ ಸಾಮಾಜಿಕ ಕಾದಂಬರಿಗಳಲ್ಲಿ ಮನುಷ್ಯನ ಒಳಿತು ಕೆಡುಕುಗಳನ್ನು ಮತ್ತು ಜೀವನದ ವಿವಿಧ ಮುಖಗಳನ್ನು ಸಾರವತ್ತಾಗಿ ಚಿತ್ರಿಸಿದ್ದಾರೆ. ಸಮಕಾಲೀನ ಸಾಮಾಜಿಕ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸಿ ತಮ್ಮ ಕಾದಂಬರಿಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ತರಲು ಶ್ರಮಿಸಿರುವುದು ಉಲ್ಲೇಖನೀಯ.

“ನಿಜಕ್ಕೂ ಎಂಥ ಸುಂದರ ದಿನಗಳು ಅವು. ಆ ಕಾಲದಲ್ಲಿ ನಿಂದನೆಗಳೂ ಎಷ್ಟು ಖುಷಿ ಕೊಡುತ್ತಿದ್ದವು. ಇವತ್ತು ನಾನು ಪಡೆದ ನೂರಾರು ಪ್ರಶಸ್ತಿ ಪತ್ರಗಳು ಖಂಡಿತವಾಗಿಯೂ ನನ್ನ ಮನಸ್ಸಿಗೆ ಆ ದಿನ ಅನ್ನಿಸಿಕೊಂಡ ಬೈಗುಳದ ಸುಖ ಕೊಟ್ಟಿಲ್ಲ.”

ವೇಶ್ಯಾ ಸಮಸ್ಯೆಯ ಕುರಿತು ಬರೆದ “ಮಸಣದ ಹೂ” ಪ್ರಗತಿಶೀಲ ಮಾರ್ಗದಲ್ಲಿ ಬಂದ ಒಳ್ಳೆಯ ಕಾದಂಬರಿ. ವೇಶ್ಯಾ ಸಮಸ್ಯೆಯ ಕುರಿತು ಅ.ನ.ಕೃ. ಹತ್ತು ಹಲವು ಕಾದಂಬರಿಗಳನ್ನು ಬರೆದರೂ ನಿರೀಕ್ಷಿತ ಯಶಸ್ಸನ್ನು ಗಳಿಸಲಿಲ್ಲ. ಆದರೆ  “ಮಸಣದ ಹೂ” ಕಾದಂಬರಿಯಲ್ಲಿ ಸಾಕಷ್ಟು ಸಂಯಮದಿಂದ ವೇಶ್ಯಾ ಸಮಸ್ಯೆಯನ್ನು ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.

“ಚಂದವಳ್ಳಿಯ ತೋಟ” ಆದರ್ಶಮಯ ಗ್ರಾಮಜೀವನದ ಕುರಿತು ಬರೆದ ಕಾದಂಬರಿ. ವಿನೋಬಾ ಭಾವೆಯವರ ಭೂದಾನ ಚಳುವಳಿ ಇದಕ್ಕೆ ಸ್ಫೂರ್ತಿ ನೀಡಿದೆ. “ಬೆಂಕಿಯ ಬಲೆ” ನರಸಿಂಹಮೂರ್ತಿ ಎಂಬ ಬಡ ಮೇಷ್ಟರು ಮತ್ತು ಆತನ ಹೆಂಡತಿ ರುಕ್ಮಿಣಿಯ ಜೀವನದ ಬವಣೆಯನ್ನು ಹೃದಯಂಗಮವಾಗಿ ತೆರೆದಿಡುತ್ತದೆ. “ಚಂದನದ ಗೊಂಬೆ” ಕಾದಂಬರಿ ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ವಿಧವೆಯಾಗುವ ರತ್ನಳ ಬಾಳಿನ ಗೋಳಿನ ಕಥೆಯನ್ನು ಹೇಳುತ್ತದೆ.

“ನಾಗರಹಾವು”, “ಒಂದು ಗಂಡು ಎರಡು ಹೆಣ್ಣು” ಮತ್ತು “ಸರ್ಪಮತ್ಸರ” ಇಬ್ಬರು ಹೆಣ್ಣುಗಳನ್ನು ಪ್ರೀತಿಸುವ ರಾಮಾಚಾರಿ ಎಂಬ ಆಧುನಿಕ ಮನೋಭಾವದ ಯುವಕನ ಕಥೆಯನ್ನು ಜನಪ್ರಿಯ ಶೈಲಿಯಲ್ಲಿ ಹೇಳುವ ಕಾದಂಬರಿ ತ್ರಿವಳಿ. “ಆಕಸ್ಮಿಕ”, “ಅಪರಾಧಿ” ಮತ್ತು “ಪರಿಣಾಮ” ಮೂರ್ತಿ ಎಂಬ ಯುವಕನ ಬಾಳಿನಲ್ಲಿ ನಡೆದ ಅನಿರೀಕ್ಷಿತ ಘಟನೆಗಳು ಮತ್ತು ಆ ಘಟನೆಗಳು ಅವನ ಮೇಲೆ ಉಂಟು ಮಾಡಿದ ಪರಿಣಾಮಗಳನ್ನು ತುಂಬ ರಸವತ್ತಾಗಿ ಚಿತ್ರಿಸಿದೆ. ಈ ಕಾದಂಬರಿ ತ್ರಿವಳಿಯಲ್ಲಿ ಕೊಂಚ ಮಟ್ಟಿಗೆ ಅಸಂಗತ ವಿಧಾನ ಬಳಸಿಕೊಂಡಿರುವುದು ಗಮನಾರ್ಹ.

“ಪುರುಷಾವತಾರ” ಭಿಕ್ಷುಕರ ದಯನೀಯ ಬಾಳನ್ನು ಕುರಿತ ಕಾದಂಬರಿಯಾದರೆ, “ಮುಂಜಾವಿನಿಂದ ಮುಂಜಾವು” ಕಾದಂಬರಿ ಪತ್ರಕರ್ತರ ಜೀವನದ ಹಲವು ಮಗ್ಗುಲುಗಳನ್ನು ಚಿತ್ರಿಸುತ್ತದೆ. “ಜೀತದ ಜೀವ” ಸಾಮಾಜಿಕ ಅನಿಷ್ಟಗಳಲ್ಲೊಂದಾದ ಜೀತಪದ್ಧತಿಯ ಬಗೆಗೆ ವಿವೇಚಿಸುವ ಕಾದಂಬರಿ.

“ಬಂಗಾರಿ”, “ನಾಯಕಿ”, “ಕಾರ್ಕೋಟಕ”, “ಕಾಮಾಕ್ಷಿ”, “ಪರಿಮಳದ ಉರುಳು”, “ಹಾವು ಹಿಡಿದವರು”, “ಗ್ರಹಣ ಬಿಟ್ಟಿತು”, “ಕೇದಿಗೆ ವನ”, “ಕಣ್ಣು ತೆರೆಯಿತು”, “ಪಾರಿಜಾತ”, “ವಿಷಪ್ರಾಶನ” ಮತ್ತು “ಲಾವಣ್ಯವತಿ” ಕಾದಂಬರಿಗಳಲ್ಲಿ  ಅವರು ಕಾಮವು ಮನುಷ್ಯನ ಜೀವನದಲ್ಲಿ ವಹಿಸಿದ ಪಾತ್ರ ಮತ್ತು ಅದು ಉಂಟು ಮಾಡುವ ಪರಿಣಾಮಗಳ ಬಗೆಗೆ ವಿವೇಚಿಸಿದ್ದಾರೆ.

“ಬೇಲಿ ಮೆಯ್ದ ಹೊಲ”, “ಮರಳು ಸೇತುವೆ”, “ಖೋಟಾನೋಟು”, “ಚದುರಂಗದ ಮನೆ” ಮತ್ತು “ಎಲ್ಲಾ ಅವನ ಹೆಸರಿನಲ್ಲೇ” ತರಹದ ಕಾದಂಬರಿಗಳಲ್ಲಿ ತ.ರಾ.ಸು. ಅವರು ರಾಜಕೀಯ ಭ್ರಷ್ಟಾಚಾರ ಯಾವ ರೀತಿ ಸಾಮಾನ್ಯ ಜನರ ಬದುಕನ್ನು ಹದಗೆಡಿಸಿ ಮನುಷ್ಯನನ್ನು ಸ್ವಾರ್ಥಿಯನ್ನಾಗಿ ಮಾಡಿದೆ ಎಂಬುದನ್ನು ಜನಪ್ರಿಯ ಶೈಲಿಯಲ್ಲಿ ಹೇಳಿದ್ದಾರೆ.

ಪ್ರಭಾ ಎಂಬ ಉದ್ಯೋಗಸ್ಥ ಹೆಣ್ಣಿನ ಬವಣೆಯ ಕಥೆಯ ಮೂಲಕ ಹೆಣ್ಣಿನ ಸ್ವಾತಂತ್ರ್ಯದ ಕುರಿತು ವಿವೇಚಿಸಿರುವ “ಬಿಡುಗಡೆಯ ಬೇಡಿ” ತ.ರಾ.ಸು. ಅವರ ಗಮನಾರ್ಹ ಕಾದಂಬರಿಗಳಲ್ಲೊಂದು. ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಜ್ಞಾ ಪ್ರವಾಹ ತಂತ್ರವನ್ನು ಯಶಸ್ವಿಯಾಗಿ ಬಳಸಿಕೊಂಡ ಕಾದಂಬರಿ ಎಂಬ ಹೆಗ್ಗಳಿಕೆ “ಬಿಡುಗಡೆಯ ಬೇಡಿ” ಕೃತಿಗೆ ಸಲ್ಲುತ್ತದೆ.

ತ.ರಾ.ಸು. ಖ್ಯಾತ ಕಾದಂಬರಿಕಾರರಾದರೂ ಕೆಲವು ಒಳ್ಳೆಯ ಸಣ್ಣಕಥೆಗಳನ್ನೂ ಬರೆದಿದ್ದಾರೆ. “ರೂಪಸಿ”, “ತೊಟ್ಟಿಲು ತೂಗಿತು”, “ಗಿರಿಮಲ್ಲಿಗೆಯ ನಂದನದಲ್ಲಿ” ಮತ್ತು “ಇದೇ ನಿಜವಾದ ಸಂಪತ್ತು” ಅವರ ಕಥಾಸಂಕಲನಗಳು. “ರೂಪಸಿ”, “ಮೂರು ನಗು”, “ಸಾಕ್ಷಾತ್ಕಾರ”, “ತೊಟ್ಟಿಲು ತೂಗಿತು”, “0 – 0 = 0”, “ಇನ್ನೊಂದು ಮುಖ”, “ಒಂದು ತುಂಡು ಸುದ್ದಿ” ಮತ್ತು “ಇದೇ ನಿಜವಾದ ಸಂಪತ್ತು” ತ.ರಾ.ಸು. ಅವರ ಕಥೆಗಳ ವೈವಿಧ್ಯವನ್ನು ತೋರಿಸುತ್ತವೆ.

“0 – 0 = 0” ಕನ್ನಡದ ಮೊದಲ ನವ್ಯ ಕಥೆ ಎಂಬ ಹೆಗ್ಗಳಿಕೆ ಪಡೆದಿದೆ. ತ.ರಾ.ಸು. ಅವರ “0 – 0 = 0” ಮತ್ತು “ಇನ್ನೊಂದು ಮುಖ” ಸಣ್ಣಕಥೆಗಳು ಕನ್ನಡದ ಅತ್ಯುತ್ತಮ ಸಣ್ಣಕಥೆಗಳಾಗಿದ್ದು ಕನ್ನಡದ ಹಲವು ಸಣ್ಣಕಥೆಗಳ ಆ್ಯಂಥಾಲಜಿಗಳಲ್ಲಿ ಸ್ಥಾನ ಪಡೆದಿವೆ.
ತ.ರಾ.ಸು. ಅವರ ಹಲವು ಜನಪ್ರಿಯ ಕಾದಂಬರಿಗಳು ಚಲನಚಿತ್ರಗಳಾಗಿ ಅಪಾರ ಖ್ಯಾತಿ ಪಡೆದವು. “ಚಂದವಳ್ಳಿಯ ತೋಟ”, “ಚಕ್ರತೀರ್ಥ”, “ಪುನರ್ಜನ್ಮ” (“ಸಾಕು ಮಗಳು” ಕಾದಂಬರಿಯಾಧಾರಿತ), “ಆಕಸ್ಮಿಕ”, “ಹಂಸಗೀತೆ”, “ಚಂದನದ ಗೊಂಬೆ”, “ಬೆಂಕಿಯ ಬಲೆ”, “ಬಿಡುಗಡೆಯ ಬೇಡಿ”, “ನಾಗರಹಾವು” ಮತ್ತು “ಗಾಳಿಮಾತು” ಚಲನಚಿತ್ರಗಳು ತ.ರಾ.ಸು. ಅವರಿಗೆ ಚಿತ್ರರಂಗದಲ್ಲಿಯೂ ಕೀರ್ತಿ ಸಿಗುವಂತೆ ಮಾಡಿದವು. ಕೆಲವು ಚಲನಚಿತ್ರಗಳು ಬೇರೆ ಭಾಷೆಗಳಿಗೆ ಕೂಡ ರಿಮೇಕ್ ಆಗಿ ಯಶಸ್ಸು ಗಳಿಸಿದ್ದು ಗಮನಾರ್ಹ.

ತ.ರಾ.ಸು. ಅವರಿಗೆ ತಮ್ಮ ಕೃತಿಗಳ ಕುರಿತು ಯಾವುದೇ ರೀತಿಯ ಭ್ರಮೆಗಳಿರಲಿಲ್ಲ. ತಮ್ಮ ಅನೇಕ ಜನಪ್ರಿಯ ಕಾದಂಬರಿಗಳು ಸಾಧಾರಣ ಮಟ್ಟದಲ್ಲಿವೆಯೆಂಬ ಅರಿವು ಸ್ವತಃ ತ.ರಾ.ಸು. ಅವರಿಗಿತ್ತು ಮತ್ತು ಅದನ್ನು ಅವರು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದ್ದರು.

ಕನ್ನಡದ ಮೇಜರ್ ಲೇಖಕರಾದ ತ.ರಾ.ಸು. ಯಾವತ್ತೂ ವಿಮರ್ಶೆಯ ಬಗೆಗೆ ಯೋಚಿಸಿದವರೇ ಅಲ್ಲ. ಅವರು ಬರೆದಿದ್ದು ಓದುಗರಿಗಾಗಿಯೇ ಹೊರತು, ವಿಮರ್ಶಕರಿಗಾಗಲ್ಲ. ಸಾಹಿತ್ಯ ಕೃತಿಗಳು ತಮ್ಮ ಸತ್ವದಿಂದ ಉಳಿಯಬೇಕಲ್ಲದೇ ವಿಮರ್ಶೆಯಿಂದಲ್ಲ ಎಂದು ಅವರು ಬಲವಾಗಿ ನಂಬಿದ್ದರು. ವಿಮರ್ಶೆ ಮತ್ತು ವಿಮರ್ಶಕರ ಬಗ್ಗೆ ತ.ರಾ.ಸು. ಅವರದು ಯಾವತ್ತೂ ನಿರ್ಲಿಪ್ತ ಮನೋಭಾವ. ವಿಮರ್ಶೆಯ ಬಗೆಗೆ ತ.ರಾ.ಸು. ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಗಮನಾರ್ಹವಾಗಿದೆ.

“ಹೊಗಳಿಕೆ, ತೆಗಳಿಕೆ ಎರಡಕ್ಕೂ ಕಿವುಡಾಗಿ ನಮಗನಿಸಿದ್ದನ್ನು ಬರೆಯುವುದಷ್ಟೇ ನಮ್ಮ ಕೆಲಸ. ಸಮಕಾಲೀನ ವಿಮರ್ಶೆ ವಿಮರ್ಶೆಯೇ ಅಲ್ಲ. ಕಾಲವೇ ವಿಮರ್ಶಕನ ಕೆಲಸ ಮಾಡುತ್ತದೆ. ಸತ್ವವಿದ್ದರೆ ಉಳಿಯುತ್ತೇವೆ. ಇಲ್ಲವಾದರೆ ಇಲ್ಲ.”
(ಪುಟ X, “ಹಿಂತಿರುಗಿ ನೋಡಿದಾಗ”)

1983ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಯಶವಂತ ಚಿತ್ತಾಲರ “ಕಥೆಯಾದಳು ಹುಡುಗಿ” ಕಥಾಸಂಕಲನಕ್ಕೆ ದೊರೆಯಿತು. ತ.ರಾ.ಸು. ಅವರ “ದುರ್ಗಾಸ್ತಮಾನ”ಕ್ಕೆ ಪ್ರಶಸ್ತಿ ಸಿಗಬಹುದೆಂದು ಬಹುತೇಕ ಜನ ನಿರೀಕ್ಷಿಸಿದ್ದರು. ಆದರೆ ಆ ವರ್ಷದ ಪ್ರಶಸ್ತಿ ಯಶವಂತ ಚಿತ್ತಾಲರಿಗೆ ಲಭಿಸಿತು. ಇದರ ಬಗ್ಗೆ ತ.ರಾ.ಸು. ಅವರ ಆಪ್ತರೊಬ್ಬರು ಅವರನ್ನು ಭೇಟಿಯಾಗಿ ಕೇಳಿದಾಗ, ತ.ರಾ.ಸು. ಅವರು ತಮ್ಮ ಮೇಜಿನ ಮೇಲಿದ್ದ ಯಶವಂತ ಚಿತ್ತಾಲರ “ಕಥೆಯಾದಳು ಹುಡುಗಿ” ಪುಸ್ತಕ ತೋರಿಸುತ್ತಾ ಆಡಿದ ಮಾತುಗಳು ಅವರೆಷ್ಟು ದೊಡ್ಡವರು ಎಂಬುದನ್ನು ತೋರಿಸುತ್ತವೆ.

“ನಿಜಕ್ಕೂ ಯಶವಂತ ಚಿತ್ತಾಲ ಒಳ್ಳೆಯ ಲೇಖಕ. ಅವರ ‘ಕಥೆಯಾದಳು ಹುಡುಗಿ’ ಪುಸ್ತಕ ತುಂಬ ಚೆನ್ನಾಗಿದೆ. ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತದ್ದು ಯೋಗ್ಯವಾಗಿದೆ. ಈ ವರ್ಷವಲ್ಲದಿದ್ದರೆ ಮುಂದಿನ ವರ್ಷ ನನಗೆ ಪ್ರಶಸ್ತಿ ಬರಬಹುದು.”

ಇಂತಹ ಉದಾತ್ತ ಘಟನೆಗಳು ತ.ರಾ.ಸು. ಮಹಾನ್ ಲೇಖಕ ಮಾತ್ರವಲ್ಲ, ಮಹಾನ್ ವ್ಯಕ್ತಿಯೂ ಹೌದು ಎಂಬುದನ್ನು ನಿರೂಪಿಸುತ್ತವೆ. ಇದು ಓದುಗರಲ್ಲಿ ತ.ರಾ.ಸು. ಅವರ ಬಗೆಗಿನ ಗೌರವ ಇಮ್ಮಡಿಯಾಗುವಂತೆ ಮಾಡುತ್ತದೆ.

ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಒಳ್ಳೆಯ ಕಾದಂಬರಿಗಳನ್ನು ಕೊಟ್ಟ ತ.ರಾ.ಸು. ಅವರಿಗೆ ಕನ್ನಡ ಓದುಗರು ಅಪಾರ ಪ್ರೀತ್ಯಾದರ ತೋರಿದರು. ತ.ರಾ.ಸು. ಕನ್ನಡ ಸಾಹಿತ್ಯಕ್ಕೆ ಹಲವು ಉತ್ಕೃಷ್ಟ ಕೃತಿಗಳನ್ನು ನೀಡಿದ್ದಾರೆ. ಆದರೆ ಕನ್ನಡ ವಿಮರ್ಶಕರು ಮಾತ್ರ ತ.ರಾ.ಸು. ಅವರ ಸಾಹಿತ್ಯವನ್ನು ನಿರ್ಲಕ್ಷಿಸುತ್ತಲೇ ಬಂದಿದ್ದಾರೆ. ವಿಮರ್ಶಕ ಮಹಾಶಯರು ತ.ರಾ.ಸು. ಜನಪ್ರಿಯ ಲೇಖಕರೆಂದು ಅವಜ್ಞೆ ತೋರಿಸುತ್ತಾ ಬಂದಿದ್ದರಿಂದ ಅವರ ಉತ್ತಮ ಕೃತಿಗಳಿಗೆ ಅನ್ಯಾಯವಾಗಿದೆ.

ತ.ರಾ.ಸು. ಅವರಿಗೆ ಎಲ್ಲ ರೀತಿಯ ಅರ್ಹತೆಯಿದ್ದೂ ಸಿಗಬೇಕಾದ ಗೌರವ ಸಿಗಲಿಲ್ಲವೆಂಬುದು ವಿಷಾದನೀಯ. ಅವರ “ದುರ್ಗಾಸ್ತಮಾನ” ಕಾದಂಬರಿಗೆ 1985ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮರಣೋತ್ತರವಾಗಿಯಾದರೂ ದೊರೆತಿದ್ದು ಅವರ ಅಭಿಮಾನಿಗಳಿಗೆ ಕೊಂಚ ಸಮಾಧಾನ ನೀಡಿದ ಸಂಗತಿ.

ಬಹುಶಃ  ಅವರಂತಹ ಮಹಾನ್ ಲೇಖಕರು ಮಲಯಾಳಂ, ಮರಾಠಿ ಅಥವಾ ಬಂಗಾಳಿ ಭಾಷೆಯಲ್ಲಿದ್ದರೆ ಅವರ ಸ್ಥಾನಮಾನವೇ ಬೇರೆ ರೀತಿಯಾಗಿರುತ್ತಿತ್ತು.  ಅವರಂತಹ ಮಹಾನ್ ಲೇಖಕರ ಜನ್ಮಶತಮಾನೋತ್ಸವದ ಬಗೆಗೆ ನಮ್ಮ ನಾಡಿನ ಜನರು ತೋರಿಸಿದ ಉದಾಸೀನ ನೋಡಿದರೆ ವಿಷಾದವಾಗುತ್ತದೆ.

ತ.ರಾ.ಸು. ಅವರು ಕನ್ನಡ ನಾಡು – ನುಡಿಗಾಗಿ ಗಂಧದ ಕೊರಡಿನಂತೆ ಜೀವ ತೇಯ್ದಿದ್ದಾರೆ. ಅವರು ಕನ್ನಡಕ್ಕಾಗಿ ಮಾಡಿದ ಸೇವೆ ಬೆಲೆ ಕಟ್ಟಲಾಗದ್ದು.

*****

ಅಡಿಟಿಪ್ಪಣಿಗಳು
* ‘ಹೃದಯ ಮಂಥನ’ (ಪುಟ 95-105, “ತ.ರಾ.ಸು. ಬದುಕು ಬರಹ”)
** ‘ಯಜಮಾನರು – ಜೀವನ’ (ಪುಟ 93-94, “ತ.ರಾ.ಸು. ಬದುಕು ಬರಹ”)
*** ‘ಆತ್ಮಕತೆಯ ಕತೆ’ (ಪುಟ X, “ಹಿಂತಿರುಗಿ ನೋಡಿದಾಗ”)