ಶ್ರೀ ಪುತಿನ ಅವರೊಂದಿಗೆ ಮಾತಾಡುವಾಗೊಮ್ಮೆ ನಾನು ‘ಮಲೆದೇಗುಲ’ವನ್ನು ಮೆಚ್ಚಿ ಪ್ರಸ್ತಾಪ ಮಾಡಿದೆ. ಅದಕ್ಕೆ ಅವರು ‘ಅದೊಂದು ಅಲೆ ಅಷ್ಟೇ, ಶ್ರೀ ಹರಿಚರಿತೆ ಕಡಲು’ ಎಂದರು. ‘ಶ್ರೀಹರಿಚರಿತೆ ನನ್ನ ಮ್ಯಾಗ್ನಂ ಓಪಸ್, ಅದನ್ನು ಓದಿದ್ದೀಯೊ’ ಎಂದು ಕೇಳಿದರು. ನಾನು “ಓದಿದೀನಿ. ಅದರಲ್ಲಿ ‘ಭಾಂಡೀರ ದರ್ಶನ’ ಎಂಬ ಅಧ್ಯಾಯ ಬಹಳ ಇಷ್ಟವಾಯಿತು” ಎಂದೆ.

ಕವಿತೆಯ ಮುಖ್ಯಗುಣ ಏನು? ಅದು ಮೊದಲೇ ಯೋಚಿಸಿ ಆಗಿದ್ದಲ್ಲ ಎನ್ನುವುದು. ಮಹಾಕಾವ್ಯಗಳಲ್ಲಿ ಈ ಗುಣ ಕಷ್ಟವೇನೋ. ಪುತಿನ ಅವರ ಕಾವ್ಯ ಸಮಗ್ರದಲ್ಲಿ ಅವರು ಒಂದು ಅಲೆ ಎಂದು ಕರೆಯುವ ‘ಮಲೆದೇಗುಲ’ ನನಗೆ ಬಹಳ ಆತ್ಮೀಯವಾದದ್ದು. ಬಿಡಿಕವಿತೆಯೂ ಅಲ್ಲ, ಮತ್ತೊಂದು ಕಡೆ ಅವರ ಗೀತರೂಪಕಗಳು, ಹರಿಚರಿತೆಯಂಥ ದೊಡ್ಡ ಸಂರಚನೆಗಳೂ ಅಲ್ಲದ ಹತ್ತು ಹತ್ತು ಸಾಲುಗಳ ೫೧ ಪದ್ಯಗಳ ಈ ಗುಚ್ಛ ಬಹಳ ಮುಖ್ಯವಾದುದೇನನ್ನೋ ಗಾಢವಾಗಿ ಹೇಳಿದೆ ಎಂದು ನನ್ನ ಭಾವನೆ.

ಬೇಂದ್ರೆಯವರ ‘ಸಖೀಗೀತ’ ಮತ್ತು ಪುತಿನರ ‘ಮಲೆದೇಗುಲ’ ಕನ್ನಡದ ಎರಡು ‘ವಿಶ್ವಾಸಾರ್ಹ’ ಕವನಗಳು ಎಂದು ನಾನು ತಿಳಿದಿದ್ದೇನೆ. ಅಂದರೆ ಗೆಲ್ಲುವ ಕುದುರೆಗಳು ಅವು. ‘ಮಲೆದೇಗುಲ’ ಇರುವಿನ ಬಗ್ಗೆ, ಅನುಭವದ ಮೂಲ ಧಾತುವಿನ ಬಗ್ಗೆ ಸೂಚಿಸಿದರೆ, ‘ಸಖೀಗೀತ’ ಮನುಜ ಬದುಕಿನ ಸುಖ ದುಃಖಗಳು ಪ್ರೀತಿಯ ಸಾಧನೆಯಿಂದ ‘ಹಿಗ್ಗು’ ಆಗುವುದನ್ನು ಸೂಚಿಸುತ್ತದೆ. ‘ಮಲೆದೇಗುಲ’ ಮುಖ್ಯವಾಗಿ ನಿಜ ಅನುಭವದ ಅಂದರೆ ಮನಸ್ಸಿನ ಗಾಢ ಕೇಂದ್ರದ ಸ್ಪರ್ಶದಿಂದ ನಾವು ಪಡೆಯುವ ‘ಶಮೆ’ ಅಥವಾ ಸಮಾಧಾನದ ಬಗ್ಗೆ ಇದೆ. ಆಳವಾಗಿ ಚಿಕಿತ್ಸಕವಾಗಿರುತ್ತ, ಕವಿತೆ ಎಂಬುದು ‘ಕೈಬಿಡದ ಧರ್ಮ’ದಂತಿರುವುದರಿಂದಲೇ ‘ಮಲೆದೇಗುಲ’ ಉಳಿಯುತ್ತದೆ, ಗೆಲ್ಲುತ್ತದೆ. ಈ ‘ಶಮೆ’ ಮತ್ತು ಸೃಷ್ಟಿಯಲ್ಲಿರುವ ‘ನಲವು’ ಮಲೆದೇಗುಲದ ವಸ್ತುವಾಗಿರುವುದರಿಂದ ಸಖೀಗೀತದೊಂದಿಗೆ ಜೊತೆಗೂಡಿ ಅವೆರಡು ಕನ್ನಡದ ಒಂದೇ ಪ್ರಿಯಕವಿತೆಯೆಂಬಂತೆ ಮನಸ್ಸಿಗಿಳಿಯುತ್ತವೆ.

*****

ಮೇಲುಕೋಟೆಯ ಬೆಟ್ಟದ ಮೇಲಿರುವ ದೇಗುಲದ ಬಗ್ಗೆ ಈ ಕವನಗುಚ್ಛ ಇರುವುದು. ಮೇಲುಕೋಟೆ ವಿಶಿಷ್ಟವಾದ ಊರು. ಬೆಟ್ಟದ ಮೇಲಿರುವ ಆ ಊರಿನ ಕೊಳಗಳು, ಮಂಟಪಗಳು, ಬಂಡೆಗಳು ಒಟ್ಟಾರೆ ಒಂದು ಪೇಂಟಿಂಗ್‌ನ ಹಾಗೆ ಅಥವಾ ಶಿಲ್ಪದ ಹಾಗೆ ಚಿತ್ರವತ್ತಾಗಿವೆ. ಅಥವಾ ಅಲ್ಲಿನ ತಿರುವು ಮುರುವು ಏರಿಳಿತಗಳಲ್ಲಿ ಗಾಳಿ- ಆಗಸಗಳು ಸುಳಿ ಸುತ್ತಿ ಒಂದು ನಾದವನ್ನು ಹೊರಡಿಸುತ್ತಿರುವಂತೆ ಸಂಗೀತಮಯವಾಗಿದೆ. ಅಂಥ ಕಲಾತ್ಮಕವಾದ ಊರು ಮತ್ತು ಬೆಟ್ಟದ ಮೇಲಿರುವ ದಿವ್ಯದ ಆಹ್ವಾನದಂಥ ಆ ದೇಗುಲ ಕವಿ ಪುತಿನರನ್ನು ಸೆಳೆದಿರುವುದರಲ್ಲಿ ಮತ್ತು ಅವರ ಮನಸ್ಸನ್ನು ರೂಪಿಸಿರುವುದರಲ್ಲಿ ಆಶ್ಚರ್ಯವಿಲ್ಲ.

ದೇವರನ್ನು ನಾವು ಅದ್ವಿತೀಯ ಎನ್ನುವುದು ಅವನು ಭಾವ ಮಾತ್ರವೇ, ಅವನಿಗೆ ವಸ್ತು-ಪ್ರತಿರೂಪ ಇಲ್ಲ ಎಂಬ ಅರ್ಥದಲ್ಲಿ. ಹೊರಗೆ ತೋರಲಾಗದು, ಆದರೆ ಅದನ್ನು ಸೂಚಿಸಬಹುದು ಅಷ್ಟೇ. ವಸ್ತುಗಳು ಬೆಳಕನ್ನು ತಡೆದು ತಮ್ಮ ಬಣ್ಣ ಬಣ್ಣಗಳ ಇರುವಿಕೆಯಿಂದ ಬೆಳಕನ್ನು ಗೋಚರಗೊಳಿಸುವ ಹಾಗೆ, ಅಥವಾ ಪ್ರತಿಮೆ, ಅಲಂಕಾರಗಳು ಕವಿತೆಯನ್ನು ಸೂಚಿಸುವ ಹಾಗೆ. ಚಿಹ್ನೆಗಳೊಳಗೇ ದೇವರಿದ್ದಾನೆ ಎಂದು ಭಾವಿಸುವುದು ಶಬ್ದ ಪ್ರತಿಮೆ ಅಲಂಕಾರಗಳೊಳಗೇ ಕವಿತೆಯಿದೆ ಎಂದುಕೊಂಡಂತೆ.(‘ಕವಿತೆ ನೀನೇಕೆ ಪದಗಳಲಿ ಅವಿತೆ’ ಎನ್ನುವುದು ಪ್ರಾಸದ ಖುಷಿಗಷ್ಟೇ).

ವೈಚಾರಿಕ ಅರ್ಥ ಮೀರಿದ (ಆಧುನಿಕ ಮನುಷ್ಯನಿಗೆ ಅಸಾಧ್ಯವಾದ ಸವಾಲು ತಾನೆ ಇದು?) ವಿಧಿಗಳು, ಕಲ್ಪಗಳು, ಉತ್ಸವಗಳು ಆ ಭಾವವನ್ನು ಉತ್ಪಾದಿಸುತ್ತವೆ-ಸಾಮುದಾಯಿಕವಾಗಿ. ಒಂದು ಕವಿತೆ, ಹಾಡು, ಚಿತ್ರ ಒಬ್ಬ ವ್ಯಕ್ತಿಗೆ ಮಾಡುವುದನ್ನೇ ವಿಧಿ, ಕಲ್ಪಗಳು ಸಮೂಹಕ್ಕೆ ಸಾಧ್ಯ ಮಾಡುತ್ತವೆ. ಪ್ರಾಪಂಚಿಕವಾದ ಎಚ್ಚರದ ಸ್ಥಿತಿಯಲ್ಲಿ ಮನುಷ್ಯನಿಗೆ ಲಾಭ-ನಷ್ಟ, ಕ್ಷೇಮ ಹಾನಿಗಳ ಚಿಂತೆಯಷ್ಟೇ. ಆದರೆ ಈ ಭಯವನ್ನು ಮೀರಿದ ಒಂದು ಭಾವದ ಸ್ಥಿತಿಗಾಗಿ ಅವನ ಹಂಬಲಿಕೆ ಇದ್ದೇ ಇರುತ್ತದೆ. ತನ್ನ ವ್ಯಕ್ತಿ -ಅಹಮಿಕೆಯನ್ನು ಕಳೆದುಕೊಂಡು ಸಮುದಾಯದೊಂದಿಗೆ ಕೂಡಿಕೊಳ್ಳುವ ಒಂದು ದೊಡ್ಡದಾದ್ದರಲ್ಲಿ ತನ್ನ ಸೀಮಿತ ಗುರುತಳಿಯುವ ‘ರಸಸ್ಥಿತಿ’ ಅದು. ಆ ಸ್ಥಿತಿಗೆ ಸಂಕೇತ ಈ ಕವಿಗೆ ದೇಗುಲ. ಆ ಭಾವದ ಮೋಡಗಳನ್ನು ತಡೆದು ಮಳೆಯಾಗಿ ಇಳಿಯುವಂತೆ ಮಾಡುವ ಮಲೆಯಂತೆ ಈ ದೇಗುಲ.

ಪುಷ್ಕರಣಿಯಿಂದ ಕಾಣಿಸುವ ಚೆಲುವ ನಾರಾಯಣಸ್ವಾಮಿ ಸಂಕೇತದಿಂದಷ್ಟೇ ಅಮೂರ್ತವೆಂಬುದು ಮೂರ್ತವಾಗಲು ಸಾಧ್ಯ. ಪ್ರೀತಿ ಎನ್ನುವ ಅಮೂರ್ತವಾದ ಭಾವನೆ ಮೂರ್ತಗೊಳ್ಳುವುದು ತಾನು ಪ್ರೀತಿಸುವ ಒಬ್ಬ ವ್ಯಕ್ತಿಯಿಂದಲೇ, ತಾಯ್ತನ ಎನ್ನುವುದು ಮೂರ್ತವಾಗುವುದು ತನ್ನ ತಾಯಾಗಿರುವ ಒಂದು ಹೆಣ್ಣಿಂದಲೇ-ಹೀಗೆ. ಒಬ್ಬ ವ್ಯಕ್ತಿ ಅಥವಾ ಸಮುದಾಯ ಆಶ್ರಯಿಸುವ ಸಂಕೇತವನ್ನು ನಿರಾಕರಿಸಲು ಬರುವುದಿಲ್ಲ. ಅದು ಯಾಕಾಗಿ ಆ ಸಂಕೇತವನ್ನು ಆಶ್ರಯಿಸಿದೆ ಎಂದು ನೋಡಬೇಕಷ್ಟೇ.

ಕವಿತೆಯಾದರೂ ಪ್ರೇಮ, ಮದಿರೆ, ಮೃತ್ಯು, ಕ್ರಾಂತಿ, ದೇವರು ಯಾವುದನ್ನೂ ಸಾಂಕೇತಿಕವಾಗಿ ಆಶ್ರಯಿಸುವುದು ತಪ್ಪಲ್ಲ. ಮಲೆಯ ದೇಗುಲ ಎಂದಾಕ್ಷಣ ಅತ್ಯಾಧುನಿಕನ ಮನಸ್ಸು ತಿರುಗಿದ್ದಾದರೆ ಅದಕ್ಕೆ ಅಸಹನೆಯ ದೋಷವೇ ತಟ್ಟುತ್ತದೆ. ಏನಿದು ಈ ದೇಗುಲ ಎಂದು ಕವಿಯೇ ಆಶ್ಚರ್ಯ ಪಡುತ್ತಾರೆ:

‘ಮನೆಯಲ್ಲ ಮಠವಲ್ಲ ರಾಜನರಮನೆಯಲ್ಲ
ನಾಟ್ಯಮಂದಿರ ಛಾತ್ರ ಸತ್ರವಲ್ಲ
ಜೀವ ಬಯಸುವ ಭೋಗದುಪಕರಣವಲ್ಲವಿದು
ಆವರ್ಥ ಘಟಿಸಿತೀ ತೆರ ಮಲೆಯ ಕಲ್ಲ?’

ಅರ್ಥ- ಇಂಗಿತ ಮೊದಲು, ಅದರ ಒತ್ತಡದಿಂದ ಸಮಾಜದಲ್ಲಿ ಒಂದು ಸಂಸ್ಥೆ ಹುಟ್ಟುತ್ತದೆ. ಜನರ ಚಹಾ ಕುಡಿಯುವ ಬಯಕೆಯಿಂದಲೇ ಊರಲ್ಲಿ ಚಾದಂಗಡಿ ತೆರೆಯುತ್ತದಲ್ಲ ಹಾಗೆ. ಎಲ್ಲ ಸಂಸ್ಥೆಗಳಿಗೂ ಒಂದು ಪ್ರಯೋಜನವೆಂಬುದಿದೆ. ಆದರೆ ದೇಗುಲ ಎನ್ನುವುದು ಏನದು? ಲೌಕಿಕವಾಗಿ ನಿಷ್ಪ್ರಯೋಜಕತೆಯ ಒಂದು ಪ್ರಯೋಜನಕ್ಕೆಂತಲೇ ಇದು ಘಟಿಸಿರುವುದೇ?

ಭಾವನೆ ಮತ್ತು ಚಿಂತನೆಗಳ ಮೂಲ ಒಂದೇ- ಮನಸ್ಸಿನ ಚಲನೆ. ಅವು ಎರಡಾಗಿ ಒಡೆದುಕೊಳ್ಳುವ ಮುಂಚಿನ ಕಾಂಡದಂಥದು ಅದು. ಆ ಚಲನೆಯ ಕುರುಹೆಂಬಂಥ ಸಾಲು-‘ಆವರ್ಥ ಘಟಿಸಿತೀ ತೆರ ಮಲೆಯ ಕಲ್ಲ?’ ಈ ಆಂತರಿಕತೆಯೇ ಪುತಿನ ಕಾವ್ಯದ ಲಕ್ಷಣ: ‘ಜಗದಾವ ವಸ್ತುವೂ ಇದರಾಸೆ ರೇಖಿಸದು’; ‘ನಿನ್ನ ಹಸಿರಾರುವುದು ನುಡಿತೇರು ಹರಿಯೆ’. ಪುತಿನ ಕವಿತೆ ಬರೀ ಸೌಂದರ್ಯಸೃಷ್ಟಿಯದಲ್ಲ, ಅಥವಾ ಮೊದಲೇ ನಿರ್ಧಾರಗೊಂಡ ಭಕ್ತಿಯದಲ್ಲ. ಮನಸ್ಸಿನ ಸೃಷ್ಟಿಯದು. ಲೋಕವೆಂಬುದು ಮಾಧ್ಯಮ-ಮನಸ್ಸನ್ನು ಎತ್ತಿ ತೋರಿಸಲು; ನಾದಕ್ಕೆ ಕೊಳಲಿನ ಹಾಗೆ. ಇದು ಪುತಿನ ಸಿದ್ಧಾಂತ ಸಾರ.

ಗೋಡೆಯ ಮೇಲಿನ ಕೆತ್ತನೆದೇಗುಲವನ್ನು ನೋಡುತ್ತ ನೋಡುತ್ತ ಅದು ಎಬ್ಬಿಸುವ ನಾನಾ ಭಾವನೆಗಳಿಂದ ಅದರ ಅನುಭವವನ್ನು ಸ್ಥಿತಗೊಳಿಸುತ್ತಾರೆ ಕವಿ. ಉದಾಹರಣೆಗೆ ಅದು -‘ವಾಸ್ತವದಲ್ಲಿ ಅಲೆದಾಡಿದ ನಮ್ಮ ಇರವು ಆ ದಣಿವಿನಿಂದ ಒದಗಿದ ಅರಿವಿನ ಕೊರತೆಯಿಂದಲೇ ಸುಳಿಯೊಡೆದ ಅಶಾಂತಿಗೆ ಮದ್ದು’ ಅಥವಾ ‘ಹಗಲಿರುಳಿನಂತೆ ಸೊಗಸು ಮತ್ತು ಅಳಲುಗಳು ಬದಲಾಗುತ್ತ ತಿರುಗುವ ತಿರೆಯ ನಿಶ್ಚಲವಾದ ಕೇಂದ್ರ’ ಎಂದು ಮೊದಲ ಪದ್ಯದಲ್ಲಿ ಬಣ್ಣಿಸುತ್ತಾರೆ. ಮತ್ತು
‘ಹಣ್ಣಿನಿಂದ ಮರ ನಮ್ರ
ಮೋಡ ಹನಿಯಿಂದ ನಮ್ರ
ಜ್ಞಾನಿ ಅರಿವಿಂದ ನಮ್ರ
ಆರ್ತನಾದವನು ಅಳಲಿಂದ ನಮ್ರ
ಭಾವಗಳು ಸಾಂದ್ರವಾಗಿರುವಾಗ ಸತ್ಕವಿಯು ನುಡಿನಮ್ರ
ಹೀಗೆ ಎಲ್ಲರ ಅಹಂಕಾರವನ್ನೂ ಕಳೆದು ದೊಡ್ಡದೆನಿಸಿದ ಗುಡಿ
ಯಾವುದರಿಂದ ನಮ್ರ?
ಅದು ಎಲ್ಲರಿಗೂ ಮನಸ್ಸನ್ನು ಮರಳಿಸಿ ಮರಳಿಸಿ ನಮ್ರ’

ದೇಗುಲದ ಮೂರ್ತಿ ಎನ್ನುವುದು ವ್ಯಕ್ತಿ ತನ್ನನ್ನು ಮೀರಲು ಮಾಡಿಕೊಂಡ ಉಪಾಯ:

ಜಡದಿಂದ ಜೀವಕ್ಕೆ ಜೀವದಿಂದ ಆತ್ಮಕ್ಕೆ ಇರವನ್ನು ಎತ್ತರಿಸುವ ಆಯಸ್ಕಾಂತದಂಥ ಜಾನಪದ ಹೃದಯದ ವಿದ್ಯುತ್ ಶಕ್ತಿ ಅದು. ಮಾನವ ಕೇಂದ್ರಿತ ಮನುಷ್ಯತ್ವವನ್ನು ಅದರ ಪರಿಮಿತ ವೃತ್ತದಿಂದ ಬಿಡುಗಡೆಗೊಳಿಸುವಂಥದು. ಇಡೀ ಸಮುದಾಯವೇ ಈ ಶಕ್ತಿಯನ್ನು ಸೃಷ್ಟಿಸುತ್ತ ಅದಕ್ಕೆ ಸ್ವಯಿಚ್ಛೆಯಿಂದ ಒಳಗಾಗುತ್ತಿರುವುದನ್ನು ಕವಿ ಕಾಣುತ್ತಾರೆ. ಗುಹೆಯ ಒಳ ಹೊಕ್ಕು ಕಳೆಗೊಂಡು ಹೊರಬರುವ ಪ್ರವಾಹದಂಥ ಅವರನ್ನು ಕಾಣುತ್ತ ಕವಿ ಮುದ ತಾಳುತ್ತಾರೆ. ವಿಗ್ರಹ-ಗುಡಿ-ಜನ ಎಂದು ಕಾಣುವ ಅದು, ಜನ-ಗುಡಿ-ವಿಗ್ರಹವೂ ಹೌದು. ಆ ಪ್ರವಾಹಕ್ಕೆ ಕವಿ ಕೊಟ್ಟುಕೊಳ್ಳುವುದು-“ಕುಲವಿದ್ಯೆ ಸಂಸ್ಕಾರ ಹಿರಿತನಗಳೆಣಿಕೆಗಳ ಕಳೆದು ತಿಳಿಮೆಯೊಳು ಹರಿವೆನ್ನ ಚೇತನ”ವಾಗಿ.

ಇನ್ನು ಗರ್ಭಗುಡಿಯ ಕತ್ತಲೆಯೇ ನಿಗೂಢವಾದಂಥದು- ಯಾವುದೇ ಅನುಭವದ ಆಳದ ಮನಸ್ಸಿನ ಕೇಂದ್ರದಂಥ ‘ನೋಡುಗ-ನೋಟ’ ಕರಗಿರುವ ಸ್ಥಿತಿ ಅದು. ಅದನ್ನು ‘ಸೋಂಕಲರಿವೇ ಕರಗಿ ನೆನಹೆಂಬ ನೆರಳ’ಷ್ಟೇ ಉಳಿಯಬಹುದು. ಆ ಕತ್ತಲೆಯನ್ನು ಬೆಳಗಲು ಹಚ್ಚಿದ ಬೆಳಕು ಸನಿಹವಷ್ಟನ್ನೇ ಬೆಳಗಿ ಕಡೆಗೆ ಕೈಚೆಲ್ಲಿಬಿಡುತ್ತದೆ. ತಾನು ಉಳಿಯಲೆಂದು, ಮೆರೆಯಲೆಂದು ಚಿತ್ತವಿಜ್ಞಾನದಲ್ಲಿ ತೊಳಲುತ್ತದೆ; ಸಣ್ಣಾಗಲೆಂದು, ಅಳಿಯಲೆಂದು ಪರದ ಚಿಂತೆಯಲ್ಲಿ ಬಳಲುತ್ತದೆ. ಆ ಎರಡೂ ಚಿತ್ತವೃತ್ತಿಗಳೇ ಆದ್ದರಿಂದ ತೊಳಲಾಟ-ಬಳಲಾಟಗಳೇ. ಅವೆರಡರ ನಿಲುಗಡೆ ಈ ಕತ್ತಲಿನಲ್ಲಿ. ಇದು ಅಲ್ಲಮಪ್ರಭು ಗುಹೇಶ್ವರಾ ಎಂದದ್ದೇ ಇರಬಹುದಲ್ಲವೆ? 

ಆದರೆ ಪುತಿನ ಮನಸ್ಸು ಮೂರ್ತತೆಗೆ ಒಲಿದದ್ದು. ಹಾಗಾಗಿ ಮೇಲೆ ಹೇಳಿದ ಚಿತ್ತ ವಿರಮಿಸುವ ಕಾಳವದು, ಶ್ಯಾಮನೆನೆ ಹೆಸರದಕೆ, ಅದರ ಕೈಯೊಳು ಜಗವ ನಾದಿಸುವ ಮುರಳಿ;

ಇದೀಗ ಭಾಷೆ ಜರುಗಿಸಿದ ಪವಾಡದಂಥ ಕವಿತೆ ಸಾಲು! ಆ ಕ್ಷಣ ಅಲ್ಲೇ ಹುಟ್ಟಿಕೊಂಡಿತು ಎಂಬಂಥ ಪದಗಳ ಸಾಲು. ಕತ್ತಲೆ, ಆ ಕತ್ತಲೆಗೆ ಶ್ಯಾಮ ಎಂಬ ಹೆಸರು-ವ್ಯಕ್ತಿಮೆ ಬಂದು ಬಳಿಕ ಅದರ ಕೈಯಲ್ಲಿ ಜಗತ್ತನ್ನೇ ಸೃಜಿಸಿದ ಕೊಳಲು ಕಂಡಿತು. ‘ನಾದಿಸುವ’ ಎಂಬ ಶಬ್ದ ಕಾವ್ಯಸುಖದ ತೀಕ್ಷ್ಣ ಬಿಂದು!

ಇಂಥ ಮನ ಸೆಳೆಯುವ ಅಭಿವ್ಯಕ್ತಿಗಳಿಂದ ‘ಮಲೆದೇಗುಲ’ ಸಮೃದ್ಧವಾಗಿದೆ. ಅದಕ್ಕೆಂದೇ ಕುವೆಂಪು ‘ಮಲೆದೇಗುಲ’ವನ್ನು ‘ಕ್ರಿಸ್ಟಲೈಜ್ಡ್ ಥಾಟ್’ ಎಂದು ಕರೆದದ್ದು.

‘ಹುಲ್ಲುಗರಿಯ ಬೆಳೆಯುವಿಕೆಯ ಬಿಗಿದುಸಿರಲ್ಲಿ ಆಲಿಸುತ
ಬಾಂದಳದ ಆಳವನ್ನು ಅಳೆಯಲು ಹವಣಿಸುತ
ಶ್ವಾಸ ನಿಶ್ವಾಸದಲ್ಲಿ ಒಳ ಹೊಕ್ಕು ಹೊರ ಬರುತ
ಲೋಮ ನಾಳಗಳಲ್ಲಿ ರಕ್ತಕಣದೊಡನೆ ಚಲಿಸುತ್ತ
ತನ್ನ ಮೈ ಮೊದಲುಗೊಂಡು ಇಡೀ ಜಗತ್ತೇ ಸಂಭ್ರಮದಲ್ಲಿ
ತನಗೆ ಹೊರತಾಗಿ ನಡೆಯುತ್ತಿದೆ
ಇಲ್ಲಿ ನಾನಾರು ಎಂಬ ಖೇದ ನನಗಾಗುತ್ತಿದೆ.’

ಮತ್ತು ಇದು ತರುತ್ತಿರುವುದು ಬಿಡುಗಡೆಯನ್ನೇ: ‘ನಿನ್ನ ಪರಿವೆಯೇ ಇಲ್ಲದ ರೀತಿ ತೊಲಗುತ್ತಿದೆ ನಿನ್ನ ಹೇವ’

ಅಮೂರ್ತವಾದ ಭಾವವೆನ್ನುವುದು ಇಂದ್ರಿಯ ಗ್ರಾಹ್ಯವಾದ ವಿಷಯದಂತಾಗಬೇಕು-ಇದು ಪುತಿನ ಕಾವ್ಯ ಜಿಜ್ಞಾಸೆ. ಮತ್ತು ವಿಷಯವೆನ್ನುವುದು ಅದೇ ಆಗಿರದೆ ಭಾವದಂತಾಗಬೇಕು. ಕವಿತೆಯ ಸಾಲು ಭಾವವೂ ವಿಷಯವೂ ಎರಡೂ ಆದ ಸಂವೇದನೆಯಾಗಬೇಕು. ಒಳಗೂ ಅಲ್ಲದ ಹೊರಗೂ ಅಲ್ಲದ ನಡುವಿನ ಭೂಮಿಕೆಯಲ್ಲಿ ಕವಿತೆ ಜನಿಸುತ್ತದೆ.

ಪುತಿನ ರಿಗೆ ದೇವರೆಂಬುದು ಇಷ್ಟೇ. ಅದು ಕವಿತೆಯ ಅನುಭವಕ್ಕಿಂತ ಹೆಚ್ಚಾದುದಲ್ಲ. ಕವಿತೆ ಕೂಡ ಇದಕ್ಕಿಂತ ಕಮ್ಮಿಯಾದುದೂ ಅಲ್ಲ. ನಾವು ಉಸಿರಾಡುವ ಈ ಲೋಕದಲ್ಲೇ ಒಳಗೊಳ್ಳಲಾಗದ ಅಂದರೆ ಕವಿತೆಯಲ್ಲದ ಯಾವ ಊಹಾಪೋಹವೂ ಅವರ ದೇವರ ಅಥವಾ ಆಧ್ಯಾತ್ಮದ ಪರಿಕಲ್ಪನೆಯಲ್ಲಿಲ್ಲ. ಅಂದರೆ ಇಲ್ಲಿ ಸಂಭವಿಸಬಹುದಾದ್ದಲ್ಲದೆ ಮಿಕ್ಕುದು ಯಾವುದಕ್ಕೂ ಅವರಲ್ಲಿ ಮಾನ್ಯತೆಯಿಲ್ಲ. ಆ ದೃಷ್ಟಿಯಿಂದ ಬರೀ ವಾಸ್ತವ ಎಂದು ನಾವು ಜಡಗೊಳಿಸುವಂಥ ಅನುಭವವನ್ನು ಮೀರಿದ ‘ಹೊಳಪ’ನ್ನು ಕೂಡ ಅವರು ಕವಿತೆಯ ಬೊಗಸೆಯಲ್ಲಿ ಹಿಡಿದಿರಿಸಿರುವುದೇ ಮಲೆದೇಗುಲ.

(ಫೋಟೋಗಳು:ರಶೀದ್)