ಕೆಲವು ಸಾಲುಗಳು ಹುಟ್ಟಿಸುವ ಬೆರಗು ಮಾತ್ರ ಸಾಕು ಒಂದೀಡಿ ಕವಿತೆಯನ್ನು ಓದಲು. ಬಿಡಿಬಿಡಿಯಾಗಿ ಎದೆಹೊಕ್ಕುವ ಸಾಲುಗಳು ಮತ್ತೆಂದೋ ಯಾವುದೋ ಅನುಭವದಲ್ಲಿ ಯಾರದ್ದೋ ಸಾನಿಧ್ಯದಲ್ಲಿ ಪೂರ್ಣಗೊಳ್ಳುತ್ತವೆ. ಅವಳಲ್ಲಿ ಬಿಡಿಬಿಡಿಯಾಗಿದ್ದ ಹೂಗಳು ಅವನು ಸಿಕ್ಕಿದಾಗ ಮಾಲೆಯಾಗುವ ಸೋಜಿಗದಂತೆ! ಬಿಡಿಸಲಾಗದ ಅಚ್ಚರಿ ಇದು. ಅಚ್ಚರಿಯೇ ಪ್ರೇಮ. ಅದೇ ಕವಿತೆ. ಅದಕ್ಕೆ ವಿಶೇಷವಾದ ವ್ಯಾಖ್ಯಾನಗಳಿಲ್ಲ. ತರ್ಕಕ್ಕಂತೂ ಆಸ್ಪದವಿಲ್ಲ. ಆ ಅಚ್ಚರಿ ಬೆರಗೂ ಓದುಗನೆದೆಯಲ್ಲೂ ಹುಟ್ಟಿದರೆ ಆ ಕವಿತೆ ಅವನದ್ದು.
ಕಾವ್ಯದ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ ನಿಮ್ಮ ಓದಿಗೆ
“ಮರದಿಂದ ನಿಸೂರಾಗಿ ಕಳಚಿ ಬೀಳುವಾಗಲೆ ಗಾಳಿಯ ಅಲೆಗೆ ತುಸುವೇ ಸಿಕ್ಕಿ ನಿರ್ಗಮನವನು ನರ್ತಿಸುವ ಎಲೆಯಂಥ ಕವಿತೆ” ಅನ್ನುತ್ತಾರೆ ಜಯಂತ್ ಕಾಯ್ಕಿಣಿ.
ನಿರ್ಗಮನಕ್ಕೂ ನರ್ತನದ ಮೂಲಕ ಬೀಳ್ಕೊಡುಗೆಯ ಅನುಭವವನ್ನು ಕವಿತೆ ಕಟ್ಟಿಕೊಡುತ್ತದೆ. ಕವಿತೆ ಆ ಕ್ಷಣದ ಧ್ಯಾನ. ಓದುವಾಗ ಆ ಎಲೆಯ ನರ್ತನ ಕಣ್ಣಿಗೆ ಕಟ್ಟಿದರೆ ಕವಿತೆ ದಕ್ಕುತ್ತದೆ. ಇಲ್ಲದಿದ್ದರೆ ಎಲೆಯೊಂದು ಉದುರುತ್ತದೆ.
ಎಷ್ಟು ಚಂದದ ವ್ಯಾಖ್ಯಾನವನ್ನು ಕಣ್ಣಿಗೆ ಕಾಣಿಸುವಂತೆ ಕಟ್ಟಿಕೊಡುತ್ತಾರೆ ಜಯಂತ್ ಕಾಯ್ಕಿಣಿ. ಎಲೆ, ಗಾಳಿ ಮತ್ತು ಎಲೆಯ ನರ್ತನ ಕಣ್ಣೆದುರೇ ಬಂದ ಹಾಗೆ. ಪ್ರತೀ ಸಲ ಕವಿತೆ ಬರೆದು ಮುಗಿಸಿ ಮತ್ತೆ ಅದನ್ನು ಓದುವಾಗ ಇದು ಕವಿತೆಯಾ ಅಂತ ಅನ್ನಿಸುವ ನನ್ನದೇ ಗೊಂದಲಕ್ಕೆ ಇನ್ನೂ ಉತ್ತರ ಕಂಡುಕೊಳ್ಳುವ ಹಾದಿಯಲ್ಲಿ ಮತ್ತೆ ಮತ್ತೆ ಬೇರೆ ಬೇರೆ ಕವಿಯ ಕವಿತೆಗಳು ಓದಿಸಿಕೊಳ್ಳುತ್ತಿವೆ.
ಕವಿತೆ ಅಂದರೇನು ಅನ್ನುವ ಮುಖ್ಯ ಪ್ರಶ್ನೆಗೆ ಮತ್ತೆ ಮತ್ತೆ ಬಂದು ನಿಲ್ಲುತ್ತೇನೆ. ಅದನ್ನು ಹೇಗೆ ವ್ಯಾಖ್ಯಾನಿಸುವುದು? ಅದಕ್ಕೊಂದು ಚೌಕಟ್ಟು ಇದೆಯಾ? ಕವಿತೆಯಿಂದ ಓದುಗರು ಯಾಕೆ ವಿಮುಖರಾಗುತ್ತಾರೆ? ಕವಿತೆ ಅರ್ಥ ಆಗುವುದಿಲ್ಲ, ಈ ಕವಿತೆಯ ಸಹವಾಸವೇ ಸಾಕು ಅನ್ನುವವರ ಪ್ರತಿನಿಧಿಯಾಗಿ ಮನೋರಮೆ ‘ಪದ್ಯಂ ವಧ್ಯಂ ಗದ್ಯಂ ಹೃದ್ಯಂ’ ಅಂತ ಮುದ್ದಣನಲ್ಲಿ ಹೇಳಿದಳೇ? ಅಥವಾ ಮುದ್ದಣನೇ ಇನ್ನು ಕವಿತೆಯ ಸಹವಾಸ ಸಾಕು ಅಂತ ಮನೋರಮೆಯಿಂದ ಹೇಳಿಸಿದನೇ? ಹಾಗಾದರೆ ನಿಜಕ್ಕೂ ಕವಿತೆಯನ್ನು ದಕ್ಕಿಸಿಕೊಳ್ಳುವುದು ಹೇಗೆ? ಅಡಿಗರ ಹೆಚ್ಚಿನ ಕವಿತೆ ಅರ್ಥ ಆಗದೇ ಕೊನೆಗೆ ಅನಂತಮೂರ್ತಿಯ ಮೂಲಕ ಪ್ರವೇಶ ಪಡೆದ ಹಾಗೆ ಕವಿತೆ ವಿಮರ್ಶೆಯ ಮೂಲಕ ಮಾತ್ರ ತೆರೆದುಕೊಳ್ಳುವ ಪ್ರಕಾರವೇ? ಅಥವಾ ಬೇರೆ ದಾರಿ ಇದೆಯಾ? ಅಷ್ಟಕ್ಕೂ ಕವಿತೆಯ ಬಾಗಿಲನ್ನು ತೆರೆಯುವ ಬೀಗದ ಕೈ ಯಾವುದು?
“ಪದ್ಯ ಪದವಿಲ್ಲದಿರಬೇಕು
ಹೆಜ್ಜೆ ಗುರುತು ಇಲ್ಲದೆ ಪಕ್ಷಿ ಹಾರುವಂತೆ
ಕಾಲದಲ್ಲಿ ಸ್ತಬ್ಧ ಎನ್ನಿಸಬೇಕು
ಏರುವ ಚಂದ್ರನಂತೆ
ಹೇಳಕೂಡದು
ಇರಬೇಕು”
ಅನಂತಮೂರ್ತಿಯ ಈ ಅನುವಾದಿತ ಪದ್ಯ ಕವಿತೆಯ ಕುರಿತಾಗಿ ಹೇಳುವುದು ಬಹಳ ಕುತೂಹಲಕಾರಿಯಾಗಿದೆ.
ಪದವಿಲ್ಲದಿರಬೇಕು ಅನ್ನುವುದನ್ನೂ ಪದಗಳಲ್ಲೇ ಹೇಳುವ ಅನಿವಾರ್ಯತೆ ಪದ್ಯಕ್ಕಿದೆ ಅಂದರೆ ಅದರ ಸಂಕೀರ್ಣತೆ ಎಷ್ಟು? ಹೇಳದಿದ್ದರೂ ಎಲ್ಲಾ ತಿಳಿಯಬೇಕು ಅಂದರೆ ಇಬ್ಬರ ನಡುವಿನ ಆತ್ಮೀಯತೆಯೂ ಹಾಗಿರಬೇಕು.
ಜಯಂತ ಕಾಯ್ಕಿಣಿ ಹೇಳುವ ಹಾಗೆ ‘ದೇವರಂಥ ಗೆಳೆಯ ಬೇಕು; ಹೇಳದೇನೆ ಅವನಿಗೆಲ್ಲ ತಿಳಿಯಬೇಕು’ ಅಂದರೆ ಅವನು ದೇವರೇ ಆಗಿರಬೇಕು. ಆದರೆ ಇಲ್ಲಿರುವುದು ಹೇಳಕೂಡದು ಇರಬೇಕು ಅಂತ ಹೇಳದೆಯೇ ಇರುವುದನ್ನು ಬರೆದ ಕವಿ ಮತ್ತು ಹಾರಿ ಹೋದ ಕಾವ್ಯಪಕ್ಷಿಯ ಹೆಜ್ಜೆಗುರುತುಗಳನ್ನು ಹುಡುಕುತ್ತಾ ಸಾಗುವ ಕವಿತೆಯ ಓದುಗ. ಅವನಿಗೆ ದಕ್ಕಿದ ಹಾಗೆ ದಕ್ಕಿದಷ್ಟು ಮಾತ್ರ ಕವಿತೆ. ಉಳಿದದ್ದು ಬರೇ ಪದಗಳು.
ಅರ್ಥದ ವಿಷಯಕ್ಕೆ ಬಂದಾಗ ಎಚ್ಚೆಸ್ವಿ ಹೇಳುವ ಮಾತು ಮುಖ್ಯ ಅನ್ನಿಸುತ್ತೆ ನನಗೆ. ಕವಿತೆಯನ್ನು ಅರ್ಥದ ಗೂಟಕ್ಕೆ ಕಟ್ಟಬೇಡಿ. ನಿಮಗೆ ಅರ್ಥವಾದಷ್ಟು ಮಾತ್ರ ಅರ್ಥ ಆ ಕ್ಷಣಕ್ಕೆ ಆ ಕವಿತೆಗೆ. ಇನ್ನೊಮ್ಮೆ ಯಾವತ್ತೋ ಕೈಗೆತ್ತಿಕೊಂಡಾಗ ಬೇರೆ ಅರ್ಥವನ್ನು ಬಿಟ್ಟುಕೊಟ್ಟೀತು. ಹಾಗಾದರೆ ಕವಿತೆಗೆ ಒಂದು ನಿರ್ದಿಷ್ಟ ಅರ್ಥ ಇಲ್ವಾ? ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತ ಅನ್ನುವ ಬೇಂದ್ರೆಯವರದ್ದೂ ಇದೇ ನಿಲುವಾ? ನೀ ಬರೆದ ಕವಿತೆ ಬಡಪಟ್ಟಿಗೆ ಅರ್ಥ ಆಗಲೇಬಾರದು ಯಾರಿಗೂ ಅನ್ನುತ್ತಾ ಶಿವರುದ್ರಪ್ಪನವರು ವಿಡಂಬನೆ ಮಾಡುತ್ತಾರೆ. ಅರ್ಥ ಇಲ್ಲದ ಅರ್ಥವಾಗದಂತೆ ಬರೆಯುವ ಕವಿಗಳಿಗೆ
“ಕವಿತೆ ಹುಟ್ಟಿತು ಕವಿತೆ!
‘ನ ಭೂತೋ ನ ಭವಿಷ್ಯತಿ’
ಅರ್ಥಮಾಡಿಕೊಳ್ಳಲಿ ಬಿಡು ಹಾಳಾದ ಓದುಗ,
ಅರ್ಥವಾಗಲಿಲ್ಲವೋ ಅವನೇ ಕೆಟ್ಟ
ಬರೆದ ಕವಿ ಅರ್ಥ ಹೇಳುವುದಿಲ್ಲ”
ಒಂದು ಕವಿತೆಯನ್ನು ಮತ್ತೆ ಮತ್ತೆ ಓದಿದಾಗ ಪ್ರಾಪ್ತವಾಗುವ ಲಯವೇ ನಮ್ಮನ್ನು ಕವಿತೆಯ ಅರ್ಥದೆಡೆಗೆ ಕೈಹಿಡಿದು ನಡೆಸುತ್ತದೆ ಅನ್ನುವುದನ್ನು ನನ್ನ ಓದಿನಿಂದ ಕಂಡುಕೊಂಡಿದ್ದೇನೆ. ಹಾಗಾದರೆ ಕವಿತೆಗೆ ಖಂಡಿತವಾಗಿಯೂ ಅರ್ಥವಿದೆ. ಆದರೆ ಒಂದೇ ಅರ್ಥ ಅಂತ ಖಚಿತವಾಗಿ ಮಾತ್ರ ಹೇಳಲಾಗದು. ಆ ಅರ್ಥ ಬೇರೆಬೇರೆಯವರ ಪಾಲಿಗೆ ಬೇರೆಬೇರೆಯಾಗಿರಬಹುದು.
ಅದೇ ಓದುಗ ಅದೇ ಕವಿತೆಯನ್ನು ಬೇರೊಂದು ಸಂದರ್ಭದಲ್ಲಿ ಬೇರೆಯೇ ಲಹರಿಯಲ್ಲಿ ಓದಿದಾಗ ಹೊಸ ಹೊಳಹುಗಳು ಹುಟ್ಟಬಹುದು. ಕಾವ್ಯ ಹೇಳುವುದೆಲ್ಲವೂ ರೂಪಕಗಳ ಮೂಲಕವೇ. ಕಾವ್ಯ ಮತ್ತು ನಮ್ಮ ನಡುವಿರುವ ಈ ಅಡ್ಡಗೋಡೆಯನ್ನು ಲಂಘಿಸಲು ನಡೆಸುವ ಪ್ರಯತ್ನವೇ ಕಾವ್ಯದ ನಿರಂತರ ಅನುಸಂಧಾನ.
ಒಳ್ಳೆಯ ಕವಿತೆಯಲ್ಲಿ ಬಗೆದಷ್ಟೂ ತೆರೆದುಕೊಳ್ಳುವ ನಿಗೂಢತೆ ಇರುವುದರಿಂದಲೇ ಅದು ಎಂದಿಗೂ ಹಳತಾಗುವುದಿಲ್ಲ. ರಹಸ್ಯವಾಗಿ ಅನೂಹ್ಯ ವಿಸ್ಮಯವಾಗಿ ತೆರೆದುನೋಡಲು ನಮ್ಮನ್ನು ಆಹ್ವಾನಿಸುತ್ತಾ ಅಂತರ ಕಾಯ್ದುಕೊಂಡ ತೀರದ ಬೆರಗು. ಅದು ನಿಚ್ಚಂ ಪೊಸತು! ರಾಮಾಯಣ ಮಹಾಭಾರತ ಇಂದಿಗೂ ಹೊಸಹೊಸ ವ್ಯಾಖ್ಯಾನಕ್ಕೆ ಒಳಪಡುತ್ತವೆಂದರೆ ಅದು ಅದರ ಕಾವ್ಯಗುಣದಿಂದಾಗಿ. ಕವಿತೆಯಲ್ಲಿ ಶಬ್ದಗಳು ಹೊರಡಿಸುವ ಅರ್ಥ ಮತ್ತು ಅದು ನಿಜಕ್ಕೂ ಸೂಚಿಸುತ್ತಿರುವ ಅರ್ಥ ಇವೆರಡನ್ನೂ ತನ್ನ ಅನುಭವಕ್ಕೆ ದಕ್ಕಿದ ಹಾಗೆ ಮಂಥನ ಮಾಡಿಕೊಂಡು ಹೊಂದಿಸುವ ಕೆಲಸ ಮಾತ್ರ ಓದುಗನಿಗೆ ಬಿಟ್ಟದ್ದು. ಭಾಷೆ ಗೊತ್ತಿದೆ ಅಂದಮಾತ್ರಕ್ಕೆ ಅದೇ ಭಾಷೆಯ ಕವಿತೆಯ ಅರ್ಥ ದಕ್ಕಬಹುದು ಅನ್ನವ ಹಾಗಿಲ್ಲ. ಕಾವ್ಯಕ್ಕೆ ಪ್ರವೇಶ ಮಾಡಬೇಕಾದರೆ ಕಾವ್ಯದ ಪರಿಭಾಷೆಯನ್ನು ಮೊದಲು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ.
ಹಕ್ಕಿ ಕೀಟವನ್ನು ಕುಕ್ಕಿ ಕುಕ್ಕಿ ತಿನ್ನುತ್ತಿದ್ದರೆ, ಆ ಕೀಟದ ನೋವು ಮತ್ತು ಹಕ್ಕಿಯ ಹಸಿವು ಎರಡನ್ನೂ ಅನುಭವಿಸುತ್ತಾ ಯಾರ ಕಡೆಗೂ ವಾಲದೆ ಸಮಾನ ದೂರದಲ್ಲಿ ನಿಂತು ಆ ಅನುಭವವನ್ನು ತನ್ನ ಕೃತಿಯಲ್ಲಿ ತರುವುದು ಸಾಧ್ಯವಾದರೆ ಅವನು ಒಳ್ಳೆಯ ಕವಿ.
ಯಾವತ್ತೋ ಕೇಳಿದ ಈ ಮಾತು ನನ್ನ ಬರವಣಿಗೆಯ ಸಂದರ್ಭದಲ್ಲಿ ಬಹಳಷ್ಟು ಬಾರಿ ನನ್ನ ಅನುಭವಕ್ಕೆ ಬಂದಿದೆ. ಬರಿಯ ಭಾವನೆಗಳಲ್ಲಿ ಒಂದು ಕಡೆ ಕಳೆದುಹೋದರೆ ಆ ಸನ್ನಿವೇಶದ ತೀವ್ರತೆ, ಆ ಅನುಭವದ ಬೇರೆಬೇರೆ ಆಯಾಮಗಳ ಹುಡುಕಾಟ ಸಾಧ್ಯವಾಗದೇ ಕಾವ್ಯದ ಮೂಲ ಉದ್ದೇಶವೇ ಮಸುಕಾಗಬಹುದು. ಅಡಿಗರು ಹೇಳುವ ಹಾಗೆ ಅಂತಃಕರಣ ತುಂಬಿ ತುಳುಕುತ್ತಲಿರುವಾಗ ಅಭಿವ್ಯಕ್ತಿ ಪಥಕ್ಕೆ ಕದ ತೆರೆಯುವುದಿಲ್ಲ. ಕವಿಯ ಕಣ್ಣೇ ಮಂಜಾದರೆ ಅದು ಬರೇ ಅವನ ಕವಿತೆಯಾಗುತ್ತದೆ. ಲೋಕದ ಕವಿತೆಯಾಗಲಾರದು.
“ವ್ಯಾಕರಣ ಛಂದಸ್ಸಲಂಕಾರ ಸೂತ್ರಂಗಳಿಂ ಕಬ್ಬವೆಣ್ಣಂ ಕಟ್ಟುವೆಗ್ಗತನಮಂ ಬಿಟ್ಟು ಹೃದಯದಾವೇಶಮನೆ ನೆಚ್ಚುವ ಮಹಾಕವಿಯ ಮಾರ್ಗದಿಂ…”
ವ್ಯಾಕರಣ ಛಂದಸ್ಸು ಅಲಂಕಾರ ಜ್ಞಾನದಿಂದ ಕಾವ್ಯ ರಚಿಸಲು ಸಾಧ್ಯ ಅನ್ನುವ ದಡ್ಡತನವನ್ನು ಬಿಟ್ಟು ಕಾವ್ಯ ರಚಿಸಲು ತನ್ನ ಹೃದಯದ ಆವೇಶವನ್ನು ನೆಚ್ಚುವ ಕವಿಯ ಮಾರ್ಗದಂತೆ ಅನ್ನುತ್ತಾರೆ ಕುವೆಂಪು. ಅಂದರೆ ವ್ಯಾಕರಣ ಛಂದಸ್ಸು ಅಲಂಕಾರಗಳ ಬಗ್ಗೆ ಜ್ಞಾನ ಇದ್ದ ಮಾತ್ರಕ್ಕೆ ಕವಿಯಾಗಲು ಸಾಧ್ಯವಿಲ್ಲ. “ಕುರುಡನುಂ ಕನ್ನಡಿಗೊಡೆಯನಾದ ಮಾತ್ರದಿಂ ಕಾಣ್ಬನೇಂ?” ಕನ್ನಡಿಗೆ ಒಡೆಯನಾದ ಮಾತ್ರದಿಂದ ಕುರುಡನಿಗೆ ಕಾಣುವ ಶಕ್ತಿ ಬರುವುದಿಲ್ಲ. ಬರೆದ ಸಾಲುಗಳು ಕವಿತೆಯಾಗಲು ಇನ್ನೇನೋ ಬೇಕು. ಅದಕ್ಕಾಗಿಯೇ ಈ ಎಲ್ಲಾ ದಡ್ಡತನವನ್ನು ಬಿಟ್ಟು ಕವಿ ಕಾವ್ಯ ರಚನೆಗೆ ತನ್ನ ಹೃದಯದ ಆವೇಶವನ್ನು ನೆಚ್ಚಿಕೊಳ್ಳುತ್ತಾನೆ. ಯಾಕೆಂದರೆ ಕಾವ್ಯ ಅನ್ನುವುದು ಬುದ್ದಿಗಿಂತ ಹೆಚ್ಚಾಗಿ ಹೃದಯಕ್ಕೆ ಸಂಬಂಧಿಸಿದ್ದು. ಸೂತ್ರಗಳನ್ನಿಟ್ಟುಕೊಂಡು ಬರೆದ ಸಾಲುಗಳು ಕವಿತೆಯಾಗಲು ಸೋಲುವುದು ಇಲ್ಲಿಯೇ. ಕವಿ ಮಾತ್ರೆಗಳನ್ನು ಲೆಕ್ಕ ಹಾಕುತ್ತಾ ಸಾಲುಗಳನ್ನು ಪ್ರಜ್ಞಾಪೂರ್ವಕವಾಗಿ ಬರೆಯುವುದಿಲ್ಲ. ಅದು ಸಹಜವಾಗಿ ಮೂಡುವಂಥದ್ದು. ಒಮ್ಮೆ ಒಂದು ಪದವನ್ನು ಬರೆದ ಮೇಲೆ ಅದನ್ನು ಮತ್ತೆ ತಿದ್ದುವ ಮತ್ತು ಬೇರೊಬ್ಬರ ಕಾವ್ಯ ರಚನಾವಿನ್ಯಾಸವನ್ನು ಅನುಸರಿಸದ ಅಗ್ಗಳಿಕೆ ನನ್ನದು ಅನ್ನುವ ಕುಮಾರವ್ಯಾಸನ ನಿಲುವು ಈ ವಿಷಯದಲ್ಲಿ ನಮಗೆ ಒಂದು ದಾರಿಯನ್ನು ತೋರಿಸುತ್ತದೆ.
“ಪದವಿಟ್ಟಳುಪದೊಂದಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ…”
ಕುಮಾರವ್ಯಾಸನ ಹಾಗೆ ಒಮ್ಮೆ ಬರೆದ ಪದವನ್ನು ಮತ್ತೆ ತಿದ್ದದಿರುವ ಅಗ್ಗಳಿಕೆ ನಮಗೆ ಪ್ರಾಪ್ತವಾಗದಿದ್ದರೂ ಒಮ್ಮೆ ಪದ್ಯದ ಲಯ ಹಿಡಿಯುವ ಕಲೆ ಸಾಧ್ಯವಾದರೆ ಮತ್ತು ಹೇಳಬೇಕಾದ ವಿಷಯದ ಕುರಿತಾದ ಒಂದು ಧ್ವನಿಯನ್ನು ಕವಿತೆಯಲ್ಲಿ ತರಲು ಶಕ್ತವಾದರೆ ಬರೆದದ್ದು ಒಳ್ಳೆಯ ಕವಿತೆ ಅಂತ ಅನ್ನಿಸಿಕೊಳ್ಳಬಹುದು. ಮತ್ತು ಹಳೆಯ ಕವಿಗಳ ಹಾಗೆ ತನ್ನ ಕಾವ್ಯದ ಕುರಿತಾಗಿ ಹೇಳಲೇಬೇಕಾದ ಅನಿವಾರ್ಯತೆ ಇಲ್ಲದಿದ್ದರೆ ತಾನು ಬರೆದ ಕವಿತೆಯನ್ನು ಮತ್ತೆ ಮತ್ತೆ ತಿದ್ದಿ, ಪದ ಇಟ್ಟ ಮೇಲೆ ಅಗತ್ಯ ಅನ್ನಿಸಿದರೆ ಆ ಪದದ ಬದಲಿಗೆ ಬೇರೆ ಪದವನ್ನು ಇಡುವ ಕೆಲಸವನ್ನು ಮಾಡಬಹುದು ಮತ್ತು ಮಾಡಲೇಬೇಕು. ಯಾಕೆಂದರೆ ನಾವ್ಯಾರೂ ವರಕವಿಗಳಲ್ಲ; ನರಕವಿಗಳು!
“ಬರಿ ಪದಕ್ಕೆ ಪದ ಜೊತೆಗಿದ್ದ ಮಾತ್ರಕ್ಕೆ ಪದ್ಯವಾದೀತು ಹೇಗೆ?” ಅಂತ ಜಿಎಸ್ಎಸ್ ಸುಮ್ಮನೆ ಹೇಳಲಿಲ್ಲ, ಎಲ್ಲವೂ ಇದ್ದೂ ಕವಿತೆಯಾಗಲು ಬೇಕಾದ ಆ ಒಂದು ಅಂಶದ ಹುಡುಕಾಟದಲ್ಲಿ ನಿರಂತರವಾಗಿ ನಾವು ತೊಡಗಿಸಿಕೊಳ್ಳಲೇಬೇಕು. ಚಿತ್ತ ಹುತ್ತಗಟ್ಟಲೇ ಬೇಕು.
ಒಂದು ಮಟ್ಟಿಗಿನ ಧ್ಯಾನಸ್ಥ ಸ್ಥಿತಿಗೆ ನಮ್ಮನ್ನು ನಮ್ಮ ಬರವಣಿಗೆ ತಲುಪಿಸದಿದ್ದರೆ ಹುಟ್ಟುವ ಬರಹ ಯಾರನ್ನೂ ತಟ್ಟಲಾರದು. ಋಷಿಯಲ್ಲದವನು ಕವಿಯಾಗಲಾರ. ಇದು ಒಂದು ರೀತಿಯಲ್ಲಿ ದಾಸರು “ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ಕೊಳ್ಳನೋ ಹರಿ” ಅಂತ ಕಂಡುಕೊಂಡ ಹಾಗೆ. ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ?
ಅಷ್ಟಕ್ಕೂ ಕವಿತೆ ಅಂತ ಬರೆಯುವವರೆಲ್ಲರೂ ಕವಿಯಾಗಲು ಸಾಧ್ಯವಿಲ್ಲ. ಬೇಂದ್ರೆ ಹೇಳಿದ ಹಾಗೆ “ಕಟ್ಟೋರೆಲ್ಲ ಕವಿಗಳಲ್ಲಾ; ಹುಟ್ಟೋರೆಲ್ಲಾ ಭವಿಗಳಲ್ಲಾ, ಕರು ಕೂಡ ಕಟ್ಟಿದ್ದುಂಟು; ಬಸವಣ್ಣನೂ ಹುಟ್ಟಿದ್ದುಂಟು”.
ತನಗೆ ಸರಿಕಂಡದ್ದನ್ನು ಹೇಳುವ ಒಂದು ಮಟ್ಟದ ಆತ್ಮವಿಶ್ವಾಸ, ಸ್ವಂತಿಕೆ ಕವಿಗೆ ಇಲ್ಲದಿದ್ದರೆ ಅವನ ಕಾವ್ಯಕ್ಕೆ ಒಂದು ಗತ್ತು ಪ್ರಾಪ್ತವಾಗುವುದಿಲ್ಲ. ನಾನು ಹೇಳುವುದನ್ನು ಈ ಮೊದಲೇ ಬೇರೆ ಕವಿಗಳು ಹೇಳಿದ್ದಾರೆ. ನನ್ನದೇನು ಹೊಸತು ಅನ್ನುವ ಹಿಂಜರಿಕೆ ಅಂತು ಇರಲೇಕೂಡದು. ಯಾವ ಅನುಭವವೂ ಮತ್ತೆ ಅದೇ ತೆರನಾಗಿ ಪುನಃ ಸಿಗುವುದಿಲ್ಲ. ಬೇಂದ್ರೆ ಕಂಡ ಬೆಳಗು ಬೇರೆ, ಕುವೆಂಪು ಕಂಡ ಸೂರ್ಯೋದಯ ಬೇರೆ. ಮತ್ತೆ ನನ್ನ ಕಣ್ಣಿಗೆ ಕಾಣುವುದು ಈ ದಿನದ ಹೊಸ ಬೆಳಗು ಅನ್ನುವ ನೋಟ ಇದ್ದರೆ ಅಲ್ಲಿ ಮತ್ತೆ ಹೊಸ ಕವಿತೆ! ನಾವು ಬರೆಯುವುದು ಹಿಂದಿನ ಕವಿಗಳು ಮರೆತ ಸಾಲುಗಳನ್ನು ಅನ್ನುವ ಎಚ್ಚೆಸ್ವಿ ಮಾತನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.
ಸಾಧಾರಣ ಅನ್ನಿಸುವಂತಹ ಸಾಲುಗಳು ಹೇಗೆ ಒಂದು ಪಾತಳಿಯಿಂದ ಇನ್ನೊಂದು ಪಾತಳಿಗೆ ಏರಬಹುದು ಅನ್ನುವುದಕ್ಕೆ ಸಾಕ್ಷಿಯಾಗಿ ನನಗೆ ನೆಚ್ಚಿನ ಕವಿ ಲಕ್ಷ್ಮೀನಾರಾಯಣ ಭಟ್ಟರ ಒಂದು ಕವಿತೆ ಯಾವತ್ತೂ ಅಚ್ಚರಿಯಾಗಿ ಕಾಡುತ್ತದೆ.
ಮರೆಯಲಾರೆ ನಿನ್ನ ನೀರೆ
ಮರೆಯಲಾರೆ ಜನ್ಮಕೆ
ಮರೆತು ಹೇಗೆ ಬಾಳಬಹುದೆ
ಆತ್ಮ ಮರೆತು ಅನ್ನಕೆ?
ಪಲ್ಲವಿಯ ಮೊದಲ ಮೂರು ಸಾಲುಗಳನ್ನು ಓದುವಾಗ ಅಂತಹ ಕಾಡುವ ಕವಿತೆಯಲ್ಲ ಇದು ಅನ್ನಿಸುವ ಹೊತ್ತಿಗೇ ಎದುರಾಗುವ ಕೊನೆಯ ಸಾಲು ಕವಿತೆಯನ್ನು ಬೇರೆಯೇ ಸ್ತರಕ್ಕೆ ಏರಿಸಿಬಿಡುತ್ತದೆ. ಇಲ್ಲಿ ಬರಿಯ ಅನ್ನಕ್ಕೆ ದಿನಗಳನ್ನು ಸವೆಸುವುದೆಂದರೆ ವ್ಯರ್ಥ ನಮ್ಮ ಬದುಕು. ಬದುಕಿಗೆ ಬೇರೆ ಗುರಿಗಳೂ ಇವೆ. ಡಿವಿಜಿ ತನ್ನ ಮಂಕುತಿಮ್ಮನ ಕಗ್ಗದಲ್ಲಿ
“ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ
ಮೇರುವನು ಮರೆತಂದೆ ನಾರಕಕೆ ದಾರಿ” ಅಂತ ಹೇಳಿದ ಹಾಗೆ ಭಟ್ಟರು ನಿನ್ನ ಮರೆತು ಬಾಳುವುದೆಂದರೆ ಆತ್ಮ ಮರೆತು ಬರೀ ಅನ್ನಕ್ಕೆ ಬಿದ್ದಷ್ಟೇ ನಿಕೃಷ್ಟವಾದದ್ದು ಅನ್ನುವ ಭಾವವನ್ನು ತಂದು ಕವಿತೆಗೆ ಕಾಡುವ ಗುಣವನ್ನು ತಂಡುಕೊಡುತ್ತಾರೆ. ಅದು “ರಮಿಸುವಿಂದ್ರಿಯ ಸುಖದ ನಡುವಣ ಆತ್ಮಾನಂದದಂತೆ!”
ಕೆಲವು ಸಾಲುಗಳು ಹುಟ್ಟಿಸುವ ಬೆರಗು ಮಾತ್ರ ಸಾಕು ಒಂದೀಡಿ ಕವಿತೆಯನ್ನು ಓದಲು. ಬಿಡಿಬಿಡಿಯಾಗಿ ಎದೆಹೊಕ್ಕುವ ಸಾಲುಗಳು ಮತ್ತೆಂದೋ ಯಾವುದೋ ಅನುಭವದಲ್ಲಿ ಯಾರದ್ದೋ ಸಾನಿಧ್ಯದಲ್ಲಿ ಪೂರ್ಣಗೊಳ್ಳುತ್ತವೆ. ಅವಳಲ್ಲಿ ಬಿಡಿಬಿಡಿಯಾಗಿದ್ದ ಹೂಗಳು ಅವನು ಸಿಕ್ಕಿದಾಗ ಮಾಲೆಯಾಗುವ ಸೋಜಿಗದಂತೆ! ಬಿಡಿಸಲಾಗದ ಅಚ್ಚರಿ ಇದು. ಅಚ್ಚರಿಯೇ ಪ್ರೇಮ. ಅದೇ ಕವಿತೆ. ಅದಕ್ಕೆ ವಿಶೇಷವಾದ ವ್ಯಾಖ್ಯಾನಗಳಿಲ್ಲ. ತರ್ಕಕ್ಕಂತೂ ಆಸ್ಪದವಿಲ್ಲ. ಆ ಅಚ್ಚರಿ ಬೆರಗೂ ಓದುಗನೆದೆಯಲ್ಲೂ ಹುಟ್ಟಿದರೆ ಆ ಕವಿತೆ ಅವನದ್ದು.
ಬಹುಶಃ ಅತ್ಯಂತ ಶ್ರೇಷ್ಠಮಟ್ಟದ ಅನುಭವವನ್ನು ನಾವು ಪಡೆದುಕೊಳ್ಳಬೇಕಾದರೆ ಒಂದು ಮಟ್ಟದ ಸಿದ್ಧತೆ ಬೇಕಾಗುತ್ತದೆ. ಕೆಲವು ಸಂಗತಿಗಳು ಫಕ್ಕನೆ ದಕ್ಕುವುದಿಲ್ಲ.
ಅಧ್ಯಯನ ತಾಳ್ಮೆ ಮತ್ತೆ ಮತ್ತೆ ಕೇಳುವ ಓದುವ ವ್ಯವಧಾನ ಬೇಕು. ನಿಧಾನಕ್ಕೆ ಏರುವ ನಶೆಯಂತೆ. ಎ. ಆರ್. ರೆಹಮಾನ್ ನ ಹಾಡುಗಳಂತೆ. ಒಂದು ಕ್ಲಾಸಿಕಲ್ ಸಿನಿಮಾದಂತೆ. ಅಡಿಗರ ಕಾವ್ಯದಂತೆ. ಪುರಾಣ ವೇದ ಉಪನಿಷತ್ತುಗಳ ಹಿನ್ನಲೆ ಕಿಂಚಿತ್ತೂ ಇಲ್ಲದಿದ್ದರೆ ಅಡಿಗರ ಕಾವ್ಯವನ್ನು ಆಸ್ವಾದಿಸುವುದು ಕಷ್ಟವಾಗಬಹುದು. ಹೇಗೆ ಪ್ರತೀ ಕವಿತೆಯ ನಂತರ ಕವಿ ಬೆಳೆಯುತ್ತಾನೋ ಹಾಗೆಯೇ ಪ್ರತೀ ಓದಿನ ಜೊತೆಗೂ ಓದುಗ ಬೆಳೆಯುತ್ತಾ ಹೋದರೆ ಮಾತ್ರ ಕಾವ್ಯದಲ್ಲಿ ಶ್ರೇಷ್ಠಮಟ್ಟದ ಅನುಭವವನ್ನು ಪಡೆಯಲು ಅವನಿಗೆ ಸಾಧ್ಯವಾಗುತ್ತದೆ.
ಕವಿಗೂ ಸಹೃದಯ ಓದುಗನಿಗೂ ಶಿವರುದ್ರಪ್ಪನವರ ಕವಿತೆಯನ್ನೇ ಮುಂದು ಮಾಡಿ ಈ ಲೇಖನವನ್ನು ಮುಗಿಸುತ್ತೇನೆ,
“ನೂರಾರು ಭಾವದ ಬಾವಿ; ಎತ್ತಿಕೋ
ನಿನಗೆ ಬೇಕಾದಷ್ಟು ಸಿಹಿನೀರ.
ಪಾತ್ರೆಯಾಕಾರಗಳು ಕುರಿತು ಏತಕೆ ಜಗಳ?
ನಮಗೆ ಬೇಕಾದದ್ದು ದಾಹ ಪರಿಹಾರ”
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು
ಅಧ್ಭುತವಾದ ಕವಿತೆ👌👌👌👌