ರಾಜಶೇಖರಯ್ಯ, ಟಿ.ಆರ್. (ರಾಜಶೇಖರ) ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ., (೧೯೪೬) ನಾಗಪುರ ವಿಶ್ವವಿದ್ಯಾನಿಲಯದಿಂದ ಎಂ.ಎ. (೧೯೫೬) ಪದವೀಧರರಾಗಿದ್ದಾರೆ. ೧೯೪೬ ರಿಂದ ೧೯೫೮ ವರೆಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್‌ ಅಧ್ಯಾಪಕರಾಗಿದ್ದರು. ಸ್ವಪ್ನಮಂಗಳ ಮತ್ತು ಇತರೆ ಕತೆಗಳು ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೬೧). ರುದ್ರಾಕ್ಷಿ ಇವರ ಕವಿತಾ ಸಂಕಲನ. ಕನ್ನಡ ಕಾವ್ಯಮಾಲೆಯ ಕಾಣದ ಕುಸುಮಗಳು ಸರಣಿಯಲ್ಲಿ ಅವರು ಬರೆದ “ಭಕ್ತಿ” ಕವಿತೆ ನಿಮ್ಮ ಓದಿಗೆ.

ಭಕ್ತಿ

ನನ್ನ ಮೌನವೆ ನಿನಗೆ ಪ್ರಿಯವಾದ ಪಕ್ಷದಲಿ
ಒಪ್ಪಿಸಿಕೊ ಅದನೆ ನೀನು.
ಹಾಡಬೇಕೆನ್ನುವೀ ಮೂಕ ನಾಲಗೆಯನು
ಅರ್ಪಿಸುವೆನು ಹರಿದು ನಾನು.

ನನ್ನ ದುಃಖವೆ ನಿನಗೆ ಪ್ರಿಯವಾದ ಪಕ್ಷದಲಿ
ಒಪ್ಪಿಸಿಕೊ ಅದನೆ ನೀನು.
ನಗೆಯ ಕಂದನ ಕೊರಳ ಕಡಿದು ನಿನ್ನಡಿಗಳಿಗೆ
ಅರ್ಪಿಸುವೆನು ಅಳುತ ನಾನು.

ನನ್ನ ನಾಶವೇ ನಿನಗೆ ಪ್ರಿಯವಾದ ಪಕ್ಷದಲಿ
ಬಂದು ಸಿಡಿಲಾಗಿ ಎರಗು
ನನ್ನ ಹೃದಯದ ಹಸಿರು ವನವೆಲ್ಲ ಒಡ್ಡುವೆನು
ನಿನ್ನ ಕಣ್ಣಿರುವವರೆಗು

ನನ್ನ ಮಸಣದ ಬೂದಿಯೇ ನಿನಗೆ ಪ್ರಿಯವಾಗೆ
ಬಂದು ಕುಣಿದಾಡು ಶಿವನೆ.
ಶ್ರೀಮಂತ ಆತ್ಮದೀ ಕನಸಿನೈಶ್ಚರ್ಯಗಳ
ಸುಟ್ಟುಕೋ ವಿಭೂತಿಯನೆ.

ನೀನೊಲಿದು ಹೂ ನಲಿದು ನಕ್ಕರದು ನಿನ್ನ ಮುಡಿಗೆ;
ನೀ ಮುನಿದು ನೆಲವುರಿದು ಸುಟ್ಟರದು ನಿನ್ನ ಹಣೆಗೆ.