ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಮಹಾನ್ ವಿದ್ವಾಂಸರಾದ ಶಂಕರ ಮೊಕಾಶಿ ಪುಣೇಕರರು ಮೇ ೮, ೧೯೨೮ರಂದು ಧಾರವಾಡದಲ್ಲಿ ಹುಟ್ಟಿದರು. ಅವರು ಯೇಟ್ಸ್‌ ಕವಿಯನ್ನು ಕುರಿತು ಪಿಎಚ್.ಡಿ ಮಾಡಿದವರು. ’ಗಂಗವ್ವ ಗಂಗಾಮಾಯಿ’, ’ಅವಧೇಶ್ವರಿ’, ’ಮಾಯಿಯ ಮೂರು ಮುಖಗಳು’ ರೀತಿಯ ಭಿನ್ನ ಕಾದಂಬರಿಗಳನ್ನು ನೀಡಿದ ಶಂಕರ ಮೊಕಾಶಿ ಪುಣೇಕರ, ಉತ್ತಮ ವಿಮರ್ಶಕರು ಕೂಡ. ’ಬೇಂದ್ರೆಯವರ ಕಾವ್ಯ ಮೀಮಾಂಸೆ’, ‘ನಟ ನಾರಾಯಣಿ’, ‘ಸಾಹಿತ್ಯ ಮತ್ತು ಅಭಿರುಚಿ’, ಹಾಗೂ ‘ಡೆರಿಕ್ ಡಿಸೋಜಾ ಮತ್ತು ಇತರ ಕಥೆಗಳು’ – ಇವು ಮೊಕಾಶಿಯವರ ಇತರ ಮಹತ್ವದ ಕೃತಿಗಳು. ಕನ್ನಡ ಮತ್ತು ಇಂಗ್ಲಿಷ್‌ ಎರಡರಲ್ಲೂ ಇವರ 35ಕ್ಕೂ ಹೆಚ್ಚು ಕೃತಿಗಳು ಪ್ರಕಟಿತ. ’ಅವಧೇಶ್ವರಿ’ಗೆ 1988ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಕನ್ನಡ ಮತ್ತ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಡಾ.ಮೊಕಾಶಿ ಮೂವತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಋಗ್ವೇದದ ಕೆಲವೇ ಮಂತ್ರಗಳಲ್ಲಿ ಮತ್ತು ಹರಪ್ಪಾ-ಮೊಹೆಂಜೋದಾರೋದ ಕೆಲವೇ ಮುದ್ರಿಕೆಗಳಲ್ಲಿ ದೊರೆಯುವ ಮಾಹಿತಿ ಆಧಾರದ ಮೇಲೆ ಅವರು ಅವಧೇಶ್ವರಿ ಕೃತಿ ರಚಿಸಿದ್ದಾರೆ. ಅವರು ಬರೆದ ಮಾಯಿಯ ಮೂರು ಮುಖಗಳು ಕವನ ಇಂದಿನ ಕನ್ನಡ ಕಾವ್ಯ ಮಾಲೆಯ ಕುಸುಮ ಸರಣಿಯಲ್ಲಿ ನಿಮ್ಮ ಓದಿಗಾಗಿ.

ಮಾಯಿಯ ಮೂರು ಮುಖಗಳು
(ನಾಲ್ಕನೇ ಮುಖವನ್ನು ಕಂಡಿಲ್ಲ)

ಮಾಯಿ ! ಮಹಾ ಮಾಯಿ !
ಮೂರು ವಿಧದಿಂದ ನೀನೆಮ್ಮ ತಾಯಿ !
(ಸಾಕು ತಾಯಿ ; ದತ್ತ ತಾಯಿ ; ಹೆತ್ತ ತಾಯಿ)
ಮೊಟ್ಟ ಮೊದಲಿಗೆ ಬರುವಿ ಸಾಕು ತಾಯಾಗಿ
ಬೆಳೆಯುತ್ತ ಬಳಸುವಿಯೊ ಬಾಳ, ಹಾಯಾಗಿ,
ಕರುಳಿಗೊಂದು ಹೊಸ ಕರುಳ ಪ್ರಾರಂಬಿ
ಇಳಿ ಬಿಟ್ಟು ನೆಲವ ನಿನ್ನದೆ ಮಾಡಿಕೊಂಬಿ,
ಮುಟ್ಟಿದರೆ ಮಾಸುವಾ ಸುಳಿಗೆಂಪು ಕಂಬಿ
ಒಂದೊಂದು ಎತ್ತಿ ಹಿಡಿದಿವೆ ಸೊಟ್ಟ ರೆಂಬಿ
ನಿನ್ನ ಅಚ್ಛಿಯ ಕೈಯ ತುತ್ತನುಂಡವರು
ತಮ್ಮ ಮುಂಗೈಬಲವ ಕಳೆದು ಕೊಂಡಿಹರು
ಕಣ್ಣು ಬೊಂಬೆಯೆ ಆಗಿ ಕುರುಡು ಗೊಳಿಸುವೆಯಾ?
ನೆರಳು ನೀಡುವ ಸಸಿಯ ಬರಡುಗೊಳಿಸುವೆಯಾ?

ಇನ್ನೊಮ್ಮೆ ಬರುವಿ ನೀ ದತ್ತಕಾಯಾಗಿ
ಕರ್ತವ್ಯಗಳ ತೂಗುಹಲಗೆಗಳನೇ ತೂಗಿ,
ಆಕಾಂಕ್ಷೆ ಅಭಿಮಾನ ಕರ್ತವ್ಯ ಕಾಯಾಸ
ಆದರ್ಶ ಆವೇಶ ಆಕ್ರೋಶ ಅಪಹಾಸ
ಚಾಣಕ್ಯ ಚಂದ್ರಗುಪ್ತರ ಜತೆಯ ರೀತಿ.
ವಿದುಲೆಯಂಥ ಕಠೋರ ಪುತ್ರ ಪ್ರೀತಿ,

ಮಾತುಮಾತಿಗೂ ಈರ್ಷೆ, ಆಶೆ, ಕೆಚ್ಚು
ಕೊಟ್ಟ ಸಾಲಕು ಕೇಳ್ವ ಬಡ್ಡಿಯೋ ಹೆಚ್ಚು.
ಕುಳಿತವನ ಕಿವಿ ಹಿಂಡಿ ಮೇಲಕೆಚ್ಚರಿಸಿ
ಲೆಕ್ಕ ಕೇಳುವೆ ಪೈಗೆ ಪೈಯ ಸವಕರಿಸಿ.
‘ನುಗ್ಗಿ ನಡೆ’ ಯೆಂಬ ನಿನ್ನೀ ಪಾಂಚಜನ್ಯ
ಕೇಳಿ ನಡೆಯಲು ತ್ರಾಣ ಉಳಿದವನೆ ಧನ್ಯ !
ಕೊನೆಗಾಲ ಬರುವಿ ನೀ ಹೆತ್ತ ತಾಯಾಗಿ
ಕನಸ ಹಿಂದಿನ ಕನಸ ಬೊಗಳುನಾಯಾಗಿ,
ಮುಗಿಲ ಮೂವಟ್ಟೆಗಳ ಮೂದಲಿಸುವಂತೆ
ನಡೆದಿರಲು ಹೊಕ್ಕುಳಲಿ ವ್ಯಾಕುಲತೆ ಚಿಂತೆ ;
ಮರಣವನು ಗೆದ್ದವರು ರಣದಿ ಓಡಿದರು,
ಯದ್ವಾಜಯೇಮ ಯದಿ ವಾನೋ ಚಯೇ ಯು
ಎಂದು ಮಿಡುಕಿತ್ತು ನರ, ಬಿಗಿದಿರಲು ಸ್ನಾಯು.
ರಟ್ಟೆಯೊಳಗಿತ್ತು, ಕಿಪ್ಪೊಟ್ಟೆಯೊಳಗಿಲ್ಲ.
ಬಿಲ್ಲಿನೊಳಗಿದ್ದ ಎದೆ ರಟ್ಟೆಯೊಳಗಿಲ್ಲ.
ಹೇಡಿ ಮಾಂಸವು ಮನದ ಮಾತ ಜರೆದಿತ್ತು.
ಮುಗಿಲಿಗಾನಿಸಿದ ನಿಚ್ಚಣಿಕೆ ಮುರಿದಿತ್ತು.
ಒಡಲು ಒಡ್ಡುವ ಬಲೆಯ ಕಣ್ಣಿ ನೋಡೀತೆ?
ಬಸಿರು ಬರೆದಿರುವ ಗೆರೆ ಬಾಳು ದಾಟೀತೆ?
ಈ ಹಾಡು ತಿರುಳನ್ನು ಕುರಿತು ಅರಿತವನು
ತಾಯ ಇನ್ನೊಂದು ಮೊಗವನ್ನು ಅರಸುವನು.