ಗೋಡೆ ಕಣ್ಣೊಳಗಿನ ಚಿತ್ರ

ರಾತ್ರಿವಿಡಿ ಸಾಬೂನು ನೊರೆಯಲಿ ಬಟ್ಟೆಗಳ ನೆನೆಹಾಕಿ
ಒತ್ತಿ ತದುಕುತ್ತಿದ್ದಾಳೆ
ಮಾಸದ ಗುರುತುಗಳ ಕಂಡು ಒಳಗೊಳಗೆ ಹಲಬುತ್ತಾ
ತೋಳಬದಿಯ ಕೊಳೆ ನಿಧಾನ ತಿಕ್ಕುತ್ತಾ
ಹೆಗಲ ಸುಕ್ಕಿಗೆ ಮುಲಾಮು ಲೇಪಿಸಿ
ಜಾಡಿಸಿ ಮೊಳೆಗೆ ನೇತು ಹಾಕಿದ್ದಾಳೆ
ತಾನೆ ನೋವಿನ ಗಾಳಕ್ಕೆ ಸಿಕ್ಕಂತೆ

ಶುಚಿಯಾದ ಬಟ್ಟೆ ಸಿಕ್ಕ ತಕ್ಷಣ ಹಲ್ಲು ಕಿರಿದು
ಜಂಗು ಹಿಡಿದ ಮೊಳೆ ಅದೆಷ್ಟು ರಕ್ತ ಕುಡಿದಿರಬಹುದು!

ತೋಳಬದಿಯ ಕೆಂಪು ಬಣ್ಣ ಕಂಡು
ಈ ಹಾಳಾದ ಮೊಳೆ
ಶಪಿಸುತ್ತಾ..
ಕೈಯಲ್ಲಿರುವ ಬಕೀಟೊಳಗೆ
ಮತ್ತಷ್ಟು ಹಿಂಡುವಳು ನೋವಿನ ರಟ್ಟೆಯ ಗುರುತುಗಳ ಏಣಿಸುತ್ತಾ

ಎಣಿಕೆಗೆ ನಿಲುಕದ ಗಾಯದ ತೂತಿಗೆ
ಪೋಣಿಸಿದ ದಾರ ಬಿಸಿಲ ಕಣ್ಣೊಳಗೆ ಮಾಯವಾಯಿತೇ
ಹೊಲೆದಷ್ಟು ಬಿರುಕ ಬಿಟ್ಟ ನೆನಪಿಗೆ
ಎಷ್ಟೊಂದು ತೇಪೆ ಹಾಕಿರಬಹುದು

ಎದೆಯ ಗುಂಡಿಗಳಂತು ಮುಟ್ಟಿದರೆ ಕೈಯಲ್ಲೇ ಸಿಗುವಷ್ಟು
ಮೈಮನಗಳ ಹಿಂಡಿ ಕರುಳು ಕುಡಿಯೊ ರಾಡಿಯೊಳಗೆ
ನಲುಗಿದ ದೇಹ ಕಂಡು ಕಣ್ಣೀರಾದಳು

ಕಳೆದ ಜಾತ್ರೆಯಲ್ಲಷ್ಟೆ ಖರೀದಿಸಿದ ಹೊಸ ಬಟ್ಟೆಯೊಳಗೆ
ಎಂಥೆಂತೆಹ ವಿಪರೀತ ಬಣ್ಣಗಳು
ತೊಳೆದಷ್ಟು ಬದುಕು ಚರಿತ್ರೆ ಚಹರೆ ಬಿಡಿಸುವಂತೆ
ಮೊಳೆತ ಬೀಜಗಳ ಮುಸುಕುವ ವ್ಯಾಮೋಹ
ಇರುಳ ಮೈಯೊಳಗೆ ಬಂದಿದ್ದಾದರು ಹೇಗೆ!
ಬೆರಗಾದಳು

ಬಕೀಟು ತುಂಬಿದ ಬಣ್ಣದ ನೀರನ್ನೊಮ್ಮೆ ನೆಲಕ್ಕೆ ಸುರುವಿ
ಕೊನೆಯ ನಿರಿಗೆ ಕಾಲುವೆಯಲಿ ಅದ್ದಿ
ಈಗ ಬಟ್ಟೆಗಳನು ಅಂಗಳದ ಗೋಡೆಯ ಮೇಲೆ ತೂಗುಹಾಕಿಹಳು
ಚಂದಿರನ ನೆರಳು ಹುಡುಕುತ

ಇರುಳ ಚಿತ್ರಗಳ ಮೆಲಕು ಹಾಕುತ್ತಾ
ಹಣೆಯ ಬೆವರು ಸೆರಗಲ್ಲಿ ತಿವಿದು
ಅಂಗೈ ಮೆತ್ತಿದ ಮಿಂಚಿನ ಹಚ್ಚೆ ಸವರುತ್ತಿದ್ದಾಳೆ
ಗೋಡೆ ಕಣ್ಣೊಳಗಿನ ನೆನಪುಗಳಲಿ

ಕಿರಸೂರ ಗಿರಿಯಪ್ಪ ಬಾಗಲಕೋಟ ಜಿಲ್ಲೆಯ, ಕಿರಸೂರ ಮೂಲದವರು.
ಸಧ್ಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘ನಾಭಿಯ ಚಿಗುರು’  ಇವರ ಪ್ರಕಟಿತ ಕವನ ಸಂಕಲನ.