೧೯೨೦ರಲ್ಲಿ ಟಿ.ಎಸ್. ಎಲಿಯಟ್ ತನ್ನ ದ ವೇಸ್ಟ್ ಲ್ಯಾಂಡ್ ಪ್ರಕಟಿಸಿದಾಗ ಎಜ್ರಾ ಪೌಂಡ್ ಗೆ ಅದನ್ನು ಸಮರ್ಪಿಸುತ್ತಾ ಆತನನ್ನು `ಮಿಗಿಲಾದ ಕುಶಲ ಕರ್ಮಿ’ (il miglior fabbro) ಎಂದು ಕರೆದ. ಸಹಜವಾಗಿಯೇ. ಯಾಕೆಂದರೆ ದ ವೇಸ್ಟ್ ಲ್ಯಾಂಡ್ನ್ನು ಮೂಲದ ಮೂರನೇ ಒಂದಂಶಕ್ಕೆ ಇಳಿಸಿ ಅದರ ಪ್ರಕಟಿತ ರೂಪದ ಸೌಂದರ್ಯಕ್ಕೆ ಇ.ಪಿ.ಯೇ ಕಾರಣ. ಅದೇ ರೀತಿ ಎಲಿಯಟ್ ನ್ನ `ಕಂಡು ಹಿಡಿದು’ ಅವನ ಆರಂಭದ ಕವನಗಳನ್ನು ಪ್ರಕಟಿಸಿದವನೂ ಇ.ಪಿ. ಪ್ರತಿಭಾವಂತರನ್ನು ಕಂಡು ಹುಡುಕುವುದು, ಅವರನ್ನು ತಿದ್ದುವುದು, ಅವರ ಸಹಾಯಕ್ಕೆ ಧಾವಿಸುವುದು ಎಜ್ರಾ ಪೌಂಡ್ ಗೆ ಪ್ರಿಯವಾದ ಕೆಲಸವಾಗಿತ್ತು. ಒಳ್ಳೆಯ ಕವಿತೆಗಳು ಮುಖ್ಯ, ಅವನ್ನು ಯಾರೇ ಬರೆಯಲಿ, ಎನ್ನುವುದು ಪೌಂಡ್ ನ ಧೋರಣೆ.

ಎಜ್ರಾ ಲೂಮಿಸ್ ಪೌಂಡ್ ಅಮೇರಿಕದ ಐಡಾಹೋ ಎಂಬಲ್ಲಿ ೧೮೮೫ರ ಅಕ್ಟೋಬರ್ ೩೦ರಂದು ಜನಿಸಿದ. ಪೆನ್ಸಿಲ್ ವೇನಿಯಾ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿ. ವಿದ್ಯಾರ್ಥಿಯಾಗಿದ್ದಾಗಲೇ ಒಂದೆರಡು ಬಾರಿ ಯುರೋಪಿಗೆ ಪ್ರವಾಸ. ಪೌಂಡ್ ತೌಲನಿಕ ಸಾಹಿತ್ಯದ ವಿದ್ಯಾರ್ಥಿಯಾಗಿದ್ದು ಮಧ್ಯಕಾಲೀನ ಇಟಾಲಿಯನ್, ಮತ್ತು ಮುಖ್ಯವಾಗಿ ಫ್ರೆಂಚ್ ಪ್ರೊವೆನ್ಸಾಲ್, ಕಾವ್ಯದಲ್ಲಿ ಆಸಕ್ತನಾಗಿದ್ದ. ಪದವಿಯ ನಂತರ ಅವನು ೧೯೦೮ರಲ್ಲಿ ಇಂಗ್ಲೆಂಡ್ ಗೆ ಬರುತ್ತಾನೆ. ಅದೇ ವರ್ಷ ವೆನೀಸ್ ನಲ್ಲಿ ಅವನ ಮೊದಲ ಕವನ ಸಂಕಲನ ಪ್ರಕಟವಾಗಿರುತ್ತದೆ. ಮಾರನೆ ವರ್ಷ ಇನ್ನೆರಡು ಸಂಕಲನಗಳು. ಅವುಗಳಲ್ಲಿ ಪರ್ಸೊನೆ (`ಪಾತ್ರಗಳು’) ಎಂಬುದು ಅವನಿಗೆ ಹೆಸರು ತರುತ್ತದೆ.

ಪೌಂಡ್ ಇದೇ ಕಾಲಕ್ಕೆ ಅನುವಾದದಲ್ಲೂ ಆಸಕ್ತನಾಗಿ ಯುರೋಪಿನ ಹಳೆ ಹೊಸ ಭಾಷೆಗಳಿಂದ, ಅಂತೆಯೇ ಚೈನೀಸ್ ನಿಂದಲೂ, ಹಲವು ಕೃತಿಗಳನ್ನು ಇಂಗ್ಲೀಷ್ ಗೆ ತರುತ್ತಾನೆ. ಕಾವ್ಯ ಸೌಂದರ್ಯವೇ ಎಲ್ಲಕ್ಕಿಂತಲೂ ಮುಖ್ಯ ಎಂಬ ಧೋರಣೆಯನ್ನು ಪ್ರತಿಪಾದಿಸುತ್ತಾನೆ. ಮುಂದೆ ೧೯೧೯ರಲ್ಲಿ ಹೋಮೇಜ್ ಟು ಪ್ರೋಪರ್ಟಿಯಸ್ಮತ್ತು ೧೯೨೦ರಲ್ಲಿ ಹ್ಯೂ ಸೆಲ್ಪಿನ್ ಮೌಬರ್ಲಿ ಎಂಬ ಕವನ ಸಂಕಲನಗಳೊಂದಿಗೆ ಪೌಂಡ್ ನ ಸಾಮಾಜಿಕ ಕಳಕಳಿ ಮೊದಲಾಗುತ್ತದೆ. ತನ್ನ ಆರಂಭಿಕ ಧೋರಣೆಗೆ ವಿರುದ್ಧವಾಗಿ, ಕಲಾವಿದ ಮತ್ತು ಸಮಾಜ -ಈ ಎರಡು ಘಟಕಗಳ ನಡುವಣ ಅವಿಭಾಜ್ಯ ಸಂಬಂಧವನ್ನು ಪ್ರತಿಪಾದಿಸತೊಡಗುತ್ತಾನೆ. ಗೈಡ್ ಟು ಕುಲ್ಚರ್(`ಸಂಸ್ಕೃತಿಗೊಂದು ಕೈಪಿಡಿ’; `ಕುಲ್ಚರ್’ ಜರ್ಮನ್ ಶಬ್ದ) ಎಂಬ ಲೇಖನ ಸಂಕಲನದಲ್ಲಿ ಪೌಂಡ್ ಹೇಳುವುದು: “ಯಾರೂ ಮಾಡಬಾರದ ಒಂದು ಸಂಗತಿಯೆಂದರೆ ಕಲೆಗಳಲ್ಲಿ ಏನಾದರೂ ತಪ್ಪಾದರೆ, ಅದು ಕೇವಲ ಕಲೆಗಳಲ್ಲಿ ಮಾತ್ರ ಎಂದು ತಿಳಿದುಕೊಳ್ಳುವುದು.”

೧೯೨೦ರಲ್ಲಿ ಪೌಂಡ್ ಇಂಗ್ಲೇಂಡ್ ಬಿಟ್ಟು ಪ್ಯಾರಿಸ್ ಗೆ ತೆರಳುತ್ತಾನೆ. ಹಾಗೂ ೧೯೨೪ರಲ್ಲಿ ಇಟೆಲಿಯ ಒಂದಾನೊಂದು ಸಮುದ್ರ ತೀರದ ಪಟ್ಟಣವಾದ ರಾಪೆಲ್ಲೊ ಎಂಬಲ್ಲಿಗೆ ಹೋಗಿ ನೆಲಸುತ್ತಾನೆ. ಎರಡನೆ ಮಹಾಯುದ್ಧಾನಂತರ ಸೆರೆ ಹಿಡಿಯಲ್ಪಟ್ಟ ಕೆಲವು ವರ್ಷಗಳನ್ನುಳಿದರೆ ಪೌಂಡ್ ತನ್ನ ಬದುಕಿನ ಉಳಿದ ಭಾಗವನ್ನು ಕಳೆದುದು ಇಟೆಲಿಯಲ್ಲೇ.

೧೯೧೫ರಲ್ಲೇ ಪೌಂಡ್ ಕ್ಯಾಂಟೋಸ್ (`ಖಂಡಗಳು’) ಎಂಬ ದೀರ್ಘ ಕಾವ್ಯವೊಂದನ್ನು ಬರೆಯಲು ಆರಂಭಿಸಿದ್ದ. ಈ ಕವಿತೆಗಳು ವಿವಿಧ ರೂಪಗಳಲ್ಲಿ ಅಲ್ಲಿಂದ ಮೇಲೆ ಪ್ರಕಟವಾಗುತ್ತ, ಬದಲಾಗುತ್ತ, ಬೆಳೆಯುತ್ತ ಬಂದುವು. ಡಾಂಟೆಯ ಡಿವೈನ್ ಕಾಮೆಡಿಯನ್ನೂ ಹೋಮರನ ಒಡಿಸ್ಸಿಯನ್ನೂ ಮಾದರಿಯಾಗಿಟ್ಟುಕೊಂಡು ಕವಿ ಇಲ್ಲಿ ನಮ್ಮನ್ನು ಚರಿತ್ರೆಯ ಸ್ವರ್ಗ ನರಕಗಳ ಮೂಲಕ ಕರೆದೊಯ್ಯುತ್ತಾನೆ. ಕ್ಯಾಂಟೋಗಳಲ್ಲಿ ಬರುವ ವ್ಯಕ್ತಿಗಳು, ಸಂಗತಿಗಳು, ಕೆಲವೊಮ್ಮೆ ಪದಪುಂಜಗಳು ಕೂಡಾ ಹಲವು ಮೂಲಗಳಿಂದ ಎತ್ತಿಕೊಂಡವು. ಇಲ್ಲಿ ಚೈನೀಸ್ ಲಿಪಿ ಕೂಡಾ ಕಾವ್ಯಕ್ಕೆ ವ್ಯಂಜಕವೂ ರೂಪಕವೂ ಆಗುತ್ತದೆ. ಪುರಾತನ ಚೀನಾದ ತತ್ವಜ್ಞಾನಿ ಕನ್ ಫ್ಯೂಶಿಯಸ್ ನ ವಿಚಾರಗಳು ಬರುತ್ತವೆ. ಅಮೇರಿಕದ ರಾಜಕೀಯ ಮುತ್ಸದ್ದಿ ಜೆಫರ್ ಸನ್ ಬರುತ್ತಾನೆ. ಪೌಂಡ್ ತನ್ನ ಆರ್ಥಿಕ ಚಿಂತನೆಗಳನ್ನು ಕಾವ್ಯದಲ್ಲಿ ಚರ್ಚಿಸತೊಡಗುತ್ತಾನೆ. ಮಧ್ಯಕಾಲೀನ ಇಟೆಲಿಯ ಶ್ರೀಮಂತ ಕುಟುಂಬಗಳ ಚರಿತ್ರೆಯ ಉಲ್ಲೇಖಗಳಿವೆ. ಡಾಂಟೆ, ಕಾವಲ್ಕಾಂಟಿ, ಲೀ ಪೋ ಮುಂತಾದ ಕವಿಗಳು ಹಾದು ಹೋಗುತ್ತಾರೆ (ಲೀ ಪೋ ಚೀನಾ ದೇಶದವನು). ಎಲ್ಲದರ ಹಿಂದೆ ಒಡೀಸಿಯಸ್ ನ ಸಮುದ್ರಯಾನದ ಕತೆ. ಅದು ಬೆಳೆದಂತೆ ಪೌಂಡ್ ನ ಕವಿತೆಯೂ ಬೆಳೆಯುತ್ತದೆ.

ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಪೌಂಡ್ ಅಮೇರಿಕನ್ ಆಗಿದ್ದೂ ಅಮೇರಿಕದ ವೈರಿ ರಾಷ್ಟ್ರಗಳಾದ ಇಟೆಲಿ ಮತ್ತು ಜರ್ಮನಿಯ ವತಿಯಿಂದ ರೋಮ್ ರೇಡಿಯೋದಲ್ಲಿ ಅನೇಕ ಭಾಷಣಗಳನ್ನು ಮಾಡಿದ. ಮುಸ್ಸೊಲಿನಿಯಂಥ ಬಲಿಷ್ಠ ನಾಯಕನಲ್ಲಿ ಅವನಿಗಿದ್ದ ವಿಶ್ವಾಸ ಮತ್ತು ಯಹೂದಿಗಳ ಕುರಿತಾದ ದ್ವೇಷ ಬಹುಶಃ ಇದಕ್ಕೆ ಕಾರಣ. ೧೯೪೫ರಲ್ಲಿ ಯುದ್ಧದ ಕೊನೆಯ ಹಂತದಲ್ಲಿ ಪೌಂಡ್ ಬಂಧಿಸಲ್ಪಡುತ್ತಾನೆ. ಇಟೆಲಿಯ ಪೀಸಾ ನಗರದಲ್ಲಿ ಸರಳಿನ ಗೂಡೊಂದರಲ್ಲಿ ಪ್ರಾಣಿಗಳನ್ನು ಇರಿಸುವಂತೆ ಅವನನ್ನು ಕೆಲವು ದಿನ ತೆರೆದ ಬಯಲಲ್ಲಿ ಇರಿಸಲಾಗುತ್ತದೆ. ಆಗಲೂ ಪೌಂಡ್ ನ ಕಾಂಟೋಗಳು ಮುಂದರಿಯುತ್ತಲೇ ಇದ್ದುವು. ನಂತರ ಅಮೇರಿಕೆಗೆ ಕರೆತರಲ್ಪಟ್ಟರೂ ಅಸ್ವಸ್ಥತೆಯ ಕಾರಣ ಅವನು ವಿಚಾರಣೆಗೆ ಗುರಿಯಾಗುವುದಿಲ್ಲ; ಇದಕ್ಕೆ ಮುಖ್ಯವಾಗಿ ಇತರ ಕವಿಗಳು ಅವನ ಪರವಾಗಿ ನೀಡಿದ ಬೆಂಬಲವೇ ಕಾರಣ. ಪೌಂಡ್ ನ ಮೇಲಿದ್ದುದು ದೇಶದ್ರೋಹದಂಥ ಗುರುತರವಾದ ಆರೋಪ. ವಿಚಾರಣೆಗೆ ಗುರಿಪಡಿಸದೆ ಹದಿಮೂರು ವರ್ಷಗಳ ಕಾಲ ಅವನನ್ನು ಮಾನಸಿಕ ಚಿಕಿತ್ಸಾಲಯವೊಂದರಲ್ಲಿ ಇರಿಸಲಾಗುತ್ತದೆ. ಪೀಸಾದ ತನ್ನ ಅನುಭವಗಳನ್ನು ದಿ ಪೈಸನ್ ಕ್ಯಾಂಟೋಸ್ ನಲ್ಲಿ ಪೌಂಡ್ ಉಪಯೋಗಿಸಿಕೊಂಡಿದ್ದಾನೆ. ಇದು ಒಟ್ಟು ಕಾಂಟೋದ ಭಾಗವಾಗಿದ್ದರೂ ಪ್ರತ್ಯೇಕ ಪುಸ್ತಕರೂಪದಲ್ಲೂ ಪ್ರಕಟವಾಯಿತು. ಈ ಪುಸ್ತಕಕ್ಕೆ ಪ್ರತಿಷ್ಠಿತ ಬೋಲಿಂಗನ್ ಬಹುಮಾನ ಬಂದಾಗ ಅದು ವಾದವಿವಾದಗಳಿಗೆ ಎಡೆಯಾಯಿತು.

೧೯೫೮ರಲ್ಲಿ ಪೌಂಡ್ ಬಿಡುಗಡೆಗೊಂಡು ಇಟೆಲಿಗೆ ಮರಳಿದ. ಈ ಹೊತ್ತಿಗೆಲ್ಲಾ ಅವನು ಮಾತಾಡುವುದನ್ನೇ ಕಡಿಮೆ ಮಾಡಿದ್ದ. ಯಾರು ಬಂದು ಮಾತಾಡಿಸಲು ಯತ್ನಿಸಿದರೂ ಅವನು ಮೌನಿಯಾಗಿಯೇ ಇರುತ್ತಿದ್ದ. ೧೯೭೨ರ ನವೆಂಬರ್ ೧ರಂದು ವೆನೀಸ್ ನಲ್ಲಿ ಪೌಂಡ್ ಅಸುನೀಗಿದ.

ಪೌಂಡ್ ನ ಸೋಲು ಗೆಲವುಗಳಿಂದ ಯುವ ಕವಿಗಳು ಕಲಿತುಕೊಳ್ಳುವುದು ಬಹಳಷ್ಟಿದೆ. ಇತರರಿಗೆ ಕಲಿಸುವುದು ಪೌಂಡ್ ಗೆ ಬಹಳ ಪ್ರಿಯವಾದ ಕೆಲಸವೂ ಆಗಿತ್ತು. ಯೇಟ್ಸ್ ನ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವಾಗ ಯೇಟ್ಸ್ ನ ಕವಿತೆಗಳ ಮೇಲೆ ಕೈಯಾಡಿಸಿ ವಿರಸಕ್ಕೆ ಕಾರಣವಾದ್ದೂ ಉಂಟು. ಕವಿತೆ ಬರೆಯುವ ಬಗೆಗಿನ ತನ್ನ ನಂಬಿಕೆಗಳನ್ನು, ಉಪದೇಶಗಳನ್ನು ಪೌಂಡ್ ಅನೇಕ ಲೇಖನಗಳಲ್ಲಿ ದಾಖಲಿಸಿದ್ದಾನೆ. ೧೯೧೨ರಲ್ಲಿ ಇತರ ಸಹಚಿಂತಕರ ಜತೆ ಸೇರಿ ಅವನು ಒಳ್ಳೆಯ ಕವಿತೆಗೆ ಈ ಮೂರು ಸೂತ್ರಗಳನ್ನು ಮುಂದಿಟ್ಟನು:

೧. ವಸ್ತುನಿಷ್ಠ, ಆತ್ಮನಿಷ್ಠ, `ವಸ್ತು’ವಿನ ನೇರ ಪ್ರತಿಪಾದನೆ.
೨. ಮಂಡನೆಗೆ ಅಗತ್ಯವಿಲ್ಲದ ಯಾವುದೇ ಶಬ್ದವನ್ನು ಉಪಯೋಗಿಸದಿರುವಿಕೆ.
೩. ಲಯದ ಕುರಿತು: `ಸಾಂಗತ್ಯ’ಕ್ಕೆ ಅನುಗುಣವಾಗಿ ಸಂಯೋಜನೆ, ಮಾತ್ರಾಗಣಕ್ಕೆ ಅನುಗುಣವಾಗಿ ಅಲ್ಲ.

ಲಯದ ಬಗ್ಗೆ ಪೌಂಡ್ ಗೆ ಬಹಳ ಕಾಳಜಿ. ಹೊಸ ಹೊಸ ಲಯಗಳಿಗೋಸ್ಕರ ಬೇರೆ ಭಾಷೆಯ ಕವಿತೆಗಳನ್ನು ಓದುತ್ತಿರಬೇಕೆಂಬುದು ಅವನ ಸೂಚನೆ. ಕವಿತೆಯ ಭಾಷೆ ಗೊತ್ತಿಲ್ಲದಿದ್ದರೆ ಒಳ್ಳೆಯದೇ ಆಯಿತು -ಆಗ ಅರ್ಥದ ಉಪಟಳವಿರುವುದಿಲ್ಲ! ಅದೇ ರೀತಿ, ಅನುವಾದ ಕಾರ್ಯ ಕೂಡಾ ಕವಿಗೆ ಯೋಗ್ಯವಾದ ತರಬೇತಿಯನ್ನು ನೀಡುತ್ತದೆ.

ಪೌಂಡ್ ಒಂದು ಕಾಲಕ್ಕೆ ಪ್ರತಿಮಾನಿಷ್ಠ ಕವಿ. ಪ್ರತಿಮೆಯೊಂದೇ ಮುಖ್ಯ ಎಂಬ ನಂಬಿಕೆಯಲ್ಲಿ ಶಕ್ತಿಯುತವಾದ ಪ್ರತಿಮೆಗಳನ್ನು ಹುಡುಕುತ್ತಿದ್ದ. `ಮೆಟ್ರೋ ಸ್ಟೇಶನಿನಲ್ಲಿ’ ಎಂಬುದು ಅಂಥದೊಂದು ಸ್ಥಿತಿಯಲ್ಲಿ ದೊಡ್ಡದೊಂದು ರಚನೆಯನ್ನು ಪೃಥಕ್ಕರಿಸಿ, ಎರಡೇ ಸಾಲುಗಳಿಗೆ ಭಟ್ಟಿಯಿಳಿಸಿದಂಥ ಸುಪ್ರಸಿದ್ಧ ಪ್ರತಿಮಾ ಕವಿತೆ. ಆದರೆ ಕ್ರಮೇಣ ಈ ಹಟವನ್ನು ಬಿಟ್ಟುಕೊಟ್ಟು ದೀರ್ಘ ಕವಿತೆಗಳನ್ನು ಬರೆಯಲಿಕ್ಕೆ ಆರಂಭಸಿದ. ಯಾವ ನಂಬಿಕೆಗಳನ್ನೂ ಬೇಕೆಂದಾಗ ಮುರಿಯಿರಿ ಎಂದು ಅವನೇ ಒಂದೆಡೆ ಹೇಳುತ್ತಾನೆ! ಬಹುಶಃ ಆದ್ದರಿಂದಲೇ ಪೌಂಡ್ ನ ಛಾಪು ಎಲ್ಲದರ ಮೇಲೆ ಇದ್ದರೂ, ಅವನ ಕವಿತೆಗಳು ಒಂದರಂತೆ ಒಂದು ಇರುವುದಿಲ್ಲ.

ಪೌಂಡ್ ನ ಇನ್ನೊಂದು ಘೋಷಣೆ `ಮೇಕ್ ಇಟ್ ನ್ಯೂ’ (ನವೀಕರಿಸು) ಎನ್ನುವುದು. ನಮ್ಮ ಹಿಂದಣ ಕಾವ್ಯವನ್ನು, ಪರಂಪರೆಯನ್ನು, ದೇಶೀಯ ಮತ್ತು ವಿದೇಶೀಯ ಎರಡನ್ನೂ, ನಾವು ಸದಾ ನವೀಕರಿಸಬೇಕು ಎನ್ನುವುದು ಅವನ ಸಲಹೆ.

ಇಪ್ಪತ್ತನೇ ಶತಮಾನದ ಮೊದಲ ದಶಕಗಳಲ್ಲಿ ಇಂಗ್ಲೀಷ್ ಕಾವ್ಯ (ಜಾರ್ಜಿಯನ್ ಕಾವ್ಯ) ಒಂದು ಜಾಡಿಗೆ ಬಿದ್ದು ಚೇತನರಹಿತವಾಗಿದ್ದಾಗ, ಪೌಂಡ್ ಬಂದು ದೊಡ್ಡದೊಂದು ಅಲೆಯನ್ನೇ ಎಬ್ಬಿಸಿದನೆಂದು ಹೇಳಬಹುದು. ಯೇಟ್ಸ್, ಪೌಂಡ್ ಮತ್ತು ಎಲಿಯಟ್ ಆಧುನಿಕ ಇಂಗ್ಲೀಷ್ ಕಾವ್ಯದ ರತ್ನತ್ರಯರು. ಇವರಲ್ಲಿ ಯೇಟ್ಸ್ ಕಾವ್ಯವಾಕ್ಯಗಳನ್ನು ಅನಗತ್ಯ ವಕ್ರತೆಯಿಂದ ಮುಕ್ತಗೊಳಿಸಿದರೆ, ಪೌಂಡ್ ಅದನ್ನು ಇಯಾಂಬಿಕ್ ಪೆಂಟಾಮೀಟರಿನ ಏಕತಾನತೆಯಿಂದ ಮುಕ್ತಗೊಳಿಸಿದ ಎನ್ನಬಹುದು. ಹಾಗೂ ಪದ್ಯ ಪ್ರತಿಯೊಂದು ಸಾಲಿನ ಕೊನೆಯಲ್ಲಿ ನಿಲ್ಲದೆ, ಮುಂದಿನ ಸಾಲಿನತ್ತ ತೋರಬೇಕಾದ ತುಯ್ತವನ್ನು ಮಿಲ್ಟನನ ಆರ್ಭಟವಿಲ್ಲದೆ ಗಳಿಸಿಕೊಟ್ಟವನೂ ಪೌಂಡನೇ.

ದ್ವಿತೀಯ ಮಹಾಯುದ್ಧ ಕಾಲದಲ್ಲಿ ಪೌಂಡ್ ನ ವರ್ತನೆ ಹೇಗಿದ್ದರೂ ಕಾಲ ಅವನನ್ನು ಕ್ಷಮಿಸಿದಂತೆ ಕಾಣುತ್ತದೆ. ಅವನ ರೇಡಿಯೋ ಭಾಷಣಗಳನ್ನು ವಿಶ್ಲೇಷಿಸಿದವರು ಅವುಗಳಲ್ಲಿ ವಿಚಾರಗಳ ಗೊಂದಲವನ್ನಷ್ಟೆ ಕಾಣುತ್ತಾರೆಯೇ ವಿನಾ ದ್ವೇಷದ ಕಿಚ್ಚನ್ನಲ್ಲ. ಹೇಗಿದ್ದರೂ, ಈ ರಾಜಕೀಯ ಕಾರಣಕ್ಕಾಗಿ ಎಜ್ರಾ ಪೌಂಡ್ ನ ಕವಿತೆಗಳು ಹಲವು ವಿದ್ಯಾಲಯಗಳಿಂದ ದೂರವೇ ಉಳಿದುವು. ಟಿ.ಎಸ್. ಎಲಿಯಟ್ ಪ್ರಚಾರಕ್ಕೆ ಬಂದಂತೆ ಪೌಂಡ್ ಪ್ರಚಾರಕ್ಕೆ ಬರಲಿಲ್ಲ.

ಇದಕ್ಕಿರಬಹುದಾದ ಇನ್ನೊಂದು ಕಾರಣವೆಂದರೆ ಅವನ ಕಾವ್ಯದ ಕ್ಲಿಷ್ಟತೆ. ಪೌಂಡ್ ಕೊಡುವ ಟಿಪ್ಪಣಿಗಳು ಬಹಳ ಕಡಿಮೆ. ಚೈನೀಸ್, ಗ್ರೀಕ್, ಇಟಾಲಿಯನ್, ಹಳೆ ಇಂಗ್ಲೀಷ್ ಭಾಷೆಯ ಶಬ್ದಗಳನ್ನೂ ಸಾಲುಗಳನ್ನೂ ಅವನು ಅಲ್ಲಲ್ಲಿ ಸೇರಿಸಿಕೊಳ್ಳುತ್ತಾನೆ; ಇನ್ನು ಸಂದರ್ಭ ಸೂಚನೆಗಳಂತೂ ಬಹಳಷ್ಟು. ಆದ್ದರಿಂದ ಗಂಭೀರವಾಗಿ ಅಭ್ಯಾಸಮಾಡಬಲ್ಲ ವಿದ್ಯಾರ್ಥಿಗಳಿಗೆ ಮಾತ್ರವೇ ಈ ಕವಿತೆಗಳು ತಕ್ಕವು. ಹೀಗಿದ್ದರೂ, ಪೌಂಡ್ ನ್ನ ಅವನ ಲಯಮಾಧುರ್ಯಕ್ಕೋಸ್ಕರ ಯಾರು ಬೇಕಾದರೂ ಓದಿ ಖುಷಿ ಪಡುವುದು ಸಾಧ್ಯ.

ಪೌಂಡ್ ನ ಕೆಲವು ಸ್ವತಂತ್ರ ಹಾಗೂ ಅನುವಾದಿತ ರಚನೆಗಳನ್ನು ಇಲ್ಲಿ ಕನ್ನಡಕ್ಕೆ ತರುವ ಯತ್ನ ನಡೆಸಲಾಗಿದೆ. ಅನುವಾದ ಕಾರ್ಯದಲ್ಲಿ ಅಪ್ರತಿಮನಾದ ಪೌಂಡ್ ನ್ನ ಅನುವಾದಿಸುವುದು ಹೇಗೆ ಕಷ್ಟಸಾಧ್ಯವೋ ಹಾಗೇ ಆಹ್ಲಾದಕರವೂ ಆದ ಸಂಗತಿ. ಈ ಅನುವಾದ ಮಾಡುವಾಗ, ಪೌಂಡ್ ನ ಪ್ರತ್ಯೇಕ ಕೊಡುಗೆಗಳನ್ನು ಗಮನದಲ್ಲಿ ಇರಿಸಿಕೊಳ್ಳಲು ಯತ್ನಿಸಲಾಗಿದೆ. ಆದರೆ ಚೀನೀ ಲಿಪಿಗಳಿರುವ ಕವಿತೆಗಳನ್ನು ತಾಂತ್ರಿಕ ತೊಂದರೆಗಳಿಂದಾಗಿ ಕೈಬಿಡಲಾಗಿದೆ. ಇಲ್ಲಿ ಅನುವಾದಿಸಿದ ಕವಿತೆಗಳಲ್ಲಿ ಕೆಲವು ಪೌಂಡ್ ಸ್ವತಃ ರಿಹಾಕೊ, ಮೈ ಶೆಂಗ್ ಮುಂತಾದ ಪುರಾತನ ಚೀನೀ ಕವಿಗಳಿಂದ ಇಂಗ್ಲಿಷ್ ಗೆ ಅನುವಾದಿಸಿದಂಥವು.

೧ ರಾತ್ರಿ ಸರಿದರೂ

ದಟ್ಟವಾದ ಬಿದಿರ ಮೆಳೆ
ಕೆಳಗೆ ಹುಟ್ಟಿ ಬೆಳೆದ ಕಳಲೆ
ಅದರ ಪಲ್ಯ ಒಲೆ ಮೇಲೆ
ಸಂಜೆಯಿಂದಲೂ-

ಹೊಸ್ತಿಲಲ್ಲಿ ರಂಗೋಲಿ
ಮೇಜಿನಲ್ಲಿ ಹೂದಾನಿ
ಎಲೆ ಸಹಿತ ಕಿತ್ತಂಥ
ಅಚ್ಚ ಕೆಂಪು ಗುಲಾಬಿ

ತೊಳೆದು ಬೆಳಗಿ ಪಾತ್ರೆ ಪಗಡಿ
ಗೋಡೆ ಬದಿಗೆ ಕಂದೀಲು
ಉರಿಯುತ್ತಿತ್ತು ತನ್ನಷ್ಟಕೇ
ರಾತ್ರಿಯಿಂದಲೂ-

ಹಚ್ಚಿ ಕಾಡಿಗೆ ಹೆಚ್ಚಾಯಿತು
ಕಣ್ಣ ಸುತ್ತ ಕಪ್ಪಾಯಿತು
ಕನ್ನಡಿಯೊಳಗೆ ನೋಡಿ ನೋಡಿ
ಪೌಡರಿನಿಂದ ಒರಸಾಯಿತು

ತನಗೆ ತಾನೇ ಬೆಚ್ಚುವ
ಎಲ್ಲ ಗುಟ್ಟ ಬಿಚ್ಚುವ
ಕಾಲ ಗೆಜ್ಜೆ ಸುಮ್ಮನಿರದು
ಎಷ್ಟೇ ಮೆಲ್ಲ ನಡೆದರೂ-

ಎಡೆಬಿಡದೇ ಹೊಡೆಯುವುದು
ಕಿಟಿಕಿ ಪರದೆ ಬಡಿಯುವುದು
ಎಂದೊ ಮುಳುಗಿದಂಥ ರವಿಯ
ಬಣ್ಣವಿನ್ನೂ ಹಿಡಿದಿರುವುದು

ಗಾಳಿ ಸುಮ್ಮನಿರುವುದಿಲ್ಲ
ಹಚ್ಚಿದೆಲ್ಲ ಅತ್ತರನೂ
ದೋಚಿಕೊಂಡು ಹೋಗುವುದು
ಯಾರಿಗಾಗಿಯೋ-

ನೀ ಮಾತ್ರ ಕಂಠಪೂರ್ತಿ
ಕುಡಿದು ಬಂದಿ ತೂರಾಡಿ
ಕರಗಲಿಲ್ಲ ನಿನ್ನ ಕಣ್ಣ
ಕವಿದಂಥ ದಟ್ಟ ಮಂಕು
ರಾತ್ರಿ ಸರಿದರೂ-ಆಹ!
ರಾತ್ರಿ ಸರಿದರೂ

೨ ಸಿನೋ
ಇಟಾಲಿಯನ್ ಕಾಂಪಾಞಾ ೧೩೦೯, ತೊರಸುದಾರಿ

ಬ್ಹಾ! ಹಾಡಿ ಹೊಗಳಿದ್ದೇನೆ ಮೂರು ಪಟ್ಟಣಗಳಲ್ಲಿ ಹೆಣ್ಣುಗಳ,
ಎಲ್ಲವೂ ಒಂದೇ;
ಈಗ ಸೂರ್ಯನ ಬಗ್ಗೆ ಹಾಡುವೆ.

ತುಟಿಗಳು, ಶಬ್ದಗಳು, ಹೀಗವರ ಬಲೆ ಬೀಸಿ,
ಕನಸುಗಳು, ಶಬ್ದಗಳು, ಹೀಗೆ ಚಿನ್ನಾಭರಣ,
ಹಳೇ ದೇವತೆಯ ವಿಚಿತ್ರ ಮಾಟಗಳು,
ಡೊಂಬ ಕಾಗೆಗಳು, ರಾತ್ರಿಗಳು, ಆಮಿಷ:
ಆದರೆ ಅವರಲ್ಲ;
ಅವರು ಹಾಡಿನ ಜೀವಾತ್ಮಗಳೇ ಆಗಿದ್ದಮೇಲೆ.

ಕಣ್ಣುಗಳು, ಕನಸುಗಳು, ತುಟಿಗಳು, ಹಾಗೂ ಸರಿಯುವವು ರಾತ್ರಿಗಳು.
ಮತ್ತೊಮ್ಮೆ ಮಾರ್ಗಕ್ಕೆ ಬಂದಿದ್ದ ಮೇಲೆ
ಅವರಲ್ಲ.
ತಮ್ಮ ಗೋಪುರಗಳಲ್ಲಿ ನಮ್ಮ ಶ್ರುತಿಯನು ಮರೆತು
ಒಮ್ಮೆ ಗಾಳಿಬರಹಕ್ಕೆ
ಅವರು ನಮ್ಮ- ತಮ್ಮತ್ತ ಕನಸ ಕಾಣುವರು ಹಾಗೂ
ನಿಡುಸುಯ್ದು ಅನ್ನುವರು, “ಈಗ ಸಿನೋ,
ಅನುರಕ್ತ ಸಿನೋ, ಫಳ್ಳನೇ ನಗುವಂಥ,
ಸಿನೋ ಹೇಳುವುದ ಹೇಳುವ, ಆಗಾಗ ಅಣಕಿಸುವ.
ದುರ್ಬಲ ಸಿನೋ, ಸೂರ್ಯಕಿರಣದ ಕೆಳಗೆ
ಹಳೇ ದಾರಿಗಳ ಅಲೆವ ತನ್ನ ಪಂಗಡದಲ್ಲೆ ದೃಢನು,
ಈ ಇಲ್ಲಿರಬಾರದಿತ್ತೇ ಸಿನೋ ಲೂತ್ತಿನವನು!”

ಒಂದು ಸಲ, ಎರಡು ಸಲ, ಇಡೀ ವರ್ಷ-
ಅಸ್ಪಷ್ಟವಾಗಿ ಈ ರೀತಿ ಅವರು:

“ಸಿನೋ?” “ಓ, ಯಾ, ಸಿನೋ ಪೊಲ್ನೇಸಿ
ಆ ಗಮಕಿ ತಾನೆ ನೀವು ಹೇಳೋದು?”
“ಆ ಹೌದು, ಒಮ್ಮೆ ದಾರಿಯಲಿ ಸಿಕ್ಕಿದ್ದ,
ಬಾಯಿ ಬಡುಕ, ಆದರೂ …

(ಎಲ್ಲ ಒಂದೇ ಅನ್ನಿ ಈ ಅಲೆಮಾರಿಗಳು),
ಪಿಡುಗು! ಅವು ಅವಂದೇ ಹಾಡುಗಳಾ?
ಅಥ್ವ ಬೇರೆಯವರದ್ದಾ?
ಇರಲಿ, ತಾವು, ಸ್ವಾಮೀ ಊರಲ್ಲಿ ಎಲ್ಲ ಹೇಗೆ?”

ಆದರೆ, ತಾವು “ಸ್ವಾಮೀ,” ದೇವರ ದಯ!
ಹಾಗೂ ನನಗಿಷ್ಟೆ ಗೊತ್ತು, ತಾವು ಹೊರಗಿದ್ದಿರಿ ಸ್ವಾಮೀ, ತಾವು
ಆಗಿದ್ದಿರಿ ನೆಲರಹಿತ ಸಿನೋ, ನಾನಿರುವ ಹಾಗೆಯೇ
ಓ ಸಿನಿಸ್ಟ್ರೊ.

ಹಾಡಿ ಹೊಗಳಿದ್ದೇನೆ ಮೂರು ಪಟ್ಟಣಗಳಲ್ಲಿ ಹೆಣ್ಣುಗಳ
ಎಲ್ಲವೂ ಒಂದೇ.
ಸೂರ್ಯನ ಬಗ್ಗೆ ಹಾಡುವೆ.
…ಏನು? …ಅವರ ಕಣ್ಣುಗಳು ಹೆಚ್ಚಾಗಿ ಬೂದು,
ಎಲ್ಲವೂ ಒಂದೇ, ನಾನು ಸೂರ್ಯನ ಬಗ್ಗೆ ಹಾಡುವೆ.

“’ಪೋಲೋ, ಫೋಬೀ, ನಮ್ಮ ಯಾತ್ರೆಯೊಳು
ನಿನ್ನ ನಗೆಯನೆ ಅಲೆಮಾರಿಬಿಟ್ಟು;
ನಿನ್ನ ಢಾಳಕ್ಕೆ ನಮ್ಮ ಗೋಳ ಕರಗಿಸಹೇಳು.
ಮೋಡವೂ ಮತ್ತು ಮಳೆ- ಕಣ್ಣ ನೀರೂ ಓಟಕಿತ್ತು!

ಸದಾ ಹುಡುಕುತ್ತ ಹೊಸದಾಗಿ ಕಡಿದ ಅಗಸೆದಾರಿಗಳನ್ನು
ಸೂರ್ಯನ ತೋಟಗಳಿಗೆ …

. . .

ಹಾಡಿ ಹೊಗಳಿದ್ದೇನೆ ಮೂರು ಪಟ್ಟಣಗಳಲ್ಲಿ ಹೆಣ್ಣುಗಳ.
ಎಲ್ಲವೂ ಒಂದೇ.

ಬೆಳ್ಳಕ್ಕಿಗಳ ಬಗ್ಗೆ ಹಾಡುವೆನು
ಸ್ವರ್ಗದ ನೀಲಿ ನೀರುಗಳಲ್ಲಿ
ಅದರ ಸಮುದ್ರಕ್ಕೆ ಸೀರ್ಪಣಿಯಾದ ಮೋಡಗಳ ಬಗ್ಗೆಯೂ.”

೩ ಪ್ರೀತಿಯ ಗಳಿಗೆ

“ತುಂಬಾ ಉಪಕಾರ, ಏನೇ ಆದರೂ.” ಹಾಗೆಂದು ಆಕೆ ತಿರುಗಿದಳು
ಮತ್ತು, ಗಾಳಿ ಮೇಲೆತ್ತಿ ಒತ್ತರಿಸಿದಾಗ ಹೇಗೆ ಸೂರ್ಯನ ಕಿರಣ
ಮಾಯುವುದೊ ತೊನೆವ ಹೂಗಳ ಮೇಲಿಂದ, ಹಾಗೆ
ನನ್ನ ಬಳಿಯಿಂದ ಅವಳು ಬೇಗನೆ ನಡೆದಳು. ಇಲ್ಲ, ಏನೇ ಆದರೂ
ಒಂದು ಗಳಿಗೆಯ ಹೊತ್ತು ಉಜ್ವಲವಾಗಿತ್ತು. ಹಾಗೂ ಎಂಥ
ಉನ್ನತ ದೇವತೆಗಳಿಗಾದರೂ
ಈ ಗಳಿಗೆಗೆ ತಾವು ಸಾಕ್ಷಿಯಾಗಿದ್ದೆವೆಂಬುದಕಿಂತ
ಕೊಚ್ಚಿಕೊಳ್ಳುವುದಕ್ಕೆ ಇರಲಾರದೇನೂ.

೪ ಪ್ರಶ್ನೋತ್ತರ

ಜನ ಮೆಚ್ಚುವರೇ ಇವುಗಳ?
(ಈ ಹಾಡುಗಳ?)
ಕಿಂಪುರುಷನಿಂದ ಪುಕ್ಕಲು ತರಳೆ ಹೇಗೆ
(ಅಥವ ಡಣನಾಯಕನಿಂದ)
ಓಡುವಳೊ ಹಾಗೆ ಓಡುತಿದ್ದಾರೆ ಈಗಾಗಲೆ ಹುಯ್ಯಲಿಟ್ಟು.

ಮುಟ್ಟಬಲ್ಲವೆ ಅವರನ್ನು ಸತ್ಯಾಸತ್ಯಗಳು?
ಅವರ ಅಕೃಷ್ಟ ಭೋಳೆತನವೂ ಅಭೇದ್ಯ.
ನಿಮ್ಮ ಕಾಲಿಗೆ ಬೀಳುವೆ, ನನ್ನ ವಿಮರ್ಶಕ ಸ್ನೇಹಿತರೆ,
ನನಗಾಗಿ ಓದುಗರ ಹಿಡಿದು ತರುವುದು ಬೇಡ.

ಕಲ್ಲ ಕೊಟಕುಗಳಲ್ಲಿ ನನ್ನ ಸ್ವೇಚ್ಛಾವರ್ಗದ ಕೂಡೆ
ಜೋಡಿಯಾಗುವವ ನಾನು;
ಬಚ್ಚಿಟ್ಟ ಕುಹರಗಳು
ನನ್ನ ಕಾಲ ಸಪ್ಪಳವ ಕೇಳಿವೆ,
ತಂಬೆಳಕಿನಲ್ಲಿ
ಕತ್ತಲಲಿ.

೫ ಅಟ್ಟ

ಬಾ, ಉಳ್ಳವರ ಬಗ್ಗೆ ಮರುಗುವಾ
ಬಾ, ಗೆಳತಿ, ನೆನಪಿರಲಿ
ಅಡುಗೆಗುಳ್ಳವರಿಗೆ ಗೆಳೆಯರೇ ಇಲ್ಲ,
ಗೆಳೆಯರಿದ್ದಾರೆ ನಮಗೆ ಅಡುಗೆಯವರಿಲ್ಲ.
ಬಾ, ಮದುವೆಯಾದವರ, ಆಗದಿದ್ದವರ ಬಗ್ಗೆ ಮರುಗುವಾ.

ಬೆಳಕೊಡೆದು ಬರುತ್ತಿದೆ ಪುಟ್ಟಪಾದಗಳ
ಪಾವ್ಲೋವಾ ಬರುವ ಹಾಗೆ,
ನಾ ಬಯಸಿದವಳ ಪಕ್ಕದಲ್ಲೆ ನಾನು,
ಮತ್ತಿದಕ್ಕಿಂತ ಬದುಕಿನಲ್ಲಿ
ಹೆಚ್ಚೇನು-ಈ ನಿರಾಳ ತಂಪು ಕ್ಷಣ
ಜತೆ ಜತೆಗೆ ಎಚ್ಚರಾಗುವ ಕ್ಷಣ.

೬ ವಂದನೆ

ಪೂರ್ಣಾವತಾರಿ ಧಡ್ಡರ ತಲೆಮಾರೇ,
ಹಾಗೂ ಪೂರ್ಣಾವತಾರಿ ಅಸ್ವತ್ಥಚಿತ್ತರ,
ಬಿಸಿಲೊಳಗೆ ವನಭೋಜನ ಮಾಡುವ ಬೆಸ್ತರ ಕಂಡಿರುವೆ,
ಅವರ ಅಶುಭ್ರ ಹೆಂಡತಿ ಮಕ್ಕಳನು ಕಂಡಿರುವೆ,
ಅವರ ಇಡೀ ಹಲ್ಲುಗಳು ಬಿರಿದ ನಗುವ ಕಂಡಿರುವೆ,
ಹಾಗೂ ಗೊಳ್ಳನೆ ನಗೆಯ ಕೇಳಿರುವೆ.
ನಿಮಗಿಂತಲೂ ನಾನು ಸುಖಿಯಾಗಿರುವೆ,
ನನಗಿಂತಲೂ ಅವರು ಸುಖಿಯಾಗಿದ್ದರು;
ಅಲ್ಲದೇ ಮೀನುಗಳು ಈಜುವುವು ಕೊಳದಲ್ಲಿ
ಅವಕ್ಕೋ ಚೂರು ಬಟ್ಟೆಯೂ ಇಲ್ಲ.

೭ ವಂದನೆ: ಎರಡನೇ ಬಾರಿ

ಜನ ನಿಮ್ಮ ಹೊಗಳಿದರು, ನನ್ನ ಪುಸ್ತಕಗಳೇ,
ಯಾಕೆಂದರೆ ನಾನು ಆಗ ತಾನೇ ಬಂದಿದ್ದೆ ಹಳ್ಳಿಯಿಂದ;
ಎರಡು ದಶಕದ ಕಾಲ ಹಿಂದಿದ್ದೆ ನಾನು
ಹಾಗೆ ಸಿಕ್ಕರು ನಿಮಗೆ ಸಿದ್ಧ ಶ್ರಾವಕರು.
ನಿಮ್ಮ ನಿರಾಕರಿಸುವುದಿಲ್ಲ ನಾನು,
ನಿಮ್ಮ ಸಂತತಿಯ ನಿರಾಕರಿಸದಿರಿ ನೀವೂ.

ಯಾವುದೇ ಕುಶಲ ಸೂತ್ರಗಳಿರದೆ ನಿಂತಿದ್ದಾರೆ ಇಲ್ಲಿ,
ಯಾವುದೇ ಪಳೆಯುಳಿಕೆ ತೋರಿಸದೆ ಇದ್ದಾರೆ,
ಅವರ ಕಿರಿಕಿರಿಯ ಕೇಳಿ:
“ಇದೇ ಏನು?” ಅವರೆನ್ನುವರು, “ಕವಿಗಳಿಂದ ನಾವು
ಬಯಸುವ ಬಕ್ವಾಸ್?”
“ವರ್ಣನಾ ವೈಖರಿಯೆಲ್ಲಿ?”
“ಎಲ್ಲಿ ಕಲ್ಪನಾ ಲಹರಿ?”
“ಇಲ್ಲ! ಅವನ ಮೊದಲ ಕೃತಿಯೇ ಇದ್ದುದರಲ್ಲಿ ಹೆಚ್ಚು.”
“ಪಾಪ! ಬುದ್ಧಿ ಬಂದಿದೆ ಈಗ.”

ಹೋಗಿ, ಬೆತ್ತಲೆ ನನ್ನ ತಲೆಹೋಕ ಪದ್ಯಗಳೇ,
ಹಗುರ ಪಾದದ ಮೇಲೆ ಹೋಗಿ!
(ಅಥವ ಬೇಕಿದ್ದರೆ ಎರಡು ಪಾದಗಳ ಮೇಲೆ!)
ಹೋಗಿ ಕುಣಿದಾಡಿ ಬೇಶರಮ್
ಆಗಿ ಕುಚೇಷ್ಟೆಯಲ್ಲಿ ಅಧಿಕಪ್ರಸಂಗಿ!
ಕುಶಲವೇ ಕೇಳಿ ಘನ ಗಂಭೀರರಿಗೆ ಹಾಗು ಮಹಾ ಬೋರರಿಗೆ,
ವಂದಿಸಿರಿ ಮೂಗು ಮುರಿದೇ ಅಂಥವರಿಗೆ!

ಇಗೋ ಗೆಜ್ಜೆಗಳು ಇಗೋ ಬಣ್ಣದ ಕಾಗದಗಳು.
ಹೋಗಿ ಜೀವ ಕೊಡಿ ವಸ್ತುಗಳಿಗೆ!
ಜೀವ ಕೊಡಿ “ಸಾಕ್ಷಿ”ಗೂ.
ಹೋಗಿ ಕೇಕೆ ಹಾಕಿ!
ಕುಣಿದು ಜನರಲ್ಲಿ ನಾಚಿಕೆಯ ಹುಟ್ಟಿಸಿರಿ,
ಉದ್ರಿಕ್ತಲಿಂಗ ಕುಣಿತವನು ಕುಣಿಯಿರಿ
ಮತ್ತು ಸಿಬಿಲಿಯ ಕತೆಗಳನ್ನು ಹೇಳಿರಿ!

ಮಡಿವಂತೆಯರ ಲಂಗಗಳ ಕೆದಕಿರಿ,
ಅಂಥವರ ಮೊಣಕಾಲು ಗಂಟುಗಳ ಬಣ್ಣಿಸಿರಿ,
ಆದರೆ, ಎಲ್ಲಕ್ಕೂ ಹೆಚ್ಚಾಗಿ ಕಾರ್ಯಜಾಣರ ಬಳಿಗೆ ಹೋಗಿರಿ-
ಕೆಲಸ ಮಾಡಲ್ಲ ನಾವು ಹಾಗೂ
ಎಂದೆಂದಿಗೂ ಇರುತ್ತೇವೆ, ಎನ್ನಿರಿ.

೮ ಒಪ್ಪಂದ

ನಿನ್ನ ಜತೆಗೊಂದು ಒಪ್ಪಂದ, ವಾಲ್ಟ್ ವ್ಹಿಟ್ ಮನ್-
ನಿನ್ನ ಕಂಡರಾಗದೇ ಸಾಕಷ್ಟು ಇದ್ದೆ.
ಬೆಳೆದ ಹುಡುಗನ ಹಾಗೆ ಬಂದಿರುವೆನೀಗ
ಈ ಹುಡುಗನ ತಂದೆಯೋ ಧಡ್ಡತಲೆಯವನು;
ರಾಜಿ ಮಾಡುವುದಕ್ಕೆ ನಾನೀಗ ತಕ್ಕಷ್ಟು ಬೆಳೆದಿರುವೆ.
ಹೊಸ ದಿಮ್ಮಿಯನು ಕಡಿದವ ನೀನೇ,
ಕೆತ್ತನೆಗೆ ಸಮಯವೀಗ.
ಒಂದೆ ರಸ ಒಂದೆ ಬೇರಿನವರು ನಾವು-
ವ್ಯವಹಾರವಿರಲಿ ಇಬ್ಬರ ನಡುವೆ.

೯ ನಾಟ್ಯ ಭಂಗಿ

ಕಪ್ಪು ಕಣ್ಣುಗಳ,
ನನ್ನ ಕನಸಿನ ಹೆಣ್ಣೆ,
ದಂತದ ಹಾವುಗೆಯವಳೆ,
ಕುಣಿವವರಲ್ಲಿ ನಿನ್ನಂತೆ ಇನ್ನಿಲ್ಲ,
ನಿನ್ನಷ್ಟು ಪಾದಗತಿಯುಳ್ಳವರು ಯಾರೂ.

ಡೇರೆಗಳಲ್ಲಿ ನಿನ್ನ ನೋಡಿಲ್ಲ,
ಮುರಿದ ಕತ್ತಲೆಯಲ್ಲು ನೋಡಿಲ್ಲ.
ಬಾವಿ ಕಟ್ಟೆಯಲಿ ಕೊಡಗಳ ಹಿಡಿದು
ನಿಂತ ಹೆಣ್ಣುಗಳ ನಡುವೆಯೂ ನೋಡಿಲ್ಲ.

ತೊಗಟೆಯೊಳಗಿನ ಚಿಗುರಿನ ತೆರ ನಿನ್ನ ತೋಳುಗಳು;
ಮೋರೆಯೋ ಬೆಳಕುಗಳ ಹೊಳೆ.

ಬಾದಾಮಿಯಂತೆ ಬಿಳಿ ನಿನ್ನ ಭುಜಗಳು;
ಇದೀಗ ಸುಲಿದ ಹೊಸ ಬಾದಾಮಿಗಳು.
ಖೋಜಾಗಳ ನಿನಗೆ ಕಾವಲಿರಿಸಿಲ್ಲ;
ತಾಮ್ರದ ಕಂಬಿಗಳನ್ನೂ ರಕ್ಷಣೆಗೆ ನಿಲಿಸಿಲ್ಲ.

ನೀನು ವಿಶ್ರಮಿಸುವಲ್ಲಿ ಮರಕತವೂ ಬೆಳ್ಳಿಯೂ.
ಬಂಗಾರದ ಚಿತ್ರ ಬಿಡಿಸಿರುವ ಕಂದುಬಣ್ಣದ ಬಟ್ಟೆ ನಿನ್ನ ಸುತ್ತಲೂ,
ಓ ನಥಟ್-ಇಖೆನೆ, “ನದೀತೀರದ ವೃಕ್ಷ.”

ನೀರ ಸಸ್ಯದ ನಡುವೆ ತೊರೆಯಂತೆ ನಿನ್ನ ತೋಳುಗಳು ನನ್ನ ಮೇಲೆ;
ನಿನ್ನ ಬೆರಳುಗಳೋ ಹೆಪ್ಪುಗಟ್ಟಿದ ಪ್ರವಾಹವೇ.

ಬೆಣಚು ಕಲ್ಲುಗಳಷ್ಟು ಬಿಳಿ ನಿನ್ನ ಸಖಿಯರು;
ಅವರ ಸಂಗೀತ ನಿನ್ನ ಕವಿದು!

ಕುಣಿವವರಲ್ಲಿ ನಿನ್ನಂತೆ ಇನ್ನಿಲ್ಲ;
ನಿನ್ನಷ್ಟು ಪಾದಗತಿಯುಳ್ಳವರು ಯಾರೂ.

೧೦ ಉಳಿದವರು

ನಿಸ್ಸಹಾಯಕರಾಗಿ ನನ್ನ ದೇಶದಲ್ಲಿರುವವರೆ,
ಜೀತಕ್ಕೆ ಒಳಗಾದ ಉಳಿಕೆಗಳೆ!

ಕಲಾವಿದರೆ, ಧರೆಗೆ ಭಗ್ನರಾದವರೆ
ಹಾದಿ ತಪ್ಪಿದವರೆ, ಹಳ್ಳಿಗಳಲ್ಲಿ ಕಳೆದುಹೋದವರೆ,
ಸಂದೇಹಕ್ಕೆ ಗುರಿಯಾದವರೆ, ಟೀಕೆಗೆ ಸಂದವರೆ,

ಸೌಂದರ್ಯಪ್ರೇಮಿಗಳೆ, ಹಸಿದವರೆ,
ಪದ್ಧತಿಗಳೆದುರು ಸೋತು ಸುಣ್ಣಾದವರೆ,
ನಿಯಂತ್ರಣದ ವಿರುದ್ಧ ನಿಸ್ಸಹಾಯಕರೆ;

ವಿಜಯಗಳಿಗಾಗಿ ಬಿಡದೆ ಹೋರಾಡಿ
ಸವೆಯಲಾರದ ನೀವು,
ಬರೀ ಮಾತಾಡಬಲ್ಲ, ಆದರೆ ಪುನರುಚ್ಚಾರ
ಮಾಡುವರೆ ಮನವ ಉಕ್ಕಾಗಿಸಲಾರದವರು;

ಸೂಕ್ಷ್ಮಸಂವೇದನೆಯ ನೀವು,
ಸುಳ್ಳು ಜ್ಞಾನದ ವಿರುದ್ಧ ಚೂರು ಚೂರಾದವರು,
ನೀವಾಗಿಯೇ ಎಲ್ಲ ತಿಳಿಯಬಲ್ಲವರು
ದ್ವೇಷಾಸೂಯೆಗೊಳಗಾದವರು, ಒಳಗೇ ಉಳಿದವರು:

ಯೋಚನೆ ಮಾಡಿ:
ಚಂಡಮಾರುತವನ್ನು ನಾನು ಎದುರಿಸಿದ್ದೇನೆ
ನನ್ನ ಗಡೀಪಾರನ್ನು ಹಿಮ್ಮೆಟ್ಟಿಸಿದ್ದೇನೆ.

೧೧ ಹೋಗಿ

ನನ್ನ ಹಾಡುಗಳೇ ಹೋಗಿ, ತರುಣರಿಂದಲೂ ಅಸಹಿಷ್ಣುಗಳಿಂದಲೂ
ನಿಮ್ಮ ಮೆಚ್ಚುಗೆಯ ಗಳಿಸಿರಿ,
ಪರಿಪಕ್ವತೆಯ ಆರಾಧಕರ ನಡುವೆಯಷ್ಟೇ ನಡೆಯಿರಿ,
ಕಡು ಸೋಫೋಕ್ಲಿಯನ್ ಪ್ರಭೆಯಲ್ಲಿ ಸದಾ ನಿಂತಿರಲು ಬಯಸಿರಿ
ಹಾಗೂ ನಿಮ್ಮ ಘಾಯಗಳನದರಿಂದ ಮನಸಾರೆ ಕೊಳ್ಳಿರಿ.

೧೨ ಸ್ನಾನದ ಮರಿಗೆ

ಬಿಳೀ ಪಿಂಙಣಿ ಲೇಪಿಸಿದ ಸ್ನಾನದ ಮರಿಗೆಯಂತೆ,
ಬಿಸಿನೀರು ಬಿಸಿಯ ಬಿಟ್ಟುಕೊಟ್ಟಾಗ ಅಥವ ಉಗುರುಬಿಸಿಗಿಳಿದಾಗ,
ಅಂತೆಯೇ ನಮ್ಮಿಬ್ಬರ ಉದಾರ ಪ್ರಣಯದ ನಿಧಾನ ತಣಿಯುವಿಕೆ,
ಓ ನನ್ನ ಬಹು ಕೊಂಡಾಟದ ಆದರೂ- ಅಷ್ಟೇನು- ಮನದಣಿಯುವಂತಿರದ ಗೆಳತಿಯೆ

 

 

 

 

 

 

 

 

೧೩ ಲಿಯೂ ಚೆ

ರೇಶಿಮೆಯ ಮರ್ಮರ ನಿಂತಿದೆ,
ಅಂಗಳದ ಮೇಲೆ ಧೂಳು ಕವಿದಿದೆ,
ಕಾಲ ಸಪ್ಪಳವಿಲ್ಲ, ಹಾಗೂ ಎಲೆಗಳು
ಗುಂಪುಗುಂಪಾಗಿ ಬಿದ್ದಿವೆ,
ಹೃದಯಕ್ಕೆ ಮುದ ಕೊಡುವಾಕೆ ಅವುಗಳ ಕೆಳಗೆ:
ಹೊಸ್ತಿಲಿಗಂಟಿದ ಒಂದು ಒದ್ದೆ ಸೊಪ್ಪು.

೧೪ ಮೆಟ್ರೊ ಸ್ಟೇಷನಿನಲ್ಲಿ

ಗುಂಪಿನ ನಡುವಣ ಮುಖಗಳು
ಕರೀ ಒದ್ದೆ ಕೊಂಬೆಯ ಮೇಲಿನ ದಳಗಳು

೧೫ ಪ್ರಭಾತ ಗೀತ

ಕಣಿವೆಯ ಸುರುಳಿಹೂವಿನ ಬಿಳುಚಿದ ಎಸಳುಗಳಷ್ಟೇ ತಂಪಾಗಿ
ಮುಂಜಾವಿನಲ್ಲಿ ಮಲಗಿದ್ದಳು ನನ್ನ ಪಕ್ಕದಲ್ಲಿ ಅವಳು

೧೬ ಮುಖಾಮುಖಿ

ನವನೀತಿ ಸಂಹಿತೆಯ ಬಗ್ಗೆ ಅವರು ಚರ್ಚಿಸುವಾಗ ಉದ್ದಕ್ಕೂ
ಅವಳ ಕಣ್ಣುಗಳು ನನ್ನ ಪರಿಶೋಧಿಸಿದುವು
ಆಮೇಲೆ ನಾನು ಹೊರಟು ನಿಂತಾಗ
ಜಪಾನೀ ಕಾಗದದ ಕರವಸ್ತ್ರ ದ್ರವ್ಯಗಳಂತಿದ್ದುವು
ಅವಳ ಬೆರಳುಗಳು

೧೭ ಸ್ತ್ರೀಯರು

ಅಗಾಥಾಸ್
ನಾಲ್ಕರ ಮೇಲೆ ನಲುವತ್ತು ಪ್ರೇಮಿಗಳು ಅಗಾಥಾಸ್‌ಗೆ
ಹಿಂದಿನ ದಿನಗಳಲ್ಲಿ,
ಎಲ್ಲರನ್ನೂ ನಿರಾಕರಿಸಿದಳು;
ಈಗ ಪ್ರೀತಿಗಾಗಿ ನನ್ನತ್ತ ತಿರುಗಿದ್ದಾಳೆ,
ಹಾಗೂ ಅವಳ ಕೂದಲೂ ತಿರುಗುತ್ತಿದೆ.

ಎಳೇ ರಮಣಿ
ನಿನ್ನ ದೇವತೆಗೆ ನಾನು ಗಸಗಸೆ ಬೀಜಗಳ ತಿನಿಸಿದ್ದೇನೆ,
ಮೂರು ಸಂವತ್ಸರ ಕಾಲ ನಿನ್ನ ಆರಾಧಿಸಿದ್ದೇನೆ
ಈಗ ಡ್ರೆಸ್ಸು ಹೊಂದುವುದಿಲ್ಲ ಅಂತ ಕರುಬುತ್ತೀಯ
ಮತ್ತು ನಾನು ಆ ರೀತಿ ಹೇಳಿಬಿಡುತ್ತೇನೆ ಅಂತ.

ಲೆಸ್‌ಬಿಯಾ ಇಲ್ ಲಾ (ಅದೇ ಲೆಸ್ ಬಿಯಾ)
ಮೆಮ್ನೋನ್, ಮೆಮ್ನೋನ್, ಆ ಹುಡುಗಿ
ನಮ್ಮಗಳ ಮಧ್ಯೆ ಅಷ್ಟೊಂದು
ಸುಂದರ ಅಧೀರತೆಯಲ್ಲಿ ಹೆಜ್ಜೆಯಿಡುತಿದ್ದಾಕೆ,
ಈಗ ಮದುವೆಯಾಗಿದ್ದಾಳೆ
ಒಬ್ಬ ಬ್ರಿಟಿಷ್ ಯಜಮಾನನನ್ನು.
ಲುಗೆತೆ, ವೆನೆರೆಸ್! ಲುಗೆತೆ, ಕುಪಿಡಿನೆಸ್ಕ್!
(ಹಾಯ್ ಪ್ರೇಮವೆ! ಹಾಯ್ ಕಂದರ್ಪನೆ!)

 ಸಾಗುತ್ತ
ಅಫ್ರೊದಿತಿಯಂತೆ ನಿಷ್ಕಳಂಕ,
ಅಡಿಯಿಂದ ಮುಡಿವರೆಗೆ ಸುಂದರ,
ಮಿದುಳು ವಿನಾ,

ನಿನ್ನ ಅತ್ತರಿನ ಅಸ್ಪಷ್ಟ ಗಂಧ,
ಅಸ್ಪಷ್ಟ, ನಿನ್ನ ಗಲ್ಲದ ಸುತ್ತಲಿನ ಕ್ರೂರತೆಯ ಗೆರೆಗಳಂತೆಯೇ,
ಕಾಡುವುದು ನನ್ನ, ಸಂಬಂಧಿಸುವುದು ಅಷ್ಟೆಯೇ.

೧೮ ಯುದ್ಧಾಗಮನ: ಆಖ್ಟಿಯೋನ್

ಲೀಥೆಯದೊಂದು ಪ್ರತಿಮೆ,
ಹಾಗೂ ಬಯಲುಗಳ
ತುಂಬಾ ಮಬ್ಬು ಬೆಳಕು
ಮಾತ್ರ ಬಂಗಾರದ ಬಣ್ಣ,
ಬೂದು ಬಂಡೆಗಳು
ಹಾಗೂ ಕೆಳಕ್ಕೆ
ಒಂದು ಸಮುದ್ರ
ಕಗ್ಗಲ್ಲಿಗಿಂತಲು ಕಠಿಣ,
ಅನಿಶ್ಚಲ, ಅವಿರತ;
ದೈತ್ಯಾಕಾರಗಳು
ದೈವಗಳ ಚಲನೆಯೊಂದಿಗೆ,
ಭೀಕರ ಚಹರೆ;
ಹಾಗೂ ಒಂದು ಹೇಳಿತು:
“ಈತ ಆಖ್ಠಿಯೋನ್.”
ಸುವರ್ಣಕವಚಗಳ ಆಖ್ಟಿಯೋನ್!
ಸುಂದರ ಹುಲ್ಲುಗಾವಲುಗಳಲ್ಲಿ
ಬಯಲ ತಣ್ಣನೆಯ ಮುಖದಲ್ಲಿ,
ಅನಿಶ್ಚಲ, ಸದಾ ಚಲಿಸುವ
ಒಂದು ಪುರಾತನ ಜನಾಂಗದ ತುಕಡಿಗಳು,
ಸದ್ದಿರದ ಗಮನ.

೧೯ ಆರ್ತ

ಸಂತೃಪ್ತಿಯಿಂದ ಕೋಮಲವಾಗಿ ಬೆಳೆದ
ಆತ್ಮ,
ಅತ್ತಿಸ್.
ಓ ಅತ್ತಿಸ್,
ನಿನ್ನ ತುಟಿಗಳಿಗಾಗಿ
ಚೂಪಾದ ಮೊಲೆಗಳಿಗಾಗಿ.
ಪ್ರಕ್ಷುಬ್ಧಳೆ, ತಬ್ಬಿರದವಳೆ.

೨೦ “ಅಯೋನೆ, ಗತಿಸಿ ಇಡೀ ವರ್ಷ”

ಖಾಲಿಯಾಗಿವೆ ದಾರಿಗಳು
ಖಾಲಿಯಾಗಿವೆ ದಾರಿಗಳು ಈ ನೆಲದ
ಹಾಗೂ ಹೂವುಗಳು
ಬಾಗಿವೆ ಶಿರಭಾರದಿಂದ.
ಬಾಗುತ್ತವೆ ನಿರರ್ಥಕ.
ಖಾಲಿಯಾಗಿವೆ ದಾರಿಗಳು ಈ ನೆಲದ
ಎಲ್ಲಿ ಅಯೋನೆ
ನಡೆದಿದ್ದಳೋ ಒಮ್ಮೆ, ಎಲ್ಲಿ ನಡೆಯುತ್ತಿಲ್ಲ ಈಗ
ಆದರೂ ತೋರುವಳು ಎದ್ದು ಹೋದವಳ ಹಾಗೆ ಇದೇ ಈಗ.

೨೧ ಚಾದಂಗಡಿ

ಚಾದಂಗಡಿಯ ಹುಡುಗಿ
ಮುಂಚಿನ ಹಾಗೆ ಇಲ್ಲ,
ಆಗಸ್ಟ್ ಅವಳ ಮೇಲೂ ಎರಗಿದೆ.
ಮೆಟ್ಟಲೇರುವ ಆಸ್ಥೆಯೂ ಇಲ್ಲ;
ನಿಜ, ಆಕೆಗೂ ವಯಸ್ಸಾಗುವುದು,
ಹಾಗೂ ತಿಂಡಿ ತಟ್ಟೆ ತಂದಿಡಬೇಕಾದರೆ
ನಮ್ಮ ಮೇಲವಳು ಹರಡಿದ ಯೌವನ
ಇನ್ನೆಂದೂ ಹರಡಲಾರದು
ಆಕೆಗೂ ವಯಸ್ಸಾಗುವುದು.

೨೨ ಸಂಸ್ಮರಣೆ

ಫೂಯೀಗಿಷ್ಟ ಎತ್ತರದ ಮೋಡ ಉನ್ನತ ಬೆಟ್ಟ
ಆಹಾ! ಕುಡಿದೂ ಕುಡಿದೂ
ಸತ್ತ.

ಲೀ ಪೋ
ಅವನೂ ಕುಡಿದೇ
ಚಂದ್ರನ ಹಿಡಿಯಲು ಹೋಗಿ
ಹರಿದ್ರಾವರ್ಣದ ನದಿಯೊಳಗೆ.

೨೩ ಪ್ರಸಾಧನ

ನೀಲಿ, ನೀಲಿಯಾಗಿದೆ ನದೀ ದಂಡೆಯ ಹುಲ್ಲು
ಅಲ್ಲದೇ ಗುಲ್ಮ ವೃಕ್ಷಗಳೂ ಪಕ್ಕದ ತೋಟದಲ್ಲಿ ಬೆಳೆದು ಸೊಕ್ಕಿವೆ.
ಮತ್ತು ಮನೆಯೊಳಗೆ, ಒಡತಿ, ತನ್ನ ಯೌವನದ ಉಚ್ಛ್ರಾಯದಲ್ಲಿ,
ಶ್ವೇತೆ, ಮಹಾಶ್ವೇತೆ, ಬಾಗಿಲ ಬಳಿ ತಡೆದು ನಿಲ್ಲುವಳು.
ತೆಳ್ಳಗಿನ ಅವಳು ತೆಳ್ಳಗಿನ ತೋಳು ಚಾಚುವಳು.

ಹಿಂದಿನ ದಿನಗಳಲಿ ರಾಜಾಸಾನಿ,
ಇಂದು ಕುಡುಕನೊಬ್ಬನ ಪತ್ನಿ,
ಆತನೋ ಕುಡಿದು ಹೊರಡುವನು
ಆಕೆಯ ತುಸು ಹೆಚ್ಚೇ ಒಂಟಿಯಾಗಿ ಬಿಟ್ಟು.
(ಬಹುಶಃ ಮೈ ಶೆಂಗ್)

೨೪ ನದೀ ವರ್ತಕನ ಹೆಂಡತಿ: ಒಂದು ಪತ್ರ

ನನ್ನ ಕೂದಲ ಇನ್ನೂ ಮುಂದಲೆಗೆ ನೇರ ಕತ್ತರಿಸುತ್ತಿದ್ದ ಕಾಲ
ಹೊರಬಾಗಿಲಲ್ಲಿ ಆಡುತ್ತಾ ಇದ್ದೆ ನಾನು, ಹೂಗಳ ಕೀಳುತ್ತ.
ಬಿದಿರ ಮೆಟ್ಟುಗೋಲುಗಳಲ್ಲಿ ನೀನೂ ಬಂದಿ, ಕೀಲಿ ಕುದುರೆಯ
ಆಟ ಆಡುತ್ತ,
ನನ್ನ ಪೀಠದ ಸುತ್ತ, ಹಸೀ ಆಲೂಚಾ ಎಸೆಯುತ್ತ.
ಮತ್ತು ಚೋವಕಾನ್ ಗ್ರಾಮದಲ್ಲಿ ಬದುಕ ಮುಂದರಿಸುತ್ತ:
ಚಿಕ್ಕವರು ನಾವು, ದ್ವೇಷಾಸೂಯೆಗಳು ಇಲ್ಲದೇ.

ಹದಿನಾಲ್ಕಕ್ಕೆ, ದೊರೆಯೇ, ನಿನ್ನ ಕೈಹಿಡಿದೆ.
ನಾಚುಗುಳಿ ನಾನು ನಕ್ಕುದೇ ಇಲ್ಲ
ತಲೆ ಕೆಳ ಹಾಕಿ, ಗೋಡೆ ನೋಡುತ್ತಲಿದ್ದೆ.
ಸಾವಿರ ಸಲ ಕರೆದರೂ, ಮುಖ ತಿರುಗಿಸಲೆ ಇಲ್ಲ.

ಹದಿನೈದಕ್ಕೆ ಮುಖ ಸಿಂಡರಿಸುವುದ ನಿಲ್ಲಿಸಿದೆ;
ನನ್ನ ದೇಹದ ಬೂದಿ ನಿನ್ನದರ ಸೇರ ಬಯಸಿದೆ
ಎಂದಿಗೂ ಎಂದಿಗೂ ಎಂದಿಗೂ.
ಕಿಟಿಕಿ ಬಳಿ ಓಡೋಡಿ ನಾನೇಕೆ ನೋಡಲಿ?

ಹಿದಿನಾರಕ್ಕೆ ನೀ ಹೊರಟು ಹೋದೆ,
ದೂರದ ಕು-ಟೋ-ಯೆನಿಗೆ ಹೋದೆ, ನೀರ ಸುಳಿಗಳು ಸುಳಿವ
ನದೀ ಮಾರ್ಗವಾಗಿ,
ನೀ ಹೋಗಿ ಈಗ ತಿಂಗಳೈದಾಯ್ತು.
ದರಿದ್ರ ಕೋತಿಗಳು ಶೋಕಾಲಾಪ ಮಾಡುವುವು ತಲೆಮೇಲೆ.

ಹೋದಾಗ ನೀನು ಕಾಲೆಳೆಯುತ್ತ ಹೋದಿ.
ಈಗ ಗೇಟಿನ ಬಳಿ ಪಾಚಿ ಬೆಳೆದಿದೆ, ಬೇರೆ ಬೇರೇ ತರದವು,
ತೆಗೆದರೂ ಮುಗಿಯದಷ್ಟು!
ಈ ಶರತ್ಕಾಲ ಎಲೆಗಳು ಬೇಗನೇ ಉದುರುತ್ತಿವೆ, ಗಾಳಿಗೆ.
ಜತೆಯಾದ ಚಿಟ್ಟೆಗಳು ಈಗಾಗಲೆ ಹಳದಿಯಾಗಿವೆ
ಆಗಸ್ಟಿನ ಜತೆ ಜತೆಗೆ
ಪಡು ತೋಟದಲ್ಲಿ ಹುಲ್ಲಿನ ಮೇಲೆ;
ನನ್ನ ನೋಯಿಸುತ್ತಿವೆ. ನನಗೆ ವಯಸ್ಸಾಗುತ್ತಿದೆ.
ಕಿಯಾಂಗ್ ನದಿಯ ಹಿನ್ನೀರಲ್ಲಿ ನೀ ಬರೋದಾದರೆ,
ದಯವಿಟ್ಟು ನನಗೆ ಮೊದಲೇ ತಿಳಿಸು,
ನಾ ಬರುವೆನು ನಿನ್ನ ಇದಿರುಗೊಳ್ಳಲು
ಚೂ-ಪೂ-ಸಾದ ವರೆಗೆ.
(ರಿಹಾಕು)

೨೫ ಟೆನ್-ಶನ್ ಸಂಕದ ಬಳಿಯಿಂದ

ಮಾರ್ಚ್ ಬಂದಿದೆ ಸಂಕದ ಬುಡಕ್ಕೆ,
ಸತಾಲು ಪೊದೆಗಳೂ ಖುಬಾನಿಯ ಪೊದೆಗಳೂ ಸಾವಿರ ಮುಖ-
ಮಂಟಪಗಳ ಮೇಲೆ ತೂಗಾಡಿ,
ನಸುಕಿಗೇ ಹೃದಯ ಕೊರೆಯುವ ಹೂಗಳಿವೆ
ಮೂಡಲಿಗೆ ಹರಿವ ತೊರೆಗಳ ಮೇಲೆ ಸಂಜೆ ಕಳಿಸುವುದು ಅವನ್ನು ಮುಂದಕ್ಕೆ.
ದಳಗಳಿವೆ ಹೋದ ನೀರಲ್ಲಿ ಮತ್ತು ಹೋಗುವ ನೀರಲ್ಲಿ,
ಹಾಗೂ ಹಿಂದೊಗೆವ ನೀರ ಸುಳಿಯಲ್ಲಿ,
ಆದರೂ ಇಂದಿನ ಮಂದಿ ಹಿಂದಿನ ಮಂದಿಯಂತಲ್ಲ,
ಸಂಕದ ಸರಳ ಮೇಲೆ ಅವರು ಒಂದೇ ರೀತಿ ಜೋತಿದ್ದರೂ.
ಕಡಲಿನ ರಂಗು ಚಲಿಸುವುದು ಮುಂಜಾನೆ
ಹಾಗೂ ಅರಸು ಕುಮಾರರು ಸಾಲಾಗಿ ನಿಲ್ಲುವರು, ಗದ್ದುಗೆಯ ಸುತ್ತ,
ಅಲ್ಲದೇ ಸೈ-ಜೋ-ಯೋ ಚಾವಡಿ ಮೇಲೆ ಚಂದಿರ ಬಂದು
ಗೋಡೆಗಳಿಗಂಟುವುದು ಅಗಸೆ ಬಾಗಿಲ ಮೇಲೆ ತಂಗುವುದು.
ಮೋಡಗಳು ಮತ್ತು ಸೂರ್ಯನ ಮುಂದೆ ಪೇಟಗಳು ಹೊಳೆಯುತ್ತ,
ದರ್ಬಾರಿನಿಂದ ದರ್ಬಾರಿಗಳು ತೆರಳುವರು, ಗಡಿನಾಡುಗಳಿಗೆ,
ಅವರು ಘಟಸರ್ಪದಂಥ ಘೋಡಗಳನೇರುವರು,
ಪೀತ ಲೋಹಗಳ ಮುಖದಾಣ ಅವಕ್ಕೆ,
ರಸ್ತೆಗಳು ತೊಲಗುವುವು ಅವರು ಸಾಗುವುದಕ್ಕೆ.
ಆ ಸಾಗುವಿಕೆಯೂ ಎಷ್ಟು ಗಂಭೀರ,
ಗಂಭೀರ ಅವರ ಹೆಜ್ಜೆಗಳು ರಾಜಭೋಜನಕ್ಕೆ ನಡೆದಾಗ ಒಳಕ್ಕೆ,
ವಿಶಾಲ ಕೈಸಾಲೆಗಳಿಗೆ, ವಿಚಿತ್ರ ಭೋಜ್ಯಗಳಿಗೆ,
ಅತ್ತರು ಹೊದ್ದ ಗಾಳಿಗೆ ಹಾಗೂ ನರ್ತಕಿಯರ ಸಮೀಪಕ್ಕೆ,
ಸ್ಪಷ್ಟ ವಾದ್ಯಗಳ ಕಡೆಗೆ, ಸ್ಪಷ್ಟ ಗಮಕದ ಕಡೆಗೆ;
ಎಪ್ಪತ್ತು ಜತೆ ಗಂಡು ಹೆಣ್ಣುಗಳ ಕುಣಿತಕ್ಕೆ;
ಉನ್ಮತ್ತ ಬೇಟಕ್ಕೆ ತೋಟಗಳ ಒಳಹೊರಗೆ.
ರಾತ್ರಿ ಹಗಲುಗಳು ಸುಖ ಲೋಲುಪತೆಗೆ
ಸಾವಿರ ಶರತ್ಕಾಲ ಇದು ಹೀಗೆಯೇ ಎಂದು ಅವರ ವಿಚಾರ
ದಣಿವು ಕಾಣಿಸದ ಕಾಲ.

ಅವರ ಮಟ್ಟಿಗೋ, ಬೂದು ನಾಯಿಗಳು ದುಶ್ಶಕುನ
ಬೊಗಳುವುದು ಸುಮ್ಮಗೇ,
ಹಾಗೂ ಲೋಡಿ ರ್‍ಯೋಕುಶುಗೆ ಹೋಲಿಸಿದರೆ ಅವರೇನು,
ಅದು ದ್ವೇಷಕ್ಕೆ ಎಡೆ!
ಹನ್-ರಾಯಿಯಂಥ ಗಂಡಸು ಯಾರು ಅವರಲ್ಲಿ
ತನ್ನ ಪ್ರೇಯಸಿಯ ಜತೆ ಒಬ್ಬನೇ ಹೊರಟ,
ಅವಳ ತುರುಬೂ ಕಟ್ಟಿರದೆ, ಹಾಗೂ ತನಗೆ ತಾನೇ
ಅವನು ಅಂಬಿಗನಾಗಿ!
(ರಿಹಾಕು)

೨೬ ಗಡಿ ಕಾವಲುಗಾರನ ಗೋಳು

ಉತ್ತರ ದ್ವಾರದಲಿ ಗಾಳಿ ತುಂಬಾ ಮರಳು,
ಅನಾದಿಯಿಂದ ಇಂದಿನ ವರೆಗೂ ಏಕಾಕಿ!
ಮರಗಳು ಬುಡ ಕಳಚುವುವು, ಮಾಗಿಯೊಂದಿಗೆ
ಹುಲ್ಲುಗಳೂ ಹಳದಿಗೆ ತಿರುಗಿ,
ನಾನು ಬುರುಜುಗಳ ಮೇಲೆ ಬುರುಜುಗಳನೇರುವೆನು
ಈ ನಿರ್ದಯೀ ನೆಲವ ನೋಡಲು:
ಬರಿದಾದ ಕಿಲ್ಲೆ, ಆಕಾಶ, ಮರುಭೂಮಿ ಹರಡಿ.
ಈ ಊರಿಗೋ ಗೋಡೆಯೆನ್ನುವುದೆ ಇಲ್ಲ.
ಸಹಸ್ರ ಹಿಮವರ್ಷಕ್ಕೆ ಬಿಳುಚಿದ ಅಸ್ತಿಗಳು,
ಉನ್ನತ ದಿಬ್ಬಗಳು ಮರಗಳೂ ಹುಲ್ಲುಗಳೂ ಮುಚ್ಚಿ;
ಯಾರಿಂದ ಈ ಸ್ಥಿತಿ?
ಯಾರಿಂದ ಸಾಮ್ರಾಟರ ಕೋಪಜ್ವಾಲೆ?
ಯಾರಿಂದ ನಗಾರಿಗಳ ಭೇರಿಗಳ ಸೇನೆಗಳು?
ಅನಾಗರಿಕ ರಾಜರು.
ಒಂದು ಮನೋಹರ ವಸಂತ ರಕ್ತಪಿಪಾಸು ಶರದೃತುವಾಯ್ತು,
ಸೈನಿಕರ ದಳ್ಳುರಿ ಹರಡಿ ಈ ಮಧ್ಯಸಾಮ್ರಾಜ್ಯ ಪೂರ್ತಿ,
ಮುನ್ನೂರು ಸಾವಿರದ ಮೇಲೆ ಅರುವತ್ತು.
ಅಲ್ಲದೇ ದುಃಖ, ದುಃಖ ಮಳೆಯಂತೆ,
ಹೋಗುವ ದುಃಖ, ಮರಳುವ ದುಃಖ.
ಹಾಳೇ ಹಾಳು ಬಯಲುಗಳು,
ಹಾಗೂ ಕಾಳಗದ ಮಕ್ಕಳಾರೂ ಇಲ್ಲ ಅವುಗಳ ಮೇಲೆ,
ಎರಗುವವರಿಲ್ಲ, ಒರಗುವವರಿಲ್ಲ
ಆ! ನಿಮಗೇನು ತಿಳಿಯುವುದು ಉತ್ತರ ದ್ವಾರದ ದುಃಖ?
ರಿಬೊಕೊವಿನ ಹೆಸರೂ ಮರೆತು ಈವೊತ್ತು,
ಮತ್ತು ಕಾವಲಿನ ನಮ್ಮನ್ನು ಕುರಿ ತೋಳಗಳ ಬಾಯಿಗಿತ್ತು.
(ರಿಹಾಕು)

೨೭ ವಿದಾಯ

ಹಗುರಾದ ಧೂಳ ಮೇಲೆ ಹಗುರಾದ ಮಳೆ
ಸತ್ರದ ಮುಂದಣ ವಿಲ್ಲೋ ವೃಕ್ಷಗಳು
ಹಸಿರಿಂದ ಹಸಿರಿಗೆ ಬೆಳೆದಾವು,
ಆದರೆ ನೀವು, ಸ್ವಾಮಿ, ಹೋಗುವ ಮುನ್ನ ದ್ರಾಕ್ಷಾರಸ
ತಗೊಳ್ಳಿ,
ಯಾಕೆಂದರೆ ಸ್ನೇಹಿತರು ಯಾರೂ ಇರೋದಿಲ್ಲ ಜತೆಗೆ
ನೀವು ಗೋದ ಹೆಬ್ಬಾಗಿಲ ತಲಪುವ ವೇಳೆಗೆ.
(ರಿಹಾಕು ಅಥವ ಒಮಾಕಿತ್ಸು)

೨೮ ಕಿಯಾಂಗ್ ನದಿಯಲ್ಲಿ ಅಗಲುವಿಕೆ

ಕೋ-ಕಕು-ರೋದಿಂದ ಪಶ್ಚಿಮಕ್ಕೆ ಹೋಗುವನು ಕೋ-ಜಿನ್,
ಹೊಗೆ ಹೂಗಳು ಮಾಸಿವೆ ನದೀ ಮೇಲೆ.
ದೂರ ದಿಗಂತದಲ್ಲಿ ಅವನದೊಂದೇ ದೋಣಿ, ಚಿತ್ತಿನ ತರ.
ಹಾಗೂ ಈಗ ನನಗೆ ಕಾಣಿಸುತ್ತಿರೋದು ನದಿ ಮಾತ್ರ,
ದೀರ್ಘ ಕಿಯಾಂಗ್, ಸ್ವರ್ಗದ ಕಡೆ ಚಾಚಿ.

೨೯ ಗೆಳೆಯನಿಗೆ ಬೀಳ್ಕೊಡುಗೆ

ಗೋಡೆಯ ಉತ್ತರ ದಿಕ್ಕಿಗೆ ನೀಲಿ ಶಿಖರಗಳು,
ಶ್ವೇತ ನದಿ ಅವಕ್ಕೆ ಸುತ್ತಿ;
ಇಲ್ಲಿ ದೂರವಾಗಲೇ ಬೇಕು ನಾವು
ಅಲ್ಲದೆ ಸತ್ತ ಹುಲ್ಲುಗಳ ಸಾವಿರ ಮೈಲಿ ಕ್ರಮಿಸಿ

ಮನಸ್ಸು ತೇಲುವ ತೆಳು ಮೋಡದಂತೆ,
ಸೂರ್ಯಾಸ್ತ ಹಳೇ ಗೆಳೆಯರ ಬೀಳ್ಕೊಡುಗೆಯಂತೆ
ಕೈ ಹಿಡಿದು ಪರಸ್ಪರ ವಂದಿಸಿ.
ನಮ್ಮ ಕುದುರೆಗಳೂ ಕೆನೆಯುತ್ತಿವೆ
ನಾವು ದೂರ ಸರಿಯುತ್ತಿರುವ ಹಾಗೇ.
(ರಿಹಾಕು)

೩೦ ಶೋಕುವಿನ ಸಮೀಪ ವಿದಾಯ

“ಶೋಕುವಿನ ರಾಜ ಸಾನ್ಸೊ ಮಾರ್ಗಗಳ ನಿರ್ಮಿಸಿದ”

ಸಾನ್ಸೋನ ಮಾರ್ಗಗಳು ಕಡಿದೆಂದು ಹೇಳುವರು,
ಪರ್ವತಗಳಂತೆ ಪ್ರಲಂಬ.
ಗೋಡೆಗಳೇಳುತ್ತವೆ ಮನುಷ್ಯನ ಮುಖಕ್ಕೇ,
ಮೋಡಗಳು ಬೆಳೆಯುತ್ತವೆ ಬೆಟ್ಟದಿಂದ ನೇರ
ಅವನ ಕುದುರೆಯ ಜೀನಿಗೇ.
ಮಧುರ ವೃಕ್ಷಗಳುಂಟು ಶಿನ್ನಿನ ಹಾಸುದಾರಿಯಲಿ,
ಅವುಗಳ ಕಾಂಡಗಳು ಹಾಸುಗಲ್ಲುಗಳನ್ನೊಡೆದು,
ಹಾಗೂ ಕಿರುತೊರೆಗಳೂ ಬರ್ಫದ ಗಟ್ಟಿಗಳನ್ನೊಡೆಯುವುವು
ಶೋಕುವಿನ ಮಧ್ಯೆ-ಅದೊಂದು ಗರ್ವಿಷ್ಟ ನಗರ.
ಮನುಷ್ಯರ ವಿಧಿಗಳೋ ಈಗಾಗಲೇ ನಿಶ್ಚಿತ,
ಕಣಿ ಕೇಳುವ ಅಗತ್ಯವೇ ಇಲ್ಲ.
(ರಿಹಾಕು)

೩೧ ಚೋವಾನ್ ಎಂಬ ಪಟ್ಟಣ

ಫೀನಿಕ್ಸ್ ಆಡುತ್ತಿವೆ ಮಾಡಗಳ ಮೇಲೆ
ಫೀನಿಕ್ಸ್ ಹೋದುವು, ನದಿ ಹರಿಯುತ್ತಿದೆ ಒಂದೇ
ಹೂವುಗಳೂ ಮತ್ತು ಹುಲ್ಲುಗಳೂ
ದಟ್ಟ ಹಾದಿಯ ಮುಚ್ಚಿವೆ
ಗೋ ಅರಸರ ಮನೆಗಳಿದ್ದಲ್ಲಿ.
ಶಿನ್‌ನ ಶುಭ್ರ ವಸ್ತ್ರಗಳೂ ಕುಲಾವಿಗಳೂ
ಈಗ ಬೆಟ್ಟದ ಬುಡವಾಗಿವೆ.

ಪರ್ವತ ತ್ರಯಗಳು ಜರಿಯುತ್ತಿವೆ ದೂರ ಆಕಾಶದಿಂದ,
ನದಿಯನ್ನ ಎರಡಾಗಿ ಸೀಳುವುದು
ಶ್ವೇತ ಕ್ರೌಂಚ ದ್ವೀಪ.
ಸೂರ್ಯನ ಮರೆಮಾಡುವುವೀಗ ಎತ್ತರದ ಮುಗಿಲುಗಳು
ಹಾಗೂ ಅತಿ ದೂರದ ಚೋವಾನ್ ನನಗೆ ಕಾಣಿಸುತ್ತಿಲ್ಲ
ನಾನು ವಿಷಣ್ಣ.

೩೨ ಉಪ್ಪುನೇರಳೆ ರಸ್ತೆಯ ಹಾಡು

ಪೂರ್ವೋತ್ತರದಲ್ಲಿ ಸೂರ್ಯ ಮೇಲೆದ್ದು ಬರುತ್ತಾನೆ
ಶಿನ್‌ನ ಅತ್ಯುನ್ನತ ಮನೆಯೊಳಗೆ ಇಣುಕಿ ನೋಡೋದಕ್ಕೆ,
ಅಲ್ಲಿ ರಾಫೂ ಅಂತ ಮಗಳಿದ್ದಾಳೆ, (ಚೆಂದೊಳ್ಳೆ ಹುಡುಗಿ)
“ಜಾಲರಿ ಘೂಂಗಟ್” ಎಂದೂ ಅವಳ ಕರೀತಾರೆ.
ರೇಶಿಮೆ ಹುಳಕ್ಕೆ ಉಪ್ಪುನೇರಳೆ ಸೊಪ್ಪು ತಿನಿಸುತ್ತಾಳೆ.
ಪೇಟೆಯ ಬಡಗು ಗೋಡೆಯ ಪಕ್ಕ ತರುತ್ತಾಳೆ ಅವನ್ನ.
ಹಸಿರೆಳೆ ಹಿಡಿದು ಬುಟ್ಟಿಗಳ ಹೆಣೀತಾಳೆ,
ಹೆಗಲು ಚೀಲದ ಕೈಯ ಮಾಡುತ್ತಾಳೆ
ಕಟ್ಸುರಾ ಗಿಡಗಂಟಿಗಳಿಂದ,

ಮತ್ತು ತುರುಬು ಕಟ್ಟುತ್ತಾಳೆ ಎಡಕ್ಕೆ.
ಕಿವಿಗೆ ಮುತ್ತಿನ ಜುಮುಕಿ,
ಒಳಲಂಗ ಪಚ್ಚೆ ಚಿತ್ರಗಳ ಸಿಲ್ಕಿನದು,
ಹೊರ ಲಂಗ ಅದಕ್ಕೇ ನೇರಳೆ ಬಣ್ಣ ಅದ್ದಿ ತೆಗೆದದ್ದು.

ಹಾಗೂ ದಾರಿ ಹೋಗುವ ಮಂದಿ ರಾಫೂನ ಕಂಡರೆ
ಹೊರೆಯ ಕೆಳಗಿಟ್ಟು ನಿಂತುಬಿಡುತ್ತಾರೆ
ಅವರ ಕೈಗಳು ಮೀಸೇ ಕಡೆ ಸರಿಯುತ್ತವೆ.

 

 

 

 

 

 

 

 

೩೩ ಹ್ಯೂ ಸೆಲ್ವಿನ್ ಮೌಬರ್ಲಿ: ಪದ್ಯ II

ಯುಗ ಬಯಸಿತ್ತು ಪ್ರತಿಮೆಯೊಂದ
ತನ್ನ ತ್ವರೆಗೊಂಡ ಹಲ್ಕಿರಿಕೆಯಂದ
ಆಧುನಿಕ ರಂಗಕ್ಕೆ ಏನಾದರೂ ಬೇಕಲ್ಲ
ಎಟಿಕ್ ಸೌಂದರ್ಯ ಮಾತ್ರ ಸಲ್ಲ.

ಬೇಡ, ಖಂಡಿತವಾಗಿ, ಅಂತರ್ನೋಟ
ತರುವ ಅಸ್ಪಷ್ಟ ನೆನಪುಗಳ ಆಟ;
ಶ್ರೇಷ್ಠ ಕೃತಿಗಳ ನಿರೂಪಣೆಗಿಂತ
ಸದ್ಯದ ಸುಳ್ಳುಗಳೇ ಶ್ರೀಮಂತ.

“ಯುಗ ಬಯಸಿತ್ತು” ಪ್ರಧಾನವಾಗಿ ಪ್ಲಾಸ್ಟರಿನದೊಂದು ಎರಕ,
ವೇಳೆ ಹಾಳಾಗದೆ ತಯಾರಾಗಲೆಂಬ ತವಕ,
ಗದ್ಯ ಚಲಚಿತ್ರ ಮಾಲೆ, ಅಲ್ಲ ಖಂಡಿತವಾಗಿ, ಹಾಲುಗಲ್ಲಲ್ಲ
ಅಥವ ಪ್ರಾಸ ನಿರ್ಮಿಸಿದ ಶಿಲ್ಪ.

 ಬ್ರೆನ್‌ಬಾಮ್

ಆಕಾಶದಂಥ ಪಾರದರ್ಶಕ ಕಣ್ಣು,
ಶಿಶುವಿನ ಬಟ್ಟ ಮೋರೆ
ಅಡಿಯಿಂದ ಮುಡಿವರೆಗೆ ಗಂಟು
ಎಂದೂ ಸಡಿಲಿ ಸೌಂದರ್ಯವಾಗದೆ;

ಹೋರೆಬ್, ಸಾನಿಯಾಮ್ ಮತ್ತು ಮೂವತ್ತು ವರ್ಷಗಳ
ನೆನಪಿನ ಹೊರೆ
ತೋರಿದ್ದು ಹಗಲ ಬೆಳಕು
ಅಂಗಾತ ಬಿದ್ದಾಗ ಬ್ರೆನ್‌ಬಾಮ್‌ನ ಮುಖದಲ್ಲಿ-
ಬ್ರೆನ್‌ಬಾಮ್ “ನಿರ್ದುಷ್ಟ”

ಶ್ರೀ ನಿಕ್ಸನ್

ತಮ್ಮ ಉಗಿದೋಣಿಯ ಕೆನೆಬಣ್ಣದ ಕೊಠಡಿಯಲ್ಲಿ
ಶ್ರೀ ನಿಕ್ಸನರು ಹೇಳಿದರು ಕೃಪೆಯಿಂದ ನನಗೆ, ಮುಂದರಿವ ಹಾಗೆ
ಅಡ್ಡತಡೆಗಳ ಕಡಿಮೆಗೊಳಿಸಿ. “ಯೋಚಿಸಿ ನೋಡು
“ವಿಮರ್ಶಕರ ಬಗ್ಗೆ ಹುಷಾರಾಗಿ.

“ನಿನ್ನಂತೆಯೆ ಬಡವಾಗಿದ್ದೆ ನಾನೂ;
“ಮೊದ ಮೊದಲು, ನಿಜ, ಸಿಕ್ಕಿದ್ದು ಬರೇ
“ಮುಂಗಡ ಗೌರವ ಧನ, ಐವತ್ತು,” ಎಂದರು ಶ್ರೀ ನಿಕ್ಸನರು,
“ನಾ ಮಾಡಿದಂತೆಯೆ ಮಾಡು, ಹಾಗೂ ಒಂದು ಅಂಕಣವ ಹಿಡಿ,
“ಬಿಟ್ಟಿ ದುಡಿಯಬೇಕಾಗಿ ಬಂದರೂ.

“ಬೆಣ್ಣೆ ಹಚ್ಚು ಪುಸ್ತಕ ವಿಮರ್ಶಕರಿಗೆ. ಐವತ್ತರಿಂದ ಮುನ್ನೂರಕ್ಕೆ
“ಹದಿನೆಂಟು ತಿಂಗಳಲ್ಲಿ ಏರಿದೆ;
“ನಾನೆದುರಿಸಬೇಕಾಗಿ ಬಂದ ಅತಿ ಕಠಿಣ ಆಸಾಮಿ
“ಡಾ| ಡುಂಡಾಸ್.

“ಯಾವೊಬ್ಬನ ಕುರಿತೂ ಒಂದಕ್ಷರ ಸಹಾ ಬರೆದಿಲ್ಲ ನಾನು
“ನನ್ನ ಕೃತಿಗಳ ಮಾರಾಟದ ದೃಷ್ಟಿಯಿಂದಲ್ಲದೆ.
“ಹಿತವಾದ ಕಿವಿಮಾತು, ಸಾಹಿತ್ಯದ ಬಗ್ಗೆ ಹೇಳೋದಾದರೆ
“ಇಲ್ಲಿ ಪುಕ್ಕಟೆಯಿಲ್ಲ ಯಾವುದೂ.

“ಹಾಗೂ ನೋಡಿದರೆ ಯಾರಿಗೆ ಗೊತ್ತು ಯಾವುದು ಶ್ರೇಷ್ಠ ಕೃತಿಯೆಂದು?
“ಅಲ್ಲದೆ ಈ ಪದ್ಯದ ವ್ಯವಹಾರ ಬಿಟ್ಟುಬಿಡು, ಮಗೂ,
“ಏನಿಲ್ಲ ಅದರಲ್ಲಿ.”
* * *
ಹಾಗೇನೆ ಬ್ಲೌಗ್ರಾಮಿನ ಒಬ್ಬ ಮಿತ್ರನೂ ಅಂದ:
ಶುಂಠರ ಜತೆ ಜಗಳ ಬೇಡ,
ಬುದ್ಧಿ ಮಾತುಗಳ ಸ್ವೀಕರಿಸು. “ತೊಂಬತ್ತರ ದಶಕಗಳು” ನಿನ್ನದೇ
ಆಟ ಆಡಿದುವು
ಆಡಿ ಸತ್ತುವು, ಏನಿಲ್ಲ ಅದರಲ್ಲಿ.

೩೪ ಕಾಂಡ III

ಡೊಗಾನಾದ ಮೆಟ್ಟಲುಗಳಲ್ಲಿ ಕೂತೆ ನಾನು
ಯಾಕೆಂದರೆ ಗೊಂಡೋಲಾಗಳು ಬಹಳ ದುಬಾರಿ, ಆ ವರ್ಷ,
ಹಾಗೂ ಅಲ್ಲಿ “ಆ ಹುಡುಗೀರು” ಇರಲಿಲ್ಲ, ಒಂದು ಮುಖವಿತ್ತು,
ಹಾಗೂ ಇಪ್ಪತ್ತು ಗಜದಾಚೆ ಬುಕ್ಕೆಂತೋರೋ, “ಸ್ಟ್ರೆಟ್ಟಿ,” ಎಂದು ಕೂಗುತ್ತ,
ದೀಪ ತೂಗುವ ಅಡ್ಡತೊಲೆಗಳು, ಮೊರೊಸಿನಿಯಲ್ಲಿ, ಆ ವರ್ಷ,
ಹಾಗೂ ಕೊರೆಯ ಮನೆಯಲ್ಲಿ ನವಿಲುಗಳು, ಅಥವ ಇದ್ದಿರಲು ಬಹುದು.
ನೀಲಿ ಮಾರುತದಲ್ಲಿ ತೇಲುವುವು ದೇವತೆಗಳು,
ಪ್ರಕಾಶಮಾನ ದೇವತೆಗಳು, ಟಸ್ಕನಿನ, ಮಂಜು ಬೀಳುವ ಮೊದಲೆ ವಾಪಸ್.
ಬೆಳಕು: ಹಾಗೂ ಮೊದಲನೆ ಬೆಳಕು, ಮಂಜು ಬೀಳುವುದಕ್ಕೆ ಎಂದೂ ಮೊದಲೆ.
ವನದೇವತೆಗಳು, ಓಕ್‌ನಿಂದಲೂ ದೇವತೆಗಳು,
ಮತ್ತು ಸೇಬಿನ ಮರದಿಂದ ಸೇಬಿನ ಸೇಬಿನ ದೈವ,
ಸಮಸ್ತ ವನದಿಂದ, ಅಲ್ಲದೇ ಎಲೆಗಳ ತುಂಬ ಸ್ವರಗಳೂ,
ಪಿಸುಮಾತು, ಮತ್ತು ಸರೋವರದ ಮೇಲೆ ಬಾಗಿರುವ ಮೇಘಗಳು,
ಅಲ್ಲದೇ ಅವುಗಳ ಮೇಲೂ ದೇವತೆಗಳಿದ್ದಾವೆ,
ಹಾಗೂ ನೀರೊಳಗೆ ಬಾದಾಮಿ ಮೈಯ ಈಜುಗಾರ್ತಿಯರು,
ಅವರ ಉನ್ಮುಖ ಮೊಲೆತೊಟ್ಟಿಗೆ ಬೆಳ್ಳಿಯ ಜಲ ಬಳಿದು,
ಫೋಜ್ಜಿಯೋ ಹೇಳಿದ ಹಾಗೆ.

ಪಚ್ಚೆ ನರಗಳು ಮರಕತದ ಮಣಿಯಲ್ಲಿ
ಇಲ್ಲವೇ, ಒಯ್ಯುವುವು ಬೂದು ಸೋಪಾನಗಳು ಸಿಡಾರ್ ಮರಗಳ ಅಡಿಗೆ.

ಸೈಯಿದರ ಸವಾರಿ ಹೊರಟಿತು ಬರ್ಗೋಸಿಗೆ,
ಗೋಪುರಗಳೆರಡರ ಮಧ್ಯೆ ಸುಭದ್ರ ಹೆಬ್ಬಾಗಿಲ ವರೆಗೆ,
ಭಲ್ಲೆಯ ಹಿಡಿಯಿಂದ ಬಾಗಿಲು ಬಡಿದಾಗ ಮಗು ಬಂತು,
ಊನಾ ನೀಞ ದ ನೂವೆ ಆಞೋಸ್
(ಹೊಸ ವರ್ಷದ ಹುಡುಗಿ ಒಬ್ಬಾಕೆ)
ಬಾಗಿಲ ಮೇಲೆ ಮಂಟಪಕೆ, ಗೋಪುರಗಳೆರಡರ ನಡುವೆ,
ಹುಕುಮ್‌ನಾಮ ಓದುತ್ತ, ವೋಸಿ ತಿನ್ನುಲಾ (ಸ್ವರ ಅನುರಣಿಸಿ):
ಅದಾಗಿ ಯಾವೊಬ್ಬನೂ ಸಹಾ ರೂಯಿ ರಿಯಾಜನ ಜತೆ ಮಾತಾಡೋದು,
ಉಣಿಸೋದು, ಸಹಾಯ ಮಾಡೋದು
ನಿಷಿದ್ಧ; ತಪ್ಪಿದರೆ ಹೃದಯ ಹಿಸಿದು ಚುಚ್ಚಲಾಗುವುದು ಮುಳ್ಳು
ಸಲಿಕೆಯ ಮೊನೆಗೆ
ಹಾಗೂ ಕಣ್ಣುಗಳ ಕಿತ್ತೆಸೆಯಲಾಗುವುದು, ಸಕಲ ಸಾಮಗ್ರಿಗಳ
ಹಿಡಿದಿರಿಸಲಾಗುವುದು,
“ಹಾಗೂ ಇಗೊಳ್ಳಿ, ಮಿಯೋ ಸೈಯಿದರೆ, ಮುದ್ರೆಗಳು,
ದೊಡ್ಡ ಮುದ್ರೆಯೂ ಬಖೈರೂ.”
ಹಾಗೂ ಅವರು ಬಂದರು ಬೀವಾರಿನಿಂದ, ಮಿಯೋ ಸೈಯಿದರು,
ಅಲ್ಲಿಯೋ ಒಂದು ಡೇಗೆಯೂ ಅದರ ತಾಣದಲ್ಲುಳಿದಿರದೆ,
ಅಲ್ಲದೇ ಮಾಡಗಳಲ್ಲಿ ಬಟ್ಟೆಗಳೂ ಇರದೆ,
ಅಲ್ಲದೇ ರಾಖೆಲ್ ಮತ್ತು ವಿದಾಸರಲ್ಲಿ ತಮ್ಮ ಪೆಟ್ಟಿಗೆಯ ಬಿಟ್ಟು,
ಮರಳು ತುಂಬಿದ ಆ ದೊಡ್ಡ ಪೆಟ್ಟಿಗೆಯ ಗಿರವಿಯಿಟ್ಟು,
ತಮ್ಮ ಸೇವಕರ ಪಗಾರ ಕೊಡಿಸಿಕೊಡೋದಕ್ಕೆ;
ವೇಲೆನ್ಸಿಯಾಕ್ಕೆ ದಾರಿ ಗಿಟ್ಟಿಸಿಕೊಂಡು.
ಇಗ್ನೆಸ್ ದ ಕಾಸ್ಟ್ರೋ ಕೊಲೆಯಾಯ್ತು, ಹಾಗೂ ಇಲ್ಲೊಂದು ಭಿತ್ತಿ
ಚಿಪ್ಪೆದ್ದಿತು, ಅಲ್ಲೊಂದು ಎತ್ತಿ ನಿಲ್ಲಿಸಲಾಯ್ತು.
ಹಾಳೂರು, ಶಿಲೆಯಿಂದೆದ್ದ ಬಣ್ಣದ ಹಾಳೆಗಳು,
ಇಲ್ಲವೇ ಪ್ಲಾಸ್ಟರಿನ ಹಾಳೆಗಳು, ಚಿತ್ರ ಬರೆದವನು ಮೊಂಟೇನ್ನಾ.
ರೇಶಿಮೆ ಚಿಂದಿ, “ಆಸೆಯಿಲ್ಲ, ಭೀತಿಯಿಲ್ಲ.”

೩೫ ಕಾಂಡ XXXರಿಂದ

ತಕರಾರು, ತಕರಾರು ಕೇಳಿಸಿತು ನನಗೆ ಒಂದು ದಿನ,
ಆರ್ಟಿಮಿಸ್ ಹಾಡುತ್ತ, ಆರ್ಟಿಮಿಸ್, ಆರ್ಟಿಮಿಸ್.
ಕರುಣೆಗೆದುರಾಗಿ ಅವಳು ಗೋಳಿಟ್ಟು,
ಕರುಣೆ ಕಾರಣ ಕಾಡುಗಳ ಸೋಲು,
ಕರುಣೆ ಕೊಲ್ಲುವುದೆನ್ನ ವನದೇವತೆಗಳನ್ನು,
ಕರುಣೆ ದುಶ್ಶಕ್ತಿಗಳ ಮಾತ್ರ ಹಾಗೇ ಬಿಡುವುದು.
ಕರುಣೆ ಶರತ್ಕಾಲವನು ಕೊಳಕುಗೊಳಿಸುವುದು,
ಕರುಣೆಯೇ ಒರತೆ, ಅದುವೆ ನೀರಿನ ಬುಗ್ಗೆ.
ಯಾವ ಸುಂದರ ಜೀವಿಯೂ ಇಂದು ನನ್ನ ಹಿಂಬಾಲಿಸದೆ ಇದ್ದರೆ
ಕರುಣೆ ಕಾರಣ ಅದಕ್ಕೆ
ಕೊಲೆಯನ್ನು ಕರುಣೆ ನಿಷೇಧಿಸಿದ ಕಾರಣ.
ಈ ಋತುವಿನಲ್ಲಿ ಎಲ್ಲವನ್ನೂ ಕೊಳಕಾಗಿಸಿಯಾಯ್ತು,
ಕಾರಣ ಇದೇ, ಯಾರಿಗೂ ಬೇಡ ಶುಭ್ರತೆ,
ಕೊಳಕಿಗೆ ಕರುಣೆಯಿರುತ್ತ
ಸಕಲ ವಸ್ತುಗಳೂ ಮೂರಾಬಟ್ಟೆಯಾಗಿರುತ್ತ;
ಕೊಲ್ಲಲು ನನ್ನ ಶರಗಳೂ ಧಾವಿಸವು.
ಇಂದು ಯಾವುದಕ್ಕೂ ಸರಿಯಾದ ಸಾವು ದೊರಕುವುದಿಲ್ಲ
ಬರೇ ಕೊಳೆತು ಕೊನೆಯಾಗುತ್ತವೆ.

ಸಾಫೋಸಿನಲ್ಲಿ,
ಒಂದು ದಿನ ನಾನಿದನ್ನೂ ಕೇಳಿದೆ:
. . . ಹೊಂತಗಾರ ಮಾರ್‍ಸ್‌ನ ಜತೆಯೀಗ ಹೋಗುವುದಿಲ್ಲ ಆಕೆ
ಬದಲಾಗಿ ಒಬ್ಬ ಮುದಿ ಮೂರ್ಖನ ಮೇಲೆ ಅವಳಿಗೆ ಕರುಣೆ
ಅವನ ಮನೆ ನೋಡಿಕೊಳ್ಳುತ್ತಾಳೆ,
ಒಲೆ ಬೆಂಕಿ ಆರದ ಹಾಗೆ ನೋಡಿಕೊಳ್ಳುತ್ತಾಳೆ.
ಕಾಲ ಕೆಟ್ಟುದು. ದುಷ್ಟ.
ಒಂದು ದಿನ, ಮತ್ತು ಒಂದು ದಿನ
ತರುಣ ಪೆದ್ರೊ ನಡೆದನು ದಂಗಾಗಿ
ಒಂದು ದಿನ ಮತ್ತು ಒಂದು ದಿನ
ಇಗ್ನೆಸ್‌ನ ಕೊಲೆಯಾದ ಮೇಲೆ.
ಲಿಸ್ಬನ್‌ನ ಶ್ರೀಮಂತ ಜನವೆಲ್ಲ ಬಂದರು
ಒಂದು ದಿನ, ಮತ್ತು ಒಂದು ದಿನ
ಶ್ರದ್ಧಾಂಜಲಿಯ ನೀಡಲು. ಅಲ್ಲಿ ಕುಳ್ಳಿರಿಸಿದ್ದ
ಸತ್ತ ಕಣ್ಣುಗಳು,
ಸತ್ತ ಕೂದಲು ಕಿರೀಟದ ಕೆಳಗೆ,
ಅರಸನೋ ಇನ್ನೂ ತರುಣ ಅವಳ ಬದಿಗೆ
. . .

೩೬ ಕಾಂಡ   XIII

ಕುಂಗ್ ನಡೆದನು
ವಂಶಾವಳಿಯ ದೇವಳದ ಬಳಿ
ಹಾಗೂ ದೇವದಾರು ವನದೊಳಕ್ಕೆ
ಹಾಗೂ ಆಮೇಲೆ ಕೆಳನದಿಯ ಪಕ್ಕದಲಿ ಹೊರಕ್ಕೆ,
ಹಾಗೂ ಅವನ ಜತೆಯಲ್ಲಿ ಖಿಯೂ ಚೀ
ಮತ್ತು ಮಿತಭಾಷಿ ಚಿಯಾನ್
ಹಾಗೂ ಅಂದನು ಕುಂಗ್: `ಅಪ್ರಸಿದ್ಧರು ನಾವು
ಮಹಾ ರಥಿಕರಾಗುವಿರ?
ಹಾಗಿರಲು ಲೋಕ ನಿಂತು ನೋಡುವುದು
ಇಲ್ಲಾ ನಾನೇ ತಗೊಳ್ಳಲೋ ರಥಿಕತ್ವವ ಅಥವ ಧನುರ್ವಿದ್ಯೆಯ
ಅಥವ ಸಾರ್ವಜನಿಕ ಭಾಷಣದ ಕಲೆಯ?’
ಹಾಗೂ ತ್ಸೆಯೂ-ಲೂ ಹೇಳಿದನು, `ರಕ್ಷಾದಳವ ಸರಿಪಡಿಸುವೆ ನಾನು’
ಹಾಗೂ ಚೀ ಹೇಳಿದನು, `ಬೆಟ್ಟದ ಮೇಲೊಂದು ಪುಟ್ಟ ಗುಡಿ ನನಗಿರಲಿ,
ಯಮನಿಯಮ ಸರಿಯಿರುವ, ಪೂಜೆ ಪುರಸ್ಕಾರಗಳು ನಡೆವ,’
ಹಾಗೂ ಚಿಯಾನ್ ಹೇಳಿದನು, ತಂತಿ ವಾದ್ಯದ ಮೇಲೆ ಕೈಯಿರಿಸಿ
ಕೈ ತೆಗೆದ ಮೇಲೂ ಸಣ್ಣ ಸದ್ದುಗಳು ಮುಂದರಿದು,
ಹಾಗೂ ಆ ಸದ್ದುಗಳು ಹೊಗೆಯಂತೆ ಎದ್ದು ಮೇಲಕ್ಕೆ, ಎಲೆಗಳ ಕೆಳಕ್ಕೆ,
ಹಾಗೂ ಆ ಸದ್ದುಗಳನ್ನವನು ವಿಚಾರಿಸಿಕೊಳ್ಳುತ್ತ:
`ಆ ಹಳೇ ಈಜುಕೊಳ,
ಹಾಗೂ ಅದರ ಕರೆಯಲ್ಲಿ ಕೈ ಬಡಿವ ಹೈದಗಳು
ಅಥವ ಪೊದೆಯೊಳಗೆ ಮಾಂಡೊಲಿನ್ ಬಾರಿಸುವ.’
ಹಾಗೂ ಕುಂಗ್ ಬೀರಿದನು ಪ್ರತಿಯೊಬ್ಬರ ಮೇಲೂ ನಸುನಗೆಯ ಸಮನಾಗಿ
ಮತ್ತು ತ್ಸೆಂಗ್-ಸೀ ತಿಳಿಯಬಯಸಿದನು:
`ಉತ್ತರಿಸಿದವರಾರು ಸರಿಯಾಗಿ?’
ಹಾಗೂ ಕುಂಗ್ ಹೇಳಿದನು: `ಉತ್ತರಿಸಿದ್ದಾರೆ ಎಲ್ಲರೂ ಸರಿಯಾಗಿ,
ಎಂದರೆ ಅರ್ಥ ಪ್ರತಿಯೊಬ್ಬನೂ ಅವನ ಸ್ವಭಾವಕ್ಕೆ ಸರಿಯಾಗಿ.’
ಹಾಗೂ ಕುಂಗ್ ಹುವಾನ್ ಯುಂಗ್‌ನತ್ತ ಎತ್ತಿದನು ದೊಣ್ಣೆಯನು,
ಹುವಾನ್ ಯುಂಗ್ ಅವನಿಂದ ಹಿರಿಯವನು,
ರಸ್ತೆ ಬದಿಯಲ್ಲಿ ಕೂತು
ಬುದ್ಧನಾಗುವೆನೆಂದು ನಟಿಸಿಕೊಂಡಿದ್ದ.
ಹಾಗೂ ಕುಂಗ್ ಹೇಳಿದ
`ಎಲೆ ಅರಳು ಮರುಳೆ, ಬಾ ಹೊರಕ್ಕೆ,
ಎದ್ದು ಏನಾದರೂ ಉಪಯೋಗಕ್ಕೆ ಬರುವುದನ್ನು ಮಾಡು.’
ಮತ್ತು ಕುಂಗ್ ಹೇಳಿದ
`ಮನ್ನಿಸಬೇಕು ಮಗುವಿನ ಮನೋಶಕ್ತಿಗಳ
ಅದು ಜನನಕ್ಕೆ ಬಂದು ಗಾಳಿಯಲಿ ಉಸಿರಾಡುವ ಕ್ಷಣದಿಂದ,
ಹೊರತು ಏನೇನೂ ಗೊತ್ತಿರದ ಐವತ್ತರ ವಯಸ್ಕ
ಯಾವ ಮನ್ನಣೆಗೂ ಅನರ್ಹ.’
ಹಾಗೂ `ದೊರೆಮಗನು ತನ್ನ ಸುತ್ತಲೂ ಯಾವತ್ತು
ಕುಶಲ ಕರ್ಮಿಗಳ ಕಲೆಹಾಕುವನೋ ಆಗ ಬಳಕೆಯಾಗುವುದವನ ಸಂಪತ್ತು.
ಹಾಗೂ ಕುಂಗ್ ಹೇಳಿದ, ಅಲ್ಲದೇ ಬೋಧಿಯೆಲೆ ಮೇಲೆ ಬರೆಸಿದ:
`ಯಾವಾತನಲ್ಲಿ ಧರ್ಮವಿಲ್ಲವೋ
ಅವನೆಂದಿಗೂ ಧರ್ಮ ಕಾಪಾಡಲಾರ;
ಹಾಗೂ ಯಾವಾತನಲ್ಲಿ ಧರ್ಮವಿಲ್ಲವೋ
ಅವನ ಮನೆ ಮಂದಿ ಧರ್ಮದಲ್ಲಿ ನಡೆಯರು;
ಹಾಗೂ ಯಾವ ದೊರೆಮಗನಲ್ಲಿ ಧರ್ಮವಿಲ್ಲವೋ
ಅವನು ಹತ್ತಿಕ್ಕಲಾರ ಅಕ್ರಮಗಳ ತನ್ನ ಸಾಮ್ರಾಜ್ಯದಲ್ಲಿ.
ಹಾಗೂ ಕುಂಗ್ ಇತ್ತನು `ಧರ್ಮ’
ಹಾಗೂ `ಸಹೋದರ ಭಾವ’ ಎಂಬ ಪದಗಳ.
ಹಾಗೂ ಪುನರ್ಜನ್ಮದ ಬಗ್ಗೆ ಅವನೇನೂ ಹೇಳದೆಯೆ ಇದ್ದ.
ಹಾಗೂ ಹೇಳಿದ
`ಯಾರು ಬೇಕಾದರೂ ಅತಿಕ್ರಮಿಸಬಹುದು,
ಗುರಿತಪ್ಪಿ ಹೊಡೆಯುವುದು ಎಲ್ಲರಿಗೂ ಸುಲಭ,
ಅಲ್ಲಾಡದೇ ಮಧ್ಯಸ್ಥನಾಗುವುದೆ ಕಷ್ಟ.’

ಹಾಗೂ ಅವರೆಂದರು: `ಮಗನು ಕೊಲೆ ಮಾಡಿದರೆ
ತಂದೆ ರಕ್ಷಣೆಯ ಕೊಡಬೇಕೆ ಅವನ ಬಚ್ಚಿಡಬೇಕೆ?’
ಹಾಗೂ ಕುಂಗ್ ಹೇಳಿದ:
`ಬಚ್ಚಿಡಬೇಕು.’

ಹಾಗೂ ಕುಂಗ್ ತನ್ನ ಮಗಳನ್ನು ಕೊಟ್ಟ ಕೊಂಗ್-ಚಾಂಗ್‌ಗೆ
ಕೊಂಗ್-ಚಾಂಗ್ ಸೆರೆಯಲ್ಲಿ ಖೈದಿಯಾಗಿದ್ದರೂ.
ಹಾಗೂ ತನ್ನ ಸೊಸೆಯನ್ನು ಕೊಟ್ಟ ನಾನ್-ಯಂಗ್ ಎಂಬವಗೆ
ನಾನ್-ಯಂಗ್ ಕೆಲಸ ಕಳಕೊಂಡು ಕುಳಿತಿದ್ದರೂ.
ಹಾಗೂ ಕುಂಗ್ ಹೇಳಿದ `ವಾಂಗ್ ಆಳಿದನು ಆರಕ್ಕೆ ಏರದೆ ಮೂರಕ್ಕೆ
ಇಳಿಯದೆ
ಆಢಳಿತ ಸರಿಯಾಗಿತ್ತು ಅವನ ಕಾಲದಲ್ಲಿ.
ಹಾಗೂ ನನಗೆ ನೆನಪುಂಟು ಕೂಡ.
ಇತಿಹಾಸ ಬರೆದವರು ಹಾಳೆಗಳ ಹಾಗೆಯೇ ಬಿಟ್ಟದ್ದು,
ತಮಗಿನ್ನೂ ಗೊತ್ತಿರದ ಸಂಗತಿಗಳಿಗಿರಲೆಂದು,
ಆ ಕಾಲ ಮಾತ್ರ ಮುಗಿದಂತೆ ಕಾಣುವುದು.’
ಹಾಗೂ ಕುಂಗ್ ಹೇಳಿದ, `ಚರಿತ್ರಹೀನರಾದರೆ ನೀವು
ಆ ವಾದ್ಯವನ್ನು ನುಡಿಸುವುದು ಹೇಗೆ
ನುಡಿಸಿದರೂ ಪ್ರಗಾಥಗಳಿಗೆ ತಕ್ಕಂಥ ಸಂಗೀತ?
ಖುಬಾನಿಯ ಕುಸುಮಗಳು
ಬೀಸುವುವು ಮೂಡಲ ಕಡೆಯಿಂದ ಪಡುವಲಿಗೆ
ಹಾಗೂ’ ಅವು ಬೀಳದ ಹಾಗೆ ನಾನು ತಡೆಯಲು ನೋಡಿರುವೆ.’

ಟಿಪ್ಪಣಿ: ಕುಂಗ್-ಫೂ ಎನ್ನುವುದು ಪ್ರಾಚೀನ ಚೈನಾ ದೇಶದ ತತ್ವಜ್ಞಾನಿ ಕನ್ ಫ್ಯೂಶಿಯಸ್ ನ ದೇಸೀ ಹೆಸರು. ಈ ಕಾಂಡದಲ್ಲಿ ಪೌಂಡ್ ಈತನ ಕೆಲವು ಸುಪ್ರಸಿದ್ಧ ಮಾತುಗಳನ್ನು ಯಥಾವತ್ತಾಗಿ ಉಪಯೋಗಿಸಿಕೊಂಡಿದ್ದಾನೆ.

 

(ಚಿತ್ರಗಳು: ರೂಪಶ್ರೀ ಕಲ್ಲಿಗನೂರ್)