ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ. ಆದರೆ ಇವೆಲ್ಲವೂ ಕನ್ನಡದ ಕವಿತೆಗಳು. ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ. ಈ ದಿನ ಇಲ್ಲಿ ಕೆ.ವಿ.ತಿರುಮಲೇಶ್ ಬರೆದ ಎರಡು ಕವಿತೆಗಳಿವೆ.

ಮನದ ಮಾಯ

ಮನೆ ಬಿಟ್ಟವರಿದ್ದಾರೆ ಮಠ ಬಿಟ್ಟವರಿದ್ದಾರೆ
ತತ್ವಜ್ಞಾನದ ಮೋಹದಲ್ಲಿ
ದೇಶ ತೊರೆದವರು ವಿಷ ಕುಡಿದವರು
ಅಮೃತದಂತೆ ಮದ್ಯವನ್ನೂ
ವ್ಯಸನವಾಗಿಸಿಕೊಂಡವರು ಹಾಗೂ
ತಬ್ಬಿಕೊಂಡವರು
ಅಪ್ಸರಸಿಯರಂತೆ ಸೂಳೆಯರನ್ನೂ

ಏನೀ ಆಕರ್ಷಣೆ ಎಂದು ನಾನೂ
ನಡೆದು ನೋಡುತ್ತೇನೆ
ಒಂದಷ್ಟು ದೂರ
ಹರಡಿದ ಮಬ್ಬಲ್ಲದೆ ಇನ್ನೇನೂ
ಕಾಣಿಸುವುದಿಲ್ಲ
ನನಗೋ ಸಮೀಪದೃಷ್ಟಿ
ಯಾರೂ ಬಿಟ್ಟ ದಾರಿಗುರುತುಗಳಿಲ್ಲ
ಇದ್ದರೂ ಅವನ್ನು ಬಳಸುವಂತಿಲ್ಲ
ಇಷ್ಟು ಮಾತ್ರ ತಿಳಿದಿದ್ದೇನೆ:
ತತ್ವಜ್ಞಾನ ಹೀಗೆಯೇ ಆವಾಗಲೂ ಯಾವಾಗಲೂ
ದೇಶಭ್ರಷ್ಟ!

ಕಾವ್ಯವೂ ಅರ್ಧ ಹಾಗೆಯೇ
ಇನ್ನರ್ಧ ಹೀಗೆ
ಕವಿ ನಡೆಯುತ್ತಾನೆ ಬರಿಜೇಬಿನಲ್ಲೂ ಮಹಾ
ರಾಜನ ಹಾಗೆ
ಎಲ್ಲರನ್ನೂ ಕೂಡಿಕೊಂಡೇ
ಕಾಡುಮೇಡುಗಳಲ್ಲಿ ಮತ್ತು
ವಾರದ ಸಂತೆಗಳಲ್ಲಿ ಒಬ್ಬನೇ ಆದರೂ ಬರೀ
ಒಬ್ಬನೂ ಅಲ್ಲ

ದೇವಯಾನಿ ಶರ್ಮಿಷ್ಠ ಮತ್ತಿನ್ನು ಯಾರು ಆ
ಅಪ್ಸರಸಿ ಸರಸಿ ಯವನೀ ರಮಣಿ ಕೂಡ
ಅವನಿಗಿಷ್ಟ

ಇತ್ತ ಈ ಫಿಲಾಸಫರಿಗಾದರೆ ಮೈಮನಸ್ಸಿಗೆ ಗಾಯ
ಆದರೂ ಆಹ ಅದೆಂಥಾ ಮೋಹ ಎಂದಿಗೂ
ಪರವಶತೆ ಬಿಡದ ಮನದ ಮಾಯ.

ನಿನ್ನ ತಾಟಸ್ಥ್ಯದಲಿ ನನ್ನ

If I am not for myself, who will be for me?
If I am for myself only, what am I?
If not now-when?

Talmudic saying

ಎಲ್ಲರಿಗೆ ನಾನಿದ್ದೇನೆ ನನಗೆ ಯಾರಿದ್ದಾರೆ
ಅಥವ ಹಾಗೆ ಯೋಚಿಸುವುದೂ ಕೂಡ ಪಾಪ
ಎಲ್ಲಿ ನಾನು ಕೊನೆಗೊಳ್ಳುತ್ತೇನೆ ಎಲ್ಲಿ ಇನ್ನೊಬ್ಬ
ಆರಂಭಗೊಳ್ಳುತ್ತಾನೆ ನನಗೆ ಗೊತ್ತಿಲ್ಲ
ಎಲ್ಲಿ ಸ್ವಾರ್ಥ ಮುಗಿಯುತ್ತದೆ ಎಲ್ಲಿ ನಿಸ್ವಾರ್ಥ
ಸುರುವಾಗುತ್ತದೆ ನನಗೆ ಗೊತ್ತಿಲ್ಲ
ಎಲ್ಲಿ ಮಾತು ತಡೆಯುತ್ತದೆ ಮೌನ
ಮೊದಲಾಗುತ್ತದೆ ಅದೂ ಗೊತಿಲ್ಲ
ಎಲ್ಲಿ ವೈರುಧ್ಯಗಳು ಪರಸ್ಪರ ಎದುರಾಗಿ
ಗುರುತಿಲ್ಲದಂತೆ ಸರಿದುಹೋಗುತ್ತವೆ
ಒಂದು ಹೂವಿಗೂ ಗೊತ್ತಿರುತ್ತದೆ
ಯಾವಾಗ ಅರಳಬೇಕು ಯಾವಾಗ ದಳ
ಉದುರಬೇಕು ನಾನೋ ತೀರ
ವ್ಯವಹಾರಶೂನ್ಯ ಜನ್ಮತಃ ಯಾವುದೋ ಕೊರತೆ
ಆದರೂ ಸ್ವಯಂ ಶೂನ್ಯನಾಗಲು ನಾನೂ
ಬಯಸಿದ್ದಿದೆ ಓ ದೈವವೇ
ಶೂನ್ಯಸ್ಥಲವೇ ಇಲ್ಲದ ಲೋಕವ ಮಾಡಿ
ಇರಿಸಿದಿ ನನ್ನನ್ನಿಲ್ಲಿ ಈ ಮಬ್ಬಿನಲ್ಲೇ
ದಿಕ್ಕೆಂದು ಹೊರಟು ದಿಗ್ಭ್ರಮೆಗೊಂಡೆ ನಾನು
ನೀರ ಮೇರೆಯ ಹುಡುಕುವ ಮೀನಿನಂತೆ
ಸಿಕ್ಕ ಸಿಕ್ಕಲ್ಲಿ ಸಿಗಹಾಕಿಕೊಂಡೆ

ಗೋಡೆಯ ಮೇಲೆ ಬಿದ್ದ ನೆರಳೇ ನೀನೆಷ್ಟು
ನನ್ನದು ನಾನೆಷ್ಟು ನಿನ್ನದು ಎಂದು ಕೇಳಲೇ
ಈ ದೈತ್ಯಾಕಾರವನ್ನೆ ನಾನೆಂದು
ಸಂಭ್ರಮಿಸಲೇ
ಸಣಕಲ ನಾನು ಆದರೂ ಎಲೆ ಅಸ್ತಮಯ
ಸೂರ್ಯನೇ
ಸಕಲ ವಸ್ತುಗಳ ಮೇಲೆ ಸುವರ್ಣವರ್ಣವ ಸುರಿದಿ
ನನ್ನ ಮುಖದ ಮೇಲೂ ಇದೀಗ
ನನ್ನ ಮುಖವಲ್ಲ ನಿನ್ನದೇ
ನಾಳೆ ಮುಂಜಾನೆ ಉದಿಸುವಿ ನೀನು
ನಿನಗೋಸ್ಕರ ಕಾಯುವ ಜೀವಕೋಟಿಗಳಿದ್ದಾವೆ
ನನಗೋಸ್ಕರ ಯಾರಿದ್ದಾರೆ
ಮುಂಜಾನೆ ನನಗೆ ಎಚ್ಚರಾಗಬೇಕೆಂದೆ ಇಲ್ಲ
ನಿದ್ರಿಸದೆ ಅದೆಷ್ಟೊ ವರ್ಷಗಳಾಗಿವೆ
ರೆಪ್ಪೆಗಳು ಮೇಲೆ ಮಣಭಾರ ಕುಳಿತಂತೆ
ತೂಕಡಿಸುತ್ತಿವೆ ಲೋಕದ ಭಾರವ ತಾವೆ
ಹೊತ್ತುಕೊಂಡಂತೆ ಇನ್ನೂ ಭ್ರಮಿಸುತ್ತವೆ ಇದು
ಭ್ರಮೆಯೆಂದು ತಿಳಿದೂ
ಆದರೂ ಮುಚ್ಚಲಾರವು ಅವು
ಕನಸುಗಳ ಭಯಕ್ಕೆ
ಒಂದು ಕ್ಷಣ ನಿಲ್ಲು ಸಂಜೆಯ ಬೆಳಕೇ
ನಿನ್ನ ತಾಟಸ್ಥ್ಯದಲಿ ನನ್ನ ಸ್ವೀಕರಿಸು.