ಗಝಲ್ ಗಳನ್ನು ಸಾಮಾಜಿಕ, ಕಲಾತ್ಮಕ, ಧಾರ್ಮಿಕ ನೆಲೆಗಳಲ್ಲಿ ವಿಶ್ಲೇಷಿಸಲಾಗಿದೆಯಷ್ಟೇ ಅಲ್ಲ, ಅವನ್ನು ಮನೋವೈಜ್ಞಾನಿಕ ನೆಲೆಯಲ್ಲೂ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅಂತಿಮವಾಗಿ ಅತ್ಯಂತ ಪ್ರಾಮಾಣಿಕ ಪ್ರೀತಿಯ ಕಾವ್ಯವನ್ನು “ನೈಜ-ಜೀವನದ” ಆದರ್ಶಪ್ರೇಮಿಗಳು ಬರೆಯಲಿಲ್ಲ. ಹೆಚ್ಚಿನ ಶಾಸ್ತ್ರೀಯ ಗಝಲ್ ಕವಿಗಳು ತಮ್ಮ ಇಡೀ ಜೀವನವನ್ನು ತೀಕ್ಷ್ಣವಾದ ಕಾಮಪ್ರಚೋದಕ-ಅತೀಂದ್ರಿಯ ನೋವಿನ ಸ್ಥಿತಿಯಲ್ಲಿ ಕಳೆಯಲಿಲ್ಲ. ಸಾಂಪ್ರದಾಯಿಕವಾಗಿಯೂ, ಕಲಾತ್ಮಕವಾಗಿಯೂ, ಪ್ರಕಾರ ಬದ್ಧತೆಯಿಂದಲೂ ಕೌಶಲ್ಯದಿಂದಲೂ ಮನೋಭಾವಗಳನ್ನು ವ್ಯಕ್ತಪಡಿಸಲು ಎರಡೂ ಪ್ರಕಾರಗಳನ್ನು ಅಳವಡಿಸಿಕೊಳ್ಳಲಾಗಿದೆ.
ಮೀರ್ ತಖಿ ಮೀರ್ ಕಾವ್ಯದ ಕುರಿತು ಆರ್.ವಿಜಯರಾಘವನ್ ಬರಹ
ಮೀರ್ ಮುಹಮ್ಮದ್ ತಖಿ ‘ಮೀರ್’ (1724-1810) ಉರ್ದು ಗಝಲ್ ನ ಮಹಾ ಕೃತಿಕಾರ. ಮೂರು ಮುಘಲ್ ಕವಿಗಳ ಪೈಕಿ ಮೀರ್ ಅವರ ಕೃತಿಗೆ ಮಾತ್ರ ಸ್ಪಷ್ಟ ಮತ್ತು ವಿವರವಾದ ಪರಿಚಯ ನಮಗೆ ಲಭ್ಯವಿದೆ. ಇದು ನಮ್ಮ ಭಾಗ್ಯ ಎನ್ನಬೇಕು. ಈ ಪರಿಚಯವಂತು ದ್ವಿಗುಣ ಮೌಲ್ಯಯುತವಾಗಿದೆ. ಗಝಲ್ ಪಾಶ್ಚಾತ್ಯ ಓದುಗರ ಪಾಲಿಗೆ ಅಜ್ಞಾತವಾಗಿರುವ ಪ್ರಕಾರವಾಗಿದೆ. ಅದರ ಸಂಕೀರ್ಣತೆ ಮತ್ತು ಸಂಗ್ರಹಗುಣ ದೀರ್ಘಕಾಲದವರೆಗೆ ಭಾಷಾಂತರಕಾರರ ಪಾಲಿಗೆ ಹತಾಶೆಯನ್ನು ಮಾತ್ರ ಉಳಿಸಿತ್ತು. ‘ಮೂರು ಮುಘಲ್ ಕವಿಗಳು’ ಕೃತಿಕಾರರಾದ ರಾಲ್ಫ್ ರಸ್ಸೆಲ್ ಮತ್ತು ಖುರ್ಷಿದುಲ್ ಇಸ್ಲಾಂ ಮೀರ್ ನ ಗಝಲ್ ಗಳನ್ನು ಅರ್ಥೈಸಿಕೊಳ್ಳುವ ಕಡೆ -ವಿಶೇಷಜ್ಞರಲ್ಲದ ಓದುಗರಿಗಾಗಿ – ಅಗತ್ಯವಾದ ಸನ್ನಿವೇಶವನ್ನು –ಕಾಂಟೆಕ್ಸ್ಟ್- ಅತ್ಯಂತ ಸೂಕ್ಷ್ಮತೆಯಿಂದ ಒದಗಿಸಿದ್ದಾರೆ. ಲೇಖಕರ ಮುನ್ನುಡಿಯಿಂದ ಗಮನಿಸಬಹುದಾದಂತೆ ಮೀರ್ ನ ಕುರಿತ ಅಧ್ಯಾಯಗಳು ರಸ್ಸೆಲ್ ರಿಂದ ರಚಿತವಾಗಿವೆ. ‘ದಿ ಲವ್ ಪೊಯೆಟ್ರಿ ಆಫ್ ಮೀರ್’ ಎಂಬ ಪ್ರಮುಖ ಅಧ್ಯಾಯವು ಮೀರ್ ನ ಪ್ರಣಯ ಗಝಲ್ ಗಳಿಗೆ ವಿವರಣಾತ್ಮಕ ಸಂದರ್ಭವನ್ನು ಒದಗಿಸುತ್ತದೆ.
ಈ ವಿವರಣಾತ್ಮಕ ಸನ್ನಿವೇಶವನ್ನು ರಸ್ಸೆಲ್ ‘ಮೀರ್ ನ ಪ್ರೇಮ ಕಥೆ’ಯಲ್ಲಿ ಕಾಣುತ್ತಾನೆ. ಇದನ್ನು ಅವನು ‘ದುರಂತ’ ಎಂದು ವಿವರಿಸುತ್ತಾನೆ. ಈ ಪ್ರೇಮ ಕಥೆಯ ಎಳೆಯನ್ನು ರಸ್ಸೆಲ್ ವಿಶೇಷವಾಗಿ ಕಾಣುವುದು ಮೀರ್ ನ ಎರಡು ಮಸ್ನವಿಗಳಿಂದ. (ದೀರ್ಘ ನಿರೂಪಣೆಯ ಕವಿತೆಗಳು ಎರಡು ಸಾಲಿನವು ಆಗಿದ್ದು ಪ್ರಾಸಬದ್ಧವಾಗಿದೆ). ಈ ಎರಡು ಮಸ್ನಾವಿಗಳು, ‘ಮುಉಮ್ಲಾತ್ -ಇ’ ಇಷ್ಕ್ ಮತ್ತು ಖ್ವಾಬ್ ಓ ಖಯಾಲ್-ಇ ಮೀರ್ (ರಸ್ಸೆಲ್ ಇವನ್ನು ‘ಲವ್ ಆಫ್ ಹಂತಗಳು’ ಮತ್ತು ‘ಮೀರ್ ನ ಕಾಣ್ಕೆ’ ಎಂದು ಭಾಷಾಂತರಿಸುತ್ತಾನೆ) ಈ ಮಸ್ನವಿಗಳನ್ನು ಪ್ರಥಮಪುರುಷ ನಿರೂಪಣೆಯಲ್ಲಿ ಬರೆಯಲಾಗಿದೆ. ಮೊದಲ ಮಸ್ನವಿಯು ವ್ಯಕ್ತಿಯೋರ್ವನ ಮತ್ತು ವಿವಾಹಿತ ಮಹಿಳೆಯೊಬ್ಬಳ ನಡುವಿನ – ಆತ ಆಕೆಯ ನಡುವೆ ಸ್ಪಷ್ಟವಾದ ಸಂಬಂಧವಿದೆ- ನಂತರ ಮುರಿದು ಬೀಳುವ ಭಾವೋದ್ದೀಪ್ತ ಪ್ರೀತಿಯ ಸಂಬಂಧವನ್ನು ವಿವರಿಸುತ್ತಾನೆ. ಎರಡನೆಯದರಲ್ಲಿ ನಿರೂಪಕನನ್ನು ಕವಿದ ಮರುಳಿನಿಂದ ಆತ ಪಟ್ಟ ಪಡಿಪಾಟಲನ್ನು ವಿವರಿಸುತ್ತಾನೆ. ಚಂದ್ರನಲ್ಲಿ ಕಾಣುವ ಸುಂದರ ಮಹಿಳೆಯ ಮುಖ ಅವನಲ್ಲಿ ಗೀಳಿನ ರೂಪ ತಳೆಯುತ್ತದೆ. ಈ ಗುಣಲಕ್ಷಣದ ಹಿನ್ನೆಲೆಯಲ್ಲಿ ಕವಿತೆಯನ್ನು ನಿರೂಪಿಸಲಾಗಿದೆ.
ಯಾವಾಗಲೂ ಕಲೆಯ ಕೃತಿಯೊಂದನ್ನು ಪ್ರಥಮ ಪುರುಷ ನಿರೂಪಣೆಯಲ್ಲಿ ಬರೆಯಲ್ಪಟ್ಟಿದೆ ಎಂಬ ಕಾರಣಕ್ಕೆ ಅದನ್ನು ಲೇಖಕರ ಜೀವನದ ನಿಖರವಾದ ವಿವರಣೆಯಂತೆ ತೆಗೆದುಕೊಳ್ಳುವುದು ಅತ್ಯಂತ ಅಪಾಯಕಾರಿಯಾದ ಮಾರ್ಗವಾಗಿದೆ. ಕಾವ್ಯನಾಯಕನು ಅಥವಾ ಬೇರೊಂದು ಪಾತ್ರವು ನಿರೂಪಕನು ಸೃಷ್ಟಿಸಿದ ವ್ಯಕ್ತಿಯಾಗಬಹುದು, ಅಥವಾ ಲೇಖಕ ಯಾವುದೋ (ಕಲಾತ್ಮಕ ಅಥವಾ ಇತರ) ಕಾರಣಗಳಿಗಾಗಿ ತನ್ನದೇ ಆದ ಜೀವನದ ಘಟನೆಗಳನ್ನು ಮರುಹೊಂದಿಸಿ ನಿರೂಪಿಸಿರಬಹುದು. ಮುಉಮ್ಲಾತ್ ಇ’ ಇಷ್ಕ್ ಎಂಬ ಕವಿತೆಯ ಜೊತೆಯಲ್ಲಿ ವ್ಯವಹರಿಸುವಾಗ ಎಚ್ಚರಿಕೆ ಬಹಳ ಮುಖ್ಯವೆಂದು ರಸ್ಸೆಲ್ ತಾನೇ ಒಪ್ಪಿಕೊಳ್ಳುತ್ತಾ ‘ಇದು ಕವಿತೆಯಲ್ಲಿ ವಿವರಿಸಿದ ಘಟನೆಗಳು ಸಂಭವಿಸಿದ ಬಹಳ ಕಾಲದ ನಂತರ ಬರೆಯಲ್ಪಟ್ಟಿತು; ಇದು ‘ಇಡೀ ಕಥೆಯನ್ನು ಹೇಳುತ್ತಿಲ್ಲ’ ಎನ್ನುತ್ತಾನೆ. ಅದಾಗ್ಯೂ, ಮೂಲಭೂತವಾಗಿ ಈ ಮಸ್ನವಿಯು ಮೀರ್ ನ ಆರಂಭಿಕ ಪ್ರೇಮ ಸಂಬಂಧದ ವಿವರಣೆಯಾಗಿದೆ; ಅದು ಮೀರ್ ನ ಸ್ಮರಣೆಯಲ್ಲಿ ಜೀವಂತ ಉಳಿದಿದ್ದ ನೆನಪುಗಳನ್ನು ಸರಣಿಯಂತೆ ನೆನಪಿಗೆ ತಂದುಕೊಂಡು ವಿವರಿಸುತ್ತದೆ’ ಎಂದು ರಸ್ಸೆಲ್ ಭಾವಿಸುತ್ತಾನೆ. ಇನ್ನೊಂದು ಮಸ್ನವಿ, ಖ್ವಾಬ್ ಓ ಖ್ಯಾಲ್-ಇ ಮಿರ್, ಈ ಪ್ರೀತಿಯ ಸಂಬಂಧದ ನಂತರ ಉಂಟಾದ ಕೋಲಾಹಲವನ್ನು ವಿವರಿಸುತ್ತದೆ ಎಂದು ಅವನು ಭಾವಿಸುತ್ತಾನೆ. ಮೀರ್ ನ ಆಕ್ರೋಶಗೊಂಡ ಕುಟುಂಬವು ಅವನನ್ನು ಕೆಟ್ಟದಾಗಿ ಹಿಂಸಿಸಿ ಆ ಹಿಂಸೆ ತಾಳಲಾರದೆ ಅವನು ಹುಚ್ಚನಾದನೆಂದು ಸಹ ಅವನು ಹೇಳುತ್ತಾನೆ.
ಮೀರ್ ನ ಮತ್ತು ಅವನ ಸಂಬಂಧಿಕರ ನಡುವಿನ ಸಂಬಂಧದಲ್ಲಿ ಉಂಟಾದ ಅಸಮಾಧಾನದ, ಒಡಕಿನ ಬಗ್ಗೆ ಕೆಲವು ಸ್ವತಂತ್ರ ಪುರಾವೆಗಳು ಅಸ್ತಿತ್ವದಲ್ಲಿವೆ. ಬಳಿಕವೇ ಅವನು ತಾತ್ಕಾಲಿಕವಾಗಿ ಹುಚ್ಚನಾಗಿದ್ದು. ತನ್ನ ಆತ್ಮಚರಿತ್ರೆಯಲ್ಲಿ ಅವನು ತನ್ನ ಸಂಬಂಧಿಕರ ಹಗೆತನದ ಕುರಿತಂತೆ ಯಾವುದೇ ವಿವರಣೆಯನ್ನು ಕನಿಷ್ಟ ಪರೋಕ್ಷವಾಗಿಯೂ ಕೊಡುವುದಿಲ್ಲ. ಇದು ವಿವೇಚನೆಯಿಂದ ಕೂಡಿದ ಮೌನವಾಗಿದೆ. ವಾದಕ್ಕಾಗಿ ಹೇಳುವುದಾದರೆ, ಎರಡು ಮಸ್ನವಿಗಳು ಸ್ವಲ್ಪಮಟ್ಟಿಗೆ ಆತ್ಮಚರಿತ್ರೆಯ ಸ್ವರೂಪದವೆಂದು ಭಾವಿಸಲು ಅಡ್ಡಿಯಿಲ್ಲ. ರಸ್ಸೆಲ್ ಅವುಗಳನ್ನು ಬಳಸಿದ ಬಗೆಯನ್ನು ಈ ಹಿನ್ನೆಲೆಯಲ್ಲಿ ನಾವು ಪರಿಗಣಿಸಬಹುದಾಗಿದೆ. ಈ ಮಸ್ನವಿಗಳ ಮೇಲೆ ಅವಲಂಬಿತರಾಗಿದ್ದ ರಸ್ಸೆಲ್, ಮೀರ್ ನ ಜೀವನದ ಸತ್ಯವನ್ನು ಪರೀಕ್ಷಿಸಲು ಯಾವುದೇ ಪ್ರಯತ್ನವನ್ನು ಮಾಡಿಲ್ಲ. ಬದಲಿಗೆ ಅವರು Mu’amlat-e ‘ishq ಅನ್ನು ಸಾಮಾನ್ಯ, ಮೂಲರೂಪದ ಮಾದರಿಯ ನಿರ್ದಿಷ್ಟ ನಿದರ್ಶನವಾಗಿ ಬಳಸುತ್ತಾರೆ. ಇದು ಹದಿನೆಂಟನೇ ಶತಮಾನದ ಉತ್ತರ ಭಾರತೀಯ ಮುಸ್ಲಿಂ ಪ್ರೇಮ ಸಂಬಂಧದ ಒಂದು ಮಾದರಿಯಾಗಿದೆ. ಇದರ ಮೂಲ ಅಸ್ಪಷ್ಟವಾಗಿದೆ. ಆದರೆ ಈ ಅವಧಿಯ ಸಂಬಂಧದಲ್ಲಿ ಮೀರ್ ತನಗಿದ್ದ ಐತಿಹಾಸಿಕ ಮತ್ತು ಸಾಮಾಜಿಕ ಜ್ಞಾನದಿಂದ ಹಾಗೂ Mu’amlat-e ‘ishq ಕೃತಿಯ ಸಂಯೋಜನೆಯಿಂದ ಸ್ವತಃ ಪಡೆದುಕೊಂಡದ್ದು ಅಮೂರ್ತತೆಯಾಗಿದೆ. ಕೃತಿಯ ಕೇಂದ್ರದ ಪಾತ್ರಗಳಾಗಿ ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುವ ಹುಡುಗನಿದ್ದಾನೆ, ಅವನ ಪ್ರೀತಿಯ ಹುಡುಗಿ ಇದ್ದಾಳೆ ಮತ್ತು ಅವರ ಪರದಾ ಸಮಾಜದಲ್ಲಿದ್ದ ಅಂದಿನ ಪರಿಸ್ಥಿತಿಗಳು, ಚಲಾಯಿಸಲಾಗುವ ಅಧಿಕಾರಗಳು, ಧಾರ್ಮಿಕತೆಯ ಪ್ರಶ್ನಿಸಲಾಗದ ನಿರ್ಬಂಧಗಳ ಕಾರಣಕ್ಕೆ ಸಮಾಜವನ್ನು ಕವಿದಿದ್ದ ಹಿಂಜರಿಕೆ – ಈ ಎಲ್ಲವೂ ಇವೆ. ಅವನನ್ನು ಕುರಿತ ಲೆಕ್ಕಾಚಾರದ ಕ್ರೌರ್ಯ, ಪ್ರೀತಿಯಲ್ಲಿ ತಾನು ಎದುರಿಸುವ ಪ್ರತಿ ಕಷ್ಟದಲ್ಲೂ ಗೆದ್ದು ಜಯಶಾಲಿಯಾಗುವ ಹಂತ ತಲುಪುವ ಅವರು ಎದುರಿಸುವ ಒತ್ತಡಗಳು, ಅವಳಲ್ಲಿ ತನ್ನ ಕುರಿತ ಒಲವು ನಿಧಾನವಾಗಿ ಸಾಯುತ್ತಿರುವುದನ್ನು ಗಮನಿಸುವಾಗ ಅವನು ಪಡುವ ಯಾತನೆ, ಕೊನೆಗೆ ಅವನು ನಿರಂತರ ಸ್ವಯಂ-ಶಿಸ್ತಿನಿಂದ ಪ್ರೀತಿಯ ಎಲ್ಲಾ ಪರೀಕ್ಷೆಗಳನ್ನು ಗೆಲ್ಲುವುದರ ಮೂಲಕ ತನ್ನ ‘ಆಧ್ಯಾತ್ಮಿಕ ಭಾವಪರವಶತೆ’ಯನ್ನು ಹೊಂದುವುದು- ಈ ಎಲ್ಲಾ ಹಂತಗಳನ್ನು ಸೂಕ್ಷ್ಮವಾಗಿ ವಿವರಿಸಲಾಗಿದೆ ಮತ್ತು ತಾರ್ಕಿಕ ಬೆಳವಣಿಗೆಯು ಕಥನದಲ್ಲಿ ಕೂಡಿದೆ.
ಥಾಮಸ್ ಹಾರ್ಡಿಯವರ ಅಂಡರ್ ದ ಗ್ರೀನ್ ವುಡ್ ಟ್ರೀನಲ್ಲಿನ ಪಾತ್ರದ ಫ್ಯಾನ್ಸಿ ಹುಡುಗಿಯು ಉರ್ದು ಗಝಲ್ ನ ನಾಯಕಿಯನ್ನು ಅನೇಕ ರೀತಿಯಲ್ಲಿ ಹೋಲುವವಳಂತೆ ಇರುವುದನ್ನು ಗುರುತಿಸಲು ರಸ್ಸೆಲ್ ಅವರಿಗೆ ಸಾಧ್ಯವಾಯಿತು.
‘ಹುಡುಗ’ ಮತ್ತು ‘ಹುಡುಗಿ’ ಯ ವಿಶಿಷ್ಟವಾದ ಪ್ರೀತಿಯ ಸಂಭವನೀಯತೆಯು ಮೀರ್ ಅತ್ಯುತ್ತಮ ದ್ವಿಪದಿಗಳಿಂದ ದೃಢಪಡಿಸಲ್ಪಟ್ಟಿದೆ. ಇದನ್ನು ಪ್ರೀತಿಯ ಸಂಬಂಧದ ಮಜಲುಗಳಿಗೆ ಅನುಗುಣವಾಗಿ ಕ್ರಮಾನುಗತವಾಗಿ ರಸಲ್ ವ್ಯಾಖ್ಯಾನಿಸುತ್ತಾರೆ. ಈ ಗಝಲ್ ಗಳ ಸಂಪೂರ್ಣ ಪರಿಣಾಮವು ಸುಸಂಬದ್ಧವಾದದ್ದು ಮತ್ತು ಸುಂದರವಾದದ್ದು. ಮೀರ್ ನ ಕಾವ್ಯ ಅದರಿಂದಲೇ ಹೊಸ ಹೊಸದಾಗಿ ಅವನತ್ತ ಮನ ತೆರೆವ ಪಾಶ್ಚಾತ್ಯ ಅಭಿಮಾನಿಗಳ ಮನಸ್ಸನ್ನು ಗೆಲ್ಲಲು ಸೂಕ್ತವಾಗಿದೆ. ರಸ್ಸೆಲ್ ಅವರ ವಿವರಣಾತ್ಮಕತೆಯ ಗುರಿಯು ಅವರ ಮಾದರಿಗೆ ಉನ್ನತ ಮಟ್ಟದ ಸಾಮಾಜಿಕ ನಿಖರತೆಯನ್ನು ಅಪೇಕ್ಷಿಸುತ್ತದೆ. ಉದಾಹರಣೆಗೆ, ಹುಡುಗನು ಮೊದಲ ನೋಟದಲ್ಲೇ ಪ್ರೀತಿಯಲ್ಲಿ ಬೀಳುತ್ತಾನೆ ಎನ್ನುವುದು ಅವರ ಪ್ರಕಾರ ದೈನಂದಿನ ನಿಜ ಜೀವನ ಪರಿಸ್ಥಿತಿಗಳಲ್ಲಿ ಪ್ರೀತಿಯು ಸಾಮಾನ್ಯವಾಗಿ ಅಂಕುರಿಸುವ ಬಗೆ. ರಸ್ಸೆಲ್ ನಮ್ಮ ಪ್ರಯೋಜನಕ್ಕಾಗಿ ಒಂದು ಸಾಮಾಜಿಕ ಸಂದರ್ಭವನ್ನು ಪುನರ್ಸೃಷ್ಟಿಸುವುದರಲ್ಲಿ ತೊಡಗುತ್ತಾರೆ. ಆ ಸನ್ನಿವೇಶವು ಮೂಲ ಶ್ರೋತೃಗಳು ಗಝಲ್ ಅನ್ನು ಅರ್ಥ ಮಾಡಿಕೊಳ್ಳಲು ಸೃಷ್ಟಿಸಿದ್ದ ಸನ್ನಿವೇಶ. ಕವಿ ಭಾವಿಸುವುದು ತನ್ನ ಇಂದಿನ ಓದುಗನಿಗೆ ಮುಘಲ್ ಇಂಡಿಯಾದ ಸಾಮಾಜಿಕ ಪರಿಸ್ಥಿತಿಗಳು ಪ್ರೀತಿಗೆ ಯಾವ ಸಂದರ್ಭ ಸೃಷ್ಟಿಸಿವೆ ಎಂಬುದರ ಬಗ್ಗೆ ಸಂಪೂರ್ಣ ಜ್ಞಾನವಿತ್ತು ಎಂದು, ಆದರೆ ಆಧುನಿಕ ಓದುಗನು ಅದನ್ನು ಹೊಂದಿಲ್ಲವೆಂದು ಸಹ ಕವಿ ನಿಖರವಾಗಿ ಹೇಳುತ್ತಾರೆ.
ಮೀರ್ ನ ಕುರಿತು ಅಂದಾಲಿಬ್ ಶದಾನಿ ಸಹ ಬರೆದಿದ್ದಾರೆ. ಶದಾನಿ ಮೀರ್ ನ ಕವಿತೆಯ ಕುರಿತಂತೆ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ದಿಕ್ಕಿಗೆ ಓದುಗರ ಗಮನ ಸೆಳೆದಿದ್ದಾರೆ: ‘ಮೀರ್ ನ ಕೃತಿಗಳ ಬಗ್ಗೆ ಬೇರೆಯವರ ಅಭಿಪ್ರಾಯ ಲೆಕ್ಕಿಸದೆ ಯಾರಾದರೂ ನಿಖರವಾಗಿ ವಿಮರ್ಶೆ ಮಾಡಿದರೆ, ಮೀರ್ ನ ಕಾವ್ಯದ ಕೇಂದ್ರ ವಿಷಯವು ‘ಗಡ್ಡವಿಲ್ಲದ ಹುಡುಗರ ಪ್ರೀತಿ’ ಎಂದು ತೀರ್ಮಾನಕ್ಕೆ ಬರುತ್ತಾರೆ ಎನ್ನುತ್ತಾನವನು. ಶದಾನಿ ಈ ಪ್ರವೃತ್ತಿಯನ್ನು ವ್ಯಾಪಕ ಮತ್ತು ವಿಶಿಷ್ಟ – pervasive and characteristic-ಎಂದು ಕಾಣುತ್ತಾನೆ. ‘ಮೀರ್ ಈ ಗುಣದಲ್ಲಿ ಶತಕ್ಕೆ ಶತ ವಿಶಿಷ್ಟವಾಗಿದ್ದಾನೆ. ನೀವು ಎಲ್ಲಿಯೂ ಇಷ್ಟು ಸಮೃದ್ಧವಾಗಿ ದೆಹಲಿಯ ಹುಡುಗರನ್ನು ಕಾಣಲಾಗುವುದಿಲ್ಲ. ಶದಾನಿ ಪ್ರಕಾರ, ಈ ಪೆಡೆರಾಸ್ಟಿಕ್ – ವ್ಯಕ್ತಿ ಮತ್ತು ಶಿಶುವನ್ನು ಒಳಗೊಂಡ ಕಾಮ ಪ್ರವೃತ್ತಿ- ಥೀಮ್ ಗಮನಿಸದೇ ಉಳಿದಿದೆ ಇದಕ್ಕೆ ಕಾರಣ 14,000 ಕ್ಕಿಂತಲೂ ಹೆಚ್ಚು ದ್ವಿಪದಿಗಳನ್ನು ಒಳಗೊಂಡಿರುವ ಮೀರ್ ನ ದಿವಾನ್ ಗಳ ಬೃಹತ್ ಗಾತ್ರ. ಇದು ಮೀರ್ ನ ಕೃತಿಗಳ ಸಂಪಾದಕರಿಗೆ ಅವರ ಸ್ವಂತ ಆದ್ಯತೆಯ ಚಿತ್ರಿಕೆಗೆ ಸರಿಹೊಂದುವಂತಹ ಪದ್ಯಗಳನ್ನು ಇಟ್ಟುಕೊಂಡು ಉಳಿದವನ್ನು ಬಿಟ್ಟುಬಿಡಲು ಉತ್ತೇಜನ ನೀಡಿದೆ.
ಶದಾನಿ ಮೀರ್ ನ ಪೆಡರಾಸ್ಟಿಕ್ ಗುಣಗಳಿಗೆ ವಸ್ತುವನ್ನು ಎತ್ತಿಕೊಳ್ಳುವುದು ಅವನ ಕಾವ್ಯದ ಒಡಲಿಂದಲೇ. ಈ ಚಿತ್ರಗಳನ್ನು ನೋಡೋಣ:
ನನ್ನ ಬಳಿ ಸ್ವಲ್ಪವೇ ಹಣವಿದ್ದಾಗಲೂ ನಾನದನ್ನು ಆ ಹುಡುಗರಿಗಾಗಿ ಖರ್ಚು ಮಾಡಿದೆ
ಈಗ ನಾನು ಸನ್ಯಾಸಿಯಂತಲೆಯುವಾಗ, ಆ ಹುಡುಗರಿಗೆ ‘ಮೀರ್’ ಕೃತಜ್ಞನು
ಕೆಟ್ಟ ದಿನಗಳಲು ನನ್ನನ್ನರಸಿ ಬಂದವು, ಆ ಹುಡುಗರ ಸಹವಾಸದೊಡನೆ
ನನ್ನ ತಂದೆ ಎಚ್ಚರಿಸುತ್ತಿದ್ದ, ಈ ಘಳಿಗೆ ಬರುವುದರ ಕಡೆಗೆ
ಆ ಹುಡುಗರಿಗಾಗಿ ನಾನೆನ್ನ ಮನವ ತೆತ್ತುದೇ ಕೇಡು ತಂದಿತೆ ನನಗೆ
ಈ ಊರಲೆಲ್ಲ ಹಿರಿಕಿರಿಯರು ಮಾತಾಡುತಿರುವರು ಅದನು ಕುರಿತೆ
ಶಾದಿನಿ ತಮ್ಮ ವಾದವನ್ನು ಮೀರ್ ಬಳಸುವ ಮೂವತ್ತೆರಡಕ್ಕಿಂತ ಕಡಿಮೆ ಇಲ್ಲದಷ್ಟು ವಿಶೇಷಣಗಳನ್ನು –ಎಪಿತೆಟ್ ಗಳು- ಮೀರ್ ಕಾವ್ಯದಲ್ಲಿ ಗುರುತಿಸಿ ತಮ್ಮ ವಾದವನ್ನು ಮುಗಿಸುತ್ತಾರೆ. ಸಯ್ಯಿದ್, ತೋಟಗಾರ, ಸೈನಿಕ, ಬ್ರಾಹ್ಮಣ, ಅತ್ತಾರ್ ತಯಾರು ಮಾಡುವವ, ನ್ಯಾಯಾಧೀಶ, ಅಗಸ ಮುಂತಾದವರನ್ನು ನಿರ್ದಿಷ್ಟ ದ್ವಿಪದಿಗಳಲ್ಲಿ ಹೊಗಳಿರುವುದನ್ನು ಗಮನಿಸಿಯೆ ಮೀರ್ ನದು ಪೆಡೆರಾಸ್ಟಿಕ್ ಕಾವ್ಯವೆಂದು ಬಗೆಯುತ್ತಾರೆ. ಅದು ಮೀರ್ನದೇ ಅನುಭವವಾಗಿರಬಹುದು, ಅಥವಾ ಅವನು ಅವನ ಗೆಳೆಯ ಸುರಸುಂದರ ‘ತಬಾನ್’ನ ಕಡೆಗೆ ಆಕರ್ಷಿತನಾಗಿದ್ದಿರಬಹುದು. ತಬಾನನೂ ಕೂಡ ಅನೇಕ ಪರ್ಷಿಯನ್ ಕವಿಗಳಂತೆ ಪೆಡೆರಾಸ್ಟಿಕ್ ಆಗಿದ್ದ. ಅಂದಿನ ಪರ್ಷಿಯಾದಲ್ಲಿ ಪೆಡರಾಸ್ಟಿಯು ವ್ಯಾಪಕವಾಗಿತ್ತು.
‘ಉರ್ದು ಕವಿತೆಯ ಮೇಲೆ ಪರ್ಷಿಯನ್ ಪೆಡೆರಾಸ್ಟ್ರಿಯ ಪರಿಣಾಮ’ ಮತ್ತು ‘ಪರ್ಷಿಯನ್ ಘಝಲ್ ಮತ್ತು ಪ್ರಿಯಕರನ ಕ್ರೌರ್ಯ’ ಎಂದು ಅನುವಾದಿಸಬಹುದಾದ ಹೆಸರಿನ ಕೃತಿಗಳನ್ನು ನೋಡಬಹುದು. ನೋಡಿ: Shadani, “Iran ki amard-parasti ka asar Urdu sha’iri par,” Tahqiqat, pp. 193-222 ಮತ್ತು
Shadani, “Farsi ghazal aur jafa-e mahbub,” Tahqiqat, pp. 225-66 ಇಂತಹ ತೀರ್ಮಾನಗಳು ಅವು ಪಠ್ಯ ನಿರ್ದೇಶಿತವಾಗಿರುವುದರಿಂದ ನಂಬಲನರ್ಹ ಎಂಬ ವಾದವೂ ಇದೆ.
ಪರ್ಷಿಯನ್ ಕವಿಗಳು, ಅದರಲ್ಲೂ ವಿಶೇಷವಾಗಿ ಘಝಲ್ ಬರಹಗಾರರ ಆದರ್ಶವು ತಮ್ಮ ವೈಯಕ್ತಿಕ ಭಾವನೆಗಳನ್ನು ಮತ್ತು ಕಲ್ಪನೆಗಳನ್ನು ಹೊಸ ಮತ್ತು ತೀರಾ ವೈಯಕ್ತಿಕ ರೂಪದಲ್ಲಿ ಹಾಡುವುದಲ್ಲ ಅಥವಾ ನಾವು ಎರ್ಲೆಬ್ನಿಸ್ಲಿರಿಕ್ – Erlebnislyrik – ಎಂದು ಕರೆಯುವುದರಲ್ಲಿ ಅವರ ಮನಸ್ಸು ಹಾಗೂ ಭಾವಗಳನ್ನು ಸುರಿಯುವುದೂ ಅಲ್ಲ, ಬದಲಿಗೆ ಕೆಲವು ಸ್ಥಾಪಿತ ಬೌದ್ಧಿಕ ರಚನೆಗಳ ನಿಯಮಗಳ ಪ್ರಕಾರ ಅವರ ಭಾವನೆಗಳನ್ನು ವ್ಯಕ್ತಪಡಿಸುವುದೇ ಆಗಿದೆ.
“ನೋವುಣ್ಣುವ ಪ್ರೇಮಿ”ಯ ವಿಷಯ-ಥೀಂ-ವು ಪರ್ಷಿಯನ್, ಟರ್ಕಿಶ್ ಮತ್ತು ಉರ್ದು ಕವಿತೆಗಳಲ್ಲಿ ಮಾತ್ರವಲ್ಲ, ಅರಾಬಿಕ್ ಕವಿತೆಯಲ್ಲೂ ಪ್ರಮುಖವಾಗಿ ವ್ಯಕ್ತವಾಗಿದೆ. ಇದು ಇಸ್ಲಾಂ ಧರ್ಮದ ಮುಂಚಿನ ಅವಧಿಯಿಂದಲೂ ಹೆಚ್ಚಾಗಿ ಕಂಡುಬರುತ್ತದೆ. ಪ್ರಾಯಶಃ ವಾನ್ ಗ್ರೂನ್ಬಾಮ್ ನ von Grunebaum ಪ್ರಕಾರ 7 ನೇ ಶತಮಾನದ ಆರಂಭದಲ್ಲಿ, ಮಡಿನಿಯನ್ – Madinian- ಘಝಲ್ ಆದರ್ಶವಾದಕ್ಕೆಳಸುವ, ನಿರ್ಲಕ್ಷ್ಯಕ್ಕೆ ತುತ್ತಾದ, ಹತಾಶ ಪ್ರೀತಿಯ ಚಿತ್ರಣಕ್ಕಾಗಿ ಚಿರಪರಿಚಿತವಾಗಿದೆ.
ಆದರೂ ಘಜಲ್ ಸಂಪ್ರದಾಯಗಳಲ್ಲಿ, ವಿರಹ, ನೋವು, ಕಳೆದುಕೊಳ್ಳುವುದು ಮತ್ತು ಬೇರ್ಪಡಿಕೆಗಳು ಸ್ಪಷ್ಟವಾಗಿ ಪ್ರಧಾನವಾಗಿ ಅಭಿವ್ಯಕ್ತಗೊಂಡಿವೆ. ಚಿಟ್ಟೆಯಲ್ಲಿನ ಬೆಂಕಿಯತ್ತಲಿನ ಅದಮ್ಯ ಆಕರ್ಷಣೆ, ಗುಲಾಬಿಯನ್ನು ಆರಾಧಿಸುವ ನೈಟಿಂಗೇಲ್, ಪಂಜರದ ಪಕ್ಷಿಯ ಉದ್ಯಾನದ ಹಂಬಲ ನೇರವಾಗಿ “ನೋವುಣ್ಣುವ ಪ್ರೇಮಿ”ಯು ದೊರೆಯದ ಪ್ರಿಯನಿಗೆ ಹಂಬಲಿಸುವುದನ್ನು ಸೂಚಿಸುತ್ತದೆ. ಶರತ್ಕಾಲದಲ್ಲಿ ಉದ್ಯಾನವನದ ಮರಣ, ಸಿಡಿಲು ಹೊಡೆದ ಹಕ್ಕಿ ಗೂಡು, ರಾತ್ರಿಯಲ್ಲಿ ಉರಿದುಹೋದ ಮೊಂಬತ್ತಿಗಳು, ಗುಲಾಬಿಯ ಪಕಳೆಗಳು ಉದುರುವುದು ಇವೆಲ್ಲ ಅಂತಿಮವಾಗಿ ವಿರಹದ, ಕಳೆದುಕೊಳ್ಳುವುದರ ಚಿತ್ರಗಳು.
ಮಾನವ ಜೀವಿಗಳು – ಲೈಲಾ ಮತ್ತು ಮಜ್ನೂನ್, ಶಿರಿನ್ ಮತ್ತು ಫರ್ಹಾದ್, ಯೂಸುಫ್ ಮತ್ತು ಜುಲಾಖಾ – ಇವರೆಲ್ಲ ಜೀವನಪರ್ಯಂತ ವಿರಹದ, ಕಳೆದುಕೊಳ್ಳುವುದರ ಉದಾಹರಣೆಯಾಗಿ ವಿರಹದಲ್ಲೇ ಮರಣ ಹೊಂದಿದ ನೋವಿನ ಪ್ರೇಮಿಗಳಾಗಿದ್ದಾರೆ. ಧಾರ್ಮಿಕ ವ್ಯಕ್ತಿಗಳು – ಅಬ್ರಹಾಂ, ಮೋಸೆಸ್, ಮನ್ಸೂರ್ –ಮುಂತಾದ ಅನೇಕರು ಬಹಳ ವೇಳೆ ದೇವರ ಮೇಲಿನ ಪ್ರೀತಿಯಿಂದ ಬಳಲುತ್ತಿದ್ದಾರೆ ಎಂದು ಚಿತ್ರಿಸಲಾಗಿದೆ.
ಗಝಲ್ ನ ವಿಘಟನೆಯು – fragmentariness – ಸಾಂಪ್ರದಾಯಿಕ ಚಿತ್ರಗಳ ಸಂಗ್ರಹವನ್ನು ಅನಿವಾರ್ಯವಾಗಿಸುತ್ತದೆ. ಹೆಚ್ಚಿನ ಗಝಲ್ ಗಳಲ್ಲಿ ಪ್ರತಿ ದ್ವಿಪದಿಯು ಚಿಂತನೆಯ ಸಂಪೂರ್ಣ ಪ್ರತ್ಯೇಕ ಘಟಕವಾಗಿದ್ದು ಒಂದು ಅರ್ಥದಲ್ಲಿ ಅದೊದು ಕಿರುಗವಿತೆಯಂತಿರುತ್ತದೆ. ಅಲ್ಲಿರುವುದು ಎಲ್ಲಕ್ಕೂ ಸಾಮಾನ್ಯವಾದ ಪ್ರಾಸ ವ್ಯವಸ್ಥೆ ಮತ್ತು ಇತರ ದ್ವಿಪದಿಗಳ ಜೊತೆ ಕೂಡಿಸುವ ಛಂದಸ್ಸು ಮಾತ್ರ. ಈ ವಿಘಟನೆಯ ಗುಣವು ದೌರ್ಬಲ್ಯವೂ (ಸಂಕುಚಿತತೆ, ಸಂಪರ್ಕಹೀನತೆ) ಅದೇ ಸಮಯ ಅದರ ಶಕ್ತಿಯೂ (ಏಕಾಗ್ರತೆ, ತೀವ್ರತೆ) ಆಗಿದೆ. ಈಗಾಗಲೇ ಅರ್ಥದ ಹಲವು ಪದರಗಳನ್ನು ಒಳಗೊಂಡಿರುವ ಸಾಂಪ್ರದಾಯಿಕ ಪರಿಕಲ್ಪನೆಗಳು ಮತ್ತು ಚಿತ್ರಗಳ ಪ್ರಚೋದಕ ಬಳಕೆ, ಸಂಕೀರ್ಣ ಆಲೋಚನೆಗಳು ಮತ್ತು ಭಾವನೆಗಳನ್ನು ಕಿರಿದಾದ ಅವಕಾಶದಲ್ಲಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಡುತ್ತದೆ. ಒಂದೆರಡು ಆಧುನಿಕ ಗಝಲ್ ಕವಿಗಳು ಕೂಡಾ – ಅವರು ಸಾಂಪ್ರದಾಯಿಕ ಚಿತ್ರಗಳನ್ನು ಎಷ್ಟೇ ಪುನಃ ಪುನಃ ಪರಾಮರ್ಶಿಸಿ, ರೂಪಾಂತರಿಸಿ ಅಥವಾ ಪ್ರಶ್ನಿಸಿದರೂ ಅವುಗಳನ್ನೇ ಅವಲಂಬಿಸಿ ಮುನ್ನಡೆಯುತ್ತಿರುತ್ತಾರೆ.
ಶದಾನಿ ಮೀರ್ ನ ಕವಿತೆಯ ಕುರಿತಂತೆ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ದಿಕ್ಕಿಗೆ ಓದುಗರ ಗಮನ ಸೆಳೆದಿದ್ದಾರೆ: ‘ಮೀರ್ ನ ಕೃತಿಗಳ ಬಗ್ಗೆ ಬೇರೆಯವರ ಅಭಿಪ್ರಾಯ ಲೆಕ್ಕಿಸದೆ ಯಾರಾದರೂ ನಿಖರವಾಗಿ ವಿಮರ್ಶೆ ಮಾಡಿದರೆ, ಮೀರ್ ನ ಕಾವ್ಯದ ಕೇಂದ್ರ ವಿಷಯವು ‘ಗಡ್ಡವಿಲ್ಲದ ಹುಡುಗರ ಪ್ರೀತಿ’ ಎಂದು ತೀರ್ಮಾನಕ್ಕೆ ಬರುತ್ತಾರೆ ಎನ್ನುತ್ತಾನವನು.
ವಾಸ್ತವವಾಗಿ, ಮೀರ್ ನನ್ನು ಇತರ ಗಝಲ್ ಕವಿಗಳಿಗಿಂತಲೂ ಹೆಚ್ಚು ಮಾನ್ಯನೆಂದು ಗುರುತಿಸಲಾಗಿದೆ. ಅವನು ಜೀವನದ ಘಟನೆಗಳ “ನಿಜವಾದ ಚರಿತ್ರಕಾರ”, ಆದರೆ ಅವನ ಬದುಕಿನ ಚರಿತ್ರೆಯಲ್ಲ ಅದು. ಬದಲಿಗೆ ಅವು ಅವನ ಒಳಗಿನ ಭಾವನೆಗಳು ಮತ್ತು ಸಂವೇದನೆಗಳು”. ಅತ್ಯುತ್ತಮವಾದದ್ದು ಹೃದಯದಿಂದ ಹೊರಬರುತ್ತದೆ ಮತ್ತು ಹೃದಯದ ಒಳಕ್ಕೆ ಹೋಗುತ್ತದೆ”. ಅವನ ಕವಿತೆ ನಿಷ್ಠುರ ವಿಮರ್ಶಕನ ಒಳಕ್ಕೂ ಇದೊದು ರೀತಿಯ “ವಿಚಲಿತಗೊಳಿಸುವ ಮತ್ತು ಶಕ್ತಿಯುಳ್ಳ” ಅಭಿವ್ಯಕ್ತಿಯಾಗಿದೆ ಎಂಬ ಭಾವನೆಯನ್ನು ತುಂಬುತ್ತದೆ.
ವಿಷಾದ, ನಿಷ್ಫಲತೆ, ನೋವುಗಳ ಹತಾಶೆಯ ಅವನ ಘಝಲ್ ಗಳು ಅನುವಾದದಲ್ಲಿ ಕೂಡಾ ತಮ್ಮ ಭಾವಪ್ರಚೋದಕ ಸರಳ ಘನತೆಯೊಂದಿಗೆ ತಮ್ಮನ್ನು ಬಿಟ್ಟುಕೊಳ್ಳುತ್ತವೆ. ಆದರೆ “ಹೃದಯದಿಂದ ಬಂದಿರುವ” ಕವನವು ಒಳಗಿನ ಜೀವನದ ಆಳವನ್ನು ಬಹಿರಂಗಪಡಿಸುತ್ತದೆ, ಬಾಹ್ಯ ಪರಿಸ್ಥಿತಿಯ ಅಕ್ಷರಶಃ ಸತ್ಯವನ್ನಲ್ಲ.
ಮೀರ್ ಹೇಳುವುದು ಈ ನೋವನ್ನು ಅರ್ಥಮಾಡಿಕೊಳ್ಳುವ ಮತ್ತು ವ್ಯಕ್ತಪಡಿಸುವ ನಿಯಮಗಳೆಂದರೆ ಕೆಳಗಿನವುಗಳನ್ನು ಅದು ಒಳಗೊಂಡಿರಬೇಕು:
1. ಅಸೂಯೆಯೆ ಇಲ್ಲದವನು ಪ್ರೀತಿಸುವುದಾದರೂ ಹೇಗೆ ಹೇಳು.
2. ಪ್ರೀತಿಯನ್ನು ಬಯಲುಗೊಳಿಸಿದರೆ ಅದು ಅಪರೂಪಕ್ಕೆ ಉಳಿದುಕೊಂಡೀತು
3. ಪ್ರೀತಿಯು ಸುಲಭವಾಗಿ ಸಿಕ್ಕಿಬಿಟ್ಟರೆ ಅದು ಅತಿ ಕಡಿಮೆ ಮೌಲ್ಯವನ್ನು ಪಡೆದೀತು; ಕಷ್ಟವು ಅದನ್ನು ಅಮೂಲ್ಯವಾಗಿಸುತ್ತದೆ.
4. ನಿಜವಾದ ಅಸೂಯೆಯು ಪ್ರೀತಿಯ ಭಾವನೆಯನ್ನು ಯಾವಾಗಲೂ ಹೆಚ್ಚಿಸುತ್ತದೆ.
5. ಪ್ರೀತಿಯ ಯೋಚನೆಯು ಯಾರಿಗೆ ನೈರಾಶ್ಯವನ್ನುಂಟು ಮಾಡುವುದೋ ಅವನು ಕಡಿಮೆ ತಿನ್ನುತ್ತಾನೆ, ಕಡಿಮೆ ನಿದ್ರಿಸುತ್ತಾನೆ. ಪ್ರೇಮಿಗಳ ಪ್ರತಿಯೊಂದು ನಡೆಯು ತನ್ನ ಪ್ರಿಯನ ಯೋಚನೆಯಲ್ಲಿ ಕೊನೆಗೊಳ್ಳುತ್ತದೆ.
6. ನಿಜವಾದ ಪ್ರೇಮಿಯು ತನ್ನ ಪ್ರಿಯನನ್ನು ಮೆಚ್ಚಿಸುವುದೇನೆಂಬುದೆಂಬುದರ ಹೊರತು ಏನೊಂದನ್ನೂ ಒಳ್ಳೆಯದೆಂದು ಭಾವಿಸುವುದಿಲ್ಲ
7. ನಿಜವಾದ ಪ್ರೇಮಿ ನಿರಂತರವಾಗಿ ತನ್ನ ಪ್ರೇಮಿಯ ಚಿಂತೆಯಲ್ಲಿರುವ, ಬೇರೆ ಯೋಚನೆಯೇ ಅವನಿಗಿರದು
ಗಝಲ್ ಗಳನ್ನು ಸಾಮಾಜಿಕ, ಕಲಾತ್ಮಕ, ಧಾರ್ಮಿಕ ನೆಲೆಗಳಲ್ಲಿ ವಿಶ್ಲೇಷಿಸಲಾಗಿದೆಯಷ್ಟೇ ಅಲ್ಲ, ಅವನ್ನು ಮನೋವೈಜ್ಞಾನಿಕ ನೆಲೆಯಲ್ಲೂ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅಂತಿಮವಾಗಿ ಅತ್ಯಂತ ಪ್ರಾಮಾಣಿಕ ಪ್ರೀತಿಯ ಕಾವ್ಯವನ್ನು “ನೈಜ-ಜೀವನದ” ಆದರ್ಶಪ್ರೇಮಿಗಳು ಬರೆಯಲಿಲ್ಲ. ಹೆಚ್ಚಿನ ಶಾಸ್ತ್ರೀಯ ಗಝಲ್ ಕವಿಗಳು ತಮ್ಮ ಇಡೀ ಜೀವನವನ್ನು ತೀಕ್ಷ್ಣವಾದ ಕಾಮಪ್ರಚೋದಕ-ಅತೀಂದ್ರಿಯ ನೋವಿನ ಸ್ಥಿತಿಯಲ್ಲಿ ಕಳೆಯಲಿಲ್ಲ. ಸಾಂಪ್ರದಾಯಿಕವಾಗಿಯೂ, ಕಲಾತ್ಮಕವಾಗಿಯೂ, ಪ್ರಕಾರ ಬದ್ಧತೆಯಿಂದಲೂ ಕೌಶಲ್ಯದಿಂದಲೂ ಮನೋಭಾವಗಳನ್ನು ವ್ಯಕ್ತಪಡಿಸಲು ಎರಡೂ ಪ್ರಕಾರಗಳನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ ಮೀರ್ ಮತ್ತು ಇತರ ಶ್ರೇಷ್ಠ ಕವಿಗಳು ಎರಡೂ ಪ್ರಕಾರಗಳಲ್ಲಿ ಭಾವನಾತ್ಮಕತೆ ಮತ್ತು ತಾಂತ್ರಿಕ ಕೌಶಲ್ಯದಿಂದ ಬರೆದರು. ಅವರ ಪದ್ಯಗಳು “ಹೃದಯದಿಂದ” ಬಂದವು ಮತ್ತು ತಮ್ಮ ಆಂತರಿಕ ಜೀವನದ ಆಳವಾದ ಅನುಭಾವಗಳಿಂದ ಪೋಷಿಸಲ್ಪಟ್ಟವು. ಆದರ್ಶ ಪ್ರೇಮದ ಕವಿತೆಯಲ್ಲಿ ವ್ಯಕ್ತವಾದ ಭಾವನೆಗಳ ನೈಜತೆಯನ್ನು ಒತ್ತಿಹೇಳಿದ ಸಿ. ಎಸ್. ಲೆವಿಸ್, ಮೀರ್ ಮತ್ತು ಗಝಲ್ ನ ಇತರ ನೈಪುಣ್ಯವುಳ್ಳ ಕವಿಗಳಿಗೆ ಸಮಾನವಾಗಿ ಅನ್ವಯಿಸುವಂತೆ ಒಂದು ಬಗೆಯ ದಿಟ್ಟತನದಲ್ಲಿ ನುಡಿಯುವುದು “ಎಲ್ಲ ಕವಿತೆಗಳನ್ನು ಆತ್ಮಚರಿತ್ರೆಯ ದಾಖಲೆ ಅಥವಾ ಸಾಹಿತ್ಯಿಕ ಕಸರತ್ತು” ಎಂದು ಹೇಳುವ ಮಾರಕ ಇಬ್ಬಾಗವಾಗುವಿಕೆಯನ್ನು – Dichotemy – ತಪ್ಪಿಸಲು ಆಗ್ರಹಿಸುತ್ತಾನೆ. ಮುಂದುವರಿದು ಅವನು ಆದರ್ಶ ಪ್ರೇಮದ ಕವನ ಕೇವಲ ಒಂದು ಸಂಪ್ರದಾಯವಲ್ಲ; ಅದು ಸತ್ಯದ ಪ್ರತಿಲಿಪಿಯೂ ಅಲ್ಲ ಎಂದು. ಆದರೆ ನಾವು ಖಚಿತವಾಗಿ ಹೇಳಬಹುದು ‘ಇದು ಕವಿತೆ’ ಎಂದು ನುಡಿಯುತ್ತಾನೆ.
ಇದು ಪ್ರೀತಿಯ ಪ್ರಾರಂಭ ಮಾತ್ರವೇ, ನೀ ಯಾಕೆ ನರಳುತ್ತೀಯ?
ಕಾದು ನೋಡು, ನೀನು ಮುಂದುವರೆದಂತೆ ಏನಾಗುವುದೆಂದು ನೋಡು.
ಬೆಳಿಗ್ಗೆಯ ಕಾರವಾನ್ ಕೂಟವು ಕಹಳೆಯ ಕರೆ ನೀಡುತ್ತಿದೆ:
“ಇಗೋ ನಾವು ಹೊರಟಿದ್ದೇವೆ, ಸೋಮಾರಿಗಳೆ, ಸರಿಯಾದ ಹೊತ್ತು, ನಿದ್ರೆಯಿಂದೇಳಿ.
ನನ್ನ ಹೃದಯದ ಕಣಿವೆ ಎಂದಿಗೂ ಕೊನರದದು
ಈ ಬಂಜರು ಮಣ್ಣಿನಲ್ಲಿ ಬಯಕೆಯ ಬೀಜವನ್ನೇಕೆ ಬಿತ್ತಬೇಕು?
ಇವು ಅಳಿಸಲಾಗದ ಒಳಸೇರಿದ ಪ್ರೀತಿಯ ಕಲೆಗಳು,
ನಿನ್ನ ಎದೆಗಳನ್ನು ಶುಚಿಗೊಳಿಸಲು ವ್ಯರ್ಥ ಕಷ್ಟ ಪಡುತ್ತೀಯ
ಸುಂದರ ಯೂಸುಫ್ ಗಿಂತಲೂ ಪ್ರಿಯನಾದವನೇ, ಜೀವನದ ಪ್ರತಿ ಕ್ಷಣ
ಓ ಮೀರ್, ನೀನು ಅದನ್ನು ನುಣುಚಿಕೊಳ್ಳಲು ಏಕಾದರೂ ಬಿಟ್ಟೆ
“Meer ki shayari” (compiled by Amar Dehlvi)
***
ಮೀರ್ ಕೇವಲ ಗಝಲ್ ಗಳನ್ನಷ್ಟೆ ಬರೆಯಲಿಲ್ಲ. ಇನ್ನಿತರ ಪ್ರಕಾರಗಳ ಕವಿತೆಯನ್ನೂ ರಚಿಸಿದ. ಆದರೆ ಗಝಲ್ ಪ್ರಕಾರವನ್ನು ಅವನು ನಿರ್ವಹಿಸಿದ ಬಗೆ ಅನನ್ಯ. ಗಝಲ್ ಪ್ರಪಂಚದಲ್ಲಿ ಹೊರಗಿನ ‘ಅವನು’ ನಾಯಕ, ಬದ್ಧತೆಯು ಇಲ್ಲದಿರುವುದು ಒಂದು ಜಾತಿ, ಬಡತನವೆನ್ನುವುದು ಶ್ರೀಮಂತಿಕೆ. ಉರ್ದುಕವಿಗಳಲ್ಲಿ ಮೀರ್ ಅರ್ಥ ಮತ್ತು ಕೈಫಿಯತ್ತುಗಳನ್ನು ಒಳಗೊಂಡ ಗಝಲ್ ಗಳ ರಚನೆಯಲ್ಲಿ ತನ್ನ ಅಸದೃಶ ಪ್ರತಿಭೆಯನ್ನು ತೊಡಗಿಸಿದ್ದಾನೆ. ಭಾರತೀಯ ಉರ್ದು-ಪರ್ಶಿಯನ್ ಕಾವ್ಯದಲ್ಲಿ ಅವನಿಗೆ ಸ್ಥಾನವನ್ನೂ, ಗೌರವವನ್ನೂ ತಂದುಕೊಟ್ಟಿದೆ.
ಮೀರ್ ತನ್ನ ಕವಿತೆಯಲ್ಲಿ ಬೌದ್ಧಿಕತೆಯನ್ನು, ಅಮೂರ್ತತೆಯನ್ನು ಆವಾಹಿಸಲಿಲ್ಲ. ಆದರೂ ಮೀರ್ ಕೆಲವೊಮ್ಮೆ ಗಾಲಿಬನ ಬರವನ್ನು ಊಹಿಸಿದ್ದಂತೆ ತೋರುವ ಕವಿತೆ ಬರೆದಿದ್ದಾನೆ. ಗಾಲಿಬ ನಾವು ಬಲ್ಲಂತೆ ಭಾರತೀಯ ಉರ್ದು-ಪರ್ಶಿಯನ್ ಗಝಲ್ ಪರಂಪರೆಯಲ್ಲಿ ಅತ್ಯಂತ ‘ಬೌದ್ಧಿಕ, ಅಮೂರ್ತ ಕಾವ್ಯ ಪ್ರೇಮ’ಗಳ ಸಂಪ್ರದಾಯಕ್ಕೆ ಸಂದವನು. ಈ ಕವಿತೆಗಳಲ್ಲಿ ‘ನಾನು ನಂಬುವಂತೆ’ ನಿಮಗೆ ತೋರಿಬರುತ್ತದೆ: ಮೀರ್ ತಾನು ಹಾಗೆ ಭಾವಿಸದಿದ್ದರೂ ಶೇಕ್ಸ್ಪೀರಿಯನ್ ಆಗಿದ್ದವನು. ಶೇಕ್ಸ್ಪಿಯರ್ ಗೆ ಎಲ್ಲವೂ ಸ್ವಾಭಾವಿಕವಾಗಿ ಹರಿದು ಬರುತ್ತಿತ್ತು, ಮೀರ್ ನಿಗೂ ಹಾಗೆಯೇ. ಅವನು ನಿಜಕ್ಕು ಎಲ್ಲೆಡೆಯೂ ತಾನಿದ್ದುದಾಗಿ, ಎಲ್ಲವನ್ನೂ ತಾನು ಕಂಡುದಾಗಿ ಹೇಳಬಲ್ಲಂತಹ ಕವಿ ಅವನು. (ಶಂಸುರ್ ರಹಮಾನ್ ಫಾರೂಖಿ)
ಮೂರ್ತಿ ಕ್ಲಾಸಿಕಲ್ ಲೈಬ್ರರಿ ಮೀರ್ ನ ಆಯ್ದ ಗಝಲ್ ಗಳ ಮತ್ತು ಇತರ ಆಯ್ದ ಕವಿತೆಗಳ ಉರ್ದು ಮೂಲ ಮತ್ತು ಇಂಗ್ಲಿಶ್ ಅನುವಾದವನ್ನು ಪ್ರಕಟಿಸಿದೆ. ಅನುವಾದಕರು ಶಂಸುರ್ ರಹಮಾನ್ ಫಾರೂಖಿ. ಅಮೆಜಾನ್ ನಲ್ಲಿ ಅದು ರಿಯಾಯಿತಿ ಬೆಲೆಗೆ ಲಭ್ಯವಿದೆ. ಇಲ್ಲಿ ಒಂದೆರಡು ಗಝಲ್ ಗಳ ಅನುವಾದವಿದೆ. ಆದರೆ ಅದು ಗಝಲ್ ನ ನಿಯಮಗಳಿಗೆ ಅನುಸಾರಿಯಾಗಿಲ್ಲ.
– ಫ್ರಾನ್ಸಿಸ್ W. ಪ್ರಿಟ್ಚೆಟ್ ರ ಲೇಖನದ ಆಯ್ದ ಭಾಗಗಳು
೨
ಸರಿ, ನಾನು ನಿಜಕ್ಕೂ ಈ ನಿರಂಕುಶ, ಕ್ರೂರ, ಹಿಂಸಾತ್ಮಕ, ಅನ್ಯಾಯದ ದಂಡನೆಗೆ ಅರ್ಹ
ಸದಾ ಕಾಲ ನಾನು ಬೇಯುತ್ತಿರುತ್ತೇನೆ, ಆದರೂ ನಿಷ್ಠಾವಂತ, ನಂಬಿಕಸ್ತ.
ಪ್ರವೀಣ ನಾನು ಪ್ರೇಮ ಕಲೆಯ ಎರಡೂ ಆಟಗಳಲ್ಲಿ
ನನ್ನ ಅಳುವಿನಲ್ಲಿ ಬಿರುಗಾಳಿ, ಎದೆಯಲ್ಲೇ ಕುಲುಮಿದಾಗ ಘೋರ ವಿಪತ್ತು
ಈ ಜಗದ ಉದ್ಯಾನದಲ್ಲಿ ಸಂಪೂರ್ಣವಾಗಿ ಅರಳಲಾರೆ ನಾನು
ಮುಂಜಾನೆಯ ಸುಳಿಗಾಳಿ ಬೇಡವೆಂದ ಮೊಗ್ಗು ನಾನು
ನನ್ನ ಕಣ್ಣ ಹನಿಗಳು ನನ್ನ ಪಾದಗಳ ಮೇಲೆದ್ದ ಒಂದೊಂದು ಬೊಬ್ಬೆಗೂ ಸಡ್ಡುಹೊಡೆಯುವವು
ನಿನ್ನ ಹಾದಿಯ ನಾನು ಕ್ರಮಿಸಿದ್ದು ನನ್ನ ಕಣ್ಣುಗಳಲಿ ನಡೆದು ಬಂದು
ತೆರೆದೀತೆ ನನಗೆಲ್ಲಿಯಾದರೂ ಹಾದಿ ಕಾಣಲು ಬಿಡುಗಡೆಗೆಯ, ಪಡೆಯಲೊಂದಿಷ್ಟು ವಿಶ್ರಾಂತಿಯ
ಬದುಕು ಸಾಕೆನಿಸಿದೆ ನನಗೆ, ಸಾವಿನೊಂದಿಗೆ ನನ್ನ ಕೋಪ
ಕ್ರೌರ್ಯವನು ಮಾಡಿಕೋ ನಿನ್ನ ಹವ್ಯಾಸವಾಗಿ, ಪ್ರಿಯಕರನೆ,
ನಿನ್ನ ಅಂಗಿಯ ತುದಿ ಹಿಡಿದ ನನ್ನ ಕೈಯನ್ನೆಂದೂ ಕಿತ್ತು ಬಿಸುಡದಿರು
ಕೇವಲ ರಸ್ತೆಯಂಚಿನ ಧೂಳ ಕಣವಷ್ಟೇ ನಾನು, ಒಂದು ಉಸಿರೂ ಬೇಡ
ನನಗೆ ಗಾಳಿರೆಕ್ಕೆಯ ಮೇಲೆ ಹಾರಿ ಹೋಗಲಿಕ್ಕೆ
ಅಗಲಿದ ಇರುಳು ಎಲ್ಲಿರುವೆ, ಬಾ, ಬಂದೆನ್ನ ಸುಟ್ಟುಬಿಡು ನಿನ್ನಿಚ್ಛೆಯಂತೆ
ನನ್ನ ಮೈಮನಗಳೆರಡೂ ಬೆಂದುಹೋಗಿವೆ, ಕಾಯುತ್ತಿವೆ ಪ್ರತೀಕಾರದ ದಿವಸಕಾಗಿ
ನಿಜಕೂ ನನ್ನದೆಲ್ಲವೂ ಹೋಗಿಬಿಟ್ಟಿವೆ – ಆರಾಮ,ಬಲ, ಆಹಾರ, ನಿದ್ರೆ
ಇವೆಲ್ಲದರ ನಡುವೆ ನಾ ಬದುಕಿರುವುದು ಸುಮ್ಮನೆಯ ಮಾತಲ್ಲವೇನು?
ನಾನು ಅದು ಹೇಗೋ ಏನೋ ಒಂದು, ಗೊತ್ತಿರುವುದಿಷ್ಟೆ ನನಗೆ
ನಾನೇ ಅರಿಯೆ ಅದೆಂತು ನಾನೆಂದು, ನಿಜಕೂ ನಾನು ಏನೆಂದು ಗೊತ್ತಿಲ್ಲ ನನಗೆ
ಒಂದು ಮಾತೂ ಆಡದೆ ಇರುವುದೊಳಿತು, ಮೌನ ಮಾತಿಗಿಂತಲೂ ಮಿಗಿಲು
ಏನಾಯಿತೆಂದು ಕೇಳೆನು ನಾನು, ಅನುಭವಿಸಿದ್ದು ಒಂದು ಕಾರ್ಪಣ್ಯದ ಬದುಕು, ಅಸಂಖ್ಯ ಸಾವು
ಈಗಷ್ಟೆ ಸಾಧ್ಯವಾಗಿದೆ ನನಗೆ ನನ್ನ ನುಡಿಗಳನ್ನು ಕಿಚ್ಚು-ಚೈತನ್ಯದೊಡನೆ ಅಕ್ಷರದಿ ಮೂಡಿಸುವುದಕ್ಕೆ
ಮೊಂಬತ್ತಿಯಂದದಲಿ ಸಂಜೆಯಿಂದ ಮುಂಜಾವದವರೆಗೆ ನಾನು ಉರಿದುಹೋಗಿದ್ದಕ್ಕೆ
ಆ ದೇವನ ದಯೆಯಿಂದ ನಾನು ನನ್ನೆದೆಯ ಮೂಳೆಗಳವರೆಗೆ ಕತ್ತರಿಸಿಕೊಂಡೆ
ಇದು ಪ್ರಾರ್ಥನೆಯ ಸಮಯ, ಮೀರ್, ನಾನು ಹೃದಯವನ್ನರಿಯಲು ಶ್ರಮಿಸುತ್ತಲಿರುವೆ
***
ಇದು ಪ್ರೀತಿಯ ಪ್ರಾರಂಭ, ನೀವೇಕೆ ಸಂಕಟಪಡುವಿರಿ?
ಸ್ವಲ್ಪ ಕಾಯಬೇಕು, ವಿಷಯಗಳು ತಾವಾಗಿಯೇ ಅನಾವರಣಗೊಳ್ಳುವುವು, ಕಾಣಿರಿ
ಒಂದೊಂದು ಎಲೆ ಮೊಗ್ಗು ನನ್ನ ಸ್ಥಿತಿಯ ತಿಳಿದಿವೆ,
ಹೂವು ಅರಿತಿಲ್ಲವದನು, ಇಡೀ ತೋಟವೇ ತಿಳಿದಿದೆ
ಓ ಮಿರ್, ಬಂದನವ ನನ್ನ ಸಮಾಧಿಗೆ ನಾನು ಹೋದ ಬಳಿಕ
ನೆನಪಾಯಿತವನಿಗೆ ನನ್ನ ಮದ್ದನು ತರಲು ನಾನು ಹೋದ ಬಳಿಕ
ಬೆಳಗಾಗುವುದು, ಸಂಜೆಯೂ ಹಾಗೇ
ಧನಿಕನ ಹುಚ್ಚಾಟಿಕೆ ನಡೆಯುವುದೂ ಹಾಗೆ
ನಿಸ್ವಾರ್ಥತೆ ನನ್ನನ್ನು ಎಲ್ಲಿಗೆ ಕೊಂಡೊಯ್ದಿದೆ
ಬಹುಕಾಲ ನಾನು ನನಗಾಗಿ ಕಾಯುತ್ತಿದ್ದೇನೆ.
***
ಗೆಳೆಯರೆ ಕ್ಷಮಿಸಿರಿ ನನ್ನ
ನಾನು ನಶೆಯಲ್ಲಿರುವೆ
ಖಾಲಿಯಾದರೂ ಕೊಡಿರಿ ಮಧುಪಾತ್ರೆಯನ್ನು
ನಾನು ನಶೆಯಲ್ಲಿರುವೆ -ಗೆಳೆಯರೆ ಕ್ಷಮಿಸಿರಿ ನನ್ನ ಎಂಬ ಅರ್ಥದ ಮುಝಕೊ ಯಾರೋ ಮಾಫ್ ಕರನಾ, ಮೈ ನಶೇಮೇ ಹೂಂ ಈ ಹಾಡು ಯಾರನ್ನು ಕದಡಿಲ್ಲ?
ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು.