ಡಬ್ಬಿಯಲ್ಲಿದ್ದ ತಿಂಡಿ ಕಳವಾಗುತ್ತಿರುವುದನ್ನು ನೋಡಿದ ‘ಹಾರ್ಟ್ ವೀಕ್’ ಮಾರನೆ ಬೆಳಗ್ಗೆ ಊಟವಾದ ಮೇಲೆ ಒಂದು ಉಪಾಯ ಮಾಡಿದ, ತನ್ನ ಟ್ರಂಕಿನ ಮುಂದೆ ನಿಂತುಕೊಂಡು ಎಲ್ಲ ವಿದ್ಯಾರ್ಥಿಗಳನ್ನುದ್ದೇಶಿಸಿ ತನ್ನ ತಿಂಡಿಬಾಕ್ಸ್ ಮುಚ್ಚಳವನ್ನು ತೆಗೆದು ಎಲ್ಲರಿಗೂ ಕಾಣುವಂತೆ ‘ನೋಡ್ರಪ್ಪ ನಾನು ನನ್ನ ತಿಂಡಿಗೆ ಬಾಯಿ ತುಂಬ ಉಗಿತಾ ಇದಿನಿ, ಯಾರಾದರೂ ತಿಂದರೆ ನನ್ನ ಎಂಜಲು ತಿಂದಂತೆ’ ಎಂದು ಕ್ಯಾಕರಿಸಿ ಕ್ಯಾಕರಿಸಿ ಚೆನ್ನಾಗಿ ಉಗಿದು, ನಂತರ ಬಾಯಿ ಮುಚ್ಚಿ ಟ್ರಂಕಿಗಿಟ್ಟು ಸ್ಕೂಲಿಗೆ ಹೋದ. ಮಧ್ಯಾಹ್ನ ಬಂದು ನೋಡಿದಾಗ ಆತನ ತಿಂಡಿ ಹೇಗಿತ್ತೋ ಹಾಗೆಯೇ ಇತ್ತು.
ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು-ತಟ್ಟೆ’ ಸರಣಿಯ ಮೂರನೆಯ ಕಂತು

ಮುದ್ದೆ ಕಟ್ಟುತ್ತಿದ್ದ ಗುಲ್ಜಾರ್ ಖಾನ್

ಗುಲ್ಜಾರ್‌ಖಾನ್ ಎಂಬ ಕಪ್ಪಗೆ ದುಂಡು ದುಂಡಾಗಿದ್ದ ಹುಡುಗನಿದ್ದ. ಅದು ಅವನ ಅಡ್ಡ ಹೆಸರಾಗಿತ್ತು. ಅವನನ್ನು ಎಲ್ಲಾ ಹುಡುಗರು ವಿಚಿತ್ರವಾಗಿ ನೋಡುತ್ತಿದ್ದರು. ಅವನ ರಗ್ಗು ಕಾರ್ಪೆಟ್ಗಳು ಸುಮಾರು ವರ್ಷದಿಂದ ನೀರು ಕಾಣದೆ ಕಪ್ಪು ಬಣ್ಣಕ್ಕೆ ತಿರುಗಿದ್ದವು. ಯೂನಿಫಾರ್ಮ್ ಬಟ್ಟೆಗಳು ಕೂಡ ತಿಂಗಳಾನುಗಟ್ಟಲೆ ನೀರು ಕಾಣುತ್ತಿರಲಿಲ್ಲ. ಬಟ್ಟೆಯಲ್ಲಿ ಕೂರೆಗಳು, ತಲೆಯಲ್ಲಿ ಹೇನುಗಳು ಪಿತಗುಟ್ಟುತ್ತಿದ್ದವು. ಸದಾ ಮೈಯನ್ನು ಪರಪರನೆ ಕೆರೆದುಕೊಳ್ಳುತ್ತಿದ್ದ. ಆತನ ಕಾಲಿನ ತುಂಬ ಗಾಯಗಳಾಗಿ ರಕ್ತ ಸೋರುತ್ತಿರುತ್ತಿತ್ತು. ಅವನು ಕಜ್ಜಿ ಎಂದೇ ಫೇಮಸ್ ಆಗಿದ್ದುದರಿಂದ ಆತನನ್ನು ಮುಟ್ಟಿಸಿಕೊಳ್ಳಲು ಹುಡುಗರು ಹೆದರಿ ಓಡುತ್ತಿದ್ದರು. ಆತನೆ ಮೇಲ್ಬಿದ್ದು ಮುಟ್ಟಲು ಅಟ್ಟಿಸಿಕೊಂಡು ಬರುತ್ತಿದ್ದ. ಅವನು ಯಾರಿಗೂ ಕೇರ್ ಮಾಡುತ್ತಿರಲಿಲ್ಲ. ಓಡಿ ಬಂದು ‘ಡಾರ್ಲಿಂಗ್’ ಎಂದು ಎಲ್ಲರನ್ನೂ ಅವಚಿಕೊಳ್ಳಲು ಪ್ರಯತ್ನಿಸುತ್ತಿದ್ದ. ಬಹುಶಃ ಎಲ್ಲರೂ ಅವನನ್ನು ದೂರವಿರಿಸುತ್ತಿದ್ದುದೇ ಅವನ ಈ ಮನಸ್ಥಿತಿಗೆ ಕಾರಣವಿರಬಹುದು. ನನ್ನನ್ನು ಎಷ್ಟೋ ಸರ್ತಿ ಯಾಮಾರಿಸಿ ಅವಚಿಕೊಂಡುಬಿಡುತ್ತಿದ್ದ. ಅವನ ಅಪ್ಪುಗೆಗೆ ಸಿಕ್ಕಿರುವುದು ಗೊತ್ತಾದರೆ ಇತರರು ನಮ್ಮನ್ನು ಹೀಯಾಳಿಸುತ್ತಿದ್ದರು. ಮುಟ್ಟಿಸಿಕೊಳ್ಳುತ್ತಿರಲಿಲ್ಲ.

ಅಡುಗೆ ಭಟ್ಟರು ಕೆಲ ಹುಡುಗರನ್ನು ಮುದ್ದೆ ಕಟ್ಟಲು ಬಳಸಿಕೊಳ್ಳುತ್ತಿದ್ದರು. ಮುದ್ದೆ ಕಟ್ಟುವ ಹುಡುಗರಿಗೆ ಭಟ್ಟರು ಕದ್ದು ಮುಚ್ಚಿ ಜಾಸ್ತಿ ಊಟ ಕೊಡುತ್ತಿದ್ದರು. ಆದ್ದರಿಂದ ಕೆಲ ಹುಡುಗರು ಸ್ವಯಂ ಪ್ರೇರಣೆಯಿಂದ ಮುದ್ದೆ ಕಟ್ಟಲು ಮುಂದಾಗುತ್ತಿದ್ದರು. ಇದನ್ನು ಕಂಡ ಕೆಲ ದೊಡ್ಡ ಹುಡುಗರು ಮುದ್ದೆ ಕಟ್ಟಲು ವಿದ್ಯಾರ್ಥಿಗಳನ್ನ ಬಳಸಿಕೊಳ್ಳಬಾರದೆಂದು ವಾರ್ಡನ್‌ಗೆ ದೂರು ಕೊಟ್ಟಿದ್ದರು. ಈ ಸಂಬಂಧ ವಾರ್ಡನ್ ಗಲಾಟೆ ಮಾಡಿದ್ದರಿಂದಾಗಿ ಎಲ್ಲಾ ಹುಡುಗರು ಕೆಲ ದಿನಗಳವರೆಗೆ ಅಡುಗೆ ಕಾರ್ಯದಲ್ಲಿ ಪಾಲ್ಗೊಳ್ಳುವುದನ್ನ ನಿಲ್ಲಿಸಿಬಿಟ್ಟಿದ್ದರು. ಆದರೆ ಗುಲ್ಜಾರ್ ಖಾನ್ ಮಾತ್ರ ಯಾರ ಮಾತನ್ನೂ ಕೇಳದೆ ಮುದ್ದೆ ಕಟ್ಟಲು ಹೋಗುತ್ತಿದ್ದನು. ಆತ ಮುದ್ದೆ ಕಟ್ಟಿದ್ದಾನೆಂದು ತಿಳಿದರೆ, ಆ ದಿನ ನಾವು ಉಣ್ಣಲು ಅಸಹ್ಯಪಟ್ಟುಕೊಳ್ಳುತ್ತಿದ್ದೆವು. ಆತ ಅದ್ಯಾವುದಕ್ಕೂ ಕೇರ್ ಮಾಡುತ್ತಿರಲಿಲ್ಲ.

ನಮ್ಮ ಹಾಸ್ಟೆಲ್ನ ಗೋಡೆಯ ಮೇಲೆ ಪ್ರತಿದಿನದ ತಿಂಡಿಗಳಾದ ಉಪ್ಪಿಟ್ಟು, ಚಿತ್ರಾನ್ನ, ಅವಲಕ್ಕಿ, ಇಡ್ಲಿ ಮುಂತಾದ ರುಚಿಯಾದ ಹೆಸರುಗಳನ್ನ ಬರೆಯಲಾಗಿತ್ತು. ಊರಲ್ಲಿ ತಂಗಳು ಅನ್ನವನ್ನೊ, ಮುದ್ದೆಯನ್ನೊ, ರೊಟ್ಟಿಯನ್ನೊ ತಿಂದುಕೊಂಡಿದ್ದ ನಮಗೆ ಅದನ್ನು ಕಂಡು ಬಾಯಿ ನೀರು ಬರುತ್ತಿತ್ತು. ಪ್ರತಿನಿತ್ಯ ಬೆಳಗ್ಗೆ ಒಂಭತ್ತು ಮೂವತ್ತಕ್ಕೆ ಊಟ ಕೊಡುತ್ತಿದ್ದರು. ನಾವು ಉಣ್ಣುವಾಗ ತಟ್ಟೆಯ ಪಕ್ಕದಲ್ಲಿ ಒಂದೊಂದು ಬಾಕ್ಸ್ ಇಟ್ಟುಕೊಳ್ಳಬೇಕಾಗಿತ್ತು. ಬೆಳಗ್ಗೆ ಗಡತ್ತಾಗಿ ಮುದ್ದೆ ಅನ್ನ ಉಂಡಾದ ನಂತರ, ಭಟ್ಟರು ಬಾಕ್ಸ್‌ಗೆ ಚಿತ್ರಾನ್ನವನ್ನೊ ಉಪ್ಪಿಟ್ಟನ್ನೊ ಹಾಕಿಕೊಂಡು ಬರುತ್ತಿದ್ದರು. ನಾವು ಅದನ್ನ ಸ್ಕೂಲಿಗೆ ತೆಗೆದುಕೊಂಡು ಹೋಗಿ ಮಧ್ಯಾಹ್ನ ತಿನ್ನಬೇಕಾಗಿತ್ತು. ಸ್ಕೂಲ್ ಹತ್ತಿರವೇ ಇದ್ದ ನಮ್ಮಂಥ ಹುಡುಗರು ಟ್ರಂಕಿನಲ್ಲಿ ಇಟ್ಟು ಹೋಗಿ ಮಧ್ಯಾಹ್ನದ ವಿರಾಮದ ವೇಳೆಯಲ್ಲಿ ಹಾಸ್ಟೆಲ್‌ಗೆ ಬಂದು ತಿಂದು ಹೋಗುತ್ತಿದ್ದೆವು. ಕೆಲ ಹೊಟ್ಟೆ ಬಾಕ ಹುಡುಗರು ಮಧ್ಯಾಹ್ನದ ತಿಂಡಿಯನ್ನು ಬೆಳಗಿನ ಊಟದೊಂದಿಗೆ ತಿಂದುಬಿಡುತ್ತಿದ್ದರು. ಈ ವಿಷಯ ವಾರ್ಡನ್‌ಗೇನಾದರೂ ಗೊತ್ತಾದರೆ ತಿಂದವರನ್ನ ಟ್ರಂಕಿನ ಸಂದಿಗೆ ಹಾಕಿಕೊಂಡು ದಡಿ ದಡಿನೆ ಗುದ್ದಿ ಬಿಡುತ್ತಿದ್ದರು.

ತಿಂಡಿ ಇದ್ದ ಬಾಕ್ಸ್ನಲ್ಲಿ ಕಲ್ಲು

ಬಹುತೇಕ ಶಾಲೆಗಳು ಮಧ್ಯಾಹ್ನ ಒಂದು ಗಂಟೆಗೆ ತಿಂಡಿಗೆ ಬಿಡುತ್ತಿದ್ದವು. ಆಗ ಹಾಸ್ಟೆಲ್‌ಗೆ ಬಂದ ಹುಡುಗರು ಟ್ರಂಕ್ ತೆಗೆದು ಬೆಳಗ್ಗೆ ಇಟ್ಟು ಹೋಗಿದ್ದ ತಿಂಡಿ ತಿನ್ನಲು ಬಾಕ್ಸ್ ಓಪನ್ ಮಾಡಿ ನೋಡಿದರೆ, ಕೆಲವರ ಬಾಕ್ಸ್ನಲ್ಲಿ ತಿಂಡಿ ಇದ್ದರೆ ಇನ್ನ ಕೆಲವರ ಬಾಕ್ಸ್ನಲ್ಲಿ ತಿಂಡಿ ಖಾಲಿಯಾಗಿರುತ್ತಿತ್ತು. ತಿಂಡಿಯ ಬದಲಿಗೆ ಒಂದೊಂದು ಕಲ್ಲುಗಳಿರುತ್ತಿದ್ದವು. ವಿಚಿತ್ರವೆಂದರೆ ಟ್ರಂಕಿನ ಬೀಗ ಹಾಕಿಯೇ ಇರುತ್ತಿತ್ತು. ಹಸಿದು ಬಂದ ವಿದ್ಯಾರ್ಥಿಗಳಿಗೆ ಬಾಕ್ಸ್ನಲ್ಲಿದ್ದ ಕಲ್ಲು ಕಂಡು ಆಶ್ಚರ್ಯ ದುಃಖ ಎಲ್ಲವೂ ಆಗುತ್ತಿತ್ತು. ಬೆಳಗ್ಗೆ ಏನಾದರೂ ಮರೆತು ನಾನೇ ತಿಂದು ಹೋದೆನೆ ಎಂಬ ಅನುಮಾನವೂ ಬರುತ್ತಿತ್ತು. ಈ ವಿಚಿತ್ರದ ಗುಟ್ಟು ತಿಳಿಯದೆ ಹಸಿದ ಹೊಟ್ಟೆಯಲ್ಲೇ ಸ್ಕೂಲು ದಾರಿ ಹಿಡಿಯುತ್ತಿದ್ದೆವು. ಇದೇ ರೀತಿ ನಾಳೆಯೂ ಮರುಕಳಿಸಿದಾಗ, ಅನುಮಾನ ಬಾರದೆ ಇರುತ್ತಿರಲಿಲ್ಲ.

ಹಾರ್ಟ್‌ವೀಕ್ ಎಂಬ ಹುಡುಗನಿದ್ದ. ಅದು ಅವನ ಅಡ್ಡ ಹೆಸರಾಗಿತ್ತು. ಲೆಕ್ಕ ಮಾಡಲು ಬಾರದೆ ಇದ್ದಾಗ ಮೇಷ್ಟ್ರ ಹೊಡೆತದಿಂದ ತಪ್ಪಿಸಿಕೊಳ್ಳಲು ‘ಸಾ ನಾನು ಹಾರ್ಟ್‌ ಪೇಷಂಟು’ ಅಂತ ಸುಳ್ಳು ಹೇಳಿದ್ದನಂತೆ. ಅಂದಿನಿಂದ ಹಾಸ್ಟೆಲ್ನ ಎಲ್ಲಾ ಹುಡುಗರು ಅವನನ್ನು ಹಾಗಂತಲೇ ಕರೆಯುತ್ತಿದ್ದರು. ಒಂದು ದಿನ ಅವನು ಹಸಿದು ಬಂದು ಬಾಕ್ಸ್ ತೆಗೆದು ನೋಡಿದರೆ, ಅದರಲ್ಲಿ ತಿಂಡಿ ಬದಲಾಗಿ ಕಲ್ಲು ಇತ್ತು. ಕುಪಿತನಾದ ಹಾರ್ಟ್‌ವೀಕು ಬಾಯಿಗೆ ಬಂದಂತೆ ತಿಂಡಿ ತಿಂದವರನ್ನ ಎಂದೂ ಕೇಳಿರದ ಹೊಲಸು ಮಾತುಗಳಿಂದ ಬೈಯ್ಯತೊಡಗಿದ. ಬೈದೂ ಬೈದೂ ಸಾಕಾಗಿ ಮಧ್ಯಾಹ್ನ ಸ್ಕೂಲಿಗೆ ಹೋಗುವುದನ್ನ ತ್ಯಜಿಸಿ ಟ್ರಂಕ್ ಸಂದಿಯಲ್ಲಿ ಮುದುಡಿಕೊಂಡು ಮಲಗಿದ. ಹಾರ್ಟ್‌ವೀಕ್ನ ದಾರುಣ ಸ್ಥಿತಿ ಕಂಡು ಸಮಾನ ದುಃಖಿಗಳೆಲ್ಲ ಅವನಿಗೆ ಬೇಷರತ್ ಬೆಂಬಲ ಸೂಚಿಸಿ ಅವರೂ ತಿಂಡಿ ಕದ್ದವರನ್ನು ಬೈದುಕೊಂಡರು.

ಸ್ಕೂಲ್ ಹತ್ತಿರವೇ ಇದ್ದ ನಮ್ಮಂಥ ಹುಡುಗರು ಟ್ರಂಕಿನಲ್ಲಿ ಇಟ್ಟು ಹೋಗಿ ಮಧ್ಯಾಹ್ನದ ವಿರಾಮದ ವೇಳೆಯಲ್ಲಿ ಹಾಸ್ಟೆಲ್‌ಗೆ ಬಂದು ತಿಂದು ಹೋಗುತ್ತಿದ್ದೆವು. ಕೆಲ ಹೊಟ್ಟೆ ಬಾಕ ಹುಡುಗರು ಮಧ್ಯಾಹ್ನದ ತಿಂಡಿಯನ್ನು ಬೆಳಗಿನ ಊಟದೊಂದಿಗೆ ತಿಂದುಬಿಡುತ್ತಿದ್ದರು. ಈ ವಿಷಯ ವಾರ್ಡನ್‌ಗೇನಾದರೂ ಗೊತ್ತಾದರೆ ತಿಂದವರನ್ನ ಟ್ರಂಕಿನ ಸಂದಿಗೆ ಹಾಕಿಕೊಂಡು ದಡಿ ದಡಿನೆ ಗುದ್ದಿ ಬಿಡುತ್ತಿದ್ದರು.

ರಾತ್ರಿಯ ಊಟದೊಂದಿಗೆ ಅವನ ಹಸಿವೂ ಕಳೆದು ಹೋಯಿತು. ಮರುದಿನ ಯಥಾ ಪ್ರಕಾರ ತಿಂಡಿ ಬಾಕ್ಸ್‌ಅನ್ನು ಟ್ರಂಕಿನಲ್ಲಿಟ್ಟು ಬೀಗ ಹಾಕಿ ಶಾಲೆಗೆ ಹೋದೆವು. ಮಧ್ಯಾಹ್ನ ಬಂದು ನೋಡಿದಾಗ ಹಾರ್ಟ್‌ವೀಕ್ನ ಬಾಕ್ಸ್ನಲ್ಲಿ ತಿಂಡಿಯ ಬದಲಿಗೆ ಮತ್ತೆ ಕಲ್ಲು! ವಿಶೇಷವೆಂದರೆ ಈಗ ಆ ಕಲ್ಲಿಗೆ ಒಂದು ಬಿಳಿ ಹಾಳೆ ಸುತ್ತಿಕೊಂಡಿತ್ತು. ಅದರಲ್ಲಿ ತಿಂಡಿ ತಿಂದವರನ್ನು ನಿನ್ನ ಅಣ್ಣತಮ್ಮಂದಿರೆಂದು ತಿಳಿದುಕೋ, ಬೈಯ್ಯಬೇಡ ಎಂದು ಬರೆದಿತ್ತು. ಈಗ ಹಾರ್ಟ್‌ವೀಕ್ನ ಸ್ಥಿತಿ ಹೇಳ ತೀರದು. ಮಾರನೆ ಬೆಳಗ್ಗೆ ಊಟವಾದ ಮೇಲೆ ಹಾರ್ಟ್ವೀಕ್ ಒಂದು ಉಪಾಯ ಮಾಡಿದ, ತನ್ನ ಟ್ರಂಕಿನ ಮುಂದೆ ನಿಂತುಕೊಂಡು ಎಲ್ಲ ವಿದ್ಯಾರ್ಥಿಗಳನ್ನುದ್ದೇಶಿಸಿ ತನ್ನ ತಿಂಡಿಬಾಕ್ಸ್ ಮುಚ್ಚಳವನ್ನು ತೆಗೆದು ಎಲ್ಲರಿಗೂ ಕಾಣುವಂತೆ ‘ನೋಡ್ರಪ್ಪ ನಾನು ನನ್ನ ತಿಂಡಿಗೆ ಬಾಯಿ ತುಂಬ ಉಗಿತಾ ಇದಿನಿ, ಯಾರಾದರೂ ತಿಂದರೆ ನನ್ನ ಎಂಜಲು ತಿಂದಂತೆ’ ಎಂದು ಕ್ಯಾಕರಿಸಿ ಕ್ಯಾಕರಿಸಿ ಚೆನ್ನಾಗಿ ಉಗಿದು, ನಂತರ ಬಾಯಿ ಮುಚ್ಚಿ ಟ್ರಂಕಿಗಿಟ್ಟು ಸ್ಕೂಲಿಗೆ ಹೋದ. ಮಧ್ಯಾಹ್ನ ಬಂದು ನೋಡಿದಾಗ ಆತನ ತಿಂಡಿ ಹೇಗಿತ್ತೋ ಹಾಗೆಯೇ ಇತ್ತು. ಬೆಳಗಿನ ಉಗುಳು ಸಮೇತ ತಿಂದ. ಮುಂದೆ ಆತ ತಿಂಡಿಗೆ ಉಗಿದು ಹೋಗುವುದನ್ನ ಖಾಯಂ ಆಗಿಸಿಕೊಂಡಿದ್ದ. ಹಾರ್ಟ್‌ವೀಕ್ನ ಯಶಸ್ವಿ ಕಾರ್ಯಾಚರಣೆಯಿಂದ ಆಕರ್ಷಿತರಾದ ಅನೇಕ ಹುಡುಗರು ಅದನ್ನೆ ಅನುಸರಿಸಿ ಯಶ ಕಂಡರು.

ಹಾಸ್ಟೆಲ್ನಲ್ಲಿ ವಾರಕ್ಕೆರಡು ದಿನ ಇಡ್ಲಿ ಮಾಡುತ್ತಿದ್ದರು. ಮಧ್ಯಾಹ್ನದ ತಿಂಡಿಗೆ ಕೇವಲ ನಾಲ್ಕೇ ನಾಲ್ಕು ಗುಂಡಿಡ್ಲಿ ಹಾಕುತ್ತಿದ್ದರು. ಅದು ಯಾರಿಗೂ ಸಾಕಾಗುತ್ತಿರಲಿಲ್ಲ. ಇಡ್ಲಿ ಮಾಡಿದ ದಿನವಂತೂ ತಿಂಡಿ ಕದಿಯುವವರ ಸಂಖ್ಯೆ ಹೆಚ್ಚಾಗುತ್ತಿತ್ತು. ಅದ ಕಂಡು ಇಡ್ಲಿಯ ದಿನ ಬೆಳಗಿನ ಊಟದೊಂದಿಗೆ ಅದನ್ನೂ ತಿಂದು ಹೋಗಿ ಮಧ್ಯಾಹ್ನ ಉಪವಾಸವಿರುತ್ತಿದ್ದೆವು.

ಹುಡುಗಾಟಿಕೆಗಳು

ಹಾಸ್ಟೆಲ್ ಹುಡುಗರ ಹುಡುಗಾಟಿಕೆಗಳು ಮಿತಿ ಮೀರಿರುತ್ತಿದ್ದವು. ಒಮ್ಮೆ ನಾನು ಬೆಳಗಿನ ಪ್ರೇಯರ್ ಎಲ್ಲಾ ಮುಗಿದ ನಂತರ ಇತರರಂತೆ ಟ್ರಂಕಿನ ಹಿಂದಿನ ನನ್ನ ಜಾಗದಲ್ಲಿ ಕೂತು ಓದುವವನಂತೆ ನಟಿಸುತ್ತ, ಊಟದ ಕರೆಯ ನಿರೀಕ್ಷೆಯಲ್ಲಿದ್ದೆ. ಅಂದು ವಾರ್ಡನ್ ಪ್ರೇಯರ್‌ಗೆ ಬಂದಿರಲಿಲ್ಲ. ನಮ್ಮ ಚಿಕ್ಕಪ್ಪನ ಮಗ ಕಿರಣ್‌ದು ಒಂದು ಈಚಲು ಚಾಪೆ ಇತ್ತು. ರಾತ್ರಿ ಹೊತ್ತು ಹಾಸಿಕೊಳ್ಳುತ್ತಿದ್ದ ಅದು ಬೆಳಗಾದರೆ ಸುತ್ತಿಕೊಂಡು ನಮ್ಮ ಹಿಂದೆ ಬಿದ್ದಿರುತ್ತಿತ್ತು. ಸುಮ್ಮನಿರಲಾರದೆ ನಾನು ಅದಕ್ಕೆ ರಗ್ಗನು ಹೊದಿಸಿ ಯಾರೋ ಮಲಗಿರುವಂತೆ ಮಾಡಿ ಆಟ ಆಡುತ್ತಿದ್ದೆ. ಎಂಟು ಗಂಟೆ ಸುಮಾರಿಗೆ ವಾರ್ಡನ್ ನಾಗರಾಜಪ್ಪನವರು ಠೀವಿಯಿಂದ ಆ ಕಡೆ ಈ ಕಡೆ ಕೂತಿದ್ದ ಹುಡುಗರನ್ನು ಗಮನಿಸುತ್ತ ನಡೆದು ಬಂದರು. ನನ್ನ ಮುಂದೆ ಹಾದು ಹೋಗುವಾಗ ಪಕ್ಕದಲ್ಲಿದ್ದ ಆಕೃತಿಯನ್ನು ಕಂಡು ಯಾರೋ ಮಲಗಿದ್ದಾರೆಂದು ಭ್ರಮಿಸಿ, ಕೋಪಗೊಂಡು ತಮ್ಮ ಎಂದಿನ ಶೈಲಿಯಲ್ಲಿ ‘ಗೂಬ್‌ದುಲ್ ಮುಂಡೆ ಮಗ ಇನ್ನೂ ಯಾರೋ ನಿಗರಿಸಿಕೆಂಡು ಮಲಗೆವ್ನೆ’ ಎಂದು ಹತ್ತಿರ ಬಂದು ಬೆಡ್‌ಶೀಟ್ ಎಳೆದು ನೋಡಿದರು. ಅಲ್ಲಿದ್ದ ಸುರಳಿ ಚಾಪೆಯನ್ನು ಕಂಡು ಅವರ ಸಿಟ್ಟು ನೆತ್ತಿಗೇರಿಬಿಟ್ಟಿತು. ಯಾರು ಹಿಂಗೆ ಮಾಡಿದವರೆಂದು ಕೇಳಿದುದೂ, ಪಕ್ಕದಲ್ಲಿದ್ದವರು ನನ್ನ ಕಡೆ ಬೊಟ್ಟು ಮಾಡಿ ತೋರಿದುದೂ ಒಂದೇ ಆಗಿ, ಇನ್ನಿಲ್ಲದಂತೆ ನನ್ನನ್ನು ಚಚ್ಚಿಬಿಟ್ಟರು. ಒದೆ ತಿಂದ ನಾನು ಬೆಪ್ಪಾಗಿ ವಾರಕಳೆದರೂ ಆ ಶಾಕ್‌ನಿಂದ ಹೊರಬರಲು ಸಾಧ್ಯವಾಗಿರಲಿಲ್ಲ.

ಆ ದಿನಗಳಲ್ಲಿ ರಾತ್ರಿಹೊತ್ತು ಕರೆಂಟ್ ತುಂಬಾ ಹೋಗುತ್ತಿತ್ತು. ಹೋದ ಕರೆಂಟ್ ಬಹಳ ಹೊತ್ತಾದರೂ ಬರುತ್ತಿರಲಿಲ್ಲ. ಕರೆಂಟ್ ಹೋಯಿತೆಂದರೆ ನಮಗೆಲ್ಲ ಕಪ್ಪೆಗಳಿಗೆ ಮಳೆ ಬಂದಂತಾಗುತ್ತಿತ್ತು. ಕಿವಿಗಡಚಿಕ್ಕುವಷ್ಟು ಶಬ್ದಮಾಡುತ್ತಿದ್ದೆವು. ಕೆಲವರು ಸಿಕ್ಕಿದ್ದೇ ಚಾನ್ಸ್ ಎಂದು ಮುದುಡಿಕೊಂಡು ಮಲಗಿದರೆ, ಬಹುತೇಕರು ಟ್ರಂಕು ತಟ್ಟೆ ಬಡಿದುಕೊಂಡು ಹಾಡು ಹೇಳುತ್ತಿದ್ದರು. ಒಮ್ಮೊಮ್ಮೆ ಇದ್ದಕ್ಕಿದಂತೆ ಕತ್ತಲೆಯಲ್ಲಿ ತಲೆ ದಿಂಬುಗಳು ಬಂದು ಮೈಮೇಲೆ ಬೀಳುತ್ತಿದ್ದವು. ಹಗಲಿನಲ್ಲಿ ಕಿತ್ತಾಡಿಕೊಂಡಿದ್ದ ಹುಡುಗರು ಕತ್ತಲೆಯಲ್ಲಿ ತಮಗೆ ಆಗದವರ ಮೇಲೆ ಸೇಡು ತೀರಿಸಿಕೊಳ್ಳಲು ತಲೆ ದಿಂಬುಗಳಿಂದ ದಾಳಿಗಿಳಿಯುತ್ತಿದ್ದರು. ಏಟು ಬಿದ್ದವರು ಉಸಿರುಕಟ್ಟಿ ಕಿರಾಡುತ್ತಿದ್ದರು. ಇಡೀ ಹಾಸ್ಟೆಲ್ ರಣರಂಗವಾಗಿ ಬದಲಾಗುತ್ತಿತ್ತು. ಕರೆಂಟ್ ಬರುವಷ್ಟರಲ್ಲಿ ಅನೇಕ ಹುಡುಗರು ಗಾಯಾಳುಗಳಾಗಿರುತ್ತಿದ್ದರು. ತಲೆದಿಂಬಿನೊಳಗಿದ್ದ ತುಪುಟ ಹಾಸ್ಟೆಲ್ ತುಂಬಾ ಚಲ್ಲಾಪಿಲ್ಲಿಯಾಗಿರುತ್ತಿತ್ತು. ಹೀಗೆ ನಾವು ಬೆಳಕಿಗಿಂತಲೂ ಕತ್ತಲಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತಿದ್ದೆವು.

ಸೆಕೆಂಡ್ ಶೋ ಸಿನಿಮಾ

ಹತ್ತನೆ ತರಗತಿ ಓದುತ್ತಿದ್ದ ಹಿರಿಯ ವಿದ್ಯಾರ್ಥಿಗಳನ್ನು ವಾರ್ಡನ್ ವಾರಕ್ಕೊಬ್ಬನಂತೆ ಮಾನಿಟರನ್ನಾಗಿ ನೇಮಿಸುತ್ತಿದ್ದರು. ಅವನ ಬಹುಮುಖ್ಯ ಕೆಲಸವೆಂದರೆ, ಹತ್ತು ಗಂಟೆಗೂ ಮುಂಚಿತವಾಗಿ ಮಲಗಿದವರ ಹೆಸರು ಬರೆದುಕೊಂಡು ಏಟು ಕೊಡಿಸುವುದು ಮತ್ತು ಸೆಕೆಂಡ್ ಶೊ ಪಿಚ್ಚರ್ ನೋಡಲು ಹೋಗುವವರನ್ನ ವಾರ್ಡನ್‌ಗೆ ಹಿಡಿದುಕೊಡುವುದಾಗಿತ್ತು. ಸಮಯ ಆಗುವುದನ್ನೇ ಕಾಯುತ್ತಿದ್ದ ಹುಡುಗರು ಗೋಡೆಯಲ್ಲಿದ್ದ ದೊಡ್ಡ ಗಡಿಯಾರದ ಮುಳ್ಳು ಹತ್ತು ಗಂಟೆ ತೋರಿಸಿದ್ದೇ ತಡ ಒಮ್ಮೆಲೆ ಟ್ರಂಕ್ಗಳನ್ನು ಜರ್ ಎಂದು ಜಾರಿಸಿ ಕಾರ್ಪೆಟ್ ಹಾಸಿಕೊಂಡು ಮಲಗಿಬಿಡುತ್ತಿದ್ದರು. ಕೆಲ ಹುಡುಗರು ಮಾನಿಟರ್ ಕಣ್ಣು ತಪ್ಪಿಸಿ ಉಚ್ಚೆ ಹೊಯ್ದು ಬರುವುದಾಗಿ ಹೇಳಿ, ಸೆಕೆಂಡ್ ಶೊ ಪಿಚ್ಚರ್‌ಗೆ ನೆಗೆದುಬಿಡುತ್ತಿದ್ದರು. ಪಿಚ್ಚರ್ ಮುಗಿಸಿಕೊಂಡು ಹನ್ನೆರಡು ಗಂಟೆ ಸುಮಾರಿಗೆ ಬರುತ್ತಿದ್ದ ಹುಡುಗರು ಹಿಂದುಗಡೆ ಇದ್ದ ಮೋಟು ಗೋಡೆ ಹಾರಿ ಒಳ ಸೇರಿಕೊಳ್ಳುತ್ತಿದ್ದರು. ಬೆಳಗ್ಗೆ ಈ ವಿಷಯ ಹೇಗಾದರೂ ಸರಿಯೆ ವಾರ್ಡನ್‌ಗೆ ತಿಳಿದು ಏಟು ಬೀಳುತ್ತಿತ್ತು. ಎಂಥದ್ದೆ ಕಠಿಣ ಕಾನೂನು ಮಾಡಿದರೂ ಪ್ರತಿನಿತ್ಯ ಸೆಕೆಂಡ್‌ ಶೋಗೆ ಹೋಗುವ ಹುಡುಗರನ್ನ ತಡೆಯಲಿಕ್ಕೆ ಆಗುತ್ತಿರಲಿಲ್ಲ. ಆ ಸಂಖ್ಯೆ ದಿನೇ ದಿನೇ ಹೆಚ್ಚಾಗೆ ಇರುತ್ತಿತ್ತು. ಪಿಚ್ಚರ್ ಮುಂದೆ ಏಟು ಏನ್ ಮಹಾ! ಎಂಬ ಭಾವ ಎಲ್ಲರದ್ದಾಗಿತ್ತು.

ಐದು ಹುಡುಗರಿದ್ದ ಒಂದು ಗುಂಪು ಅಡುಗೆಯವರಿಗೆ ಆಪ್ತವಾಗಿತ್ತು. ಅಡುಗೆ ಕೋಣೆಯಲ್ಲಿ ಮಲಗುವ ಅವಕಾಶ ಪಡೆದುಕೊಂಡಿದ್ದ ಆ ಗುಂಪು ವಾರದಲ್ಲಿ ಹಲವು ದಿನ ಸೆಕೆಂಡ್ ಶೋ ಪಿಚ್ಚರ್‌ಗೆ ಹೋಗುವುದನ್ನ ಕಡ್ಡಾಯವಾಗಿ ರೂಢಿಸಿಕೊಂಡಿತ್ತು. ಒಮ್ಮೆ ಅದರಲ್ಲಿ ದುಡ್ಡಿದ್ದ ನಾಲ್ವರು ಸಿನಿಮಾಕ್ಕೆ ಹೋಗಲು ಶಕ್ತರಾಗಿ, ದುಡ್ಡಿಲ್ಲದ ಇನ್ನೊಬ್ಬ ಸಂಗಡಿಗ ಶಶಿಧರನನ್ನು ಅನಿವಾರ್ಯವಾಗಿ ಬಿಟ್ಟೋಗಬೇಕಾಗಿ ಬಂದಿತ್ತು. ಆ ದಿನ ಸಿನಿಮಾ ಮುಗಿಸಿಕೊಂಡು ಬಂದು ಕಿಟಿಕಿಯಲ್ಲಿ ನಿಂತು ಎಷ್ಟು ಕೂಗಿದರೂ ಅದೆಂತಾ ನಿದ್ದೆ ಬಂದಿತ್ತೊ ಏನೊ ಶಶಿಧರ ಎದ್ದೆ ಇಲ್ಲ. ಕೂಗಿ ಕೂಗಿ ಸಾಕಾಗಿ ಬೇರೆ ದಾರಿಯಿಲ್ಲದೆ ಹುಡುಗರು ಹೊರಗಡೆಯೇ ಮಲಗುವಂತಾಗಿತ್ತು. ವಯಸ್ಸಾಗಿದ್ದ ವಾರ್ಡನ್ ನಿದ್ದೆ ಬರದಿದ್ದಕ್ಕೊ ಅಥವ ಇನ್ಯಾವುದಕ್ಕೊ ಮಾರನೆ ದಿನ ಬೆಳಗಿನ ನಾಲ್ಕು ಗಂಟೆಗೇ ಎದ್ದು ಬೀಡಿ ಊದಿಕೊಂಡು ಹಾಸ್ಟೆಲ್ ಕಡೆ ಬಂದಿದ್ದರು. ಹೊರಗಡೆ ಮಲಗಿದ್ದ ನಾಲ್ವರನ್ನು ಎಬ್ಬಿಸಿ ವಿಚಾರಣೆ ನಡಸಿದಾಗ ಸೆಕೆಂಡ್ ಶೋ ವಿಚಾರ ಬಯಲಾಗಿ, ಹಣ್ಣುಗಾಯಿ ನೀರು ಗಾಯಿ ಆಗುವಂಗೆ ಹೊಡೆಸಿಕೊಂಡು ನಾವು ಕಣ್ಣು ಬಿಡುವ ಮುನ್ನವೆ ತಂದು ಎಸೆದಿದ್ದರು.

ಈ ಕಹಿ ಘಟನೆ ಆಗಿ ವಾರ ತುಂಬುವ ಮುನ್ನವೇ ಅದೇ ಗುಂಪು ಮತ್ತೆ ಸೆಂಕೆಡ್ ಶೋಗೆ ಹೋಗುವ ಸಂಚು ರೂಪಿಸಿತ್ತು. ದುಡ್ಡಿಲ್ಲದೆ ಉಳಿದುಕೊಳ್ಳುವ ಸರ್ದಿ ಈಗಲೂ ಕುಂಭಕರ್ಣ ಶಶಿಧರನದ್ದೆ ಆಗಿತ್ತು. ಅವತ್ತು ಶಶಿಧರ ಮಾಮೂಲಿ ಸಮಯಕ್ಕೂ ಮುನ್ನ ಮಲಗಿದ್ದ. ಆತನನ್ನು ಸಿನಿಮಾದಿಂದ ಬಂದಾಗ ಎದ್ದು ಬೋಲ್ಟ್ ತೆಗೆಯುವಂತೆ ಮಾಡುವುದು ಹೇಗೆಂದು ತಲೆಕೆಡಿಸಿಕೊಂಡು ಪ್ಲಾನ್ ಹಾಕುತ್ತಿರುವಾಗ, ಲಕ್ಷ್ಮಿರಂಗನಿಗೆ ಒಂದು ಪ್ಲಾನ್ ಹೊಳೆದಿತ್ತು. ಅದರಂತೆ ಒಂದು ದಾರವನ್ನು ತೆಗೆದುಕೊಂಡು ನಿದ್ದೆಯಲ್ಲಿ ನಿಗುರಿದಂತಿದ್ದ ಆತನ ಬಲ್ಲಮರಿಗೆ ದಾರದಿಂದ ಕಟ್ಟಿ ಜೀರುಗುಣಿಕೆ ಹಾಕಿ, ದಾರದ ಇನ್ನೊಂದು ತುದಿಯನ್ನು ಕಿಟಕಿಯ ಕಂಬಿಗೆ ಕಟ್ಟಿ ಹೊರಟು ಹೋಗಿದ್ದರು. ಕಾಲುಬೆರಳಿಗೋ ಅಥವ ಇನ್ಯಾವುದೇ ಅಂಗಕ್ಕೆ ಕಟ್ಟಬಹುದಿತ್ತು, ಆದರೆ ಅವರು ಬಲ್ಲಮರಿಯನ್ನು ಆಯ್ಕೆಮಾಡಿಕೊಂಡಿದ್ದರು.

ಸಿನಿಮಾ ಮುಗಿಸಿಕೊಂಡು ಬಂದ ನಂತರ, ಕಂಬಿಗೆ ಕಟ್ಟಿದ್ದ ದಾರ ಹಿಡಿದು ಅಲ್ಲಾಡಿಸುತ್ತ ಶಶಿ,. ಶಶಿ.. ಎಂದು ಕೂಗಿದ್ದರು. ಪುಣ್ಯಕ್ಕೆ ಶಶಿಗೆ ಅಂದು ಬೇಗ ಎಚ್ಚರಾಗಿ ಬೋಲ್ಟ್ ತೆಗೆದಿದ್ದ. ತನ್ನ ಸಾಮಾನಿಗೆ ಬಂದ ಸ್ಥಿತಿಯಿಂದಾಗಿ ಆತ ಇನ್ನು ಮೇಲೆ ಅವರ ಸಹವಾಸಕ್ಕೆ ಹೋಗಲ್ಲವೆಂದು ಹೇಳಿಕೊಂಡು ಅಡುಗೆ ಕೋಣೆಯಲ್ಲಿ ಮಲಗುವುದನ್ನು ಒಂದಷ್ಟು ದಿನದ ಮಟ್ಟಿಗೆ ಬಿಟ್ಟಿದ್ದ.