ಮಾಯೆ

ಅವಳು-
ಜಾತ್ರೆಯಲಿ ಪರಿಮಳ ಮಾರುವ
ಹೂವಾಡಗಿತ್ತಿ.
ರೂಪಕ್ಕೆ ಬಣ್ಣ ತೊಡಿಸುತ್ತ
ಬಣ್ಣಕ್ಕೆ ನವಿರು ಸವರುತ್ತ
ಹೂವಾಗಿದ್ದಾಳೆ ತಾನೇ.
ನಾದದ ಅಲೆಯಂತೆ ಸುಳಿದು
ನಾಲಗೆಗೆ ಮಧುವಾಗಿ ಸುರಿದು
ನಾಳಿನ ಬೀಜಗಳ ಒಡಲುಗೊಂಡಿದ್ದಾಳೆ
ಮೊಗ್ಗಿನ ಮೃದು ಮೊನೆಯಲ್ಲಿ
ಕಣ್ಣೊಡೆವ ಅವಳ ಭಾಷೆಯೇ ಬೇರೆ.

ಅವನು-
ನಖಶಿಖಾಂತ ಕಂಪಿಸುತ
ಹಾದರಗಿತ್ತೀ…….
ಎಂದು ಫೂತ್ಕರಿಸುತ್ತಾನೆ.
ಪತಿವ್ರತಾ ಪುರಾಣ ಪ್ರತಿಮಾಡಿಸಿ
ಓದು ಓದೆನ್ನುತ್ತಾನೆ.
ಲಕ್ಷ್ಮಣರೇಖೆ ದಾಟಿದ
ಸೀತೆಗೇನಾಯ್ತು ಗೊತ್ತೇ?
ಗೋಳಿಡುತ
ಪುರಾಣದ ಹಳೆ ಹೂಂಸು ಬಿಡುತ್ತಾನೆ
ಹಾವಿಗೆ ತಿಳಿಯದು ಹೂವಿನ ಭಾಷೆ!

ಪ್ರತಿ ಪ್ರತಿಮೆಗಳ ಭಂಜಿಸಿ
ಲೀಲೆಯಲಿ ನಡೆಯುವ ಅವಳು
ಅವನು ಠಂಕಿಸಿದ ಅಕ್ಷರಗಳ
ಉಫ್ ಎಂದು ಊದುತ್ತಾಳೆ.
ಹಾದರಗಿತ್ತೀ ಎಂದಿದ್ದು ಅವಳಿಗೆ
ಪಾತರಗಿತ್ತೀ ಎಂದು ಕೇಳಿದಂತಿದೆ!

ಚಿತ್ತ ಚೇತನವೇ ಜಿಗಿದಾಡಿದಂತೆ
ಕೈಗೆಟುಕದೆ ಹಾರುತ್ತಾಳೆ
ಜೀವಕ್ಕೆ ಮೂಡಿದ ರೆಕ್ಕೆ ಆಕೆ.

ಮಣ್ಣಿನ ಸೀತೆಯೊಳಗೆ
ಕಾಣದ ಬೆಂಕಿ
ಬಿರುಗಾಳಿಯ ತೇಜ
ಸಮುದ್ರದ ಭೋರ್ಗರೆತ
ಅಪರಿಮಿತ ಆಕಾಶ…..
ಎಟಕುತ್ತಿಲ್ಲ ಉರಗಪತಾಕರಿಗೆ
ದ್ರೌಪದಿಯ ತುರುಬು.

ಚಿವುಟಿದಷ್ಟೂ ಚಿಗುರುವ
ಚಿಗರೆ ಹೂದಂಡೆ ಮುಡಿದು
ಹೂನಗೆ ಚೆಲ್ಲಿ,
ಹಲ್ಲುಕಿತ್ತ ಮುದಿಹಾವುಗಳ
ಹೂಬುಟ್ಟಿಯಲ್ಲಿಟ್ಟು.
ಬರುತ್ತಾಳೆ ಹೂವಾಡಗಿತ್ತಿ.
ಆಡಿ ಆಡಿಸುತ್ತಾಳೆ ಜಗವ
ಜೀವಸ್ವರದಲಿ ಈ ಹಾವಾಡಗಿತ್ತಿ.

 

 

 

 

ಉಗುಳಬೇಕು ನುಂಗಬೇಕು

ಎಲೆಅಡಿಕೆ ಅಗಿಯುವದೊಂದು ಧ್ಯಾನವಂತೆ
ಹಲ್ಲು ದವಡೆ ತಾಲು ಲಾಲಾರಸದಲ್ಲಿ ಬೆರೆತು
ಅರೆದು ನುಣ್ಣಗೆ ಸಮರಸವಾಗಿ
ಜೀವದ ಭಾಗ, ಆತ್ಮದ ಭಾಗ…..ಆಹಾ!
ಪ್ರೇಮ ಕಾಮ ಆಧ್ಯಾತ್ಮ……
ಯಾವುದಕ್ಕೆ ಬೇಕಾದರೂ ಸಲ್ಲುವ ರೂಪಕ.

ಧ್ಯಾನವೂ ಒಂದು ಚಟವೇ.
ಎಂದಿದ್ದರೂ ಹೊರಬರಲೇಬೇಕು.
ಉಗುಳಲೂ ಆಗದೆ ನುಂಗಲೂ ಆರದೆ….
ಎಂಬ ಕಳ್ಳ ತಳಮಳವಾದರೂ ಯಾಕೆ?
ಉಗುಳುವುದೇ ತಾನೆ ಲೋಕರೂಢಿ!
ಭಟ್ಟರು ಶೆಟ್ಟರು ದಲಿತರು ಸಾಬರು
ಯಾರು ಉಗುಳಿದರೂ ಉಳಿಯುವದು
ಬರೀ ಕೆಂಪು ಕಲೆ.

ಹುಚ್ಚು ಹುಡುಗೀ ಇಷ್ಟಕ್ಕೆಲ್ಲ ಅಳುತ್ತಾರ!
ನಿನಗೇನು ಹೊಸದಾ ಕೆಂಪುಕಲೆ ಧರಿಸುವದು?
ಗರ್ಭದ ಒಳಸುಳಿಗಳಿಂದ ನುಗ್ಗಿಬಂದು
ವಿಹ್ವಲಗೊಳಿಸುವ ಸ್ರಾವದ ಮಾಮೂಲಿ ನೋವು
ಧ್ವನಿಯಿಲ್ಲದ ಒಂದು ಚೀತ್ಕಾರ……
ಅಷ್ಟೆ! ಸುಮ್ಮನೆ ನುಂಗಬೇಕು.

 

(ಇಲ್ಲಷ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)