ಗುಲ್‌ಮೊಹರ್ ಅಡಿಯಲ್ಲಿ ನಿಂತ ಆ ಹುಡುಗಿ!

ಗುಲ್ಮೊಹರ್‌ ಅಡಿಯಲ್ಲಿ
ನಿಂತ ಆ ಹುಡುಗಿ
ಚುಮುಚುಮು ಅರಳುವ ನಕ್ಷತ್ರ-
ಕಣ್ಣುಗಳನ್ನು ಮಿನುಗಿಸುತ್ತ
ನಿಗಿನಿಗಿ ಗುಲ್ಮೊಹರ್‌
ಅಡಿಯಲ್ಲಿ ನಿಂತಿದ್ದಕ್ಕೆ
ಹೂ ಬಿಟ್ಟು ಬೆವತಂತಿದೆ-
ಮರಕೆ ಮರವೇ ನಡುಗಿ!

ಚಕ್ಕಡಿ ಗಾಡಿಯಲ್ಲಿ ಇರುಳ ಸವಾರಿ
ಜೊಂಪು ಹತ್ತುವ ಮೊದಲೇ
ಮೇಲೆ ಸುರಿಯುವ ತಾರೆ
ಸೊನೆ ತೊಟ್ಟಿಕ್ಕುವ ಕನಸುಗಳ
ಚಕ್ರಗತಿಯನು ಮೀರಿ ದಾರಿ-
ಪಯಣಿಸುವ ಲಯಕೆ
ಸ್ವಪ್ನ ಆಭಾರಿ

ಎಳೆಬೆಳಗು ಕ್ಷಿತಿಜದಂಚಲ್ಲಿ
ಗೆರೆ ಎಳೆಯುವಾಗ
ಸುಷುಪ್ತಿಯ ನಿಗೂಢವೇ
ರೆಪ್ಪೆ ಮಿಟುಕಿಸಿದಂತೆ
ನೆಲದಲ್ಲೆ ಬೇರೂರಿ
ಮುಗಿಲಿಗೊಡ್ಡಿದ ಮುಖ
ಹಳೆನೆನಪ ಚೆಲ್ಲುತ್ತ
ಚೆಲ್ಲಾಡುವುದೆಲ್ಲ ಎಸಳ ರಂಗೋಲಿ