ವ್ಯಕ್ತಮಧ್ಯ

ಅವರವರ ಅಂತರಿಕ್ಷದಲಿ
ವಿಕಲ್ಪವೃಕ್ಷದ ಕಣೆಗೆ ನೇತು
ಹಾಕಿದ-
ತೂಗುತೊಟ್ಟಿಲು

ಅಂತಿಂಥ ಅಂತರ್ಮುಖಿಯಲ್ಲ
ನಿಂತ ಜೋಕಾಲಿ;
ಯಾರಾದರೊಬ್ಬರು ತಳ ಊರುವವರೆಗೆ-
ಸರದಿಯಲ್ಲಿ

ಬಿಚ್ಚುಗೈಯಿಂದ ಒಂದು ಮೀಟು
ನೆಲ ಸರಿದರೆ ಒಂದು ದಾಟು
ಭೂಮ್ಯಾಕಾಶಕೆ ಅಲೆಯುವಂತೆ-
ಜೀಕು..ಜೀಕು..
ಜೀಕು!

ಹಿಂದಿನದೆಲ್ಲವ ಬಿಟ್ಟೇ-
ಬಿಡುವ ಸ್ವಗತ;
ಮುಂದಿನದೆಲ್ಲವ ಮುಟ್ಟೇ-
ಬಿಡುವ ಎನುತ

ಪ್ರತಿ ಜೀಕಿಗೆ ಪ್ರಗತಿ-
ಯ ಶ್ರುತಿ ಭಾವಿಸುತ
ಅಲ್ಲಲ್ಲೇ ವಿಸ್ತಾರ- ಕೆರೆ-
ಗೆಸೆದ ಕಲ್ಲು!

ಲೋಲಕದ ಗಿರಕಿಗಳ
ಅಣಕಿಸುತ ಜೋಕಾಲಿ
ಲಂಬ ಲಂಬಿಸುತ
ಊರ್ಧ್ವಕೇರಿಸುತ.. ಗಡಿ-
ಯಾರದಾಗಿರಲಿ
ಪರಿಧಿಯೊಂದಿದೆಯಲ್ಲಿ..!

ಕ್ಷಣ-ಕ್ಷಣಕೂ ಜರುಗುವ
ಕೇಂದ್ರಬಿಂದುವಿನಹವಾಲು
ಮೂಲಾಧಾರಕೆ
ಸೇರಲು ತವಕಿಸುವ ಅತಿಮಂದ್ರ-
ನಾದವೊಂದು
ಇಹದಲ್ಲೆ ಪರಮಪದ
ಶೋಧಿಸಲು
ಅಣುಗಾಲ
ಗಾಳಿಗೊಡ್ಡಿದ
ಅಹಮಿಕೆಯ ಕಂದೀಲು.

ಆದಿ ಅಜ್ಞಾತ
ಅನುವಾದಿ ಉಪೋದ್ಘಾತ
ವ್ಯಕ್ತಮಧ್ಯದಿ
ಜೀಕುಬಿದ್ದಿದೆ
ಜೋಕಾಲಿ-
ಅವ್ಯಾಹತ..