ಭ್ರಮರ-ಗೀತ

ಅರರೆ! ಜೇನುನೊಣವೆ,
ಇದು, ನಾಲ್ಕು ಗೋಡೆಗಳ,
ಮೇಲಷ್ಟು ಸೂರುಗಳ-
ಬರಿ ಒಂದು ಕೋಣೆ; ಅಷ್ಟೇ!
ಅರಿಯದೇನು? ಹೊಂಬಣ್ಣದ ಜೀವವೇ!

ಹೂಬನದ ಹೊದಲಲ್ಲ,
ಮಾಮರದ ತೊದಲಲ್ಲ;
ನೀ ಹೇಗೆ ಬಂದೆ ಈ-
ನರ-ನಿರ್ಮಿತ ಅವಕಾಶಕೆ?
ಹೊಳಹು ಮರೆತ ಅವಸರಕೆ?

ಸ್ವಚ್ಛಂದಕೆ ಮರು-ಹೆಸರು
ನಿನ್ನ ಕಾಡ-
ಬಹುದಿಲ್ಲಿಯ ವಿಷಯ-
ವಾಸನೆ, ಬೆವರು

ನಿನಗೇನು ಸಿಗಬಹುದಿಲ್ಲಿ?
ಒಂದಿನಿತೂ
ಸ್ನೇಹವಿಲ್ಲದ ತೈಲ-ಚಿತ್ರಗಳಲ್ಲಿ?
ಅರಳಿನಿಂತ ಡೇರೆ- ಸ್ತಬ್ಧ
ಮುತ್ತಿ ಮೊರೆಯುವ ದುಂಬಿ-
ಯದೋ- ನಿಃಸ್ವನ- ನಿಬದ್ಧ!

ಮೂಲೆಗೊರಗಿ ಗವುಸು ತೊಟ್ಟ ವೀಣೆ
ಬೇಟೆಗಾಗಿ ಹೊಂಚಿ ಹರಿವ ಜೇಡ
ನವಿರು ಬಲೆಯೊಳಗೆ ಕಾತರಿಸಿ
ಹಾರಿ-ಹೋಗುವ ಕ್ರಿಮಿ-
ಕೀಟ- ಜೋಕೆ!
ನೀನು ಕೂಡ!

ಗತಕೆ ಸರಿದುಹೋಗುವ ಸ್ವಗತ
ಇತಿಹಾಸಕೆ ಸಲ್ಲುವುದಕೆ
ಉತ್ಕಂಠಿತ ಸೊಲ್ಲು

ಭೂತವಾಗುವುದಕೆ ಹಾ-
ತೊರೆವ ವರ್ತಮಾನ;
ನಿಶ್ಚಲತೆಯೆ
ಚಿರಂತನವೆಂದು ನಂಬುವ
ಜಾಯಮಾನ.

ಫುಲ್ಲಕುಸುಮ ಕಂಗೊಳಿಸುವ ಮರ-
ಕೆ ನಿಬಿಡ ವಸಂತ
ಬಳಿಯೆ ನಿಂತ ಶಕುಂತ-
ಲೆ, ದುಗುಡಭರಿತ ದುಷ್ಯಂತ ಮತ್ತ-
ವಳ ಮೇಲುದ ಸೆಳೆವ ಬೆರಗು-
ಗಣ್ಣ ಚಿಗುರೆ, ಪರಿವಾರ- ಸುತ್ತಮುತ್ತ.

ಅತ್ತ- ಮೇನಕೆಯ ಧಿಕ್ಕರಿಸುವ ಮುನಿ;
ಇತ್ತ- ನೆಲದಿ.. ಹೂತ..
ಕಣ್ಣ. ಕೀಳಲಾರ ದ ವ ನಿ ತೆ-
ಮಾತೆ!

ತಪೋದಂಡ- ವ್ರತಭಂಗ- ಕೆಟ್ಟಸುಖ- ಸಂಗತಿ
ಎಲ್ಲ ಭವದಿ- ನಿರ್ಭಾವದಿ ಒಗೆವ ಶುಷ್ಕಸಂಹಿತೆ

ರಂಗಿದೆ; ಪರಿಮಳವಿಲ್ಲ
ರಾಗವಿದೆ; ನಿನಾದವಿಲ್ಲ
ನಿರಾಳವಿದೆ; ನಿರುಮ್ಮಳವಿಲ್ಲ!

ನರಮನುಜರ ಗಂಧ-
ಕದ ಅದಟು, ಕಮಟು
ಕಟಕಿ ಪರದೆಯ ತೂತು
ದಪ್ಪ ಗಾಜಿನ ಜಿಗುಟು-
ಗೋಡೆ- ಕಂಬಕೆ
ಚುಚ್ಚೀತು ನಿನ್ನ ಅಂಬು- ಜೋಕೆ!

ಸುಮಗಳನೆ ಮೆಚ್ಚಿ ನೆಚ್ಚುವ ನೀನು
ಇಲ್ಲಿ ಬಂದುದಾದರೂ ಏಕೆ,
ಹುಡುಕಲಿಲ್ಲಿ ಇರುವಂಥದಾದರೂ ಏನು?
ತುಡುಗಿಗೆ ಕೂಡ ಹನಿಯೊಸರಲಾರದ
ಬರಿಯ ಶಬ್ದ-
ಕೋಶದೊಳಗಿನ ಜೇನು!

ಪಕ್ಕ ಬಲಿಯುವ ತನಕ ಬಿಲದ ಹಂಗು;
ಹೊಕ್ಕ ಕಾವಿಗೆ ಒಳಗ ಸುಡುವ ಗುಂಗು..

ಮಳೆಹುಳಕಾದರೆ ಅತಿಸಹಜ
ರೆಕ್ಕೆಯೊಡೆಯುವ ಮುನ್ನ
ಒಳಗಿಂದುಕ್ಕುವ ಕುದಿತ
ನೆಲದ ಹೊಕ್ಕಳು ಬಗೆದು
ಮೇಲೆ ಹಾರುವ ತುಡಿತ
ಕ್ಷೀಣಯತ್ನದ ಜಿಗಿತ..

ಅಂಟಿಕೊಂಡರೆ ಮೇಣ-
ಕಿಂಚಿತ್ತು ಕಾಲ್ಗಳಿಗೆ;
ಜಾರಿ ಹಾರಲಿಕಿಲ್ಲ-
ಬಯಲೆಂಬ ಬಯಲಿಗೆ!

ಅರರೆ! ಜೇನ್ನೊಣವೆ ಮರುಳೆ,
ಮರಳು, ಮರಳುಗಾಡಿಂದ-
ಜೀವಸ್ರೋತದೂಟೆಯೆಡೆಗೆ,

ಹೊರಳು, ಅರಳುವುದೆಲ್ಲೊ
ಸುರಗಿ, ಮಲ್ಲಿಗೆ, ಸುರಭಿ
ಪಾರಿಜಾತಗಳಲ್ಲಿ-
ಕಲ್ಪದ್ರುಮದೊಳಗೆ!