ಮುಗುಳುನಗುವ ಬುದ್ಧ

ಬುದ್ಧನ ಮುಖವಾಡ ಹೊತ್ತು
ತಿರುಗುತ್ತಿದ್ದಾರೆ ಅವರೆಲ್ಲ!
ಹೊರಳಿಸಿದರೆ ಇಷ್ಟಿಷ್ಟೇ ಕತ್ತು
ಮುರಿದರೆ ಮೈ ಬಿಚ್ಚಿದರೆ ಅಂಗೈ
ಗಮನಿಸಿದರೆ ತಿಳಿದೀತು-
ಹರಿದು ಹಂಚಿದ ಚೆಹರೆ!

ನಸುಗಣ್ಣು ತೆರೆದು ಮುಗುಳು-
ನಗುವ..ಬುದ್ಧ!
ಅರಳಿದ ಕಣ್ಣಲ್ಲಿ ಜಗ-
ಝಗಿಸುವ ಜಗ

ತಲೆಯ ಗುಂಗುರಲ್ಲಿ ಮಡುವು-
ಗಟ್ಟಿದ ಶಾಂತಿ- ಹಣೆಯಲ್ಲಿ-
ವಿರಕ್ತಿಯ ರೇಕುಗಳು

ಸುಡುವ ಸಂಕಟಗಳನೆಲ್ಲ
ತಣಿಸಿ ಅಣಕಿಸುವಂತೆ
ಉಬ್ಬಿದ ಗಲ್ಲಗಳೊಳಗೆ
ಜಗದ ದುಗುಡವ ಅಲ್ಲ-
ಗಳೆದು, ಸುಖವ ಅರೆದು ಅಡಗಿ-
ಸಿದ ಕಾಂತಿ

ಹುಡುಕುತ್ತಿದ್ದಾರೆ- ಬೋಧಿ-
ವೃಕ್ಷವನ್ನು; ಜನುಮ ಜನುಮ-
ವೆತ್ತಿದರೂ ಸಿಗಲಿಲ್ಲ-
ವಲ್ಲ- ಇನ್ನೂ!

ಒಂದು ಬೀಜದ ಮೊಳಕೆ ನೂರ-
ಹನ್ನೊಂದು ಜೀವ ಬಿತ್ತಿ
ಅದರ ಪುಣ್ಯ-ಪಾಪ, ವೇಷ-ಕೋಶ
ಮರಮರಳಿ ಬುದ್ಧಿ-ಭಾವ ಸುತ್ತಿ- ಮೆತ್ತಿ-
ಕೊಳುವ ಸಂಸ್ಕಾರ- ಭಿತ್ತಿ!

ಬುದ್ಧನ ಮುಖ-
ವಾಡ ಹೊತ್ತು, ತಿರು-ತಿರುಗಾ-
ಡುತ್ತಲೇ ಇದ್ದಾರೆ ಅವರೆಲ್ಲ
ಬುದ್ಧತನದ ಭಿಕ್ಷೆಗೆ..ನವ-
ರಂಧ್ರಗಳ ಗಂಗಾಳ-
ಹೊತ್ತು..!

ಸ್ತ್ರೀ

ನಾನು ವಜ್ರ-
ಅನಂತತೆಯ ಕುಲುಮೆಯಲ್ಲಿ,
ಅಂತಃಸ್ಸತ್ವದ ಹೊಳಪಿನಲ್ಲಿ,
ದೃಢ ಬಲಿಷ್ಠತೆಯಲ್ಲಿ..

ನಾನು ಮುಕ್ತ-
ಪರಿಕಲ್ಪಿತ ಮಾನಾಪಮಾನಗಳ
ಭ್ರಮೆಗಳಿಂದ,
ಅನೈತಿಕತೆಯ ಸೋಕಿನಿಂದ,
ನೈತಿಕ ದುರಹಂಕಾರದಿಂದ..

ನಾನು ಔನ್ನತ್ಯ-
ಎಲ್ಲವನ್ನೂ ನಾನು ಕಾಣಬಲ್ಲೆ;
ಯಾರೂ ನನ್ನನ್ನು ತಲುಪಲಾರರು..

ನಾನು ಕ್ಷಮೆ-
ಸಕಲ ಸಾಪೇಕ್ಷ್ಯ ಪೊಳ್ಳುತನಗಳಿಗೆ;
ವರ್ಣಮಯ ವಿಭ್ರಮೆಗಳಿಗೆ..

ನಾನು ಆನಂದ-
ನನ್ನೊಳಗೆ..ನನ್ನೊಳಗೆ..ನನ್ನೊಳಗೆ!