ಏಕಲೋ ಪೌರಾತ್ಯ ಅನುಭಾವಕ್ಕೆ ತೆತ್ತುಕೊಂಡವನು. ಗ್ರೀಕ್ ಕವಿ ಕಾನ್ಸ್ಟಾಂಟಿನ್ ಕವಾಫಿಯ ಹಾಗೆಯೇ ಇವನು ತನ್ನ ಕವಿತೆಗಳನ್ನು ಎಂದೋ ಆಗಿಹೋದ ಕಾಲದಲ್ಲಿ ನಿಲ್ಲಿಸುತ್ತಾನೆ. ಆದರೆ ಏಕಲೋ ಒಬ್ಬ ಭಾವುಕ. ಗತ ಕಾಲದಲ್ಲಿಯೇ ಮಗ್ನನಾಗುವವ. ಆದರೆ ಅವನು ಭೂತವನ್ನು ಪಲಾಯನದ ಹಾದಿಯಾಗಿ ಆಯ್ಕೆ ಮಾಡಿಕೊಳ್ಳುವುದಿಲ್ಲ. ಅದು ಅವನಿಗೆ ಅವನ್ನು ವರ್ತಮಾನವನ್ನು ಬೆಳಗುವ, ಟೀಕೆಗೆ ಒಳಪಡಿಸುವ ಮಾರ್ಗ. ಬೈಜಾನ್ಟಿಯನ್ ಸಂಸ್ಕೃತಿಗೆ ಅವನು ಆಕರ್ಷಿತನಾಗಿದ್ದ. ಆದರೂ ಅವನು ಅದನ್ನು ಉದಾತ್ತೀಕರಿಸುವುದಿಲ್ಲ. ಬೈಜಾನ್ಟಿಯನ್ ಬದುಕು ಪಾರಂಪರಿಕವಾಗಿ, ಸಾಂಪ್ರದಾಯಿಕವಾಗಿ ನಮ್ಮ ನಗರಗಳ, ರಾಜ್ಯಗಳ ಕಲುಷಿತ ಬದುಕಿನ ರಾಜಕೀಯದ ಹಾಗೆ.
ಸ್ವೀಡಿಶ್ ಕವಿ ಗುನ್ನಾರ್ ಏಕಲೋ ಕುರಿತು ಆರ್ ವಿಜಯರಾಘವನ್ ಬರಹ

 

ಗುನ್ನಾರ್ ಏಕಲೋ ಪ್ರಖ್ಯಾತ ಸ್ವೀಡಿಶ್ ಭಾಷಾ ಕವಿ. 1907 ರಲ್ಲಿ ಸ್ಟಾಕ್ಹೋಮ್ ನಗರದಲ್ಲಿ ಹುಟ್ಟಿದ ಏಕಲೋ ಸ್ವೀಡಿಶ್ ಭಾಷೆಯ ಉತ್ತಮೋತ್ತಮ ಅನುಭಾವಿ ಸಂತಕವಿ. ಲಂಡನ್ ಮತ್ತು ಉಪ್ಸಲ ವಿಶ್ವವಿದ್ಯಾಲಯಗಳಲ್ಲಿ ಪೌರಾತ್ಯ ಭಾಷಾ ಅಧ್ಯಯನ ಮಾಡಿ ತನ್ನ ಕಾವ್ಯಕ್ಕೆ ಬೇಕಾದ ಕಸುವನ್ನು ಹಾಗೂ ವಸ್ತುವನ್ನು ಏಕಲೋ ಸಂಪಾದಿಸಿಕೊಂಡ.

1932 ರಲ್ಲಿ ಸೆಂಟ್ ದ ಜೋರ್ಡಾನ್ ಸಂಗ್ರಹ ಪ್ರಕಟಿಸಿದ. ಇದರ ನಂತರ ಅಂದರೆ ಒಂಬತ್ತು ವರ್ಷಗಳ ಬಳಿಕ 1941 ರಲ್ಲಿ ಸಾಂಗ್ಸ್ ಆಫ್ ಸಂಥಿಂಗ್ ಎಲ್ಸ್ ಪ್ರಕಟವಾಯಿತು. ಈತ 1950 ಹಾಗೂ ಅರವತ್ತರ ದಶಕದಲ್ಲಿ ಕಾವ್ಯಕ್ಕೆ ಸರಳತೆಯನ್ನು ಕುತೂಹಲಿತ ಗಾಂಭೀರ್ಯವನ್ನು ತಂದುಕೊಟ್ಟ. ಇದೇ ಸುಮಾರಿಗೆ ಕವಿತೆಗೆ ಸಂಗೀತದ ಪ್ರಕಾರಗಳನ್ನು ಅಳವಡಿಸುವ ಪ್ರಯತ್ನವನ್ನು ಮಾಡಿದ. ಅದಾದ ಮೇಲೆ ಸಾವಿರದ ಒಂಬೈನೂರ ಅರವತ್ತೈದರಲ್ಲಿ ದಿವಾನ್ ಓವರ್ ದ ಪ್ರಿನ್ಸ್ ಆಫ್ ಎಂಜಿಯಾನ್, 1966 ರಲ್ಲಿ ದ ಟೇಲ್ ಆಫ್ ಫಾತುಮಾ ಪ್ರಕಟವಾದವು. ಬಳಿಕ ಬಂದದ್ದು ಗೈಡ್ ಟು ಎ ಅಂಡರ್ವರ್ಲ್ಡ್.

ದಿವಾನ್ ಗಳ ಟ್ರಯಾಲಜಿ ಏಕಲೋನ ಕಾವ್ಯ ಬದುಕಿಗೆ ಹೊಸ ಚೇತನವನ್ನು ನೀಡಿದವು. ಅತೀಂದ್ರಿಯ ಅನುಭವ ಮತ್ತು ವೈಚಾರಿಕ ವಿಶ್ಲೇಷಣೆ ಇವೆರಡರ ನಡುವೆ ಕರ್ಷಣೆ ಏರ್ಪಟ್ಟಿತು. ಆ ಕರ್ಷಣೆಯ ನೆಲೆಯಲ್ಲಿಯೇ ಹೊಸ ಕವಿತೆಗಳನ್ನು ಏಕಲೋ ಬರೆದ. ಆದರೆ 1968ರಲ್ಲಿ ಗಂಟಲಿನ ಕ್ಯಾನ್ಸರ್ ಗೆ ತುತ್ತಾದ.

ಪ್ರಾಯಶಃ ಅತಿ ಹೆಚ್ಚು ಭಾಷಾಂತರಗೊಂಡ ಸ್ವೀಡಿಶ್ ಕವಿ ಏಕಲೋ. ಅವನ ಕಾವ್ಯ 26 ಭಾಷೆಗಳಿಗೆ ಅನುವಾದಗೊಂಡಿದೆ. ಆದರೆ ಅವನ 163 ಕವಿತೆಗಳ ಒಟ್ಟು ವೃತ್ತವನ್ನು ಇಡಿಯಾಗಿ ಯಾರೂ ಒಮ್ಮೆಲೆ ಇಂಗ್ಲಿಷ್ ಭಾಷೆಗೆ ಅನುವಾದಿಸಲಿಲ್ಲ. ಇಂಗ್ಲಿಷ್ ಭಾಷೆಯ ಪ್ರಖ್ಯಾತ ಕವಿ ಡಬ್ಲ್ಯೂ ಎಚ್ ಆಡೆನ್, ದಿವಾನ್ ಆನ್ ದಿ ಪ್ರಿನ್ಸ್ ಆಫ್ ಎಂಜಿಯಾನ್ ಕೃತಿಯಲ್ಲಿರುವ ಬಹುತೇಕ ಕವಿತೆಗಳನ್ನು ಅನುವಾದಿಸಿದ. ಅಮೇರಿಕನ್ ಕವಿಗಳಾದ ರಾಬರ್ಟ್ ಬ್ಲೈ ಹಾಗೂ ರಿಕಾ ಲೆಸರ್ ದ ಟೇಲ್ ಆಫ್ ಫಾತುಮಾ ಮತ್ತು ಗೈಡ್ ಟು ದ ಅಂಡರ್ವರ್ಲ್ಡ್ ಸಂಕಲನಗಳನ್ನು ಇಂಗ್ಲೀಷ್ ಗೆ ಅನುಕ್ರಮವಾಗಿ ಅನುವಾದಿಸಿದರು. ಅವರೆಲ್ಲರೂ ಸ್ವೀಡಿಶ್ ಭಾಷೆಯನ್ನು ಮಾತೃಭಾಷೆಯಾಗಿ ಉಳ್ಳ ಒಬ್ಬ ನೇಟಿವ್ ವಿದ್ವಾಂಸರನ್ನು ಅವಲಂಬಿಸಿದರು.

ಏಕಲೋ ವೃತ್ತವನ್ನು ಒಂದು ಕಮಾನಿನಂತೆ ಪರಿಭಾವಿಸಿದ. ತನ್ನ ಮೊದಲೆರಡು ಸಂಕಲನಗಳನ್ನು ಕಂಬಗಳನ್ನಾಗಿಯೂ ಕೊನೆಯದನ್ನು ಅವುಗಳ ನಡುವಿನ ಅಂತರವನ್ನು ಬೆಸೆಯುವ ಸೇತುವೆಯಂತೆಯು ಭಾವಿಸಿದ.

ಮೊದಲ 14 ಕವಿತೆಗಳನ್ನು ಒಂದೇ ರಾತ್ರಿ ಇಸ್ತಾನಬುಲ್ ನಗರದಲ್ಲಿ ಆತ ಬರೆದ. ತನ್ನ ಉಳಿದ ಜೀವನವನ್ನು ಕವಿತೆಗಳನ್ನು ಬರೆದು ಮುಗಿಸುವುದಕ್ಕೆ ಪ್ರಕಟಣೆಯ ಹೊರೆ ಹೊರಲಿಕ್ಕೆ ಮುಡುಪಿಟ್ಟ.

ಪ್ರಾಯಶಃ ಅತಿ ಹೆಚ್ಚು ಭಾಷಾಂತರಗೊಂಡ ಸ್ವೀಡಿಶ್ ಕವಿ ಏಕಲೋ. ಅವನ ಕಾವ್ಯ 26 ಭಾಷೆಗಳಿಗೆ ಅನುವಾದಗೊಂಡಿದೆ. ಆದರೆ ಅವನ 163 ಕವಿತೆಗಳ ಒಟ್ಟು ವೃತ್ತವನ್ನು ಇಡಿಯಾಗಿ ಯಾರೂ ಒಮ್ಮೆಲೆ ಇಂಗ್ಲಿಷ್ ಭಾಷೆಗೆ ಅನುವಾದಿಸಲಿಲ್ಲ. ಇಂಗ್ಲಿಷ್ ಭಾಷೆಯ ಪ್ರಖ್ಯಾತ ಕವಿ ಡಬ್ಲ್ಯೂ ಎಚ್ ಆಡೆನ್, ದಿವಾನ್ ಆನ್ ದಿ ಪ್ರಿನ್ಸ್ ಆಫ್ ಎಂಜಿಯಾನ್ ಕೃತಿಯಲ್ಲಿರುವ ಬಹುತೇಕ ಕವಿತೆಗಳನ್ನು ಅನುವಾದಿಸಿದ.

ಏಕಲೋ ಪೌರಾತ್ಯ ಅನುಭಾವಕ್ಕೆ ತೆತ್ತುಕೊಂಡವನು. ಗ್ರೀಕ್ ಕವಿ ಕಾನ್ಸ್ಟಾಂಟಿನ್ ಕವಾಫಿಯ ಹಾಗೆಯೇ ಇವನು ತನ್ನ ಕವಿತೆಗಳನ್ನು ಎಂದೋ ಆಗಿಹೋದ ಕಾಲದಲ್ಲಿ ನಿಲ್ಲಿಸುತ್ತಾನೆ. ಆದರೆ ಏಕಲೋ ಒಬ್ಬ ಭಾವುಕ. ಗತ ಕಾಲದಲ್ಲಿಯೇ ಮಗ್ನನಾಗುವವ. ಆದರೆ ಅವನು ಭೂತವನ್ನು ಪಲಾಯನದ ಹಾದಿಯಾಗಿ ಆಯ್ಕೆ ಮಾಡಿಕೊಳ್ಳುವುದಿಲ್ಲ. ಅದು ಅವನಿಗೆ ಅವನ್ನು ವರ್ತಮಾನವನ್ನು ಬೆಳಗುವ, ಟೀಕೆಗೆ ಒಳಪಡಿಸುವ ಮಾರ್ಗ.

ಬೈಜಾನ್ಟಿಯನ್ ಸಂಸ್ಕೃತಿಗೆ ಅವನು ಆಕರ್ಷಿತನಾಗಿದ್ದ. ಆದರೂ ಅವನು ಅದನ್ನು ಉದಾತ್ತೀಕರಿಸುವುದಿಲ್ಲ. ಬೈಜಾನ್ಟಿಯನ್ ಬದುಕು ಪಾರಂಪರಿಕವಾಗಿ, ಸಾಂಪ್ರದಾಯಿಕವಾಗಿ ನಮ್ಮ ನಗರಗಳ, ರಾಜ್ಯಗಳ ಕಲುಷಿತ ಬದುಕಿನ ರಾಜಕೀಯದ ಹಾಗೆ. ನಾನು ಅದರಲ್ಲಿ ಅಷ್ಟೊಂದು ಆಸಕ್ತಿ ತಾಳಲು ಕಾರಣ ನಾನು ಅದನ್ನು ಅಷ್ಟೊಂದು ದ್ವೇಷಿಸುತ್ತೇನೆ ಎಂದು ಏಕಲೋ ಹೇಳಿಕೊಂಡಿದ್ದಾನೆ. ಅವನ ದಿವಾನ್ ನಾವು ನಮ್ಮ ಸುತ್ತ ಕಾಣುತ್ತಿರುವ ರಾಜಕೀಯ ಅವನತಿಯ ಪ್ರತೀಕ. ಫಾತುಮಾ ಅಷ್ಟೇ ಮುಖ್ಯವಾಗಿ ಶಿಥಿಲವಾಗುತ್ತಿರುವ ಸಂಬಂಧಗಳ, ವ್ಯಕ್ತಿಗಳ ನಡುವಿನಿಂದ ಜಾರಿ ಹೋಗುತ್ತಿರುವ ಹಿತ ಬಿಸುಪಿನ ಸಂಕೇತ.

ಏಕಲೋ ಫಾತಿಮಾಳ ಕಥೆಯ ನಿರೂಪಣೆಯಲ್ಲಿ ಸಂಖ್ಯಾಧಾರಿತ ಲಯದ ಸೂತ್ರವೊಂದನ್ನು ಅನುಸರಿಸಿದ್ದಾನೆ. ಈ ವ್ಯವಸ್ಥೆಯನ್ನು ಅನುವಾದದಲ್ಲಿ ಅನುಕರಿಸಲಾಗದು ಎಂದು ಸ್ವಯಂ ಆಡೆನ್ ಕೈಬಿಟ್ಟಿದ್ದಾರೆ. ಇನ್ನು ನನ್ನ ಪಾಡೇನು!!

ಕೋರಸ್

ಅದು ಹೀಗೆ ಎಷ್ಟೋ ದಿನಗಳಿಂದಲೂ
ಕೊನೆಯ ಮನುಷ್ಯ ತನ್ನ ಕನಸಿನಲ್ಲಿ ಕಿಚ್ಚನ್ನು ಕಾಣುತ್ತಾನೆ
ಅಂತ್ಯ ಸಮೀಪಿಸಿದೆ
ನಾವು ಎಲ್ಲದರ ವಿರುದ್ಧ ಬಂಡೇಳಬೇಕು: ಸ್ವಯಂ ನಾಶ ಪಡಿಸಿಕೊಳ್ಳಲು
ಸುತ್ತಲಿನ ವ್ಯೂಹವನ್ನು ಭೇದಿಸಿಬಿಡಬೇಕು
ವಾಸ್ತವಕ್ಕೆ ಬೆನ್ನು ತಿರುಗಿಸಬೇಕು
ದೀರ್ಘವಾಗಿ ಅತಿ ವೇಗವಾಗಿ ಪ್ರಜ್ಞೆ ಕಳೆದುಕೊಳ್ಳುವಂತೆ
ಎಷ್ಟು ದೀರ್ಘವಾಗಿ ಎಂದರೆ ಇಡೀ ಆಕಾಶಗಂಗೆ
ಪುಪ್ಪುಸಗಳ ಒಳಗೆ ಪ್ರಜ್ವಲಿಸಬೇಕು
ಆಬಳಿಕ ನಾವು ಪೂರ್ವೋತ್ತರದಲ್ಲಿ ಶಾಂತ ಮುಖಭಾವ ಹೊತ್ತು
ಕಣ್ಮರೆಯಾಗಬಹುದು

ಇರುಳು ಹಾಗೂ ಸ್ತಬ್ಧತೆ

ಮೌನ
ಸಂಜೆಗತ್ತಲ ಸಮಯ
ಒಂದು ನಾಯಿಯೂ ಬೊಗಳುತ್ತಿಲ್ಲ
ಮಂಜು ಸುರಿದ ಹುಲ್ಲು ಪಾದಗಳ ಅಡಿ ಕಿರುಗುಡುತ್ತದೆ
ಬೆಳ್ಳಗಿನ ಮನೆಗಳು ಕಪ್ಪಗಿನ ರಂದ್ರಗಳ ಹೊತ್ತು ದಿಟ್ಟಿಸುತ್ತವೆ
ಹೊಳೆವ ಚಂದಿರನ ಬೆಳಕು ಸತ್ತುಹೋಗಿದೆ
ಸತ್ತ ವಸ್ತುಗಳು

ನಿದ್ರಿಸುತ್ತಿರುವವರು ಉಸಿರಾಡುವುದು
ಕೇಳಿದ ಹಾಗೆ, ಬಹುತೇಕ
ಯಾರೋ ಮಗ್ಗುಲು ತಿರುವುತ್ತಿದ್ದಾರೆ
ಆಗಸದ ಚಂದಿರ ಅಂಡಲೆಯುತ್ತಿದ್ದಾನೆ

ಆ ದೇವಮಾತೆಯವರನ್ನು ಮಲಗಿಸಿದ್ದಾಳೆ
ಒಬ್ಬಳೇ ಜಳಕ ಮಾಡಲು
ಅವಳ ಮೈಯ್ಯ ಹಾಲು ಬೆಳಕಿಗೆ ಅವಳಿಗೆ ಅಸೂಯೆ
ಸಾವು ಅವನ ನೆರಳುಗಳಂತೆ

ಒಂದಿರುಳು ಒಂದೇ ಇರುಳು ನಿನ್ನ ಸಂಗಡ ಮಲಗಲು
ನೀನು ನಿರಾಕರಿಸಿದರೆ
ನಿನ್ನ ಈ ಆಳನ್ನು ಕಲ್ಲಾಗಿಸು; ಅವನು ರೂಕ್ಷನಾಗಿದ್ದಾನೆ
ಬಡಬಡಿಸುವ ಮಡಿಕೆ, ಕರೆಗಟ್ಟಿದ ಬಾಟಲಿ
ಬಿಟ್ಟು ಬೀಸುವ ಅಲೆ ಯಾವುದೋ ಒಂದು
ನಿನ್ನಿಷ್ಟದಂತೆ
ಪೆರಿ

ಪ್ರತಿಯೊಬ್ಬ ಮನುಷ್ಯನೂ ಒಂದು ವಿಶ್ವ

ಪ್ರತಿಯೊಬ್ಬ ಮನುಷ್ಯನೂ ಒಂದು ವಿಶ್ವ
ನಾನು ಅವರನ್ನು ಆಳುವ ದೊರೆ
ನನ್ನ ಮೇಲೆ ಹುಸಿಕ್ರಾಂತಿಗೆ ಬಂಡೆದ್ದ
ಕುರುಡು ಜೀವಿಯೊಂದರಂತೆ ಜನ
ಒಂದೊಂದು ಆತ್ಮದಲ್ಲೂ ಸಹಸ್ರಾರು ಆತ್ಮಗಳು ಸೆರೆಯಾಗಿವೆ
ಒಂದೊಂದು ವಿಶ್ವದಲ್ಲಿ ಸಹಸ್ರ ಸಹಸ್ರ ವಿಶ್ವಗಳು ಅಡಗಿಕೊಂಡಿವೆ
ಆ ಕುರುಡು ಲೋಕಗಳು ಸತ್ಯವಾಗಿವೆ, ಜೀವಂತವಾಗಿವೆ
ಯಾವುದೂ ನನ್ನಂತೆ ಪೂರ್ಣವಾಗಿ ಹುಟ್ಟಿದುದಲ್ಲ
ಅವು ಗರ್ಭದಲಿ ಬೆಳೆದು ಪೂರ್ಣತೆಯ ಪಡೆದು ಬಂದವಲ್ಲ
ನಾವು ಅರಸರು ಸಾವಿರಾರು ಸಂಪನ್ನ ಜೀವಿಗಳ ಆಳುವವರು
ನಮ್ಮೊಳಗೆ ನಾವು ಪ್ರಜೆಗಳು
ನಮಗಿಂತ ಗುರುತರದ ಜೀವಿಗಳೊಳಗೆ ಬಂಧಿಸಲ್ಪಟ್ಟವರು
ಆ ಗುರುತರದ ಜೀವಿಯ ಆತ್ಮಪ್ರತ್ಯಯವನ್ನು, ಸ್ವಭಾವವನ್ನು
ನಾವು ಕೊಂಚವೇ ತಿಳಿದಿದ್ದೇವೆ
ಹೇಗೆಂದರೆ ನಮ್ಮ ಒಡೆಯ ಅವನೊಡೆಯನನ್ನು ಅರಿತಂತೆ
ಅವರ ಸಾವು, ಅವರ ಪ್ರೀತಿಗಳಿಂದ ಭಾವಗಳು ಬಣ್ಣ ಪಡೆದುಕೊಂಡಿವೆ

ದೊಡ್ಡ ಹಡಗೊಂದು ಸಂಜೆಗತ್ತಲ ಸಮಯ
ದೂರದಲ್ಲಿ ಕ್ಷಿತಿಜದ ರೇಖೆಯ ಕೆಳಗೆ ಸಾಗುತ್ತಾ ಹೋದಂತೆ
ಅದನ್ನು ಕುರಿತು ನಮಗೇನೂ ಗೊತ್ತಿಲ್ಲ
ದೊಡ್ಡದೊಂದು ದಂಡೆಯಲ್ಲಿ ನಿಂತ ನಮ್ಮನ್ನು ತಲುಪುವವರೆಗೂ
ಮೊದಲೊಂದು ಹೆಬ್ಬಲೆ ಬಳಿಕ ಇನ್ನೊಂದು
ಬಳಿಕ ಹಲವಾರು ಅಪ್ಪಳಿಸುತ್ತಾ
ಎಲ್ಲವೂ ಮರಳಿ ಹೋಗುವವರೆಗೂ ಎಲ್ಲವೂ ಬದಲಾಗಿವೆ

ನಾವು ನೆರಳುಗಳು
ನಮ್ಮನ್ನು ವಿಚಿತ್ರವಾದುದು ಚಡಪಡಿಕೆಗೆ ಸೆರೆಯಾಗಿಸಿದೆ
ಯಾರಾದರೂ ವ್ಯಕ್ತಿಗಳು ಹೊರಟುಹೋದರೆ
ಎಂದು ಏನಾದರೂ ಅರುಹಿದರು
ಒಂದಷ್ಟು ಚೈತನ್ಯವಿರುವ ಜೀವಿಗಳು
ಬಿಡುಗಡೆ ಪಡೆದೆವು ಎಂದು ಅರ್ಥ

ಹಾಡಿದ್ದು
ಇಂದಿನ ಇರುಳು ತಾರೆಗಳು ಸ್ಪಷ್ಟವಾಗಿ ಕಾಣುತ್ತಿವೆ
ಗಾಳಿಯು ಪರಿಶುದ್ಧವಾಗಿದೆ, ತಂಪಾಗಿದೆ
ಚಂದಿರ ತನ್ನ ಕಳೆದುಹೋದ ಪರಂಪರೆಯನ್ನು
ಎಲ್ಲೆಡೆ ಹುಡುಕುತ್ತಿದ್ದಾಳೆ

ಕಿಟಕಿ ಇರುವ, ಹೂವು ಅರಳಿರುವ ಒಂದು ಕೊಂಬೆ
ಓ ಅಷ್ಟು ಸಾಕು
ಭೂಮಿಯನ್ನುಳಿದು ಹೂಗೊಂಚಲಿಲ್ಲ
ಹೂಗೊಂಚಲನ್ನುಳಿದು ಭೂಮಿಯಿಲ್ಲ
ಹೂಗೊಂಚಲನ್ನುಳಿದು ಆಗಸವೂ ಇಲ್ಲ

ನಟ್ಟಿರುಳ ಮೌನವು ಅಗಾಧವಾಗಿದೆ

ನಟ್ಟಿರುಳ ಮೌನವು ಅಗಾಧವಾಗಿದೆ
ಮನುಷ್ಯರ ಸದ್ದು ಗದ್ದಲಗಳಿಂದ ಅದು ವಿಚಲಿತಗೊಂಡಿಲ್ಲ
ಸಾಗರ ದಡದಲ್ಲಿ ಮನುಷ್ಯರು ಒಬ್ಬರನ್ನೊಬ್ಬರು ತಿನ್ನುತ್ತಾರೆ

ನನಗೆ ಕೇಳಿಸುತ್ತಿದೆ
ಅದ್ಭುತ ಉಶ್ ಎಂಬ ಸದ್ದು ಬರುತ್ತಿರುವುದು
ಸಾಗರದ ಮೇಲೆ ದೂರ ಚಲಿಸುತ್ತಿರುವ ಹಡಗುಗಳಿಂದ

ಈ ಹಡಗುಗಳು ನಿಜಕ್ಕೂ ಅಷ್ಟು ಮುಗ್ದವೇ
ಕೆಲವೊಮ್ಮೆ ಯಾರಿಗಾದರೂ ಕೇಳಿಬರುತ್ತವೆ
ಬಲು ದೀರ್ಘವಾದ ಊಳಿಡುವ ಸದ್ದುಗಳು
ಅದೇನೋ ಅದೇನೋ ಆಗಿ ಹೋದಂತೆ

ಇರುಳುಗಳಲ್ಲಿ ನಾನು ನನ್ನಿಂದಾಗುವ ಅತಿ ಶ್ರೇಷ್ಠವಾದದ್ದನ್ನು ಮಾಡುತ್ತೇನೆ

ಇರುಳುಗಳಲ್ಲಿ ನಾನು ನನ್ನಿಂದಾಗುವ ಅತಿ ಶ್ರೇಷ್ಠವಾದದ್ದನ್ನು ಮಾಡುತ್ತೇನೆ
ನನ್ನ ದೀಪ ಬಿಟ್ಟುಕೊಟ್ಟ ಗುಟ್ಟುಗಳ ಜೊತೆಯಲ್ಲಿ
ಬಿಟ್ಟುಕೊಟ್ಟದ್ದು ಬಹಳಷ್ಟನ್ನು ಬಯಸುವ ಹಗಲಿನಿಂದ
ಆ ಕೂಲಿಯವನು ಕೊನೆಗೂ ರಮ್ಮಿ ಆಟದ ಎಲೆಗಳ
ಜೋಡಿಸುವುದನ್ನು ಎಂದೂ ಮುಗಿಸಿಲ್ಲ
ರಮ್ಮಿ ಆಟ ನನ್ನನ್ನು ಸದಾ ಸೋಲಿಸುತ್ತಲೇ ಇದ್ದರೆ ಮುಂದೇನು?
ಇಡೀ ರಾತ್ರಿ ನನ್ನದೇ ಅವಕಾಶವೆನ್ನುವುದು
ಇಸ್ಪೀಟ್ ಎಲೆಗಳಲ್ಲಿ ನಿದ್ರಿಸುತ್ತಿದೆ
ಎಲ್ಲೋ ಒಂದೆಡೆ ಸತ್ಯವೊಂದನ್ನು ಉಸುರಲಾಗಿದೆ
ಹಾಗಿರುವಾಗ ಚಿಂತೆಯೇಕೆ?
ಅದನ್ನು ಮತ್ತೆ ಮತ್ತೆ ಹೇಳಲಾಗಿದೆ
ನನ್ನ ಅನ್ಯಮನಸ್ಕತೆಯಲ್ಲಿ ನಾನು ಗಾಳಿ ಸದ್ದನ್ನು ಆಲಿಸುತ್ತೇನೆ
ದೊಡ್ಡ ಸದ್ದುಮಾಡುತ್ತಾ ಹಾಡಿ ಕುಣಿಯುವವರ ಜೊತೆ
ವಿಧಿಯನ್ನು ನೆರವೇರಿಸುವ ಆ ಪುರೋಹಿತ ಕೋರಿಬ್ಯಾಂಟನ
ಕೊಳಲಿನಗಾಳಿ ಸದಾ ಅಲೆಯುವ ಜನರ ಮಾತು

ಮೂಲ: ಗುನ್ನಾರ್ ಏಕಲೋ – ಸ್ವೀಡಿಶ್ ಕವಿ.
ಸ್ವೀಡಿಶ್ ನಿಂದ ಇಂಗ್ಲೀಷಿಗೆ:  ರಾಬರ್ಟ್ ಬ್ಲೈ
ಕನ್ನಡಕ್ಕೆ: ಆರ್ ವಿಜಯರಾಘವನ್