-೧-

ಮರದ ಕೊಂಬೆಯಲ್ಲಿ
ಗರಿ

ಕೆಳಗೆ ಬೀಳುವ ಎಲೆ
ಕಾಯಿ ಹಣ್ಣು ಹಾರುವ ಹಕ್ಕಿ

ದೃಷ್ಟಿ ನೆಲದ ಕಡೆ

ಮಧ್ಯೆ
ಮರ, ಆಕಾಶ ನೋಡುತ್ತ

ನೆಲದ ಬಳಿಗೆ ಹಕ್ಕಿಹಾರಿ
ರೆಕ್ಕೆ ಬಿಚ್ಚಿ ಹಣ್ಣು ನುಂಗಿದ
ಊದ್ದ ತೇಗು ನನಗೂ ಕೇಳಿಸಿತು

ಪಿಶ್ಟಿ ಅಂಗಿಯ ಮೇಲೆ ಪಿಚ್ಚಕ್ಕ
ಕಲೆ ಒಳ್ಳೆಯದೇ..

ಮತ್ತೊಂದು ದಿನ
ನೆರೆಯವನ ಅಂಗಳದಲ್ಲಿ
ಒಂದು ಗಿಡ ಹುಟ್ಟಿತಂತೆ

ಯಾವ ಪತ್ರಿಕೆಯಲ್ಲೂ ಇದರ ವರದಿ ಕಾಣಲಿಲ್ಲ.

-೨-
ಸಂಜೆಹೊತ್ತಿನ ಹೊಳೆ
ನಿಧಾನ ನಿಧಾನವಾಗಿ ಹರಿಯುತ್ತದೆ

ಸ್ವಲ್ಪ ತಡವಾದರೆ
ಮಕ್ಕಳು ಕಿರುಚಿ ಅತ್ತು ಕಾದುಕಾದು
ನಿದ್ದೆಮಾಡಿ, ಕೊನೆಗೆ
ಅವಳೂ ಬೈದು..

ಅಷ್ಟರಲ್ಲಿ ಬಂದರೆ ಬಾಗಿಲು ತೆರೆಯುವವರಿಲ್ಲ
ದೇ ಸಿಟ್ಟು ಬಂದು

ಇರುಳ ಒಳಗೆ ಹೇಗೋ
ಮಿದುವಾಗಿ ನುಸುಳಿ
ಉಂಡು
ಹಾಸಿಗೆ ಹಾಸಿ ಗಿಡ ನೆಟ್ಟೆ.
ನೀರು ಜಳಜಳ ಹರಿಯಿತು.

ಕೊನೆಗೆ ಡಾಕ್ಟರು ಅಂದರು
ನಿಮ್ಮ ಹೊಳೆ ಬಸುರಿ

-೩-

ಹಸಿರು ಹುಲ್ಲು ಕರಡು ಗಾದಿ
ಅಬ್ಬಿ ಜಾರಿಕೆ ಹೊಳೆ

ಒಲೆಯ ಬಿಸಿಲು
ವಸ್ತ್ರ ಒಣಗಲು ಹೊಗೆ

ಖೊ ಖೊ ಖೊ ಕೆಮ್ಮು
ಕರಟದಲ್ಲಿ ರಾತ್ರಿಯ ಕಫ

ಅಮ್ಮ ಸಾಯುವಾಗ ಮೂವತ್ತೆಂಟು ವರ್ಷ.

ಇಂದು
ಹೊಸ ಮನೆಯಲ್ಲಿ ಶ್ರಾದ್ಧ.

 

ಉತ್ತರಕನ್ನಡದ ಯಲ್ಲಾಪುರದ ಗುರುಗಣೇಶ ಭಟ್ ಡಬ್ಗುಳಿ,
ಸದ್ಯ ಉಜಿರೆಯ ಎಸ್ ಡಿ ಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿ.
ಓದು ಮತ್ತು ಬರವಣಿಗೆಯಲ್ಲಿ ಆಸಕ್ತಿ.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)