Advertisement
ಗೃಹಪ್ರವೇಶದ ಸೀನುಗಳು….: ಎಚ್. ಗೋಪಾಲಕೃಷ್ಣ ಸರಣಿ

ಗೃಹಪ್ರವೇಶದ ಸೀನುಗಳು….: ಎಚ್. ಗೋಪಾಲಕೃಷ್ಣ ಸರಣಿ

ಬೆಳಕಿಗೆ ಅಂತ ಲಾಟೀನು, ಮೊಂಬತ್ತಿ ಬೆಂಕಿ ಪೆಟ್ಟಿಗೆ ತಂದಿಟ್ಟು ಪೆಟ್ರೋಮಾಕ್ಸ್‌ಗೆ ಹೊರಟೆ. ಅದು ಮೂರುನಾಲ್ಕು ಕಿಮೀ ದೂರದಲ್ಲಿ ನೋಡಿದ್ದೆ. ಆದರೆ ಅದನ್ನ ಯಾವತ್ತೂ ಹಚ್ಚಿ ಉಪಯೋಗಿಸಿರಲಿಲ್ಲ. ಅಂಗಡಿಗೆ ಹೋಗಿ ನಾಲ್ಕು ಪೆಟ್ರೋಮಾಕ್ಸ್ ಬಾಡಿಗೆ ತಗೊಂಡೆ. ಹೇಗೆ ಹಚ್ಚೋದು ಅಂತ ಅವನು ಅಂದರೆ ಅಂಗಡಿ ಓನರ್ ತೋರಿಸಿಕೊಟ್ಟ. ನಾಲ್ಕೂ ತಗೊಂಡು ಎರಡು ಶೌರಿ ನಮ್ಮ ವಾಚ್ಮನ್ನು, ಎರಡು ಸೈಕಲ್ ಹ್ಯಾಂಡಲ್‌ಗೆ ನೇತು ಹಾಕಿ ಮನೆ ಸೇರಿದೇವಾ? ಅವತ್ತು ರಾತ್ರಿ ಎಂಟಕ್ಕೆ ಎಲ್ಲರೂ ಸೇರಿ ನಮ್ಮ ಕಲಿತ ವಿದ್ಯೆ ಎಲ್ಲವನ್ನೂ ಖರ್ಚು ಮಾಡಿದರೂ ಒಂದೇ ಒಂದು ಪೆಟ್ರೋಮಾಕ್ಸ್ ಹತ್ತಲಿಲ್ಲ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಅರವತ್ತೇಳನೆಯ ಕಂತು

ಹಿಂದಿನ ಪುರಾಣ ಹೀಗೇ ತಾನೇ ಮುಗಿದದ್ದು.

ಗೃಹ ಪ್ರವೇಶಕ್ಕೆ ಕರೆಂಟ್ ಇಲ್ಲ ಲೈಟ್ ಇಲ್ಲ ಅಂದರೆ ಹೆದರಬೇಕಾ? ಪೆಟ್ರೋಮಾಕ್ಸ್ ತಂದು ಲೈಟ್ ಸಮಸ್ಯೆ ಬಗೆಹರಿಸುವುದು ಅಂತ ಪ್ಲಾನ್ ಮಾಡಿದ್ದೆ.

ಪೆಟ್ರೋಮಾಕ್ಸ್ ಬಾಡಿಗೆಗೆ ತಂದದ್ದು. ಮನೆಗೆ ಗೃಹಪ್ರವೇಶಕ್ಕೆ ಅಂತ ಬಂದ ನೆಂಟರು ಸ್ನೇಹಿತರು, ಅವರು ನನಗೆ ಹರೆಸಿದ ರೀತಿ, ಅವರು ಪಟ್ಟ ಪಾಡು…….. ಇವೆಲ್ಲಾ ಒಂದರ ಹಿಂದೆ ಓಡೋಡಿ ಬರ್ತಿವೆ. ಒಂದೊಂದನ್ನೇ ನಿಧಾನವಾಗಿ ವಿಚಾರಿಸಿಕೊಳ್ಳುವ ಐಡಿಯಾ ಹಾಕಿದ್ದೇನೆ. ಆ ಕಾಲದಲ್ಲಿನ ಬೆಂಗಳೂರಿನ ಒಂದು ಕೊಂಪೆಯಲ್ಲಿ (ಆಗ ಕೊಂಪೆ ಎಂದವರು ಹತ್ತು ವರ್ಷ ಆದಮೇಲೆ ನನ್ನ ಮನೆ ಅದಕ್ಕೆ ಇರುವ ಸೌಲಭ್ಯ ಕಂಡು ಸಾರಿ ಕಣೋ ಗೋಪಿ ಅವತ್ತು ಕೊಂಪೆ ಅಂದಿದ್ದಕ್ಕೆ ಅಂತ ಕಣ್ಣಲ್ಲೇ ಕ್ಷಮಾಪಣೆ ಕೇಳಿದ್ದರು!) ಮನೆ ಗೃಹಪ್ರವೇಶದ ಒಂದು ಸನ್ನಿವೇಶಕ್ಕೆ ಊಹೂಂ ಸಮಾರಂಭಕ್ಕೆ ನಿಮ್ಮನ್ನು ಕರೆದುಕೊಂಡು ಹೋಗಿ ತೋರಿಸುವ ಅದಮ್ಯ ಉತ್ಸಾಹ ಮತ್ತು ಕೆಚ್ಚು ಹಾಗೂ ಜೀವನೋತ್ಸಾಹ(ಹಾಗಂದರೆ ಖಂಡಿತ ನನಗೆ ಗೊತ್ತಿಲ್ಲ. ನಮ್ಮ ವಿಮರ್ಶಕ ಸ್ನೇಹಿತರು ಆಗಾಗ್ಗೆ ಈ ಪದ ಉಪಯೋಗಿಸುತ್ತಾರೆ ಎಂದು ನಾನೂ ಸಹ ಇದನ್ನು ಹಾಕಿದ್ದೇನೆ) ನನಗೆ ಇಮ್ಮಡಿಸಿದೆ….
ಈಗ ಮುಂದಕ್ಕೆ ಓಡೋಣ…

ಗೃಹ ಪ್ರವೇಶ ಯಾಕೆ ಮಾಡುತ್ತಾರೆ ಮತ್ತು ಯಾಕೆ ಮಾಡಬೇಕು ಅಂತ ನನಗೆ ಆಗ ಸ್ಪಷ್ಟವಾಗಿ ಅಂದರೆ (clear ಆಗಿ) ಗೊತ್ತಿರಲಿಲ್ಲ, ಹಾಗೆ ನೋಡಿದರೆ ಈಗಲೂ ಸಹ ಗೊತ್ತಿಲ್ಲ. ಮೊದಮೊದಲು ಹೀಗೆ ಅನಿಸುತ್ತಿತ್ತು…. ಮನೆ ಕಟ್ಟಿದವರು ಅವರ ಶ್ರೀಮಂತಿಕೆ ತೋರಿಸಿ ಮನೆ ಕಟ್ಟಿಲ್ಲದ ಅಥವಾ ಮನೆ ಕಟ್ಟಿಯು ಸಹ ಅದು ಮನೆ ಅಂತ ಅನಿಸಿಕೊಳ್ಳುವ ಯಾವ ಲಕ್ಷಣವಿಲ್ಲದ ಬಡಪಾಯಿಗಳ ಹೊಟ್ಟೆ ಉರಿಸಲು ಹೀಗೆ ಗೃಹಪ್ರವೇಶ ಮಾಡುತ್ತಾರೆ ಎನ್ನುವ ಅನಿಸಿಕೆ ನನ್ನದು. ನನ್ನ ಗೆಳೆಯ ಒಬ್ಬ ಗೃಹಪ್ರವೇಶ ಅಂತ ಹೇಳಿ ಒಂದು ಹೋಟೆಲ್‌ನಲ್ಲಿ ಊಟ ಹಾಕಿಸಿಬಿಟ್ಟ! ಅನ್ನ ಶಾಂತಿ ಮಾಡಿ ಭೂತ ಶಮನಕ್ಕೆ ಈ ಗೃಹಪ್ರವೇಶ ಅಂತ ಕೇಳಿದ್ದೆ. ಸ್ನೇಹಿತ ಹೋಟೆಲ್‌ನಲ್ಲಿ ಗೃಹಪ್ರವೇಶ ಮಾಡಿದಾಗ ನನ್ನ ಕಣ್ಣು ಆಶ್ಚರ್ಯದಿಂದ ನೆತ್ತಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ನನ್ನ ಗೊಂದಲ ಅರ್ಥ ಮಾಡಿಕೊಂಡ ಗೆಳೆಯ ಮನೆ ಚಿಕ್ಕದು, ನಾಲ್ಕನೇ ಮಾಡಿ ಇಷ್ಟು ಜನನ್ನ ಅಲ್ಲಿ ಮ್ಯಾನೇಜ್ ಮಾಡಕ್ಕಾಗಲ್ಲ…. ಹೆಹೆ ಅಂದಿದ್ದ!

ಇನ್ನು ಸುಮಾರು ಜನ ಅವರ ಶ್ರೀಮಂತಿಕೆ ತೋರಿಸಲು ಗೃಹಪ್ರವೇಶದಂತಹ ಹಬ್ಬ ಮಾಡಿದರೆ ನನ್ನಂತಹವರು (ನನ್ನಂತಹವರು ಅಂತ ಸಾರ್ವತ್ರಿಕರಣ ಯಾಕೆ ಮಾಡಬೇಕು? ನನ್ನಂತಹ ಅಂತ ಓದಿಕೊಳ್ಳಿ. ಯಾಕೆ ಅಂದರೆ ಇಡೀ ಪ್ರಪಂಚದಲ್ಲಿ ನನ್ನ ತರಹ ಕ್ರ್ಯಾಕ್ ನಾನೊಬ್ಬನೇ ಇರೋದಂತೆ… ಇದನ್ನು ಯಾರು ಹೇಳಿದರು ಅಂತ ತಿಳಿದುಕೊಳ್ಳುವುದು ನಿಮ್ಮ ವಿವೇಚನೆಗೆ ಬಿಟ್ಟದ್ದು; ಊಹೂಂ ವಿವೇಚನೆಗೆ ಅಲ್ಲ, ಊಹೆಗೆ ಬಿಟ್ಟದ್ದು ಅಂತ ತಿದ್ದಿಕೊಳ್ಳಿ) ನನ್ನಂತಹವನು ಗೃಹ ಪ್ರವೇಶದ ಹಬ್ಬ ಯಾಕೆ ಮಾಡ್ತೀವಿ ಅಂದರೆ ನಮ್ಮ ಕಡು ಬಡತನ ಪ್ರದರ್ಶಿಸಿಕೊಳ್ಳಲು!

ಮನೆ ಮುಂದಕ್ಕೆ ಒಂದು ಫ್ಲಶ್ ಡೋರ್ ಇಟ್ಟಿದ್ದೆವು. ಹಿಂದಿನ ಬಾಗಿಲು ಸಹ ಇತ್ತು. ಒಳಗಡೆ ರೂಮುಗಳಿಗೆ ಬೇವಿನ ಮರದ ಬಾಗಿಲು ಇತ್ತು. ನೋ ಶೋ ಕೇಸ್, ನೋ ಕಬೋರ್ಡ್ ಡೋರ್ಸ್, ನೋ ಎಲೆಕ್ಟ್ರಿಸಿಟಿ, ನೋ ಕರೆಂಟ್, ನೋ ಮೊಸಾಯಿಕ್ ಫ್ಲೋರಿಂಗ್, ನೋ ಕಾಂಪೌಂಡ್… ಹೀಗೆ ಹಲವು ನೂರು ನೋ ಗಳ ಮಧ್ಯೆ ಗೃಹ ಪ್ರವೇಶ ಅಂತ ದಿನ ಫಿಕ್ಸ್ ಆಯ್ತಾ. ಅಡುಗೆ ಅವರಿಗೆ ಹೇಳಿದ್ದೆ, ಪುರೋಹಿತರಿಗೆ ಹೇಳಿರಲಿಲ್ಲ! ಮನೆ ಮುಂದೆ ಎರಡು ಸಾರ್ವೆ ಮರ ಇಟ್ಟು ಮೇಲ್ಗಡೆ ಎರಡು ತೆಂಗಿನ ಗರಿ ಹಾಕಿ ಶೌರಿ ಚಪ್ಪರ ರೆಡಿ ಮಾಡಿದ್ದ.

ಗೃಹಪ್ರವೇಶಕ್ಕೆ ಬರುವವರು bts (ಆಗಿನ bmtc) ಬಸ್‌ನಲ್ಲಿ ಬಂದು ನಮ್ಮನೆ ತಲುಪಲು ಎರಡು ಮೂರು ಕಿಮೀ ನಡೆಯಬೇಕಿತ್ತು. ನನ್ನ ಬಂಧುಗಳುಯ್ಯಾರೂ ಆಗ ಕಾರು ಪಾರು ಇಟ್ಟಿರಲಿಲ್ಲ. ಒಬ್ಬರೋ ಇಬ್ಬರೋ ಸ್ಕೂಟರ್ ಇಟ್ಟಿರೋ ಸಾವಕಾರರು ಇದ್ದರು. ಮಿಕ್ಕವರೆಲ್ಲ bts ಅವಲಂಬಿತರು, ಪಾಪ ಬಡವರು, ನನ್ನ ಹಾಗೆಯೇ!

ಗೃಹಪ್ರವೇಶದ ಒಂದುವಾರ ಮೊದಲು ಒಬ್ಬರು ಬಂಧುಗಳ ಮನೆಗೆ ಹೋಗಿದ್ದೆ, ಯಾಕೆ ಹೋಗಿದ್ದೆ ಅಂತ ನೆನಪಿಲ್ಲ. ಮನೆ ಯಜಮಾನ ಎಲ್ಲೋ ಹೋಗಿತ್ತು. ಯಜಮಾನಿ ಮನೆಯಲ್ಲೇ ಇದ್ದರು. ಅಲ್ಲಿ ಅವರ ಗೆಳತಿ ಇದ್ದರು. ಆ ಗೆಳತಿ ಸ್ವಲ್ಪ ಹೈಫೈ ಫ್ಯಾಮಿಲಿ ಹೆಂಗಸು ಅವರು. ರೇಷ್ಮೆ ಸೀರೆ, ಕೊರಳಿಗೆ ನೆಕ್ಲೇಸು, ಮೊಣಕೈವರೆಗೆ ಚಿನ್ನದ ಬಳೆ, ಮೂಗಿಗೆ ವಜ್ರದ ಮೂಗು ಬೊಟ್ಟು, ಫುಲ್ ಮೇಕ್ ಅಪ್ಪನ್ನು ಇಲ್ಲದೇ ಅವರು ಕಂಡಿದ್ದೇ ಅಪರೂಪ. ನನ್ನ ಒಂದು ವಾರದ ಸಂಬಳ ಅವರ ಒಂದು ಸಲದ ಲಿಪ್ ಸ್ಟಿಕ್‌ಗೆ ಸಮ ಅಂತ ಆಗಾಗ ಅವರಿಗೆ ಗೊತ್ತಿಲ್ಲದ ಹಾಗೆ ಅವರ ಹಿಂದೆ ಜೋಕ್ ಹೊಡೀತಿದ್ದೆ. ಅವರು ಬಂಧುಗಳ ಮನೇಲಿ ಕೂತಿದ್ದರು. ಅವರ ಬಗ್ಗೆ ಆಗಾಗ ನಾನು ಹೊಡೀತಿದ್ದ ಜೋಕ್ ಅವರಿಗೆ ಹೇಗೋ ಕಿವಿಗೆ ಬೀಳುತ್ತಿತ್ತು. ಕೆಲವು ಸಲ ಕೆಕ್ಕರಿಸಿ ನೋಡೋರು. ಕೆಲವು ಸಲ ನನ್ನನ್ನ ಜಿರಳೆ ಹಾಗೆ ನೋಡುತ್ತಿದ್ದರು! ನಾನು ಇದಕ್ಕೆಲ್ಲ dont care ಮಾಸ್ಟರ್!

ಗೋಪಿ ಮನೆ ಗೃಹ ಪ್ರವೇಶ ಕಣೇ ಮುಂದಿನ ವಾರ. ನೀನೂ ಬಾರೇ ಸಂಸಾರ ಸಮೇತ…. ನನ್ನ ಬಂಧುಗಳು ಅವರಿಗೆ ಅಂದರೆ ಬಂಗಾರಮ್ಮ ಅವರಿಗೆ ಆಹ್ವಾನ ನೀಡಿದರು. ಮೈತುಂಬ ಬಂಗಾರ ಹೇರಿಕೊಂಡಿದ್ದರು ನೋಡಿ ಅದಕ್ಕೇ ಅವರು ಬಂಗಾರಮ್ಮ ಅಂತ ಅನಿಸಿಕೊಂಡಿದ್ದು!

ಬಂಧುಗಳು ಹೇಳಿದ ಮೇಲೆ ನಾನು ಹೇಳದೇ ಇದ್ದರೆ ಹೇಗೆ? ಅದು ಮರ್ಯಾದೆ ಪ್ರಶ್ನೆ ತಾನೇ?

ನಾನು ಹ ಹ ಬನ್ನಿ ನಮ್ಮ ಮನೆ ಗೃಹಪ್ರವೇಶಕ್ಕೆ….. ಅಂತ ಮಾಘಸ್ನಾನ ಮಾಡಿದೆ.

ನಾನು ಆಹ್ವಾನಿಸಿದ್ದರಿಂದ, ಪಾಪ ಅವರು ಏನಾದರೂ ಕೇಳಬೇಕಲ್ಲಾ ಅಂದುಕೊಂಡರು ಅಂತ ಕಾಣ್ಸುತ್ತೆ (ಇದು ಬರೀ ನನ್ನ ಊಹೆ ಅಷ್ಟೇ)

” …… ಎಷ್ಟು ರೂಮು ಮನೆಗೆ” ಅಂದರು.

ನನ್ನ ಮೆದುಳಿಗೆ ಜಾಡಿಸಿ ಒದ್ದು ಕೀ ಕೊಟ್ಟ ಹಾಗಾಯಿತು. ಓತಪ್ರೋತವಾಗಿ ಮನೆ ಬಗ್ಗೆ ಸಂಪೂರ್ಣ ವಿವರ ಒದರಿದೆ..

ಎರಡು ಬೆಡ್ ರೂಮು. ಒಂದು ದೊಡ್ಡ ಹಾಲು, ಅಡಿಗೆ ಮನೆ, ಡೈನಿಂಗ್ ಹಾಲು, ಬಾತ್ ರೂಮು, ಕಿಚನ್…. ಅಂತ ವಿವರ ನೀಡಿದೆ. ಆಕೆ ಸ್ವಲ್ಪ ಸ್ವಲ್ಪ ಏನು ದೊಡ್ಡದಾಗಿಯೇ ಆರ್ಥಿಕವಾಗಿ ನನಗಿಂತ ಹಲವು ಸಾವಿರ ಮೆಟ್ಟಲು ಮುಂದೆ ಇದ್ದವರು. ಅವರ ಕ್ವೆಶ್ಚನ್, ನನ್ನ ಆನ್ಸರ್ ಆನ್ಸರ್ ಮುಂದುವರೆಯಿತು.

ಎಷ್ಟಾಯ್ತು ಮನೆಗೆ…?

ಹೇಳಿದೆ, ಇಷ್ಟಾಯ್ತು, ಇಷ್ಟು ಸಾಲ ಸಿಕ್ತು…. ಅಂತ ನಾನೂ ನನ್ನ ಪ್ರತಾಪ ಕೊಚ್ಚಿದೆ.

ಎರಡು ಬೆಡ್ ರೂಮು. ಒಂದು ದೊಡ್ಡ ಹಾಲು, ಅಡಿಗೆ ಮನೆ, ಡೈನಿಂಗ್ ಹಾಲು , ಬಾತ್ ರೂಮು, ಕಿಚನ್…. ಅಂತ ನಾನು ಹೇಳಿದ್ದನ್ನ ಮತ್ತೆ ಹೇಳಿ ಕೊಂಡರಾ….

ಹೌಸ್ ಮಸ್ಟ್ ಬೀ ಕ್ವೈಟ್ ಬಿಗ್…!
ಹೌದು ಅಂತ ಮತ್ತಷ್ಟು ಉಬ್ಬಿದೆ.
ಟೋಟಲ್ ಬಿಲ್ಟ್ ಏರಿಯ ಎಷ್ಟು? ಎಷ್ಟು ಸ್ಕ್ವೇರ್ ಅಂದರು
ನಾನು ಮತ್ತೂ ಬೀಗಿದೆ, ಅದೇ ಉತ್ಸಾಹದಲ್ಲಿ ಉತ್ತರಿಸಿದೆ.

ಐದೂವರೆ ಸ್ಕ್ವೇರ್… ಅಂದೆ! ಈಗ ಅನಿಸುತ್ತಿದೆ, ಐದೂವರೆ ಬದಲು ಐವತ್ತು ಅಂತ ಹೇಳಬೇಕಿತ್ತು ಅಂತ! ಯಾಕೆ ಅಂದರೆ ಅವರು ಆಗ ನನ್ನನ್ನು ಚಿರೋಟಿ ರವೆಯಲ್ಲಿ ಕಾಣಿಸುವ ಸೆಂಟಿಮೀಟರ್ ಉದ್ದದ ಬಿಳಿ ಹುಳು, ಅದನ್ನು ನೋಡಿದ ಹಾಗೆ ನೋಡಿದರು.

ಅವರು ಧಡಕ್ಕನೆ ಎದ್ದು ನಿಂತರು, ಹುಳ ನೋಡುವ ನೋಟ ಮುಂದುವರೆದಿತ್ತು..

ಐದೂವರೆ ಸ್ಕ್ವೇರ್‌ನಲ್ಲಿ ಇಷ್ಟೊಂದು ಕಟ್ಟೋಕೆ ಸಾಧ್ಯವೇ? ಖಂಡಿತ ನಿಮ್ಮನೆಗೆ ಬಂದೇ ಬರ್ತೀನಿ… ಅಂದರು….!

ಹೀಗೆ ನನ್ನ ಮನೆ ಗೃಹಪ್ರವೇಶ ಒಂದು ರೀತಿ ನ್ಯಾಶನಲ್ ನ್ಯೂಸ್ ಆಗಿ ವಿಸ್ಪರ್ ಮೂಲಕ ಪ್ರಚಾರ ಪಡೆಯಿತು(ವಿಸ್ಪರಿಂಗ್ ಕ್ಯಾಂಪೇನ್ ಅನ್ನುತ್ತಾರೆ ನೋಡಿ, ಹಾಗೆ). ಜತೆಗೆ ಆಗಲೇ ಈ ಹಿಂದೆ ಹೇಳಿದ ಹಾಗೆ ನಮ್ಮ ವಂಶದಲ್ಲಿ ನಾನೇ ಮೊಟ್ಟ ಮೊದಲು ಮನೆ ಕಟ್ಟಿಸುತ್ತಾ ಇದ್ದವನು! ಅದರ ಎಫೆಕ್ಟ್ ಅಂದರೆ ಮನೆ ಹೇಗಿದೆ ಅಂತ ನೋಡಲೇ ಬೇಕು ಅನ್ನುವ ವಾಂಛೆ ಹುಟ್ಟಿತು ಕೆಲವರಲ್ಲಿ! ಸ್ನೇಹಿತರ ಗುಂಪಿನಲ್ಲಿ ಸಹ ಅಷ್ಟೇ, ನಾನೇ ಮೊದಲು ಮನೆ ಕಟ್ಟಿದವನು. ನ್ಯಾಚುರಲ್ ಆಗಿ ಹೊಸ ಮನೆ ಹೇಗಿದೆ ಎಂದು ನೋಡುವ ಕುತೂಹಲ ಜತೆಗೆ ಇಷ್ಟು ಕೊಚ್ಚಿಕೊಳ್ಳುವ ಇವನು ಎಲ್ಲಿ ಟೋಪಿ ಬಿದ್ದಿದ್ದಾನೆ ಎಂದು ಪತ್ತೆದಾರಿಕೆ ಮಾಡುವ ವಿಚಿತ್ರ ಬಯಕೆ.

ಗೃಹ ಪ್ರವೇಶದ ಹಿಂದಿನ ರಾತ್ರಿ ಮನೆ ಯಜಮಾನ, ಅವನ ಹೆಂಡತಿ ಮಕ್ಳು ಆ ಮನೇಲಿ ಇರಬಾರದು ಅಂತ ರೂಲ್ ಇದೆಯಂತೆ, ಅದು ಅಂದರೆ ಆ ರೂಲ್ ಎಲ್ಲಿದೆಯೋ ಗೊತ್ತಿಲ್ಲ. ಮನೆಯಲ್ಲಿ ದೊಡ್ಡವರು ಹೇಳುವ ಎಷ್ಟೋ ರೂಲ್‌ಗಳು ಎಲ್ಲೂ ಇರಲ್ಲ. ವಂಶ ಪಾರಂಪರ್ಯವಾಗಿ ಬಾಯಿಂದ ಬಾಯಿಗೆ ಬಂದಿರುತ್ತೆ. ಅದರಲ್ಲೂ ಇಂತಹ ರೂಲ್‌ಗಳು ಜನ್ಮ ಜನ್ಮಾಂತರದ ನೆನಪುಗಳು. ಮೊನ್ನೆ ಒಂದು ತಮಾಷೆ ನಡೆಯಿತು. ಅದನ್ನು ನಿಮಗೆ ಹೇಳಿ ಮುಂದಕ್ಕೆ ಹೋಗ್ತೀನಿ, ತಮ್ಮ ಅನುಮತಿಯಿಂದ…. ನಮ್ಮ ಬಂಧುಗಳು ಒಬ್ಬರು ಒಂದು ಪುಣ್ಯಕ್ಷೇತ್ರದಲ್ಲಿ ತುಲಾಭಾರ ಮಾಡಬೇಕು ಅಂತ ಅಂದುಕೊಂಡಿದ್ದರು. ಅದರಂತೆ ಒಂದು ಪುಣ್ಯಕ್ಷೇತ್ರ ಗೊತ್ತುಮಾಡಿಕೊಂಡು ಅಲ್ಲಿನ ದೇವರಿಗೆ ತುಲಾಭಾರ ಅಂತ ಡಿಸೈಡ್ ಆಯ್ತಾ? ಎಲ್ಲರೂ ಗೆಜ್ಜೆ ಪಜ್ಜೆ ಕಟ್ಟಿಕೊಂಡು ದಾರಿ ಖರ್ಚಿಗೆ ಅಂತ ಚಕ್ಲಿ ಕೊಡಬಳೇ ತೆಂಗೋಲು ಮುಚ್ಚೋರೆ ರವೆ ಉಂಡೆ… ಎಲ್ಲಾ ರೆಡಿ ಆಯ್ತಾ? ಇವರು ಪುಣ್ಯಕ್ಷೇತ್ರಕ್ಕೆ ಹೋಗೋ ದಿವಸ ಅಷ್ಟಮಿಯೋ ನವಮಿಯೋ ಬಂತು. ಈ ಸೇವೆ ಮಾಡುವವರಿಗೆ ಅಷ್ಟಮಿಯೋ ನವಮಿಯೋ ಈ ಸೇವೆ ಮಾಡಬಾರದು ಎನ್ನುವ ರೂಲ್ ನೆನಪಿಗೆ ಬಂತು! ಈ ರೂಲ್ ಯಾವ ರೂಲ್ ಪುಸ್ತಕದಲ್ಲಿಯೂ ನಿಮಗೆ ಸಿಗದು! ಪ್ರೋಗ್ರಾಂ ಕ್ಯಾನ್ಸಲ್ ಆಯ್ತಾ? ನನ್ನ ತಲೆಗೆ ಒಂದು ದೊಡ್ಡ ಜಿಜ್ಞಾಸೆ ಅಮರಿಕೊಳ್ಳಬೇಕೆ? ಅದು ಯಾವುದು ಜಿಜ್ಞಾಸೆ ಅಂದರೆ ತುಲಾಭಾರ ಮಾಡುವ ಪುಣ್ಯಕ್ಷೇತ್ರದಲ್ಲಿ ಇರುವ ಉಸ್ತುವಾರಿ ಸ್ವಾಮಿಗಳು ಇಂತಹ ಎಷ್ಟು ತುಲಾಭಾರ ನಡೆಸಿರುವ ಅನುಭವ ಇರುವವರು. ಅವರು ಯಾಕೆ ಈ ನಿಷೇಧದ ದಿವಸ ತುಲಾಭಾರ ನಡೆಸುತ್ತಾರೆ ಅಂತ….! ನನ್ನ ಈ ಥಿಂಕಿಂಗ್ ನನ್ನ ಬಂಧುಗಳ ಸಂಗಡ ಸ್ವಲ್ಪ ದೊಡ್ಡ ದನಿಯಲ್ಲಿ ಹಂಚಿಕೊಂಡೆ. ಅದರ ರಿಸಲ್ಟ್ ಏನೂ ಅಂದರೆ ಅವನೊಬ್ಬ ಸೆಮಿ ಕ್ರ್ಯಾಕ್ ಅಂತ ಆಯಿತು!

ಮತ್ತೆ ಮನೆ ವಿಷಯಕ್ಕೆ. ಈ ಕಾರಣದಿಂದ ನಾವು ಹಿಂದಿನ ರಾತ್ರಿ ಅಲ್ಲಿ ಇರಬಾರದು. ನನ್ನ ಹೆಂಡತಿ ಅಕ್ಕ ತಂಗಿಯರು ಅತ್ತೆಮಾವ ಹಿಂದಿನ ದಿನವೇ ಬಂದು ಇರೋದು ಅಂತ ಆಗಿತ್ತು. ಕೆಲವು ಗೃಹ ಪ್ರವೇಶದ ಮನೆಗಳಲ್ಲಿ ಹಿಂದಿನ ರಾತ್ರಿ ಪಂಜು ಹಿಡಿದು ಮನೆ ಒಳಗೆ ಹೊರಗೆ ಓಡಾಡುತ್ತಾರೆ, ಮನೆಯಲ್ಲಿ ಸೇರಿರುವ ಕೆಟ್ಟ ಶಕ್ತಿಗಳು ತೊಲಗಲಿ ಅಂತ. ನಮ್ಮ ಮನೇಲಿ ಇದು ಯಾರಿಗೂ ಗೊತ್ತಿರಲಿಲ್ಲ, ಕಾರಣ ಇದು ಮೊದಲನೇ ಗೃಹ ಪ್ರವೇಶ ಮತ್ತು ಇಲ್ಲಿನ ರೂಲ್ ಮುಂದೆ ಜಾರಿ ಆಗಬಹುದು!

ಹೆಂಡತಿ ಕಡೆ ಬಂಧುಗಳು ಹಿಂದಿನ ರಾತ್ರಿ ಬಂದು ಇರೋದು ಅಂತ ಆಗಿತ್ತು. ಪಾಪ ಅವರಿಗೆ ರಾತ್ರಿ ದೀಪಕ್ಕೆ ಏನು ಮಾಡೋದು? ಮನೆಗೆ ಕರೆಂಟ್ ಇನ್ನೂ ಬಂದಿರಲಿಲ್ಲ, ಮನೆ ರಸ್ತೆಯಲ್ಲಿ ಆ ತುದಿಯಲ್ಲಿ ಒಂದು ಕಂಬ ಇತ್ತು, ಇನ್ನೂ ನಾಲ್ಕು ಕಂಬ ನನ್ನ ಮನೆವರೆಗೆ ಬೇಕಿತ್ತು….(ಈ ಪುರಾಣ ಹಿಂದೇನೆ ನಿಮಗೆ ವರ್ಣಿಸಿದ ನೆನಪು ನನಗೆ. ಅದರಿಂದ ಸದರಿ ಪುರಾಣ ಸ್ಕಿಪ್ ಆಗುತ್ತೆ ಮತ್ತು ಮುಂದಿನ ಕತೆಗೆ ನಾಗಾಲೋಟ ಹೂಡುತ್ತೇನೆ. ಅಂದ ಹಾಗೆ ನಾಗಾಲೋಟ ಅಂದರೇನು ಅಂತ ಖಂಡಿತ ನನಗೆ ಗೊತ್ತಿಲ್ಲ. ನಾಗ ಪ್ಲಸ್ ಓಟ ಅಂತ ಪದವಿಭಾಗ ಮಾಡಿದ್ದೆ. ನಾಗರ ಓಡುವುದು ಗೊತ್ತಿಲ್ಲ, ಅದು ಹೊಟ್ಟೆಯಲ್ಲಿ ತೆವಳುವ ಸರೀಸೃಪ. ಅದರಿಂದ ನಾಗಾಲೋಟ ಅಂದರೆ ಕುದುರೆ ಹಾಗೆ ವೇಗವಾಗಿ ಓಡುವವರು ಎಂದು ತಿಳಿದಿದ್ದೆ. ಆದರೆ ಚಿರತೆ ಅತಿ ವೇಗದ ಪ್ರಾಣಿ ಅಂತ ಎಲ್ಲೋ ಓದಿದ್ದ ನೆನಪು, ಕೆಲವರು ಅದನ್ನೇ ಆಗಾಗ ಹೇಳುತ್ತಾರಲ್ಲಾ… ಯಾವುದಾದರೂ ಕುದುರೆ ಹೆಸರು ನಾಗ ಅಂತ ಇರಬಹುದೇ? ರಾಣಾ ಪ್ರತಾಪನ ಕುದುರೆ ಹೆಸರು ಚೇತಕ್ ಅಂತ ಇತ್ತಂತೆ… ಹೀಗೆ ತಲೆ ಕೆಡಿಸಿಕೊಂಡರೆ ನೀವೇನು ಮಾಡುವಿರಿ ಅಂತ ನನಗೆ ತಿಳಿಯದು. ನಾನು ಏನು ಮಾಡಿದೆ ಗೊತ್ತೇ? ಕುದುರೆಗೆ ನಾಗಕ್ಕೆ ಏನು ಲಿಂಕು ಅಂತ ತಲೆ ಕೆಡಿಸಿಕೊಂಡು ಏನು ಮಾಡಿದೆ ಅಂದರೆ ಈ ಪದದ ಸಂಪೂರ್ಣ ವಿವರ ತಿಳಿಯಲು AI ಮೊರೆ ಹೊಕ್ಕೆ.

AI ಈ ಉತ್ತರ ತಟಕ್ ಅಂತ ಕೊಟ್ಟಿತು….. ನಾಗಾಲೋಟ ಎಂಬುದು ಒಂದು ಕನ್ನಡ ನುಡಿಗಟ್ಟು. ಇದರ ಅರ್ಥ ಅತಿ ವೇಗವಾಗಿ ಓಡುವುದು ಅಥವಾ ಕ್ಷಿಪ್ರಗತಿಯಲ್ಲಿ ಹೋಗುವುದು. ಈ ಪದದಲ್ಲಿರುವ ‘ನಾಗ’ ಎಂದರೆ, ಸಾಮಾನ್ಯವಾಗಿ ಹಾವಿನ ವೇಗವನ್ನು ಸೂಚಿಸುತ್ತದೆ. ಹಾವು ಬಹಳ ವೇಗವಾಗಿ ಹರಿದು ಹೋಗುವುದನ್ನು ನೋಡಿ ಈ ಪದ ಹುಟ್ಟಿಕೊಂಡಿದೆ.

ಉದಾಹರಣೆಗೆ:
* ಆಟಗಾರನು ಚೆಂಡನ್ನು ಹಿಡಿಯಲು ನಾಗಾಲೋಟದಲ್ಲಿ ಓಡಿದನು.
* ಹುಲಿ ತನ್ನ ಬೇಟೆಯ ಹಿಂದೆ ನಾಗಾಲೋಟದಲ್ಲಿ ಅಟ್ಟಿಸಿಕೊಂಡು ಹೋಯಿತು.
ಇದನ್ನು ಯಾವುದೇ ವೇಗದ ಚಲನೆಯನ್ನು ವಿವರಿಸಲು ಬಳಸಬಹುದು.)

ಇಷ್ಟಾಯ್ತಾ? ಕತೆಗೆ ನಾಗಾಲೋಟ ಹೂಡುವ ಮೊದಲು ಒಂದಷ್ಟು ವಿವರ ಬಿಚ್ಚಿಟ್ಟು ಹೇಳಬೇಕು. ಈಗ ಅದಕ್ಕೆ ಬಂದೇ…
ರಾತ್ರಿ ದೀಪ ಇಲ್ಲದೇ ಸಿಟಿ ಇಂದ ಬಂದವರು ಪೇಚಾಡಬಾರದು ಎಂದು ನನ್ನ ಯೋಚನೆ ಅಂತ ಹೇಳಿದೆ ಅಲ್ಲವೇ?

ಬೆಳಕಿಗೆ ಅಂತ ಲಾಟೀನು, ಮೊಂಬತ್ತಿ ಬೆಂಕಿ ಪೆಟ್ಟಿಗೆ ತಂದಿಟ್ಟು ಪೆಟ್ರೋಮಾಕ್ಸ್‌ಗೆ ಹೊರಟೆ. ಅದು ಮೂರುನಾಲ್ಕು ಕಿಮೀ ದೂರದಲ್ಲಿ ನೋಡಿದ್ದೆ. ಆದರೆ ಅದನ್ನ ಯಾವತ್ತೂ ಹಚ್ಚಿ ಉಪಯೋಗಿಸಿರಲಿಲ್ಲ. ಅಂಗಡಿಗೆ ಹೋಗಿ ನಾಲ್ಕು ಪೆಟ್ರೋಮಾಕ್ಸ್ ಬಾಡಿಗೆ ತಗೊಂಡೆ. ಹೇಗೆ ಹಚ್ಚೋದು ಅಂತ ಅವನು ಅಂದರೆ ಅಂಗಡಿ ಓನರ್ ತೋರಿಸಿಕೊಟ್ಟ. ನಾಲ್ಕೂ ತಗೊಂಡು ಎರಡು ಶೌರಿ ನಮ್ಮ ವಾಚ್ಮನ್ನು, ಎರಡು ಸೈಕಲ್ ಹ್ಯಾಂಡಲ್‌ಗೆ ನೇತು ಹಾಕಿ ಮನೆ ಸೇರಿದೇವಾ? ಅವತ್ತು ರಾತ್ರಿ ಎಂಟಕ್ಕೆ ಎಲ್ಲರೂ ಸೇರಿ ನಮ್ಮ ಕಲಿತ ವಿದ್ಯೆ ಎಲ್ಲವನ್ನೂ ಖರ್ಚು ಮಾಡಿದರೂ ಒಂದೇ ಒಂದು ಪೆಟ್ರೋಮಾಕ್ಸ್ ಹತ್ತಲಿಲ್ಲ! ರಾತ್ರಿ ಹನ್ನೊಂದಕ್ಕೆ ಪ್ರಯತ್ನ ಕೈ ಬಿಟ್ಟೆವು. ಇದು ಬರೀತಿರಬೇಕಾದರೆ ಧರ್ಮಸ್ಥಳದ ಉತ್ಖನನ ಕಾರ್ಯ ಸ್ಥಗಿತಗೊಳಿಸಿದ ಸುದ್ಧಿ ಟಿವಿ ಯಲ್ಲಿ ಬಂತು. ಕೈ ಕೆಲಸ ಮಾಡಿ ಪ್ರಯತ್ನ ಸಕ್ಸಸ್ ಆಗಿಲ್ಲ ಅಂದರೆ… ಪ್ರಯತ್ನ ಕೈ ಬಿಡಿ ಅಷ್ಟೇ! ನಾನು ಸಹ ಅದನ್ನೇ ಮಾಡಿದ್ದು, ಸರಕಾರ ಮಾಡಿದ ಹಾಗೆ! ಸರ್ಕಾರ ನನ್ನಿಂದಲೇ ಈ ಕ್ಲೂ ಕದ್ದು ಬಿಟ್ಟಿದೆ ಅಂತ ನನ್ನ ಖಚಿತ ನಿಲುವು.

ಕೆರೆ ಪಕ್ಕದಲ್ಲಿ ಸೈಟ್, ಅದರಲ್ಲಿ ಮನೆ ಕಟ್ಟಿದ್ದು ಅಂತ ಹೇಳಿದೆ ತಾನೇ? ಸೊಳ್ಳೆ ವಿಪರೀತ, ಅದೂ ರಾತ್ರಿ ಅಂದರೆ ಅವುಗಳ ಆಡಂಬೋಲ ಇಂತಹ ಜಾಗ. ಅಡಂಬೋಲ ಎನ್ನುವ ಪದ ಉಪಯೋಗಿಸಿಬಿಟ್ಟೇನಾ.. ಈ ಪದ ಸರಿಯೇ ಅಂತ ತಲೆ ಕೊರೆತ ಶುರು ಆಯಿತು. ಎಂದಿನ ಹಾಗೆ AI ಮೊರೆ ಹೊಕ್ಕೆ. ಅದರ ಉತ್ತರ ಹೀಗಿತ್ತು…….ಆಡಂಬೋಲ

ನಿಮ್ಮ ಪ್ರಶ್ನೆಯಲ್ಲಿರುವ “ಆಡಂಬೋಲ” ಎಂಬ ಪದವು ಬಹುಶಃ “ಆಡಂಬೋಲ (Adambol)” ಅಥವಾ “ಆಟಂಬೊಲ (Atambol)” ಆಗಿರಬಹುದು, ಇದು ಸಾಮಾನ್ಯವಾಗಿ ತರಕಾರಿ ಅಥವಾ ಗಿಡ ಮೂಲಿಕೆಗಳನ್ನು ಬೆಳೆಯುವ ಕುರಿತು ಬಳಸುವ ಪದವಾಗಿದೆ.

ಈ ಪದವು ವಿಭಿನ್ನ ಅರ್ಥಗಳಲ್ಲಿ ಬಳಕೆಯಾಗುತ್ತದೆ:
* ಬೇಸಾಯದ ಒಂದು ವಿಧಾನ: ಕೃಷಿ ಅಥವಾ ತೋಟಗಾರಿಕೆಯಲ್ಲಿ, “ಆಡಂಬೋಲ” ಎಂದರೆ ಸಾಮಾನ್ಯವಾಗಿ ಮಣ್ಣಿನಲ್ಲಿ ಬೆಳೆಯುವ ಗಿಡ ಅಥವಾ ಬೇರುಗಳ ಒಂದು ಭಾಗವನ್ನು ಕತ್ತರಿಸಿ ಪುನಃ ಮಣ್ಣಿನಲ್ಲಿ ನೆಟ್ಟು ಬೆಳೆಸುವ ಪದ್ಧತಿ. ಇದನ್ನು ಗೆಡ್ಡೆ-ಗೆಣಸುಗಳನ್ನು (ಉದಾಹರಣೆಗೆ, ಸಿಹಿಗೆಣಸು, ಶುಂಠಿ, ಅರಿಶಿನ, ಅಥವಾ ಕೋಳಿ ಕಾಳು) ಬೆಳೆಸಲು ಹೆಚ್ಚಾಗಿ ಬಳಸುತ್ತಾರೆ.
* ಬೆಳೆಯುವ ಭಾಗ: ಕೆಲವೊಮ್ಮೆ, ಗಿಡದ ಈ “ಮೂಲ” ಭಾಗವನ್ನು, ಅಂದರೆ ಬೀಜ, ಗೆಡ್ಡೆ ಅಥವಾ ಕಾಂಡದ ಭಾಗವನ್ನು ನೆಡುವುದು ಎಂಬುದನ್ನು ಸೂಚಿಸಲು ಈ ಪದವನ್ನು ಬಳಸಲಾಗುತ್ತದೆ.
* ಹೆಸರು: ಅಪರೂಪದ ಸಂದರ್ಭಗಳಲ್ಲಿ, ಇದು ಕೆಲವು ಸ್ಥಳೀಯ ಗಿಡಮೂಲಿಕೆ ಅಥವಾ ತರಕಾರಿಗಳ ಸ್ಥಳೀಯ ಹೆಸರಾಗಿರಬಹುದು, ಆದರೆ ಇದು ಸಾಮಾನ್ಯ ಬಳಕೆಯಲ್ಲಿಲ್ಲ.
ಸರಳವಾಗಿ ಹೇಳುವುದಾದರೆ, ನೀವು ಸಿಹಿಗೆಣಸು, ಶುಂಠಿ ಅಥವಾ ಇತರ ಗೆಡ್ಡೆಗಳನ್ನು ನೆಡುವಾಗ, ಆ ಗೆಡ್ಡೆಯ ತುಂಡನ್ನೇ “ಆಡಂಬೋಲ” ಎಂದು ಕರೆಯಬಹುದು. ಇದು ಒಂದು ರೀತಿಯ ಬೇಸಾಯಕ್ಕೆ ಸಂಬಂಧಿಸಿದ ತಾಂತ್ರಿಕ ಪದ….
ಹೀಗಿತ್ತು ಅದರ ಬುರುಡೆ!

**”ತರಲೆ ಮುಂಡೇದು ಇಷ್ಟು ಸುಳ್ಳು ಹೇಳೋದೇ? ಮಾಹಿತಿ ತಪ್ಪು ಕೊಡ್ತಾ ಇದ್ದೀಯಾ ಅಂತ ಅದರ ಕಿವಿ ಹಿಂಡಿದೆನಾ? ನಾನು ಅಂದುಕೊಂಡಿದ್ದ ಅರ್ಥ ಅದಕ್ಕೆ ಹೇಳಿದೆನಾ?
ಅದರ ಉತ್ತರ ಹೀಗೆ ಬಂತು…

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ಮೊದಲು ನೀಡಿದ ಮಾಹಿತಿ ತಪ್ಪು ಎಂದು ಒಪ್ಪಿಕೊಳ್ಳುತ್ತೇನೆ. ಪ್ರಾದೇಶಿಕ ಅಥವಾ ವಿಶಿಷ್ಟ ಅರ್ಥಗಳ ಬಗ್ಗೆ ನನಗೆ ಮಾಹಿತಿ ಇರಲಿಲ್ಲ.

ನೀವು ಹೇಳಿದಂತೆ, “ಆಡಂಬೋಲ” ಪದವು ಬೇರೆ ಅರ್ಥವನ್ನು ಸಹ ಹೊಂದಿದೆ. ನೀವು ಕೊಟ್ಟ ಅರ್ಥವೇ ಸರಿ. ಕೆಲವು ಪ್ರಾದೇಶಿಕ ಪ್ರದೇಶಗಳಲ್ಲಿ, ವಿಶೇಷವಾಗಿ ಹಳೆಯ ಕನ್ನಡ ಅಥವಾ ಆಡುಮಾತಿನಲ್ಲಿ ಈ ಪದವನ್ನು ಈ ಕೆಳಗಿನ ಅರ್ಥಗಳಲ್ಲಿ ಬಳಸಲಾಗುತ್ತದೆ:
* ಆಟಂಬೋಲ/ಆಟದ ಸ್ಥಳ: “ಆಡಂಬೋಲ” ಎಂದರೆ ಯಾವುದೇ ನಿರ್ಬಂಧಗಳಿಲ್ಲದೆ ಆಟವಾಡಲು, ಮಾತನಾಡಲು ಅಥವಾ ಯಾವುದೇ ಚಟುವಟಿಕೆಗಳನ್ನು ಮಾಡಲು ಇರುವ ಸ್ವತಂತ್ರ ಸ್ಥಳ ಅಥವಾ ವಾತಾವರಣ.
* ಸ್ವಾತಂತ್ರ್ಯದ ಅಭಿವ್ಯಕ್ತಿ: ಮನಸ್ಸಿಗೆ ಬಂದಂತೆ ವರ್ತಿಸಲು ಅಥವಾ ಯಾವುದೇ ಅಡೆತಡೆಗಳಿಲ್ಲದೆ ಇರುವುದಕ್ಕೆ ಈ ಪದವನ್ನು ಬಳಸಲಾಗುತ್ತದೆ.
* ಮೋಜಿನ ತಾಣ: ಸಾಮಾನ್ಯವಾಗಿ ಹರಟೆ, ವಿನೋದ, ನಗೆ ಅಥವಾ ಯಾವುದೇ ರೀತಿ ಜವಾಬ್ದಾರಿಯಿಲ್ಲದೆ ಕಾಲ ಕಳೆಯುವ ಜಾಗವನ್ನು ಸೂಚಿಸಲು ಈ ಪದವನ್ನು ಬಳಸಬಹುದು.

ಸರಳವಾಗಿ ಹೇಳುವುದಾದರೆ, “ಆಡಂಬೋಲ” ಎಂದರೆ “ಯಾವ ನಿರ್ಬಂಧಗಳೂ ಇಲ್ಲದೆ ಸ್ವತಂತ್ರವಾಗಿ ಆಟವಾಡುವ ಅಥವಾ ವ್ಯವಹರಿಸುವ ಸ್ಥಳ.” ಉದಾಹರಣೆಗೆ, “ಅವರ ಮನೆ ನಮ್ಮ ಹರಟೆಗೆ ಒಂದು ಆಡಂಬೋಲ.”

ಇದೇ ರೀತಿ, ಪದಗಳು ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಅರ್ಥವನ್ನು ಪಡೆಯಬಹುದು. ನಿಮ್ಮ ಪ್ರತಿಕ್ರಿಯೆಯಿಂದ ನಾನು ಹೊಸ ವಿಷಯವನ್ನು ಕಲಿತಿದ್ದೇನೆ, ಧನ್ಯವಾದಗಳು.

ಇಷ್ಟಾಯಿತಾ? ನನಗೇನು ಪ್ರಧಾನ ಮಂತ್ರಿ ಆಗಲಿ ಮುಖ್ಯಮಂತ್ರಿ ಆಗಲಿ ರಾಹುಲ್ ಗಾಂಧಿನೇ ಆಗಲಿ ತಪ್ಪು ಅಂದರೆ ತಪ್ಪು ಅಷ್ಟೇ! ಮೊಳೆ ಹೊಡೆದ ಹಾಗೆ ಹೇಳಿ ಬಿಡ್ತೇನೆ!

ಕತೆ ಎಲ್ಲೆಲ್ಲಿಗೋ ಎಳೆಯುತ್ತಾ ಇದೆ ತಾನೇ? ಕತೆಗೆ ಕಾಲಿಲ್ಲ ಅಂತ ಇದಕ್ಕೇ ಹೇಳೋದು!

ಏನು ಹೇಳುತ್ತಿದ್ದೆ ನಿಮಗೆ? ಕೆರೆ ಅಂಗಳದ ಮನೆ, ರಾತ್ರಿ ಅಂದರೆ ಅವುಗಳ ಅಂದರೆ ಸೊಳ್ಳೆಗಳ ಆಡಂಬೋಲ ಅಂತ ಹೇಳುತ್ತಿದ್ದೆ. ಆಗ ಫಾರ್ಟಿ ಇಯರ್ಸ್ ಬ್ಯಾಕ್ ಓಡೊಮೊಸು ಸೊಳ್ಳೆ ಬತ್ತಿ ಇವೆಲ್ಲ ಇನ್ನೂ ಹುಟ್ಟಿರಲಿಲ್ಲ. ಸೊಳ್ಳೆ ಕಾಟ ಇದ್ದವರು ಸೊಳ್ಳೆ ಪರದೆ ಕಟ್ಟಿಕೊಂಡರೆ ಕೆಲವರು ಸಾಂಬ್ರಾಣಿ, ಸಗಣಿ ಹೊಗೆ ಹಾಕಿ ಸೊಳ್ಳೆಯನ್ನು ದೂರ ಇಡುತ್ತಿದ್ದರು. ಇಲ್ಲಿಗೆ ಒಂದು ಎರಡು ರಾತ್ರಿಗೆ ಸೊಳ್ಳೆ ಪರದೆ ತರೋದು ಅಸಾಧ್ಯ ಅನಿಸಿ ತಂದಿರಲಿಲ್ಲ. ಬೆರಣಿ ತಂದು ರಾತ್ರಿ ಅದನ್ನು ಒಂದು ಬಾಂಡಳಿಯಲ್ಲಿ ಇಟ್ಟು ಬೆಂಕಿ ಹಾಕಿ ಸೊಳ್ಳೆಯಿಂದ ಬಚಾವ್ ಆಗುವ ತಂತ್ರ ಶೌರಿ ಹೂಡಿದ್ದ.
ಇನ್ನು ಮೇಜರ್ ಪ್ರಾಬ್ಲಂ ಅಂದರೆ ದೇವರ ಪೂಜೆ, ಸತ್ಯನಾರಾಯಣ ವ್ರತ. ಇವು ಗೃಹಪ್ರವೇಶದ ಒಂದು ಮಸ್ಟ್ ಅಂದರೆ ಮಸ್ಟ್ ಕಾರ್ಯಕ್ರಮ! ಅದೆಲ್ಲಾ ಬೇಡಅಂತ ಮೊದಲೇ ಹೆಂಡತಿಗೆ ಹೇಳಿದ್ದೆ. ದೇವರ ಫೋಟೋ ಒಂದಿಟ್ಟು ಅದಕ್ಕೆ ಹೂವಿನ ಹಾರ ಹಾಕಿದ್ದಳು. ಅದೇ ದೇವರ ಪೂಜೆ ಲೆಕ್ಕಕ್ಕೆ ಸಂದಿತು.

ಹನ್ನೊಂದು ಹನ್ನೆರಡಕ್ಕೆ ಬಂಧುಗಳು ಸ್ನೇಹಿತರು ಬರಲಿಕ್ಕೆ ಶುರು ಆದರೇ… ಎರಡು ಮೂರು ಕಿಮೀ ದೂರದಿಂದ ಬಿಸಿಲಿನಲ್ಲಿ ಬೆವರು ಸುರಿಸುತ್ತಾ ನಡೆದು ಬಂದಿರೋ ಸುಸ್ತು, ಇಂತಹ ಕಡೆ ಮನೆ ಕಟ್ಟಿರೋ ಈ ಬೇಕುಫ ಅಂತ ನನ್ನ ಮೇಲೆ ಕೋಪ. ಹೇಳೋದಿಕ್ಕೆ ಆಗದು ಬಿಡೋದಕ್ಕೆ ಆಗದು, ಒಂದು ರೀತಿ ಬಿಸಿತುಪ್ಪ ಬಾಯಿ ತುಂಬಾ ತುಂಬಿಕೊಂಡಿರೋ ಜನನ್ನ ನೋಡಬೇಕು ಅಂತ ಅನಿಸಿದ್ದರೆ ಖಂಡಿತ ನೀವು ಅವತ್ತು ನಮ್ಮ ಮನೆಗೆ ಬಂದಿರ ಬೇಕಿತ್ತು!

ಆಗ ಈಗಿನ ಹಾಗೆ ಟೇಬಲ್ ತರಿಸಿ ಊಟ ಹಾಕುವ ವ್ಯವಸ್ಥೆ ಬಡವರ ಮನೆಯಲ್ಲಿ ಇರಲಿಲ್ಲ. ಅದರಿಂದ ನೆಲದ ಮೇಲೆ ಕೂತು ಎಲೆಯಲ್ಲಿ ಉಣ್ಣಬೇಕಾದ ಕಾಯಕ. ಹಾಲಿನಲ್ಲಿ ಹತ್ತು ಜನ ಇರುಕೀಕೊಂಡು ಕೂತರೆ ಒಂದು ರೂಮಲ್ಲಿ ಆರು ಇನ್ನೊಂದರಲ್ಲಿ ಏಳು ಸ್ಮಾಲ್ ಸೈಜ್ ಜನ ಕೂತು ಉಂಡರು!

ಸುಸ್ತು ಹೊಡೆದು ಬಂದವರು ಕೂಡಲು ಶಾಮಿಯಾನ, ದೊಡ್ಡ ಚಪ್ಪರ ಈ ವ್ಯವಸ್ಥೆ ಇರಲಿಲ್ಲ, ಕಾರಣ ಮಹಾ ಉಳಿತಾಯ ಯೋಜನೆ ಕಾಸು ಇಲ್ಲದ ವೈರಾಗ್ಯ.

ಸೌಜನ್ಯಕ್ಕೆ ಮನೆ ಚೆನ್ನಾಗಿದೆ, ಚೆನ್ನಾಗಿ ಕಟ್ಟಿದ್ದೀಯಾ ಅಂತ ಬಂದವರು ಹೇಳಿದರೂ ಅವರ ಹಿಂದೆ ನಿಂತು ಅವರ ಮಾತು ಕೇಳಿದುಕೊಂಡಿದ್ದ ನಾನು ಬೆಪ್ಪು ಬೆಪ್ಪಾಗಿ ಹಲ್ಲು ಕಿಸಿತಿದ್ದೆ!

ಈ ಕೊಂಪೆಯಲ್ಲಿ ಯಾಕೆ ಕಟ್ಟಿದನೋ ತೆಪ್ಪಗೆ ಅಲ್ಲೇ ಯಾವುದಾದರೂ ಬಾಡಿಗೆ ಮನೇಲಿ ಇದ್ದರೆ ಆಗ್ತಾ ಇರಲಿಲ್ಲವೇ… ನಾನಂತೂ ಬದುಕಿರೋ ತನಕ ಈ ಕಡೆ ತಲೆ ಹಾಕಿ ಕೂಡ ಮಲಗೋದಿಲ್ಲ ಎನ್ನುವ ಇದೇ ಅರ್ಥ ಕೊಡುವ ಸುಮಾರು ಮಾತುಗಳನ್ನು ನನ್ನ ಕಿವಿಗೆ ಬೀಳಲಿ ಎಂದೇ ಆಡಿದ್ದವು ಕೇಳಿಸಿಕೊಂಡಿದ್ದೆ. ಆದರೆ ನಾನು ಇದ್ಯಾವುದನ್ನೂ ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ.

ಒಂದು ಸತ್ಯನಾರಾಯಣ ಸ್ವಾಮಿ ಪೂಜೆ ಇಲ್ಲದೇ, ಹಸು ಕರು ಒಳಗೆ ಓಡಾಡದೇ ಗಣೇಶ ಹೋಮ ಆಗದೇ ದೈವ ಕೃಪೆ ಇಲ್ಲದೇ ನಡೆದ ಗೃಹಪ್ರವೇಶ ನನ್ನ ಬಂಧುಗಳು ಸ್ನೇಹಿತರಲ್ಲಿ ನಡುವೆ ಸುಮಾರು ದಿವಸ ಒಂದು ಮಾತಿನ ವಸ್ತು ಆಗಿತ್ತು! ಈಗಲೂ ಅಂದಿನ ದಿವಸದ ನೆನಪು ಬಂದರೆ ನನ್ನೆಲ್ಲ ಆಪ್ತರ ನೆನಪು ಒದ್ದುಕೊಂಡು ಬರುತ್ತೆ. ಎಂಬತ್ತರ ದಶಕದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ರಸ್ತೆ, ಬಸ್ಸು, ಒಂದು ಇಡ್ಲಿ ಹೋಟೆಲ್ಲು, ಒಬ್ಬ ಡಾಕ್ಟರು…. ಇನ್ನೂ ಏನೇನೋ ಇಲ್ಲಗಳ ನಡುವೆ ಜೀವನ ಸಾಗಿಸಿದ ತಳ ಮಧ್ಯಮ ವರ್ಗದ ವ್ಯಕ್ತಿಗಳ ಕತೆ ಇದು. ನಗರ ನಂತರದ ದಿನಗಳಲ್ಲಿ ಬೆಳೆದು ಬೆಳೆದು ಕೊನೆಗೆ ಅಡ್ಡಉದ್ದ ಬೆಳೆಯುವ ಹಂತ ಮೀರಿ ಈಗ ಎತ್ತರದತ್ತ ಹೊರಳಿ ದಶಕಗಳು ಕಳೆದಿವೆ.

ಮೂಲ ಸೌಲಭ್ಯಗಳು ಇಲ್ಲದೇ ಇಂತಹ ಬಡಾವಣೆಯಲ್ಲಿ ಬಂದು ನೆಲೆಸಿದ ಜನ ಹೇಗೆ ತಮ್ಮ ಜಾಣ್ಮೆ, ಸಂಘಟಿತ ಹೋರಾಟ, ಮೂಲಭೂತ ಅವಶ್ಯಕತೆಗಳನ್ನು ಪಡೆದರು ಎನ್ನುವುದು ಮತ್ತೊಂದು ರೋಚಕ ಕತೆ. ಒಂದು ಬಡಾವಣೆ ಬೆಳೆದ ಕತೆ ಕೇಳಿದರೆ ಮಿಕ್ಕ ಬಡಾವಣೆಗಳ ಇತಿಹಾಸ ಹೀಗೇ ಎಂದು ಹೇಳಬಹುದು. ಬೆಂಗಳೂರು ಇಂತಹ ಬಡಾವಣೆಗಳ ಮೂಲಕ ಬೆಳೆದು ಬೆಳೆದು ಬೆಳೆದು ಬೆಳೆಯುತ್ತಲೇ ಇರುವುದರ ನೆನಪು ಅಚ್ಚರಿ ಹುಟ್ಟಿಸುತ್ತದೆ. ಅವುಗಳ ನೆನಪು bts ಬಸ್ಸುಗಳ ಹಾಗೆ ಒಂದರ ಹಿಂದೆ ಬರುತ್ತಿವೆ. ಹಿಂದೆ ಈಗಿನ bmtc ಹೋದ ಜನ್ಮದಲ್ಲಿ bts ಆಗಿತ್ತಲ್ಲ ಆಗಿನ ಒಂದು ಅತ್ಯಂತ ಕಾಮನ್ ಜೋಕ್ ಏನು ಅಂದರೆ…… ಗಂಟೆಗಟ್ಟಲೆ ಕಾದರೂ ಒಂದೇ ಒಂದು bts ಬಸ್ಸು ಬರುತ್ತಿರಲಿಲ್ಲ. ನಂತರ ಹೇಗೆ ಬರುತ್ತಿದ್ದವು ಎಂದರೆ ಒಂದರ ಹಿಂದೆ ಇನ್ನೊಂದು ಅದರ ಹಿಂದೆ ಮತ್ತೊಂದು ಅದರ ಹಿಂದೆ… ಹೀಗೆ. ಕಷ್ಟಗಳು ಬಂದರೆ bts ಬಸ್ಸಿನ ಹಾಗೆ ಒಂದರ ಹಿಂದೆ ಬರುತ್ತದೆ ಎನ್ನುವುದು ಎಂಬತ್ತರ ದಶಕದ ತುಂಬಾ ಪಾಪುಲರ್ ಜೋಕ್.

ಮುಂದೆ ಬಡಾವಣೆ ಅಭಿವೃದ್ಧಿಗಾಗಿ ರಸ್ತೆಗೆ, ಬಸ್ಸಿಗೆ…..

ಮೊದಲಾದ ಅತ್ಯವಶ್ಯಕ ಬೇಕುಗಳಿಗಾಗಿ ಪಟ್ಟ ಶ್ರಮಗಳು ಇನ್ನೊಂದು ರೋಚಕ ಕಥೆ. ಮುಂದೆ ಅದಕ್ಕೆ ಬರುತ್ತೇನೆ, ಅಲ್ಲಿಯವರೆಗೂ ಬೈ ಬೈ…!

ಇನ್ನೂ ಇದೆ…..

About The Author

ಎಚ್. ಗೋಪಾಲಕೃಷ್ಣ

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ