1
ಬೆಂಕಿಯ ಉರಿಗೆ
ಕಾದಿತ್ತು ಕಾವಲಿ
ಕೆಂಪಗೆ
ಎಣ್ಣೆ ಸುರಿದಳು ಅವಳು
ಹಾಕಿದಳು ಸಾಸಿವೆಯ
ಚಟಚಟಿಸಿತು
ಹೆಪ್ಪುಗಟ್ಟಿದ ನೋವು
ಕತ್ತರಿಸಿದ ತರಕಾರಿಗಳು
ಬೆಂದವು ಕನಸಿನಂತೆ
ಮುಚ್ಚಿಟ್ಟ ಪಾತ್ರೆಯ ಮೇಲೆ ಕುಳಿತ
ಕಣ್ಣೀರ ಹನಿಗಳು
ಲಟ್ಟಿಸಿದಳು ಉಂಡೆಯನು
ಅದುಮಿಟ್ಟ ಬಯಕೆಯೊಡನೆ
ಕಾವಲಿಯ ತಾಪಕ್ಕೆ
ಕರಕಲಾಯಿತು ರೊಟ್ಟಿ
ಬದುಕಿನಂತೆ.
2
ಹೆಕ್ಕಿ ಹೆಕ್ಕಿ ಪೋಣಿಸಿದೆ
ಹಂಬಲಗಳನ್ನು
ಸೋನೆ ಮಳೆ ಹನಿಯೊಡನೆ
ಬಿಗಿದ ಅಪ್ಪುಗೆಯನ್ನು
ಮುಂಜಾನೆ
ಒದ್ದೆಯಾದ ಪ್ರೀತಿಯನ್ನು
ಮಾಗಿಯಲ್ಲಿ ಹೆಪ್ಪುಗಟ್ಟಿದ
ದಾಹವನ್ನು
ನಾಜೂಕಾಗಿ ಹೆಣೆದು
ಗಂಟು ಕಟ್ಟುವ ಗಡಿಬಿಡಿಯಲ್ಲಿ
ಹಾರ ಜಾರಿ ಚೆಲ್ಲಾಪಿಲ್ಲಿ!
ಹುಡುಕುತ್ತಿದ್ದೇನೆ ಹೂವನ್ನು
ಮತ್ತೆ ಕಟ್ಟಲು
3
ಬೆತ್ತಲಾಗಿದ್ದೇನೆ
ಮಳೆ ನಿಂತ ಆಗಸದಂತೆ
ಹಾರಿ ಹೋಗಿವೆ ಎಲ್ಲಾ
ಚಂದ್ರನಿಲ್ಲ!
ಮನಸು
ಕಳಚಿದೆಲೆಗಳ ಮರ
ಉಲ್ಕಾಭಾವನೆಗಳು
ಒಲೆಯ ಹತ್ತಿರದ ಹನಿ
ಆರಿದ್ದು ಗೊತ್ತಾಗುತ್ತಿಲ್ಲ
ಚುಕ್ಕೆ ಚಂದ್ರಮರಿಲ್ಲದ
ಆಗಸ ನನ್ನ ಕೊರಳಲ್ಲಿ,
4
ಕತ್ತಲೆ ನುಂಗಿ
ಬಂದಂತಿರುವ ಬೆಳಗು
ಎಲ್ಲೋ ಕೂಗುತ್ತಿರುವ
ಹಕ್ಕಿ
ಕಾಗೆಗಳ ಕರಕರ
ಶುರುವಾಗಿಲ್ಲ ಇನ್ನೂ
ನೆನಪ ನೇವರಿಸುತ್ತ ಮಲಗಿದ್ದೇನೆ
ನಾಚಿ.
5
ತೊಟ್ಟಿಕ್ಕುವ ಹನಿಗಳನ್ನು
ಮೊಗೆವಾಗ
ಕಡಲ ಬೋರ್ಗೆರೆತ
ಪುಟ್ಟ ಬಾಲಕಿ
ಕಟ್ಟಿದ ಗೋಪುರ ಛಿದ್ರವಾಗದಿರಲಿ
ಅರಿವಿಲ್ಲದವಲ ಮಂದಸ್ಮಿತ
ಪರಿತಪಿಸುವಂತಿದೆ
ಸ್ತಬ್ಧವಾದರೆ ಸಾಕು
ಕಡಲ ಗುಡುಗು
ನಿರ್ಮಲ ಆಗಸದಲ್ಲಿ
ಸಾಗಲಿ ದೋಣಿ!
ಗೋಧೂಳಿ ಗೃಹಿಣಿ ಮತ್ತು ಗಾಯಕಿ.
ಆಗಾಗ ಸಣ್ಣಪುಟ್ಟ ಕವಿತೆಗಳನ್ನು ಬರೆಯುವುದು ಇವರ ಹವ್ಯಾಸ.
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ