ಇದ್ದಕ್ಕಿದ್ದಂತೆ “ಶ್ಶ್…” ಎಂಬ ಶಿಳ್ಳೆಯಂತಹ ಶಬ್ದ ಕೇಳಿ ಇದಿನಬ್ಬ ನಿಂತಲ್ಲಿ ಸ್ತಬ್ಧನಾದ. ಎರಡ್ಮೂರು ಬಾರಿ ಆ ಶಬ್ದ ಆವರ್ತನೆಯಾಯಿತು. ಹಿಂದಿರುಗಿ ನೋಡಿದ. ಮತ್ತೆ “ಶ್ಶ್-ಶ್ಶ್” ಶಬ್ದ ಮತ್ತೆ ಕೇಳುತ್ತಿದೆ. ಇದಿನಬ್ಬನ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಹ ಅನುಭವ. ಇನ್ನೇನು ಮಾಡುವುದೆಂದು ತೋಚದೆ ಕತ್ತಲಲ್ಲಿ ಬೆಕ್ಕಿನಂತೆ ಮೆಲ್ಲಗೆ ಮುಂದಡಿಟ್ಟ. ಆಗ ಕಂಡ ದೃಶ್ಯ ಎಂಥವನ ಎದೆಯಲ್ಲೂ ನಡುಕ ಹುಟ್ಟಿಸುವಷ್ಟು ಭಯಾನಕವಾಗಿತ್ತು. ಹೆಬ್ಬಾವಿನ ಗಾತ್ರದ ಕೊಳಕು ಮಂಡಲ ಹಾವೊಂದು ಲಾಟೀನು ಬೆಳಕಿಗೆ ಬುಸುಗುಡುತ್ತಿದೆ.
ಮುನವ್ವರ್ ಜೋಗಿಬೆಟ್ಟು ಬರೆಯುವ ಡರ್ಬನ್ ಇದಿನಬ್ಬ ಕಾದಂಬರಿಯ ಆರನೇ ಕಂತು.

 

ಗಾಡಿ ತುಂಬಾ ಪ್ರಯಾಣಿಕರೇ ತುಂಬಿದ್ದರು. “ಉಂಗಲ್ಕ್ ಎಂಗೇ ಪೋನಂ”
ಗಾಡಿಯವನು ವಿಚಾರಿಸಿದ.

“ರಾಮಪುರಂ- ಅರಸಮಾರಮ್ ಕೋಯಿಲ್, ರಂಡ್ ಪೇರ್ ಇರ್ಕ”

ಕರೀಂ ಪ್ರತಿಕ್ರಯಿಸಿದರು. ಎತ್ತಿನ ಗಾಡಿ ಪ್ರಯಾಣಿಕರಿಂದ ಕಿಕ್ಕಿರಿದಿತ್ತು. ಕಾಲು ತೂರುವಷ್ಟು ಸ್ಥಳ ಮಾಡಿಕೊಂಡು ಕರೀಂ ಸಾಹೇಬರ ಹಿಂದೆ ಇದಿನಬ್ಬನೂ ಸೇರಿಕೊಂಡನು. ಗಾಡಿ ‘ಲಟಕ್ ಪಟಕ್’ ಎಂದು ನೆಟಿಕೆ ತೆಗೆಯುತ್ತಾ ಸಾಗತೊಡಗಿತ್ತು. ಜನರ ಉಸಿರಾಟದ ಬಿಸಿಯೂ ಸರಿಯಾಗಿ ಅನುಭವವಾಗುತ್ತಿತ್ತು. ಸೆಖೆಯ ಮಧ್ಯೆಯೂ ಆಗೊಮ್ಮೆ ಈಗೊಮ್ಮೆ ಬೆಳಕು ತೂರುವ ಕಡೆ ಇಣುಕಿದಾಗ ಸ್ವಚ್ಛ ಗಾಳಿಯನ್ನು ಉಸಿರಾಡಬಹುದಿತ್ತು. ಬೆವರ ವಾಸನೆಗೆ ಮೂಗಿನ ಹೊಳ್ಳೆಗಳೇ ಮರಗಟ್ಟುತ್ತಿದ್ದವು. ಸ್ವಲ್ಪ ದೂರ ಸಾಗಿದ ಕೂಡಲೇ ಡಾಂಬರು ರಸ್ತೆ ದಾಟಿ ಗಾಡಿ ಮಣ್ಣಿನದಾರಿ ಹಿಡಿಯಿತು. ಇದ್ದಕ್ಕಿದ್ದಂತೆ “ನಿರ್ತಿಂಗೇ” ಎಂದು ಹೆಣ್ಣೊಬ್ಬಳು ಬಲವಾಗಿ ಚೀರಿದ್ದು ಕೇಳಿತು. ಗಾಡಿಯನ್ನು ಹತೋಟಿಗೆ ತರುತ್ತಾ ವೇಗ ಕುಗ್ಗಿಸುತ್ತಾ ಗಾಡಿಯವನು ಗಾಡಿಯನ್ನು ನಿಯಂತ್ರಿಸುವಷ್ಟಕ್ಕೆ ಸುಮಾರು ನೂರು ಅಡಿಗಳಷ್ಟು ದೂರ ಗಾಡಿ ಸಾಗಿಹೋಗಿತ್ತು. ಒಬ್ಬೊಬ್ಬರಾಗಿ ಇಳಿದು ಮಹಿಳೆಗೆ ದಾರಿ ಬಿಟ್ಟು ಕೊಟ್ಟರು. ಅರ್ಧ ಗಾಡಿ ಖಾಲಿಯಾದಾಗ, ಬೆವರಿನಿಂದ ತೊಯ್ದ ಕಪ್ಪಗಿನ ದಢೂತಿ ಮಹಿಳೆಯೊಬ್ಬಳು ಗೂಳಿಯಂತೆ ಮುಂದೊತ್ತಿ ಗಾಡಿಯಿಂದಿಳಿದಳು. ಇಳಿಯುವ ರಭಸಕ್ಕೆ ಗಾಡಿ ಹಿಂದಕ್ಕು ಮುಂದಕ್ಕೂ ವಾಲಿತು. ಇದ್ಯಾವುದನ್ನೂ ಲೆಕ್ಕಿಸದೆ ದಢೂತಿ ಮಹಿಳೆ ಬೆವರಿನಿಂದ ಕರಗಿ ನೀರಾಗುತ್ತಾ ಮುಖ ಪೂರ್ತಿ ಇಳಿಯುತ್ತಿದ್ದ ಕುಂಕುಮ ನೀರನ್ನುಜ್ಜುತ್ತಾ ಗಾಡಿಯವನಿಗೆ ತನ್ನ ಬುಟ್ಟಿಯಲ್ಲಿದ್ದ ಎರಡು ಸಮಗಾತ್ರದ ಮೀನನ್ನು ನೀಡಿದಳು.

“ಇದೇನು ಇಷ್ಟು ಕಡಿಮೆ” ಎಂದು ತಗಾದೆ ತೆಗೆದಿದ್ದ ಗಾಡಿಯವನಿಗೆ “ಪೋಡಾ..ಪೊರೊಂಬೋಕ್” ಎಂದು ವಾಚಾಮಗೋಚರವಾಗಿ ಬೈಯ್ಯುತ್ತಾ ಗಾಡಿಯವನ ಬಾಯಿ ಮುಚ್ಚಿಸಿದಳು.

“ರಾಮಪುರಂ ಕೊನೆಗೆ ಇಳಿಯುವವರು ಒಳ ಬನ್ನಿ”

ಅನ್ನುತ್ತಾ ಗಾಡಿಯವನು ಇದಿನಬ್ಬ ಮತ್ತು ಕರೀಂ ಸಾಹೇಬರನ್ನು ಮುಂದೆ ಕೂರುವಂತೆ ಆಜ್ಞಾಪಿಸಿದ. ಮತ್ತೆ ಇಂಚಿಂಚಿಗೂ ಜಾಗವಿದ್ದ ಸ್ಥಳಕ್ಕೆ ಎರಕ ಹೊಯ್ಯುವಂತೆ ಕೈಕಾಲುಗಳನ್ನು ತೂರಿಸಿಕೊಂಡು ಪ್ರಯಾಣಿಕರು ಹತ್ತಿದರು. ಸಂಜೆಯ ಹೊತ್ತಿಗೆ ಗಾಡಿ ಖಾಲಿಯಾಗುತ್ತ ಬಂತು. ಬಿಸಿಲ ಧಗೆಯೂ ತಣಿದಿತ್ತು. “ರಾಮಪುರಂ” ಎನ್ನುತ್ತಾ ಗಾಡಿಯವನು ಕರೀಂ ನನ್ನು ಎಚ್ಚರಿಸಿದ್ದ.

“ಕೊಂಜ ಉಲ್ಲ ಪೋಂಗೆ( ಸ್ವಲ್ಪ ಒಳಗೆ ಹೋಗಿ)”

ಇನ್ನೂ ಸ್ವಲ್ಪ ಒಳದಾರಿಗೆ ಹೋಗಬೇಕೆಂಬ ಕರೀಂ ಸಾಹೇಬರ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ ಗಾಡಿಯವನು “ಉಲ್ಲ ವರಾದ್, ಎನ್ನ ವೆಲೆಯಟಾಮಾ? ಇದ್ಕುಂ ಉಲ್ಲೆ ಪೋಗಾದ್, ಎರಂಙರಿಂಗೆ(ಒಳಗೆ ಹೋಗುವುದಿಲ್ಲ ,ಏನಿದು ಮಕ್ಕಳಾಟವೇ, ಇಲ್ಲೇ ಇಳಿಯಿರಿ)” ಎಂದಾಗ ವಿಧಿಯಿಲ್ಲದೆ ಕರೀಂ ಸಾಹೇಬರು ಸೊಂಟದ ಪಟ್ಟಿಗೆ ನಾಣ್ಯಕ್ಕಾಗಿ ಕೈ ಹಾಕಿದರು. ಎರಡು ನಾಣ್ಯಗಳಿಗೂ ಚೌಕಾಸಿಯಾಗಿ ಕೊನೆಗೆ ಮೂರು ನಾಣ್ಯಕ್ಕೆ ಚರ್ಚೆ ಮುಗಿಸಿ ಇಬ್ಬರೂ ಗಾಡಿಯಿಂದಿಳಿದರು.

ಇದಿನಬ್ಬ ಊರು ಬಿಟ್ಟ ಮೇಲೆ ಇದುವರೆಗೆ ಆಗಿ ಹೋದ ಮಾಲೀಕರಲ್ಲಿ ಈ ತಮಿಳು ಮಾತಾಡುವ ವ್ಯಕ್ತಿ ಒಳ್ಳೆಯವರಾಗಿದ್ದರು. ಅವರು ತನ್ನನ್ನು “ಕರೀಮ್ ಸಾಬ್” ಅಂತ ಕರೆಯಬಹುದೆಂದೂ ಇದಿನಬ್ಬನಿಗೆ ಹೇಳಿ ಕೊಟ್ಟರು. ಇದಿನಬ್ಬನಿಗೆ ಕರೀಂ ಸಾಬರ ಮೇಲೆ ಗೌರವ ಹೆಚ್ಚಾಯಿತು. ಸಂಜೆ ಕತ್ತಲೆ ಕವಿಯತೊಡಗಿತ್ತು. ದೂರದ ಮಸೀದಿ ಮಿನಾರದಿಂದ ಆಝಾನ್ ಕೇಳತೊಡಗಿತ್ತು. ತಲೆಗೊಂದು ತುಂಡು ಬಟ್ಟೆ ತೊಟ್ಟು ಅಝಾನ್ ಮುಗಿಯವವರೆಗೂ ಕರೀಮ್ ಸಾಬ್ ಮೌನವಾದರು. ಇದಿನಬ್ಬನನ್ನು ಮಸೀದಿಗೆ ಕರೆದುಕೊಂಡು ಹೋದವರು ತಾನು ಮಾಡಿದಂತೆ ಪ್ರಾರ್ಥನೆ ಮಾಡಬೇಕೆಂದು ಹೇಳಿದರು. ಪ್ರಾರ್ಥನೆ ಮುಗಿದು ಹೊರ ಬಂದ ಕರೀಮ್ ಸಾಬ್ ನಡೆಯಲು ಶುರುವಿಟ್ಟರು. ರಾಮಪುರಕ್ಕೆ ಹೊರಟ ಅವರ ದಾರಿಯಲ್ಲಿ ಅನೇಕ ಮನೆ, ಅಂಗಡಿಗಳು ಹಾದು ಹೋದವು. ಅಂಗಡಿಗಳ ಮುಂದೆ ಲಾಟೀನು ಬೆಳಕು ಇರಿಸಲಾಗಿತ್ತು. ಅದರ ಸುತ್ತ ಒಂದಷ್ಟು ಮಂದಿ ಕುಳಿತು ಹರಟೆ ಕೊಚ್ಚುತ್ತಿದ್ದರು. ಅವರು ಮುಂದೆ ನಡೆದಂತೆ ಮನೆಗಳು ಕಡಿಮೆಯಾಗತೊಡಗಿದವು. ದೀಪಗಳು ಮರೆಯಾದವು. ಅಗಮ್ಯ ಕಾಡಿನೊಳಗೆ ನಿಶ್ಯಬ್ದತೆಯನ್ನು ಭೇದಿಸುವ ಜೀರುಂಡೆಯ ಸದ್ದು ಭಯ ಹುಟ್ಟಿಸುತ್ತಿತ್ತು. ಸುಮಾರು ಅರ್ಧ ತಾಸುಗಳ ತರುವಾಯ ವಿಶಾಲ ಬಯಲು ತೆರೆದುಕೊಂಡಿತು. ಅವುಗಳೆಲ್ಲ ಗದ್ದೆಗಳು ಎಂದು ಇದಿನಬ್ಬ ಭತ್ತದ ವಾಸನೆಯಲ್ಲೇ ಅಂದಾಜು ಮಾಡಿಕೊಂಡ.

ದೂರದಲ್ಲಿ ಎಲ್ಲೋ ಸಣ್ಣಗೆ ಚಿಮಿಣಿ ಬೆಳಕು ಬೀರುವ ಮನೆಗಳು ತಮ್ಮ ಇರುವಿಕೆಯನ್ನು ತೋರಿಸುತ್ತಿದ್ದವು. ಹುಣ್ಣಿಮೆ ಬೆಳಕನ್ನೇ ಆಶ್ರಯಿಸಿ ಅಷ್ಟೂ ದೂರ ಅವರು ನಡೆಯುತ್ತಾ ಬಂದಿದ್ದರು. ಆಗಾಗ ಯಾವುದೋ ಜಂತುಗಳು ಸರಸರನೆ ಹರಿಯುವ ಸದ್ದು ಇದಿನಬ್ಬನಿಗೆ ದಿಗಿಲಿಕ್ಕಿಸುತ್ತಿತ್ತು. ದಾರಿಬದಿಯಲ್ಲಿ ಕುಳಿತು ಕತ್ತಲೆಯಲ್ಲಿ ಶಿಕಾರಿ ಮಾಡುತ್ತಿದ್ದ ನಿಶಾಚರಿ ಪಕ್ಷಿಗಳು ಪುರ್ರನೆ ಹಾರುವಾಗಲೂ ಪ್ರಾಣಿಗಳು ಬೆದರಿ ಓಡುವಾಗಲೂ ಅವುಗಳ ಅನಿರೀಕ್ಷಿತ ಸದ್ದಿಗೆ ಕರೀಂ ಸಾಹೇಬರೂ ಕೊಂಚ ವಿಚಲಿತರಾಗುತ್ತಿದ್ದರು. ಒಣಗಿದ ತರಗೆಲೆಗಳ ನಡುವೆ ಸ್ವಲ್ಪ ಸದ್ದಾದರೂ ಇದಿನಬ್ಬ ಕರೀಮ ಸಾಹೇಬರ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಿದ್ದ. ಗದ್ದೆಗಳ ದಾರಿಯಲ್ಲೇ ನಡೆದು ಮುಂದೆ ಸಿಕ್ಕ ಮನೆಗಳನ್ನು ದಾಟಿ ಕಟ್ಟಕಡೆಯ ಮನೆಯೆದುರು ಕರೀಂ ಸಾಹೇಬರು ಹೆಂಡತಿಯ ಹೆಸರನ್ನು ಕರೆದು ಬಾಗಿಲು ತಟ್ಟುವಾಗ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಅವರ ಮಡದಿ ದಡಕ್ಕನೆ ಬಾಗಿಲು ತೆರೆದರು.

*****

ಗಂಡನ ಜೊತೆ ಹೊಸ ಹುಡುಗನ ಮುಖ ಕಂಡ ಕೂಡಲೇ ಕರೀಂ ಸಾಹೇಬರ ಪತ್ನಿ ಮರೆಗೆ ಸರಿದಳು.

“ಬಾ‌ ಇಲ್ಲಿ, ಇವನು ನಮ್ಮ ಹುಡುಗ, ಮಂಗಳೂರಿನಲ್ಲಿ ಸಿಕ್ಕಿದ” ಎಂದು ಗುರುತು ಹೇಳಿ ಹೆಂಡತಿಗೆ ಹೂ ನಗು ಚೆಲ್ಲಿ ಸಾಹೇಬರು ಒಳ ಬಂದರು. ಇದಿನಬ್ಬ ಹೊರಗೆ ನಿಂತೇ ಇದ್ದಾನೆ. ದೀಪದ ಬೆಳಕಿನಲ್ಲಿ ಮಂದವಾಗಿ ಆ ಮಾತೃ ಹೃದಯವು ಒಮ್ಮೆ ಸಾಹೇಬರ ಮುಖಕ್ಕೂ, ಒಮ್ಮೆ ಇದಿನಬ್ಬನ ಮುಖವನ್ನೂ ನೋಡುತ್ತಿದೆ. ತಮಿಳಿನಲ್ಲಾದ್ದರಿಂದ ಅವರ ಮಾತು ಕತೆಗಳಲ್ಲಿ ಸ್ವಲ್ಪ ವೇಗ ಇದೆ. ಅಷ್ಟೂ ಅರ್ಥ ಮಾಡಿಕೊಳ್ಳುವಷ್ಟೂ ಇದಿನಬ್ಬನಿಗೆ ತಮಿಳು ಸುಲಭವಿರಲಿಲ್ಲ. ಹೇಳಿ ಮುಗಿಯುವವರೆಗೂ ಇದಿನಬ್ಬ ಹೊರಗೆಯೇ ಉಳಿದ. ಮನೆಯ ಯಜಮಾನಿಗೆ ಬೇಸರವಾಯಿತು.

ಸೆಖೆಯ ಮಧ್ಯೆಯೂ ಆಗೊಮ್ಮೆ ಈಗೊಮ್ಮೆ ಬೆಳಕು ತೂರುವ ಕಡೆ ಇಣುಕಿದಾಗ ಸ್ವಚ್ಛ ಗಾಳಿಯನ್ನು ಉಸಿರಾಡಬಹುದಿತ್ತು. ಬೆವರ ವಾಸನೆಗೆ ಮೂಗಿನ ಹೊಳ್ಳೆಗಳೇ ಮರಗಟ್ಟುತ್ತಿದ್ದವು.

“ಬಾ ಮಗನೇ ದೂರ ನಿಲ್ಲಬೇಡ, ನಿನ್ನದೇ ಮನೆ ಅಂತ ತಿಳಿದು ಸ್ನಾನ ಮಾಡಿಕೊಂಡು ಬಾ”ಎಂದು ಬಚ್ಚಲು ಮನೆ ತೋರಿಸಿದರು. ಪ್ರತ್ಯೇಕ ಬಚ್ಚಲು ಮನೆ ಇರುವ ಸ್ಥಿತಿಯನ್ನು ಕಂಡು, ಇವರು ಸ್ವಲ್ಪ ಸ್ಥಿತಿ ವಂತರೇ ಇರಬೇಕೆಂದು ಇದಿನಬ್ಬನಿಗೆ ಅರ್ಥವಾಗದಿರಲಿಲ್ಲ. ಇದಿನಬ್ಬ ಬೆಚ್ಚಗಿನ ನೀರಿನಲ್ಲಿ ಮನಸೋಇಚ್ಚೆ ಸ್ನಾನ ಮಾಡಿದ. ಹೊಸ ಪರಿಸರ ಮತ್ತು ವಾತಾವರಣದ ಏಕತಾನತೆ ತೊಡೆದು ಹಾಕಲು ಅದು ಉಪಕಾರವಾದಂತಿತ್ತು. ಮನೆಯವರ ನೆನಪೊಮ್ಮೆ ಕಾಡಿ ಅಳು ಬಂತು. ಕಣ್ಣೀರೆಲ್ಲವೂ ಬೆಚ್ಚಗಿನ ನೀರಿನಲ್ಲೇ ಲೀನವಾಯಿತು. ಸ್ನಾನ ಮುಗಿಸಿ ಇದಿನಬ್ಬ ಮನೆಯೊಳಗೆ ಬಂದ. ಇಬ್ಬರಿಗೂ ಯಜಮಾನಿ ಊಟ ಬಡಿಸಿದಳು.ಆ ಮೇಲೆ ಹೊಟ್ಟೆ ತುಂಬ ಊಟವಾಯಿತು. ಮನೆಯ ಹೊರಗಿನ ಹಜಾರದ ಒಂದು ಮೂಲೆಯಲ್ಲಿ ಸಾಹೇಬರ ಮಡದಿ ಚಾಪೆ ಹಾಸಿದರು. ಚಂದ್ರನ ಬೆಳಕು ಪಡಸಾಲೆ ತುಂಬಾ ಚೆಲ್ಲಿತ್ತು. ಜೀರುಂಡೆಯ ಸದ್ದು ಮನೆ ತುಂಬಾ ಪ್ರತಿಧ್ವನಿಸುತ್ತಿತ್ತು. ಜೀರುಂಡೆಗಳ ತಾಳ ಮದ್ದಲೆಗೆ ಕಪ್ಪೆಗಳು ಕೂಡಿಕೊಳ್ಳುತ್ತಿತ್ತು. ಹುಡುಗ ಚಾಪೆಯಲ್ಲಿ ಮುದುಡಿ ಮಲಗಿ ಚೆನ್ನಾಗಿ ನಿದ್ರಿಸಿದ. ಎಷ್ಟೋ ದಿನಗಳ ನಂತರ ಇದಿನಬ್ಬನಿಗೆ ಸುಖವಾಗಿ ನಿದ್ರೆ ಹತ್ತಿತ್ತು.

ರಾತ್ರಿ ಕಳೆದು ಬೆಳಗಾಯಿತು.ಸೂರ್ಯ ಮಬ್ಬು ಮಬ್ಬಾಗಿ ಬೆಳಕು ಚೆಲ್ಲಿದಂತೆ ಎದ್ದು ಕೈಕಾಲು ಮುಖ ತೊಳೆದ ಇದಿನಬ್ಬ ತನ್ನ ಹೊಸ ಯಜಮಾನನ ಮನೆಯ ಸುತ್ತ ಒಂದು ಸುತ್ತು ಬಂದ. ಗದ್ದೆಗಳಿಗೆ ಹೋದ. ಸುತ್ತಲೂ ನಡೆದಾಡಿದ. ತನ್ನ ಊರಿನ ಗದ್ದೆಗಳಂತೆಯೇ ಅವು ಇರಲಿಲ್ಲವಾದರೂ, ಊರಿನ ನೆನಪೊಮ್ಮೆ ಸುಳಿಯಿತು. ಇದಿನಬ್ಬ ಗದ್ದೆ ನೋಡಿಕೊಂಡು ಬರುವ ದಾರಿಯಲ್ಲಿ ಇಬ್ಬರು ಪುಟಾಣಿ ಮಕ್ಕಳು ಸಿಕ್ಕರು. “ಹೋ… ಉಮ್ಮ ಹೇಳಿದ್ದು ಇವನನ್ನೇ ಇರ್ಬೇಕು” ಹೆಣ್ಣು ಮಗು ಇದಿನಬ್ಬನನ್ನು ಬೊಟ್ಟು ಮಾಡಿ ಮಾತನಾಡಿತು. ಆ ಮಕ್ಕಳಿಬ್ಬರು ಬಿಟ್ಟ ಕಣ್ಣಿನಿಂದ ಇದಿನಬ್ಬನನ್ನು ನೋಡಿದರು. ಇದಿನಬ್ಬನಿಗೆ ನೋಡಲಾಗದೆ ನಾಚಿಕೆ ಹುಟ್ಟಿ ತಲೆ ಕೆಳಗೆ ಹಾಕಿದ. ಅವರು ಅವನ ಯಜಮಾನನ ಇಬ್ಬರು ಮಕ್ಕಳು. ಕರೀಂ ಸಾಹೇಬರಿಗೆ ಒಂದು ಗಂಡು ಒಂದು ಹೆಣ್ಣು.

ಹುಡುಗ “ಉನ್ನ ಪೇರೆಂಗೆ( ನಿನ್ನ ಹೆಸರೇನು)” ಎಂದು ಕೇಳಿದ.ಇದಿನಬ್ಬ ತೊದಲಿದ. ಮಕ್ಕಳಿಬ್ಬರು ಸ್ವಲ್ಪ ಹೊತ್ತು ಅವನನ್ನು ಗೋಳಾಡಿಸಿ ಮಜಾ ಮಾಡಿದರು.ಅವನ ಕೈ ಹಿಡಿದು ಮನೆ ಕಡೆ ಹೆಜ್ಜೆ ಹಾಕಿದರು. ಕೆಲವು ದಿನಗಳಲ್ಲೇ ಇದಿನಬ್ಬನಿಗೆ ಅವಿರಿಬ್ಬರೂ ಅವನ ಗೆಳೆಯರಾಗಿಬಿಟ್ಟರು. ಅಲ್ಲಿಂದ ಸ್ವಲ್ಪ ತಮಿಳು ಬಾಷೆ ಕಲಿಸಲು ಶುರು ಮಾಡಿದ. ಕೆಲವೇ ದಿನಗಳಲ್ಲಿ ಇದಿನಬ್ಬನ ವ್ಯವಹಾರವೆಲ್ಲ ತಮಿಳಿನಲ್ಲಾಗ ತೊಡಗಿತು. ತಮಿಳು ಭಾಷೆಯನ್ನು ಅವನು ಬಹು ಬೇಗನೆ ಕಲಿತುಕೊಂಡ. ಗದ್ದೆ ಉಳುವುದು, ಕಟಾವು ಮಾಡುವುದು, ಇವುಗಳೆಲ್ಲಾ ನೋಡಿ ಕಲಿತದ್ದಾದರೂ ಅಲ್ಲಿ ಸ್ವತಂತ್ರವಾಗಿ ಕೆಲಸಮಾಡುವ ಅವಕಾಶ ಸಿಕ್ಕಿತು. ಇದಿನಬ್ಬನಿಗೆ ಹೊಸ ಹೊಸ ಅನುಭವಗಳು ಹೊಸ ಹೊಸ ಪಾಠಗಳನ್ನು ಕಲಿಸುತ್ತಿತ್ತು. ವಯಸ್ಸಿಗೆ ಮೀರಿದ ಪಕ್ವತೆಯನ್ನು ಸ್ವತಃ ಪಡೆದುಕೊಂಡ. ಎಲ್ಲಾ ಮಜಲುಗಳಲ್ಲೂ ಅನುಭವ ಜ್ಞಾನ ಪಡೆದುಕೊಂಡಿದ್ದ. ಕರೀಂ ಸಾಹೇಬರ ಹೆಂಡತಿಯನ್ನು ಮಕ್ಕಳ ಜೊತೆ ಸೇರಿ ” ಉಮ್ಮಾ” ಎಂದೇ ಕರೆಯತೊಡಗಿದ. ತನ್ನ ಮಕ್ಕಳಂತೆಯೇ ಇದಿನಬ್ಬನನ್ನೂ ಕರೀಂ ಸಾಹೇಬರ ಕುಟುಂಬ ಕಾಣತೊಡಗಿತ್ತು. ಸಾಹೇಬರ ಸಮರ್ಥ ಪಾಠಗಳ ಪರಿಣಾಮ ಎಲ್ಲಾ ಕೃಷಿ ಕೆಲಸಗಳು ಇದಿನಬ್ಬನಿಗೆ ಲೀಲಾಜಾಲವಾಗಿ ಮಾಡುವುದು ಸಾಧ್ಯವಾಯಿತು. ಒಬ್ಬನೇ ಗದ್ದೆ ನೋಡಿಕೊಳ್ಳುವ ಪಕ್ವತೆ ಬೆಳೆಯತೊಡಗಿತು. ಧಾರ್ಮಿಕ ಚರಿತ್ರೆ, ಪ್ರಾರ್ಥನೆ, ವ್ರತ ಇವುಗಳ ಬಗ್ಗೆ ವಿಶೇಷ ತರಬೇತಿಯನ್ನು ಕರೀಂ ಸಾಹೇಬರೇ ನೀಡಿದರು. ಇದಿನಬ್ಬನ ಸ್ವಂತ ಊರಿಗೆ ತಾಳೆ ಹಾಕಿದರೆ ರಾಮಪುರ ಕಗ್ಗಾಡು. ಅಜಿಲಮೊಗರಿನಲ್ಲಿ ಅರ್ಧ ಮೈಲು ದೂರಕ್ಕೆ ಚಿಕ್ಕಪ್ಪನ ಮನೆ ಸಿಗುತ್ತದೆ. ಮತ್ತೆ ಕೂಗಳತೆ ದೂರದಲ್ಲಿ ಶೇಶಪ್ಪ ಪೂಜಾರಿ ಮನೆ. ಇಲ್ಲಿ ಒಂದೊಂದು ಮನೆಗೂ ಎರಡೆರಡು ಮೈಲುಗಳಷ್ಟೂ ದೂರ. ಆದರೂ ದೂರವೆಂದು ಅವರು ಅನಿಸಿಕೊಳ್ಳುತ್ತಿರಲೇ ಇಲ್ಲ. ಕನಿಷ್ಠ ಎರಡು ದಿನಕ್ಕೊಮ್ಮೆಯಾದರೂ ಹತ್ತಿರದ ಮನೆಯವರು ಬಂದು ಹೋಗುವುದುಂಟು.

ದಿನಬಳಕೆಯ ವಸ್ತುಗಳು ಕೊಂಡುಕೊಳ್ಳಲು ಪಟ್ಟಣಕ್ಕೆ ನಡೆದುಕೊಂಡೇ ಹೋಗಿ ಬರಬೇಕು. ರಾತ್ರಿಗೆ ಎಣ್ಣೆ ದೀಪವೇ ಇರಬೇಕಾದರೂ ಕತ್ತಲಿಗೂ ಹೊಂದಿಕೊಂಡು ಬದುಕುವ ತಾಕತ್ತಿದೆ.

ಆದರೆ ಮಳೆಗಾಲ ಅಷ್ಟು ಸುಲಭವಲ್ಲ. ಎಡೆ ಬಿಡದೆ ಸುರಿಯುವ ಆ ಮಳೆ ತುಸು ಹೆಚ್ಚೇ ಹೆದರಿಕೆ ಹುಟ್ಟಿಸುತ್ತಿತ್ತು.ಇದಿನಬ್ಬನಿಗೆ ಹೊಸ ಅನುಭವ. ಬೆಚ್ಚಗಿನ ಸ್ಥಳ ಹುಡುಕುತ್ತಾ ಬರುವ ಹಾವುಗಳು ಮನೆಯ ಬಾಗಿಲ ಮೂಲೆಯಲ್ಲಿ ಹಾಸಿಗೆಗಳನ್ನು ಯಥೇಚ್ಛವಾಗಿ ಮಡಚಿಟ್ಟಿರುವಾಗ ಅಲ್ಲೊಂದು ದೀಪವಿಡುವುದು ಒಂದು ರೀತಿಯ ಮುಂಜಾಗ್ರತೆ. ಹುಲ್ಲಿನ ಮನೆಯ ಮೇಲೆ ದೊಪ್ ದೊಪ್ಪೆಂದು ಆಲಿಕಲ್ಲು ಬೀಳುವ ಶಬ್ದ ಎಂಥವರಿಗೂ ಹೆದರಿಕೆ ಹುಟ್ಟಿಸೀತು! ಈಗಲೋ ಮತ್ತೆಯೋ ಸೂರು ಹಾರಿ ಹೋಗುವಷ್ಟು ಬಲವಾಗಿ ರೊಯ್ಯನೆ ಬೀಸುವ ಗಾಳಿಗೆ ಮುರಿದು ಹೋಗುವಷ್ಟು ಬಾಗಿ ಬಳುಕುವ ತೆಂಗಿನ ಮರಗಳು. ದೀಪ ಉರಿಸದೆ ಹೋದರೆ ರಕ್ಷಣೆಯಿಲ್ಲ. ಒಮ್ಮೊಮ್ಮೆ ರಾತ್ರಿಯ ಕತ್ತಲಲ್ಲಿ ಮಿಂಚು ಹರಿದಾಗ ಮನೆಯೊಳಗೆ ತೆವಳುವ ಹಾವುಗಳನ್ನು ಗುರ್ತಿಸಿದ್ದೂ ಉಂಟು. ಎಷ್ಟೆಲ್ಲಾ ಅಪಾಯಗಳಿಗಾಗಿಯೇ ದೀಪ ಅತ್ಯವಶ್ಯಕ. ಮೊದಲಲ್ಲಿ ಮಳೆಗಾಲಕ್ಕೆ ಸೀಮೆ ಎಣ್ಣೆ ತರುವಾಗ ಕರೀಂ ಸಾಹೇಬರ ಜೊತೆಗೂಡಿ ಇದಿನಬ್ಬನೂ ಪೇಟೆಗೆ ಹೋಗುತ್ತಿದ್ದ. ಕ್ರಮೇಣ ದಾರಿಯ ಪರಿಚಯದಿಂದಾಗಿ ಆ ಜವಾಬ್ದಾರಿಯೂ ಇದಿನಬ್ಬನ ಹೆಗಲಿಗೇ ಬಿತ್ತು . ಈ ಮಧ್ಯೆ ಸಾಹೇಬರ ಹೆಂಡತಿಗೆ ಸ್ತ್ರೀ ಸಹಜ ಅಸೂಯೆಯೂ ಮೂಡತೊಡಗಿತ್ತು. ಇದಿನಬ್ಬ ಇಲ್ಲೇ ಬೆಳೆದು ದೊಡ್ಡವನಾದರೆ ತನ್ನ ಮಕ್ಕಳಿಗಾಗುವ ಆಸ್ತಿಯಲ್ಲಿ ಪಾಲು ಕೇಳಬಹುದೆಂಬ ಭಯವಾಗಿರಲೂ ಬಹುದು.

ಇದಿನಬ್ಬ ತಮಿಳು ನಾಡಿಗೆ ಬಂದ ಎರಡನೇ ವರ್ಷದ ಮಳೆಗಾಲಕ್ಕೆ ಸಾಹೇಬರ ಮನೆಯ ಹಲವಷ್ಟು ಅಧಿಕಾರವನ್ನು ಕರೀಂ ಸಾಹೇಬರು ವಹಿಸಿದ್ದರು. ಹೀಗಿರಲು ಒಂದು ದಿನ ಸೀಮೆ ಎಣ್ಣೆ ತರಲೆಂದು ಇದಿನಬ್ಬ ಪೇಟೆಗೆ ಹೊರಟ. ಪೇಟೆ ತಲುಪುವಷ್ಟರಲ್ಲಿ ಜೋರು ಮಳೆ ಪ್ರಾರಂಭವಾಗಿತ್ತು. ಮಳೆಗಾಳದಲ್ಲಿ ತಲೆಯಿಂದ ಸೊಂಟದವರೆಗೆ ಪ್ಲಾಸ್ಟಿಕ್ ಹೊದ್ದುಕೊಂಡರೆ ಮುಗಿಯಿತು. ಮತ್ತೆ ಮಳೆಯೊಂದಿಗೆ ಎದೆಯೊಡ್ಡಿ ಅಷ್ಟೂ ದೂರವನ್ನೂ ನಡೆಯಬೇಕಿತ್ತು. ಆ ದಿನ ಮಳೆ ಸ್ವಲ್ಪ ಹೆಚ್ಚೇ ಬಿರುಸಾಗಿತ್ತು. ಸೀಮೆ ಎಣ್ಣೆ ಕೊಳ್ಳಲು ಬಂದವರು ತೆಂಗಿನ ಕಾಯಿ, ಅಡಿಕೆ ತರಕಾರಿಗಳನ್ನೆಲ್ಲ ಕ್ರಯಮಾಡಿ ಬದಲಿಗೆ ಅಂಗಡಿಯಿಂದ ಎಣ್ಣೆ ಪಡೆದುಕೊಳ್ಳುತ್ತಿದ್ದುದು ವಾಡಿಕೆ.

ಸರತಿ ಸಾಲು ತುಂಬಾ ಉದ್ದವಿತ್ತು. ಇದಿನಬ್ಬನ ಸರದಿ ಬರುವಷ್ಟಕ್ಕೆ ಕತ್ತಲಾಗಿತ್ತು‌. ಅಲ್ಪ ಸ್ವಲ್ಪವೇ ಕಾಣುತ್ತಿದ್ದ ರಸ್ತೆ ಸಂಪೂರ್ಣ ಕಾಣದಾಗಿತ್ತು‌. ಸೀಮೆ ಎಣ್ಣೆಯನ್ನು ಮಣ್ಣಿನ ಹೂಜಿಯೊಳಗೆ ಅಂಗಡಿಯವನು ತುಂಬಿಕೊಟ್ಟ. ತನ್ನ ಬಳಿ ಇದ್ದ ಸಣ್ಣ ಲಾಟೀನು ಹಿಡಿದು, ಸಿಕ್ಕ ಸೀಮೆ ಎಣ್ಣೆಯನ್ನು ಅದಕ್ಕೂ ಸ್ವಲ್ಪ ಸುರಿದು ಇದಿನಬ್ಬ ಮನೆಯ ದಾರಿ ಹಿಡಿದ. ಆಗ ತಾನೇ ಕತ್ತಲಾವಾರಿಸಿತ್ತು. ಜೀರುಂಡೆಯ ದನಿ ಕಿವಿಗಡಚಿಕ್ಕುತ್ತಿತ್ತು. ಕಪ್ಪೆಗಳು ತಾವೇನೂ ಕಡಿಮೆಯಿಲ್ಲವೆಂದು ತಿಳಿಸುವಂತೆ ಕೀರಲುಗುಟ್ಟುತ್ತಿದ್ದವು. ಅವೆರಡರ ಶಬ್ದ ಬಿಟ್ಟರೆ ಮಳೆಯ ಸದ್ದು, ಗಾಳಿಗೆ ಮರ ಬಾಗಿ ಕೀರಲುಗುಟ್ಟುವ ದನಿ, ಮತ್ತೆ ನೀರು ಹರಿಯುವ ರಭಸ ಧ್ವನಿ. ಇಷ್ಟೂ ಬಿಟ್ಟರೆ ಕಾಡಿಗೆ ಕಾಡೇ ನಿಶ್ಯಬ್ದ. ದಾರಿ ಹೆದರಿಕೆ ಹುಟ್ಟಿಸುತ್ತಿತ್ತು. ಆದಷ್ಟು ಬೇಗ ಮನೆ ತಲುಪುವುದು ಮಾತ್ರ ಗುರಿ ಮಾಡಿಕೊಂಡು ಇದಿನಬ್ಬ ಹೆಜ್ಜೆ ಹಾಕುತ್ತಿದ್ದಾನೆ.

ಇದ್ದಕ್ಕಿದ್ದಂತೆ “ಶ್ಶ್…” ಎಂಬ ಶಿಳ್ಳೆಯಂತಹ ಶಬ್ದ ಕೇಳಿ ಇದಿನಬ್ಬ ನಿಂತಲ್ಲಿ ಸ್ತಬ್ಧನಾದ. ಎರಡ್ಮೂರು ಬಾರಿ ಆ ಶಬ್ದ ಆವರ್ತನೆಯಾಯಿತು. ಹಿಂದಿರುಗಿ ನೋಡಿದ. ಮತ್ತೆ “ಶ್ಶ್-ಶ್ಶ್” ಶಬ್ದ ಮತ್ತೆ ಕೇಳುತ್ತಿದೆ. ಇದಿನಬ್ಬನ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಹ ಅನುಭವ. ಇನ್ನೇನು ಮಾಡುವುದೆಂದು ತೋಚದೆ ಕತ್ತಲಲ್ಲಿ ಬೆಕ್ಕಿನಂತೆ ಮೆಲ್ಲಗೆ ಮುಂದಡಿಟ್ಟ. ಆಗ ಕಂಡ ದೃಶ್ಯ ಎಂಥವನ ಎದೆಯಲ್ಲೂ ನಡುಕ ಹುಟ್ಟಿಸುವಷ್ಟು ಭಯಾನಕವಾಗಿತ್ತು. ಹೆಬ್ಬಾವಿನ ಗಾತ್ರದ ಕೊಳಕು ಮಂಡಲ ಹಾವೊಂದು ಲಾಟೀನು ಬೆಳಕಿಗೆ ಬುಸುಗುಡುತ್ತಿದೆ. ರಪಕ್ಕನೆ ಬೆಳಕಿನೆಡೆಗೆ ಒಮ್ಮೆಲೆ ನೆಗೆಯಿತು. ಮತ್ತೆ ಫೂತ್ಕಾರ. ಹೆದರಿ ಬೆವತ ಇದಿನಬ್ಬ ನಡುಗುವ ಕೈಗಳಿಂದ ಲಾಟೀನನ್ನು ಆ ಮರದ ಬಳಿ ಎಸೆದು ಬಿಟ್ಟ. ಬಂದ ದಾರಿಯ ಅಂದಾಜಿಗೆ ಕಾಲು ಹಾಕುತ್ತಾ ಒಂದೇ ಸಮನೆ ಓಡಿದ. ಆ ಭಯಂಕರ ಹಾವಿನ ನಿಗಿ ನಿಗಿ ಮಿನುಗುವ ಕಣ್ಣುಗಳು ಆತನನ್ನು ಮತ್ತೆ ಮತ್ತೆ ಕಾಡುತ್ತಲೇ ಇತ್ತು. ಜಡಿ ಮಳೆಯ ಮಧ್ಯೆ ಓಡುತ್ತಲೇ ಇದಿನಬ್ಬ ಹಾಗೂ ಹೀಗೂ ಮನೆಯ ಹತ್ತಿರ ತಲುಪಿದ. ಬಂದ ದಾರಿ ಅಷ್ಟೂ ಸರಿ ಎಂದು ಇದಿನಬ್ಬನಿಗೆ ಮನಸ್ಸಿನಲ್ಲೇ ಸಣ್ಣ ಸಮಾಧಾನ.

ಹುಡುಗ ನಿಟ್ಟುಸಿರು ಬಿಟ್ಟ. ಹೆದರಿಕೆಯಿಂದಲೇ ಕೆಸರು ಹಳ್ಳಕ್ಕೆಲ್ಲಾ ಕಾಲು ಹಾಕುತ್ತಾ ಮನೆಗೆ ಓಡಿ ತಲುಪಿದ. ನಡೆದ ವೃತ್ತಾಂತವೆಲ್ಲಾ ತಿಳಿಸಿದಾಗ, ಹಿಂದೆ ಆ ದಾರಿಯಲ್ಲಿ ಬಂದವರಿಗೆ ಪಿಶಾಚಿಗಳು ದಾರಿ ಕೆಡಿಸಿ ಕೆಸರಿನ ಹೊಂಡಕ್ಕೆ ಬೀಳುವಂತೆ ಮಾಡಿದ ಘಟನೆಗಳನ್ನು ಕರೀಂ ಸಾಹೇಬರು ಹೇಳಿದರು.ಕೇಳಿಸಿಕೊಂಡ ಇದಿನಬ್ಬನಿಗೆ ಆ ರಾತ್ರಿ ನಿದ್ದೆ ಹತ್ತಲಿಲ್ಲ. ಸಣ್ಣಗೆ ನಿದ್ದೆ ಮಂಪರಿನಲ್ಲಿ ಏನೇನೋ‌ ಒದರಿಕೊಳ್ಳತೊಡಗಿದ. ಕರೀಂ ಸಾಹೇಬರು ತಮಗೆ ಗೊತ್ತಿದ್ದ ದ್ಸಿಕ್ರ್ ( ದೇವನಾಮಸ್ಮರಣೆ ) ಗಳನ್ನು ಮಂತ್ರಿಸಿದರು. ನಿದ್ದೆ ಸುಳಿಯದೆ ಹೊರಳಾಡಿ ಇದಿನಬ್ಬ ರಾತ್ರಿ ಕಳೆದ.

ರಾತ್ರಿ ಕಂಡದ್ದು , ಕನಸೋ, ನಿಜವೋ ಒಂದೂ ಅರಿಯದೆ ಇದಿನಬ್ಬನಿಗೆ ಜ್ವರ ಏರುತ್ತಿತ್ತು. ಕರೀಮ್ ಸಾಹೇಬ ಜ್ವರ ಇಳಿಯಲು ತಣ್ಣೀರಿನಲ್ಲಿ ಅದ್ದಿದ ವಸ್ತ್ರವನ್ನು ಆಗಾಗ ಹಣೆಯ ಮೇಲಿಟ್ಟು ಶುಶ್ರೂಷೆ ಮಾಡತೊಡಗಿದರು.ಇವುಗಳನ್ನು ಸಾಹೇಬರ ಹೆಂಡತಿ ಕಂಡು ಒಳಗೊಳಗೆ ಕುದಿಯುತ್ತಿದ್ದಳು. ಬೆಳಗಾಯಿತು.

ಮರುದಿನ ಬೆಳಕು ಹರಿಯಿತು. ಮಳೆ ನಿಂತಿತು. ಬೆಳಿಗ್ಗೆ ಕರೀಂ ಸಾಹೇಬರು ತಥಾಕಥಿತ ಲಾಟೀನು ಬಿಟ್ಟು ಬಂದ ಮರದ ಬಳಿ ಹೊರಟರು. ತುಂಬಾ ನಡೆದ ಬಳಿಕ ಆ ಹಳುವಿನ ಬಳಿ ತಲುಪಿರಬೇಕು‌; ಏನೋ ಸುಟ್ಟ ವಾಸೆನೆ ಮೂಗಿಗೆ ಬಡಿಯತೊಡಗಿತು. ಅದರ ಜಾಡು ಹಿಡಿದು ನಡೆದರು. ಹೋಗಿ ನೋಡುವುದೇನು, ಲಾಟೀನನ್ನು ಸುತ್ತಿ ಅದರಲ್ಲಿನ ಸೀಮೆ ಎಣ್ಣೆ ಮೈ ಮೇಲೆ ಸುರಿದು ಮೈಯೆಲ್ಲಾ ಬೆಂಕಿ ಹತ್ತಿಸಿಕೊಂಡು ಕನ್ನಡಿ ಹಾವು ಅರ್ಧಕ್ಕರ್ಧ ಬೆಂದು ಹೋಗಿದೆ. ಕರೀಂ ಸಾಬರಿಗೆ ಒಮ್ಮೆ ಜೋರು ನಗು ಬಂತು.ನಿಟ್ಟುಸಿರು ಬಿಡುತ್ತ ಕರೀಂ ಸಾಹೇಬ್ ಸತ್ತ ಹಾವನ್ನು ಅಲ್ಲೇ ಹೂತು ಮನೆಗೆ ಮರಳಿದರು.ನಡೆದ ವೃತ್ತಾಂತವನ್ನೆಲ್ಲಾ ತಿಳಿಸಿದರು. ಅಷ್ಟಕ್ಕೆ ಇದಿನಬ್ಬನಿಗೆ ಸ್ವಲ್ಪ ಧೈರ್ಯ ಬಂತು. ಎರಡೇ ದಿನಗಳಲ್ಲಿ ಜ್ವರವಿಳಿದು ಇದಿನಬ್ಬ ಹಿಂದಿನಂತಾದ‌.

ಬೆಳದಿಂಗಳು ಮುಂಗಾರಿಗೆ ರಜೆಹಾಕಿದರೆ ಮತ್ತೆ ಚಂದ್ರ ಸರಿಯಾಗಿ ಮುಖ ದರ್ಶನ ಮಾಡಿಸಲು ಹಿಂಗಾರು ಮುಗಿದು ಚಳಿಗಾಲ ಆರಂಭವಾಗಬೇಕು. ಮಳೆಗಾಲ ಬಂದರೆ ಹಲಸಿನ ಹಪ್ಪಳಗಳನ್ನು ಮಾಡುವ ಕೆಲಸ. ಚೆನ್ನಾಗಿ ಒಣಗುವಷ್ಟು ಬಿಸಿಲು ಬರುವುದನ್ನು ಕಾಯುವಂತಿಲ್ಲ. ಬಿಸಿಲು ಬೀಳದ ದಿನಗಳಲ್ಲಿ ಒಲೆಯ ಮೇಲೆ ಬೆಚ್ಚಗೆ ಅವನ್ನು ಒಣಗಲು ಹಾಕಬಹುದು. ಮಳೆಗಾಲ ಮಕ್ಕಳಿಗೆಲ್ಲಾ ಸಂಡಿಗೆ, ಹಪ್ಪಳಗಳು ಆಪ್ಯಾಯಮಾನ. ಹೊಲಗಳಲ್ಲಿ ಕೃಷಿ ನಡೆಸಲಾರದ ದಿನಗಳವು‌. ಕೆಲಸವಿಲ್ಲದ ಆ ದಿನಗಳಲ್ಲಿ ಇದಿನಬ್ಬ ಮಕ್ಕಳೊಂದಿಗೆ ಆಟವಾಡುವುದನ್ನೂ ರೂಢಿಸಿಕೊಂಡಿದ್ದ. ಮೊದಲ ಮಳೆಗಾಲ ಅಲ್ಪ ಸ್ವಲ್ಪ ಕಷ್ಟವಾದರೂ ಯಾವುದೇ ಧಾನ್ಯಗಳು, ಆಹಾರ ಸಾಮಾಗ್ರಿಗಳಿಗೂ ದೊಡ್ಡ ಮಟ್ಟಿನ ಕೊರತೆಯಾಗದೆ ಸಲೀಸಾಗಿಯೇ ಸಾಗಿತು.

ಮೂರನೇ ವರ್ಷಕ್ಕೆ ಭೀಕರ ಕ್ಷಾಮವೊಂದು ರಾಮಪುರಕ್ಕೆ ಬಂತು.ಅದೊಂದು ಬಿರು ಬಿಸಿಲಿನ ತಿಂಗಳು ಇಡೀ ಊರೇ ಮಳೆ ಇಲ್ಲದೆ ಹೊತ್ತಿ ಉರಿಯಿತು. ನೀರಿಗೆ ಹಾಹಾಕಾರವೆದ್ದಿತು. ಹಸಿರು ಹೊದ್ದ ಗದ್ದೆಗಳು ಬತ್ತಿ ಹೋದವು. ತಮಿಳು ನಾಡಿನ ಕೋಸಾಸ್ತಾಲಿಯಾರ್ ನದಿಯಲ್ಲಿ ನೀರು ಅಲ್ಪ ಸಲ್ಪ ಹೆಪ್ಪುಗಟ್ಟಿದಂತೆ ಲಭ್ಯವಿತ್ತು. ಹಸಿರು ತುಂಬಿದ ನಾಡಿಡೀ ಸ್ಮಶಾನದಂತೆ ಬಂಜರು ಭೂಮಿಯಾಯ್ತು. ದನ ಕುರಿಗಳಲೆಲ್ಲಾ ಸಾಯಲಾರಂಭಿಸಿದವು. ಸುಮಾರು ಮೈಲಿ ನಡೆದು ಕೊಸಾಸ್ತಾಲಿಯಾರ್ ನದಿಯಿಂದ ನೀರು ತಂದು ಆಡು ಮತ್ತು ದನ ಕರುಗಳಿಗೆ ನೀಡಬೇಕಾದ ಪರಿಸ್ಥಿತಿ ಎದುರಾಯಿತು. ಮೈಲುಗಟ್ಟಲೆ ನಡೆದು ತಂದ ನೀರು ಕುಡಿಯಲು ಮತ್ತು ದನಕರುಗಳಿಗೆ ಕುಡಿಸಲು ಬಳಕೆಯಾಗುತ್ತಿತ್ತು. ಈ ಕೆಲಸ ಸ್ವತಃ ಕರೀಂ ಸಾಹೇಬರು ಮಾಡುತ್ತಿದ್ದರೂ ಅವರ ಹೆಂಡತಿ ಇದಿನಬ್ಬನಿಗೆ ವಹಿಸಿದ್ದರು. ನೀರು ಕುಡಿಯಲು ಇರಿಸುತ್ತಿದ್ದ ಪಾತ್ರೆಗೆ ಸುರುವುತ್ತಿದ್ದಂತೆ ಸುತ್ತ ಮುತ್ತಲಿನ ದನ ಕರುಗಳು ಓಡಿ ಬಂದು ಬಾಯಿ ಹಾಕುತ್ತಿದ್ದವು. ಇದನ್ನು ತಡೆಯಲು ಉಗ್ರ ಸಾಹಸದ ಅಗತ್ಯ ಇದಿನಬ್ಬನಿಗಿತ್ತು. ಒಮ್ಮೆ ದನಗಳನ್ನು ಓಡಿಸುವುದನ್ನು ನೋಡಿದ ಕರೀಂ ಸಾಹೇಬರು “ಕುಡಿಯಲಿ ಪಾಪ, ಯಾರದಾದರೇನು” ಎಂದು ಮಾನವೀಯತೆ ತೋರಿದ್ದರು.

 

ಆ ಬಳಿಕ ಮುಲಾಜಿಗೆ ಬಿದ್ದು ದನಕರುಗಳನ್ನು ಓಡಿಸುವ ಕೆಲಸಕ್ಕೂ ಕಡಿವಾಣ ಹಾಕಿದ ಇದಿನಬ್ಬನಿಗೆ ಕೆಲಸ ಹೆಚ್ಚಾಯಿತು. ನೀರಿನ ಅಗತ್ಯ ಅಧಿಕವಾಗತೊಡಗಿತು. ನೀರು ಬೇಡವಿದ್ದರೂ ನದಿಯಿಂದ ನೀರು ತರಲು ಸಾಹೇಬರ ಹೆಂಡತಿ ಕಳುಹಿಸುತ್ತಿದ್ದರು.ಇದರಿಂದ ಇತರ ಕೆಲಸಗಳು ಅರ್ಧಕ್ಕೆ ಉಳಿಯತೊಡಗಿದವು. ಒಂದು ಕಡೆ ಮನೆಯ ಅವ್ಯವಸ್ಥೆ, ಇನ್ನೊಂದು ಕಡೆ ಬರಗಾಲದ ತಲೆ ನೋವು ಜೊತೆ ಜೊತೆಯಾಗಿ ಕಾಡುತ್ತಿದ್ದ ಕರೀಂ ಸಾಹೇಬರು ಕೋಪಗೊಳ್ಳತೊಡಗಿದ್ದರು. ಸಣ್ಣ ಸಣ್ಣ ವಿಷಯಕ್ಕೂ ಬೈಯ್ಯುತ್ತಿದ್ದರು. ಮನೆಯವರೊಂದಿಗೆ ಜಗಳವಾಡತೊಡಗಿದರು‌. ಇದಿನಬ್ಬನಿಗೆ ಈ ಮರ್ಜಿ ಹಿಡಿಸಲಿಲ್ಲ. ಕೆಲವವೊಮ್ಮೆ ವಿಪರೀತ ಕೋಪ ಬರುತ್ತಿತ್ತು. ಏನೂ ಎದುರುತ್ತರಿಸಲಾಗದೆ ಸುಮ್ಮನಾಗುತ್ತಿದ್ದ.

(ಈ ಕಾದಂಬರಿಯ ಮುಂದಿನ ಕಂತು, ಮುಂದಿನ ಭಾನುವಾರ ಪ್ರಕಟವಾಗುವುದು)