(ಬ್ರೆಕ್ಟ್ )

ಕಾರ್ಮಿಕನೊಬ್ಬನಿಗೆ ಕಂಡ ಇತಿಹಾಸ

ಥೇಬ್ಸ್ ನಗರದ ಸುತ್ತ ಏಳು ಗೇಟುಗಳನ್ನು ನಿಲ್ಲಿಸಿದ್ಯಾರು?
ಪುಸ್ತಕಗಳ ತುಂಬಾ ರಾಜರ ಹೆಸರುಗಳೇ ತುಂಬಿವೆ
ನಿಜಕ್ಕೂ ರಾಜರು ಅಂಥ ಒರಟಾದ ಕಲ್ಲು ಹೊತ್ತರೇ?
ಬ್ಯಾಬಿಲಾನ್ ನಗರವೂ ಅಷ್ಟೆ, ಎಷ್ಟೆಲ್ಲ ಬಾರಿ ನೆಲಸಮವಾಯಿತು
ಪ್ರತೀ ಬಾರಿಯೂ ಅದನ್ನ ಕಟ್ಟಿದ್ದು ಯಾರು?
ಚಿನ್ನದಿಂದಲೇ ನಿರ್ಮಿಸಿದ ಲೀಮಾ ನಗರದ
ಯಾವ ಅರಮನೆಯಲ್ಲಿ ಅದನ್ನ ಕಟ್ಟಿದವರು ನೆಲೆಸಿದ್ದಿದೆ ಹೇಳಿ.
ಚೀನಾದ ಬೃಹತ್ ಗೋಡೆಯನ್ನ ಕಟ್ಟಿ ಮುಗಿಸಿದ ಸಂಜೆ
ಕಲ್ಲುಗಳ ಮೇಲೆ ಬೆವರು ಸುರಿಸಿದವರೆಲ್ಲ ಎಲ್ಲಿ ಹೋದರು?
ರೋಮ್ ಸಾಮ್ರಾಜ್ಯವಂತೂ ದಿಗ್ವಿಜಯದ ಕಮಾನುಗಳಿಂದಲೇ ತುಂಬಿದೆ
ಅವನ್ನೆಲ್ಲ ಅಲ್ಲಿ ನಿಲ್ಲಿಸಿದವರ್ಯಾರು?
ಸೀಸರ್ ಗಳು ಗೆದ್ದದ್ದು ಯಾರ ವಿರುದ್ಧ?
ಬೈಜಾ಼ಂಟಿಯಮ್ ನ ಹಾಡುಗಳಲ್ಲಿರೋದು ನಿಜವಾದ ಅರಮನೆಗಳೇ?
ಮತ್ತೆ ದಂತಕಥೆಗಳ ಆ ಅಟ್ಲಾಂಟಿಸ್ ನಗರ ರಾತ್ರಿ ಸಮುದ್ರದಲ್ಲಿ ಮುಳುಗುತ್ತಿದ್ದಾಗ
ಅಲ್ಲಿನ ಘಟಾನುಘಟಿಗಳೆಲ್ಲ ಸಾಯೋ ಹೊತ್ತಿಗೂ
ಸೇವಕರನ್ನ ಕೂಗಿ ಕರೀತಿದ್ದರಂತೆ.

ಯುವ ಅಲೆಕ್ಸಾಂಡರ್ ಭಾರತವನ್ನ ಗೆದ್ದ,
ಅವನೇನು ಒಬ್ಬನೇ ಹೋಗಿದ್ದನೇ?
ಸೀಸರ್ ಗೌಲ್ ಪ್ರಾಂತ್ಯವನ್ನ ಗೆದ್ದ,
ಅವನ ಸೈನ್ಯದಲ್ಲಿ ಒಬ್ಬ ಅಡುಗೆಯೋನೂ ಇಲ್ಲವಾಗಿತ್ತೇ?
ಸ್ಪೇನ್ನ ಫಿಲಿಪ್ ದೊರೆ ತನ್ನ ಯುದ್ಧನೌಕೆಗಳು ಮುಳುಗೋದು ಕಂಡು ಅತ್ತ,
ಆಗ ಮತ್ಯಾರೂ ಕಣ್ಣೀರನ್ನೇ ಸುರಿಸಿಲ್ಲವೇ?
ಗ್ರೀಕರ ದೊರೆ ಫ್ರೆಡ್ರಿಕ್ ಏಳು ವರ್ಷ ನಡೆದ ಯುದ್ಧ ಗೆದ್ದ,
ಅವನೊಂದಿಗೆ ಮತ್ಯಾರ್ಯಾರು ಗೆದ್ದರು?

ಪುಸ್ತಕದಲ್ಲಿ ಪುಟಕ್ಕೊಂದೊಂದರಂತೆ ದಿಗ್ವಿಜಯದ ಇತಿಹಾಸ,
ವಿಜಯೋತ್ಸವಗಳು ನಡೆದದ್ದು ಯಾರ ಖರ್ಚಿನಲ್ಲಿ?
ಹತ್ತು ವರ್ಷಕ್ಕೊಬ್ಬೊಬ್ಬ ಹೊಸ ರಾಜ,
ಪ್ರತೀ ಬಾರಿ ವಾಲಗ ಊದಿದ್ದು ಯಾರು?

ಎಷ್ಟೆಲ್ಲ ಸೂಕ್ಷ್ಮಗಳು…
ಎಷ್ಟೆಲ್ಲ ಪ್ರಶ್ನೆಗಳು…

2.

ಮಹಾಪ್ರಭುವೇ, ನಿನ್ನ ಟ್ಯಾಂಕರು
ತುಂಬಾ ಬಲಶಾಲಿಯಾಗಿದೆ.
ದಟ್ಟವಾದ ಕಾಡುಗಳನ್ನು, ನೂರಾರು ತಲೆಗಳನ್ನು
ಒಂದೇ ಹೊಡೆತಕ್ಕದು ನೆಲಸಮ ಮಾಡಬಲ್ಲದು…
ಆದರೂ ಅದರಲ್ಲೊಂದು ದೋಷವಿದೆ,
ಚಾಲಕನಿಲ್ಲದೆ ಅದು ಚಲಿಸಲಾರದು.

ಮಹಾಪ್ರಭುವೇ, ನಿನ್ನ ಬಾಂಬರು
ತುಂಬಾ ಬಲಶಾಲಿಯಾಗಿದೆ.
ಬಿರುಗಾಳಿಯಂತೆ ಹಾರಬಲ್ಲದು,
ಆನೆಗಳ ತೂಕವನ್ನೂ ಹೊರಬಲ್ಲದು…
ಆದರೂ ಅದರಲ್ಲೊಂದು ದೋಷವಿದೆ,
ಮೆಕ್ಯಾನಿಕ್ ಇಲ್ಲದೆ ಅದು ದುರಸ್ತಿಯಾಗಲಾರದು.

ಮಹಾಪ್ರಭುವೇ, ಈ ಮನುಷ್ಯ ಅನ್ನೋನು
ತೀರಾ ಉಪಕಾರಿಯಾದವನು.
ಹಾರಬಲ್ಲ, ಕೊಲ್ಲಬಲ್ಲ
ನೀ ಹೇಳಿದಂತೆ ಮಾಡಬಲ್ಲ…
ಆದರೆ ಅವನಲ್ಲೂ ಒಂದು ದೋಷವಿದೆ,
ಅವನು ಯೋಚಿಸಬಲ್ಲ ಕೂಡ.

ಚಿನ್ಮಯ್ ಹೆಗಡೆ ಉತ್ತರಕನ್ನಡ ಜಿಲ್ಲೆಯ ಕುಮಟಾದವರು.
ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಿಂಡಿಕೇಟ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)