ಇತ್ತೀಚೆಗೆ ಸಾಗರದಿಂದ ಶಿವಮೊಗ್ಗಕ್ಕೆ ಪ್ರಯಾಣಿಸುವಾಗ ಬಸ್ ಕೆಂಡಕ್ಟರ್ ಒಬ್ಬರು ಈ ಬಾರಿಯ ಚುನಾವಣೆಯನ್ನು ರಸವತ್ತಾಗಿ ವಿಶ್ಲೇಷಣೆ ಮಾಡುತ್ತಿದ್ದರು.`ಈ ಬಾರಿ ಚುನಾವಣಾ ಆಯೋಗ ಬ್ಯಾನೆರ್ ಕಟ್ಟುವುದನ್ನು ನಿಷೇಧ ಮಾಡಿದೆ, ಇಲ್ಲಾ ಅಂದ್ರೆ ಇವರುಗಳು ಇಷ್ಟೊತ್ತಿಗಾಗಲೇ ಊರೆಲ್ಲಾ ಗಬ್ಬೆಬ್ಬಿಸುತ್ತಿದ್ದರು, ಟಿ.ಎನ್ ಶೇಷನ್ ಇದ್ದಾಗ ಚುನಾವಣಾ ಆಯೋಗ ಕೆಲವು ಕ್ರಮ ಕೈಗೊಂಡಿತ್ತು, ಅದನ್ನು ಬಿಟ್ಟರೆ ಈಗ ಅಂಥದೊಂದು ಕೆಲಸ ಈಗ ಆಗಿದೆ ಎಂದರು. ಕೆಂಡೆಕ್ಟರ್ ಮಾತನ್ನು ಕೇಳಿ ಡ್ರೈವರ್ ನೀಡಿದ ಪ್ರತಿಕ್ರಿಯೆ ಇನ್ನೂ ಸ್ವಾರಸ್ಯಕರವಾಗಿತ್ತು. ಗಣಕೀಕೃತ ಬ್ಯಾನರ್ ಬಂದ ಮೇಲಂತೂ ಎಂಥೆಂಥವರ ಕೌಟೌಟ್ ಬೇಕಾದರೂ ಊರಿನ ಹೆಬ್ಬಾಗಿಲ್ಲಿ ನಿಲ್ಲಿಸುತ್ತಿದ್ದರು, ಇವರ ಪಕ್ಕದಲ್ಲಿ ದೇವರ ಪೋಟೋ! ಇವರಿಗೆ ಕೈ ಮುಗಿಯಬೇಕೋ ದೇವರಿಗೆ ಕೈ ಮುಗಿಯಬೇಕೋ? ಈ ಬಾರಿಯ ಚುನಾವಣೆಯಲ್ಲಿ ಜನ ಇಂತಹ ಡೋಂಗಿ ಪ್ರಚಾರಿಗಳಿಗೆಲ್ಲಾ ಪಾಠ ಕಲಿಸಲಿದ್ದಾರೆ ಎಂದರು.
ಇಲ್ಲಿ ಹೇಳಹೊರಟಿರುವುದು ಚುನಾವಣಾ ಆಯೋಗದ ಕ್ರಮದ ಕುರಿತು. ಬ್ಯಾನರ್, ಬಂಟ್ಟಿಂಗ್ಸ್, ಬಿತ್ತಿಪತ್ರ ಸೇರಿದಂತೆ ಚುನಾವಣಾ ಪ್ರಚಾರ ಸಾಮಗ್ರಿಗಳ ಪ್ರದರ್ಶನಕ್ಕೆ ಆಯೋಗ ಈ ಬಾರಿ ಕಟ್ಟುನಿಟ್ಟಿನ ಮೂಗುದಾರ ಹಾಕಿದೆ. ಪಕ್ಷ, ಸಿದ್ದಾಂತ, ಕ್ಷೇತ್ರ, ರಾಜಕಾರಣಿ ಇತ್ಯಾದಿ ವಿಷಯಗಳಲ್ಲಿ ಜನರಲ್ಲಿ ವಿಭಿನ್ನ ಒಲವುಗಳಿದ್ದರೂ ಚುನಾವಣಾ ಆಯೋಗದ ಕ್ರಮದ ಕುರಿತು ಯಾವುದೇ ಮತದಾರನಿಗೆ ಭಿನ್ನಾಭಿಪ್ರಾಯ ಇದ್ದಂತಿಲ್ಲ. ಆಯೋಗ ವಿರುದ್ಧ ತಮ್ಮ ಆಟ ಫಲಿಸದು ಎಂದು ಗೊತ್ತಾಗಿರುವುದರಿಂದ ರಾಜಕಾರಣಿಗಳು ತಂತ್ರ ಬದಲಿಸಿದ್ದಾರೆ. ಸಾರ್ವಜನಿಕ ಪ್ರಚಾರ ಬದಿಗಿರಿಸಿ ಸೀರೆ, ಅಕ್ಕಿ, ನಗದು, ಕೂಪನ್ ಇತ್ಯಾದಿಗಳನ್ನು ವಿತರಿಸುವ ಗುಪ್ತ ಕಾರ್ಯಾಚರಣೆಗೆ ಸದ್ದಿಲ್ಲದೆ ಶರವೇಗ ಪಡೆದುಕೊಂಡಿದೆ. ನೇರವಾಗಿ ವಸ್ತುಗಳನ್ನು ವಿತರಿಸಿದರೆ ಅದು ಮಾಧ್ಯಮಗಳಿಗೆ ಗೊತ್ತಾಗುವುದರಿಂದ ಕೂಪನ್ ವ್ಯವಸ್ಥೆ ಮಾಡಲಾಗಿದೆ. ಕೂಪನ್ ಪಡೆದ ವ್ಯಕ್ತಿ ಸೂಚಿಸುವ ಸ್ಥಳಕ್ಕೆ ಹೋಗಿ ಅದನ್ನು ಕೊಟ್ಟರಾಯಿತು. ಪಾಲು ಸಿಗುತ್ತದೆ.
ಚುನಾವಣಾ ಆಯೋಗ ಬ್ಯಾನರ್ ನಿಷೇಧಿಸಿರುವಂತೆ ಪೋಲೀಸ್ ಇಲಾಖೆಯೂ ಉಪಯುಕ್ತ ಕ್ರಮವೊಂದನ್ನು ಕೈಗೊಂಡಿದೆ. ಮರಿ, ಪುಡಿ ಅತ್ಯುತ್ಸಾಹಿ ರೌಡಿಗಳೆನ್ನೆಲ್ಲಾ ಸ್ಷೇಷನಿಗೆ ಕರೆಯಿಸಿ, ಒಮ್ಮೆ ವಿಚಾರಿಸಿ, ಅವರಿಂದ ಬಾಂಡ್ ಸಿಸ್ಟಂ ಎಂಬ ಪತ್ರಕ್ಕೆ ಸಹಿ ಹಾಕಿಸಿದೆ. ಈ ಬಾಂಡ್ಗೆ ರೌಡಿಗಳ ಸಂಬಂಧಿಕರು ಸಹಿ ಹಾಕಿ ಜೊತೆಗೆ ಹಣದ ಮೌಲ್ಯಕ್ಕೆ ಆಸ್ತಿ ಪತ್ರವನ್ನು ನೀಡಬೇಕು. ಚುನಾವಣೆಯಲ್ಲಿ ತೋಳ್ಬಲ ಪ್ರದರ್ಶನಕ್ಕೆ ಹೊರಟರೆ ಜೈಲುಪಾಲಾಗುವುದು ಮಾತ್ರವಲ್ಲ ಆಸ್ತಿಯೂ ಹೋಗಲಿದೆ. ಬಾಂಡ್ಗೆ ಸಹಿಹಾಕಿದ ಸಂಬಂಧಿಯೇ ರೌಡಿಯನ್ನು ಹದ್ದುಬಸ್ತಿನಲ್ಲಿಡುವುದರಿಂದ ಇಂತಹ ಅನಗತ್ಯ ಪ್ರಹಸನಗಳ ಸಂಖ್ಯೆ ಕಡಿಮೆಯಾಗಲಿದೆ. ಮೈಸೂರಿನಲ್ಲಿ ಈಗಾಗಲೇ 110 ರೌಡಿಗಳಿಂದ ಬಾಂಡ್ ಬರೆಯಿಸಿಕೊಳ್ಳಲಾಗಿದೆಯಂತೆ. ಹೀಗೆ ಕಾನೂನು ಒಂದು ಕಡೆ ತನ್ನ ಕೆಲಸ ಮಾಡುತ್ತಿದೆ, ಇನ್ನೊಂದೆಡೆ ಜನರನ್ನು ಪ್ರತಿನಿಧಿಸುವ ನಿಧಿಗಳು ತಮ್ಮ ಕೆಲಸ ಮಾಡುತ್ತಿದ್ದಾರೆ. ಇಪ್ಪತ್ತೆರಡು ದಿನಗಳು ಮಾತ್ರ ಉಳಿದಿರುವ ಚುನಾವಣಾ ಅಖಾಡದಲ್ಲಿ ಇದುವರೆಗೆ ನೀತಿ ಸಂಹಿತೆ ಉಲ್ಲಂಘನೆಗಾಗಿ ದಾಖಲಾದ ದೂರುಗಳು ಮುನ್ನೂರು.
ರಾಜಕಾರಣಿಗಳಿಗೆ ಪ್ರಚಾರ ಮಾಡಲು ಕೊನೆಯದಾಗಿ ಉಳಿದಿರುವ ಮಾರ್ಗ ಸಮೂಹ ಮಾಧ್ಯಮಗಳನ್ನು ಅವಲಂಬಿಸುವುದು. ಮಾಧ್ಯಮಗಳಲ್ಲಿ ನಿಜವಾದ ಬಣ್ಣ ಬಯಲಾಗುವುದರಿಂದ ಹೆಚ್ಚಿನ ಅರ್ಭ್ಯರ್ಥಿಗಳು ಈ ದುಸ್ಸಾಹಸಕ್ಕೆ ಕೈ ಹಾಕುವ ಸಾಧ್ಯತೆ ಕಡಿಮೆ. ದುಡ್ಡು, ಜಾತಿ, ಪಕ್ಷ, ವ್ಯಕ್ತಿ ವರ್ಚಸ್ಸು ಇತ್ಯಾದಿಗಳೆಲ್ಲಾ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದರೂ ನಿರ್ಣಾಯಕ ಪಾತ್ರಧಾರಿ ಮತದಾರನೇ ಆಗಿರುವುದರಿಂದ ಅವನ ಪ್ರಜ್ಞಾವಂತಿಕೆಯ ಮೇಲೆ ಇಡಿ ಚುನಾವಣೆ ನಿಂತಿದೆ. ಆಯೋಗ ಕೈಗೊಂಡಿರುವ ಕ್ರಮದ ಜೊತೆ ಜನರೂ ಕೈಜೋಡಿಸಿದರೆ ಈ ದೇಶದಲ್ಲಿ ಇಲ್ಲಿಯವರೆಗೆ ನಡೆಯುತ್ತಿದ್ದ ಚುನಾವಣೆಗಳ ಇತಿಹಾಸವೇ ಬದಲಾಗಬಹುದು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ