ಈ ಆಲೋಚನೆ ಹೊಳೆದ ರಾತ್ರಿ ಅವನಿಗೆ ನಿದ್ದೆಯೇ ಬರಲಿಲ್ಲ. ಕಾಲೇಜಿನ ಇನ್ನೊಬ್ಬ ಪ್ರೊಫೆಸರ್ ಕೊಟ್ಟಿದ್ದ ಹೋಂ ವರ್ಕ್ ಮಾಡಲೂ ಸಹ ಮನಸು ಬರಲಿಲ್ಲ. ಬದಲಿಗೆ, ಹಾಸಿಗೆಯಿಂದೆದ್ದು, ಇಲ್ಲಿಯವರೆಗೆ ಕಲೆ ಹಾಕಿದ್ದ ಅಂಕಿ-ಸಂಖ್ಯೆಗಳು-ಮಾಹಿತಿಗಳನ್ನೆಲ್ಲಾ ಮತ್ತೆ-ಮತ್ತೆ ನೋಡಿ, ಸಣ್ಣ ಕಾಗದದ ಮೇಲೊಂದು ದಾರದಂತೆ ಗೆರೆಯೊಂದನ್ನು ಎಳೆದು ಅದರ ಮೇಲೆ, ತನ್ನ ಲೆಕ್ಕಾಚಾರ ಬಳಸಿ ಬಿಳಿಗಣ್ಣು, ಹಳದಿ ಬಣ್ಣ, ಕಿರು ರೆಕ್ಕೆ, ಹಾರೆಗಣ್ಣು ಇತ್ಯಾದಿ ಜೀನುಗಳನ್ನು ಮಾರ್ಕ್ ಮಾಡಿದ. ವಂಶವಾಹಿ ಗುಣಗಳು ಒಂದು ಪೀಳಿಗೆಯಿಂದ ಇನ್ನೊಂದಕ್ಕೆ ಹೇಗೆ ಸಂವಹಿಸುತ್ತದೆ ಎಂದು ತೋರುವ “ಜೀನ್ ಮ್ಯಾಪ್” ಒಂದು ಹೀಗೆ ಮಾನವ ಇತಿಹಾಸದಲ್ಲೇ ಮೊದಲ ಬಾರಿಗೆ ಸಿದ್ಧವಾಯಿತು.
ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು”
ಇಸವಿ ೧೯೧೦. ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದ ಕಟ್ಟಡ. ರೂಮ್ ನಂಬರ್ ೬೧೩. ಅದು ಒಂದು ಸಣ್ಣ ರೂಮು. ಹೆಚ್ಚೆಂದರೆ ಸುಮಾರು ಒಂದು ರೈಲು ಬೋಗಿಯಷ್ಟಿರಬಹುದು. ಬಾಗಿಲು ತೆರೆದೊಡನೆ ಕಳಿತು-ಕೊಳೆತು ನಾರುತ್ತಿರುವ ಬಾಳೆಹಣ್ಣಿನ ವಾಸನೆ. ಗೊಂಯ್-ಗೊಂಯ್ ಶಬ್ದ. ಎಲ್ಲೆಲ್ಲೂ ಹಾರಾಡುತ್ತಿರುವ ನೊಣಗಳು. ಗೋಡೆಯುದ್ದಕ್ಕೂ ನಿಲ್ಲಿಸಿರುವ ಕಪಾಟುಗಳು. ನಡುವೆ ಸಾಲು ಸಾಲು ಮೇಜುಗಳು. ಆ ಮೇಜುಗಳ ಮೇಲೆ ಅಲ್ಲಲ್ಲಿ ಇಟ್ಟಿರುವ ಮೈಕ್ರೋಸ್ಕೋಪುಗಳ ಮಧ್ಯೆ ಹಳೆಯ ಖಾಲಿ ಬಾಟಲಿಗಳು. ಆ ಬಾಟಲಿಗಳಲ್ಲಿ ಗೊಂಯ್ ಗುಟ್ಟುತ್ತಿರುವ ಲೆಕ್ಕವಿಲ್ಲದಷ್ಟು ನೊಣಗಳು. ಲೈಟ್ ಹಾಕಿದೊಡನೆ ಓಡಿ ಮೇಜಿನ ಸಂದಿಗಳಲ್ಲಿ ಬಚ್ಚಿಟ್ಟುಕೊಳ್ಳುವ ಜಿರಲೆಗಳು. ಇವೆಲ್ಲದರ ಮಧ್ಯೆ, ಗಡ್ಡ-ಮೀಸೆಯುಳ್ಳ, ತೆಳು ದೇಹದ, ಎತ್ತರದ, ಮಧ್ಯ ವಯಸ್ಕನೊಬ್ಬ ತನ್ಮಯತೆಯಿಂದ ಕುಳಿತಿದ್ದಾನೆ. ನೊಣವೊಂದರ ಕಂಗಳಲ್ಲಿ ಕಣ್ಣಿಟ್ಟು ನೋಡುತ್ತಾ…
“ಇಲಿಗಳಿಗೆ ಇಲಿಮರಿಗಳೇ ಹುಟ್ಟುತ್ತವೆ. ಮೆಣಸಿಕಾಯಿ ಗಿಡದಿಂದ ಇನ್ನೊಂದು ಮೆಣಸಿನ ಕಾಯಿ ಗಿಡವೇ. ಮನುಷ್ಯರಿಗೆ ಮನುಷ್ಯರೇ. ಇದು ಏಕೆ?” ಎಂಬ ಸಾವಿರಾರು ವರ್ಷಗಳ ಸರಳ ಪ್ರಶ್ನೆಗೆ ಪೈಥಾಗೊರಾಸನಿಂದ ಹಿಡಿದು ಡಾರ್ವಿನ್‌ನವರೆಗೆ ಮಹಾ ಪಂಡಿತರು ಉತ್ತರ ನೀಡಿಯಾಗಿತ್ತು. ಇಪ್ಪತ್ತನೆಯ ಶತಮಾನದ ಆದಿ ಭಾಗದ ವೇಳೆಗೆ ಹಲವು ವಿಜ್ಞಾನಿಗಳು ಒಂದು ತೀರ್ಮಾನಕ್ಕೆ ಬಂದಿದ್ದರು: ತದ್ರೂಪಿಗಳ ಸೃಷ್ಟಿಗೆ ಗ್ರೆಗೊರ್ ಮೆಂಡೆಲ್ ಹೇಳಿದಂತೆ ವಂಶವಾಹಿ ಕಣಗಳೇ ಕಾರಣ. ಆ ಕಣಗಳಿಗೆ ಹೆಸರನ್ನೂ ನೀಡಿಯಾಗಿತ್ತು: “ಜೀನ್”. ಆದರೆ, ಈ “ಜೀನ್‌ಗಳು” ಹೇಗೆ ಕೆಲಸ ಮಾಡುತ್ತವೆ ಎಂಬುದಿರಲಿ, ಅವು ಎಲ್ಲಿರುತ್ತವೆ ಎಂಬುದೇ ಯಾರಿಗೂ ತಿಳಿದಿರಲಿಲ್ಲ. ಅವು ನಿಜಕ್ಕೂ ಭೌತಿಕ ಕಣಗಳೇ, ಅಥವಾ ವಿದ್ಯುತ್ ಶಕ್ತಿ-ಗುರುತ್ವಾಕರ್ಷಣೆಗಳಂತೆ ಒಂದು ಶಕ್ತಿಯೇ ಎಂಬಂತಹ ತಾತ್ವಿಕ ಚರ್ಚೆಗಳೂ ನಡೆಯುತ್ತಿದ್ದವು. ಇಂತಹ ಪ್ರಶ್ನೆ-ಚರ್ಚೆಗಳಿಗೆ ಕೊನೆಗೂ ಉತ್ತರ ಸಿಕ್ಕಿದ್ದು ಆ ನೊಣಗಳ ರೂಮಿನಲ್ಲೇ. ಇಂದು “The Fly Room” ಎಂದೇ ಪ್ರಖ್ಯಾತಿ ಪಡೆದಿರುವ ಆ ನೊಣಗಳ ಕೊಠಡಿ ಹಲವು ನೊಬೆಲ್ ವಿಜೇತರು ಕೆಲಸ ಮಾಡಿದ ಕೊಠಡಿ ಕೂಡಾ.

(ಪ್ರೊ.ಥಾಮಸ್ ಹಂಟ್ ಮಾರ್ಗನ್)
ನೊಣಗಳ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುವವರು ಪ್ರೊ.ಥಾಮಸ್ ಹಂಟ್ ಮಾರ್ಗನ್. ೪೫ರ ಆಸುಪಾಸು ವಯಸ್ಸಿನ ಪ್ರೊ.ಮಾರ್ಗನ್ ಒಬ್ಬ ಭ್ರೂಣಶಾಸ್ತ್ರಜ್ಞ. ಅವರಿಗೆ ಮೆಂಡೆಲ್‌ನ ವಾದದ ಬಗೆಗೆ ಆಸಕ್ತಿ ಇತ್ತಾದರೂ, ಈ “ಜೀನ್”ಗಳ ಇರುವಿಕೆಯ ಬಗೆಗೆ ನಂಬಿಕೆಯೇ ಇರಲಿಲ್ಲ. ಅವರ ದೃಷ್ಟಿಯಲ್ಲಿ ಈ “ಜೀನ್” ಎನ್ನುವುದು, ಇನ್ನಾವ ವಾದವೂ ಸರಿ ಹೋಗದಿದ್ದಾಗ ಸೃಷ್ಟಿಸಿಕೊಂಡಿರುವ ಒಂದು “ಅನುಕೂಲ ಸಿಂಧು” ಆಲೋಚನೆ ಅಷ್ಟೇ. ಅವರ ಈ ಅಪನಂಬಿಕೆಯನ್ನು ತಲೆಕೆಳಗಾಗಿಸಿ, “ಜೀನ್”ಗಳು ಎಲ್ಲಿವೆಯೆಂದು ತೋರಿಸಿ, ಅವರನ್ನು ನೊಬೆಲ್ ಪ್ರಶಸ್ತಿ ವಿಜೇತನನ್ನಾಗಿ ಮಾಡಿದ್ದು ಅವರು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದ ಆ ನೊಣಗಳ ಕಣ್ಣುಗಳು.
ಈ ನೊಣಗಳ ಕಣ್ಣಿನ ಕತೆಯನ್ನು ಮುಂದುವರೆಸುವ ಮುನ್ನ ನಾವು ಸುಮಾರು ಮೂವತ್ತು ವರ್ಷ ಹಿಂದೆ ಹೋಗಬೇಕು. ೧೮೭೯ರಲ್ಲಿ ಜರ್ಮನ್ ವಿಜ್ಞಾನಿ ವಾಲ್ಥೆರ್ ಫ್ಲೆಮ್ಮಿಂಗ್ ಮೈಕ್ರೋಸ್ಕೋಪಿನ ಮೂಲಕ ಜೀವ ಕೋಶವೊಂದನ್ನು ನೋಡುತ್ತಿದ್ದಾಗ, ಅವನಿಗೆ ಆ ಜೀವಕೋಶದ ನ್ಯೂಕ್ಲಿಯಸ್ಸಿನಲ್ಲಿ ದಾರಗಳಂತೆ ಕಾಣುವ ಉದ್ದನೆಯ ವಸ್ತುಗಳು ಕಂಡವು. ಜೀವಕೋಶಗಳ ವಿಭಜನೆಯ ಸಮಯದಲ್ಲಿ ಈ ದಾರಗಳು ಉದ್ದುದ್ದಕ್ಕೆ ಎರಡು ಭಾಗವಾಗಿ, ಈ ಎರಡು ಭಾಗಗಳು ವಿರುದ್ಧ ದಿಕ್ಕಿನಲ್ಲಿ ಚಲಿಸಿ ನ್ಯೂಕ್ಲಿಯಸ್ಸಿನ ಗೋಡೆಯ ಹತ್ತಿರವಾಗುವುದನ್ನೂ ಅವನು ಕಂಡಿದ್ದ. ಕೆಲ ವರ್ಷಗಳ ನಂತರ ಇನ್ನೊಬ್ಬ ಜರ್ಮನ್ ವಿಜ್ಞಾನಿ ಹೆನ್ರಿಕ್ ವಾಲ್ಡೈಯರ್ ಆ ದಾರಕ್ಕೆ “ಕ್ರೋಮೋಸೋಮ್” ಎಂಬ ಹೆಸರಿಟ್ಟ. (ಜೀವಕೋಶ ಬಹು ಮಟ್ಟಿಗೆ ಪಾರದಾರ್ಶಕ. ಅದರೊಳಗಿನ ವೈವಿಧ್ಯಮಯ ಪ್ರಪಂಚವನ್ನು ಸರಿಯಾಗಿ ಕಾಣಬೇಕೆಂದಿದ್ದರೆ, ಬಣ್ಣದ ಡೈಗಳನ್ನು ಬಳಸಬೇಕು. ಹೀಗೆ ಬಣ್ಣದ ಡೈ ಬಳಸಿದಾಗ, ಜೀವಕೋಶದ ಬಿಡಿ ಭಾಗಗಳು ಎದ್ದು ಕಾಣುತ್ತವೆ. ಜೊತೆಗೆ, ಕೆಲವೊಂದು ಭಾಗಗಳಲ್ಲಿ ಆ ಬಣ್ಣ ಮತ್ತಷ್ಟು ಆಳವಾಗಿ ಇಳಿದು ಅವು ಮತ್ತಷ್ಟು ಸುಸ್ಪಷ್ಟವಾಗುತ್ತವೆ. ಈ ದಾರಗಳು ಅಂತಹ ಭಾಗಗಳು. ಗ್ರೀಕ್ ಭಾಷೆಯಲ್ಲಿ ಕ್ರೋಮೋ ಎಂದರೆ ಬಣ್ಣ. ಸೋಮಾ ಎಂದರೆ ದೇಹ. ಅದರಿಂದಲೇ ಕ್ರೋಮೋಸೋಮ್)
೧೮೯೧ರಲ್ಲಿ ಇನ್ನೊಬ್ಬ ಜರ್ಮನ್ ವಿಜ್ಞಾನಿ ಹರ್ಮನ್ ಹೆಂಕಿಂಗ್, ಮಿಂಚುಹುಳದ ಜೀವಕೋಶಗಳನ್ನು ಗಮನಿಸುವಾಗ, ಬೇರೆಲ್ಲಾ ಕ್ರೋಮೋಸೋಮ್‌ಗಳು ಜೋಡಿಯಾಗಿದ್ದರೂ, ಒಂದು ಮಾತ್ರ ಬೇರೆಯೇ ಆಗಿ ಉಳಿದಿದ್ದನ್ನು ಕಂಡ. ಅದರ ಬಗೆಗೆ ಏನೂ ತಿಳಿದಿಲ್ಲದಿದ್ದರಿಂದ ಅವನು ಅದನ್ನು ‘X’ ಕ್ರೋಮೋಸೋಮ್ ಎಂದು ಕರೆದ. (ಗಣಿತದಲ್ಲಿ ಮತ್ತು ವಿಜ್ಞಾನದಲ್ಲಿ ನಾವಿನ್ನೂ ಹುಡುಕುತ್ತಿರುವ ಉತ್ತರಕ್ಕೆ ‘X’ ಎನ್ನುವ ವಾಡಿಕೆ ಹದಿನೇಳನೆಯ ಶತಮಾನದಿಂದಲೂ ಇದೆ. ಇದನ್ನು ಬಳಕೆಗೆ ತಂದವನು ಫ್ರೆಂಚ್ ಗಣಿತಜ್ಞ ರೆನೇ ದೆಕಾರ್ಟ್)

೧೯೦೫ರಲ್ಲಿ ಅಮೆರಿಕದ ಇಬ್ಬರು ವಿಜ್ಞಾನಿಗಳು – ನೆಟ್ಟೀ ಸ್ಟೀವನ್ಸ್ ಮತ್ತು ಎಡ್ಮಂಡ್ ವಿಲ್ಸನ್ – ಬೇರೆ ಬೇರೆಯಾಗಿ ಅಧ್ಯಯನ ನಡೆಸುತ್ತಿದ್ದರು. ಆದರೆ, ಅವರ ಅಧ್ಯಯನದ ವಿಷಯ ಒಂದೇ ಆಗಿತ್ತು: ವೀರ್ಯಾಣುಗಳು. ಅವರಿಗೆ ಎರಡು ತರಹದ ವೀರ್ಯಾಣುಗಳು ಕಂಡವು. ಒಂದರಲ್ಲಿ X ಕ್ರೋಮೋಸೋಮ್ ಕಂಡರೆ, ಇನ್ನೊಂದರಲ್ಲಿ, ಗಾತ್ರದಲ್ಲಿ ‘X’ಗಿಂತ ಸಣ್ಣಕ್ಕಿರುವ ‘Y’ ಕ್ರೋಮೋಸೋಮ್ ಕಂಡಿತು. ಆದರೆ, ಅಂಡಾಣುವಿನಲ್ಲಿ ‘X’ ಕ್ರೋಮೋಸೋಮ್ ಮಾತ್ರ ಇರುವುದನ್ನೂ ಅವರು ಕಂಡುಕೊಂಡರು. ಇವೆರಡೂ ಕೂಡಿ ಬೀಜಾಣುವಾದಾಗ, ಕೆಲ ಬೀಜಾಣುಗಳಲ್ಲಿ ‘XY’ ಇದ್ದರೆ, ಉಳಿದವಲ್ಲಿ ‘XX’ ಇರುವುದೂ ಕಾಣಿಸಿತು. ಮತ್ತಷ್ಟು ಅಧ್ಯಯನದ ಮೂಲಕ ಇನ್ನೊಂದು ಅತಿ ಮೂಲಭೂತ ವಿಷಯವೊಂದು ಹೊರಬಿತ್ತು. ‘XY’ ಬೀಜಾಣು ಪುರುಷನಾಗಿ ಬೆಳೆದರೆ, ‘XX’ ಸ್ತ್ರೀಯಾಗಿ ಬೆಳೆಯುತ್ತದೆ. (ಮಗುವೊಂದು ಹೆಣ್ಣಾದರೆ, ಅದಕ್ಕೆ ತಂದೆಯೇ ‘ಕಾರಣ’ವೇ ಹೊರತು, ತಾಯಿಯಲ್ಲ. ಬೀಜಾಣುವನ್ನು ಹೆಣ್ಣಾಗಿಸುವ ‘instruction’ ಪುರುಷನಿಂದಲೇ ಬರಬೇಕು)
ಒಟ್ಟಿನಲ್ಲಿ ೧೯೦೦ರ ಮೊದಲ ದಶಕದ ಅಂತ್ಯದ ವೇಳೆಗೆ, ಕ್ರೋಮೋಸೋಮ್‌ಗಳ ಬಗೆಗೆ ಹೆಚ್ಚು ವಿಚಾರ ತಿಳಿಯದೇ ಇದ್ದರೂ, ಈ ಕ್ರೋಮೋಸೋಮ್‌ಗಳೇ ಲಿಂಗವನ್ನು ನಿರ್ಧರಿಸುತ್ತವೆ ಎನ್ನುವುದು ಮಾತ್ರ ವಿಜ್ಞಾನಿಗಳಿಗೆ ಖಾತ್ರಿಯಾಗಿತ್ತು. ಕೆಲ ವಿಜ್ಞಾನಿಗಳು ಮೆಂಡೆಲ್ ಹೇಳಿದ “ವಂಶವಾಹಿ ಅಂಶಗಳು” ಕ್ರೋಮೋಸೋಮುಗಳಲ್ಲಿಯೇ ಇವೆ ಎಂಬ ಅನುಮಾನ ವ್ಯಕ್ತಪಡಿಸಿದ್ದರೂ, ಅದಕ್ಕೆ ಯಾವುದೇ ಆಧಾರಗಳಿರಲಿಲ್ಲ.
*****
ಪ್ರೊ. ಥಾಮಸ್ ಮಾರ್ಗನ್ ಅವರ ನೊಣದ ಕೊಠಡಿಗೆ ವಾಪಸಾಗೋಣ. ಪ್ರೊ.ಮಾರ್ಗನ್ ಮೆಂಡೆಲ್‌ನ ಜೀನ್ ಥಿಯರಿಯಲ್ಲಿ ನಂಬಿಕೆ ಇಲ್ಲದವರು. ಮೆಂಡೆಲ್‌ನಂತೆಯೇ ವಂಶವಾಹಿತನದ ಅಧ್ಯಯನವನ್ನು ತಾವೂ ಸಹ ಪ್ರಯೋಗಗಳ ಮೂಲಕ ಮಾಡಿ, ಮೆಂಡೆಲ್ ವಾದವನ್ನು ಬದಿಗಿಡುವ ಆಲೋಚನೆ ಅವರದಾಗಿತ್ತು. ಈ ಪ್ರಯೋಗಗಳಿಗೆ ಅವರಿಗೆ ‘ಪ್ರಯೋಗಪಶು’ವೊಂದು ಬೇಕಿತ್ತು.
ಮೆಂಡೆಲ್ ತನ್ನ ಪ್ರಯೋಗಗಳಿಗೆ ಬಟಾಣಿಗಳನ್ನು ಉಪಯೋಗಿಸಿಕೊಂಡರೆ, ಅವನ ನಂತರ ಹಲವರು ಇಲಿ, ಸಾಲಾಮಾಂಡರ್, ಮಿಂಚು ಹುಳ ಇತ್ಯಾದಿಗಳನ್ನು ಬಳಸಿಕೊಂಡರು. ಇಂತಹ ಪ್ರಯೋಗಗಳಲ್ಲಿ, ಕಣ್ಣಿಗೆ ಎದ್ದು ಕಾಣುವ ಬೇರೆ-ಬೇರೆ ದೈಹಿಕ ಗುಣಗಳಿರುವ (ಉದಾಹರಣೆಗೆ ಹಸಿರು ಬಟಾಣಿ ಮತ್ತು ಹಳದಿ ಬಟಾಣಿ) ‘ಪ್ರಯೋಗಪಶು’ಗಳನ್ನು ಮತ್ತೆ ಮತ್ತೆ ‘ಕ್ರಾಸ್’ ಮಾಡಿ, ಅವುಗಳ ಸಂತತಿಗಳನ್ನು ಹಲವು ಪೀಳಿಗೆಗಳ ಕಾಲ ಅಧ್ಯಯನ ಮಾಡಬೇಕು. ಇದು ಅತ್ಯಂತ ನಿಧಾನದ ಕೆಲಸ. ಒಂದು ಬಟಾಣಿ ಬೀಜದಿಂದ ಸಸಿ ಮಾಡಿ ಅದರಲ್ಲಿ ಬಿಟ್ಟ ಬಟಾಣಿಯಿಂದ ಹೊಸ ಸಸಿ ಮಾಡಲು ಹಲವು ತಿಂಗಳುಗಳೇ ಬೇಕು. ಇಲಿಯದೂ ಅದೇ ಕತೆ. ಆದರೆ, ನೊಣಗಳ ವಿಷಯದಲ್ಲಿ ಮೊಟ್ಟೆಯಿಂದ ಹೊರ ಬಂದ ಮರಿ ತಾನೇ ಮೊಟ್ಟೆಯಿಡಲು ಹತ್ತೇ ದಿನ ಸಾಕು! ಒಂದೇ ತಿಂಗಳಲ್ಲಿ ಅವು ಮೂರು ಪೀಳಿಗೆಗಳನ್ನು ಸೃಜಿಸಬಲ್ಲವು. ಅದೂ ಸಹಸ್ರ-ಸಹಸ್ರ ಸಂಖ್ಯೆಯಲ್ಲಿ!
ಪ್ರೊ.ಮಾರ್ಗನ್ ಬಳಿ ದೊಡ್ಡ ಜಾಗವಾಗಲೀ ಹೆಚ್ಚಿನ ಹಣವಾಗಲೀ ಇರಲಿಲ್ಲ. ನೊಣಗಳನ್ನು ಬೆಳೆಸಲು ದೊಡ್ಡ ಜಾಗವೂ ಬೇಡ. ಹೆಚ್ಚು ಹಣವೂ ಬೇಡ. ಕಳಿತ ಬಾಳೆ ಹಣ್ಣು, ಹಳೆಯ ಖಾಲಿ ಬಾಟಲುಗಳಿದ್ದರೆ ಸಾಕು. ರೂಮ್ ನಂಬರ್ ೬೧೩ “ನೊಣದ ಕೊಠಡಿ”ಯಾಗಿದ್ದು ಹೀಗೆ.
ಬಟಾಣಿಗಳಲ್ಲೇನೋ ಕಣ್ಣಿಗೆ ಕಾಣುವಂತೆ ಹಳದಿ-ಹಸಿರು ಬಣ್ಣಗಳಿವೆ. ಮೆಂಡೆಲ್ ಅವುಗಳನ್ನು ಕ್ರಾಸ್ ಮಾಡಿ ತನ್ನ ಅಧ್ಯಯನ ನಡೆಸಿದ.

ಆದರೆ ನೊಣಗಳಲ್ಲಿ?
ಸಾಮಾನ್ಯವಾಗಿ ಬಹುಪಾಲು ನೊಣಗಳ ಕಣ್ಣುಗಳು ಕೆಂಪು. ಆದರೆ, ಸುಮಾರು ೨೦,೦೦೦ ನೊಣಗಳಲ್ಲಿ ಒಂದರ ಕಣ್ಣುಗಳು ಮಾತ್ರ ಬಿಳಿಯಾಗಿರುತ್ತವೆ. ಪ್ರೊ.ಮಾರ್ಗನ್ ನೊಣಗಳ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದುದು ಇದೇ ಕಾರಣದಿಂದ; ಬಿಳಿಗಣ್ಣಿನ ನೊಣಗಳನ್ನು ಉಳಿದ ನೊಣಗಳಿಂದ ಬೇರ್ಪಡಿಸಿ, ಅವನ್ನು ಅತ್ಯಂತ ಜಾಗರೂಕತೆಯಿಂದ ಗಮನವಿಟ್ಟು ಕೆಂಗಣ್ಣಿನ ನೊಣಗಳೊಂದಿಗೆ ಮದುವೆ ಮಾಡಿಸಿ ಅವುಗಳ ಸಂತತಿಯ ನೊಣಗಳ ಕಣ್ಣಿನ ಬಣ್ಣಗಳ ಅಧ್ಯಯನ ಮಾಡುವುದು ಅವರ ಗುರಿ. ಈ ಅಧ್ಯಯನದಲ್ಲಿ ಅವರೊಂದಿಗಿದ್ದವರು ಅವರ ಶಿಷ್ಯರಾದ ಹರ್ಮನ್ ಜೋಸೆಫ್ ಮುಲ್ಲರ್, ಕ್ಯಾಲ್ವಿನ್ ಬ್ರಿಜಸ್ ಮತ್ತು ಆಲ್ಫ್ರೆಡ್ ಹೆನ್ರಿ ಸ್ಟರ್ಟೆವಾಂಟ್. ಅವರಲ್ಲಿ ಮೊದಲಿಬ್ಬರು ಸ್ನಾತಕೋತ್ತರ ವಿದ್ಯಾರ್ಥಿಗಳಾದರೆ, ಸ್ಟರ್ಟೆವಾಂಟ್ ಇನ್ನೂ ಹದಿಹರೆಯದವನು.
ನೊಣದ ಕೊಠಡಿಯಲ್ಲಿ ಅವರ ಪ್ರತಿನಿತ್ಯದ ಕೆಲಸ:
— ನೊಣಗಳಿಗೆ ಅನಸ್ತೇಷಿಯಾ ನೀಡಿ ಮಲಗಿಸುವುದು
— ಹೆಣ್ಣು ಗಂಡು ನೊಣಗಳನ್ನು ಬೇರ್ಪಡಿಸುವುದು
— ಕೆಂಪು ಬಿಳಿಗಣ್ಣುಗಳ ನೊಣಗಳನ್ನು ಬೇರ್ಪಡಿಸುವುದು.
— ಹೆಣ್ಣು ನೊಣಗಳಲ್ಲಿ ಕನ್ಯೆಯರನ್ನು ಗುರುತಿಸಿ ಅವನ್ನು ಮದುವೆಗೆ ಸಿದ್ಧ ಪಡಿಸುವುದು.
— ಮದುವೆಗೆ ಸಿದ್ಧವಿರುವ ಕನ್ಯೆಯೊಂದಿಗೆ ಗಂಡೊಂದನ್ನು ಜೋಡಿ ಮಾಡಿ, ಆ ಜೋಡಿಯನ್ನು ಲೇಬಲ್ ಮಾಡಿರುವ ಬಾಟಲೊಂದರಲ್ಲಿ ಮಲಗಿಸುವುದು.
— ಈಗಾಗಲೇ ಒಂದಾಗಿರುವ ಜೋಡಿಗಳ ಬಾಟಲುಗಳನ್ನು ತೆಗೆದು ಅವುಗಳ ಸಂತತಿಯನ್ನು ನಿಖರವಾಗಿ ಎಣಿಸಿ, ಅವುಗಳ ಕಣ್ಣು, ರೆಕ್ಕೆ, ಮೈ ಬಣ್ಣ ಇತ್ಯಾದಿಗಳ ಮಾಹಿತಿಯನ್ನು ದಾಖಲಿಸುವುದು
— ತಾವು ದಾಖಲಿಸಿದ ವಿಚಾರಗಳ ಕುರಿತು ಚರ್ಚೆ ನಡೆಸುವುದು.
ಈ ಅಧ್ಯಯನದ ಆದಿಯಲ್ಲಿಯೇ ಅವರಿಗೆ ಹೊಸದೊಂದು ವಿಷಯದ ಅರಿವಾಯಿತು. ಬಿಳಿಗಣ್ಣಿನ ನೊಣಗಳೆಲ್ಲಾ ಗಂಡೇ ಆಗಿದ್ದವು. “ಗಂಡು ನೊಣಗಳಲ್ಲಿ ಮಾತ್ರ ‘Y’ ಕ್ರೋಮೋಸೋಮ್ ಇರುವುದರಿಂದ, ಕಣ್ಣನ್ನು ಬಿಳಿಗೊಳಿಸುವ ಜೀನ್ ಆ ಕ್ರೋಮೋಸೋಮಿನಲ್ಲಿ ಇದೆಯೇ?” ಇದು ಅವರ ಚರ್ಚೆಯ ವಿಷಯವಾಯಿತು. ಆದರೆ, ಅವರ ಪ್ರಯೋಗಗಳು ಮುಂದುವರೆದು ನೊಣಗಳ ಪೀಳಿಗೆ ಬೆಳೆದಂತೆ, ಬಿಳಿಗಣ್ಣಿನ ಹೆಣ್ಣುಗಳೂ ಕಂಡು ಬಂದವು. ಇದರಿಂದ ಒಂದಂತೂ ಖಚಿತವಾಯಿತು: ಬಿಳಿಗಣ್ಣಿನ ಜೀನ್ ‘X’ ಕ್ರೋಮೋಸೋಮಿನಲ್ಲಿ ಇದೆ. ಕ್ರೋಮೋಸೋಮುಗಳು ದಾರಗಳಾದರೆ, ಈ ಜೀನ್‌ಗಳು ಆ ದಾರದಲ್ಲಿರುವ ಪೋಣಿಸಿರುವ ಮಣಿಗಳು. ಇದು ಅವರ ಅಂದಿನ ಆಲೋಚನೆ.
ಅವರ ಅಧ್ಯಯನ-ಪ್ರಯೋಗಗಳು ಮುಂದುವರೆದಂತೆ ಇನ್ನಷ್ಟು ವಿಷಯಗಳೂ ಬೆಳಕಿಗೆ ಬಂದವು. ಉದಾಹರಣೆಗೆ, ಬಹಳಷ್ಟು ಬಾರಿ ಬಿಳಿಗಣ್ಣಿನ ನೊಣಗಳ ಮೈ ಹಳದಿಯಾಗಿರುತ್ತಿದ್ದವು (ಸಾಮಾನ್ಯವಾಗಿ ಕಪ್ಪಗಿದ್ದರೆ); ಹಲವೊಮ್ಮೆ ಹಳದಿ ಮೈ ಬಣ್ಣದ ನೊಣಗಳ ರೆಕ್ಕೆಯ ಗಾತ್ರ ಕಿರಿದಾಗಿರುತ್ತಿತ್ತು; ಇನ್ನೂ ಕೆಲವು ಬಾರಿ ಕಿರು ರೆಕ್ಕೆಯ ನೊಣಗಳ ಕಣ್ಣುಗಳು ದುಂಡಗಿರುವುದರ ಬದಲು ಹಾರೆಯಾಕೃತಿಯಲ್ಲಿ ಇರುತ್ತಿದ್ದವು. ಹೀಗೆ. ಇವೆಲ್ಲಾ ಅವರಲ್ಲಿ ಭಾರೀ ಚರ್ಚೆಗೆ ಕಾರಣವಾಗುತ್ತಿದ್ದವು.
ಸ್ಟರ್ಟೆವಾಂಟ್ ಸ್ವಭಾವತಃ ನಾಚಿಕೆಯವನು. ಜೊತೆಗೇ, ವಿದ್ಯೆ, ವಯಸ್ಸು ಎರಡರಲ್ಲೂ ಉಳಿದವರಿಗಿಂತ ಕಿರಿಯ. ಹೀಗಾಗಿ, ಆ ಚರ್ಚೆಗಳಲ್ಲಿ ಅವನ ಕೊಡುಗೆ ಕೇವಲ ಮೌನವಷ್ಟೇ.
ಆದರೆ, ೧೯೧೩ರ ಒಂದು ರಾತ್ರಿ ಉಳಿದವರಾರಿಗೂ ಹೊಳೆಯದ ವಿಚಾರವೊಂದು ಸ್ಟರ್ಟೆವಾಂಟ್‌ಗೆ ಹೊಳೆಯಿತು. ಬಿಳಿಗಣ್ಣು, ಹಳದಿ ಮೈ, ಕಿರು ರೆಕ್ಕೆ, ಹಾರೆಗಣ್ಣು ಇತ್ಯಾದಿಗಳಿಗೆ ಜೀನ್‌ಗಳೆಂಬ ಬೇರೆ ಬೇರೆ ಮಣಿಗಳೇ ಕಾರಣವಾದರೆ, ಅವು ಎಷ್ಟರ ಮಟ್ಟಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ ಎಂಬುದರ ಆಧಾರದ ಮೇಲೆ ಕ್ರೋಮೋಸೋಮಿನಲ್ಲಿ ಮಣಿಗಳು ಒಂದರಿಂದ ಇನ್ನೊಂದಕ್ಕೆ ಎಷ್ಟು ದೂರದಲ್ಲಿವೆ ಎಂದು ಲೆಕ್ಕಾಚಾರ ಮಾಡಬಹುದು. (ಉದಾಹರಣೆಗೆ, ಬಿಳಿಗಣ್ಣು-ಹಳದಿ ಬಣ್ಣ ಬಹು ಮಟ್ಟಿಗೆ ಒಟ್ಟಿಗೇ ಕಾಣುತ್ತಿದ್ದರೆ, ಆ ಮಣಿಗಳು ಬಹುಷಃ ಅಕ್ಕ-ಪಕ್ಕದಲ್ಲಿಯೇ ಇರಬೇಕು. ಹೀಗಾಗಿಯೇ ಒಂದು ಪೀಳಿಗೆಯಿಂದ ಇನ್ನೊಂದಕ್ಕೆ ಅವು ಒಟ್ಟಿಗೆ ಸಂಚರಿಸುತ್ತವೆ)
ಈ ಆಲೋಚನೆ ಹೊಳೆದ ರಾತ್ರಿ ಅವನಿಗೆ ನಿದ್ದೆಯೇ ಬರಲಿಲ್ಲ. ಕಾಲೇಜಿನ ಇನ್ನೊಬ್ಬ ಪ್ರೊಫೆಸರ್ ಕೊಟ್ಟಿದ್ದ ಹೋಂ ವರ್ಕ್ ಮಾಡಲೂ ಸಹ ಮನಸು ಬರಲಿಲ್ಲ. ಬದಲಿಗೆ, ಹಾಸಿಗೆಯಿಂದೆದ್ದು, ಇಲ್ಲಿಯವರೆಗೆ ಕಲೆ ಹಾಕಿದ್ದ ಅಂಕಿ-ಸಂಖ್ಯೆಗಳು-ಮಾಹಿತಿಗಳನ್ನೆಲ್ಲಾ ಮತ್ತೆ-ಮತ್ತೆ ನೋಡಿ, ಸಣ್ಣ ಕಾಗದದ ಮೇಲೊಂದು ದಾರದಂತೆ ಗೆರೆಯೊಂದನ್ನು ಎಳೆದು ಅದರ ಮೇಲೆ, ತನ್ನ ಲೆಕ್ಕಾಚಾರ ಬಳಸಿ ಬಿಳಿಗಣ್ಣು, ಹಳದಿ ಬಣ್ಣ, ಕಿರು ರೆಕ್ಕೆ, ಹಾರೆಗಣ್ಣು ಇತ್ಯಾದಿ ಜೀನುಗಳನ್ನು ಮಾರ್ಕ್ ಮಾಡಿದ. ವಂಶವಾಹಿ ಗುಣಗಳು ಒಂದು ಪೀಳಿಗೆಯಿಂದ ಇನ್ನೊಂದಕ್ಕೆ ಹೇಗೆ ಸಂವಹಿಸುತ್ತದೆ ಎಂದು ತೋರುವ “ಜೀನ್ ಮ್ಯಾಪ್” ಒಂದು ಹೀಗೆ ಮಾನವ ಇತಿಹಾಸದಲ್ಲೇ ಮೊದಲ ಬಾರಿಗೆ ಸಿದ್ಧವಾಯಿತು.
ಆ ಬೆಳಗ್ಗೆ ಅವನು ತನ್ನ ಕಾಗದವನ್ನು ಪ್ರೊ.ಮಾರ್ಗನ್‌ರವರಿಗೆ ತೋರಿಸಿದಾಗ, ಕೆಲ ಕ್ಷಣ ಅವರ ಬಾಯಿಂದ ಮಾತೇ ಹೊರಡಲಿಲ್ಲ. ಕೊನೆಗೆ, ಅವರೆಂದರು:
” ಸ್ಟರ್ಟೆವಾಂಟ್, ಐ ಥಿಂಕ್ ಯೂ ಹ್ಯಾವ್ ಸಾಲ್ವ್ಡ್ ಇಟ್”
ಆ ಒಂದು ಸಣ್ಣ ಪೇಪರ್, ಎರಡು ದಶಕಗಳ ನಂತರ ಪ್ರೊ.ಮಾರ್ಗನ್ ಅವರಿಗೆ ನೊಬೆಲ್ ಪ್ರಶಸ್ತಿ ದೊರಕಿಸಿ ಕೊಟ್ಟಿತು. ಪ್ರಶಸ್ತಿ ಅವರಿಗೆ ಮಾತ್ರ ಸಿಕ್ಕರೂ, ಪ್ರಶಸ್ತಿಯ ಹಣವನ್ನು ಅವರು ತಮ್ಮ ಶಿಷ್ಯರೊಂದಿಗೆ ಹಂಚಿಕೊಂಡರು. ಇಂದು, ಜೀನ್‌ಗಳ ನಡುವೆ ಇರುವ ದೂರವನ್ನು ಮಾಪಿಸುವಾಗ ಬಳಸುವ ಯೂನಿಟ್ಟಿಗೆ ‘ಸೆಂಟಿಮಾರ್ಗನ್’ ಎಂದೆನ್ನುತ್ತಾರೆ.
*****
೧೯೧೦ರ ದಶಕದ ಅಂತ್ಯದ ವೇಳೆಗೆ, ಜೀನ್‌ಗಳು ಕ್ರೋಮೋಸೋಮ್ ದಾರಗಳಲ್ಲಿರುವುದು ಸೈದ್ಧಾಂತಿಕವಾಗಿ ಖಾತರಿಯಾಗಿತ್ತು. ಜೀನುಗಳ ನಡುವಿನ ದೂರವನ್ನು ಅಂದಾಜು ಮಾಡುವ ವಿಧಾನವನ್ನೂ ಹದಿಹರೆಯದ ಹುಡುಗನೊಬ್ಬ ತೋರಿಸಿಕೊಟ್ಟಿದ್ದ. ಆದರೆ, ಆ ಜೀನ್ ಅನ್ನು ಕಣ್ಣಾರೆ ಯಾರೂ ಕಂಡಿರಲಿಲ್ಲ. ಆ “ಮಣಿ” ನಿಜಕ್ಕೂ ಒಂದು ಭೌತಿಕ ವಸ್ತುವೆಂದು ಯಾರೂ ಪ್ರಾಯೋಗಿಕವಾಗಿ ತೋರಿಸಿಕೊಟ್ಟಿರಲಿಲ್ಲ.

(ಹರ್ಮನ್ ಮುಲ್ಲರ್)
ಹರ್ಮನ್ ಮುಲ್ಲರ್, ಪ್ರೊ.ಮಾರ್ಗನ್ ಅವರ ಶಿಷ್ಯವೃಂದದಲ್ಲಿದ್ದವನು. ಅವನು, ಸ್ಟರ್ಟೆವಾಂಟ್‌ಗೆ ಎಲ್ಲ ರೀತಿಯಲ್ಲೂ ತದ್ವಿರುದ್ಧ ಸ್ವಭಾವದವನು. ಸ್ಟರ್ಟೆವಾಂಟ್, ನಾಚಿಕೆ-ಮೌನಗಳೇ ಮೂರ್ತಿವೆತ್ತಂತಿದ್ದ ಹದಿ ಹರೆಯದವನಾಗಿದ್ದರೆ, ಮೂವತ್ತು ವರ್ಷದ ಮುಲ್ಲರ್, ಪ್ರತಿ ವಿಷಯದಲ್ಲೂ ತನ್ನ ಅಭಿಪ್ರಾಯವನ್ನು ಖಡಾಖಂಡಿತವಾಗಿ ಹೇಳಿ ತನ್ನದೇ ಸರೀ ಎಂದು ಗಂಟೆಗಟ್ಟಲೆ ವಾದಮಾಡುವಂತಹವನು. ಇದರಿಂದಾಗಿ ಅವನ ಮತ್ತು ಪ್ರೊ.ಮಾರ್ಗನ್ ಅವರ ಸಂಬಂಧ ಹಳಸುತ್ತಾ ಬಂದಿತ್ತು. ಕೊನೆಗೆ, ೧೯೨೦ರಲ್ಲಿ, ಮುಲ್ಲರ್ ಪ್ರೊ.ಮಾರ್ಗನ್ ಅವರ ನ್ಯೂಯಾರ್ಕಿನ ನೊಣದ ಕೊಠಡಿ ಬಿಟ್ಟು ತಾನೇ ಸ್ವತಂತ್ರವಾಗಿ ಪ್ರಯೋಗಮಾಡುವ ಉದ್ದೇಶದಿಂದ ಟೆಕ್ಸಾಸಿಗೆ ಸ್ಥಳಾಂತರ ಮಾಡಿದ.
ಅವನು ಸಮಾಜವಾದದಲ್ಲಿ ನಂಬಿಕೆ ಇಟ್ಟಿದ್ದವನು. ಅಮೆರಿಕ ಹೇಳೀಕೇಳೀ ಕ್ಯಾಪಿಟಲಿಸಂ ದೇಶ. ಜೊತೆಗೆ ಆ ಕಾಲದಲ್ಲಿ ಅಮೆರಿಕದಲ್ಲಿ ಎಲ್ಲೆಡೆ ರೇಸಿಸಂ ತಾಂಡವವಾಡುತ್ತಿತ್ತು. ಇವುಗಳಿಂದ ರೋಸಿ ಹೋದ ಮುಲ್ಲರ್ ರಾಜಕೀಯ ಆದರ್ಶಗಳಿಗೆ ಸರಿ ಹೊಂದುವ ದೇಶವೊಂದನ್ನು ಹುಡುಕುತ್ತಿದ್ದಾಗ ಅವನಿಗೆ ಕಂಡದ್ದು ಜರ್ಮನಿ. ೧೯೩೦ರಲ್ಲಿ ಮುಲ್ಲರ್ ಅಮೆರಿಕವನ್ನು ತೊರೆದು ಜರ್ಮನಿಗೆ ಬಂದ. ಆದರೆ, ಅವನ ದುರಾದೃಷ್ಟ, ಅವನು ಜರ್ಮನಿಗೆ ಕಾಲಿಡುವ ವೇಳೆಗೆ ಅಲ್ಲಿ ಹಿಟ್ಲರನ ನಾಜ಼ಿಸಂ ತಲೆ ಎತ್ತಿತ್ತು. ಹೀಗಾಗಿ ಕೆಲ ಕಾಲದ ಅವನು ಜರ್ಮನಿಯನ್ನೂ ತೊರೆದು ಸೋವಿಯತ್ ರಷ್ಯಾಗೆ ಸ್ಥಳಾಂತರಿಸಿ ಅಲ್ಲಿ ತನ್ನ ಅಧ್ಯಯನವನ್ನು ಮುಂದುವರೆಸಿದ. ಆದರೆ, ಸ್ಟಾಲಿನ್‌ನ ಕಮ್ಯೂನಿಸ್ಟ್ ರಷ್ಯಾದಲ್ಲಿ, ಹರ್ಮನ್ ಮುಲ್ಲರ್ ಅಂತಹ ಸ್ವತಂತ್ರ ಮನಸ್ಸಿನ ವಿಜ್ಞಾನಿಗೆ ಜಾಗವಿರಲಿಲ್ಲ. ಕೊನೆಗೆ ಅವನು ಅಮೆರಿಕಕ್ಕೇ ವಾಪಸು ಬರಬೇಕಾಯಿತು; ಅಮೆರಿಕದಲ್ಲಿ ಎಷ್ಟೇ ಕೆಡುಕಿದ್ದರೂ, ಅಲ್ಲಿ ಸ್ವಾತಂತ್ರ್ಯವೂ ಇತ್ತು. ಆದರೆ, ಅದೆಲ್ಲಾ ಬೇರೆಯ ಕತೆ.
೧೯೨೦ರಲ್ಲಿ ನ್ಯೂಯಾರ್ಕಿನಿಂದ ಟೆಕ್ಸಾಸಿಗೆ ಬಂದ ಮುಲ್ಲರ್ ಅಲ್ಲಿಯೂ ನೊಣದ ಮೇಲೆಯೇ ತನ್ನ ಪ್ರಯೋಗಗಳನ್ನು ಮುಂದುವರೆಸಿದ.
ಪ್ರಕೃತಿಯಲ್ಲಿ ಬಿಳಿಗಣ್ಣಿನ ನೊಣಗಳು ತೀರಾ ಅಪರೂಪ. ಇಪ್ಪತ್ತು ಸಾವಿರ ನೊಣಗಳಲ್ಲಿ ಒಂದಕ್ಕೆ ಮಾತ್ರ ಬಿಳಿಗಣ್ಣು ಇರಬಹುದು. ಒಂದೊಂದೇ ನೊಣದ ಕಂಗಳನ್ನು ನೋಡಿ ಬಿಳಿಬಣ್ಣದ ಕಂಗಳ ನೊಣವನ್ನು ಹುಡುಕಿ ತೆಗೆಯಲು ಅತ್ಯಂತ ತಾಳ್ಮೆ-ವ್ಯವಧಾನ ಬೇಕು. ಪ್ರೊ.ಮಾರ್ಗನ್, ಸ್ಟರ್ಟೆವಾಂಟ್ ಅವರಿಗೆ ಅವು ಇದ್ದವು; ಮುಲ್ಲರ್‌ಗೆ ಇರಲಿಲ್ಲ.
ಅವನಿಗೆ ಒಂದು ಆಲೋಚನೆ ಬಂತು.
“ಜೀನ್‌ಗಳು ಕ್ರೋಮೋಸೋಮಿನಲ್ಲಿ ಇರುವುದು ಖಚಿತವಾಗಿದೆ. ಅವು ಭೌತಿಕ ವಸ್ತುಗಳೆನ್ನುವುದು ನಿಜವಿದ್ದಲ್ಲಿ, ಅವು ರಾಸಾಯನಿಕ ವಸ್ತುಗಳೇ ಆಗಿರಬೇಕು. ಎಲ್ಲ ರಾಸಾಯನಿಕ ವಸ್ತುಗಳೂ ತಾಪಮಾನ ಹೆಚ್ಚು ಕಡಿಮೆಯಾದಾಗ ಸ್ಪಂದಿಸಿ ಬದಲಾಗುತ್ತವೆ. ಹಾಗಿದ್ದರೆ ಈ ಜೀನ್ ಎಂಬ ರಾಸಾಯನಿಕದಲ್ಲೂ ಬದಲಾವಣೆ ಆಗಿಯೇ ತೀರಬೇಕು. ಬಿಳಿಗಣ್ಣಿಗೆ ಜೀನೇ ಕಾರಣವಾದರೆ, ತಾಪಮಾನವನ್ನು ಹೆಚ್ಚು-ಕಡಿಮೆ ಮಾಡಿ ಕೆಂಪುಗಣ್ಣಿನ ಜೀನ್ ಅನ್ನು ಬದಲಿಸಿ ಬಿಳಿಗಣ್ಣಿನ ನೊಣಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿಮಾಡಬಾರದೇಕೆ?”
ಈ ಆಲೋಚನೆ ಬಂದಿದ್ದೇ ತಡ ಅವನು ತನ್ನ ಪ್ರಯೋಗ ಶಾಲೆಯ ತಾಪಮಾನವನ್ನು ಹೆಚ್ಚಿಸಿ-ಕಡಿಮೆ ಮಾಡಿ ಅನೇಕ ಪ್ರಯೋಗಗಳನ್ನು ಮಾಡಿದ. ಆದರೆ, ನೊಣಗಳು ಸತ್ತವೇ ಹೊರತು ಬಿಳಿಗಣ್ಣಿನ ನೊಣಗಳ ಸಂಖ್ಯೆ ಏರಲಿಲ್ಲ. ಕೊನೆಗೆ, ನೊಣಗಳನ್ನು ಎಕ್ಸ್ ರೇ ವಿಕಿರಣಗಳಿಗೆ ಗುರಿಪಡಿಸಿ ಪ್ರಯೋಗಗಳನ್ನು ಮಾಡಲಾರಂಭಿಸಿದ. ಉಹ್ಹೂಂ. ಆ ಪ್ರಯೋಗಗಳೂ ಸಹ ನೊಣಗಳನ್ನು ಕೊಂದವೇ ಹೊರತು ಅವನಿಗೆ ಬೇಕಾದ ಫಲಿತಾಂಶ ಸಿಗಲಿಲ್ಲ.
ಆ ಎಕ್ಸ್-ರೇ ವಿಕಿರಣಗಳ ಶಕ್ತಿಯನ್ನು ಕಡಿಮೆ ಮಾಡಿದ. ಈ ಬಾರಿ ನೊಣಗಳು ಸಾಯಲಿಲ್ಲ. ಬದಲಿಗೆ, ಎಲ್ಲ ನೊಣಗಳೂ ಸಂತಾನವಿಹೀನವಾದವು.
ಹೀಗೆ ವರ್ಷಗಳೇ ಕಳೆದವು.
೧೯೨೬ರಲ್ಲಿ, ಇನ್ನಾವುದೂ ದಾರಿಕಾಣದೆ, ಎಕ್ಸ್ ರೇ ವಿಕಿರಣಗಳ ಶಕ್ತಿಯನ್ನು ಇನ್ನಷ್ಟು ಕಡಿಮೆ ಮಾಡಿ ಮತ್ತೆ ಪ್ರಯೋಗ ಮಾಡಿದ. ಹೀಗೆ ವಿಕಿರಣಗಳಿಗೆ ತುತ್ತಾದ ಗಂಡುನೊಣಗಳನ್ನು ಹೆಣ್ಣು ನೊಣಗಳೊಂದಿಗೆ ಕೂಡಿಸಿದ. ಆ ಹೆಣ್ಣು ನೊಣಗಳು ಮೊಟ್ಟೆ ಇಟ್ಟವು. ಆ ಮೊಟ್ಟೆಗಳಿಂದ ಹೊರ ಬಂದ ನೊಣದ ಮರಿಗಳು ಕೆಲದಿನಗಳಲ್ಲಿ ದೊಡ್ಡವಾದವು.
೧೯೨೬ರ ಆ ರಾತ್ರಿ ಅವನು ಆ ಹೊಸ ನೊಣಗಳನ್ನು ಒಂದೊಂದೇ ನೋಡಲಾರಂಭಿಸಿದಾಗ, ಅವನ ಪ್ರಯೋಗಶಾಲೆಯಲ್ಲಿ ಯಾರೊಬ್ಬರೂ ಇರಲಿಲ್ಲ. ಆದರೆ, ಅವನ ಪ್ರಯೋಗಶಾಲೆಯ ಕೆಳಗಿನ ಅಂತಸ್ತಿನಲ್ಲಿ ಕುಳಿತಿದ್ದ ಇನ್ನೊಬ್ಬ ವಿಜ್ಞಾನಿಗೆ ಇವನ “ಐ ಗಾಟ್ ಒನ್ ಮೋರ್” ಎಂಬ ಜೋರು ಕೂಗು ಮತ್ತೆ-ಮತ್ತೆ ಕೇಳಿದವು. ಪ್ರೊ.ಮಾರ್ಗನ್ ತಮ್ಮ ಮೂರು ದಶಕದ ಅಧ್ಯಯನದಲ್ಲಿ ಕೇವಲ ಐವತ್ತು ಬಿಳಿಗಣ್ಣಿನ ನೊಣಗಳನ್ನು ಕಂಡಿದ್ದರೆ, ಮುಲ್ಲರ್‌ನಿಗೆ ಆ ಒಂದು ರಾತ್ರಿಯಲ್ಲೇ ಸುಮಾರು ೨೫ ಅಂತಹ ನೊಣಗಳು ಸಿಕ್ಕಿದ್ದವು! ಅವನೆಣಿಸಿದಂತೆ ಎಕ್ಸ್ ರೇ ವಿಕಿರಣಗಳು ಗಂಡು ನೊಣಗಳ ಜೀನ್‌ಗಳಲ್ಲಿ ಬದಲಾವಣೆ (mutations) ತಂದಿದ್ದವು.
ಮುಲ್ಲರ್‌ನ ಈ ಸಂಶೋಧನೆ ಅವನನ್ನು ಒಂದೇ ರಾತ್ರಿಯಲ್ಲಿ ವೈಜ್ಞಾನಿಕ ಜಗತ್ತಿನಲ್ಲಿ ಸುಪ್ರಸಿದ್ಧನನ್ನಾಗಿಸಿತು. ಅವನು ತನ್ನ ಪ್ರಯೋಗಗಳಿಂದ ಎರಡು ಮುಖ್ಯ ವಿಚಾರಗಳನ್ನು ಧೃಡ ಪಡಿಸಿದ್ದ.
ಒಂದು: ಅಂತಿಮವಾಗಿ ಎಕ್ಸ್ ರೇ ವಿಕಿರಣ ಎನ್ನುವುದು ಭೌತಿಕ ವಸ್ತುಗಳ ಮೇಲೆ ಪರಿಣಾಮ ಬೀರುವ ಶಕ್ತಿ ಅಷ್ಟೇ. ಅದು, ಜೀನುಗಳಲ್ಲಿ ಬದಲಾವಣೆ ತಂದಿದೆ ಎಂದರೆ, ಜೀನುಗಳು ಭೌತಿಕ ವಸ್ತುಗಳಲ್ಲದೇ ಬೇರೇನೂ ಅಲ್ಲ. ಒಂದು ಚೈತನ್ಯ ಅದನ್ನು ಬದಲಿಸಬಲ್ಲದು ಎಂದರೆ, ಜೀನ್ ಒಂದು ರಾಸಾಯನಿಕ ವಸ್ತುವಾಗಿರಲೇ ಬೇಕು.
ಎರಡು: ಅನುವಂಶೀಯತೆಯಲ್ಲಿನ ಬದಲಾವಣೆಗಳೇ (mutations) ಜೀವ ಜಗತ್ತಿನ ವೈವಿಧ್ಯತೆಗೆ ಕಾರಣವೆಂಬ ಡಾರ್ವಿನ್ ವಾದವನ್ನು ಮುಲ್ಲರ್ ತನ್ನ ಪ್ರಯೋಗಶಾಲೆಯಲ್ಲಿ ಸಾಕ್ಷ್ಯಾಧಾರಗಳೊಂದಿಗೆ ತೋರಿಸಿಕೊಟ್ಟಿದ್ದ.
ವಿಜ್ಞಾನಿಗಳು ಬೇಕೆಂದಾಗ ಬೇಕಾದಷ್ಟು ಬಿಳಿಗಣ್ಣಿನ ನೊಣಗಳನ್ನು ಸೃಷ್ಟಿಸಬಲ್ಲವರಾದರು. ಸಣ್ಣ ವಿಕಿರಣವೊಂದು ಮುಂದಿನ ಪೀಳಿಗೆಯ ನೊಣಗಳ ಕಣ್ಣಿನ ಬಣ್ಣವನ್ನು ನಿರ್ಧರಿಸಬಲ್ಲದಾದರೆ, ನಮ್ಮ ಮುಂದಿನ ಪೀಳಿಗೆಯ ದೇಹವನ್ನು ರೂಪಿಸುವ ಶಕ್ತಿ ನಮ್ಮ ಕೈಯಲ್ಲಿಯೇ ಇರಬಾರದೇಕೆ? ನಾವೇ ಬದಲಿಸಬಲ್ಲ ಸಣ್ಣ ರಾಸಾಯನಿಕವೊಂದು ನಮ್ಮ ಭವಿಷ್ಯವನ್ನು ನಿರ್ಧರಿಸುವುದನ್ನು ತೋರಿಸಿ ಅವನು ಹಣೆಬರಹ/ದೈವ ಇತ್ಯಾದಿ ಕಾಣದ ಕೈಗಳ ಕಪಿಮುಷ್ಠಿಯನ್ನು ಸಡಿಲಿಸಿದ್ದ.

(First genetic map)
೧೯೪೬ರಲ್ಲಿ ಮುಲ್ಲರ್‌ಗೆ ನೊಬೆಲ್ ಪ್ರಶಸ್ತಿ ಸಿಕ್ಕಿತು. ಅಷ್ಟರಲ್ಲಿ ಅಣುಬಾಂಬಿನ ಅವಿಷ್ಕಾರವೂ ಆಗಿತ್ತು. ೧೯೨೬ರ ತನ್ನ ಸಂಶೋಧನೆಯ ನಂತರ, ವಿಕಿರಣಗಳಿಂದಾಗುವ ಅಪಾಯಗಳ ಬಗೆಗೆ ಜೀವನ ಪರ್ಯಂತ ಎಚ್ಚರಿಸುತ್ತಲೇ ಬಂದ ಅವನು ೧೯೬೪ರಲ್ಲಿ ನಿಧನಹೊಂದಿದ.

೧೯೩೦ರ ಹೊತ್ತಿಗೆ, ನಮ್ಮನ್ನು ನಮ್ಮನ್ನೇ ಆಗಿಸುವ ಈ ‘ಜೀನ್’ ಕ್ರೋಮೋಸೋಮುಗಳಲ್ಲಿ ಅಡಗಿದೆ, ಮಾತ್ರವಲ್ಲ, ಅದು ಕೇವಲ ಒಂದು ರಾಸಾಯನಿಕ ವಸ್ತು ಮಾತ್ರ ಎಂಬುದು ನಿಸ್ಸಂದೇಹವಾಗಿ ನಿರೂಪಿತವಾಗಿತ್ತು. ಆದರೆ, ಅದು ಎಂತಹ ರಾಸಾಯನಿಕ ವಸ್ತು? ಅದರ ರೂಪ ಎಂತಹದು? ಅದು ಹೇಗೆ ಕೆಲಸ ಮಾಡುತ್ತದೆ? ಇವೆಲ್ಲಾ ಇನ್ನೂ ಪ್ರಶ್ನೆಗಳಾಗಿಯೇ ಉಳಿದಿದ್ದವು.
(ಫೋಟೋ-೫೧: ಜಗತ್ತಿನ ಅತ್ಯಂತ ಸುಂದರ ಫೋಟೋದ ಇತಿಹಾಸ ಮುಂದುವರೆಯುವುದು)

ಶೇಷಾದ್ರಿ ಗಂಜೂರು ಕೆಲ ವರ್ಷಗಳ ಕಾಲ ಬಿಹಾರದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡಿ, ನಂತರ ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿ, ಈಗ ಸದ್ಯಕ್ಕೆ ಕೆನಡಾದಲ್ಲಿ ಕಾಗ್ನಿಟಿವ್ ಕಾಂಪ್ಯೂಟಿಂಗ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನ್ಯೂರೋಸೈನ್ಸಿನಲ್ಲಿ ಆಸಕ್ತಿಯುಳ್ಳ ವಿಜ್ಞಾನಿ.
