ಅಂತೂ ಈಡಿಗೆ ಬೆಂಕಿ ತಾಕಿಸಿ ಅದು ಉರಿಯುವುದರೊಳಗೆ ನನ್ನನ್ನು ಅಲ್ಲಿಂದ ಮನೆಗೆ ಕಳಿಸಿದ್ದರು. ಅದಾದ ಮೇಲೆ ಎಂದೂ ನಾನು ಬಾನ ಹೊತ್ತಿದ್ದು ನೆನಪಿಲ್ಲ. ನನಗೆ ದೇವರನ್ನು ಹೊತ್ಕೋಬೇಕು ಅಂತ ಆಸೆ ಇತ್ತು. ಆದರೆ ನಾವು ದೇವರನ್ನು ತಲೆಮೇಲೆ ಹೊರಬಾರ್ದು ಅನ್ನುತ್ತಿದ್ದರು. ಅದಕ್ಕೆ ಅನೇಕ ನಿಯಮಗಳಿರುತ್ತವೆ ಅನ್ನುತ್ತಿದ್ದರು. ನಾವ್ಯಾಕೆ ಹೊತ್ಕೋಬಾರ್ದು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೆ ಇತ್ತು. ಅಂತೂ ಆ ವರ್ಷದ ದೀವಣ್ಗೆ ಹಬ್ಬ ಮುಗಿದುಹೋಗಿತ್ತು. ಪ್ರತಿ ದೀಪಾವಳಿ ಹಬ್ಬದಲ್ಲೂ ಅಂತಹ ನೆನಪುಗಳು ಮತ್ತೆ ಮತ್ತೆ ಮರುಕಳಿಸುತ್ತಲೆ ಇರುತ್ತವೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತ್ತೊಂದನೆಯ ಕಂತು

ಹಬ್ಬಗಳೆಂದರೆ ಅದೊಂದು ಸಂಭ್ರಮ ಸದಾ ದುಡಿಮೆ, ಕೂಲಿ, ಬದುಕು ಬವಣೆ ಅನ್ನ ಬಟ್ಟೆ ಹೀಗೆ ಒಂದಿಲ್ಲೊಂದು ಕಾರ್ಯಗಳಲ್ಲಿ ಕಳೆಯುವ ಜನ ಹಬ್ಬಗಳಲ್ಲಿ ಮನೆಯವರೆಲ್ಲಾ ಒಂದೆಡೆ ಸೇರಿ ಸಂಭ್ರಮಿಸುವಾಗ ಅಲ್ಲಿ ಮನುಷ್ಯ ಭಾವನೆಗಳು ಇನ್ನಷ್ಟು ಗಟ್ಟಿಗೊಳ್ಳಲಿ ಅನ್ನೋ ಕಾರಣಕ್ಕೆ ಇಂತಹ ಸಾಂಸ್ಕೃತಿಕ ವೈವಿಧ್ಯದ ಹಬ್ಬಗಳು ಬಂದಿರಬೇಕು ಅಥವಾ ಹಿರಿಯರು ಬಿಟ್ಟುಹೋದ ಹಬ್ಬಗಳು ಬಾಲ್ಯದಲ್ಲಿ ಬೇರೆಯದೆ ಅಂತಃಸ್ಸುಖವನ್ನು ಕೊಡುತ್ತವೆ. ಅದರಲ್ಲಿಯೂ ಹಳ್ಳಿಗಳಲ್ಲಿ ವ್ಯವಸಾಯವೆ ಪ್ರಧಾನವಾದುದು. ಪ್ರತಿಯೊಬ್ಬರಿಗೂ ಅದು ಬದುಕಾಗುವ, ಬೆಳಕಾಗುವ ಹಸಿದವರಿಗೆ ಅನ್ನಕ್ಕೆ ದಾರಿಯಾಗುವ ಬೇಸಾಯ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ತನ್ನದೆ ಆದ ಪ್ರಾಮುಖ್ಯತೆ ಹೊಂದಿದೆ.

ಸುಗ್ಗಿ ಕಾಲ ಮುಗಿದ ಮೇಲೆ ಅಥವಾ ರೈತರಿಗೆ ಬಿಡುವು ಸಿಗುವ ನವೆಂಬರ್ ತಿಂಗಳಲ್ಲಿ ದೀಪಾವಳಿ ಹಬ್ಬ ಬರುತ್ತದೆ. ನಾವೆಲ್ಲ ದೀವಣ್ಗೆ ಹಬ್ಬ ಬರುತ್ತದೆ. ಪಟಾಕಿಗಳನ್ನು ಹೊಡೀಬಹುದು ಎಂದುಕೊಂಡಿದ್ದೆವು. ಹಬ್ಬದ ಒಂದು ವಾರ ಮುಂಚಿತವಾಗಿಯೇ ಬಟ್ಟೆಗೆ ಬೇಡಿಕೆ ಇಡುತ್ತಿದ್ದೆವು. ಅಪ್ಪ ಸುಮ್ಮನೆ ತಲೆಯಾಡಿಸಿ ಹೋದಾಗಲಂತೂ ಈ ಬಾರಿ ನಮಗಂತೂ ಬಟ್ಟೆಯಿಲ್ಲ ಅಪ್ಪ ಮಾತಾಡಲೆ ಇಲ್ಲವಲ್ಲ ಎಂದು ಅಮ್ಮನ ಹತ್ತಿರ ಹೇಳಿ ಸುಮ್ಮನಾಗುತ್ತಿದ್ದೆವು. ನಮ್ಮ ಸಂಭ್ರಮಕ್ಕೆ ಹೇಗೆಲ್ಲಾ ಕಷ್ಟಪಟ್ಟು ಹಣ ಹೊಂಚುತ್ತಿದ್ದ ಎಂದು ಈಗ ನೆನೆದರೆ ಮನಸ್ಸು ಘಾಸಿಯಾಗುತ್ತದೆ. ಹಬ್ಬಗಳೆಂದರೆ ಸಂಭ್ರಮದಲ್ಲೂ ಸಂಕಟಕ್ಕೆ ಕಾರಣವಾಗುತ್ತದೆಯಾ ಅಥವಾ ಹಬ್ಬದ ಸಂಭ್ರಮದಲ್ಲಿ ಸಂಕಟ ಮರೆಯಾಗುತ್ತದೆಯಾ? ಎರಡೂ ನಿಜವಿರಬಹುದು. ಆದರೆ ನಿತ್ಯಬದುಕು ನಡೆಯಲೆಬೇಕು. ಅದಕ್ಕೆ ಸಂಭ್ರಮ ಸಂಕಟಗಳೆಂಬ ಯಾವ ಗೋಡೆಯೂ ಇಲ್ಲ ಸುಮ್ಮನೆ ನಡೆಯಬೇಕು. ನಡೆದಂತೆಲ್ಲಾ ದಾರಿ ಸಾಗುತ್ತಲೆ ಇರುತ್ತದೆ. ಅಂತೂ ಬಟ್ಟೆಗಳಂತೂ ಮನೆಗೆ ಬಂದಿದ್ದವು. ಒಂದೆರಡು ಬಾರಿ ಬೇರೆಯವರಿಗೆ ಕೂಲಿಗೆ ಹೋಗಿ ಪಟಾಕಿ ಕೊಂಡುಕೊಳ್ಳಲು ಹಣ ಸಂಗ್ರಹಿಸಿದ್ದೂ ಇದೆ. ಅದೊಂಥರ ಖುಷಿ. ಮನೆಯಲ್ಲಿ ಬಡತನವಿರಬಹುದು, ಮನಸ್ಸಿಗೆ ಬಡತನವಿಲ್ಲವಲ್ಲ. ತನ್ನ ಓರಗೆಯವರೊಂದಿಗೆ ನಾನು ಪಟಾಕಿ ಹಚ್ಚುವೆ ಅನ್ನುವುದೆ ಸಮಾಧಾನವಾದುದು.

ಪ್ರತಿ ಹಬ್ಬದಲ್ಲೂ ನನಗೊಂದು ಸಂಕಟ ಕಾಡುತ್ತಿತ್ತು. ನಮ್ಮ ಹಿಂದಿನ ತಲಮಾರಿನಿಂದಲೂ ಊರಿನ ತಳವಾರಿಕೆ ಕೆಲಸವನ್ನು ಮಾಡಿಕೊಂಡು ಬಂದಿದ್ದರಿಂದ ದೇವತಾಕಾರ್ಯಗಳಲ್ಲಿ ಕೆಲವೊಂದು ಕೆಲಸವನ್ನು ನಾವೆ ಮಾಡಬೇಕಾಗಿತ್ತು. ಇಂತಹ ಸಂದರ್ಭದಲ್ಲಿ ನನ್ನ ಓರಗೆಯ ಗೆಳೆಯರೊಂದಿಗೆ ಸಹಜವಾಗಿ ಬೆರೆಯಲು ಆಗುತ್ತಿರಲಿಲ್ಲ. ಅಲ್ಲಿ ಕೀಳರಿಮೆ ನನ್ನನ್ನು ಕಾಡುತ್ತಿತ್ತು. ದೇವರ ಕೆಲಸಗಳನ್ನು ಮಾಡಬೇಕಾದರೆ ಈ ಕೆಲಸವನ್ನಷ್ಟೆ ಮಾಡುವುದು ನಿಮ್ಮ ಕೆಲಸ ಎಂದು ಹೇಳಿದಾಗಲೆಲ್ಲಾ ಮನಸ್ಸು ಮುದುಡುತ್ತಿತ್ತು. ಇದು ಶೋಷಣೆಯ ಒಂದು ಭಾಗವೆ? ಗೊತ್ತಿಲ್ಲ… ಮನಸ್ಸಿಗೆ ಸಂಕಟವಾಗುತ್ತಿದ್ದದ್ದಂತೂ ನಿಜ.

ಒಂದು ಘಟನೆಯನ್ನು ಇಲ್ಲಿ ಹೇಳಿಕೊಳ್ಳಲೇಬೇಕು. ದೀಪಾವಳಿ ಹಬ್ಬದ ದಿನ ಸಂಪ್ರದಾಯದಂತೆ ಗೌರಮ್ಮನನ್ನು ಬಿಡುವುದು ರೂಢಿ. ನಮ್ಮ ಮನೆಯಲ್ಲಿ ಅಪ್ಪನ ಸಂಬಂಧಿಕರೊಬ್ಬರು ಇಂತಹ ಕೆಲಸಗಳನ್ನು ಮಾಡುತ್ತಿದ್ದರು. ನಾವೆಂದೂ ಇಂತಹ ಕೆಲಸ ಮಾಡುತ್ತಿರಲಿಲ್ಲ. ಆ ವರ್ಷ ಅವರಿಗೂ ವಯಸ್ಸಾದ ಕಾರಣ ಗೌರಮ್ಮನನ್ನು ಬಿಡುವ ಕಾರ್ಯಕ್ಕೆ ಹೋಗಿರಲಿಲ್ಲ. ನಮ್ಮಪ್ಪನು ಎಂದೂ ಇಂತಹ ಕೆಲಸ ಮಾಡುತ್ತಿರಲಿಲ್ಲ. ನಮಗೆ ಇದರ ಬಗ್ಗೆ ಎಂದೂ ಯೋಚನೆಯೆ ಇರಲಿಲ್ಲ. ಹಾಗಾಗಿ ಆ ದಿನವೂ ಎಂದಿನಂತೆ ಹೊಸ ಬಟ್ಟೆ ತೊಟ್ಟ ನಾನು ನನ್ನ ಸ್ನೇಹಿತರೊಂದಿಗೆ ಆಟವಾಡುವುದಕ್ಕೆ ಹೋಗಿದ್ದೆ. ಸಾಯಂಕಾಲ ಗೌರಮ್ಮನನ್ನು ಬಿಡುವಾಗ ಪಟಾಕಿ ಎಷ್ಟು ಹೊಡೆಯುತ್ತೇವೆ ನಾನು ಎಷ್ಟು ರೂಪಾಯಿ ಪಟಾಕಿ ತಂದಿದ್ದೇನೆ ಎಂಬ ಲೆಕ್ಕಾಚಾರದ ಮಾತುಗಳು ಮಧ್ಯಾಹ್ನವೆ ಚರ್ಚೆಯಾಗುತ್ತಿದ್ದವು. ಹಬ್ಬದ ಖುಷಿಗೆ ಮನೆಗೆ ಹೋಗುವುದೆ ತಡವಾಗುತ್ತಿತ್ತು. ಸಾಯಂಕಾಲ ಐದರ ಸಮಯವಿರಬೇಕು. ಗೌರಮ್ಮ ಹೊರಟಿದ್ದಾಳೆ. ಅಂದರೆ ಒಂಭತ್ತು ದಿನಗಳ ಕಾಲ ಪ್ರತಿಷ್ಟಾಪಿಸಿದ್ದ ಗೌರಮ್ಮನನ್ನು ಕೆರೆಗೆ ಬಿಟ್ಟು ಬರುವ ಕಾರ್ಯವದು ವಾದ್ಯಗಳೊಂದಿಗೆ ಹೊರಟ ಜನ ನಮ್ಮಪ್ಪನಿಗೆ ಹೇಳಿದ್ದಾರೆ. ನಮ್ಮಜ್ಜ ಬರದ ಕಾರಣ ನನಗಾಗಿ ಹುಡುಕಾಡಿದ್ದಾರೆ. ಎಲ್ಲಿಯೂ ನನ್ನ ಸುಳಿವಿರಲಿಲ್ಲ. ವಿಪರೀತ ಕೋಪದ ಮನುಷ್ಯ ನಮ್ಮಪ್ಪ ಎಲ್ಲಿಯೂ ಸಿಗದ ನನ್ನ ಮೇಲೆ ಹಲ್ಲು ಮಸೆಯುತ್ತಾ ಕಾಯುತ್ತಿದ್ದ. ನಾನು ಹಬ್ಬದ ಖುಷಿಯಲ್ಲಿ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿರಬೇಕಾದರೆ, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ನಮ್ಮಪ್ಪನನ್ನು ನೋಡಿ ಬಹುತೇಕ ನನಗೆ ಗಾಬರಿಯಾಗಿ ನಾಲಗೆ ಒಣಗಿ ಹೋಗಿತ್ತು. ಈ ಹಿಂದೆ ನಮ್ಮಪ್ಪನ ಹೊಡೆತಗಳನ್ನು ತಿಂದಿದ್ದ ನನಗೆ ಭಯ ಸ್ವಲ್ಪ ಜಾಸ್ತಿಯೆ ಇತ್ತು. ಅಷ್ಟರಲ್ಲಿ ಏ ಹೋಗೊ ಗೌರಮ್ಮನನ್ನು ತಗೊಂಡು ಹೋಗ್ತಾ ಇದಾರೆ. ಅದಕ್ಕೆ ನಿಮ್ಮಪ್ಪ ಬಂದಿರೋದು ಅಂತ ಹೇಳಿದರು. ನಾನು ದೇವಸ್ಥಾನದ ಕಡೆ ಓಡುವುದಕ್ಕೆ ಆರಂಭಿಸಿದೆ. ಅಷ್ಟರಲ್ಲಿ ನಮ್ಮಪ್ಪನ ಕೋಪ ಕಡಿಮೆಯಾಗಿರಬೇಕು. ವಾಪಸ್ಸು ಮನೆಗೆ ಹೋದರು.

ಹಬ್ಬಗಳೆಂದರೆ ಸಂಭ್ರಮದಲ್ಲೂ ಸಂಕಟಕ್ಕೆ ಕಾರಣವಾಗುತ್ತದೆಯಾ ಅಥವಾ ಹಬ್ಬದ ಸಂಭ್ರಮದಲ್ಲಿ ಸಂಕಟ ಮರೆಯಾಗುತ್ತದೆಯಾ? ಎರಡೂ ನಿಜವಿರಬಹುದು. ಆದರೆ ನಿತ್ಯಬದುಕು ನಡೆಯಲೆಬೇಕು. ಅದಕ್ಕೆ ಸಂಭ್ರಮ ಸಂಕಟಗಳೆಂಬ ಯಾವ ಗೋಡೆಯೂ ಇಲ್ಲ ಸುಮ್ಮನೆ ನಡೆಯಬೇಕು. ನಡೆದಂತೆಲ್ಲಾ ದಾರಿ ಸಾಗುತ್ತಲೆ ಇರುತ್ತದೆ. 

ನಾನು ಮನಸ್ಸಿನಲ್ಲಿಯೆ ದೇವರನ್ನೆ ಶಪಿಸುತ್ತ ಈ ಕೆಲಸ ನಾವೆ ಯಾಕೆ ಮಾಡ್ಬೇಕು ಬೇರೆಯವರು ತಗೊಂಡರೆ ಏನಾಗುತ್ತೆ ಎಂದುಕೊಂಡೇ ಗೌರಮ್ಮನನ್ನು ಇರಿಸಿದ್ದ ತಟ್ಟೆಯನ್ನು ಕೈಯಲ್ಲಿ ಹಿಡಿದು ಹೊರಟಿದ್ದೆ. ನಮ್ಮ ಮುಂದೆ ವಾಲಗ ವಾದ್ಯಗಳಿದ್ದವು. ಹಾಗೇನೋ ಖುಷಿಯಾಗುತ್ತಿತ್ತು. ಕೆರೆಯಲ್ಲಿ ಅದನ್ನು ಬಿಡಬೇಕಾದರೆ ಕೆರೆಯ ನೀರಿನಲ್ಲಿ ಹೂತುಹೋಗಿದ್ದ ಸೀಮೆಜಾಲಿಯ ಮುಳ್ಳೊಂದು ಚುಚ್ಚಿಕೊಂಡಿತು. ಆಗ ಇನ್ನಷ್ಟು ಶಪಿಸುತ್ತಲೆ ಆ ಕೆಲಸವನ್ನು ಮಾಡಿದ್ದಾಯ್ತು. ಆದರೆ ಇಡೀ ಊರೆ ನನ್ನನ್ನು ನೋಡಬೇಕಾದರೆ ನನ್ನೊಳಗೊಂದು ಕೀಳರಿಮೆಯ ಸುಳಿ ಸುತ್ತುತ್ತಲೆ ಇತ್ತು. ಕೆಲವು ಘಟನೆಗಳೆ ಹಾಗೆ ಬದುಕಿನುದ್ದಕ್ಕೂ ಕಾಡುತ್ತವೆ. ಇಂತಹದೊಂದು ಕೀಳರಿಮೆಯನ್ನು ಸ್ಥಾಪಿಸಿಬಿಡುತ್ತವೆ. ಅಂತೂ ಗೌರಮ್ಮನನ್ನು ಬಿಡುವ ಕಾರ್ಯ ಮುಗಿಸಿದ್ದಾಯಿತು. ಆದರೆ ಪಟಾಕಿ ಹೊಡೆಯುವ ಸಂಭ್ರಮವನ್ನು ಕಿತ್ತುಕೊಂಡಿತ್ತು.

ಬಹುತೇಕ ಹಳ್ಳಿಗಳಲ್ಲಿ ಕಾಟಲಿಂಗ ದೇವರು (ಕಾಟಮ್ದೆವರು) ಎಂದು ಕರೆಯುವ ದೇವರು ಊರ ಹೊರಭಾಗದಲ್ಲಿ ಅಥವಾ ಕೆರೆಯಂಗಳದಲ್ಲಿ ಒಂದು ಚಿಕ್ಕ ಗುಡಿ ಇರುತ್ತದೆ. ಅದರ ಮುಂದೆ ಮುಳ್ಳುಕಂಟಿಯ ಒಂದು ಬೃಹತ್ತಾದ ಬಣವೆಯಂತಹದನ್ನು ರೆಡಿಮಾಡಿರುತ್ತಾರೆ. ಇದಕ್ಕೆ ಈಡು ಒಟ್ಟುವುದು ಎನ್ನುತ್ತಾರೆ. ಊರಿನಲ್ಲಿರುವ ದನಗಳನ್ನು ಸಿಂಗರಿಸಿ ವಾದ್ಯದೊಂದಿಗೆ ಕಾಟಮ್ದೇವರಿಗೆ ಬಾನ (ದೇವರಿಗೆ ಅರ್ಪಿಸುವ ಮುದ್ದೆಗಳ ನೈವೇದ್ಯ) ಮಾಡಿಕೊಂಡು ಹೋಗುವುದು ವಾಡಿಕೆ. ಇದು ಬಹಳ ದಿನದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಆ ಬಾನ ಮಾಡಿಕೊಂಡು ಹೋಗುವುದು ನಮ್ಮ ಮನೆಯಿಂದಲೆ ಆದ್ದರಿಂದ ನಮ್ಮ ಮನೆಯಲ್ಲಿ ಯಾರಾದರೂ ಹೊತ್ತುಕೊಂಡು ಹೋಗಬೇಕಾಗಿತ್ತು. ಅಂದು ಯಾರೂ ಇಲ್ಲದ್ದರಿಂದ ನನಗೆ ಆ ಕೆಲಸ ಮಾಡುವ ಜವಾಬ್ದಾರಿ ಬಿತ್ತು. ನನಗಾಗ ಹನ್ನೆರಡೊ ಹದಿಮೂರೊ ವಯಸ್ಸಿರಬೇಕು. ನನಗೆ ಅದನ್ನು ದೂರದಲ್ಲಿ ನಿಂತುಕೊಂಡ ನೋಡುವುದರಲ್ಲಿ ಸಂತಸವಾಗುತ್ತಿತ್ತು. ಅಪ್ಪನ ಗದರುವಿಕೆಯಿಂದ ಅನಿವಾರ್ಯವಾಗಿ ಆ ಕೆಲಸವನ್ನು ಮಾಡಬೇಕಾಯಿತು.

ನಮ್ಮ ಜೊತೆಯಲ್ಲಿ ನಮ್ಮ ಚಿಕ್ಕಪ್ಪ ಬಂದಿದ್ದರು. ನಾನು ಚಿಕ್ಕಹುಡುಗನಾದ್ದರಿಂದ ಜನರು ಯಾರಾದರೂ ಮೇಲೆ ಬಿದ್ದರೆ ತೊಂದರೆಯಾಗುತ್ತದೆ. ದೇವರು ಮುನಿಸಿಕೊಳ್ಳುತ್ತಾನೆ. ಊರಿಗೆ ಕೆಟ್ಟದ್ದಾಗಬಹುದು. ಹಾಗಾಗದಿರಲಿ ಎಂಬುದು ಹಿರಿಯರ ಬಯಕೆ ಹಾಗಾಗಿ ಆ ಬಾನವನ್ನು ಹೊತ್ತುಕೊಂಡ ನನ್ನನ್ನು ಜತನವಾಗಿ ಕರೆದುಕೊಂಡು ಹೋದರು. ಊರಿನ ಅರಳಿಕಟ್ಟೆಯ ಹತ್ತಿರ ಬಾನವನ್ನು ಇಳಿಸಬೇಕಾಗಿತ್ತು. ಊರಿನ ದನಗಳೆಲ್ಲಾ ಅಲ್ಲಿ ಸೇರುತ್ತಿದ್ದವು. ಅಲ್ಲಿಂದ ಒಂದರ್ಧ ಕಿಮೀ ನಡೆದುಕೊಂಡು ಹೋಗಿ ಚಿಕ್ಕ ಕಲ್ಲುಗಳಿಂದ ಕಟ್ಟಿರುವ ಗೂಡಿನಂಥ ಕಾಟಮ್ದೇವರಿಗೆ ಎಡೆ ಹಾಕಿ ಪೂಜಿಸಿ ಅದರ ಮುಂದೆ ಒಟ್ಟಿರುವ ಮುಳ್ಳುಕಂಟಿಯ ಈಡಿಗೆ ಬೆಂಕಿ ಇಟ್ಟು ಒಂದೆಡೆಯನ್ನು ಅದರಲ್ಲಿ ಹಾಕಿ ಅದು ಜೋರಾಗಿ ಉರಿಯುವಾಗ ದನಗಳನ್ನು ಅದರ ಸುತ್ತಲೂ ಸುತ್ತಿಸುವುದು ಅದು ಜಾನುವಾರುಗಳನ್ನು ಕಾಪಾಡುತ್ತದೆ ಎಂಬ ನಂಬಿಕೆ ಜನಗಳದ್ದು. ಆ ಕೆಲಸಗಳನ್ನು ಮಾಡುವವರು ಅದನ್ನು ಚಾಚು ತಪ್ಪದೆ ಮಾಡುತ್ತಿದ್ದರು. ನಾನು ಆ ಬಾನವನ್ನು ಹೊತ್ತುಕೊಂಡು ಹೋಗುವಾಗ ದನಗಳಿಗೆ ಹೆದರಿ ಒಂದೆರಡು ಬಾರಿ ಬಾನ ಬೀಳುವುದರಲ್ಲಿತ್ತು. ಅದನ್ನು ಬಿಗಿಯಾಗಿ ಚಿಕ್ಕಪ್ಪ ಹಿಡಿದುಕೊಂಡಿದ್ದರು. ಆಗಾಗ ಹುಷಾರು ಎಂದು ನನ್ನನ್ನು ಎಚ್ಚರಿಸುತ್ತಿದ್ದರು. ದನಗಳ ತಳ್ಳಾಟದಲ್ಲಿ ಒಮ್ಮೆ ಬೀಳುವಂತಾದಾಗ ಬಹಳವಾಗಿ ನಮ್ಮ ಚಿಕ್ಕಪ್ಪ ಬೈದಿದ್ದರು. ನನಗ್ಯಾಕೆ ಇದು ಬೇಕಾಗಿತ್ತು ಎಂದು ಅನಿಸಿತ್ತು. ನಾನೂ ಎಲ್ಲರಂತೆ ಆಡಿಕೊಂಡು ಇರುತ್ತಿದ್ದೆ ಅನಿಸಿದರೂ ಅದನ್ನು ಎಲ್ಲರೆದುರು ಹೇಳುವಂತಿರಲಿಲ್ಲ. ಎಷ್ಟೊ ಬಾರಿ ಇಂತಹ ಕೆಲಸವನ್ನು ನಾವೆ ಯಾಕೆ ಮಾಡ್ಬೇಕು ಅಂತ ಮನೆಯಲ್ಲಿ ಕೇಳುತ್ತಿದ್ದದ್ದು ಇದೆ. ಹಾಗೆಲ್ಲ ಕೇಳಬಾರದು ದೇವರ ಕೋಪಕ್ಕೆ ಗುರಿಯಾಗ್ತೀಯ ಅನ್ನುತ್ತಿದ್ದರು.

ಅಂತೂ ಈಡಿಗೆ ಬೆಂಕಿ ತಾಕಿಸಿ ಅದು ಉರಿಯುವುದರೊಳಗೆ ನನ್ನನ್ನು ಅಲ್ಲಿಂದ ಮನೆಗೆ ಕಳಿಸಿದ್ದರು. ಅದಾದ ಮೇಲೆ ಎಂದೂ ನಾನು ಬಾನ ಹೊತ್ತಿದ್ದು ನೆನಪಿಲ್ಲ. ನನಗೆ ದೇವರನ್ನು ಹೊತ್ಕೋಬೇಕು ಅಂತ ಆಸೆ ಇತ್ತು. ಆದರೆ ನಾವು ದೇವರನ್ನು ತಲೆಮೇಲೆ ಹೊರಬಾರ್ದು ಅನ್ನುತ್ತಿದ್ದರು. ಅದಕ್ಕೆ ಅನೇಕ ನಿಯಮಗಳಿರುತ್ತವೆ ಅನ್ನುತ್ತಿದ್ದರು. ನಾವ್ಯಾಕೆ ಹೊತ್ಕೋಬಾರ್ದು ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೆ ಇತ್ತು. ಅಂತೂ ಆ ವರ್ಷದ ದೀವಣ್ಗೆ ಹಬ್ಬ ಮುಗಿದುಹೋಗಿತ್ತು. ಪ್ರತಿ ದೀಪಾವಳಿ ಹಬ್ಬದಲ್ಲೂ ಅಂತಹ ನೆನಪುಗಳು ಮತ್ತೆ ಮತ್ತೆ ಮರುಕಳಿಸುತ್ತಲೆ ಇರುತ್ತವೆ. ಈಗಲೂ ಕಾಟಮ್ದೇವರು ಆ ಚಿಕ್ಕ ಕಲ್ಲುಗಳ ಗುಡಿನಲ್ಲಿಯೆ ಇದ್ದಾನೆ. ಮಳೆಗಾಳಿಗೂ ಜಗ್ಗದೆ ಬಾನ ಹೊರುವವರು ಬದಲಾಗಿದ್ದಾರೆ. ನನ್ನ ನೆನಪು ಮಾತ್ರ ಮಾಸಿಲ್ಲ ಅಷ್ಟೆ.

(ಮುಂದುವರಿಯುವುದು)