ನಮ್ಮ ಮನೆ ಹತ್ತಿರವೆ ಇದ್ದ ಹುಸೇನ್ ಮತ್ತು ಷರೀಫ್ ಎಂಬಿಬ್ಬರು ಹಾಲು ತರುವ ಕೆಲಸ ವಹಿಸಿಕೊಂಡರು. ಆಗ ಅರ್ಧ ಲೀಟರ್ ಹಾಲಿಗೆ ಎರಡು ರೂಪಾಯಿ ಇಪ್ಪತ್ತೈದು ಪೈಸೆ ಅಷ್ಟೆ. “ಎರಡು ಕಾಲು! ಎರಡು ಕಾಲು!” ಎನ್ನುತ್ತಾ ಬರುತ್ತಿದ್ದರು. ಅವರು ಬರುವ ವೇಳೆಗೆ ಚಿಲ್ಲರೆ ಹೊಂದಿಸಿ ಇಡಬೇಕಿತ್ತು. ತಿಂಗಳಿಗೊಮ್ಮೆ ಅವರಿಗೆ ಹಾಲು ತಂದಿದ್ದಕ್ಕೆ ಇಷ್ಟು ಹಣ ಎಂದು ಕೊಡಬೇಕಿತ್ತು. ತಿಂಗಳಲ್ಲಿ ಕನಿಷ್ಟ ನಾಲ್ಕು ಬಾರಿಯಾದರೂ ಹಾಲು ಹಾಕದೆ ಖಾಲಿ ಕಾಫಿ ಕುಡಿಸುತ್ತಿದ್ದರು. ಅವರ ತಂದೆಗೆ ಮದ್ಯ ಸೇವನೆಯ ಚಟವಿತ್ತು. ಅವರು ಹಾಲಿನ ದುಡ್ಡನ್ನು ತೆಗೆದುಕೊಂಡುಬಿಡುತ್ತಿದ್ದರಂತೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ

ಮಂಜಿನ ನಗರಿ ಮಡಿಕೇರಿಯಲ್ಲಿ ಕಳೆದ ನೆನಪುಗಳು ನಗರದ ನಮ್ಮ ಶಾಪಿಂಗ್ ಮೂಲಕವೇ ಇನ್ನು ಅಚ್ಚಳಿಯದೆ ಉಳಿದಿವೆ. ದಿನಸಿ ಸಾಮಾನುಗಳು ಬೇಕೆಂದರೆ ಚೌಕಿಯಲ್ಲಿದ್ದ ಮಿಸ್ಬ ಸ್ಟೋರ್ಸ್‌ಗೆ ಹೋಗಬೇಕಿತ್ತು. ಚೀಟಿ ಬರೆಯುವ ಜವಾಬ್ದಾರಿ ನನ್ನದೆ. ಅಮ್ಮ ಹೇಳಿದಂತೆ ಬರೆಯುವುದು. ಕಡೆಯಲ್ಲಿ ನಮಗೇನು ಬೇಕೋ ಅವುಗಳನ್ನು ಸೇರಿಸುವುದು, ಅಂದರೆ ಜಾಮ್, ಮ್ಯಾಗಿ, ಬಿಸ್ಕೆಟ್‌ಗಳು ಹೀಗೆ…. ಬಿಸ್ಕೆಟ್ ಯಾವುದು ಎಂದು ಸರಿಯಾಗಿ ಬರೆಯಬೇಕಿತ್ತು. “ಸರಿಯಾಗಿ ಬರಿ ಅಂಗಡಿಯವರಿಗೆ ಏನ್ ಆಗ್ಬೇಕು ನಾಯಿ ಬಿಸ್ಕೆಟ್ ಕೊಡ್ತಾರೆ ಯಾರ್ ತಿನ್ತಾರೆ?” ಎನ್ನುವುದು ನನ್ನ ತಮ್ಮಂದಿರ ಅಭಿಪ್ರಾಯವಾಗಿತ್ತು. ಟೂತ್ ಪೇಸ್ಟ್ ಎನ್ನುವುದನ್ನು ಟೋಲ್ ಪೇಸ್ಟ್ ಎಂದು ನಾನು ಬರೆದು ಬಹಳ ಚರ್ಚೆಗೆ ಗ್ರಾಸವಾಗಿತ್ತು.

ಬೆಂಕಿಪೊಟ್ಟಣ 10 ಎಂದು ಬರೆಯಬೇಕಿತ್ತು ಒಂದು ಸೊನ್ನೆ ಹೆಚ್ಚು ಸೇರಿಸಿ 100 ಎಂದು ಬರೆದದ್ದು ಇನ್ನೂ ದೊಡ್ಡ ಇಶ್ಯೂ ಆಗಿತ್ತು. ಏನು ಸಮಜಾಯಿಷಿಕೆ ಕೊಡಲು ಸಾಧ್ಯವಾಗಿರಲಿಲ್ಲ. ಅಲ್ಲಿಯೇ ನಾವು ತಿಂಗಳ ದಿನಸಿ ಪದಾರ್ಥಗಳನ್ನು ತೆಗೆದುಕೊಳ್ಳುತ್ತಾ ಇದ್ದದ್ದು. ದಿನಸಿ ಸಾಮಾನು ಬಂದ ಕೂಡಲೆ ಎಲ್ಲರೂ ಬ್ಯಾಗಿಗೆ ಮುಗಿ ಬೀಳುತ್ತಿದ್ದೆವು. ಯಾವುದಕ್ಕಾದರೂ ಫ್ರೀ ಏನಾದರೂ ಸಿಕ್ಕಿದೆಯಾ ಅದನ್ನು ಬೇಗ ಕೈವಶ ಮಾಡಿಕೊಳ್ಳಬೇಕೆಂದು. ಮೆಡಿಮಿಕ್ಸ್ ಜೊತೆ ಚಿಕ್ಕ ಬಾಟಲಿಯಲ್ಲಿ ಸ್ನಾನದ ನೀರಿಗೆ ಬೆರೆಸುವ ಎಣ್ಣೆ, ಸಂತೂರ್ ಸೋಪಿನ ಜೊತೆ ರೊಟೊಮ್ಯಾಕ್ ಪೆನ್ನು, ಬೋರ್ನ್ವಿಟ ಜೊತೆಗೆ ಚಿಕ್ಕ ಚಟ್ನಿ ಬಟ್ಟಲು ಸಿಗುತ್ತಿತ್ತು. ಈಗಿನಂತೆ ಆಗ ಊದುಬತ್ತಿಗೆ ಹೆಚ್ಚು ಆಯ್ಕೆ ಇರಲಿಲ್ಲ. ಹಬ್ಬಗಳಲ್ಲಿ ಬಳಸಲು ಮೈಸೂರು ಸ್ಯಾಂಡಲ್ ಅಗರಬತ್ತಿ. ಉಳಿದಂತೆ ವಾಸು ಅಗರಬತ್ತಿ ತ್ರಿಕೋನಾಕಾರದ ಚಿಕ್ಕ ಕೆಂಪು ಪ್ಲಾಸ್ಟಿಕ್ ಪ್ಯಾಕುಗಳಲ್ಲಿ ಬರುತ್ತಿತ್ತು. ಆನಂತರ ಕೊಳವೆಯಾಕಾರದ ಪ್ಯಾಕುಗಳಲ್ಲಿ ಬರಲು ಪ್ರಾರಂಭವಾಗಿದ್ದು ಅದರ ಜೊತೆಗೆ. ಅದರಲ್ಲಿ ಫ್ರೀ ಗಿಫ್ಟ್ ಇನ್ ಸೈಡ್ ಎಂದಿರುತ್ತಿತ್ತು. ಅದರ ಬಗ್ಗೆ ಹೆಚ್ಚು ಆಸಕ್ತಿ ಯಾರಿಗೂ ಇರಲಿಲ್ಲ ಚಿಕ್ಕ ಸ್ಪೂನ್ ಇರುತ್ತದೆ ಎನ್ನುವ ಕಾರಣಕ್ಕೆ.

ತಿಂಗಳಿಗೊಮ್ಮೆ ದಿನಸಿ ಪದಾರ್ಥಗಳನ್ನು ತಂದರೂ ಇನ್ನೂ ಸಾಮಾನುಗಳು ಬೇಕಾಗುತ್ತಿದ್ದವು. ಆಗ ಬಬಿತಾ ಸ್ಟೋರಿಗೆ ಹೋಗುವ ಕೆಲಸ ನನ್ನದಾಗಿರುತ್ತಿತ್ತು. ಉಪ್ಪು ಈಗಿನಂತೆ ಪ್ಯಾಕ್ ಆಗಿ ಬರುತ್ತಿರಲಿಲ್ಲ. ಚೀಲದಲ್ಲಿ ಇದ್ದದ್ದನ್ನು ತೂಕ ಮಾಡಿಕೊಡುತ್ತಿದ್ದರು. ಮಡಿಕೇರಿ ಮಳೆಗೆ ಎಲ್ಲವೂ ನೆನೆದು ವ್ಯರ್ಥವಾಗಿರುತ್ತಿತ್ತು. ಬಬಿತಾ ಸ್ಟೋರಿಗೆ ನಮ್ಮಮ್ಮ ನನ್ನನ್ನು ಕರೆದುಕೊಂಡು ಹೋಗಿ ಬಳಪ ಕೊಡಿ ಎಂದರೆ ಅಂಗಡಿಯವರಿಗೆ ಅರ್ಥವಾಗಿರಲಿಲ್ಲವಂತೆ. ಅವರು ಮಲೆಯಾಳದವರು ಎಂದು ಅಮ್ಮ ಅವರಿಗೆ ಅರ್ಥ ಮಾಡಿಸಲು ಕಷ್ಟ ಪಡುತ್ತಿದ್ದಾಗ ಮನೆ ಪಕ್ಕದವರು ‘ಕಡ್ಡಿ ಕೊಡಿ’ ಎಂದರಂತೆ. ಆಗ ಬಾಲು ಬಬಿತಾ ಸ್ಟೋರ್ ಹುಡುಗ ಕೊಟ್ಟನಂತೆ. ಮೈಸೂರು ಭಾಗದಲ್ಲಿ ಬಳಪ ಇದ್ದದ್ದು ಕೊಡಗಿನಲ್ಲಿ ಕಡ್ಡಿ. ಈಗ ಕಡ್ಡಿಯಾಗಲಿ ಬಳಪವಾಗಲಿ ಇಲ್ಲ. ಸ್ಲೇಟು ಸಹ ಇಲ್ಲ. ಟೀಚರ್ ಸ್ಲೇಟಲ್ಲಿ ಬರೆದದ್ದಕ್ಕೆ ಗುಡ್ ಹಾಕಿಕೊಟ್ಟರೆ ಅದನ್ನು ಅಳಿಸದೆ ಹಾಗೆ ಮನೆಗೆ ಬಂದು ತೋರಿಸುವುದು ದೊಡ್ಡ ಟಾಸ್ಕ್ ಆಗಿತ್ತು. ಮನೆಯಲ್ಲಿ ಅಮ್ಮನಿಗೆ ತೋರಿಸಿದರೆ ಎಲ್ಲಾ ಅಳಿಸಿಹೋಗಿದೆ ಎಂದು ನಮ್ಮ ಖುಷಿಯನ್ನು ತಣ್ಣಗಾಗಿಸಿಬಿಡುತ್ತಿದ್ದರು. ಸ್ಲೇಟನ್ನು ಪಾಟಿ ಎಂದೂ ಕರೆಯುತ್ತಾರೆ. ತಮಿಳಲ್ಲಿ ಪಾಟಿ ಅಂದರೆ ಅಜ್ಜಿ. ಈಗ ಸ್ಲೇಟೂ ಇಲ್ಲ ಅಜ್ಜಿನೂ ಇಲ್ಲ.

ಬಬಿತಾ ಸ್ಟೋರ್ ನಂತರ ಬಂದ್ದದ್ದೆ ಹೊಸ ಅಂಗಡಿ. ಆ ಅಂಗಡಿ ಪ್ರಾರಂಭವಾಗಿ ಹತ್ತು ಹನ್ನೆರಡು ವರ್ಷ ಕಳೆದರೂ ಹೊಸ ಅಂಗಡಿ ಎಂದೆ ಕರೆಯುತ್ತಿದ್ದೆವು. ಈ ಕ್ಷಣದವರೆಗೂ ಆ ಅಂಗಡಿ ಹೆಸರು ಗೊತ್ತಿಲ್ಲ! ನಾನೊಮ್ಮೆ ಹೋಗಿದ್ದಾಗ ಯಾರೋ ಅಲ್ಲಿ ನೀರಿನ ಬಾಟಲ್ ಖರೀದಿಸಿದ್ದಾರೆ. ಅದರ ಮೇಲೆ ಬ್ಯಾಕ್ಟೀರಿಯಾ ಫ್ರೀ ಎಂದು ಬರೆದ್ದದ್ದನ್ನು ನೋಡಿ ಇಲ್ಲಿ ಫ್ರೀ ಎಂದು ಬರೆದಿದೆ ಕೊಡಿ ಎಂದು ವಾದ ಮಾಡುತ್ತಿದ್ದರು. ಅದನ್ನು ನೋಡಿ ತುಂಬಾ ಎಂಜಾಯ್ ಮಾಡಿದ್ದು ನೆನಪು. ಆ ಘಟನೆ ಆಗಿ ಸ್ವಲ್ಪ ದಿನಗಳಲ್ಲಿ ಅಂಗಡಿ ಮಾಲೀಕರ ಎರಡನೆ ಮಗನನ್ನು ಮುಂದೆ ಕಿರಿದಾದ ಗೌಳಿ ಬೀದಿಗೆ ಸೇರುವ ಕಿರು ರಸ್ತೆಯಲ್ಲಿ ಹಾಕಿ ಸ್ಟಿಕ್‌ನಿಂದ ಕೊಲೆ ಮಾಡಿ ಹೋಗಿದ್ದ ಸುದ್ದಿ ಬಹಳ ಭಯ ತರಿಸಿತ್ತು. ಸಂಜೆ ಆಗುತ್ತಲೆ ಮಕ್ಕಳನ್ನು ಹೊರಗೆ ಕಳುಹಿಸಲು ಎಲ್ಲರೂ ಹೆದರುತ್ತಿದ್ದರು. ಹಿರಿಯರ ಮೇಲಿನ ಅಸಮಾಧಾನವನ್ನು ಶಾಲೆಗೆ ಹೋಗುವ ಮಕ್ಕಳ ಮೇಲೆ ತೀರಿಸಿಕೊಳ್ಳುವುದು ನ್ಯಾಯವೇ? ಅಂಥ ಮನಃಸ್ಥಿತಿಗಳಿಗೆ ಧಿಕ್ಕಾರ ಹೇಳಬೇಕು. ಹೊಸ ಅಂಗಡಿ ಮಾಲೀಕರನ್ನು ನನ್ನ ತಂದೆ ಮಾತನಾಡಿಸಿಕೊಂಡು ಬರಲು ಹೋಗಿ ಅವರನ್ನು ನೇರ ಮಾತನಾಡಿಸದೆ ಹಾಗೆ ಕೈ ಮುಗಿದು ಬಂದು ಮನೆಯಲ್ಲಿ ಕಣ್ಣೀರಿಟ್ಟ ದಿನದ ನೆನಪು ಇಂದಿಗೂ ಹಸಿಯಾಗಿದೆ.

“ಪುತ್ರ ಶೋಕ ನಿರಂತರ ಎಂಬ ಮಾತು ಎಷ್ಟು ಸತ್ಯ ಮಗನೇ ಸುರೇಶ. ನಿನ್ನ ನೆನಪಾಗುತ್ತಿದೆ. ನಿನ್ನನ್ನು ನಾನೆ ಸಂಸ್ಕಾರ ಮಾಡಿದೆ. ಆಗಲೇ ಎಷ್ಟು ಉದ್ದ ಇದ್ದೆ ಎಷ್ಟು ಕಲರ್ ಇದ್ದೆ. ಮಗನೇ ಮಾತು ಬರೋದಕ್ಕೂ ಮೊದಲೆ ಬೇಜಾರು ಮಾಡ್ಕೊಂಡು ಬಿಟ್ಟು ಹೊರಟೆ” ಎಂದು ನೇರ ಅವನಲ್ಲಿಯೇ ಮಾತನಾಡುತ್ತಿದ್ದರು. ಆಗಂತೂ ಮನೆಯವರೆಲ್ಲಾ ಅತ್ತಿದ್ದೆವು……. ನನಗಿಂತ ಒಂದು ವರ್ಷಕ್ಕೆ ದೊಡ್ಡವನು ‘ಸುರೇಶ’ನೆಂಬ ಅವನ ಹೆಸರನ್ನು ಅಳಿಸಬಾರದು ಎನ್ನುವ ಕಾರಣಕ್ಕೆ ‘ವೀಣಾ’ ಎಂಬ ನನ್ನ ಹೆಸರನ್ನು ಹಾಗೆ ಉಳಿಸಿ ‘ಸುಮಾ’ ಎಂದು ಕರೆದದ್ದು ಎಂಬುದನ್ನು ಆಗಾಗ ಹೇಳುತ್ತಿದ್ದರು. ಅವನಿಗೆ ಬನ್ ಎಂದರೆ ಬಹಳ ಇಷ್ಟವಿತ್ತಂತೆ ಹಾಗಾಗಿ ನನ್ನ ತಂದೆ ಬನ್‌ಗಳನ್ನು ಯಾವಾಗಲು ತರುತ್ತಿದ್ದರು ಅದರಲ್ಲಿ ಒಂದನ್ನು ತೆಗೆದು ಮನೆಯ ಹೊರಗೆ ಮಲ್ಲಿಗೆ ಬಳ್ಳಿ ಇದ್ದ ಕಿಟಕಿಯ ಮೇಲೆ ಇರಿಸುತ್ತಿದ್ದರು. ಈಗಲೂ ಅವನ ಹೆಸರಲ್ಲಿ ಬನ್ ತರುವುದಿದೆ. ಇಷ್ಟಕ್ಕೂ ಆತ ತೀರಿದ್ದು ಡಿಫ್ತೀರಿಯಾ ಅನ್ನುವ ಕಾಯಿಲೆಯಿಂದ. ನೊರೆಹಾಲು ಕುಡಿಸಿ ಹಾಗಾಯಿತು ಎನ್ನುತ್ತಾರೆ. ಹಿರಿಯರು ಮಮ್ಸ್ ಆಗಿದೆ ಎಂದು ಗಂಧ ಹಚ್ಚುವುದು ಚಿನ್ನ ಹಾಕುವುದೆಲ್ಲಾ ಮಾಡಿದ್ದರಂತೆ.

ಆ ಘಟನೆ ಆಗಿ ಸ್ವಲ್ಪ ದಿನಗಳಲ್ಲಿ ಅಂಗಡಿ ಮಾಲೀಕರ ಎರಡನೆ ಮಗನನ್ನು ಮುಂದೆ ಕಿರಿದಾದ ಗೌಳಿ ಬೀದಿಗೆ ಸೇರುವ ಕಿರು ರಸ್ತೆಯಲ್ಲಿ ಹಾಕಿ ಸ್ಟಿಕ್‌ನಿಂದ ಕೊಲೆ ಮಾಡಿ ಹೋಗಿದ್ದ ಸುದ್ದಿ ಬಹಳ ಭಯ ತರಿಸಿತ್ತು. ಸಂಜೆ ಆಗುತ್ತಲೆ ಮಕ್ಕಳನ್ನು ಹೊರಗೆ ಕಳುಹಿಸಲು ಎಲ್ಲರೂ ಹೆದರುತ್ತಿದ್ದರು. ಹಿರಿಯರ ಮೇಲಿನ ಅಸಮಾಧಾನವನ್ನು ಶಾಲೆಗೆ ಹೋಗುವ ಮಕ್ಕಳ ಮೇಲೆ ತೀರಿಸಿಕೊಳ್ಳುವುದು ನ್ಯಾಯವೇ? ಅಂಥ ಮನಃಸ್ಥಿತಿಗಳಿಗೆ ಧಿಕ್ಕಾರ ಹೇಳಬೇಕು.

ಈಗ ನೆನಪಿಸಿಕೊಂಡರೆ ದುಃಖವಾಗುತ್ತದೆ. ನೆನಪಾದಾಗಲೆಲ್ಲಾ ಅಣ್ಣಾ… ಎಲ್ಲಿದ್ದರೂ ಆಶೀರ್ವಾದ ಮಾಡು ಎಂದು ಹೇಳಿ ಮನಸ್ಸಿನಲ್ಲಿಯೇ ನಮಸ್ಕಾರ ಮಾಡುವುದಿದೆ. ಆದರೆ ಆ ಅಣ್ಣನ ಜವಾಬ್ದಾರಿಯನ್ನು ನನ್ನ ದೊಡ್ಡ ತಮ್ಮ ರಘು ನಿಭಾಯಿಸುತ್ತಿದ್ದಾನೆ. ಅವನಿಗೆ ಅವನ ಕುಟುಂಬಕ್ಕೆ ಉತ್ತರೋತ್ತರ ಯಶಸ್ಸು ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ.

ಎಷ್ಟೇ ದುಃಖವಾದರೂ ವಾಸ್ತವಕ್ಕೆ ಮರಳಲೇ ಬೇಕಲ್ಲ! ಫ್ಯಾಷನ್ ಡಿಸೈನರ್ಸ್ ಬೊಟಿಕ್ ಎಲ್ಲಾ ಈಗಿನದ್ದು ಆಗೆಲ್ಲಾ ಲೇಡಿಸ್ ಜಂಟ್ಸ್ ಟೈಲರ್ ಎಲ್ಲಾ ಒಂದೇ. ರೀಟಾ ಟೈಲರ್ ನಮ್ಮ ಆಗಿನ ಫ್ಯಾಷನ್ ಡಿಸೈನರ್. ನನಗೆ ಮೊದಲು ಚೂಡಿದಾರ್ ಹೊಲೆದು ಹಾಕಿಸಿದವರು ಅವರೆ. ಅವರ ಮಗಳು ರೀನಾ ನನ್ನ ಸಹಪಾಠಿ. ಈಗ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ಟೀಚರ್ ಎಂದು ಕೇಳಿದೆ. ಬೆಳಗ್ಗೆ ಹಾಲಿಗೆ ಬಬಿತಾ ಸ್ಟೋರ್‌ಗೆ ಹೋದರೆ ಅವಳೂ ಅಲ್ಲಿ ಬರುತ್ತಿದ್ದಳು. ಅವಳು ಹಾಲಿನ ಜೊತೆಗೆ ರವೆಯನ್ನು ತೆಗೆದುಕೊಳ್ಳುತ್ತಿದ್ದಳು. ದಿನಾ ಉಪ್ಪಿಟ್ಟು ನಮ್ಮನೇಲಿ ಅನ್ನುವ ಅಳಲು ಅವಳದ್ದು. ನಂತರದ ದಿನಗಳಲ್ಲಿ ಹಾಲು ತರುವ ಕೆಲಸ ತಪ್ಪಿತು. ನಮ್ಮ ಮನೆ ಹತ್ತಿರವೆ ಇದ್ದ ಹುಸೇನ್ ಮತ್ತು ಷರೀಫ್ ಎಂಬಿಬ್ಬರು ಹಾಲು ತರುವ ಕೆಲಸ ವಹಿಸಿಕೊಂಡರು. ಆಗ ಅರ್ಧ ಲೀಟರ್ ಹಾಲಿಗೆ ಎರಡು ರೂಪಾಯಿ ಇಪ್ಪತ್ತೈದು ಪೈಸೆ ಅಷ್ಟೆ. “ಎರಡು ಕಾಲು! ಎರಡು ಕಾಲು!” ಎನ್ನುತ್ತಾ ಬರುತ್ತಿದ್ದರು. ಅವರು ಬರುವ ವೇಳೆಗೆ ಚಿಲ್ಲರೆ ಹೊಂದಿಸಿ ಇಡಬೇಕಿತ್ತು. ತಿಂಗಳಿಗೊಮ್ಮೆ ಅವರಿಗೆ ಹಾಲು ತಂದಿದ್ದಕ್ಕೆ ಇಷ್ಟು ಹಣ ಎಂದು ಕೊಡಬೇಕಿತ್ತು. ತಿಂಗಳಲ್ಲಿ ಕನಿಷ್ಟ ನಾಲ್ಕು ಬಾರಿಯಾದರೂ ಹಾಲು ಹಾಕದೆ ಖಾಲಿ ಕಾಫಿ ಕುಡಿಸುತ್ತಿದ್ದರು. ಅವರ ತಂದೆಗೆ ಮದ್ಯ ಸೇವನೆಯ ಚಟವಿತ್ತು. ಅವರು ಹಾಲಿನ ದುಡ್ಡನ್ನು ತೆಗೆದುಕೊಂಡುಬಿಡುತ್ತಿದ್ದರಂತೆ. ತಿಂಗಳಿಗೊಮ್ಮೆ ಸಂಬಳ ಕೊಡುವಾಗ ಹಾಲು ಹಾಕದೆ ಇದ್ದ ದಿನದ ಹಣವನ್ನು ಕಳೆದುಕೊಡಹೋದರೆ ಬೇಡ ತೊಂದರೆ ಆಗುತ್ತದೆ ಎಂದು ಗೋಗರೆಯುತ್ತಿದ್ದರು.

ಅವರಿಗೆ ಆಯೆಷ ಎಂಬ ಪುಟ್ಟ ತಂಗಿ ಇದ್ದಳು. ಅವಳಿಗೆ ಒಬ್ಬ ತಮ್ಮ ಹುಟ್ಟಿದ. ಆ ಮಗುವಿಗೆ ಅತಿಸಾರ ಶುರುವಾದಾಗೊಮ್ಮೆ ನಮ್ಮನೆಗೆ ಬಂದು “ನಮ್ಮಮ್ಮಂದು ಪಾಪುಗೆ ಸೀಬೆ ಚಿಗುರು ಬೇಕಂತೆ” ಎಂದು ಕೇಳಿದಾಗ ಮನೆಯವರೆಲ್ಲಾ ನಕ್ಕಿದ್ದೆವು. ನಾನು ಬಿ.ಎ. ತರಗತಿಗೆ ಬರುವಷ್ಟರಲ್ಲಿ ಹುಸೇನ್‌ಗೆ ಮದುವೆಯಾಗಿತ್ತು. ಷರೀಫನ ಮದುವೆ ಕೂಡ ನಿಶ್ಚಯವಾಗಿತ್ತು. ಇನ್ನೆರಡು ದಿನಗಳಲ್ಲಿ ದಿಬ್ಬಣ ಹೊರಡಬೇಕು ಎಂದಾಗ ಷರೀಫ ತುಂಬಾ ವಯೊಲೆಂಟ್ ಆಗಿ ವರ್ತಿಸತೊಡಗಿದ್ದು ಸುತ್ತ ಮುತ್ತಲಿನವರಿಗೆ ತಿಳಿಯಿತು. ಅವನನ್ನು ಮನೆ ಮುಂದಿನ ಕೊಠಡಿಯಲ್ಲಿ ಕೂಡಿಹಾಕಿ ಬೀಗ ಹಾಕಿದ್ದರೂ ಕಿಟಕಿಗಳನ್ನು ತೆಗೆದು ಮುರಿದು ರಸ್ತೆಯಲ್ಲಿ ಹೋಗುವವರನ್ನು ಮಾತನಾಡಿಸುವುದು, ಕೆಲವೊಮ್ಮೆ ಅಸಂಬದ್ಧವಾಗಿ ಮಾತನಾಡುತ್ತಿದ್ದ. ಹಾಗಾಗಿ ಅವರ ಮನೆ ಮುಂದೆ ಕಾಲೇಜಿಗೆ ಹೋಗಲು ಭಯವಾಗುತ್ತಿತ್ತು. ಅವನ ಮನೆಯವರು ವಿಷಯವನ್ನು ಹುಡುಗಿ ಮನೆಯವರಿಗೆ ತಿಳಿಸಿ ಮದುವೆ ನಿಲ್ಲಿಸಿದರು. ಷರೀಫ ಕಡೆ ಕಡೆಗೆ ಮನೆಯವರು ಕೊಟ್ಟ ಊಟವನ್ನು ನಿರಾಕರಿಸುತ್ತಿದ್ದ. ಅಕ್ಕ ಪಕ್ಕದವರು ಕೊಟ್ಟರೆ ತಿನ್ನುತ್ತಿದ್ದ. ನಮ್ಮ ತಂದೆ ಅವನನ್ನು ಮಾತನಾಡಿಸಿ ಹೀಗೆಲ್ಲಾ ಮಾಡಬೇಡ ನಿನಗೇನಾಗುತ್ತೆ ಹೇಳು, ಎಂದಾಗ ಉತ್ತರಿಸಲು ತಿಳಿಯದೆ ಅವನು ನಿಮ್ಮ ಮನೆಯಿಂದ ಸ್ವೀಟ್ ತಂದುಕೊಡಿ ಎಂದಿದ್ದನಂತೆ. ವಾರದವರೆಗೂ ಅಲ್ಲಿದ್ದ ನಂತರ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಅನ್ನುವ ಸುದ್ದಿ ಅಷ್ಟೇ ಗೊತ್ತು.

ನಮ್ಮ ಮನೆ ಇದ್ದದ್ದು ಎನ್. ಸಿ.ಸಿ ಆಫೀಸ್ ಹತ್ತಿರ. ಈಶಾನ್ಯ ಭಾರತದವರೆ ಹೆಚ್ಚು. ರೀನಾ ಮತ್ತು ನನ್ನನ್ನು ಮಾತನಾಡಿಸುತ್ತಾ ಅವಳ ಹೆಸರು ಕೇಳಿದರೆ ಅವಳು ‘ಮೀನು’ ಎಂದಳು. ಆಫೀಸಿನವರೆಲ್ಲಾ ರೀನಾ ಎನ್ನುವುದು ಬಿಟ್ಟು ‘ಮೀನಾ’ ಎಂದು ಏಕೆ ಕರೆಯುತ್ತಾರೆ ಎಂದು ತಿಳಿಯಲಿಲ್ಲ. ಆನಂತರ ತಿಳಿಯಿತು ಮೈಸೂರು ಭಾಗದಲ್ಲಿ ‘ಎಸರು’ ಎಂದರೆ ‘ಸಾರಿ’ಗೆ ಹೇಳುತ್ತಾರೆ ಎಂದು. ರೀನಾ ಮನೆಯಲ್ಲಿ ಮೀನು ಸಾಂಬಾರು ಮಾಡಿದ್ದ ದಿನ ಆಕೆಯ ಹೆಸರನ್ನು ಕೇಳಿದ್ದಾರೆ. ಅವಳು ತಕ್ಷಣಕ್ಕೆ ಹಾಗೆ ಹೇಳಿದ್ದಾಳೆ ಎಂದು.

ನನ್ನ ತಮ್ಮ ಸೇಂಟ್ ಮೈಕಲ್ಸ್ ಶಾಲೆಗೆ ಹೋಗಲು ಪ್ರಾರಂಭಿಸಿದ ನಂತರ ರೀನಾಳ ತಂದೆ ರೀಟಾ ಟೈಲರ್ ಹತ್ತಿರ ಯೂನಿಫಾರ್ಮ್ ಚಡ್ಡಿಗೆ ಎಷ್ಟು ಬಟ್ಟೆ ಬೇಕು ಕೇಳಿ ಬಾ ಎಂದಿದ್ದರು. ಅವನು ಬಂದು 60 ಮೀಟರ್ ಎಂದಿದ್ದ. ಅದೇ ದೊಡ್ಡ ಸಮಾಚಾರ “ಇವನೂ ಆನೆಗೇ ಚಡ್ಡಿಯಲ್ಲ ಪ್ಯಾಂಟ್ ಹೊಲಿಸ್ತಾನೆ” ಎನ್ನುತ್ತಾ ರೇಗಿಸುತ್ತಿದ್ದರು.

ಮನೆ ಹತ್ತಿರವೇ ತರಕಾರಿ ಏನೂ ಬರುತ್ತಿರಲಿಲ್ಲ. ಪ್ರತಿ ಶುಕ್ರವಾರ ಮಡಿಕೇರಿಯಲ್ಲಿ ಸಂತೆ ಮೈಸೂರು ಹಾಗು ಹಾಸನ ಭಾಗದಿಂದಲೇ ತರಕಾರಿ ಬರಬೇಕಿತ್ತು. ಒಂದೆರಡು ದಿನ ಚೌಕಿಯಲ್ಲಿ ತರಕಾರಿ ಸಿಗುತ್ತಿತ್ತು. ಮಿಕ್ಕಂತೆ ತರಕಾರಿ ಅಂಗಡಿಗಳಿಗೆ ಹೋಗಬೇಕಿತ್ತು. ದುಬಾರಿ ಅನ್ನುವ ಕಾರಣಕ್ಕೆ ಸಂತೆಗೆ ಹೋಗುವುದನ್ನು ಬಹುತೇಕರು ತಪ್ಪಿಸುತ್ತಿರಲಿಲ್ಲ. ಮಕ್ಕಳಿಗೆ ಶುಕ್ರವಾರ ಬಂದರೆ ಬಹಳ ಯಾತನೆ. ಕಾರಣ ಸಂತೆ ದಿನ ಸೊಪ್ಪು ಸಿಗುತ್ತೆ ಆ ದಿನ ಸಾಧ್ಯವಾಗದಿದ್ದರೆ ಶನಿವಾರವಂತೂ ಸೊಪ್ಪಿನ ಸಾಂಬಾರ್ ತಿನ್ನಬೇಕು ಎಂದು. ಮನೆ ಹತ್ತಿರ ಹೂವು ಮಾರುವವರು ಬರುತ್ತಿದ್ದರು. ಅವರ ಹೆಸರು ಸ್ವಾಮಿ. ಅಗಲವಾದ ಹೂವು ತುಂಬಿದ ಬಿದಿರಿನ ತಟ್ಟೆಯನ್ನು ಸುರಿ ಮಳೆಗೆ ಅಡ್ಡಲಾಗಿ ಹಿಡಿದುಕೊಂಡು ಹೂವಿನ ಮೇಲೆ ಹರಡಿಕೊಂಡು ಬಟ್ಟೆಯನ್ನು “ಮಲ್ಲಿಗೇ…. ಮೈಸೂರ್ ಮಲ್ಲಿಗೇ ಹಾಲಲ್ಲಿ ಬೆಳೆದಿರದು ಹಾಲಲ್ಲಿ.” ಎಂದು ಕರೆಯುತ್ತಾ ಬರುವವರು. ಪ್ರತಿ ದಿನ ನನಗೆ ಹೂ ಬೇಕು ಅನ್ನಿಸುತ್ತಿತ್ತು. ಆದರೆ ಬೇಕು ಎಂದು ಕೇಳುತ್ತಿರಲಿಲ್ಲ. “ಹೂ ಬೇಕಾ ತಗೋ” ಎಂದಾಗಲೆ ಹೊರಹೋಗಿ ತೆಗೆದುಕೊಳ್ಳುತ್ತಿದ್ದೆ. ನನ್ನನ್ನು ನೋಡಿದರೆ ಅಳತೆ ಬಿಟ್ಟು ಹೆಚ್ಚಿಗೆ ಕೊಡುತ್ತಿದ್ದರು. ಅದನ್ನು ನೋಡಿದ ಪಕ್ಕದವರು “ನಾವು ದಿನಾ ತಗೊತಿವಿ ನಮಗೆ ಎಕ್ಸ್ಟ್ರ ಕೊಡಲ್ಲ” ಎಂದು ಹುಸಿ ತಕರಾರು ತೆಗೆಯುತ್ತಿದ್ದರು. ನಾನು ಮದುವೆಯಾಗಿ ಬಂದು ಎಷ್ಟೋ ದಿನಗಳ ನಂತರ ತಿಳಿಯಿತು ಸ್ವಾಮಿಯವರಿಗೆ ಗ್ಯಾಂಗರಿನ್ ಆಗಿತ್ತು ಕಾಲು ಕತ್ತರಿಸಿದ್ದರು, ನಂತರ ತೀರಿಕೊಂಡರು ಎಂದು. ಇನ್ನಷ್ಟು ನೆನಪುಗಳೊಂದಿಗೆ ಮುಂದಿನ ವಾರ ಭೇಟಿಯಾಗುವೆ.