ಮತ್ತೆ ದೀಪಾವಳಿ ಬಂದಿದೆ

ಒಂದು ದೀಪದ ಕತೆ ಹೇಳಲೆಂದು
ನಾನು
ಕೇಳಲೆಂದು ನೀನು
ದೀಪ ಉರಿಸುತ್ತ ಕೂತಿದ್ದೇವೆ
ದೀಪ ಬೆಳಗುತ್ತಿದೆ ಎಂದು
ಎಲ್ಲರೂ ನಂಬುವ ಹಾಗೆ ನಾವೂ ನಂಬಿದ್ದೇವೆ
ಕಣ್ಣೆದುರೇ ದೀಪವಿದೆ
ಅಲ್ಲೊಂದು ಸತ್ಯವಿದೆ ಅದು ಸ್ಪುಟವಾಗಿದೆ
ದೀಪದಡಿಯ ಕತ್ತಲೆಯಂತೆ

ಕಂಡೂ ಕಾಣದಂತಿರುವ ಎವೆಯಂಚಿನ
ತೇವ
ಜೀವ ಬಾಯಿ ಬಿಟ್ಟು ಹೋದ ಹಾಗಿರುವ
ಭಾವ
ಒಳಗೆಲ್ಲೊ ಬಚ್ಚಿಟ್ಟುಕೊಂಡಿರುವ ಕುದಿ
ಅಮಾಯಕ ಎದೆಯ ಒತ್ತುವ ತಿದಿ
ಒಂದು ನೋಟ ಯಾಮಾರಿಸುವ ಹವಣಿಕೆ

ನಾವಿಬ್ಬರೂ ಅದೆಷ್ಟು ಪರಸ್ಪರರು
ಗೊತ್ತಿದ್ದೂ ಅಮಾಯಕರಂತೆ ನಟಿಸುತ್ತೇವೆ
ಈ ದೀಪ ದೀಪದ ಹುಳುವಿನ ಬಗ್ಗೆ
ನಮಗಿಂತ ಚೆನ್ನಾಗಿ ಇನ್ನಾರಿಗೆ ಗೊತ್ತು

ಒಂದು ಊಫ್ ಗೆ ಹೊಯ್ದಾಡಿ
ನಿನ್ನ ಉಸಿರಿಗೆ ಸಾವರಿಸಿಕೊಂಡು
ಮತ್ತೆ ಮಿಣುಕು ಜೀವ

ಈಗ ಹೇಳು
ನಕ್ಷತ್ರಗಳು ಮಿನುಗುತ್ತವೆಂದು
ಯಾರು ಹೇಳಿದರು

ಉರಿವ ಹೃದಯವನ್ನು
ದೀಪವೆಂದು ಅಪವ್ಯಾಖ್ಯಾನಿಸಬಾರದು
ಪ್ರಿಯ ಸಖಿ
ಯಾರ ಸಂಕಟವೂ ಹೀಗೆ ಸಡಗರವಾಗಬಾರದೆಂದು
ಪ್ರತಿ ದೀಪಾವಳಿಗೂ ಹಲಬುತ್ತೇನೆ

ಮತ್ತೆ ದೀಪಾವಳಿ ಬಂದಿದೆ
ಮತ್ತೆ ಅದೆ ಕತೆ
ಕೇಳಲು ನೀನಿಲ್ಲ
ನಿನ್ನ ದೀಪಾವಳಿಗೆ ಶುಭಾಶಯಗಳು