ನಾಟಕದ ಪ್ರಕ್ರಿಯೆಯಲ್ಲಿ ನಾಟಕಕಾರ, ನಿರ್ದೇಶಕ ಮುಂತಾದವರು ನಾಟಕವನ್ನು ಅವರವರ ದೃಷ್ಠಿಕೋನಗಳಲ್ಲಿ ಮಕ್ಕಳ ಮೂಲಕ ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದರೆ, ಒಮ್ಮೊಮ್ಮೆ ಮಕ್ಕಳು ಅದನ್ನು ಮತ್ತೊಂದು ನೆಲೆಯಲ್ಲಿ ಕಾಣಿಸಿಬಿಡುತ್ತಾರೆ. ನಾಟಕವು ಮಕ್ಕಳನ್ನು ಒಳಗೊಳ್ಳುವ ಪ್ರಕ್ರಿಯೆಯು ಅವರ ಮನಸುಗಳಲ್ಲಿ ಕತೆಗಳ ಬೀಜಗಳನ್ನು ಬಿತ್ತಿ ಅವರ ಕಲ್ಪನೆಗಳ ಕಾವಿನಲ್ಲಿ ಮೊಳೆಸಿ, ಬೆಳೆಸುತ್ತಾ ನಾಟಕವು ಅವರ ದೇಹ – ಧ್ವನಿಗಳನ್ನು ವ್ಯಾಪಿಸಿ ಆಕಾರ ಪಡೆದು ಅರಳಿಕೊಂಡತೆ ಆಗಬೇಕು. ಇಂತಲ್ಲಿ ಒಂದು ರೀತಿಯ ಮಕ್ಕಳ ಸಮಷ್ಠಿ ಪ್ರಜ್ಞೆಯ ಪ್ರತಿಕ್ರಿಯೆಯು ಅಗೋಚರವಾಗಿ ಇರುವುದರಿಂದ ನಾಟಕದ ಆಯಾಮವೇ ಬದಲಾಗಿರುತ್ತದೆ.
ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ

ಪ್ರಿಯ ಭೂಮಿ,

ಇಂದು ನಿನಗೆ ನನ್ನ ಮತ್ತೊಂದು ಅನುಭವ ಕಥನವನ್ನು ಹೇಳಿಬಿಡುತ್ತೇನೆ.

ಕೋಲಾರದ ಬಳಿಯಲ್ಲಿ ಅಂತರಗಂಗೆ ಎಂಬ ದೊಡ್ಡ ಬೆಟ್ಟವೊಂದಿದೆ. ಬಂಡೆಗಲ್ಲುಗಳ ದೊಡ್ಡ ಪರ್ವತಗಳ ಸಾಲು. ಈ ಪರ್ವತವನ್ನು ಏರಿ ಹೋದಂತೆ ಸುಮಾರು ಏಳೆಂಟು ಹಳ್ಳಿಗಳು ಮೇಲೆ ನೆಲೆಸಿರುವುದನ್ನು ನಾವು ಕಾಣಬಹುದು. ಈ ಹಳ್ಳಿಗಳಲ್ಲಿ ಒಂದು ತೇರಹಳ್ಳಿ. ಬೆಟ್ಟದ ಮೇಲಿನ ಈ ಹಳ್ಳಿಯಲ್ಲಿ ‘ಆದಿಮ’ ಎನ್ನುವ ಸಾಂಸ್ಕೃತಿಕ ಸಂಸ್ಥೆಯಿದೆ. ಅವಕಾಶ ವಂಚಿತ ತಳ ಸಮುದಾಯಗಳ ಮಕ್ಕಳ ವಿಕಾಸದ ಹಾದಿಯನ್ನು ಕಂಡುಕೊಳ್ಳುವಲ್ಲಿ ‘ಮಕ್ಕಳ ರಂಗಭೂಮಿ’ಯನ್ನು ತನ್ನ ಮುಖ್ಯ ಭೂಮಿಕೆಯನ್ನಾಗಿರಿಸಿಕೊಂಡು ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

(ಕೋಟಿಗಾನಹಳ್ಳಿ ರಾಮಯ್ಯ)

ಈ ಸಂಸ್ಥೆಯ ರುವಾರಿ ಕೋಟಿಗಾನಹಳ್ಳಿ ರಾಮಯ್ಯನವರು. ಬ್ಯಾಂಕ್ ಉದ್ಯೋಗವನ್ನು ತ್ಯಜಿಸಿ ದಮನಿತ ಸಮುದಾಯಗಳ ದನಿಯಾಗಿ ಹಾಡುಗಳನ್ನು ಬರೆಯುತ್ತಾ, ನಾಟಕಗಳನ್ನು ಆಡಿಸುತ್ತಾ, ಚಳುವಳಿ ಹೋರಾಟಗಳಲ್ಲಿ ತಮ್ಮನ್ನು ತಾವು ಪರಿಪೂರ್ಣವಾಗಿ ತೊಡಗಿಸಿಕೊಂಡವರು. ತನ್ನ ಎದೆಗೂಡಲ್ಲಿ ಸಾವಿರಾರು ಕಥೆಗಳ ಕಣಜಗಳನ್ನು ಹೊತ್ತು ಯುವ ಸಮುದಾಯಗಳಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿ ಕನಸ ಬೀಜಗಳ ಬಿತ್ತುತ್ತಾ ಊರೂರು ಅಲೆದವರು. ನನ್ನನ್ನು ರೂಪಿಸುತ್ತಿರುವ ಹಲವು ಗುರುಗಳಲ್ಲಿ ರಾಮಣ್ಣ ಕೂಡ ಒಬ್ಬರು. ಮಧ್ಯಮ ವರ್ಗದ ಸೂಕ್ಷ್ಮತೆಗಳಿಗಷ್ಟೆ ಮಿತಿಯಾಗಿದ್ದ ನನ್ನನ್ನು ದಲಿತರ, ದಮನಿತರ, ಶೋಷಿತರ ನೆಲೆಗಳಿಗೆ ಕೊಂಡೊಯ್ದು ದಾರುಣ ಸ್ಥಿತಿಗಳ ದರ್ಶನ ಮಾಡಿಸಿದವರು. ಮಾನವೀಯ ಅಂತಃಕರಣ, ತಾಯ್ತನಗಳ ಅರಿವು ಕೊಟ್ಟವರು. ಕಥೆಗಾರ, ನಾಟಕಕಾರ, ಚಿಂತಕ, ಶಿಕ್ಷಣತಜ್ಞ, ಲೇಖಕ, ಹುಟ್ಟು ಹೋರಾಟಗಾರ, ಎಲ್ಲವೂ ಆಗಿರುವ ರಾಮಣ್ಣ ಸಂತನಂತೆ ಬೆಟ್ಟದ ಮೇಲೆ ಮಕ್ಕಳೊಂದಿಗೆ ಇದ್ದು ಬಿಟ್ಟವರು. ಬೆಟ್ಟದ ಮೇಲಿನ ಮರದ, ಇವರ ನೆರಳಲ್ಲಿ ತಂಗುದಾಣವೆಂಬಂತೆ ಹಲವು ಸೃಜನಶೀಲ ಮಕ್ಕಳು, ಹುಡುಗರು, ಹುಡುಗಿಯರು, ಗೂಡು ಕಟ್ಟಿಕೊಳ್ಳಲು ಅನುವು ಮಾಡಿದವರು. ರೆಕ್ಕೆ ಬಲಿತು ಹಾರಿದಾಗಲೂ ತಾಯಿಯಂತೆ ಚಡಪಡಿಸುತ್ತಲೇ ಹರಸಿ ಕಳಿಸಿದವರು. ಹೀಗೆ ಮುಟ್ಟಿದರೆ ಮಿಡಿಯುತ್ತಾ ಬಿಚ್ಚಿಕೊಳ್ಳುವ ಚಿತ್ರ ನಮ್ಮ ರಾಮಣ್ಣನದು.

2005-06ರ ಈ ಸಮಯದಲ್ಲಿ ಆದಿಮ ತನ್ನ ನೆರಿಕೆ ಗರಿಕೆ ಗೂಡುಗಳಿಂದ ವಿಸ್ತರಿಸಿಕೊಳ್ಳುತ್ತಾ ಒಂದು ದೊಡ್ಡ ಆವರಣವಾಗಿ ಬೆಳೆದಿತ್ತು. ಗುಡ್ಡದ ಏರು ತಗ್ಗುಗಳನ್ನು ಆಶ್ರಯಿಸಿದ ಬಯಲು ವೇದಿಕೆ, ಪ್ರೇಕ್ಷಾಂಗಣ, ತಾಲೀಮಿನ ಒಳಾಂಗಣ, ಪುಸ್ತಕಾಲಯ, ಹುಲ್ಲಿನ ಮಾಡಿನ ವಸತಿ ಕುಟೀರಗಳು ಎಲ್ಲವೂ ನೆರೆತು ಆದಿಮ ಬೆಟ್ಟದ ಮೇಲಿನ ಸಾಂಸ್ಕೃತಿಕ ಹಾಡಿಯಂತೆ ಕಾಣಿಸುತ್ತಿತ್ತು. ಹಾಡುಗಾರರ ತಂಡಗಳು, ನಾಟಕ ತಂಡಗಳು, ಸಿನೆಮಾ, ಡಾಕ್ಯೂಮೆಂಟರಿಗೆ ಸಂಬಂಧಿಸಿದ ಕೆಲಸಗಳು, ಅಲ್ಲಿಗೆ ಬರುವ ಬರಹಗಾರರು, ಚಿಂತಕರೊಂದಿಗಿನ ಮಾತುಕತೆ, ಮುಂತಾಗಿ ರಾಮಣ್ಣನ ಕನಸುಗಳೆಲ್ಲ ಕ್ರಿಯೆಯಾಗುವ ಚಡಪಡಿಕೆಯಲ್ಲಿ ಆದಿಮದ ಚಟುವಟಿಕೆಗಳೆಲ್ಲಾ ಉತ್ತುಂಗದಲ್ಲಿತ್ತು. ಪ್ರತಿ ತಿಂಗಳ ‘ಹುಣ್ಣಿಮೆ ಹಾಡು’ ಕಾರ್ಯಕ್ರಮ ಸಮಾನ ಮನಸ್ಕರೆಲ್ಲರೂ ಕಲೆತು ನಾಟಕ, ಸಂಗೀತ, ವಿಚಾರಗೋಷ್ಟಿ, ಮಾತುಕತೆ, ಸಹಭೋಜನ, ಎಲ್ಲವೂ ತಿಂಗಳ ಬೆಳಕಲ್ಲಿ ಬೆಟ್ಟದ ಮೇಲೆ ನಡೆಯುವ ಒಂದು ದೊಡ್ಡ ಆಚರಣೆಯಾಗಿ ರಾಜ್ಯದ ಹಾಗೂ ದೇಶದ ಮುಖ್ಯ ಚಿಂತಕರ ಗಮನ ಸೆಳೆದಿತ್ತು. ಒಟ್ಟಾರೆಯಾಗಿ ಆದಿಮ ಶೋಷಿತ ಸಮುದಾಯಗಳ ಆತ್ಮವಿಶ್ವಾಸದ ರೂಪಕದಂತೆ ಬೆಳೆಯುತ್ತಿತ್ತು.

ಈ ಹಂತದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ. ಸುತ್ತ ಮುತ್ತಲಿನ ಗ್ರಾಮಗಳ, ದೂರದಿಂದಲೂ ಬಂದ ಊರು-ಕೇರಿಯ ಗಂಡು ಹೆಣ್ಣು ಮಕ್ಕಳೆಲ್ಲಾ ಅಲ್ಲಿ ಸೇರಿದ್ದರು. ಸುಮಾರು ನೂರೈವತ್ತು ಮಕ್ಕಳಿದ್ದಿರಬಹುದು. ಅವರಿಗೆಲ್ಲಾ ಅಲ್ಲೇ ಊಟ ವಸತಿ. ರಾಮಣ್ಣನ ಕಾಳಜಿಯಿಂದ ಮಕ್ಕಳಿಗೆ ಸೊಳ್ಳೆ ಕಚ್ಚಬಾರದೆಂದು ನಲವತ್ತು ಐವತ್ತು ಮಕ್ಕಳಿಗಾಗುವಂತೆ ದೊಡ್ಡ ದೊಡ್ಡ ಸೊಳ್ಳೆ ಪರದೆಗಳನ್ನು ಹೊಲೆಸಿದ್ದರು. ಒಂದೇ ಸೊಳ್ಳೆ ಪರದೆಯಡಿಯಲ್ಲಿ ಅಷ್ಟು ಮಕ್ಕಳು ಮಲಗಿದ ಚಿತ್ರ ನನ್ನ ಕಣ್ಣಿನಲ್ಲಿನ್ನು ಹಾಗೆಯೇ ಇದೆ. ಇದೆಲ್ಲವೂ ತಾನಾಗೇ ಬರೆಸಿಕೊಳ್ಳುತ್ತಿದೆ. ನಾನು ಬರೆಯುತ್ತಿದ್ದೇನೆ.

ಈ ಬೇಸಿಗೆ ಶಿಬಿರದಲ್ಲಿ ನಾನು ಮಕ್ಕಳಿಗೆ ಒಂದು ನಾಟಕ ಮಾಡಿಸಬೇಕಿತ್ತು. ನಾನು ರಾಮಣ್ಣನೇ ಬರೆದ ‘ಹಕ್ಕಿ ಹಾಡು’ ನಾಟಕವನ್ನು ಆಯ್ದುಕೊಂಡಿದ್ದೆ. ಇದು ಕನ್ನಯ್ಯಲಾಲ್‌ರವರ ಪ್ರಸಿದ್ಧ ನಾಟಕ ‘ಫೆಬೆತ್’ ಕಥೆಯಾಧರಿಸಿದ್ದು. ಪ್ರತಿ ತಂಡದಲ್ಲೂ ನಾಲ್ಕರಿಂದ ಒಂಬತ್ತನೇ ತರಗತಿಯವರೆಗಿನ ಸುಮಾರು ನಲವತ್ತಕ್ಕೂ ಹೆಚ್ಚು ಮಕ್ಕಳಿದ್ದರು. ಪ್ರತಿಯೊಂದು ತಂಡಕ್ಕೂ ಒಂದೊಂದು ಸೋಗೆ ಗರಿಗಳಿಂದ ಮಾಡಿದ ವಿಸ್ತಾರವಾದ ತಾಲೀಮು ಸ್ಥಳ. ರಾಮಕೃಷ್ಣ ಬೆಳ್ತೂರು ‘ರತ್ನಪಕ್ಷಿ’, ಮತ್ತು ಶಂಕರಯ್ಯ ಘಂಟಿ ಮತ್ತೊಂದು ನಾಟಕ ಆರಿಸಿಕೊಂಡಿದ್ದರು. ಬೆಟ್ಟದ ತುಂಬೆಲ್ಲ ಹಕ್ಕಿಗಳಂತೆ ಮಕ್ಕಳ ಕಲರವ.

ಶಿಬಿರ ಶುರುವಾಗಿ ನಾಲ್ಕೈದು ದಿನಗಳಾಗಿವೆ ಮಿಕ್ಕೆಲ್ಲಾ ತಂಡಗಳು ಬಹಳ ಶಿಸ್ತಿನಿಂದ ನಾಟಕ ತಯಾರಿ ನಡೆಸುತ್ತಿದ್ದಾರೆ. ಆದರೆ ನನ್ನ ಕುಟೀರದಲ್ಲಿ ಮಾತ್ರ ಮಕ್ಕಳ ಗದ್ದಲ, ಹಾರಾಟ, ಕೂಗಾಟ, ಚೀರಾಟ, ಆಟ, ಆಟ.. ನಾನು ಬೆರಗಿನಿಂದ ಅವರ ಆಟವನ್ನು ನೋಡುತ್ತಾ ಕುಳಿತುಬಿಡುತ್ತಿದ್ದೆ. ನನ್ನ ಮನಸ್ಸನ್ನು ಮಕ್ಕಳೊಂದಿಗೆ ಶೃತಿಗೊಳಿಸಿಕೊಳ್ಳಲಾರದೆ ಚಡಪಡಿಸುತ್ತಿದ್ದೆ. ಬೇಸಿಗೆ ದಿನಗಳಾದ್ದರಿಂದ ಬರ‍್ಮುಡಾ ಚಡ್ಡಿಯ ಮೇಲೊಂದು ಕಸೆ ಅಂಗಿ ಹಾಕಿಕೊಂಡು ನಾಟಕದ ಬಗ್ಗೆ ಯೋಚಿಸುತ್ತಾ ಬಂಡೆ ಕಲ್ಲುಗಳ ಮೇಲೆ ಕುಳಿತೋ, ನಾಟಕವಾಡುವ ಮರದ ಬಳಿ ಅಡ್ಡಾಡುತ್ತಲೋ ಇದ್ದ ನನ್ನನ್ನು ಮಕ್ಕಳೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅಷ್ಟರೊಳಗೆ ಎಲ್ಲರೂ ಕೂಡಿ ‘ಸತೀಶ್’ಗೆ ಮಕ್ಕಳಿಗೆ ನಾಟಕ ಮಾಡಿಸಲು ಬರುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಾಗಿತ್ತು. ಮಕ್ಕಳನ್ನು ಹದ್ದುಬಸ್ತಿಗೆ ತರಲು ಕೆಲವರು ಕೈಯಲ್ಲಿ ಕೋಲು ಹಿಡಿದು ನನ್ನ ಸಹಾಯಕ್ಕೆ ಬಂದರು. ನನಗೆ ತುಂಬಾ ಕಷ್ಟವಾಯಿತು. ನನ್ನ ತಂಡವನ್ನು ನಾನೇ ಸರಿಪಡಿಸಿಕೊಳ್ಳುವುದಾಗಿ ಹೇಳಿ ಕೈ ಮುಗಿದು ಅವರನ್ನು ಕಳಿಸಿಬಿಟ್ಟೆ. ಹಲವು ಮಕ್ಕಳ ನಾಟಕಗಳಲ್ಲಿ ಅಭಿನಯಿಸಿ ಅಭ್ಯಾಸವಿದ್ದ ರಾಮಣ್ಣನ ಮಗಳು ‘ದಿಶಾ’ಳನ್ನು ನನ್ನ ಸಹಾಯಕ್ಕೆ ಕರೆದುಕೊಂಡೆ..

ಮೂರ‍್ನಾಲ್ಕು ದಿನಗಳಿಂದ ಆಡಿ ಕುಣಿದು ಕುಪ್ಪಳಿಸುತ್ತಿದ್ದ ಮಕ್ಕಳ ಶಕ್ತಿಯೆಲ್ಲಾ ಒಂದು ಹದಕ್ಕೆ ಬಂದಿತ್ತು. ನನ್ನ ಮತ್ತು ಮಕ್ಕಳ ವಯಸ್ಸುಗಳ ನಡುವೆ ದಿಶಾ ಇದ್ದುದ್ದರಿಂದ ನನ್ನ ತಾಲೀಮು ಆವರಣದಲ್ಲಿ ಒಂದು ರೀತಿಯ ಸಾಮರಸ್ಯ ಬರಲು ಶುರುವಾಗಿತ್ತು. ಅಷ್ಟರಲ್ಲಿ ನನಗೆ ಆ ಬೆಟ್ಟ ಗುಡ್ಡಗಳು, ರಾಮಣ್ಣನ ಕಾಳಜಿಗಳು, ನಾಟಕದ ಕಥೆ, ಪಾತ್ರಗಳು, ಮತ್ತು ಮಕ್ಕಳು ಆ ಪರಿಸರದಲ್ಲಿ ಹುಟ್ಟಿಸುತ್ತಿದ್ದ ಬೆರಗು ಎಲ್ಲವೂ ಒಂದರೊಳಗೊಂದು ಬೆರೆತು, ನನ್ನ ಮನಸ್ಸು ಮಕ್ಕಳೆಡೆಗೆ ಶೃತಿಗೊಳಿಸಿಕೊಳ್ಳಲು ಸಹಕರಿಸತೊಡಗಿತ್ತು. ಈ ಹಂತದಲ್ಲಿ ಎಲ್ಲ ಮಕ್ಕಳನ್ನು ಕರೆದು ವೃತ್ತದಲ್ಲಿ ಕೂರಿಸಿಕೊಂಡೆ. ಕಣ್ಣು ಮುಚ್ಚಲು ಹೇಳಿದೆ. ಬೆನ್ನು ನೆಟ್ಟಗೆ ಮಾಡಿ ನಿಧಾನವಾಗಿ ಮತ್ತು ಧೀರ್ಘವಾಗಿ ಉಸಿರಾಡಲು ಹೇಳಿದೆ. ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಲು ಹೇಳಿದೆ. ಸ್ವಲ್ಪ ಹೊತ್ತು ಸುಮ್ಮನಾದೆ. ಅವರೆಲ್ಲರೂ ಕಣ್ಣುಮುಚ್ಚಿದ ಕೆಲ ಕ್ಷಣಗಳಲ್ಲಿ ಈವರೆಗೆ ಅವರ ಎದುರಿಗಿದ್ದ ಜಗತ್ತು ಕತ್ತಲಲ್ಲಿ ಕರಗಿತು. ಹಲವರು ಇದ್ದ ಭಾವ ಕಳೆದು ಪ್ರತಿಯೊಬ್ಬರೂ ಏಕಾಂಗಿ ಏನಿಸಿತ್ತು. ಒಬ್ಬೊಬ್ಬರ ಮೌನವು ಉಳಿದವರಿಗೆ ಎಚ್ಚರವಾಗಿ ಕೆಲ ನಿಮಿಷಗಳಲ್ಲಿ ಇಡೀ ಆವರಣ ನಿಶಬ್ಧದಿಂದ ಕೂಡಿತ್ತು. ನಿಧಾನವಾಗಿ ಕಣ್ತೆರೆದು ಎಲ್ಲರಿಗೂ ನನ್ನನ್ನೇ ನೋಡುವಂತೆ ಹೇಳಿದೆ. ಮತ್ತೆ ಗುಜುಗುಜು ಪ್ರಾರಂಭವಾಗುವಷ್ಟರಲ್ಲಿ ಮಕ್ಕಳಿಗೆ ನಾಟಕದ ಕಥೆ ಹೇಳಲು ಶುರುಮಾಡಿದೆ…

ರಾಮಣ್ಣನ ಕಾಳಜಿಯಿಂದ ಮಕ್ಕಳಿಗೆ ಸೊಳ್ಳೆ ಕಚ್ಚಬಾರದೆಂದು ನಲವತ್ತು ಐವತ್ತು ಮಕ್ಕಳಿಗಾಗುವಂತೆ ದೊಡ್ಡ ದೊಡ್ಡ ಸೊಳ್ಳೆ ಪರದೆಗಳನ್ನು ಹೊಲೆಸಿದ್ದರು. ಒಂದೇ ಸೊಳ್ಳೆ ಪರದೆಯಡಿಯಲ್ಲಿ ಅಷ್ಟು ಮಕ್ಕಳು ಮಲಗಿದ ಚಿತ್ರ ನನ್ನ ಕಣ್ಣಿನಲ್ಲಿನ್ನು ಹಾಗೆಯೇ ಇದೆ. ಇದೆಲ್ಲವೂ ತಾನಾಗೇ ಬರೆಸಿಕೊಳ್ಳುತ್ತಿದೆ. ನಾನು ಬರೆಯುತ್ತಿದ್ದೇನೆ.

ಒಂದು ದೊಡ್ಡ ಕಾಡಿತ್ತು. ಆ ಕಾಡಲ್ಲಿ ಒಂದು ಹಕ್ಕಿ ಗೂಡು ಕಟ್ಟುವುದಕ್ಕೆ ಮರವನ್ನು ಕೇಳಿತು. ಮರ ಜಾಗ ಕೊಡ್ತು. ಹಕ್ಕಿ ಗೂಡು ಕಟ್ಟೊದಕ್ಕೆ ಕಾಡಿನ ಹಕ್ಕಿಗಳೆಲ್ಲಾ ಸಹಾಯ ಮಾಡಿದವು. ಹಕ್ಕಿ ಗೂಡಲ್ಲಿ ಮೊಟ್ಟೆ ಇಟ್ಟು ಕಾವಿಗೆ ಕೂತಿತ್ತು. ಇದನ್ನೆಲ್ಲಾ ಗಮನಿಸುತ್ತಿದ್ದ ಬೆಕ್ಕೊಂದು ಸನ್ಯಾಸಿ ವೇಷದಲ್ಲಿ ತನ್ನ ಸೈನ್ಯವನ್ನೆಲ್ಲಾ ಕರೆದುಕೊಂಡು ಹಕ್ಕಿ ಗೂಡಿನ ಬಳಿ ಬಂತು. ಹಕ್ಕೆವ್ವ ನಾನು ಈಗಷ್ಟೆ ಉಪವಾಸ ವ್ರತ ಮುಗಿಸಿದ್ದೇನೆ. ಹಸಿವಾಗ್ತಿದೆ. ನಿನ್ನ ಮೊಟ್ಟೆ ಕೊಡು ಅಂತ ಕೇಳ್ತು. ಆಗ ತಾಯಿ ಹಕ್ಕಿ ಉಪಾಯ ಮಾಡಿ ಮೊಟ್ಟೆ ಮರಿ ಆದ ಮೇಲೆ ಕೊಡ್ತಿನಿ ಅಂತು. ಸ್ವಲ್ಪ ದಿನ ಬಿಟ್ಟು ಬೆಕ್ಕು, ಮರಿ ಕೇಳ್ತು. ಆಗ ತಾಯಿ ಹಕ್ಕಿ ಮರಿ ಬೆಳೆದು ದೊಡ್ಡದಾದಾಗ ಕೊಡ್ತಿನಿ, ನಿನಗೂ ಹೊಟ್ಟೆ ತುಂಬತ್ತೆ ಅಂತು. ಸ್ವಲ್ಪ ದಿನ ಕಳೆದು ಮತ್ತೆ ಬೆಕ್ಕುಗಳು ಬಂದಾಗ ತಾಯಿ ಹಕ್ಕಿ ಮರಿಗಳಿಗೆ ಆಹಾರ ತರೊದಕ್ಕೆ ಅಂತ ಹೋಗಿತ್ತು. ಅಲ್ಲೆ ಆಡುತ್ತಿದ್ದ ಮರಿಹಕ್ಕಿಯೊಂದನ್ನು ಬೆಕ್ಕುಗಳು ಹಿಡಿದುಕೊಂಡು ಹೋದವು. ಉಳಿದವು ತಪ್ಪಿಸಿಕೊಂಡವು. ಈ ಬೆಕ್ಕುಗಳು ತನ್ನ ರಾಜ್ಯಕ್ಕೆ ಮರಿಹಕ್ಕಿಯನ್ನು ತಂದು ಚಹರೆಗಳನ್ನೆಲ್ಲಾ ಬದಲಿಸಿ, ಹೆಸರು ಬದಲಿಸಿ, ಆಧುನಿಕ ಸವಲತ್ತುಗಳನ್ನೆಲ್ಲಾ ನೀಡಿ ಆಮಿಷ ತೋರಿ ಬೇಟೆಯಾಡಲು ಕಲಿಸಿತು. ಕೈ ತುಂಬಾ ಉಡುಗೊರೆಗಳನ್ನು ಕೊಟ್ಟು ಉಳಿದ ನಿನ್ನ ಅಕ್ಕ, ತಂಗಿ, ಅಣ್ಣ, ತಮ್ಮಂದಿರನ್ನು ಈ ಉಡುಗೊರೆಗಳ ಆಮಿಷ ತೋರಿಸಿ ಕರೆದುಕೊಂಡು ಬಾ ಎಂದು ಹೇಳಿ ಕಳುಹಿಸಿದವು. ತಾಯಿಹಕ್ಕಿ ಇಲ್ಲದ ಸಮಯ ನೋಡಿ ಮರಿಹಕ್ಕಿ ಹೊಸ ವೇಷದಲ್ಲಿ ಗೂಡಿನ ಬಳಿ ಬಂದು ಎಲ್ಲರಿಗೂ ನೀವು ನನ್ನಂತೆ ಆಗಬಹುದು, ಬನ್ನಿ ನನ್ನ ಜೊತೆಗೆ; ಇದನ್ನೆಲ್ಲ ತೆಗೆದುಕೊಳ್ಳಿ ಎಂದು ಉಡುಗೊರೆಯ ಆಸೆ ತೋರಿಸಿತು. ಆಗ ಉಳಿದ ಹಕ್ಕಿಗಳು ಹೊಸ ವೇಷ, ಉಡುಗೊರೆಗಳ ಆಸೆಯಿಂದ ಗೂಡನ್ನು ತೊರೆದು ಮರಿಹಕ್ಕಿಯ ಜೊತೆಗೆ ಬೆಕ್ಕಿನ ರಾಜ್ಯದೆಡೆಗೆ ಹಾರುತ್ತಿದ್ದವು. ಆಗ ತಾಯಿಹಕ್ಕಿ ಎದುರಾಯಿತು. ತನ್ನ ಸಂಚಿಗೆ ತಾಯಿಹಕ್ಕಿ ಅಡ್ಡಿಪಡಿಸುವಳೆಂದು ತಿಳಿದು ಮರಿಹಕ್ಕಿ ಎಲ್ಲಾ ಹಕ್ಕಿಗಳೊಂದಿಗೆ ಸೇರಿ ತಾಯಿಹಕ್ಕಿಗೆ ಕಲ್ಲಿನಿಂದ ಹೊಡೆದವು. ಗಾಯಗೊಂಡ ತಾಯಿಹಕ್ಕಿ ಅಳುತ್ತಾ ಮರಿಗಳನ್ನು ನೆನೆದು ಜೋಗುಳ ಹಾಡಲು ಶುರುಮಾಡಿತು. ಜೋಗುಳ ಕೇಳಿದ ಎಲ್ಲಾ ಮರಿಗಳು ಏನೋ ಕಳೆದುಕೊಂಡಂತಾಗಿ ತಾಯಿಯ ಬಳಿಗೆ ಮರಳಿದವು. ಮರಿಹಕ್ಕಿ ಮಾತ್ರ ಎಲ್ಲಿ ಹೋಗುವುದೆಂದು ತಿಳಿಯದೆ ಚಡಪಡಿಸುತ್ತಿತ್ತು…

ಹೀಗೆ ಸಾಗಿದ ಕಥೆ ಮಕ್ಕಳಿಗೆ ತುಂಬಾ ಇಷ್ಟವಾಯಿತು. ಕಥೆಯ ಆವರಣದೊಳಗೆ ಇಳಿದ ಮಕ್ಕಳು ಪಾತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಶುರುಮಾಡಿದರು. ಗಂಡು ಮಕ್ಕಳೆಲ್ಲಾ ಬೆಕ್ಕಾದರು. ಹೆಣ್ಣುಮಕ್ಕಳೆಲ್ಲಾ ಗಿಳಿಗಳಾದರು. ಈ ನಾಟಕದ ತುಂಬಾ ಹಾಡುಗಳು. ‘ಇಸ್ಮಾಯಿಲ್ ಗೋನಾಳ್’ ಸಂಯೋಜಿಸಿದ ಸಂಗೀತವನ್ನು ರತ್ನ ಸಕಲೇಶಪುರ, ರಾಜಪ್ಪ ಹಾಡುತ್ತಿದ್ದರು. ಕೆಲವೇ ದಿನಗಳಲ್ಲಿ ಮಕ್ಕಳು ಹಾಡುಗಳನ್ನು ಕಲಿತರು. ಬೆಕ್ಕು ಹಕ್ಕಿಗಳ ಚಲನ ವಲನಗಳನ್ನು, ಹಾರಾಟ ಚೀರಾಟವನ್ನು, ಅನುಕರಿಸಲು ನಾಟಕಕ್ಕೊಂದು ರೂಪ ತಾನಾಗಿಯೇ ಬರತೊಡಗಿತು. ಇಷ್ಟರಲ್ಲಿ ಬೆಟ್ಟದ ಮೇಲಿದ್ದ ಆಲದಮರದ ಮೇಲೆ ಬಿದಿರಿನಿಂದ ಮಾಡಿದ ದೊಡ್ಡ ಗೂಡು, ಮರದ ಮೇಲಿಂದ ಅಂಗಳಕ್ಕೊಂದು ಇಳಿಜಾರು ಇವೆಲ್ಲಾ ಹಕ್ಕಿಗಳ ಆಡುಂಬೊಲವಾದರೆ, ಅಲ್ಲೆ ಪಕ್ಕದಲ್ಲಿದ್ದ ದೊಡ್ಡ ದೊಡ್ಡ ಬಂಡೆಗಳ ನಡುವಿನಿಂದ ಬೆಕ್ಕುಗಳ ಪ್ರವೇಶ. ಹೀಗೆ ಆಡುತ್ತಾಡುತ್ತಾ ಬೆಕ್ಕುಗಳಿಗೆ ಬಾಲ ಮೂಡಿ ಹಕ್ಕಿಗಳಿಗೆ ಕೊಕ್ಕು ರೆಕ್ಕೆ ಬಂದು ಬುದ್ದ ಪೂರ್ಣಿಮೆ ರಾತ್ರಿ ಹುಣ್ಣಿಮೆಯ ಬೆಳಕಲ್ಲಿ ಹಾಡು, ಸಂಗೀತದಲ್ಲಿ ನಲಿದ ಮಕ್ಕಳು ನಾಟಕವಾಡಿದರು. ನಾಟಕ ‘ಆಯಿತು’.

ಮಕ್ಕಳೊಂದಿಗೆ ಬೆರೆತು ನಾಟಕ ಆಗಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಾಗ ಕೆಲವೊಮ್ಮೆ ನನಗೆ ಹೀಗೆ ಅನ್ನಿಸುವುದುಂಟು;

ಜಗತ್ತಿನಲ್ಲಿರುವ ಎಲ್ಲಾ ಮಕ್ಕಳ ಮನಸ್ಸು ಆಯಾ ಕಾಲ, ದೇಶ, ಭಾಷೆ ಮುಂತಾದ ಪರಿಸ್ಥಿತಿಗಳಲ್ಲಿ ವ್ಯಕ್ತವಾಗುತ್ತಿರುತ್ತದೆ. ಇಲ್ಲಿ ಎಲ್ಲಾ ಮಕ್ಕಳ ಮನಸ್ಸುಗಳೂ ಕೂಡ ಹಲವು ಚಿಂತನೆ, ಆಲೋಚನೆ, ಪರಿಕಲ್ಪನೆ, ಐಡಿಯಾಲಜಿ, ಇಸಂ ಮುಂತಾದ ಪೂರ್ವಾಗ್ರಹಗಳಿಂದ ಸೃಷ್ಠಿಯಾಗುತ್ತಿರುವ ಜಾಗತಿಕ ಒತ್ತಡಗಳಿಂದ ಬಿಡುಗಡೆಯನ್ನು ಬಯಸುತ್ತಿರುತ್ತದೆ. ಇದು ಒಂದು ರೀತಿಯಲ್ಲ ಸತ್ಯವನ್ನು ಆಗ್ರಹಿಸಿದಂತೆ; ಅಂದರೆ ಸತ್ಯಾಗ್ರಹ. ದೊಡ್ಡವರು ಮುಗ್ಧತೆ ಎಂದು ಕರೆಯುವ ಮನಸುಗಳಲ್ಲಿ ಅಂತರ್ಗತವಾಗಿರುವ ಚಳುವಳಿ. ಇದು ನಾಟಕವಾಗುವ ಪ್ರಕ್ರಿಯೆಯಲ್ಲಿ ಮಕ್ಕಳು ಸ್ಪಂದಿಸುವ, ಪ್ರತಿಭಟಿಸುವ, ಒತ್ತಾಯಿಸುವ ರೀತಿಯಲ್ಲಿ ವ್ಯಕ್ತವಾಗುತ್ತಿರುತ್ತದೆ. ಇವುಗಳನ್ನು ಗ್ರಹಿಸಿ ಅರ್ಥಮಾಡಿಕೊಳ್ಳುವ ಸೂಕ್ಷ್ಮತೆ ನಮಗಿರಬೇಕಷ್ಟೆ.

(ಸತೀಶ್‌ ತಿಪಟೂರು)

ನಾಟಕದ ಪ್ರಕ್ರಿಯೆಯಲ್ಲಿ ನಾಟಕಕಾರ, ನಿರ್ದೇಶಕ ಮುಂತಾದವರು ನಾಟಕವನ್ನು ಅವರವರ ದೃಷ್ಠಿಕೋನಗಳಲ್ಲಿ ಮಕ್ಕಳ ಮೂಲಕ ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದರೆ, ಒಮ್ಮೊಮ್ಮೆ ಮಕ್ಕಳು ಅದನ್ನು ಮತ್ತೊಂದು ನೆಲೆಯಲ್ಲಿ ಕಾಣಿಸಿಬಿಡುತ್ತಾರೆ. ನಾಟಕವು ಮಕ್ಕಳನ್ನು ಒಳಗೊಳ್ಳುವ ಪ್ರಕ್ರಿಯೆಯು ಅವರ ಮನಸುಗಳಲ್ಲಿ ಕತೆಗಳ ಬೀಜಗಳನ್ನು ಬಿತ್ತಿ ಅವರ ಕಲ್ಪನೆಗಳ ಕಾವಿನಲ್ಲಿ ಮೊಳೆಸಿ, ಬೆಳೆಸುತ್ತಾ ನಾಟಕವು ಅವರ ದೇಹ – ಧ್ವನಿಗಳನ್ನು ವ್ಯಾಪಿಸಿ ಆಕಾರ ಪಡೆದು ಅರಳಿಕೊಂಡತೆ ಆಗಬೇಕು. ಇಂತಲ್ಲಿ ಒಂದು ರೀತಿಯ ಮಕ್ಕಳ ಸಮಷ್ಠಿ ಪ್ರಜ್ಞೆಯ ಪ್ರತಿಕ್ರಿಯೆಯು ಅಗೋಚರವಾಗಿ ಇರುವುದರಿಂದ ನಾಟಕದ ಆಯಾಮವೇ ಬದಲಾಗಿರುತ್ತದೆ ಮತ್ತು ಸತ್ಯದಲ್ಲಿ ಸಾರ್ಥಕವಾಗಿರುತ್ತದೆ. ಇದು ಮಕ್ಕಳಿಂದ ‘ಆದ’ ನಾಟಕವಾಗಿರುತ್ತದೆ.

ರಾಮಣ್ಣನ ‘ಹಕ್ಕಿ ಹಾಡು’ ನಾಟಕದಲ್ಲಿ ಕಥೆಯಿಂದ ಮೊದಲಾಗಿ ಒದಗಿಬಂದ ಎಲ್ಲದರಲ್ಲೂ ನಾನೂ ಒಬ್ಬನಾಗಿ ಸಹಕರಿಸಿದ್ದು ಬಿಟ್ಟರೆ ಹೆಚ್ಚಿನದೇನನ್ನೂ ನಾನು ಮಾಡಲಿಲ್ಲ. ನಾಟಕ ಚೆನ್ನಾಗಿಯೇ ಆಯಿತು.

…ಹೀಗೆ ರಾಮಣ್ಣನ ಆಂತರ್ಯದ ಆದರ್ಶ ಕಾಳಜಿಗಳೆಲ್ಲವೂ ಹರಳುಗಟ್ಟಿ ಅವರ ವ್ಯಕ್ತಿತ್ವದ ಒಂದು ಕಾಲಘಟ್ಟದ ಅಭಿವ್ಯಕ್ತಿ ಎಂಬಂತೆ ‘ಆದಿಮ’ ಅರಳಿಕೊಂಡು ಪ್ರಕಾಶಿಸುತ್ತಿದ್ದ ಸಮಯದಲ್ಲಿ ನಾನು ಅವರೊಂದಿಗೆ ಇದ್ದದ್ದು ನನ್ನ ಭಾಗ್ಯವೆಂದೇ ಹೇಳಬೇಕು. ತಳ ಸಮುದಾಯಗಳ ಆತ್ಮವಿಶ್ವಾಸದ ಅಸ್ಮಿತೆ ಎಂಬಂತೆ ಕಾಣುತ್ತಿದ್ದ ಅಂತರ ಗಂಗೆ ಬೆಟ್ಟದ ಮೇಲಿನ ತೇರ ಹಳ್ಳಿಯ ಆದಿಮದ ಆ ನೆಲ ಹಲವು ವರ್ಷಗಳ ಹಿಂದೆ ಅಲ್ಲಿ ನೆಲೆಸಿದ್ದ ‘ಜಿಂಕೆ ರಾಮಯ್ಯ’ ಎಂಬ ಸಂತರೊಬ್ಬರು ಜೀವಂತ ಸಮಾಧಿಯಾದ ಜಾಗ. ಈ ಕುರಿತು ರಾಮಣ್ಣನ ಗುರುಗಳಾದ ಶ್ರೀರಾಮಯ್ಯ ಮೇಷ್ಟ್ರು ಆ ಬಂಡೆಗಲ್ಲುಗಳ ನಡುವೆ ನಳನಳಿಸುತ್ತಿದ್ದ ಗಿಡಮರ ಕುಟೀರಗಳ ನಡುವೆ ನಿಂತು ಬೀಜಗಳನ್ನು ಚೆಲ್ಲುತ್ತಾ “ಕೆಲವು ಸ್ಥಳಗಳು ಕೆಲವರಿಗಾಗಿ ಕಾಯುತ್ತಾ ಇರುತ್ತವೆ. ಹಾಗೆಯೇ ಜಿಂಕೆ ರಾಮಯ್ಯನ ಈ ನೆಲ ಕೋಟಿಗಾನಹಳ್ಳಿ ರಾಮಯ್ಯನ ಬರುವಿಕೆಗೆ, ಇರುವಿಕೆಗೆ, ಇಷ್ಟು ವರ್ಷಗಳು ಕಾಯುತ್ತಿತ್ತು”. ಎಂದು ಹೇಳಿದ ಮಾತು ನನ್ನೊಳಗೆ ಈಗಲೂ ಕಾಡುತ್ತಲೇ ಇರುತ್ತದೆ.