ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತು ಆಕಾಶವಾಣಿ ಗಾಯಕಿಯಾಗಿ ಭಾವಗೀತೆಯನ್ನು ಪಿ. ಕಾಳಿಂಗರಾವ್ ಅವರ ಜೊತೆಯಲ್ಲಿ ಹಾಡಿ ಪ್ರಚಾರ ನೀಡಿದ್ದು ಮೊದಲಿಗೆ ಲೀಲಾವತಿಯವರೇ. ಭಾವಗೀತೆ ಭಕ್ತಿಗೀತೆ ಕೀರ್ತನೆಗಳು ವಚನಗಳು ಗಜಲ್‌ಗಳು ಜನಪದಗೀತೆಗಳು, ರವೀಂದ್ರ ಸಂಗೀತ ಹೀಗೆ ಬೇರೆ ಭಾಷೆಯ ಇತರ ಪ್ರಾಕಾರಗಳನ್ನೂ ಕಲಿತು ಹಾಡಿರುವುದಲ್ಲದೇ ಮಕ್ಕಳ ಕತೆಗಳು ರಂಗರೂಪಕಗಳು ಎಲ್ಲಾ ರೀತಿಯಲ್ಲಿ ಅವರು ಆಕಾಶವಾಣಿಯಲ್ಲಿ ಕೆಲಸ ನಿರ್ವಹಿಸುತ್ತಲೇ ಮುಂದೆ ಆಕಾಶವಾಣಿಯ ಸಂಗೀತ ಸಂಯೋಜಕಿಯೂ ಆಗುತ್ತಾರೆ.
ಎಚ್. ಆರ್. ಲೀಲಾವತಿ ಆತ್ಮಕಥನ “ಹಾಡಾಗಿ ಹರಿದಾಳೆ” ಕೃತಿಯ ಕುರಿತು ಕೆ.ಎನ್.ಲಾವಣ್ಯ ಪ್ರಭಾ ಬರಹ

ಒಂದು ಪುಸ್ತಕವನ್ನು ಓದುವಾಗ ಅದನ್ನು ಬರೆದ ಬರಹಗಾರರ ಜೊತೆಗೆ ಅಷ್ಟೂ ಹೊತ್ತು ಇರುವ ಅನುಭವವಾಗುವುದು ಖಂಡಿತಾ ಸುಳ್ಳಲ್ಲ.
ಮುನ್ನೂರು ಪುಟಗಳಲ್ಲಿ ತಮ್ಮ ಬದುಕಿನ ಹಾಡು, ಕಲ್ಲು ಮುಳ್ಳು ಬೆಟ್ಟ ಗುಡ್ಡ ಕಣಿವೆ ಕಾಲುವೆ ಕೋಡುಬಂಡೆ ಮಲೆಘಟ್ಟಗಳಲ್ಲಿ ತೊರೆಯಾಗಿ ಝರಿಯಾಗಿ ಚಿಲುಮೆಯಾಗಿ ನದಿಯಾಗಿ ಹರಿದು ಜಲಪಾತದ ಭೋರಗರೆತದ ವೈಭವವನ್ನೂ ದಾಟಿ… ಸ್ವರ ಶೃತಿ ರಾಗ ಲಯಬದ್ಧತೆಯ ಮಹಾ ಸಂಗೀತ ಸಾಗರವಾಗಿರುವ ನನಗಿನ್ನೂ ವಯಸ್ಸು ಇಪ್ಪತ್ತೈದು ಎನ್ನುವ ತೊಂಬತ್ತರ ಹರೆಯದ ಜೀವನ್ಮುಖಿ ಚೈತನ್ಯ ಸಂಗೀತ ಶಾರದೆ ಎಚ್. ಆರ್. ಲೀಲಾವತಿ ಅವರು ಉಪ್ಪಾಗದ ಮುಪ್ಪಿಲ್ಲದ ಸಿಹಿಸಾಗರ. ಅವರೊಂದಿಗಿನ ಸ್ನೇಹ ಒಡನಾಟ ಇರುವ ಎಲ್ಲರದ್ದೂ ಇದೇ ಅನುಭವ.

(ಎಚ್. ಆರ್. ಲೀಲಾವತಿ)

ಹುಟ್ಟೂರು ಮೈಸೂರಾದರೂ ತಂದೆಯವರ ವೃತ್ತಿಯ ಕಾರಣದಿಂದ ಹಲವಾರು ಊರುಗಳಲ್ಲಿದ್ದು ಬಂದ ಲೀಲಾವತಿ ಅವರಿಗೆ ಮೈಸೂರು ಅದರಲ್ಲೂ ಚಾಮುಂಡಿ ಬೆಟ್ಟ ಬಹಳ ಪ್ರಿಯ. ಈಗಲೂ ಅವರ ವಾಸ ಮೈಸೂರು.

ಚಾಮುಂಡಿ ಬೆಟ್ಟದ ಬಳಿಯಿರುವ ಒಂದು ರಸ್ತೆಗೆ “ವೆಂಕಟ ಸುಬ್ಬರಾವ್ ರೋಡ್” ಎಂಬ ಹೆಸರಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ರಾಜ್ಯಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ ವೆಂಕಟ ಸುಬ್ಬರಾವ್ ಲೀಲಾವತಿ ಅವರ ತಾತ. ಇವರ ತಂದೆ ಬಾಪು ರಾಮಣ್ಣ ಸಂಗೀತ ಸಾಹಿತ್ಯದಲ್ಲಿ ಆಸಕ್ತರು ಆರಾಧಕರು. ತಾಯಿ ಜಯಲಕ್ಷ್ಮಿ ಸಂಗೀತಗಾರ್ತಿ. ನಾಲ್ಕು ಗಂಡುಮಕ್ಕಳೊಂದಿಗೆ ಏಕೈಕ ಪುತ್ರಿ ಲೀಲಾವತಿ ಅವರು ಪ್ರೀತಿಯಿಂದ ಮುದ್ದಿನಿಂದ ಬೆಳೆದದ್ದು ಸಾಹಿತ್ಯ ಸಂಗೀತ ಸಂಸ್ಕಾರಗಳ ಕುಟುಂಬದಲ್ಲಿ.

ಬಾಲ್ಯದಿಂದಲೂ ಸಂಗೀತದೆಡೆಗೇ ತುಡಿಯುತ್ತಿದ್ದ ಬಾಲಕಿ ಲೀಲಾವತಿ ಶಾಲೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದು ಸ್ಟಾರ್ ಸಿಂಗರ್ ಆಕರ್ಷಣೆಗಳಿಸಿಕೊಂಡವರು. ಏಳನೇ ವಯಸ್ಸಿನಲ್ಲಿ ಮೊದಲಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಓಂಕಾರ ಪ್ರಾರಂಭಿಸಿದ್ದು ರಾಮಸ್ವಾಮಿಗಳಲ್ಲಾದರೂ ನಂತರ ಶಾಸ್ತ್ರೀಯ ಸಂಗೀತದ ಮುಖ್ಯ ಗುರುಗಳಾಗಿ ಅವರಿಗೆ ದೊರಕಿದ್ದು ಶ್ರೀಯುತ ಚನ್ನಕೇಶವಯ್ಯನವರು. ಅವರಲ್ಲಿ 12ವರ್ಷಗಳ ಕಾಲ ಶಾಸ್ತ್ರೀಯ ಸಂಗೀತ ಕಲಿತರು. ಮುಂದೆ ಗುರುಗಳಾಗಿ ದೊರಕಿದ್ದು ‘ಪದ್ಮ ಚರಣ್’ ಎಂದೇ ಪ್ರಖ್ಯಾತರಾಗಿದ್ದ ಎ.ವಿ.ಕೃಷ್ಣಮಾಚಾರ್ಯರು.

ಬಾಲ್ಯದಿಂದಲೇ ಅನೇಕ ರೋಗರುಜಿನಗಳನ್ನು ಅನುಭವಿಸುತ್ತಲೇ ಎಡಬಿಡದೆ ಸಂಗೀತಾಭ್ಯಾಸವನ್ನೂ ಮಾಡಿದವರು. ಸುಮಾರು ದಶಕಗಳಿಗಿಂತಲೂ ಹೆಚ್ಚಿಗೆ ಹಾಡಿದವರು ತುಂಬಾ ಬೇಗನೇ ತಮ್ಮ ಗಾಯನ ನಿಲ್ಲಿಸಿದ್ದು ಅನಾರೋಗ್ಯದ ಕಾರಣದಿಂದಲಾದರೂ ತೊಂಬತ್ತರ ಲೀಲಾವತಿ ಅಮ್ಮನ ಆರೋಗ್ಯಕರ ಕಣ್ಣುಗಳು ಹೊಳೆಯುತ್ತವೆ…ಮೃದು ಮಧುರ ಮಾತುಗಳು ಉಲಿಯುತ್ತವೆ. ಅವರನ್ನೀಗ ಯಾರೇ ಭೇಟಿ ಮಾಡಿದರೂ ಅವರ ವಾತ್ಸಲ್ಯ ಸ್ನೇಹ ಪ್ರೀತಿ ಆತ್ಮೀಯತೆಗಳ ಸಾಗರದಲ್ಲಿ ತೇಲುವುದಂತೂ ನಿಜ. ಇಂತಹ ವ್ಯಕ್ತಿಯ ಸಾಧನೆಯ ಹಿಂದೆ ಅದೆಷ್ಟು ನೋವು ನಲಿವು ಸಂಕಷ್ಟಗಳು ಅವಮಾನಗಳು ಕಿರುಕುಳಗಳು ಬಾಧಿಸಿವೆ ಎಂಬುದು ಅವರ ಈ ಕೃತಿಯ ಓದಿನ ಮೂಲಕ ಮಾತ್ರವೇ ತಿಳಿಯುವಂಥದ್ದು. ಬಹುಶಃ ಪ್ರತಿಯೊಬ್ಬ ಮಹಿಳೆ ಯಾವುದೇ ಕ್ಷೇತ್ರದಲ್ಲಿ ಒಂದು ಉನ್ನತ ಸಾಧನೆ ಮಾಡಬೇಕೆಂದಾಗ ಇಷ್ಟೆಲ್ಲಾ ಅನುಭವಿಸಿಯೇ ಬಂದಿರುತ್ತಾರೆ. ಇತ್ತೀಚೆಗೆ ಕೆಲವರು ಧೈರ್ಯದಿಂದ ಆತ್ಮಕಥೆಯಲ್ಲಿ ಬರೆದುಕೊಂಡರೂ ಬರೆದುಕೊಳ್ಳದೆ ಎಲ್ಲವನ್ನೂ ನುಂಗಿಕೊಂಡ ಅನೇಕ ಮಹಿಳಾ ಸಾಧಕಿಯರ ಪ್ರತಿರೂಪವಾಗಿ ಲೀಲಾವತಿ ಈ ಕೃತಿ ರಚಿಸಿದ್ದಾರೆ. ಇದು ಮತ್ತಷ್ಟು ಹೆಣ್ಮಕ್ಕಳಿಗೆ ಪ್ರೇರಣೆಯೂ ಹೌದು.

(ಕೃಷ್ಣಮಾಚಾರ್ಯರು)

ಗುರುಗಳಾಗಿ ಲೀಲಾವತಿ ಅವರಿಗೆ ಸಿಕ್ಕ ಕೃಷ್ಣಮಾಚಾರ್ಯರು ಎಂದೂ ಶಿಷ್ಯೆಯಿಂದ ಫೀಸನ್ನು ತೆಗೆದುಕೊಳ್ಳದಿದ್ದರೂ ಲೀಲಾವತಿ ಅವರ ಬದುಕಿನ ಇಪ್ಪತ್ತೆರಡು ವರ್ಷಗಳ ಶಿಷ್ಯವೃತ್ತಿಯನ್ನೇ ಫೀಸಾಗಿ ಪಡೆದುಕೊಳ್ಳುವುದು ಪುರುಷ ದೌರ್ಜನ್ಯವಾಗಿ ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಅವರ ಅತಿಯಾದ ಶಿಸ್ತು ಕಟುವಾದ ನಿಂದನೆಗಳು ದೈಹಿಕ ಕಿರುಕುಳವನ್ನು ಅನುಭವಿಸುತ್ತಲೇ ಗುರುಗಳ ಸಂಯೋಜನೆಯಲ್ಲೇ ಹಾಡಬೇಕೇ ಹೊರತು ಇತರ ಸಂಗೀತ ಸಂಯೋಜಕರ ಗೀತೆ ಹಾಡವಂತಿಲ್ಲ ಎಂಬ ಕಟ್ಟುಕಟ್ಟಳೆಗಾಗಿ ಸಿನಿಮಾದ ಪ್ರಸಿದ್ಧ ಗಾಯಕಿಯೂ ಆಗಬಹುದಾದ ಅವಕಾಶವನ್ನು ಕಾಂಟ್ರಾಕ್ಟ್ ಕ್ಯಾನ್ಸಲ್ ಮಾಡುವ ಮೂಲಕ ಗುರುಗಳ ಮಾತಿಗೆ ಬದ್ಧರಾಗುವುದು ಅವರಲ್ಲಿದ್ದ ಸಂಗೀತ ಜ್ಞಾನವನ್ನು ಪಡೆಯಲಿಕ್ಕಾಗಿಯೇ. ಇದು ಲೀಲಾವತಿ ಅವರ ಸಂಗೀತ ಪ್ರೇಮಕ್ಕೆ ಸಾಕ್ಷಿ. ಲೀಲಾವತಿ ಅವರ ಬಹಳಷ್ಟು ಜೀವನ ಆವರಿಸುವ ಪದ್ಮ ಚರಣ್ ಅವರ ನಡೆಗಾಗಿ ಪ್ರತಿಭಟಿಸಲು ಲೀಲಾವತಿ ಅವರಿಗೆ ಚಿಕ್ಕ ವಯಸ್ಸಿನಲ್ಲಿದ್ದ ಮುಗ್ಧತೆ ಹೆದರಿಕೆ ಆ ಕಾಲದಲ್ಲಿ ಹೆಣ್ಮಕ್ಕಳಿಗಿದ್ದ ನಿರ್ಬಂಧಗಳು ಸಂಗೀತ ಕಲಿಕೆಯನ್ನು ನಿಲ್ಲಿಸುವ ಭಯದಿಂದಲೇ ಅವರು ಎಲ್ಲವನ್ನೂ ಸಹಿಸಿಕೊಂಡರೇನೋ .

ಕೊನೆಗೂ ಗುರುಗಳ ಹಿಡಿತದಿಂದ ಹೊರಬಂದ ಮೇಲೆಯೇ ಅವರು ಸ್ವತಂತ್ರ ಸಂಗೀತ ಸಂಯೋಜನೆಯಲ್ಲಿ ಅನೇಕ ಗೀತೆಗಳನ್ನು ಹಾಡಿದ್ದಾರೆ ಹಾಡಿಸಿದ್ದಾರೆ. ಅಷ್ಟರಲ್ಲಿ ಗುರುಗಳ ಬಳಿಯಿದ್ದ ಸಂಗೀತ ನಿಧಿಯ ಬಹುಪಾಲು ಇವರಿಗೆ ಒಲಿದಿತ್ತು. ಒಂದನ್ನು ಪಡೆಯಲು ಮತ್ತೊಂದನ್ನು ತ್ಯಾಗ ಮಾಡಬೇಕೆನೋ ಏನನ್ನಾದರೂ ಸಾಧಿಸಬೇಕೆಂದರೆ ಎನಿಸಿದ್ದಂತೂ ನಿಜ…ಹೌದಲ್ಲವೇ?

ತಮ್ಮ ಕೊನೆ ದಿನಗಳಲ್ಲಿ ಆಲ್ಜೈಮಜರ್ ಕಾಯಿಲೆಯಿಂದ ಬಳಲುತ್ತಿದ್ದ ಗುರುಗಳನ್ನು ನೋಡಲುವ ಹೋದಾಗ ಯಾರನ್ನೂ ಗುರುತಿಸದಿದ್ದ ಗುರುಗಳು ಲೀಲಾವತಿ ಅವರನ್ನು ಮಾತ್ರ ಗುರುತಿಸುತ್ತಾರೆ “She is my Music ” ಅದೊಂದು ಸಾಲನ್ನು ನುಡಿದು ಅವರ ಕಣ್ಣುಗಳು ಹೊಳೆದ ದೃಶ್ಯ ಓದುಗರನ್ನು ಸೆಳೆಯುತ್ತದೆ.

ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತು ಆಕಾಶವಾಣಿ ಗಾಯಕಿಯಾಗಿ ಭಾವಗೀತೆಯನ್ನು ಪಿ. ಕಾಳಿಂಗರಾವ್ ಅವರ ಜೊತೆಯಲ್ಲಿ ಹಾಡಿ ಪ್ರಚಾರ ನೀಡಿದ್ದು ಮೊದಲಿಗೆ ಲೀಲಾವತಿಯವರೇ. ಭಾವಗೀತೆ ಭಕ್ತಿಗೀತೆ ಕೀರ್ತನೆಗಳು ವಚನಗಳು ಗಜಲ್ ಗಳು ಜನಪದಗೀತೆಗಳು, ರವೀಂದ್ರ ಸಂಗೀತ ಹೀಗೆ ಬೇರೆ ಭಾಷೆಯ ಇತರ ಪ್ರಾಕಾರಗಳನ್ನೂ ಕಲಿತು ಹಾಡಿರುವುದಲ್ಲದೇ ಮಕ್ಕಳ ಕತೆಗಳು ರಂಗರೂಪಕಗಳು ಎಲ್ಲವನ್ನೂ ಸಮರ್ಥ ರೀತಿಯಲ್ಲಿ ನಿರ್ವಹಿಸುತ್ತಲೇ ಮುಂದೆ ಆಕಾಶವಾಣಿಯಲ್ಲಿ ಸಂಗೀತ ಸಂಯೋಜಕರೂ ಆಗುತ್ತಾರೆ. ಆ ಸಮಯದಲ್ಲಿ ಕುವೆಂಪು ಬೇಂದ್ರೆ ಅಡಿಗರು ಕೆ.ಎಸ್.ನ ಜಿ.ಎಸ್ ಎಸ್ ನಿಸಾರ್ ಅಹಮದ್ ಮೊದಲಾದವರ ಕವಿತೆಗಳನ್ನು ಹಾಡಿ ಅವರಿಂದ ಮೆಚ್ಚುಗೆ ಗಳಿಸಿ ಕವಿತೆಗಳನ್ನು ಭಾವಗೀತೆಯ ರೂಪದಲ್ಲಿ‌ ಕನ್ನಡದ ಜನರಿಗೆ ತಲುಪಿಸಿದ ಕೀರ್ತಿ ಲೀಲಾವತಿ ಅವರದ್ದು. ಕವಿಗಳ ಸ್ನೇಹದೊಡನಾಟ ಅವರ ಸಾಹಿತ್ಯದ ಪ್ರಭಾವದಿಂದಾಗಿ ಲೀಲಾವತಿ ಅವರು ಇದುವರೆಗೂ 20 ಕೃತಿಗಳನ್ನು ರಚಿಸಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡವರು ಸಂಗೀತ ಮತ್ತು ಸಾಹಿತ್ಯದಲ್ಲಿ ಸಮಾನ ಆಸಕ್ತಿ ಹೊಂದಿದ್ದರೂ ಬಹುಪಾಲು ಸಮಯ ಸಂಗೀತದೊಂದಿಗೆ ಕಳೆದುಹೋಗಿದ್ದರಿಂದ ಸಾಹಿತ್ಯದೆಡೆಗೆ ಹೆಚ್ಚು ಗಮನ ಕೊಡಲಾಗಲಿಲ್ಲವೆಂದ ಲೀಲಾವತಿ ಅಮ್ಮ “ನನ್ನ ಸಂಸಾರ ಮತ್ತು ಸಾಧನೆ ಎರಡೂ ಸಂಗೀತಮಯವೇ , ವೈಯಕ್ತಿಕ ಜೀವನ ಮತ್ತು ಸಾರ್ವಜನಿಕ ಜೀವನ ಹೀಗೆ ಒಂದೇ ಆಗಿರುವುದು ನನ್ನ ಭಾಗ್ಯ” ಎನ್ನುತ್ತಾರೆ ವಿನೀತರಾಗಿ.

ಬಾಲ್ಯದಿಂದಲೂ ಸಂಗೀತದೆಡೆಗೇ ತುಡಿಯುತ್ತಿದ್ದ ಬಾಲಕಿ ಲೀಲಾವತಿ ಶಾಲೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದು ಸ್ಟಾರ್ ಸಿಂಗರ್ ಆಕರ್ಷಣೆ ಗಳಿಸಿಕೊಂಡವರು. ಏಳನೇ ವಯಸ್ಸಿನಲ್ಲಿ ಮೊದಲಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಓಂಕಾರ ಪ್ರಾರಂಭಿಸಿದ್ದು ರಾಮಸ್ವಾಮಿಗಳಲ್ಲಾದರೂ ನಂತರ ಸಂಗೀತದ ಮುಖ್ಯ ಗುರುಗಳಾಗಿ ಅವರಿಗೆ ದೊರಕಿದ್ದು ‘ಪದ್ಮ ಚರಣ್’ ಎಂದೇ ಪ್ರಖ್ಯಾತರಾಗಿದ್ದ ಎ.ವಿ.ಕೃಷ್ಣಮಾಚಾರ್ಯರು.

ಆಕಾಶವಾಣಿಯ ಸಹೋದ್ಯೋಗಿಗಳು ನಿರ್ದೇಶಕರ ಜೊತೆಗಿನ ಒಡನಾಟಗಳು ಅಲ್ಲಿ ತಮ್ಮ ಪ್ರಗತಿಯನ್ನು ಸಹಿಸದವರಿಂದ ತಮಗಾದ ಅವಮಾನ ಕಿರುಕುಳವನ್ನು ಅವರ ಹೆಸರುಗಳ ಸಹಿತ ಉಲ್ಲೇಖಿಸಿರುವ ಲೀಲಾವತಿ ಅವರ ಧೈರ್ಯ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಹೆಣ್ಮಕ್ಕಳಿಗೂ ಬರಲಿ. ಮುಂದೆ ಅವರು ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾಗಿ ಕನ್ನಡಕ್ಕಾಗಿ, ಸಂಗೀತಕ್ಕಾಗಿ ಅವರು ಸಲ್ಲಿಸಿದ ಸೇವೆಗೆ , ನಿರ್ವಹಿಸಿದ ಹುದ್ದೆಗಳಿಂದ ಸಾಧನೆಗಳಿಂದ ಪ್ರತಿಷ್ಠಿತ ಪ್ರಶಸ್ತಿಗಳಿಂದ ಪುರಸ್ಕೃತಗೊಂಡಿದ್ದಾರೆ. ದೇಶದ ಎಲ್ಲೆಡೆ ಹಾಡಿರುವುದಷ್ಟೇ ಅಲ್ಲ ವಿದೇಶಗಳಲ್ಲೂ ಕಾರ್ಯಕ್ರಮ ನೀಡಿ ಬಂದ ಸರಳ ಮನಸ್ಸಿನ ದೊಡ್ಡ ಸಾಧಕಿ ಅವರು.

ಹೆಣ್ಣು ಏನೇ ಸಾಧನೆ ಮಾಡಿದರೂ ಹಿಡಿ ಪ್ರೀತಿಗಾಗಿ ಹಂಬಲಿಸುವುದು ಸಹಜವೇ. ಅವರ ಜೀವನದ ಒಂದೆರಡು ಮಧುರವಾದ ಪ್ರೇಮಪ್ರಕರಣಗಳನ್ನು ಪ್ರಾಮಾಣಿಕವಾಗಿ ಬರೆದುಕೊಂಡ ಅವರು ಮೊದಲ ಮದುವೆ ಮುರಿದುಬಿದ್ದಾಗ ಆತ್ಮಹತ್ಯೆಗೆ ಮುಂದಾಗಿದ್ದು ಅದರಿಂದ ಹೊರಬಂದು ಒಂದು ಮಗುವಿನ ತಾಯಾಗಿ ಒಂಟಿಯಾಗಿ ಜೀವನವನ್ನೆದುರಿಸಿದ್ದು….ಎಲ್ಲದರ ಹಿಂದೆ ಮನೆಯ ಸದಸ್ಯರ ಮತ್ತು ಸ್ನೇಹಿತರ ಪ್ರೀತಿ ಅಭಿಮಾನ ಸಹಕಾರ ಭರವಸೆ ರಕ್ಷಣೆಯಾಗಿ ನಿಲ್ಲುತ್ತದೆ. ಎಷ್ಟು ಹೆಣ್ಮಕ್ಕಳಿಗೆ ಇಂತಹ ಸಮಯದಲ್ಲಿ ಇದೆಲ್ಲವೂ ಸಿಗಲು ಸಾಧ್ಯ? ಹೆಣ್ಮಕ್ಕಳು ದೌರ್ಜನ್ಯಕ್ಕೊಳಗಾದಾಗ ಹೆಣ್ಮಕ್ಕಳೇ ಒಟ್ಟಾಗಿ ಪ್ರತಿಭಟಿಸುವುದನ್ನು ಕಲಿಯಬೇಕು ಎನ್ನುವ ಲೀಲಾವತಿ ಅವರ ಬದುಕಿನ ಬೆಂಗಾಡಿನಲ್ಲಿ ಮಂದಮಾರತ ಹಾದುಹೋಗಿದ್ದು ಮೋಡಿ ಮಾಡುವ ವಿಶಿಷ್ಟ ಕಂಠಸಿರಿಯ ಆಕಾಶವಾಣಿ ಕಲಾವಿದರಾದ ರಘುರಾಂ ಬಂದ ಮೇಲೆಯೇ. ಲೀಲಾವತಿ ಅವರಿಗಿಂತಲೂ ವಯಸ್ಸಿನಲ್ಲಿ ಕೆಲವರ್ಷ ಚಿಕ್ಕವರಾದ ರಘುರಾಂಗೂ ಇದು ಎರಡನೆ ಮದುವೆ. ರಘುರಾಂ ಲೀಲಾವತಿ ಅವರ ಸಮಾನ ಆಸಕ್ತಿ ಸಹೃದಯತೆ ಒಂದು ಅಪರೂಪದ ದಾಂಪತ್ಯಕ್ಕೆ ಸಾಕ್ಷಿಯಾಯಿತು.

ಪತ್ನಿಯ ಪ್ರತಿಭೆಗೆ ಪತಿ ಪ್ರೋತ್ಸಾಹದ ಕಡಲಾದರು. ತಮ್ಮ ಪ್ರತಿಭೆಯನ್ನು ಪಕ್ಕಕ್ಕಿಟ್ಟು ಮಡದಿಗೆ ಸಾಥ್ ಕೊಟ್ಟ ಅನನ್ಯ ವ್ಯಕ್ತಿ ರಘುರಾಂ. ಅನೇಕ ಕಷ್ಟಗಳನ್ನುಂಡಿದ್ದ ಲೀಲಾವತಿ ಅವರು ಪತಿಯ ಜೊತೆಗೂಡಿ ಜೀವನ ಸುಂದರ ಹೋದೋಟವಾಗಿ “ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್” ಪ್ರಾರಂಭವಾಗಿ ಕರ್ನಾಟಕದ ಬಹುಪಾಲು ಕಲಾವಿದರು ಕವಿಗಳು ವಿದ್ವನ್ಮಣಿಗಳಿಂದ ಅನೇಕ ಕಾರ್ಯಕ್ರಮಗಳನ್ನು ನಿರಂತರ ನಡೆಸಿಕೊಂಡು ಬಂದ ಸಂಸ್ಥೆ ನೂರಾರು ಗಾಯಕರನ್ನು ತಯಾರು ಮಾಡಿದ್ದು ಸಾಹಸಗಾಥೆ.

ಚಿಕ್ಕವಯಸ್ಸಿಗೆ ಮಠಗಳಿಗೆ ಪೀಠಾಧಿಪತಿ ಮಾಡುವುದನ್ನು ವಿರೋಧಿಸುವ ಲೀಲಾವತಿ ಅವರ ಬಳಿಯೇ ಸಂಗೀತ ಕಲಿಯಲು ಶಿಷ್ಯವೃತ್ತಿ ಆರಂಭಿಸಿದ ವ್ಯಕ್ತಿಯೊಬ್ಬರು ಚಿಕ್ಕ ವಯಸ್ಸಿನಲ್ಲಿ ಪೀಠಾಧಿಪತಿಯಾಗಿ ಅದರ ಕಟ್ಟು ಕಟ್ಟಳೆಗಳಿಗೆ ಹೊಂದಿಕೊಳ್ಳಲಾಗದೇ ಹೊರಬಂದು ಪ್ರೇಮಿಸಿದ ಹೆಣ್ಣನ್ನು ಮದುವೆಯಾಗಿ ಸಂಸಾರ ಹೂಡಿದ್ದು…. ಅದರ ಬಗ್ಗೆ ಆತ ಕೃತಿ ರಚಿಸಿದ ಪ್ರಸ್ತಾಪಗಳು ಬರುತ್ತವೆ. ನಿಜ, ಅಪ್ರಾಪ್ತ ವಯಸ್ಸಿಗೆ ಸನ್ಯಾಸಿಯಾಗಿಸಿ ವಯಸ್ಸಿಗೆ ಬಂದ ನಂತರ ಅವರಿಂದಾಗುವ ಅನಾಹುತಗಳಿಂದ ಸಮಾಜ ನಲುಗುತ್ತದೆ.

ಮನೆಯ ಮುಂದಿರುವ ತೋಟದಲ್ಲಿ ಚಪ್ಪಲಿಯಿಲ್ಲದೆ ಬರಿಗಾಲಲ್ಲಿ ನಡೆಯಲು ಬಯಸುವ ಲೀಲಾವತಿ ಅವರ ವಿಂತನೆಗಳಿವು. ಭೂಮಿಯ ಸ್ಪರ್ಶ ಈ ದೇಹಕ್ಕೆ ಬೇಕು. ಪ್ರಕೃತಿಯ ಸಾಂಗತ್ಯದಲ್ಲಿ ಇರುವುದು ಕಡಿಮೆಯಾಗಿರುವುದರಿಂದಲೇ ಗಿಡಮರಗಳನ್ನು ಕಡಿಯುವ ಕ್ರೌರ್ಯಕ್ಕೆ ಮನುಷ್ಯ ಮುಂದಾಗಿದ್ದಾನೆ. ಇದರಿಂದ ಮಳೆ ಬೆಳೆ ವ್ಯತ್ಯಾಸವಾಗಿ ಆಮ್ಲಜನಕದ ಕೊರತೆಯಾಗಿದೆ ಎಂಬ ಕಟುಸತ್ಯವನ್ನು ಮುಂದಿಡುವ ಸಾಮಾಜಿಕ ಕಳಕಳಿಯ ಪ್ರಕೃತಿಪ್ರೇಮಿ ಲೀಲಾವತಿ ಅವರ ದೃಷ್ಟಿಕೋನಗಳು ಚಿಂತನಾರ್ಹ.

ವರದಕ್ಷಿಣೆಗಾಗಿ ನಿಂತು ಹೋಗುತ್ತಿದ್ದ ಮದುವೆಯನ್ನು ದಾರಹೋಕನಾಗಿ ನೋಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಕೈಲಿದ್ದ ಉಂಗುರ ಮತ್ತು ಜೇಬಿನಲ್ಲಿದ್ದ ನೋಟುಗಳನ್ನು ಕೊಟ್ಟು ಮದುವೆ ಸಾಂಗವಾಗಿಸಿದ ವ್ಯಕ್ತಿ , ಇಡೀ ಪಂಜರವನ್ನೇ ಕೊಂಡು ಅದರಲ್ಲಿದ್ದ ಹಕ್ಕಿಗಳಿಗೆ ಹಾರುವ ಸ್ವತಂತ್ರ ನೀಡಿದ ವ್ಯಕ್ತಿ , ಅನಾಥ ಮಗುವಿನ ಚಿಕಿತ್ಸೆಯ ಸಲುವಾಗಿ ತಾನು ಅದರ ತಂದೆಯೆಂದು ಅಪ್ಲಿಕೇಷನ್ನಿನಲ್ಲಿ ಬರೆಸಿದ ವ್ಯಕ್ತಿ ( ಆದರೂ ಮಗು ಅಸು ನೀಗಿದ್ದು ದುರ್ದೈವದ ಸಂಗತಿ) ….. ಹೀಗೆ ರಘುರಾಂ ವ್ಯಕ್ತಿತ್ವ ಹೀಗೆ ತೆರೆದಿಡುವ ಲೀಲಾವತಿ ಅಮ್ಮ ಭಾರತ ಚೀನಾ ಯುದ್ಧ ಸಂದರ್ಭದಲ್ಲಿ ಸೈನಿಕರ ಸಹಾಯ ನಿಧಿಗಾಗಿ ತಮ್ಮ ಓಲೆಗಳನ್ನು ಬಿಚ್ಚಿಕೊಟ್ಟು , ಬೀದಿಬೀದಿಗಳಲ್ಲಿ ತಿರುಗಿ ಹಣ ಸಂಗ್ರಹಿಸಿ ಕಳಿಸಿದ ಮಾನವೀಯ ಗುಣಗಳ ಹೆಣ್ಣು.

ಇಂತಹ ಅಪರೂಪದ ದಂಪತಿಗಳ ಪುತ್ರ “ಸುಕುಮಾರ್” ಸೋಮಿ ಎಂಬ ಹೆಸರಲ್ಲೇ ಚಿರಪರಿಚಿತ ತರುಣ ವಿದೇಶದಲ್ಲಿ ದುಡಿಯಲಾರಂಭಿಸಿದರೂ ರಘುರಾಂ ಸಾವಿನ‌ ನಂತರ ಬೆಂಗಳೂರಿನಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ನೆಲೆ ನಿಂತು ತಮ್ಮ ಉದ್ಯೋಗದ ಜೊತೆ ತಾಯಿಯ ಆರೋಗ್ಯವನ್ನೂ ವಿಚಾರಿಸಿಕೊಳ್ಳುತ್ತಲೇ ಈಗಾಗಲೇ ಮರೆತುಹೋಗಿಬಿಡಬಹುದಾಗಿದ್ದ ಲೀಲಾವತಿ ಅವರು ಹಾಡಿರುವ ನೂರಾರು ಗೀತೆಗಳನ್ನು ಸೋಷಿಯಲ್ ಮಿಡಿಯಾಗಳ ಮೂಲಕ ಜೀವಂತವಾಗಿರಿಸಿ ಅವರ ಅಪರೂಪದ ಹಾಡುಗಳನ್ನು ಯೂಟ್ಯೂಬ್ ಫೇಸ್‌ಬುಕ್‌ ಮೂಲಕ ಕನ್ನಡದ ಜನರಿಗೆ ತಲುಪಿಸುತ್ತಿರುವ ಸಹೃದಯಿ ವ್ಯಕ್ತಿ. ಲೀಲಾವತಿ ಅವರ ಹಾಡು ಹೀಗೆ ಎಂದೆಂದಿಗೂ ನಿತ್ಯನೂತನಾಗಿ ಹರಿಯುತ್ತಲೇ ಇರಲಿ….ಎಂದು ಆಶಿಸುತ್ತಾ ಈ ಬರಹ ಮುಗಿಸುವ ಮೊದಲು ಲೀಲಾವತಿ ರಘುರಾಂ ಅವರ ಒಡನಾಟವನ್ನು ಕಣ್ಣಾರೆ ಕಂಡವಳು ನಾನು. ಯಾಕೆಂದರೆ ಹತ್ತಾರು ವರ್ಷಗಳ ಹಿಂದೆ ಮೂರ್ನಾಲ್ಕು ವರ್ಷ ನಾನೂ ಅವರ ಬಳಿ ಸುಗಮ ಸಂಗೀತ ಕಲಿಯಲು ಹೋಗುತ್ತಿದ್ದು ಆ ನಂತರ ಸಾಹಿತ್ಯದ ಅಧ್ಯಯನದ ಕಾರಣದಿಂದ ಸಂಗೀತ ನಿಲ್ಲಿಸಬೇಕಾಯಿತು. ಆದರೆ ಅವರ ಬಾಂಧವ್ಯದ ಒಡನಾಟ ಜೇನಿಗಿಂತಲೂ ಬಲು ಮಧುರ. ಮಹಾನ್ ಸಾಧಕಿಯೊಬ್ಬರು ಸಣ್ಣಪುಟ್ಟ ಸಾಧನೆ ಮಾಡಿದವರೊಂದಿಗೂ ತೋರುವ ಆತ್ಮೀಯತೆ ಪ್ರೀತಿ ಸಲುಗೆಯಷ್ಟೇ ಅಲ್ಲ ಮಕ್ಕಳಂತೆ ಸದಾ ಉತ್ಸಾಹ ತುಂಟತನದ ಜೊತೆಗೆ ಜೀವಸಖಿಯಾಗಿ ಅವರು ನಮ್ಮನ್ನು ಪ್ರೀತಿಯ ಬೆಸುಗೆಯಲ್ಲಿ ಬೆಸೆದುಕೊಂಡುಬಿಡುವ ಅನುಭವ ನನ್ನದಷ್ಟೇ ಅಲ್ಲ ಅವರನ್ನು ಭೇಟಿಯಾಗುವ ಎಲ್ಲರದ್ದೂ ಸಹಾ.ಅಮೂಲ್ಯವಾದ ಕೃತಿ ಈ ಆತ್ಮಕಥೆ…. ಕನ್ನಡಿಗರಿಗೆ ದೊರೆತ ಅಪೂರ್ವವಾದ ಸುರಗಿ ಹೊನ್ನೆಯ ಹಾಡು.

(ಕೃತಿ: ಹಾಡಾಗಿ ಹರಿದಾಳೆ (ಆತ್ಮಕಥನ), ಲೇಖಕರು: ಎಚ್. ಆರ್. ಲೀಲಾವತಿ, ಪ್ರಕಾಶಕರು: ವಿಕಾಸ ಪ್ರಕಾಶನ, ಬೆಲೆ: 400/-)