ಡಿಕ್ಲಟರಿಂಗ್ ನಮ್ಮ ದೇಹದ ಆರೋಗ್ಯಕ್ಕೂ ಒಳ್ಳೆಯದು. ಮನೆಯಲ್ಲಿ ಸೇರಿಕೊಂಡ ಅನೇಕ ವಸ್ತುಗಳು ಹಲವು ರೀತಿಯ ರೋಗಗಳಿಗೆ ಕಾರಣವಾಗುವ ಧೂಳಿಗೆ, ಅಸ್ತಮಾದಂತಹ ಖಾಯಿಲೆಗಳಿಗೆ ಕಾರಣವಾಗಬಹುದು. ಆಗಾಗ ಡಿಕ್ಲಟರಿಂಗ್ ಮಾಡುವುದರಿಂದ ಅದನ್ನು ತಡೆಯಬಹುದು. ಅಂತೂ ಈ ಡಿಕ್ಲಟರಿಂಗ್‌ನ ಹಿಂದೆ ಎಲ್ಲದಕ್ಕಿಂತ ಮುಖ್ಯವಾಗಿ ಯಾವುದು ಸಂತೋಷವನ್ನು ನೀಡುತ್ತದೆಯೋ ಅದನ್ನು ಮಾಡಿ ಮತ್ತು ಸಂತೋಷವನ್ನು ತರುವಂತಹ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳಿ ಎನ್ನುವ ಸಂದೇಶವಿದೆ. ಕೊಳ್ಳುಬಾಕತನ ಹೆಚ್ಚುತ್ತಿರುವಂತಹ ಸನ್ನಿವೇಶದಲ್ಲಿ ಮಿನಿಮಲಿಸಂ(ಕಡಿಮೆ ವಸ್ತುಗಳ ಬಳಕೆ) ಅನ್ನು ಪ್ರತಿಪಾದಿಸುವಂತಹ ಪರಿಕಲ್ಪನೆಗಳು ತುಂಬಾ ಕುತೂಹಲದ ವಿಷಯಗಳಾಗಿವೆ.
“ಡಿಕ್ಲಟರಿಂಗ್‌” ಕುರಿತು ಸೌರಭಾ ಕಾರಿಂಜೆ ಬರಹ ನಿಮ್ಮ ಓದಿಗೆ

ಏನೇನೋ ಕಾರ್ಯಕಾರಣಗಳಿಂದಾಗಿ ಮೂರು ನಾಲ್ಕು ವರ್ಷಗಳಿಗೊಮ್ಮೆ ಮನೆಯನ್ನು ಬದಲಾಯಿಸುವುದು ಒಂದು ಪರಿಪಾಠವಾಗಿ ಹೋಗಿದೆ. ಅದು ಮನಸ್ಸಿಗೆ ಒಂದು ರೀತಿಯ ಉಲ್ಲಾಸವನ್ನು ತರುತ್ತದೆ ನನಗೆ. ಅದಕ್ಕೆ ಕಾರಣವನ್ನು ಯೋಚಿಸುತ್ತಾ ಕುಳಿತಿದ್ದೆ.

ಹಾಗೆ ನೋಡಿದರೆ ಪ್ರತಿ ಬಾರಿ ಮನೆ ಬದಲಾಯಿಸುವುದು ಕಷ್ಟದ ಕೆಲಸವೇ. ಇರುವ ಸಾಮಾನುಗಳನ್ನೆಲ್ಲ ಪ್ಯಾಕ್ ಮಾಡಿಕೊಂಡು, ಸಾಗಿಸಿಕೊಂಡು, ಮತ್ತೆ ಜೋಡಿಸಿಕೊಂಡು ದೈನಂದಿನ ಜೀವನವನ್ನು ಒಂದು ಹದಕ್ಕೆ ತರುವಷ್ಟರಲ್ಲಿ ಉಸ್ಸಪ್ಪ ಅನಿಸಿಬಿಡುತ್ತದೆ. ಆದರೆ ಅನೇಕ ರೀತಿಯಲ್ಲಿ ಈ ಚಟುವಟಿಕೆ ಒಂದು ಹುರುಪನ್ನು ತರುವುದಂತೂ ಸುಳ್ಳಲ್ಲ. ಸ್ವಲ್ಪ ಆಳವಾಗಿ ಚಿಂತಿಸಿದಾಗ ಥಟ್ ಅಂತ ಹೊಳೆಯಿತು- ಪ್ರತಿ ಬಾರಿ ಮನೆ ಬದಲಾಯಿಸುವಾಗಲೂ ಬೇಡದ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕುತ್ತೇನೆ. ಕೆಲವನ್ನು ಸ್ನೇಹಿತರಿಗೆ, ಇನ್ನೂ ಕೆಲವನ್ನು ಮನೆಕೆಲಸದವರಿಗೆ, ಮತ್ತೆ ಕೆಲವನ್ನು ಅನಾಥಾಶ್ರಮಗಳಿಗೆ ಹಂಚಿಬಿಡುತ್ತೇನೆ. ಆ ಕಾರಣಕ್ಕೆ ನನ್ನ ಮನೆಯಲ್ಲಿ ಅನಗತ್ಯ ವಸ್ತುಗಳ ಶೇಖರಣೆ ತುಂಬಾ ಕಮ್ಮಿ ಇದೆ. ಇದೇ ಮನಸ್ಸಿಗೆ ಮುದವನ್ನು ತರುವ ವಿಷಯ.

ಇದೊಂದು ಮನೋವೈಜ್ಞಾನಿಕ ತತ್ವವೂ ಹೌದು. ಹೆಚ್ಚು ವಸ್ತುಗಳಿದ್ದರೆ ಸಂತೋಷ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ನಿಜವಾದ ಸ್ವಾತಂತ್ರ್ಯ ಮತ್ತು ಆಹ್ಲಾದ ಸಿಗುವುದು ನಮ್ಮಲ್ಲಿರುವ ವಸ್ತುಗಳು ಕಮ್ಮಿಯಾದಾಗ. ವಸ್ತುಗಳು ಹೆಚ್ಚಾದಂತೆ ಅವುಗಳನ್ನು ಎಲ್ಲೆಲ್ಲೋ ಇಡುವ ಪರಿಸ್ಥಿತಿ ಬರುತ್ತದೆ.

(ಮೇರಿ ಕೊಂಡೊ)

ಬೇಕಾದಾಗ ಕೈಗೆ ಸಿಗುವುದಿಲ್ಲ ಆದಕಾರಣ ಮೈಯೆಲ್ಲಾ ಪರಚಿಕೊಳ್ಳುವಂತಾಗುತ್ತದೆ. ಅನೇಕ ಬಾರಿ ವಸ್ತುಗಳು ಎಲ್ಲಿದೆ ಎಂದು ತಿಳಿಯದೆ ಎಲ್ಲವನ್ನು ಎಳೆದು ಹಾಕಿ ರಂಪವಾಗುವುದಿದೆ.. ಕೆಲವೊಮ್ಮೆ ಆ ರಂಪದ ಉಸಾಬರಿಯೇ ಬೇಡವೆಂದು ಮತ್ತೆ ಹೊಸತೊಂದನ್ನು ಖರೀದಿಸುವ ಅನಿವಾರ್ಯತೆ. ಅಲ್ಲಿಗೆ ವಸ್ತುಗಳ ಸಂಖ್ಯೆಗೆ ಮತ್ತೊಂದು ಸೇರಿದಂತೆ.

ಡಿಕ್ಲಟರಿಂಗ್ ಅಂದರೆ ಅನಗತ್ಯ ವಸ್ತುಗಳನ್ನು ಹೊರ ಹಾಕುವುದು. ಹೊರದೇಶಗಳಲ್ಲಿ ಇದು ಇತ್ತೀಚೆಗೆ ಅತ್ಯಂತ ಜನಪ್ರಿಯವಾಗುತ್ತಿರುವ ಒಂದು ತತ್ವ. ಜಪಾನಿನ ಮೇರಿ ಕೊಂಡೊ ಅನ್ನುವ ಯುವತಿ ಇದನ್ನು ಅತ್ಯಂತ ಜನಪ್ರಿಯವಾಗಿಸಿದ್ದಾಳೆ. ಡಿಕ್ಲಟರಿಂಗ್ ಕುರಿತಾದ ಹಲವು ಪುಸ್ತಕಗಳನ್ನು ಬರೆದಿದ್ದಾಳೆ ಈಕೆ. ಅವುಗಳ ಮಿಲಿಯಗಟ್ಟಲೆ ಪ್ರತಿಗಳು ಮಾರಾಟವಾಗಿವೆ. ಅನೇಕ ವಿಡಿಯೋಗಳನ್ನು ಮಾಡಿದ್ದಾಳೆ. ಅವಳ ಡಿಕ್ಲಟರಿಂಗ್ ಕುರಿತು ಒಂದು ನೆಟ್‌ಫ್ಲಿಕ್ಸ್‌ ಸೀರೀಸ್‌ ಕೂಡಾ ಇದೆ. ಜಗತ್ತಿನಾದ್ಯಂತ ಈಕೆಯ ವಿಧಾನವನ್ನು ಆಸ್ಥೆಯಿಂದ ಕಲಿತು ಪಾಲಿಸಿಕೊಂಡು ಬರುವವರಿದ್ದಾರೆ. ಮೇರಿಯ ತತ್ವಗಳು ತುಂಬಾ ಆಸಕ್ತಿದಾಯಕವಾಗಿವೆ.

ಕಾನ್ ಮೇರಿ ಎಂದು ಕರೆಯಲ್ಪಡುವ ಆಕೆಯ ವಿಧಾನದಲ್ಲಿ 6 ನಿಯಮಗಳಿವೆ.

1. ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದಕ್ಕೆ ನಿಮ್ಮನ್ನು ನೀವು ಬದ್ಧರನ್ನಾಗಿಸಿಕೊಳ್ಳಿ.

ಡಿಕ್ಲಟರಿಂಗ್‌ಗಾಗಿ ಅಗತ್ಯವಿರುವಷ್ಟು ಸಮಯವನ್ನು ಮೀಸಲಾಗಿಟ್ಟುಕೊಳ್ಳಿ ಮತ್ತು ನಿಮ್ಮ ಉದ್ದೇಶ ಸ್ಪಷ್ಟವಾಗಿರಲಿ. ಅದಕ್ಕೆ ತಕ್ಕ ವಾತಾವರಣವನ್ನು ಸೃಷ್ಟಿಸಿಕೊಳ್ಳಿ. ಅಗತ್ಯವಿದ್ದರೆ ಮನೆಯವರನ್ನು ಸಹಾಯಕ್ಕೆ ಮತ್ತು ಡಿಕ್ಲಟರಿಂಗ್‌ಗೆ ಒಪ್ಪಿಸಿ. ಎಲ್ಲವನ್ನೂ ಒಬ್ಬರೇ ಮಾಡುವುದು ಅವಾಸ್ತವವಾಗಬಹುದು.

2.ನಿಮ್ಮ ಆದರ್ಶ ಜೀವನಶೈಲಿಯನ್ನು ಕಲ್ಪಿಸಿಕೊಳ್ಳಿ

ಡಿಕ್ಲಟರಿಂಗ್ ಅಂದರೆ ಇರುವುದನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ಮಾತ್ರ ಅಲ್ಲ. ಅದು ನಮಗೆ ಸೂಕ್ತವಾದ ಜೀವನ ಶೈಲಿ ಯಾವುದು ಎಂಬುದನ್ನು ಗುರುತಿಸಿಕೊಳ್ಳುವುದು ಮತ್ತು ಅದಕ್ಕೆ ತಕ್ಕ ಬದಲಾವಣೆಗಳನ್ನು ಮಾಡಿಕೊಳ್ಳಲು ಸಿದ್ಧರಾಗುವುದು. ಹೀಗೆ ಮಾಡಿದರೆ ಮಾತ್ರ ಅದಕ್ಕೆ ತಕ್ಕನಾದ ವಾತಾವರಣವನ್ನು ಸೃಷ್ಟಿಸಿಕೊಳ್ಳಲು ಸಾಧ್ಯ. ಅಂದರೆ ನನ್ನ ಮನೆ ಹೇಗಿರಬೇಕು ಎಂಬುದನ್ನು ಕಲ್ಪಿಸಿ, ಗಟ್ಟಿ ಮಾಡಿಕೊಂಡರೆ ಮಾತ್ರ ಆ ದಿಕ್ಕಿನಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ.

3. ಮೊಟ್ಟಮೊದಲಿಗೆ ಬಿಸಾಕುವುದನ್ನು ಮಾಡಿ

ಬಿಸಾಕುವುದೂ ಬದುಕಿಗೆ ಒಂದು ಪಾಠ. ಏನನ್ನಾದರೂ ಬಿಸಾಕಲು ಸಾಧ್ಯವಾದರೆ ಅದು ನಮಗೆ ಮುಂದಕ್ಕೆ ಅಗತ್ಯವಿಲ್ಲ ಎಂಬುದು ಅರ್ಥ. ಜೊತೆಗೆ ಇದು ನಮ್ಮ ಮನೆಯಲ್ಲಿ ಇಟ್ಟುಕೊಳ್ಳಲೇಬೇಕಾದ ವಸ್ತುಗಳು ಎಷ್ಟು ಎಂಬುದರ ಒಂದು ಸ್ಥೂಲ ಅಂದಾಜನ್ನು ಕೂಡಾ ಒದಗಿಸುತ್ತದೆ.
ಹಾಗೆಯೇ ಬಿಸಾಕುವಾಗ ಅಷ್ಟು ಸಮಯ ಬಳಕೆಗೆ ಬಂದ ಆ ವಸ್ತುವಿನ ಕುರಿತು ಕೃತಜ್ಞತೆ ಇರಲಿ ಎನ್ನುತ್ತಾಳೆ ಮೇರಿ.

4. ವರ್ಗೀಕರಿತವಾಗಿ ಅಚ್ಚುಕಟ್ಟಾಗಿ ಇಟ್ಟುಕೊಳ್ಳಿ

ನಾವು ಸುಮಾರಾಗಿ ಒಂದೊಂದೇ ಕೋಣೆಯನ್ನು ಸ್ವಚ್ಛಗೊಳಿಸಲು ಹೊರಡುತ್ತೇವೆ. ಮೊದಲಿಗೆ ಮಲಗುವ ಕೋಣೆ, ನಂತರ ಅಡುಗೆಮನೆ ಹೀಗೆ. ಆದರೆ ಒಂದೇ ರೀತಿಯ ವಸ್ತು ಬೇರೆ ಬೇರೆ ಕೋಣೆಯಲ್ಲಿ ಇರಬಹುದು. ಉದಾಹರಣೆಗೆ ಪುಸ್ತಕಗಳು. ಒಂದು ಕೋಣೆಯನ್ನು ಮಾತ್ರವೇ ಸ್ವಚ್ಛ ಮಾಡಿದರೆ ಇನ್ನೊಂದು ಕೋಣೆಯಲ್ಲಿನ ಪುಸ್ತಕಗಳು ಹಾಗೇ ಉಳಿದುಕೊಳ್ಳುತ್ತವೆ. ಆದ್ದರಿಂದ ವರ್ಗೀಕರಿತವಾಗಿ ಅಚ್ಚುಕಟ್ಟಾಗಿ ಮಾಡಿಕೊಳ್ಳುವುದು ಒಳಿತು. ಅಂದರೆ ಪುಸ್ತಕಗಳನ್ನು ಒಂದು ವರ್ಗವಾಗಿ ನೋಡಿದರೆ ಎಲ್ಲಾ ಕೋಣೆಯ ಪುಸ್ತಕಗಳನ್ನು ತೆಗೆದು ಒಂದೇ ಬಾರಿಗೆ ಸ್ವಚ್ಛಗೊಳಿಸಬಹುದು. ಬೇಡದ್ದನ್ನು ದಾನ ಮಾಡಿ, ಬೇಕಾದುದಕ್ಕೆ ಜಾಗ ಮಾಡಿಕೊಳ್ಳಬಹುದು.

5. ಸರಿಯಾದ ಕ್ರಮವನ್ನು ಅನುಸರಿಸಿ

ಅನೇಕ ಗ್ರಾಹಕರ ಜೊತೆ ವ್ಯವಹರಿಸಿ ಮೇರಿ ಒಂದು ಸಾಮಾನ್ಯವಾಗಿ ಸಾಬೀತಾಗಿರುವ ಕ್ರಮವನ್ನು ಪ್ರತಿಪಾದಿಸುತ್ತಾಳೆ. ಮೊದಲಿಗೆ ಬಟ್ಟೆಗಳು, ನಂತರ ಪುಸ್ತಕಗಳು, ಆಮೇಲೆ ಪೇಪರ್‌ಗಳು ಹೀಗೆ. ಸುಲಭವಾದದ್ದನ್ನು ಮೊದಲು ಮಾಡಿದರೆ ಅದು ಕಷ್ಟಕರವಾದುದ್ದಕ್ಕೆ ಸ್ಪೂರ್ತಿದಾಯಕವಾಗುತ್ತದೆ ಎಂಬುದು ಮೇರಿಯ ಭಾವನೆ.

6. ಈ ವಸ್ತು ನಿಮಗೆ ಸಂತೋಷವನ್ನು ತರುತ್ತಿದೆಯೇ?

ಇದು ಮೇರಿಯ ಕೊನೆಯ ಮತ್ತು ಅತ್ಯಂತ ಪ್ರಮುಖ ಪ್ರಶ್ನೆ. ಯಾವುದೇ ವಸ್ತುವನ್ನೂ ಬೇಕು ಎಂದು ಎತ್ತಿಟ್ಟುಕೊಳ್ಳುವಾಗ ಅದು ನಮಗೆ ಸಂತೋಷವನ್ನು ತರುತ್ತಿದೆಯೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕು ಎನ್ನುತ್ತಾಳೆ ಮೇರಿ. ಸಂತೋಷವನ್ನು ನೀಡದ ವಸ್ತುಗಳಿಗೆ ಮನೆಯಲ್ಲಿ ಜಾಗವಿರಬಾರದು ಎಂಬುದು ಅವಳ ಅಂಬೋಣ.

ಎಷ್ಟೋ ಜನರಿಗೆ ಮನೆಯನ್ನು ಅಚ್ಚುಕಟ್ಟಾಗಿಡಲು ಸಹಾಯ ಮಾಡಿದ್ದಾಳೆ ಮೇರಿ ಕೊಂಡೊ. ಈ ಪ್ರಕ್ರಿಯೆಯಲ್ಲಿ ತನ್ನ ವಿಧಾನವನ್ನು ಮತ್ತಷ್ಟು ಹರಿತವಾಗಿಸಿಕೊಂಡಿಸಿದ್ದಾಳೆ. ಇತ್ತೀಚೆಗೆ ಮಕ್ಕಳಾದ ನಂತರ ಇದು ತನಗೆ ಕಷ್ಟವಾಗುತ್ತಿದೆ ಎಂಬುದನ್ನು ಕೂಡ ಒಪ್ಪಿಕೊಂಡಿದ್ದಾಳೆ. ತನ್ನ ಸಧ್ಯದ ಆದ್ಯತೆ ಮಕ್ಕಳನ್ನು ನೋಡಿಕೊಳ್ಳುವುದು, ಆದ್ದರಿಂದ ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದನ್ನು ಸ್ವಲ್ಪ ಮಟ್ಟಿಗೆ ಹಿಂದೆ ಹಾಕುವುದಾಗಿಯೂ ಹೇಳಿಕೊಂಡಿದ್ದಾಳೆ. ಆದಾಗ್ಯೂ ಆಕೆಯ ಪ್ರಖ್ಯಾತಿ ಕಡಿಮೆಯಾಗಿಲ್ಲ.

ಡಿಕ್ಲಟರಿಂಗ್ ನಮ್ಮ ದೇಹದ ಆರೋಗ್ಯಕ್ಕೂ ಒಳ್ಳೆಯದು. ಮನೆಯಲ್ಲಿ ಸೇರಿಕೊಂಡ ಅನೇಕ ವಸ್ತುಗಳು ಹಲವು ರೀತಿಯ ರೋಗಗಳಿಗೆ ಕಾರಣವಾಗುವ ಧೂಳಿಗೆ, ಅಸ್ತಮಾದಂತಹ ಖಾಯಿಲೆಗಳಿಗೆ ಕಾರಣವಾಗಬಹುದು. ಆಗಾಗ ಡಿಕ್ಲಟರಿಂಗ್ ಮಾಡುವುದರಿಂದ ಅದನ್ನು ತಡೆಯಬಹುದು. ಅಂತೂ ಈ ಡಿಕ್ಲಟರಿಂಗ್‌ನ ಹಿಂದೆ ಎಲ್ಲದಕ್ಕಿಂತ ಮುಖ್ಯವಾಗಿ ಯಾವುದು ಸಂತೋಷವನ್ನು ನೀಡುತ್ತದೆಯೋ ಅದನ್ನು ಮಾಡಿ ಮತ್ತು ಸಂತೋಷವನ್ನು ತರುವಂತಹ ವಸ್ತುಗಳನ್ನು ಮಾತ್ರ ಇಟ್ಟುಕೊಳ್ಳಿ ಎನ್ನುವ ಸಂದೇಶವಿದೆ.

ಏನನ್ನಾದರೂ ಬಿಸಾಕಲು ಸಾಧ್ಯವಾದರೆ ಅದು ನಮಗೆ ಮುಂದಕ್ಕೆ ಅಗತ್ಯವಿಲ್ಲ ಎಂಬುದು ಅರ್ಥ. ಜೊತೆಗೆ ಇದು ನಮ್ಮ ಮನೆಯಲ್ಲಿ ಇಟ್ಟುಕೊಳ್ಳಲೇಬೇಕಾದ ವಸ್ತುಗಳು ಎಷ್ಟು ಎಂಬುದರ ಒಂದು ಸ್ಥೂಲ ಅಂದಾಜನ್ನು ಕೂಡಾ ಒದಗಿಸುತ್ತದೆ. ಹಾಗೆಯೇ ಬಿಸಾಕುವಾಗ ಅಷ್ಟು ಸಮಯ ಬಳಕೆಗೆ ಬಂದ ಆ ವಸ್ತುವಿನ ಕುರಿತು ಕೃತಜ್ಞತೆ ಇರಲಿ ಎನ್ನುತ್ತಾಳೆ ಮೇರಿ.

ಕೊಳ್ಳುಬಾಕತನ ಹೆಚ್ಚುತ್ತಿರುವಂತಹ ಸನ್ನಿವೇಶದಲ್ಲಿ ಮಿನಿಮಲಿಸಂ(ಕಡಿಮೆ ವಸ್ತುಗಳ ಬಳಕೆ) ಅನ್ನು ಪ್ರತಿಪಾದಿಸುವಂತಹ ಪರಿಕಲ್ಪನೆಗಳು ತುಂಬಾ ಕುತೂಹಲದ ವಿಷಯಗಳಾಗಿವೆ.

ವಿಶ್ವದ ಕೇವಲ 5% ಜನಸಂಖ್ಯೆ ಇರುವ ಅಮೇರಿಕಾವು ವಿಶ್ವದ 25% ಸಂಪನ್ಮೂಲದ ಬಳಸುಗ. ಅಂದರೆ ಅಲ್ಲಿ ಬಿಸಾಕುವ ಅಗತ್ಯತೆ ಮತ್ತು ಮಿನಿಮಲಿಸಂನಂತಹ ಪರಿಕಲ್ಪನೆಗಳ ಅಗತ್ಯ ಎಷ್ಟಿರಬಹುದು!

ಭಾರತದಂತಹ ಬಡದೇಶದಲ್ಲಿ ದೇಶದ ಬಹುಪಾಲು ಜನರಿಗೆ ಏನಾದರೂ ಬಿಸಾಕುವ ಪರಿಸ್ಥಿತಿಯೇ ಇಲ್ಲ. ಒಂದು ಕಡೆ ಏರುತ್ತಿರುವ ಜನಸಂಖ್ಯೆ, ಇನ್ನೊಂದೆಡೆ ಬಡವ-ಶ್ರೀಮಂತರ ನಡುವೆ ಹೆಚ್ಚುತ್ತಿರುವ ಕಂದಕ. ಮೂಲಭೂತ ವಸ್ತುಗಳ ಅಗತ್ಯತೆಯೇ ಪೂರೈಸದಿದ್ದರೆ ಬಿಸಾಕಲು, ಜೋಡಿಸಿಡಲು ಇರುವುದಾದರೂ ಏನು? ಆದರೆ ಇಲ್ಲಿನ ಮಧ್ಯಮ-ಮೇಲ್ಮಧ್ಯಮ ಶ್ರೀಮಂತ ವರ್ಗಕ್ಕೆ ಸಂಪನ್ಮೂಲಗಳ ಲಭ್ಯತೆ ಹೇರಳವಾಗಿದೆ. ದೇಶದ ಸಂಪತ್ತು ಈ ವರ್ಗದಲ್ಲೇ ಕ್ರೋಢೀಕರಿತವಾಗಿರುವುದರಿಂದ ಇವರೇ ವಸ್ತುಗಳ ಗ್ರಾಹಕರು ಮತ್ತು ಅವನ್ನು ಗುಡ್ಡೆ ಹಾಕಿಕೊಳ್ಳುವುದು ಇದೇ ವರ್ಗ.

ಈಗ ವಿದೇಶಗಳಂತೆ ಭಾರತದಲ್ಲೂ ಡಿಕ್ಲಟರಿಂಗ್ ಸಲಹಾಕಾರರು ಹುಟ್ಟಿಕೊಳ್ಳುತ್ತಿದ್ದಾರೆ. ಅವರು ನಿಮ್ಮ ಮನೆಗೆ ಬಂದು, ಬೇಕು-ಬೇಡಗಳನ್ನು ಪ್ರತ್ಯೇಕಿಸಿ, ಮನೆಯನ್ನು ಒಪ್ಪವಾಗಿ ಜೋಡಿಸಿ ಹೋಗುತ್ತಾರೆ. ಮನೆಯ ಸ್ಥಿತಿ ಅನೇಕ ದಿನಗಳ ಕಾಲ ಹದಗೆಡದಂತೆ ಕಾಪಿಡುವ ವಿಧಾನಗಳನ್ನು ನಿಮಗೆ ಹೇಳಿಕೊಡುತ್ತಾರೆ.

ಅನೇಕ ಸಂಶೋಧನೆಗಳ ಪ್ರಕಾರ ಡಿಕ್ಲಟರಿಂಗ್ ಅನ್ನುವುದು ನಮ್ಮ ಉತ್ಪಾದಕತೆ ಅಂದರೆ ನಮ್ಮ ದಿನನಿತ್ಯದ ಕೆಲಸದಲ್ಲಿನ ದಕ್ಷತೆಯನ್ನು ಹೆಚ್ಚಿಸುತ್ತದೆ. ಮನೆ ಸ್ವಚ್ಛವಾಗಿ ಒಪ್ಪ ಓರಣವಾಗಿದ್ದರೆ ಮನಸ್ಸು ಶಾಂತವಾಗಿರುತ್ತದೆ. ಹೆಚ್ಚು ಕಾರ್ಯ ತತ್ಪರವಾಗಿರುತ್ತದೆ. ಇದು ತೀರಾ ಹೊಸ ಪರಿಕಲ್ಪನೆ ಏನೂ ಅಲ್ಲ. ನಾವು ಬಹಳ ಶತಮಾನಗಳಿಂದಲೂ ಬೆಳಿಗ್ಗೆ ಎದ್ದು, ಮನೆಯ ಕಸ ಹೊಡೆದು, ಒರೆಸಿ, ಸ್ವಚ್ಛವಾಗಿಸಿ, ಕೆಲವು ಸಂಸ್ಕೃತಿಗಳಲ್ಲಿ ರಂಗೋಲಿ ಬಳಿದು, ಸ್ನಾನ ಮಾಡಿ ದಿನವನ್ನು ಆರಂಭಿಸುವುದು ನಮ್ಮ ರೂಢಿಯೇ ಆಗಿತ್ತು. ಡಿಕ್ಲಟರಿಂಗ್ ಎನ್ನುವುದು ಈ ರೀತಿಯ ಒಂದು ರಿವಾಜಿನ ವಿಸ್ತರಣೆ ಅಥವಾ ಬದಲಾದ ರೂಪ ಅಷ್ಟೇ.

ಇದಕ್ಕೆ ಬೇರೆ ಬೇರೆ ರೀತಿಯ ವೇಳಾಪಟ್ಟಿಯನ್ನು ಹಾಕಿಕೊಳ್ಳುವವರಿದ್ದಾರೆ. ಕೆಲವರಿಗೆ ಇದು ಪ್ರತಿನಿತ್ಯದ ಕೆಲಸ. ಇನ್ನು ಕೆಲವರಿಗೆ ಇದು ವಾರಾಂತ್ಯದ ಕೆಲಸ. ಬಹಳಷ್ಟು ಮಂದಿ ಇದನ್ನು ವರ್ಷಕ್ಕೊಮ್ಮೆಗೆ- ದೀಪಾವಳಿಗೋ ಅಥವಾ ಮತ್ತೊಂದು ಸಂದರ್ಭಕ್ಕೋ ಮೀಸಲಿಡುತ್ತಾರೆ. ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕ ಹಾಗೆ ಬದುಕು.

ನಮ್ಮ ಸಮಾಜದ ಸಣ್ಣ ಅಂಶದಷ್ಟು ಜನಕ್ಕೆ ಕೊಳ್ಳುವ ಶಕ್ತಿ ಅಂದರೆ ಪರ್ಚೆಸಿಂಗ್ ಪವರ್ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಈ ಪರಿಕಲ್ಪನೆ ಅತ್ಯಂತ ಅಗತ್ಯದ್ದಾಗಿ ನನಗೆ ಕಾಣಿಸುತ್ತದೆ. ಮಧ್ಯಮ ಮತ್ತು ಮೇಲ್ ಮಧ್ಯಮ ವರ್ಗಕ್ಕೆ ಕೊಳ್ಳುವ ಶಕ್ತಿ ಹೆಚ್ಚಾಗುತ್ತಿದೆ, ಉಳಿತಾಯದ ಮನೋಭಾವ ಕಡಿಮೆಯಾಗುತ್ತಿದೆ. ಎಷ್ಟಂದರೆ ಅನೇಕ ಮಂದಿಗೆ ಒಂದು ಬಟ್ಟೆಯನ್ನು ಒಂದೇ ಸಾರಿ ಬಳಸಿ ಪೇರಿಸಿಡುವ ಅಭ್ಯಾಸ. ಆಗಾಗ ಡಿಕ್ಲಟರಿಂಗ್ ಅನ್ನು ಮಾಡುತ್ತಾ ಇದ್ದರೆ ತಮ್ಮ ಪ್ರಿವಿಲೇಜ್‌ ಏನು ಅನ್ನುವುದರ ಅರಿವು ಆಗಬಹುದು. ಅನಗತ್ಯವಾಗಿ ಕೊಳ್ಳುವ ಮನಸ್ಥಿತಿ ಕಮ್ಮಿಯಾಗಿ ಕೊಂಡು ಹಂಚುವ ಮನಸ್ಥಿತಿ ಹೆಚ್ಚಾಗಬಹುದು. ಅನಗತ್ಯ ವಿಷಯಗಳನ್ನು-ವಸ್ತುಗಳನ್ನು ಬಿಸಾಕುವ ಮೂಲಕ ಅವುಗಳನ್ನು ಮತ್ತೊಮ್ಮೆ ಕೊಂಡುಕೊಳ್ಳದೆ ಇರುವಂತಹ ಮನಸ್ಥಿತಿ ಬರುತ್ತದೆ ಎನ್ನುವ ಆಶಯ ನನಗಿದೆ. ಮುಂದಿನ ಬಾರಿ ಕೊಂಡುಕೊಳ್ಳುವಾಗ ಬಿಸಾಕಿರುವುದು ನೆನಪಿಗೆ ಬರಬೇಕು, ದುಡ್ಡು ದಂಡ ಅನ್ನುವುದು ಚುಚ್ಚಬೇಕು. ಕಡಿಮೆ ಬೆಲೆಗೆ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಕೊಂಡುಕೊಂಡು ಮನೆಯನ್ನು, ಮನಸ್ಸನ್ನು ರಾಡಿ ಮಾಡುವಂತಹ ಅಭ್ಯಾಸಗಳು ಕಡಿಮೆಯಾಗಬೇಕು. ಕೊಂಡುಕೊಳ್ಳುವಾಗ ಮನಸ್ಸಿಗೆ ತುಂಬಾ ಸಂತೋಷ ಕೊಡುವಂಥದ್ದನ್ನು, ಒಳ್ಳೆಯ ಗುಣಮಟ್ಟದ್ದನ್ನು ಮಾತ್ರವೇ ಕೊಂಡು, ಅದನ್ನು ಚೆನ್ನಾಗಿ ಕಾಪಿಡುವಂತಹ ಸಾವಧಾನತೆಯನ್ನು ಬೆಳೆಸಿಕೊಳ್ಳುವುದು ಕೊಳ್ಳುಬಾಕತನದಿಂದ ಪೀಡಿತವಾಗಿರುವ ಸಮಾಜಕ್ಕೆ ಒಂದು ಮದ್ದಾಗಬಹುದು.

ಜೊತೆಗೆ ಇದು ಮಾಲಿನ್ಯದಿಂದ ಬಳಲುತ್ತಿರುವ ಭೂಮಿಗೆ ಒಂದು ಮದ್ದೂ ಆಗಬಹುದು. ಇಂದು ಮನುಷ್ಯನ ಆಸೆಬುರುಕತನದಿಂದ, ಮಿತಿಮೀರಿದ ಸಂಪನ್ಮೂಲ ಬಳಕೆಯಿಂದ ಸಮುದ್ರದ ಜೇವಿಗಳಿಂದ ಹಿಡಿದು ಕುಡಿಯುವ ನೀರಿನವರೆಗೆ ಎಲ್ಲವೂ ಅಪಾಯದಲ್ಲಿವೆ. ಡಿಕ್ಲಟರಿಂಗ್ ಒಂದು ಪ್ರಜ್ಞಾಪೂರ್ವಕ ತತ್ವವಾದಲ್ಲಿ ಇವೆಲ್ಲ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರಬಹುದು.

ಹಾಗೆಯೇ ಡಿಕ್ಲಟರಿಂಗ್ ಕೇವಲ ಬಾಹ್ಯ ತತ್ವವಾಗಿ ಉಳಿಯದೆ ಆಂತರಿಕ ತತ್ವವಾಗಿಯೂ ಇಳಿಯಬೇಕಾಗಿದೆ. ನಮಗೆ ಯಾವುದು ಸಂತೋಷವನ್ನು ತರುವುದಿಲ್ಲವೋ ಅದನ್ನು ನಮ್ಮ ಸಿಸ್ಟಮ್‌ನಿಂದ ಹೊರತಳ್ಳುವಂತಹ ಧೈರ್ಯ ಮತ್ತು ಸಾವಧಾನತೆಯನ್ನು ನಮ್ಮದಾಗಿಸಿಕೊಳ್ಳುವುದೂ ಮುಖ್ಯ. ಒಳಗಿನ ಕೊಳೆಯನ್ನೂ ತೊಳೆದುಕೊಳ್ಳುವ, ಅನಗತ್ಯ ಋಣಾತ್ಮಕ ಆಲೋಚನೆಗಳನ್ನು ಹೊರತಳ್ಳುವ ಸ್ವಚ್ಛತಾ ಕಾರ್ಯಕ್ರಮವೂ ನಮ್ಮ ಬದುಕಿನ ಭಾಗವಾಗಬೇಕಿದೆ.