ಚಿನ್ಹೆ

ಕೈಬರಹದಲ್ಲಿ ಬರೆಯುವಾಗ ತಂತಾನೆ ಚಿನ್ಹೆಗಳು
ಬೆರಳ ತುದಿಯಿಂದ ಬಂದೇ ಬರ್ತವೆ.
ಮನಸು ತಡವರಿಸಿದಾಗ ಅಲ್ಪವಿರಾಮ, ಒಕ್ಕಣೆ ಮುಗಿದ
ಭಾಸವಾದರೆ ಪೂರ್ಣ ವಿರಾಮ, ಹೀಗೆ ಶ್ವಾಸದ ಏರಿಳಿತದ ಲಯದಲ್ಲಿ
ಮೂಡುತ್ತ ಪ್ರವಾಹವನ್ನು ತಾಬೆಯಲ್ಲಿ ಇಟ್ಟುಕೊಳ್ಳುತ್ತವೆ
ಉದ್ವೇಗ ಹೆಚ್ಚಾದಾಗ ಅಲ್ಪ ಮತ್ತು ಪೂರ್ಣ ವಿರಾಮಗಳಲ್ಲಿ
ಗೊಂದಲವಾದೀತು. ಉದ್ಗಾರವಾಚಕ ಚಿನ್ಹೆಯೂ
ಪೇಲವ ಅನಿಸೀತು
ಕಣ್ಣೆದುರೇ ಮೂಡಿ ಅವಾಕ್ಕಾಗಿಸುವ ಅನಿರ್ವಚನೀಯದ ಮುಂದೆ!

ಅಮ್ಮನ ಅವಮಾನವನ್ನು ಕಂಡು ನಖಶಿಖಾಂತ ಕಂಪಿಸುವ
ಎಳೆ ಕಂಗಳ ಎವೆಗಳನ್ನು ಯಾವ ಟಿಮ್.ಟಿಮ್.ಟಿಮ್. ಬಿಂದುಗಳೂ
ಅಭಿನಯಿಸಲಾರವು
ಕಪಾಟೇ ಇಲ್ಲದ ಗುಳೆ ಕುಟುಂಬದ ಸಣ್ಣ ಡಬ್ಬಿಯಲ್ಲಿ
ಯಾವ ಚಿನ್ಹೆಗಳನ್ನೂ ಬಚ್ಚಿಡಲಾಗದು
ಆಡದ ಮಾತುಗಳಿಗೇಕೆ ಬೇಕು ಉದ್ಧರಣ ಚಿನ್ಹೆ. ಆಡಿದರೂ
ಯಾವುದು ಉವಾಚ ಯಾವುದು ಸ್ವಗತ
ಬಗೆಹರಿಯುವುದಿಲ್ಲ ಹಾಗೆಲ್ಲ ಬೇಗ.
ಕಂಸಗಳಲ್ಲಿ, ಮೀಸೆ ಕಂಸಗಳಲ್ಲಿ ನಡೆಯಲಿ ಉತ್ಕಟ
ಮೋಹದ ಉತ್ಕಂಠಿತ ತೊದಲಾಟ….
ಹೂವಿನಲಿ ನಸುಗಂಧ ಅವಿತಿಟ್ಟುಕೊಂಡಂತೆ. ಮೀಸೆ ಕಂಸಕ್ಕೆ
ಕೆಲವುಕಡೆ ಪುಷ್ಪಾವರಣ ಅನ್ನುತ್ತಾರೆ ಎಷ್ಟು ಚಂದ

ಕಾಣದ ಅರ್ಧವಿರಾಮಗಳುಂಟು ಆಪ್ತೇಷ್ಟರ ನಡುವೆ
ಮೂಡುವ ಕೂಡು ಗೆರೆಗಳುಂಟು ಅಪರಿಚಿತರ ನಡುವೆ

ಕಾರ್ಯಕ್ರಮ ಮುಗಿದ ನಂತರ ಮಂಟಪಗಳಲ್ಲಿ
ಕಸಬರಿಗೆಯಿಂದ ಒಡೆದ ಗಾಜಿನ ಚೂರುಗಳನ್ನು ಗುಡಿಸುವಂತೆ
ಚಿನ್ಹೆಗಳನ್ನು ಗುಡಿಸಲಾಗುತ್ತದೆ
ಎಷ್ಟು ನಿಗಾ ವಹಿಸಿದರೂ ತಪ್ಪಿ ಉಳಿದ ಸೂಕ್ಷ್ಮ ಕೆಲವು
ಬೆಳಕಿನ ಕೋನವನ್ನು ಅವಲಂಬಿಸಿ
ಮಿನುಗುತ್ತವೆ ಕತ್ತಲೆಯಲ್ಲಿ ಮೂಗುತಿಯಂತೆ

ದಣಿದ ಮಾತು ಆಗಾಗ ಚೂರು ಮೌನಕ್ಕೆ
ಆತುಕೊಳ್ಳಲಿ, ಎಂದೇ ಇದ್ದೀತು ಚಿನ್ಹೆಗಳ ಹುನ್ನಾರ.
ಪ್ರವಾಹಗಳ ವಿರುದ್ಧ ಈಸುವ ಮೀನುಗಳಿಗೆ ಪೇಟೆಯಲ್ಲಿ
ಡಿಮಾಂಡು ಕಡಿಮೆಯಾಗಿದೆಯಂತೆ. ಏಕೆಂದರೆ ಅವು ಕೊಬ್ಬಿಳಿಸಿಕೊಂಡು
ಫಿಟ್ ಆಗಿರುತ್ತವೆ ಪಾರದರ್ಶಕ ಕಾಗದಗಳಂತೆ

ಗೊತ್ತಿಲ್ಲದ ಕಥೆಗಳ ಕದಗಳನ್ನೇಕೆ ಬಡಿಯುತ್ತೇವೆ
ನಿರ್ಜನ ಮನೆಗಳಲ್ಲಿ ನಿಂತು ಏನನ್ನು ಆಲಿಸುತ್ತೇವೆ

ಹಿಂದೆ ಮುದ್ರಣಾಲಯಗಳಲ್ಲಿ ಕಣ್ಣಲ್ಲಿ ಎಣ್ಣೆ ಹಾಕಿ
ಹೆಕ್ಕಿ ತಿಕ್ಕಿ ಚಿನ್ಹೆಗಳ ಮೊಳೆ ಜೋಡಿಸುತಿದ್ದ ಮಹನೀಯರು
ಮಸಿ ಕಾಗದ ಮ್ಯಾಟರು ಹಸಿ ಘಾಟಿನಲ್ಲೆ ಸವೆದರು
ಕೂದಲೆಳೆಯಷ್ಟು ಲೆವಲ್ಲು ಫರಕಾದರೂ ಸಾಕು ಚಿನ್ಹೆ
ಮೂಡದೆ, ಒಂದು ಇಟ್ಟಿಗೆ ಸರಿದರೆ ಇಡೀ ಇಮಾರತು
ಕುಸಿಯುವಂತೆ, ಒಂದು ಪದ ತೆಗೆದರೆ ಇಡೀ ಕವಿತೆ
ಕುಸಿಯುವಂತೆ ಮ್ಯಾಟರು ಹತಪ್ರಭವಾಗುತ್ತಿತ್ತು
ಶ್ರಾವಣದ ಒಂದು ಮಧ್ಯಾಹ್ನ ಹ್ಯಾಂಡ್ ಬಿಲ್ ಕಂಪೋಸ್ ಮಾಡುತ್ತಿದ್ದ
ಪೋರ ಕೂಗಿದ: “ಪೂರ್ಣ ವಿರಾಮ ಕಡಿಮೆ ಬೀಳ್ತಾ ಉಂಟು,
ಜಾಸ್ತಿ ತರಿಸಿ.”

ಹಿಂದಿಲ್ಲದೆ ಮುಂದಿಲ್ಲದೆ ಮ್ಯಾಟರಿನ ಹಂಗಿಲ್ಲದೆ
ಸರ್ವತಂತ್ರ ಸ್ವತಂತ್ರವಾಗಿ ಎಂದಿಗೂ ನಿಲ್ಲುವುದು
ಪ್ರಶ್ನಾರ್ಥಕ ಚಿನ್ಹೆ ಮಾತ್ರ
ಯಾವ ಬಸ್ಸಿಗೂ ಕಾಯದೆ ತಂಗುದಾಣದಲ್ಲೋ
ಬೀದಿ ಬದಿಯಲ್ಲೋ ಒಂಟಿಯಾಗಿ ನಿಂತ ಜೀವ ಅದು
ಪೂರ್ಣವಿರಾಮದಲ್ಲೇ ಅರಳಿದ ಅನಂತ

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)