ಅವ್ವನ ಸಿಡಿಮಿಡಿ, ಪ್ರತಿರೋಧ, ಆಘಾತ ಇವ್ಯಾವುದೂ ಕಾಣಿಸುವ ಸ್ಥಿತಿಯಲ್ಲೇ ಚಿತ್ತಿ ಇರಲಿಲ್ಲ. ಆಕಾಶದಿಂದಲೇ ತೂಗುಬಿದ್ದಿದ್ದ ಜೋಕಾಲಿಯೊಂದರ ಮೇಲೆ ಅವಳಾಗಲೇ ಕೂತುಬಿಟ್ಟಿದ್ದಳು. ಅದು ದಾಂಡೇಲಿಯಿಂದ ಬೆಳಗಾಂವ ತನಕ ಜೀಕುತ್ತಿತ್ತು. ನಡುವೆ, ಧಾರವಾಡದ ಕಿಲ್ಲೆಯ ನೆತ್ತಿಯನ್ನು ಚೂರು ಸವರಿ ಹೋಗುತ್ತಿತ್ತು.
ಇತ್ತೀಚೆಗಷ್ಟೇ ಬಿಡುಗಡೆಯಾದ ಜಯಂತ ಕಾಯ್ಕಿಣಿ ಹೊಸ ಪುಸ್ತಕ ‘ಅನಾರ್ಕಲಿಯ ಸೇಫ್ಟಿಪಿನ್‌ʼ ಕಥಾ ಸಂಕಲನದ ಒಂದು ಕತೆ ನಿಮ್ಮ ಈ ಭಾನುವಾರದ ಓದಿಗೆ

 

ರಾಮಗೋಪಾಲ ವರ್ಮಾನ ಹಳೆಯ, ಪ್ರಾರಂಭಿಕ ಚಿತ್ರಗಳ ಯಾವುದೇ ದೃಶ್ಯವೊಂದರಂತೆ ರವ್ಯಾ ಓಡುತ್ತಿದ್ದ. ಸಾಲು ಅಂಗಡಿಗಳ ಎದುರಿನ ಫುಟ್‍ ಪಾತಿನಲ್ಲಿ ಬೇಕಾಬಿಟ್ಟಿ ನಿಲ್ಲಿಸಿದ್ದ ಬೈಕುಗಳ ನಡುವೆ ಎಡೆ ಮಾಡಿಕೊಂಡು, ಅಲ್ಲಲ್ಲಿ ಜನ ಎದುರಾದರೆ ಗಕ್ಕನೆ ಮತ್ತೆ ಮುಖ್ಯ ರಸ್ತೆಗೆ ಬರುತ್ತ, ಅಂಗಡಿಗಳ ನಾನಾ ಬಣ್ಣದ ಬೆಳಕಿನ ಎರವಲು ಪ್ರಭೆಯಲ್ಲಿ ವಿಧವಿಧವಾಗಿ ಮಿನುಗುತ್ತ, ಒಂದೇ ಕಾಲಕ್ಕೆ, ದೂರದಲ್ಲಿದ್ದವರಿಗೆ ಲಾಂಗ್ ಶಾಟಿನಲ್ಲಿ, ಸಮೀಪದಲ್ಲಿದ್ದವರಿಗೆ ಮಿಡ್‍ ಶಾಟಿನಲ್ಲಿ, ಎದುರು ಸಿಕ್ಕು ಬದಿಗೆ ಸರಿದವರಿಗೆ ಕ್ಲೋಸ್ ಅಪ್‍ ನಲ್ಲಿ ಕಾಣುತ್ತ ಓಡುತ್ತಿದ್ದ. ಟಿಕಾರೆ ಬಂಧು, ವಿದ್ಯಾವರ್ಧಕ ಸಂಘ ದಾಟಿ ಸಿಗ್ನಲ್‍ ನಲ್ಲಿ ದಿಕ್ಕು ಬದಲಿಸಿ ಬೆಂಗಳೂರು-ಪೂನಾ ರಸ್ತೆಯಲ್ಲಿ ತುಸು ಓಡಿ ಏದುಸಿರು ಬಿಡುತ್ತ ಬಾಗಿ ಮೊಣಗಂಟಿಗೆ ಕೈಕೊಟ್ಟು ನಿಂತುಬಿಟ್ಟ. ನಿರ್ಜನ ಫುಟ್‍ ಪಾತಿನಲ್ಲಿ ಹಿಂದೆಯೂ ಜನರಿರಲಿಲ್ಲ, ಮುಂದೆಯೂ ಇರಲಿಲ್ಲ. ತಾವರಗೆರೆ ಕಾಂಪೌಂಡಿನ ಕಟ್ಟಡದ ಗೋಡೆಗಂಟಿದ ಸಿಮೆಂಟಿನ ಏಣಿಯೊಂದು ಸೀದಾ ಆಕಾಶಕ್ಕೇ ಹೋಗುತ್ತಿತ್ತು.

ಇನ್ನೇನು ಮುಂದಿನ ಸಿಗ್ನಲ್‍ ನಲ್ಲಿ ಬಲಕ್ಕೆ ಹೊಳ್ಳಿ ಒಂದಿಷ್ಟು ಓಡಿದರೆ ಕಿಲ್ಲೆ ಪ್ರದೇಶದ ಹಳೆ ಶಿಥಿಲ ಕೋಟೆಯ ಆವಾರದಲ್ಲಿ ಗಿಡಗಂಟಿಗಳಂತೆ ಹಬ್ಬಿರುವ ಚಾಳಿನಲ್ಲಿ ಅವನ ಮನೆ ಸಿಗುತ್ತದೆ. ಅಲ್ಲಿ ಮನೆಯೆದುರಿನ ನಳದಲ್ಲಿ ಫಳಫಳ ಸುರಿಯುವ ನೀರಿನಲ್ಲಿ ಅವ್ವ ರವ್ಯಾನ ಜೀನ್ಸು ಮತ್ತು ಟೀಶರ್ಟು `ಉಸ್‍ ಉಸ್’ ಎಂದು ತೊಳೆಯುತ್ತ ಹಿಂಡುತ್ತಿರುತ್ತಾಳೆ. ಆ ಸಪೂರ ಕೈಗಳಲ್ಲಿ ಅದೆಂಥ ಕಸುವು, ಹಿಂಡಿದಷ್ಟೂ ಚಿಮ್ಮುತ್ತದೆ ನೀರು ಬಟ್ಟೆಯಿಂದ. ಅಂತಃಕರಣದ ಬಗ್ಗಡವೆಲ್ಲ ಬಸಿದು ಹೋಗುವಂತೆ ಹಿಂಡುತ್ತಾಳೆ ಆಕೆ. ಕೊಡವಿ ಪಸರಿಸಿ ತಂತಿಯ ಮೇಲೆ ಹರಗುವಾಗ, ಏನೋ ಎಲ್ಲಾ ಹೊಸದಾದೀತು ಎಂಬ ಹಗುರ ಭಾವ, ದೇವರ ಪೂಜೆಗಿಂತ ಹೆಚ್ಚಿನ ಸಮಾಧಾನ. ಆಕೆ ಕೇವಲ ತನಗೇ ಅಂತ ಒಂದು ಸಿಂಗಲ್ ಚಾ ಮಾಡಿಕೊಳ್ಳುವ ಸುಮುಹೂರ್ತ ಅದು. ರವ್ಯಾ ತನ್ನ ಉಸಿರನ್ನೆಲ್ಲ ಮತ್ತೊಮ್ಮೆ ಶೇಖರಿಸಿಕೊಂಡವನಂತೆ ನಿಂತಲ್ಲಿಂದ ಮತ್ತೆ ಚಿಮ್ಮುತ್ತ ಮನೆಯ ಕಡೆಗೆ ಓಡಿದ.

“ನನಗೂ ಚಾ ಮಾಡ್” ಎನ್ನುತ್ತ ಅವ್ವನ ಕೈಹಿಡಿದು ಮನೆಯೊಳಗೆ ತಳ್ಳುತ್ತ, “ಸೊಲಿಡ್ ಸುದ್ದಿ ತಂದೇನಿ” ಎನ್ನುತ್ತ ದನಿ ತಗ್ಗಿಸಿದ. ಸಂಭ್ರಮ ಮತ್ತು ಭಯ ಎರಡನ್ನೂ ಸಂಭಾಳಿಸುತ್ತ ಅವ್ವ ಸರಕ್ಕನೆ ಕಬ್ಬಿಣದ ಕಾಟಿನ ಮೇಲೆ ಕೂತು “ಚಿತ್ತಿ ಸಿಕ್ಕಿದ್ಲ?” ಎಂದಳು. “ಬಾತ್ಮಿ ಸಿಕ್ಕೇತಿ. ನಾವು ಲಗೂ ಜಳಕಾ ಮಾಡಿ ಹೋದ್ರೆ ಸಿಕ್ತಾಳೆ” ಎಂದ ರವ್ಯಾ ಪುಟ್ಟ ಬಚ್ಚಲಿಗೆ ನುಗ್ಗಿದ. “ಆರಾಮದಾಳೊ ಇಲ್ಲೊ” ಎಂದ ಅವ್ವನ ಪ್ರಶ್ನೆಗೆ “ಇರದೇ ಏನ್ ಧಾಡಿ, ಹಾಸ್ಪಿಟ್ಯಾಲಿಟಿ ಇಂಡಸ್ಟ್ರಿ ಒಳಗ ಅದಾಳಂತೆ” ಎಂದ. ಹಾಸ್ಪಿಟಲ್ ಅಂತ ಕೇಳಿದಂತಾಗಿ ಅವ್ವಗೆ ಕಸಿವಿಸಿ ಆಯ್ತು. ಈ ಹಾಸ್ಪಿಟಲ್ ಎಂಬ ಶಬ್ದಕ್ಕೇ ಸ್ಪಿರಿಟ್ಟು, ಮದ್ದು, ಫಿನೈಲಿನ ವಾಸನೆ ಅಂಟಿಕೊಂಡಿರುತ್ತದೆ. ಯಾವುದೇ ಆಸ್ಪತ್ರೆಯನ್ನು ರಸ್ತೆಯಲ್ಲಿ ಹಾಯುವಾಗಲೂ ಆಳವಾದ ಕಳವಳವೊಂದು ಮೂಡುತ್ತದೆ. ಚಿತ್ತಿ ಆಸ್ಪತ್ರೆಯಲ್ಲಿ ಏನು ಕೆಲಸ ಮಾಡಿಕೊಂಡಿರಬಹುದು ಅಥವಾ ಅಡ್ಮಿಟ್ ಆಗಿದ್ದಾಳೋ. ಒಂದು ವೇಳೆ ಹೆರಿಗೆಗೆ ಅಂತ ಅಡ್ಮಿಟ್ ಆಗಿದ್ದರೆ ಎಂಬ ವಿಚಾರ ಬಂದಿದ್ದೇ ಅವ್ವನಿಗೆ ಕಣ್ಣು ತುಂಬಿ ಬರತೊಡಗಿತು. ಏಕೆಂದರೆ, ಎಂಥಾ ವಿಷಮ ಸಂಬಂಧಗಳನ್ನೂ ಮಾಯಿಸಿ ಸರಿಪಡಿಸುವ ಕೆಲಸವನ್ನು ಒಂದು ಮಗು ಮಾಡುತ್ತದೆ ಎನ್ನುವುದು ಲೋಕಮತ. ಮೂರೂವರೆ ವರ್ಷದ ಹಿಂದೆ ದಾಂಡೇಲಿಯ ಹುಡುಗನೊಬ್ಬನ ಜಿದ್ದಿನ ಬೈಕಿನ ಹಿಂದೆ ಕೂತು ಹೋದವಳು ಮನೆಗೆ ವಾಪಸಾಗಿರಲಿಲ್ಲ. ಅವಳು ಹೋದ ಕೆಲವು ತಿಂಗಳಲ್ಲೆ ಕಾಡಸಿದ್ಧೇಶ್ವರ ಜಾತ್ರೆಗೆ ಹುಬ್ಬಳ್ಳಿಗೆ ಹೋಗಿದ್ದ ಚಾಳಿನ ಹೆಂಗಸರು ಅಲ್ಲಿ ಹಣ್ಣುಕಾಯಿ ಹಿಡಕೊಂಡು ಲೈನಿನಲ್ಲಿ ನಿಂತಿದ್ದ ಚಿತ್ತಿಯನ್ನು ನೋಡಿ ಮಾತಾಡಿಸಿ ಬಂದಿದ್ದರು. “ಕೊಳ್ಳಾಗ ಮಂಗಳಸೂತ್ರ ಇತ್ತು. ಆರಾಮ ಅದಾಳ ಬಿಡ” ಎಂದು ಸಮಾಧಾನ ಮಾಡಿದರು. ಈ ಸಮಾಧಾನ ಅನ್ನೂದು, ಆದರೆ ಅದಾಗೇ ಆಗಬೇಕು, ಮಾಡಕೊಳ್ಳಲಿಕ್ಕೆ ಅಧೆಂಗ ಆಗ್ತದ ಎಂದು ಅವ್ವನಿಗೆ ಮಂದಿ “ಸಮಾಧಾನ ಮಾಡ್ಕೋ” ಎಂದಾಗೆಲ್ಲ ಅನಿಸಿದ್ದುಂಟು.

ಅಪ್ಪನನ್ನು ಚಿತ್ತಿ, ರವ್ಯಾ ಇಬ್ಬರೂ ಬಾಬಾ ಅಂತ ಕರಿತಿದ್ರು. ಈ ಬಾಬಾ ಸಾಂಗ್ಲಿ ಸಾತಾರಾ ಕಡೆಯಲ್ಲೆ ನೌಕರಿ ಮಾಡುತ್ತ ಅಲ್ಲಿಂದಲೇ ಧಾರವಾಡದ ತನ್ನ ಸಂಸಾರ ನಡೆಸಿದವನು. ಸಾತಾರಾದಲ್ಲಿ ಟಾಕೀಸ್ ಒಂದರಲ್ಲಿ ಬಹುಕಾಲ ದುಡಿದವನು. ಅಲ್ಲಿ ಬೆಳಗಿನ ಶೋಗೆ ಹಳೆ ಹಿಂದಿ ಸಿನೆಮಾ ಹಾಕುತ್ತಿದ್ದರು. ಅದನ್ನು ತಪ್ಪದೆ ನೋಡುವ ಖಯಾಲಿ ಇತ್ತು. ಸ್ತ್ರೀ, ಆಮ್ರಪಾಲಿ, ಚಿತ್ರಲೇಖಾ ಇವನ್ನೆಲ್ಲ ಅಲ್ಲೇ ನೋಡಿದ್ದು. ಚಿತ್ರಲೇಖಾ ಮಾತ್ರ ಅವನನ್ನು ತುಂಬಾ ಆವರಿಸಿತ್ತು. ಆ ಗುಂಗಿನಲ್ಲೇ, ಮಗಳಿಗೆ ಚಿತ್ರಲೇಖಾ ಅಂತ ಹೆಸರಿಟ್ಟ. ಮುದ್ದಿನ ಭರಾಟೆಯಲ್ಲಿ ಅದು ಚಿತ್ತಿಯಾಗಿ ಎಲ್ಲರ ಬಾಯಲ್ಲಿ ಚಾಲ್ತಿಯಲ್ಲುಳಿಯಿತು. ಆದರೂ ಆಗಾಗ ಬಾಬಾ “ಚಿತ್ರಲೇಖಾ…” ಎಂದು ಕರೆಯುವುದಿತ್ತು. ಹೊಸ ಸೊಸೆಯನ್ನು ಅತ್ತೆಮಾವ ಮಾತ್ರ, ತಾವಿತ್ತ ಹೊಸ ಹೆಸರಿನಿಂದ ಕರೆಯುವಾಗಿನ ಸಣ್ಣ ಗತ್ತು ಅದರಲ್ಲಿರುತ್ತಿತ್ತು. ಹೊಸ ಪಾತ್ರವನ್ನು ಜವಾಬ್ದಾರಿಯನ್ನು ಜ್ಞಾಪಿಸಿ ಕಂಗೆಡಿಸುವಂತೆಯೂ ಅನಿಸುತ್ತಿತ್ತು.

ಮನಸ್ಸು ಮಾಡಿದ್ದರೆ ಬಾಬಾ ತನ್ನ ಪುಟ್ಟ ಸಂಸಾರವನ್ನು ಸಾಂಗ್ಲಿಯಲ್ಲಿಯೇ ಸಾಗಿಸಬಹುದಾಗಿತ್ತು. ಆದರೆ, ಅವನಿಗೆ ಧಾರವಾಡ ಅಂದ್ರೆ ಜೀವ. ಪ್ರತಿಸಲ ಧಾರವಾಡ ಬಿಟ್ಟು ಸಾಂಗಲಿಗೆ ಹೊರಡುವಾಗ ಸಂಕಟವಾಗಿ ಬಿಡುತ್ತಿತ್ತು. ಧಾರವಾಡ ಬಸ್‍ಸ್ಟ್ಯಾಂಡಿನಲ್ಲಿ ಕಿಟಕಿಗೆ ಬಂದು ಭಿಕ್ಷಾ ಬೇಡುವವರ ಬಗ್ಗೆಯೂ ಅಸೂಯೆ ಆಗುತ್ತಿತ್ತು- ಇವರಿಗೆಲ್ಲಾ ಇಲ್ಲೇ ಊರಲ್ಲೇ ಇರುವ ನಸೀಬು ಇದೆ – ಎಂದು. ಮರುಕ್ಷಣವೇ ಮತ್ತೆ ಮುಂದಿನ ತಿಂಗಳು ಬರುತ್ತೇನಲ್ಲ ಹೊಸ ಆಟಿಗೆ, ಮಹಾಲಕ್ಷ್ಮೀ ಚಿವ್‍ಡಾದೊಂದಿಗೆ – ಎಂದು ವಿಚಾರ ಮಾಡಿದಾಗ ಪ್ರಾಣ ವಾಪಸು ಬರುತ್ತಿತ್ತು. ಎಲ್ಲ ಸಾಂಗ್ಲಿಗೆ ವರ್ಗಾಯಿಸಿಬಿಟ್ಟರೆ ಈ ಧಾರವಾಡದಲ್ಲಿ ನನಗಾಗಿ ಕಾಯುವವರು ಯಾರೂ ಇರುವುದಿಲ್ಲವಲ್ಲ, ಧಾರವಾಡಕ್ಕೆ ಮರಳಲು ನೆಪವೇ ಇರದಲ್ಲ ಎಂದು ಅನಿಸಿ ಕಿಲ್ಲೆ ಪ್ರದೇಶದ ಪುಟ್ಟ ಚಾಳಿನ ತನ್ನ ಮನೆಯನ್ನೇ ತನ್ನ ವಿಶ್ವದ ಕೇಂದ್ರವಾಗಿಸಿಕೊಂಡ. ಹೀಗಾಗಿ ಸಾಂಗ್ಲಿಯ ತನ್ನ ಖೋಲಿ ವಾಸವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ನಿಭಾಯಿಸಿದ. ಹೆಚ್ಚಿನ ವೇಳೆಯನ್ನು ಟಾಕೀಸಿನಲ್ಲೇ ಕಳೆಯುತ್ತಿದ್ದ. ಗಲ್ಲಾಪೆಟ್ಟಿಗೆ, ಪೋಸ್ಟರ್ ಹಚ್ಚೋದು, ಗೇಟ್ ಕೀಪಿಂಗ್, ಅಗತ್ಯ ಬಿದ್ದರೆ ಪ್ರೊಜೆಕ್ಷನ್ ಕೋಣೆಯಲ್ಲಿ ರೀಲು ಸುತ್ತೋದು… ಎಲ್ಲವನ್ನೂ ಮಾಡುತ್ತಿದ್ದ. ಕೊನೆ ಶೋ ಆದ ಮೇಲೆ ಜನ ತಮ್ಮ ತಮ್ಮ ಮನೆಗಳತ್ತ ಹೋಗುವಾಗ ಚೂರು ಮಂಕಾಗುತ್ತಿದ್ದ.

ರವಿ ಹುಟ್ಟಿದ ನಂತರ ಬಾಬಾಗೆ ಸ್ಥಳಾಂತರದ ಕುರಿತು ಮರುಚಿಂತನೆ ಮಾಡಲೇ ಬೇಕಾಯಿತು. ಏಕೆಂದರೆ, ಬಾಣಂತಿ ಅವ್ವ ಪಟ್ಟಪಾಡು ಅಷ್ಟಿಷ್ಟಲ್ಲ. ಐದಾರು ವರ್ಷದ ಚಿತ್ತಿಗೂ ಪೂರ್ಣ ಲಕ್ಷ್ಯ ಕೊಡಬೇಕಿತ್ತು. ಬಾಣಂತಿ, ಮಗು ಮತ್ತು ಚಿತ್ತಿ ಮೂವರೂ ಹಸಿರು ಮೃದು ಕುತನಿ ಕುಲಾವಿ ಕಟ್ಟಿಕೊಂಡು ಹೆದರಿದ ಹಕ್ಕಿಗಳಂತೆ ಒತ್ತಾಗಿ ಕೂತಿರುತ್ತಿದ್ದರು. ಬಾಬಾ ಬಂದಾಗ ಮಾತ್ರ ಆ ಹಳೇಕಾಲದ ಇದ್ದಿಲಿನ ಬಾೈಲರ್‍ನಲ್ಲಿ ಹೇಗೋ ಬಿಸಿನೀರು ಬರಿಸುತ್ತಿದ್ದ. ಇಲ್ಲವಾದರೆ ಒಲೆಯ ಮೇಲೇ ಅವ್ವ ಪಾತ್ರೆಯಲ್ಲಿ ಸ್ನಾನಕ್ಕೆ ನೀರು ಕಾಯಿಸುತ್ತಿದ್ದಳು. ಒಂದು ದಿನ ಬಾಬಾ ಇದ್ದಾಗಲೇ ಪಕ್ಕದ ಬಿಡಾರದ ಹೊರ ಮೆಟ್ಟಲಲ್ಲೇ ಕೂತಿರುತ್ತಿದ್ದ ಅಜ್ಜನೊಬ್ಬ ಚಿತ್ತಿಯನ್ನು ಕರೆದು ಪೆಪ್ಪರಮಿಂಟಿನ ಆಮಿಷ ಕೊಟ್ಟು ರಸ್ತೆಯ ಗೂಡಂಗಡಿಯಿಂದ ಒಂದು ಬೀಡಿ ಕಟ್ಟು ತಂದುಕೊಡಲು ಹೇಳಿದ. ಬಾಬಾ ನಖಶಿಖಾಂತ ಕಂಪಿಸಿ ರೇಗಾಡಿಬಿಟ್ಟ. ಚಿತ್ತಿ ಹೆದರಿ ನಡುಗಿದಳು. ಅವ್ವ, “ನೀ ಸಾಂಗ್ಲೀಲಿ ಪಿಚ್ಚರ್ ನೋಡು. ನಾವಿಲ್ಲಿ ಸಾಯಾಕ ಹತ್ತೀವಿ” ಎಂದು ಚೀರಿದಳು. ಧಡೂತಿ ಟ್ಯಾಂಕರುಗಳು, ಟ್ರಕ್ಕುಗಳು, ಹದಿನಾರು ಗಾಲಿಯ ಬಸ್ಸುಗಳು ಹಾಯುವ ರಸ್ತೆಯ ಸಮೀಪ ಚಿತ್ತಿ ಹೋಗಿ ಯಾವುದೋ ಬೀಡಿಪೊಟ್ಣವನ್ನು ತನ್ನ ಮುದ್ದು ಬಳೆಯ ಅಂಗೈ ಚಾಚಿ ಗೂಡಂಗಡಿಯಿಂದ ಇಸಿದುಕೊಳ್ಳುವ ದೃಶ್ಯ ಊಹಿಸಿಕೊಂಡಷ್ಟೂ ಇರಿಯುತ್ತಿತ್ತು. ಮಕ್ಕಳ ಕೈಲಿ ಬೀಡಿ, ತಂಬಾಕು, ಶೆರೆ ತರಿಸಿಕೊಳ್ಳುವವರನ್ನು ಅವನು ಅಸಹನೆಯಿಂದಲೇ ಸಾಕಷ್ಟು ನೋಡಿದ್ದ. ಆದರೆ, ಅದು ಕ್ರೂರ ಅಂತ ಅನಿಸಿದ್ದು ಈಗಲೇ. ಬಹುಶಃ ಇಂತಹ ಜ್ಞಾನೋದಯ ಮಾಡಿಸಲಿಕ್ಕೇ ಪ್ರಕೃತಿ ಮಕ್ಕಳನ್ನು ಕೊಡುತ್ತದೆ. ಹಾಗಂತ ಆ ಅಜ್ಜನ ಬಳಿ ಸಿಡಿಮಿಡಿ ಮಾಡಲು ಹೋದರೆ ಅಜ್ಜ ಬೊಚ್ಚುಬಾಯಲ್ಲಿ, “ನೀನೂ ಎರಡ್ ಶೇದು ಅದ್ರಾಗ” ಎಂದು ಬೆಳ್ಳಿಗಡ್ಡ ಅಲ್ಲಾಡಿಸಿ ನಕ್ಕ. ಇದಾದ ಎರಡು ತಿಂಗಳಲ್ಲಿ ಬಾಬಾ ಧಾರವಾಡಕ್ಕೇ ಬಂದುಬಿಟ್ಟ.

ಅಲ್ಲಿಯ ತನಕ ಧಾರವಾಡ ಅವನಿಗೆ ಸೂಟಿಯ ಮೇಲೆ ಬಂದು ಹುರುಪುಗೂಡಿಸಿಕೊಂಡು ಮತ್ತೆ ಕರ್ಮಭೂಮಿಗೆ ತಿರುಗಿ ಹೋಗಲು ತಯಾರಾಗುವ ಜಾಗವಾಗಿತ್ತು. ಆದರೆ, ಈಗ ವ್ಯಾಕರಣ ಬದಲಾಗಬೇಕಾಯಿತು. ಅಪರಿಚಿತ ಊರಲ್ಲಿ ಕೆಲಸ ಹುಡುಕುವುದರಲ್ಲಿ ಅನಾಮಿಕ ಸ್ವಾತಂತ್ರ್ಯಇರುತ್ತದೆ. ಅಂತಸ್ತು, ಗಿಂತಸ್ತು, ಜನ ಏನಂತಾರೆ ಇತ್ಯಾದಿಗಳ ಗೊಡವೆ ಇಲ್ಲದೆ ಕೆಲಸ ಮಾಡಬಹುದು. ಮತ್ತು ಹಾಗಿದ್ದಾಗಲೇ ಹೊಸ ಹೊಸ ಕೆಲಸಗಳನ್ನು ಕಲಿಯಬಹುದು. ಆದರೆ, ಇಲ್ಲಿ ಧಾರವಾಡದಲ್ಲಿ ಹಾಗಲ್ಲ, `ಏನಪಾ ಎಷ್ಟದಿನಾ ರಜಾ. ಯಾವಾಗ ಬಂದಿ. ಯಾವಾಗ ಹೊಂಟಿ’ ಅಂತ ಕೇಳುವವರ ಕಣ್ಣುಗಳು ಅಂದುಕೊಂಡಷ್ಟು ಸರಳ ಇರುವುದಿಲ್ಲ, `ಹೆಣ್ತೀನ ಅಲ್ಲಿ ಇಲ್ಲಿ ರೊಟ್ಟಿ ತಟ್ಟಾಕ ಕಳಸ್ತಾನ. ಮನ್ಯಾಗ ಕುಂತಾನ’, `ಸಾಂಗ್ಲೀಲಿ ಏನೋ ಎಡವಟ್ ಮಾಡ್ಕೊಂಡ್ ಬಂಧಾಂಗ ಕಾಣ್ತದ’ ಇತ್ಯಾದಿ ಮಾತುಗಳು, ಯಾರೂ ಆಡದಿದ್ದರೂ ಕಿವಿಗೆ ಕೇಳಿಸುತ್ತವೆ. ಹೀಗಾಗಿ ಬಾಬಾ ಕೆಲಸ ಇರಲಿ, ಇಲ್ಲದಿರಲಿ ಚಿತ್ತಿಯನ್ನು ಶಾಲೆಗೆ ಕಳಿಸಿದ್ದೇ ತಾನೂ ಒಂದು ಪುಟ್ಟ ಬುತ್ತಿಯ ಡಬ್ಬಿ ಹಿಡಕೊಂಡು ಮನೆಯಿಂದ ಹೊರಟುಬಿಡುತ್ತಿದ್ದ.

(ಜಯಂತ ಕಾಯ್ಕಿಣಿ)

ಸಿಟಿಬಸ್ ಹಿಡಕೊಂಡು ಕಲಘಟಗಿ ರಸ್ತೆಯಲ್ಲಿ ತಲೆಯೆತ್ತುತ್ತಿರುವ ಕೈಗಾರಿಕೆಗಳತ್ತ, ಹುಬ್ಬಳ್ಳಿ ಕಡೆಗೆ- ಹೀಗೆ ಹೋಗಿ ಕೆಲಸ ಹುಡುಕಿ ಅಲೆದು ಸಂಜೆ ಬರುತ್ತಿದ್ದ. ಸಾಂಗ್ಲಿಯಲ್ಲಿ ಪಬ್ಲಿಸಿಟಿ ವ್ಯಾನ್ ನಡೆಸಿದ್ದರಿಂದ ಡ್ರೈವಿಂಗ್ ಬರ್ತಿತ್ತು. ಹೀಗಾಗಿ, ಮನೇಲಿ ಕಾರಿದ್ದ ಕೆಲವು ನಿವೃತ್ತರು ಹಿರಿಯರು ಅಗತ್ಯಬಿದ್ದಾಗ ಕರೆಯಲಾರಂಭಿಸಿದರು. ಮದುವೆಗೋ, ಸೋಂದಾಕ್ಕೋ, ಬಾದಾಮಿಗೋ, ಬೆಳಗಾವಿಗೋ ಹೋಗಿ ಬರೋದು. ಈ ಹಿರಿಯರ ಮಕ್ಕಳೆಲ್ಲ ಎಂದೋ ಬೆಂಗಳೂರು, ಮುಂಬಯಿ, ವಿದೇಶ ಅಂತ ಹೋಗಿಬಿಟ್ಟಿದ್ದರು. ತಂದೆತಾಯಿಗಳಿಗೆ ಕಾರು ತೆಗೆಸಿಕೊಟ್ಟಿದ್ದರು. ಮಧ್ಯರಾತ್ರಿ ಕಾಲ್ ಮಾಡಿ ಅರ್ಧ ನಿದ್ರೆಯಲ್ಲಿ ಅವ್ವ ಅಪ್ಪಂದಿರನ್ನು ಎಬ್ಬಿಸಿ “ಈ ಸಲ ಧಾರ್ವಾಡ್ ಮಾವಿನ ಹಣ್ಣು ಸೀಸನ್ ಹ್ಯಾಂಗದ? ಬಸ್‍ಸ್ಟ್ಯಾಂಡು ಹೊರಗೊಯ್ದು ಬಿಟ್ಟಾರಂತಲ್ಲಾ! ಬಂಟೂ ಟಾಕ್ ಟು ಅಜ್ಜಾ… ನೋ? ಇರ್ಲಿ ನಾಳಿ ಮಾತಾಡ್ತಾನಂತ. ಮನಿ ಬಾಗ್ಲಾ ಸರಿ ಬಂದ್ ಮಾಡಿರೋ ಇಲ್ಲೋ” ಎಂದು ಬರುವ ನಿದ್ದೆಯನ್ನೂ ಹಾರಿಸುವ ಸಂಭಾಷಣೆ ನಡೆಸುತ್ತಿದ್ದರು. ಇಂಥ ಹಿರಿಯ ನಾಗರಿಕರಿಗೆ ಬಾಬಾನ ಸಹವಾಸ ಹಿತವಾಗುತ್ತಿತ್ತು. ಗೀಝರು, ಸಂಪು, ಫ್ಯಾನು ಇತ್ಯಾದಿಗಳ ಸಣ್ಣಪುಟ್ಟ ರಿಪೇರಿನೂ ಮಾಡಿಕೊಡುತ್ತಿದ್ದ. ಇಂಥ ಹತ್ತಾರು ಕುಟುಂಬಗಳ ಹಂಗಾಮೀ ಸಾರಥಿಯಾಗಿ ಸಹಾಯಕನಾಗಿ ಬಾಬಾ ಜನಪ್ರಿಯನಾಗತೊಡಗಿದ. ಕೆಲವು ಹಿರಿಯ ಸಾಹಿತಿಗಳೂ ಕಾರ್ಯಕ್ರಮಕ್ಕೆ ಹೋಗಿ ಬರಲು ಇವನನ್ನು ಕರೆಯುತ್ತಿದ್ದರು. ಸಾಹಿತಿಗಳನ್ನು ಬರಿ ತಲುಪಿಸಿದರಾಗಲಿಲ್ಲ ಚಕಪಕ ಶಾಲು, ತಗಡಿನ ಫಲಕ, ಸುಗಂಧದ ಸುಳಿವೇ ಇಲ್ಲದ ಗಂಧದ ಚೆಕ್ಕೆಯ ಹಾರ ಇತ್ಯಾದಿಗಳನ್ನು ಬಾಗಿಲ ತನಕ ಒಯ್ದು ಮುಟ್ಟಿಸಬೇಕಾಗುತ್ತಿತ್ತು. ಮನೆಯಲ್ಲೇ ಇದ್ದ ಸಾಹಿತಿಗಳ ಮೇಡಮ್ಮನೋರು “ಪಾಕೀಟ್ ಕೊಟ್ಟಿಲ್ಲೇನ” ಎಂಬ ಪ್ರಾಣಾಂತಿಕ ಪ್ರಶ್ನೆಯನ್ನು ಸಾಹಿತಿಗಳಿಗೆ ಕೇಳುವಾಗ ಬಾಬಾ ಹೊರಗೆ ಬರುತ್ತಿದ್ದನು.

ಧಾರವಾಡದಂಥ ಶೈಕ್ಷಣಿಕ ಕೇಂದ್ರವಾಗಿ ಬೆಳೆದುಬಂದ ಊರಿನ ಒಂದು ವಿಶೇಷತೆಯೆಂದರೆ ಊರ ತುಂಬಾ ಕವಿದಿರುವ ತಾರುಣ್ಯ. ಬೇರೆ ಬೇರೆ ತಾಲೂಕು ಜಿಲ್ಲಾಗಳಿಂದ ಬಂದ ವಿದ್ಯಾರ್ಥಿಗಳಿಂದಲೇ ಬರುವ ಚೈತನ್ಯ. ಊರಿನ ಮಕ್ಕಳೆಲ್ಲ ಮನೆಯಲ್ಲಿ ಹಿರಿಯರನ್ನು ಬಿಟ್ಟು ಪರದೇಸಿಗಳಾಗಿದ್ದರೂ ಆ ಮನೆಗಳಲ್ಲೆಲ್ಲ ವಿದ್ಯಾರ್ಥಿಗಳು ಬಾಡಿಗೆಗೆ ಇದ್ದರು. ಸಪ್ತಾಪುರ, ಎಮ್ಮಿಕೆರಿ, ಬಾರಾಕೋಟ್ರಿ, ಕಲ್ಯಾಣನಗರ ಎಲ್ಲಾ ಕಡೆಗೆ, ಹಳೆಯ ಮರಗಳ ಸುತ್ತಣ ಹೂಗಿಡಗಳಂತೆ ಈ ಹುಡುಗರು, ಹುಡುಗಿಯರು ಇರುತ್ತಿದ್ದರು ಮತ್ತು ಅವರ ಹುಮ್ಮಸ್ಸನ್ನು ಎರವಲು ಪಡೆದಂಥ ಬೈಕುಗಳು, ಸೈಕಲ್ಲುಗಳು. ಇವರನ್ನೆಲ್ಲ ಗಮನಿಸಿದ ಬಾಬಾಗೆ ಹೊಸ ಐಡಿಯಾ ಹೊಳೆಯಿತು. ಹೇಗೂ ಒಂದಿಷ್ಟು ಮನೆಗಳಲ್ಲಿ ರೊಟ್ಟಿ ಕೆಲಸಕ್ಕೆ ಅವ್ವ ಹೋಗುತ್ತಿದ್ದಾಳೆ. ಅದನ್ನೇ ತುಸು ವಿಸ್ತ್ರತವಾಗಿ ಮನೆಯಲ್ಲಿ ಮಾಡಿ ದುಬಾರಿ ಹೋಟೆಲು ಊಟದಿಂದ ಸುಸ್ತಾಗಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪುರವಟೆ ಮಾಡುವುದು. ಐಡಿಯಾ ಬಂದಿದ್ದೇ ತಡ ಅವರಿಗೆ ಈ ಕಾಯಕಕ್ಕೆ ಮನೆಯ ಜಾಗವೇ ಕಡಿಮೆ ಬೀಳುವಂತಾಗಿ ಹೋಯಿತು. ಅವ್ವ, ಬಾಬಾ ಇಬ್ಬರೂ ಸೇರಿ ಅಡಿಗೆ ಮಾಡುತ್ತಿದ್ದರು. ಅವ್ವ ತನ್ನ ನಿಗದಿತ ಮನೆಗಳಿಗೆ ಹೋದಾಗ ಬಾಬಾ ಮನೆಯಲ್ಲೇ ರೊಟ್ಟಿ, ಪಲ್ಲೆ ಮಾಡುತ್ತಿದ್ದ. ನಾನಾ ಆಕಾರದ ಟಿಫಿನ್ ಕ್ಯಾರಿಯರ್‍ಗಳನ್ನು ತೊಳೆಯಲು ಮಕ್ಕಳು ನೆರವಾಗುತ್ತಿದ್ದರು. ಬಾಬಾ ನಸುಕಿಲೆ ಹೋಗಿ ತಾಜಾ ಬದನೆಕಾಯಿ, ತರಕಾರಿ ತರುತ್ತಿದ್ದ. ಸಪ್ತಾಪುರ, ಕಲ್ಯಾಣನಗರ, ನಾರಾಯಣಪುರ ಎಲ್ಲ ಕಡೆ ಪೂರೈಕೆ ಮಾಡುವುದೊಂದು ಸಂಭ್ರಮದ ಕೆಲಸವಾಗಿ ಹೋಯ್ತು. ಮಕ್ಕಳ ಜೊತೆಗೆ ಟಿಫಿನ್ ಕ್ಯಾರಿಯರ್‍ಗಳ ಸೈಜೂ ಬೆಳೆಯತೊಡಗಿತು. ಕೆಲವರು ಮನೆಗೇ ಬಂದು ಚಪಾತಿ, ಕಾಳುಪಲ್ಲೆ ಕಟ್ಟಿಸಿಕೊಂಡು ಒಯ್ಯತೊಡಗಿದರು.

ಕೆಲಸದ ಒಂದು ಹಂತ ಆದ ಕೂಡಲೇ ಅವ್ವ ಒಂದು ಸಿಂಗಲ್ ಕಡಕ್ ಚಾ ಮಾಡಿಕೊಂಡು ಕುಡಿಯುತ್ತಿದ್ದಳು. ಅದೊಂದು ಹತ್ತು ನಿಮಿಷ ಅವಳ ಧ್ಯಾನದಂತಿರುತ್ತಿತ್ತು. ತನ್ನ ಅತ್ಯಂತ ಆಳದ ಕೇಂದ್ರವೊಂದರ ಜೊತೆಗೆ ಆಕಿ ನಿರ್ಗುಣ ಸಂವಾದದಲ್ಲಿದ್ದಂತೆ ತೋರುತ್ತಿತ್ತು. ಜಗತ್ತನ್ನೇ ಎದುರು ಹಾಕಿಕೊಳ್ಳಲು ಬೇಕಾದ ಏನೋ ಒಂದನ್ನು ಆಕೆ ನಿಶ್ಶಬ್ದದಲ್ಲಿ ಪಡೆಯುತ್ತಿರುವಂತೆ. ಆಗ ಉಳಿದವರಿಗೆ ಮಾತಾಡಲೂ ಹಿಂಜರಿಕೆಯಾಗುತ್ತಿತ್ತು. ಇಂಥ ಒಂದು ಚಾ ಮುಹೂರ್ತದಲ್ಲಿ ಮನೆಯೆದುರು ಬೈಕೊಂದು ಬಂದು ಫಡಫಡಫಡ ಮಾಡುತ್ತಲೇ ನಿಂತಿತ್ತು. ಇಂಜಿನ್ನು ಆಫ್ ಮಾಡದೆ ಬಾಗಿಲಲ್ಲಿ ನಿಂತ ಬೈಕೆಂದರೆ ಅವ್ವಗೆ ಆಗದು. ಹಾಗೆ ನೋಡಿದರೆ ಯಾರಿಗೂ ಆಗದು. ಒಂದೇ ಅದು ಆಫ್ ಮಾಡಬೇಕು ಅಥವಾ ಮುಂದೆ ಹೋಗಬೇಕು. ಅದರ ಮೇಲೆ ಸುಡು ಸೆಖೆಯಲ್ಲೂ ದಪ್ಪ ಜಾಕೆಟ್ ಹಾಕಿಕೊಂಡು ಕೂತಿದ್ದ ತರುಣ, “ಇಪ್ಪತ್ತು ರೊಟ್ಟಿ ಬೇಕಾಗಿತ್ರಿ, ಪಲ್ಲೆನೂ ಬೇಕು. ನಾನ್‍ವೆಜ್ ಇಲ್ಲೇನ್ರಿ? ಪಾರ್ಟಿ ಇತ್ರಿ” – ಎಂದು ಡ್ರೊಂಯ್ ಡ್ರೊಂಯ್ ಎಂದು ಆಗಾಗ ಎಕ್ಸಲೇಟರ್ ಹ್ಯಾಂಡಲ್ ತಿರುಗಿಸುತ್ತ, ಇನ್ನೇನು ಹೊರಟೆ ಅನ್ನೋ ಥರ ಅಲ್ಲಾಡುತ್ತಿದ್ದ. ಅವ್ವನ ಧ್ಯಾನ ಭಂಗದ ಸೈರಣೆ ಮೀರತೊಡಗಿತು. “ಚುಪ್”, “ನಿಲ್ಸ್ ಮೊದ್ಲು” ಎಂದು ಕೂಗಿದಳು. ಕಂಗಾಲಾದ ಅವನು ಇಂಜಿನ್ ಆಫ್ ಮಾಡಿದ. ವಿಶ್ವಶಾಂತಿಯೇ ಅಲ್ಲಿ ನೆಲೆಸಿ ಹೋಯಿತು. ಅವ್ವ ಮೆಲ್ಲಗೆ ಚಹಾ ಮುಗಿಸಿ, ಕಪ್ಪು ಪಕ್ಕಕ್ಕಿಟ್ಟು “ತಾಸ್ ಬಿಟ್ ಬಾಪಾ” ಎಂದಳು. ಅದಕ್ಕವ ವಶೀಲಿ ಹಚ್ಚುವವನಂತೆ “ಚಿತ್ರಲೇಖಾ ಇದಾರೇನ್ರೀ?” ಎಂದ. ಅವ್ವಗೆ, “ಅಬಾಬಾಬಾ ಬಾಬಾ…” ಅನಿಸಿಹೋಯ್ತು. ಒಳ್ಳೇ ಮಾಮಲೇದಾರನ ಹೆಸರು ತಕೊಂಡ್ಹಂಗೆ ಚಿತ್ತಿಯ ಹೆಸರು ತಗೊಂಡಿದ್ದ ಪುಣ್ಯಾತ್ಮ. ಅವ್ವ, “ಯಾಕಪಾ” ಅಂತ ಕೇಳುವ ಮೊದಲೇ “ಗುರ್ತ ಇದೇರಿ. ನಾನು ಜಿಮ್‍ನ್ಯಾಗ ಕಲಸ್ತೇನ್ರಿ. ಚಿತ್ರಲೇಖಾ ಅವರು ಗೆಳತ್ಯಾರ ಜೋಡಿ ಬಾಜೂಕಿನ ಪಿ.ಯು.ಸಿ ಕೋಚಿಂಗ್‍ ಗೆ ಬರ್ತಿರ್ತಾರಲ್ರಿ. ಅವರೇ ಹೇಳಿದ್ದರ್ರಿ. ಕೇಟರಿಂಗ್ ಐತಿ ನಿಮ್ದು ಅಂತ. ಆರಾಮ ಇದಾರಲ್ರಿ?” ಎಂದ.

“ಅಬಾಬಾಬಾಬಾಬಾ ಏನ್ ಕಾಳಜೀನಪಾ ನಿಂದು. ಇಷ್ಟ ವರ್ಷದಾಗ ನಾವೇ ಇಷ್ಟ ಕಾಳಜಿ ಮಾಡಿಲ್ ನೋಡು ಆಕಿದು” ಎಂದು ಹೇಳಬೇಕೆನಿಸಿದ್ದು ಹೊರಗೆ ಬರಲಿಲ್ಲ. ಏಕೆಂದರೆ, ಮಾತಾಡುವಾಗ ಅಲ್ಲಾಡುತ್ತಿದ್ದ ಅವನ ತಲೆಗೂದಲಿನ ವಿಭಿನ್ನ ಸ್ಟೈಲು ಅವ್ವನ ಗಮನ ಸೆಳೆಯಿತು. ಪೊಗದಸ್ತಾಗಿ ಶಿವ ಕೂದಲು ದಯಪಾಲಿಸಿದ್ದರೂ, ಸುತ್ತಲೂ ನುಣ್ಣಗೆ ಬೋಳಿಸಿ ಕೇವಲ ನೆತ್ತಿಯ ಮೇಲಷ್ಟೆ ತೆಂಗಿನಕಾಯಿಯ ಜುಟ್ಟದಂತೆ ಇಟ್ಟುಕೊಂಡಿದ್ದ. ಕಟಿಂಗ್ ಮಾಡಿಸುವಾಗ ರೊಕ್ಕ ಕಡಿಮೆ ಬಿದ್ದು ಎಡವಟ್ ಮಾಡ್ಕೊಂಡಾನ ಅನಿಸುತ್ತಿತ್ತು. ಒಂದು ಬಾಜುದಿಂದ ನೋಡಿದರೆ ಬೆಳ್ಳಗಿನ ನಡುವಿನ ಕಪ್ಪು ಕೂದಲ ಜಾಗ ತಬಲಾ ಥರ ಕಾಣುತ್ತಿತ್ತು. ಅಷ್ಟರಲ್ಲಿ ಲೇಟ್ ಎಂಟ್ರಿ ತಗೊಂಡ ಅಭಿನೇತ್ರಿಯಂತೆ ಚಿತ್ರಲೇಖಾ ಪ್ರವೇಶಿಸಿಯೇ ಬಿಟ್ಟಳು.

“ಅರೇ ಯಾವಾಗ ಬಂದಿ. ಹೊರಗೇ ಯಾಕ್ ನಿಂತಿ. ಬಾ ಒಳಗ, ಹೊಸಾ ಕಟಿಂಗ್ ತೋರ್ಸಾಕ ಬಂದಿ ಹೌದಲ್ಲೊ, ಮಸ್ತ್ ಸೂಪರ್. ಅವ್ವಾ ಒಳಗ್ಯಾಕ್ ಕರೀಲಿಲ್ಲ ಅವನ್ನ. ಸಪನ್ ಅಂವಾ. ದಾಂಡೇಲಿಯಂವಾ. ಕಾಲೇಜ್ ಹುಡಗ್ರೆಲ್ಲಾ ಅವನ ಹತ್ರಾನೇ ಬಾಡಿ ಫಿಟ್‍ನೆಸ್ ಕಲಿತಾರ” ಅಂತ ಪಟಪಟ ಖುಶಿ, ಭಯ ಎರಡನ್ನೂ ಅಡಗಿಸುವಂತೆ ಮಾತಾಡುತ್ತ ಒಳಗೆ ಹೊರಗೆ ಓಡಾಡಿದಳು. ಅವನು ಅಷ್ಟರೊಳಗೇ ಬೈಕ್ ಕನ್ನಡಿಯಲ್ಲಿ ಎರಡೆರಡು ಸಲಾ ತಬಲಾದ ಮೇಲೆ ಕೈಯಾಡಿಸಿ ನೋಡಿಕೊಂಡಾಯಿತು. ದಾಂಡೇಲಿ ಶಬ್ದ ಕೇಳಿದ ಮೇಲಂತೂ ಅವ್ವಗೆ ಅದರೊಡನೆ ಕಾಡು ಮರಾ ಎಲ್ಲಾ ನೆನಪಾಗಿ ಅವನೀಗ ಮಂಗ್ಯಾನಂತೆ ಕಾಣತೊಡಗಿದನು. ಅನಿಸಿದ್ದಕ್ಕಿಂತ ಕ್ಷಿಪ್ರವಾಗಿ ಎಲ್ಲವೂ ಬಿಗಡಾಯಿಸತೊಡಗಿತ್ತು. “ಕೆಲ್ಸಾ ಐತಿ ಭಾಳ. ಆಮೇಲ್ ಬಂದು ತಗೊಂಡ ಹೋಗು ರೊಟ್ಟಿ. ನೀ ಹಿಟ್ ಕಲ್ಸ ನಡಿಲೇ ಚಿತ್ರಲೇಖಾ” ಎಂದು ಅಬ್ಬರಿಸಿದ ಮೇಲೆ ಏನೋ ಸಮಾಧಾನ ಆದಂತೆ ಆಯಿತು. ಅವನು ಸದ್ದಿಲ್ಲದೆ ಬೈಕನ್ನು ತಳ್ಳಿಕೊಂಡು ರಸ್ತೆ ಸೇರಿ ನಂತರ ಕಿಕ್ ಚಾಲೂ ಮಾಡಿದ. ಚಿತ್ತಿ ಪಟ್ಟಂತ ಬಾಗಿಲಿಗೆ ಧಾವಿಸಿ ಒಂದು ಕೈಯಿಂದ ಬಾಗಿಲು ಚೌಕದ ಮೇಲ್ಭಾಗಕ್ಕೆ ತೂಗಿ ಬಿದ್ದವಳಂತೆ ಬಿಲ್ಲಿನಂತೆ ಹೊರಗೆ ಬಾಗಿ `ಬಾಯ್’ ಎಂದು ರಸ್ತೆಯತ್ತ ಕೈಬೀಸಿದಳು.

ಆಕೆ ಕೇವಲ ತನಗೇ ಅಂತ ಒಂದು ಸಿಂಗಲ್ ಚಾ ಮಾಡಿಕೊಳ್ಳುವ ಸುಮುಹೂರ್ತ ಅದು. ರವ್ಯಾ ತನ್ನ ಉಸಿರನ್ನೆಲ್ಲ ಮತ್ತೊಮ್ಮೆ ಶೇಖರಿಸಿಕೊಂಡವನಂತೆ ನಿಂತಲ್ಲಿಂದ ಮತ್ತೆ ಚಿಮ್ಮುತ್ತ ಮನೆಯ ಕಡೆಗೆ ಓಡಿದ.

ಅವ್ವನ ಸಿಡಿಮಿಡಿ, ಪ್ರತಿರೋಧ, ಆಘಾತ ಇವ್ಯಾವುದೂ ಕಾಣಿಸುವ ಸ್ಥಿತಿಯಲ್ಲೇ ಚಿತ್ತಿ ಇರಲಿಲ್ಲ. ಆಕಾಶದಿಂದಲೇ ತೂಗುಬಿದ್ದಿದ್ದ ಜೋಕಾಲಿಯೊಂದರ ಮೇಲೆ ಅವಳಾಗಲೇ ಕೂತುಬಿಟ್ಟಿದ್ದಳು. ಅದು ದಾಂಡೇಲಿಯಿಂದ ಬೆಳಗಾಂವ ತನಕ ಜೀಕುತ್ತಿತ್ತು. ನಡುವೆ, ಧಾರವಾಡದ ಕಿಲ್ಲೆಯ ನೆತ್ತಿಯನ್ನು ಚೂರು ಸವರಿ ಹೋಗುತ್ತಿತ್ತು. “ಪಸಂದಾದ್ನೋ ಇಲ್ಲೋ. ಎಷ್ಟ್ ಛಂದದಾನಲ್ಲಾ? ದಾಂಡೇಲಿ ಪೇಪರ್ ಮಿಲ್‍ ನಲ್ಲಿ ಕೆಲಸ ಮಾಡಾಕಂತ ಅವರ ಅಜ್ಜನ ಕಾಲದಲ್ಲೇ ಯು.ಪಿ. ಕಡೆಯಿಂದ ವಲಸೆ ಬಂದವರು. ಮನ್ಯಾಗ ಹಿಂದೀ ಮಾತಾಡ್ತಾರ. ಇವ್ರೆಲ್ಲ ಕನ್ನಡಾನೇ ಮಾತಾಡ್ತಾರ. ಬಾಡಿ ನೋಡ್ದಿ? ಬಾಡೀ?” ಎನ್ನುತ್ತ ಚಿತ್ರಲೇಖಾ ಹೂವಿನಂತೆ ಹಿಟ್ಟು ನಾದಹತ್ತಿದಳು.
“ಅವ್ನ ಬಾಡಿ ನಾ ಯಾಕ ನೋಡ್ಲೇ ಯವ್ವಾ, ಧಾಡಿ ಆಗೈತೇನ ನನಗ? ಯಾವಾಗ ನೋಡಿದಿ ನೀ… ಬಾಡೀ?”, “ನಮ್ಮ ಕೋಚಿಂಗ್ ಕ್ಲಾಸ್ ಎದ್ರೇ ಅವರ ಜಿಮ್ ಐತಿ. ಗ್ಲಾಸಿನ ಗೋಡೆ. ರಸ್ತೆಯಿಂದ ಎಲ್ಲಾ ಕಾಣಸ್ತತಿ. ಇರ್ಫಾನ ಖಾನ್ ಗತೆ ಇದ್ದಾಂವ ಒಳಗ್ಹೋದ್ರೆ, ಹೊರಬರುವಾಗ ಹೃತಿಕ್‍ ರೋಶನ್ ಆಗಿರ್ತಾನ”.

ವಿಷಯ ಸ್ಫೋಟಕ ಸ್ಥಿತಿಗೆ ತಲುಪಲು ಹೆಚ್ಚು ದಿನ ಬೇಕಾಗಲಿಲ್ಲ. ಬಾಬಾ ತುಂಬ ಸಂಯಮದಿಂದನೇ ಅವ್ವನಿಗೆ ಸಮಾಧಾನ ಹೇಳಿದ. “ಅಂಥದೇನೂ ಇರಲಿಕ್ಕಿಲ್ಲ. ಈಗಿನ ಕಾಲದಂತೆ ಎಲ್ಲರೂ ಫ್ರೀ ಆಗಿರೋದೆ ಛಂದ. ದೂರದೂರ ಅಡಗಿಕೊಂಡು ಇದ್ದರೆ ಮನಸಲ್ಲೆ ಇಲ್ಲದ್ದೆಲ್ಲ ಪಿಕ್ಚರ್ ಶುರುವಾಗ್ತದೆ. ಕಾಳಜಿ ಮಾಡಬೇಡ”. ಮತ್ತೆ ಅವ್ವಗೆ ಸಿಟ್ಟು ಬಂತು. “ಕಾಳಜಿ ಆಗ್ತದಪಾ, ಕಾಳಜಿ ಮಾಡಬೇಡಾ ಅಂದ್ರ ಹ್ಯಾಂಗ” ಎಂದು ಜೋರಾಗೇ ರೊಟ್ಟಿ ತಟ್ಟಿದಳು. ರೊಟ್ಟಿ ತಟ್ಟುವ ಸದ್ದಿನಿಂದಲೇ ಆಕಿಯ ಮನಸ್ಸನ್ನು ಹೇಳಬಹುದಾಗಿತ್ತು. ಅವಳ ಮನಸ್ಸು ಶಾಂತವಾಗಿದ್ದರೆ ಪುಟ್ಟ ಬಾಲೆಯ ತಲೆಗೆ ಎಣ್ಣೆ ತಟ್ಟಿದಂತೆ ಆವಾಜು ಬರುತ್ತಿತ್ತು. “ನಮಗೆ ಕಂಢಾಂಗ ಜಗತ್ತು ಇರ್ತದ ಅಂತ ತಿಳಿಯೋದೇ ತಪ್ಪು. ಅವನ ತಲಿ ನಮಗೆ ದಾಂಡೇಲಿ ಮಂಗ್ಯಾನ ಹಂಗ ಕಾಣಬಹುದು. ನಮ್ಮ ಕಾಲದ ರಾಜೇಶ ಖನ್ನಾ, ಅಮಿತಾಬರ ಕೂದಲು ಅವನಿಗೆ ಮಂಗ್ಯಾನ ಹಂಗ ಕಾಣ್ತದ. ನಮ್ಮ ಹಳೀ, ಮದುವೆ ಫೋಟೋ ನೋಡಿಯೇನು ಸದ್ಯಾ? ನೋಡಿದರ ಯಪ್ಪಾ ಅನಸ್ತದ” – ಎಂದು ಬಾಬಾ, ಮೇಲಿನ ಕಟ್ಟು ಹಾಕಿಸಿದ ಫೋಟೋ ಸಾಲಿನ ಹಿಂಭಾಗದಲ್ಲಿದ್ದ ಹಳೆಯ ಪ್ಲಾಸ್ಟಿಕ್ ಲಕೋಟೆಯಲ್ಲಿಯ ಆಲ್ಬಮ್ ತೆಗೆಯಲು ತಯಾರಾದ. “ಬ್ಯಾಡ ಬ್ಯಾಡ, ಅದ್ರಾಗಿದ್ದ ಹೆಚ್ಚಿನ ಹಿರಿಯಾರು ಈಗಿಲ್ಲ. ಬ್ಯಾಸರ ಆಕ್ಕೇತಿ. ಕಣ್ಣೀರ ಬರ್ತಾವು. ಕೆಲಸಾ ಆಗುದಿಲ್ಲ. ಬ್ಯಾಡ ಬ್ಯಾಡ” ಎಂದು ಅವ್ವ ತಡೆದಳು. ಜೊತೆಗೆ “ನೀ ಏನ್ ಆಗ್ ಹೀರೋ ಇದ್ದೀ ಅಂತ ತಿಳಿದೀಯೇನ. ಆಗಲೂ ನನಗೆ ಮಂಗ್ಯಾನ ಹಂಗೇ ಕಾಣ್ತಿದ್ದಿ ಬಿಡು” ಎಂದು ಛೇಡಿಸಿದಳು. “ಹಂಗಾರ ಯಾಕ ಕಟಕೊಂಡಿ. ಹೀರೋನ್ನೇ ಕಟಕೋಬೇಕಾಗಿತ್ತು” ಎಂದ ಬಾಬಾ. ಅದಕ್ಕವಳು, “ಈ ಹೀರೋ ಪಾರೋ ಇವೆಲ್ಲ ಟಾಕೀಸ್‍ನಾಗೇ ಛಂದ. ಟಾಕೀಸ್‍ನಾಗೇ ಬಿಟ್ಟು ಬರಬೇಕು ಅವರನ್ನ. ಮನಿಗೆ ಕಟಕೊಂಡು ಬಂದು ಏನ ಮಾಡೊದೈತಿ. ರೊಟ್ಟಿ ತಟ್ಟು, ಬಚ್ಚಲಾ ಬಳೀ ಅನ್ನಾಕ ಆಗ್ತದೇನು” ಎಂದಳು. “ಖರೇ ಹೀರೋ ಆದ್ರ ಅದನ್ನೆಲ್ಲಾ ಮಾಡಬೇಕಪಾ ಅಂವಾ. ಪುಕ್ಸಟ್ಟೆ ಸಿಗ್ತದೇನು ಜೀವನಾ…” ಎಂದು ಬಾಬಾ ಟಿಫಿನ್ ಕ್ಯಾರಿಯರ್ ತುಂಬತೊಡಗಿದ.
ರವ್ಯಾ ಕಿತ್ತೂರ ಚೆನ್ನಮ್ಮ ಪಾರ್ಕಿಗೆ ಕ್ರಿಕೆಟ್ ಆಡಲು ಹೋಗಿದ್ದ. ಚಿತ್ತಿ, “ಉದಯ ಹಾಸ್ಟೆಲ್‍ ನ್ಯಾಗೆ ಅರ್ಧಕರ್ಧಾ ಹುಡುಗೋರು ಎಕ್ಸಾಮ ಸ್ಟಡೀಗೆ ಅಂತ ಊರಿಗ್ಹೋಗ್ಯಾರ. ಅದಾರೋ ಇಲ್ಲೋ ಅಂತ ಕೇಳಿ ನೋಡಿ ರೂಮಿನ ಹೊರಗೆ ಡಬ್ಬಿ ಇಟ್ಟ ಬಾ” ಎಂದಳು. ಅಷ್ಟರಲ್ಲಿ ಫಡಫಡಫಡ ಎನ್ನುವ ತನ್ನದೇ ಬೈಕಿನ ಸದ್ದಿನ ಹಿನ್ನೆಲೆ ಸಂಗೀತದೊಂದಿಗೆ ಸಪನ್ ದಾಂಡೇಲಿವಾಲಾ ಪ್ರವೇಶಿಸಿದ.

ಮನುಷ್ಯರನ್ನು ಬಿಟ್ಟು ಸಕಲ ಚರಾಚರ ವಸ್ತುಗಳಿಗೆ ಆಶ್ರಯ ಕೊಡುವ ಕಿರ್ಲೋಸ್ಕರ್ ಕಬ್ಬಿಣದ ಖುರ್ಚಿಯನ್ನು ಚಿತ್ತಿ ಅದಾಗಲೇ ಸಾಫ್ ಮಾಡಿಟ್ಟಿದ್ದಳು. “ಬಾ” ಅನ್ನುವಂತೆ ತಲೆಯನ್ನು ಅಲ್ಲಾಡಿಸಿ ಅವನತ್ತ ನೋಡಿದಳು. ಅವನು ಬೈಕ್ ಆಫ್ ಮಾಡದೆ, ಬಾಬಾನ ಮತ್ತು ಅವನತ್ತ ಬೇಕಂತಲೇ ಇನ್ನೂ ನೋಡಿರದ ಅವ್ವನ ಗಮನಗಳನ್ನು ಡ್ರೊಂಯ್ ಕಾರದಿಂದ ಸೆಳೆಯಲು ನೋಡಿದ. ಬಾಬಾ “ಬರ್ರಿ ಬರ್ರಿ ಕೂಡ್ರಿ” ಎಂದಿದ್ದೇ ಅವ್ವನಿಗೆ ಚೂರು ಸಿಗ್ಗಾಯಿತು. ತೋರಿಸಿಕೊಳ್ಳದೆ “ಈವತ್ ಎಷ್ಟ ಬೇಕಪಾ ಚಪಾತಿ” ಎಂದಳು. ಚಿತ್ತಿ, “ಚಪಾತಿ ತಗೊಳಾಕ ಬಂದಿಲ್ಲ ಅಂವಾ” ಎಂದಳು. “ಮತ್ತೇನ ಚಪಾತಿ ಲಟ್ಟಸಾಕ ಬಂದಾನ?” ಎಂದು ಥಟ್ಟಂತ ತಟ್ಟಿದಳು ಅವ್ವ. “ಬರ್ರೆಲಾ ಒಳಗ… ಮಾತಾಡೂಣು” ಎಂದು ಬಾಬಾ ಗಲಿಬಿಲಿಯ ಸೌಜನ್ಯದಿಂದಲೇ ಮತ್ತೆ ಕರೆದ.

ಸಪನ್ ಬೈಕಿನ ಮೇಲೆ ಕೂತಲ್ಲೇ ಗತ್ತಿನಲ್ಲಿ ಅಲ್ಲಾಡುತ್ತ “ಟೈಮಿಲ್ಲಾ. ಯೆಸ್ ಅಥವಾ ನೋ, ಒಟ್ಟಾರೆ ಡಿಸೈಡ್ ಆಗಬೇಕ್ ಈವತ್ತ. ಚಿತ್ರಲೇಖಾ ಹೇಳಿಲ್ಲಾ ನೀ ಇವರಿಗೆ?” ಎಂದ.

ಎಲಾ ತಬಲಾ ನನ ಮಗನ… ಅಂದುಕೊಂಡಳು ಅವ್ವ. “ಅರೆ… ಏನದು ವಿಷಯಾ… ಸರಿ ಕೂತು ಮಾತಾಡೂಣು. ಅಂಥದ್ದೇನು ತಕರಾರಿಲ್ಲಪಾ ನಮ್ಮದು” ಎಂದು ಬಾಬಾ ಬಾಗಿಲಲ್ಲಿ ನಿಂತು ಸಣ್ಣದನಿಯಲ್ಲಿ ಅಂದ. ತಕ್ಷಣ ಸಪನ್, “ಯಾಕೆ ತಕರಾರಿಲ್ಲ? ತಕರಾರು ಮಾಡಬೇಕು ನೀವು. ಹೆತ್ತ ಅವ್ವ ಅಪ್ಪ ಅಲ್ಲ? ಮಾಡಬೇಕು ನೀವು ತಕರಾರು. ಅಡ್ಡ ನಿಲ್ಲಬೇಕು ನಮ್ಮ ದಾರಿಗೆ, ಆದ್ರೆ ನಾ ಕೇರ್ ಮಾಡಂಗಿಲ್ಲಾ. ಈಗ ಈ ಕ್ಷಣ ಕರಕೊಂಡ ಹೋಗ್ತೇನೆ ನಾನು ಇವಳನ್ನ” ಎಂದು ಏರುದನಿಯಲ್ಲಿ ಸಾರಿದ. ಮೊದಲೇ ಬರೆದು ಉರು ಹಾಕಿಕೊಂಡ ಮಾತುಗಳಂತೆ ಎಲ್ಲ ಕೇಳಿಸುತ್ತಿದ್ದವು. ಆಗಲೇ ಚಾಳಿನ ಒಂದಿಷ್ಟು ಕಿವಿ ಕಣ್ಣುಗಳು ಚುರುಕಾಗಿ ಹಾಲ್‍ಚಾಲ್ ಮಾಡುತ್ತಿರುವುದು ಅವ್ವನ ಆತ್ಮಕ್ಕೆ ತಿಳಿದುಹೋಗಿದ್ದರಿಂದ ಆಕೆ, “ಅಪಾ ತಮಾ, ಯಾಕ ಮಾರವಾಡೀ ಮದಿವಿ ಕುದುರಿ ಹಂಗ ಹೊಯ್ಕೊಳಾಕ ಹತ್ತೀಯೋ ಯಪ್ಪಾ. ಯಾರ ಬ್ಯಾಂಡಾಂದ್ರು ಈಗ. ಮೊದ್ಲು ಈ ನಲವತ್ತು ಡಬ್ಬಿ ಹೋಗಲಪ್ಪಾ. ಆಮೇಲೆ ಚಾ ಕುಡಕೋತ ಮಾತಾಡೂಣು” ಎಂದು ಮೆತ್ತನೆ ಪುಸಲಾಯಿಸುವ ದನಿಯಲ್ಲಿ ಹೇಳಿದಳು.

“ಚಾ ಕುಡಿಸಿ ತಲಿ ಮ್ಯಾಗ ಕೈಯಾಡಿಸಿ ಮರುಳು ಮಾಡಬೇಕಂತ ಮಾಡೀರೇನು. ಯಾಕ ಬ್ಯಾಡ ಅನ್ನಾಂಗಿಲ್ಲಾ ಈಗಾ? ಆಮೇಲೆ ಅನ್ನಬೇಕಂತ ಮಾಡಿರೇನು. ಯಾರ ಬ್ಯಾಡಂದ್ರೂ ನಾ ಕೇಳಾಂಗಿಲ್ಲಾ. ಏಕ್ ಮಾರ್ ದೋ ತುಕಡಾ. ಚಿತ್ರಲೇಖಾ ಹೊಂಡು ನೀ” ಎಂದು ರಣಕಹಳೆ ಊದೇಬಿಟ್ಟ ಸಪನ್. ನಿಲ್ಲು ನಿಲ್ಲು ಅನ್ನುವುದರೊಳಗೆ ಚಿತ್ತಿ ಒಳಗಿಂದ ಪುಟ್ಟ ಬ್ಯಾಗೊಂದನ್ನು ಹಿಡಿದುಕೊಂಡು ಬಂದು, ನಡುನಿಂತ ಬಾಬಾನನ್ನು ಹೇಗೋ ದಾಟಿ, ಆ ಭಂಗುರವೆನಿಸಿದ ಅಧಿರ ಕ್ಷಣದಲ್ಲೂ ಅವ್ವ ಬಾಬಾರ ಕಾಲಿಗೆ ನಮಸ್ಕಾರದಂಥದೇನನ್ನೋ ಮಾಡಿ ಹೋಗಿ ರಥದ ಮೇಲೆ ಕೂತೇಬಿಟ್ಟಳು. ಕ್ಲಚ್ ಒಮ್ಮೆಲೇ ಬಿಟ್ಟಂಥ ಹಿಂಜೋಲಿಯಲ್ಲಿ ಒಮ್ಮೆ ತೂಗಿ ಚಿಮ್ಮಿ ಫಡಫಡಫಡಫಡ ಸಂಗೀತದೊಂದಿಗೆ ಇಬ್ಬರೂ ಮಾಯವಾಗಿ ಬಿಟ್ಟರು. ಬಾಬಾಗೆ ಸಾಂಗ್ಲಿಯ ಮ್ಯಾಟಿನಿ ಸಿನೆಮಾದ ದೃಶ್ಯವೊಂದನ್ನು ಅರೆನಿದ್ರೆಯಲ್ಲಿ ನೋಡಿದಂತೆ ಅನಿಸಿತು. ಬೈಕಿನ ಸದ್ದು ಅನಂತದಲ್ಲಿ ಲೀನವಾದ ನಂತರ ಅವ್ವ ಬಾಬಾ ಇಬ್ಬರೂ ಒಮ್ಮೆ ಮುಖ ಮುಖ ನೋಡಿಕೊಂಡರು. ನಡೆದು ಹೋದದ್ದಕ್ಕೂ ತಮಗೂ ಬಿಲ್‍ಕುಲ್ ಸಂಬಂಧವೇ ಇಲ್ಲದಂತೆ ಇಬ್ಬರಿಗೂ ಅನಿಸಿಹೋಯಿತು. ಗೆಳತೀ ಜೊತೆ ಸರ್ಕಸ್ಸಿಗೆ ಹೋದಂತೆ ಚಿತ್ತಿ ಅವನ ಜೊತೆ ಹೋಗಿಬಿಟ್ಟಳಲ್ಲ! ಈ ಬಗ್ಗೆ ಏನೂ ತಮಗಿಬ್ಬರಿಗೂ ಆಗುತ್ತಲೇ ಇಲ್ಲವಲ್ಲ ಎಂಬುದರ ಬಗ್ಗೆಯೇ ಇಬ್ಬರಿಗೂ ಒಂದೇ ಕ್ಷಣದಲ್ಲಿ ಮನವರಿಕೆ ಆಗಿ ಹೋಯಿತು. “ಡಬ್ಬಿಗೆ ತಡಾ ಆಗ್ತದ. ಪಲ್ಲೆ ತುಂಬು. ನಾ ರೊಟ್ಟಿ ತುಂಬತನಿ” ಎಂದು ಕೆಲಸಕ್ಕೆ ತೊಡಗಿದರು.

ತಿಂಗಳುಗಳು ಕಳೆಯುತ್ತ ಹೋದವು. ಎಲ್ಲವೂ ತಂತಾನೆ ಸರಿ ಹೋಗುತ್ತದೆ ಎಂಬಂಥ ಅಲಿಖಿತ ನಂಬಿಕೆಯೊಂದರಲ್ಲಿ ಜೀವನ ನಡೆದು ಹೋಗುತ್ತಿತ್ತು. ಒಬ್ಬರ ಮೌನವನ್ನು ಕದಡಲು ಇನ್ನೊಬ್ಬರಿಗೆ ಮನಸ್ಸಾಗುತ್ತಿರಲಿಲ್ಲ. ಬಿಸಿಲು ಮನೆಯೊಳಗೆ ಬಂದು ಆಟವಾಡಿ ಸಂಜೆ ತುಳಸಿ ಗಿಡದ ಎಲೆಗಳನ್ನು ಗದ್ದ ಹಿಡಿದು ಮಾತಾಡಿಸಿ ಮೆಲ್ಲಗೆ ಮಂದಾರದ ಟೊಂಗೆಯನ್ನೇರಿ ಮಾಯವಾಗುತ್ತಿತ್ತು. ತೊಳೆದ ಡಬ್ಬಿಗಳು ಹತ್ತು ನಿಮಿಷದಲ್ಲಿ ಫಳಫಳ ಒಣಗಿ ಹೊಳೆಯುತ್ತಿದ್ದವು. ಹೊಂಟುನಿಂತ ಅವರನ್ನು ತಡೆಯದಂತೆ ತಮ್ಮನ್ನು ತಡೆದದ್ದು ಏನು? ನಂತರ ಅವರನ್ನು ಹುಡುಕಿ ಹೋಗಬೇಕೆಂದೂ ತಮಗೆ ಅನಿಸಲಿಲ್ಲ ಏಕೆ? ಈ ಕುರಿತು ಪರಸ್ಪರ ಮಾತಾಡಬೇಕೆಂದೂ ಏಕನಿಸುತ್ತಿಲ್ಲ? ಮ್ಯಾನ್ ಆಫ್ ದಿ ಮ್ಯಾಚ್ ಇತ್ಯಾದಿ ಪುಟ್ಟ ಬಹುಮಾನ ಗೆದ್ದು ಬರುವ ರವ್ಯಾ ಆಗಾಗ ಸುದ್ದಿಗಳನ್ನೂ ತರುತ್ತಿದ್ದ. ಆ ಜಿಮ್‍ ನಲ್ಲಿ ಸಪನ್ ಈಗ ಇಲ್ಲಂತೆ, ಅವನು ದಾಂಡೇಲಿಯಲ್ಲೇ ಇದ್ದಾನಂತೆ, ಗೋವಾದಲ್ಲೊಮ್ಮೆ ಯಾರಿಗೋ ಇಬ್ಬರೂ ಬೈಕಿನ ಮೇಲೆ ಸಿಕ್ಕಿದ್ದರಂತೆ. ನಡುರಾತ್ರಿ ಎಚ್ಚರಾದರೆ ಅವ್ವಗೆ ಮತ್ತೆ ನಿದ್ದೆ ಬರುತ್ತಿರಲಿಲ್ಲ. ಪ್ರೀತಿಯಿಂದ ಸಂಸಾರವನ್ನು ಪ್ರಾರಂಭಿಸಿಕೊಡುವ ಅವಕಾಶವನ್ನೇ ತಮಗೆ ಕೊಡಲಿಲ್ಲವಲ್ಲ ಮಗಳು. ಎರಡು ದಿವಸ ಕೊಟ್ಟಿದ್ದರೆ ತಯಾರಿ ಮಾಡಿಬಿಡುತ್ತಿದ್ದೆವು. ಅದೇ ಮಂಗ್ಯಾನ ಕೊರಳಿಗೇ ಸಾಂಗವಾಗಿ ಕಟ್ಟಿಬಿಡುತ್ತಿದ್ದೆವು. ಬಾಬಾನಿಗೆ ಆಗಾಗ ಸಿಟ್ಟು, ನಗೆ ಎರಡೂ ಒಮ್ಮೆಗೆ ಬರತೊಡಗಿತು. ಸಿಟ್ಟಾಗಲು ಹೋದರೆ ನಗುಬರುತ್ತಿತ್ತು. ನಗೆಯಾಡಲು ಹೋದರೆ ಸಿಟ್ಟು ಒತ್ತರಿಸುತ್ತಿತ್ತು. ಪೃಥ್ವಿರಾಜ ಚವ್ಹಾಣನಂತೆ ಬಂದುಹೋದ ಸಪನ್ ದಾಂಡೇಲಿವಾಲಾನ ಕಷ್ಟವಾದರೂ ಏನಿತ್ತೋ ಪಾಪ ಅಂತ ಕನಿಕರವೂ ಬರುತ್ತಿತ್ತು. ಆತ ಯಾರಿಗೋ ಏನನ್ನೋ ತೋರಿಸಲು ಹಾಗೆ ಮಾಡಿರಬೇಕು ಅಥವಾ ಚಿತ್ತಿನೇ ಅವನಿಗೆ ಸವಾಲು ಹಾಕಿರಬೇಕು. ಮೈಮ್ಯಾಗ ಬಂದವರ ಹಂಗ ಅದೇನೋ ಮಾಡಿಕೊಂಡು ಈಗ ಒದ್ದಾಡುತ್ತಲೂ ಇರಬೇಕು ಪಾಪ. ಒಬ್ಬೊಬ್ಬರ ಸಾಹಸದ ಕಲ್ಪನೆ ಒಂದೊಂದಿರ್ತಾವು. ಅದರಲ್ಲಿ ಉಳಿದವರ ಪಾರ್ಟು ಎಷ್ಟು? ನಾವು ಸಪೋರ್ಟು ಮಾಡ್ತೀವಪಾ ಅಂತ ಹೇಳಲಿಕ್ಕೆ ಹೋಗಿ ಮತ್ತೆ ಎಲ್ಲಾ ಉಲ್ಟಾನೇ ಆಗಿ ಅವ ಸಾಹಸದ ಎರಡನೇ ಅಂಕ ಶುರುಮಾಡಿದರೆ! ಏನೋ ಒಳ್ಳೆಯದಕ್ಕೇ ಎಲ್ಲಾ ಆಗಿದೆ. ಇಲ್ಲದಿದ್ದರೆ ನಾವು ತಡೆಯದೇ ಇರುತ್ತಿದ್ದೆವೆ! ಆರಾಮಾಗೇ ಇದ್ದಾರೆ ಅವರು. ನಿದ್ದೆಯಲ್ಲೊಮ್ಮೆ ಬಾಬಾ “ಚಿತ್ರಲೇಖಾ” ಎಂದು ಕೂಗಿದಂತೆ ಕೇಳಿಸಿ ಅವ್ವ ಎದ್ದು ಲೈಟು ಹಾಕಿ “ಏನಾತ್ರಿ?” ಎಂದು ನೀರು ಕುಡಿಸಿ, ರವ್ಯಾ ಗಾಳಿ ಹಾಕಿದ. “ಕನಸಾಗ ಬಂದಿದ್ಲ? ಅವಳ ಮನಿಯಾಗ ಇದ್ಲ? ಹೆಂಗಿತ್ತು ಮನಿ?” ಎಂದು ಕೇಳಿದಳು.

“ನೋಡೋಮೊದಲ ಎಬಿಸಿ ಬಿಟ್ಯಲ್ಲ ನೀ” ಎಂದು ಬಾಬಾ ಹತಾಶನಾಗಿ ನಕ್ಕ. ಅರೆನಿದ್ದೆಯ ರವ್ಯಾ ಆರ್ತನಾಗಿ “ಬಾಬಾ ನಾ ಬೆಂಗಳೂರಿಗೆ ಹೋಗ್ಲಿ? ಅಲ್ಲಿ ಜಲ್ದಿ ಕೆಲಸಾ ಸಿಕ್ತಾವಂತ. ಸೈಡ್‍ಬೈಸೈಡ್ ಪ್ರೊಗ್ರಾಮಿಂಗ್ ಕಲೀತಿನಿ” ಎಂದ. ಎರಡು ಕನಸುಗಳ ನಡುವಿನ ವಲಯದಲ್ಲಿ ಮೂವರೂ ಇದ್ದಂತಿತ್ತು.

ಒಮ್ಮೆ ವಿದ್ಯಾವರ್ಧಕ ಸಂಘದ ಕಾರ್ಯಕ್ರಮವೊಂದಕ್ಕೆ ಯೂನಿವರ್ಸಿಟಿ ರೇಲ್ವೇ ಕ್ರಾಸಿನ ಹಿರೆ ಸಾಹಿತಿಗಳನ್ನು ಕರಕೊಂಡು ಹೋಗುವುದಿತ್ತು. ಬಾಬಾ ದಾರೀಲಿ, “ಅಲ್ರೀ ಸರ್, ಎಲ್ಲರ ಜೀವನಾನೂ ಒಂದೇ ನಮೂನಿ ಇರಬೇಕು ಅಂತೇನಾದ್ರೂ ಅದ ಏನ್ರೀ” ಅಂತ ಅವರನ್ನು ಕೇಳಿಯೇಬಿಟ್ಟ. ಅದಕ್ಕವರು ಹಿಂದಿನ ಸೀಟಿನಲ್ಲಿ ಎಲೆಅಡಿಕೆ ಮೆಲ್ಲುತ್ತ ಕೂತಿದ್ದವರು ಬಾಬಾನ ಬೆನ್ನು ಸವರಿ “ಹಾಂಗೇನಿಲ್ಲಾ ಸಿದ್ಧಪ್ಪಾ, ಒಂದೊಂದು ಜೀವಾನೂ ಒಂದೊಂದು ನಮೂನಿ. ಅದಕ ಜೀವನ ಇಷ್ಟು ಛಂದ ಅದ. ಸುಮ್ಮನೆ ಅದು ನಡೀತಿರಬೇಕು. ಅದನ್ನ ಕಥಿ ಮಾಡಾಕ ಹೋಗಬಾರ್ದು. ಆರಾಮ ಇರ್ತದ. ಅದನ್ನ ಕಥಿ ಮಾಡಾಕ ನಮ್ಮಂಥ ಬೆರ್ಕಿ ಸಾಹಿತಿಗಳು ಇದೀವಲ್ಲ ಮತ್ತ. ನಮ್ಮ ಕೆಲಸಾ ಕಸಕೊಂತೀಯೇನಲೇ ಮತ್ತ!” ಎಂದು ಕಾಳಜಿಪೂರ್ವಕ ನಕ್ಕರು. ಆ ದಿನ ತಮಗೆ ಹಾಕಿದ ಶಾಲನ್ನು ನೀನೇ ಇಟಗೋ ಅಂತ ಬಾಬಾಗೆ ಕೊಟ್ಟರು. ಬಾಬಾ ಅದನ್ನು ಕಣ್ಣಿಗೊತ್ತಿಕೊಂಡ. ರವ್ಯಾ ಬೆಂಗಳೂರಿಗೇನಾದರೂ ಹೋದರೆ ಅವನಿಗಿರಲಿ ಅಂತ ಅದನ್ನು ರಾತ್ರಿ ಕಪಾಟಿನಲ್ಲಿ ನೀಟಾಗಿ ಮಡಿಸಿಟ್ಟ.

ಈವತ್ತು ರವ್ಯಾ ಆವೇಶದಿಂದ ಬಂದು `ಹಾಸ್ಪಿಟಲ್’ ಅಂತೇನೋ ಹೇಳಿದ್ದೇ ಅವ್ವನಿಗೆ ರೊಟ್ಟಿಯನ್ನು ಮುಗುಚಿದಂತಾಯಿತು. ಮೂರು ವರ್ಷ ಆಯಿತು, ಚಿತ್ತಿಯನ್ನು ನೋಡಿ. ಈಗ ಈ ಅವಕಾಶ ಒದಗಿಬಂದಾಗಲೂ ನೋಡದಿದ್ದರೆ ಹೇಗೆ ಅನಿಸಿ ಸೂಕ್ಷ್ಮ ಸಂಕಟವಾಯಿತು. “ಯಾವ ಹಾಸ್ಪಿಟಲ್ ಅಂದಿ?” ಎಂದಾಗ, ರವ್ಯಾ ತುಸು ಸಿಡಿಮಿಡಿಯ ದನಿಯಲ್ಲೇ “ಹಾಸ್ಪಿಟಲ್ ಅಲ್ಲಾ, ಹಾಸ್ಪಿಟಾಲಿಟೀ ಇಂಡಸ್ಟ್ರಿ. ಅಂದ್ರ ಮದುವೆ, ಸಮಾರಂಭ ಇತ್ಯಾದಿಗಳ ಟೋಟಲ್ ಕಂಟ್ರಾಕ್ಟ ತಗೋತಾರ ಅವರು. ಶಾಮಿಯಾನ, ಊಟದ ವ್ಯವಸ್ಥೆ ಎಲ್ಲಾ. ಹುಡುಗರಿಗೆ ಹುಡುಗಿಯರಿಗೆ ಅವರೇ ಯೂನಿಫಾರ್ಮ್ ಥರ ಪ್ಯಾಂಟು ಕೋಟು ಸೀರೆ ಎಲ್ಲಾ ಕೊಡ್ತಾರೆ. ಚಿತ್ತಿ ಅಲ್ಲಿ ಕೆಲಸಾ ಮಾಡ್ತಾಳಂತ. ಜ್ಯುವೆಲ್ ರಾಕ್ ಗಾರ್ಡನ್ ಹಾಲಿನ್ಯಾಗ ಈವತ್ತು ಯಾರದೋ ಮದಿವಿಲಿ ಚಿತ್ತಿ ಇದಾಳಂತ. ನನ್ನ ಗೆಳ್ಯಾ ಒಬ್ಬ ಅಲ್ಲಿ ಕ್ಯಾರಿಯೋಕೆ ಹಾಡ ಹಾಡ್ತಾನ. ಜನರ ಫರ್ಮಾಯಿಶ್ ಹಾಡು. ಹಿಂದಿ, ಕನ್ನಡಾ ಯಾವುದು ಕೇಳಿದರೂ ಹಾಡ್ತಾನ. ಅಂವಾ ಹೇಳಿದ. ಅವ್ವಾ ಹೋಗೂಣು?” ಎಂದ.

ಕ್ಷಣದ ಹಿಂದೆ ಎದ್ದಿದ್ದ ಆವೇಶ ಇಳಿದು ಗಲಿಬಿಲಿಗೊಂಡು ಅವ್ವಾ “ನೀ ಹೋಗಪಾ, ನೋಡಿ ಹ್ಯಂಗದಾಳು ಕೇಳಿಕೊಂಡು ಅವ್ವ ಕರದಾಳ ಅಂತ ಹೇಳು. ಬಂದ್ರ ಕರಕೊಂಬಾ. ಬಾಬಾನೂ ಡಬ್ಬಿ ಲೈನು ಮುಗಿಸಿ ಮಧ್ಯಾಹ್ನ ಮೂರರ ಮಟಾ ಬಂದಿರತಾರು. ಕರ್ಕೊಂಬಾ” ಎನ್ನುವಷ್ಟರಲ್ಲಿ ಒಳಗಿಂದ ಅಳುವೊಂದು ಒತ್ತರಿಸಿಕೊಂಡು ಬಂತು. ರವ್ಯಾಗೂ ಅಳು ಬಂದಂತಾಯ್ತು. “ಕಪಾಟಿನ್ಯಾಗಿನ ಅವಳ ಫೇವರಿಟ್ ಡ್ರೆಸ್ಸು ತಗೊಂಡ್ಹೋಗಿ ಕೊಡಲಿ?” ಎಂದ. “ಮನಿಗೆ ಬರ್ತಾಳಲಾ, ಆಗ ಏನಬೇಕೂ ಎಲ್ಲಾ ತಕೊಂಡು ಹೋಗಲಿ” ಎಂದ ಅವ್ವ “ಬಾಬಾನ್ನೂ ಕರ್ಕೊಂಡು ಹೋಗು. ಲಕ್ಷ್ಮೀ ಟಾಕೀಜ ಹತ್ರ ಏನೋ ಕೆಲಸದ ಅಂತ ಹೋಗ್ಯಾರ. ಅಲ್ಲೇ ಇರ್ತಾರ. ದೊಡ್ಡವರ ಮದವಿ ಇರ್ತದ. ಇಬ್ರೂ ಬಂದು ಛಲೋ ಶರ್ಟು ಹಾಕ್ಕೊಂಡು ಹೋಗ್ರಿ” ಎಂದಳು. ರವ್ಯಾ ದೋಸ್ತನ ಬೈಕು ತಕೊಂಡು ಲಕ್ಷ್ಮೀ ಟಾಕೀಸ್ ಕಡೆ ಹೋದ.

ಲಕ್ಷ್ಮೀ ಟಾಕೀಸನ್ನು ಜೇಸಿಬಿ ಮತ್ತು ಬುಲ್‍ಡೋಜರುಗಳು ನಿರ್ದಯವಾಗಿ ಉರುಳಿಸುತ್ತಿದ್ದವು. ಮುಂದಿನ ಅರ್ಧಭಾಗ ಈಗಾಗಲೇ ಉರುಳಿ ಒಳಗಿನ ಭಾಗ ಬತ್ತಲಾಗಿ ಬಿಟ್ಟಿತ್ತು. ಬಾಲ್ಕನಿಯ ಭಾಗ, ಪರದೆಯ ಭಾಗ ಎಲ್ಲಾ ಭಗ್ನರೂಪದಲ್ಲಿ ಹರಾಜಿಗೆ ಬಿದ್ದಿದ್ದವು. ರಸ್ತೆಯ ಈ ಬದಿ ನಿಂತು ಹತಪ್ರಭನಂತೆ ಅದನ್ನು ನೋಡುತ್ತಿದ್ದ ಬಾಬಾ ಅತ್ಯಂತ ಅನಾಥನಾಗಿ ಕಾಣುತ್ತಿದ್ದ. ಕಳೆದ ವಾರದಿಂದಲೇ ಆರಂಭವಾಗಿದ್ದ ಈ ಕಾಮಗಾರಿ ಈವತ್ತು ಹೆಚ್ಚಿನ ತುರ್ತಿನಲ್ಲಿ ನಡೆದಿತ್ತು. ರವ್ಯಾಗೆ ಗೊತ್ತು ಬಾಬಾನ ತಳಮಳ. ಅದೆಷ್ಟು ಸಿನೆಮಾ ಅಲ್ಲಿ ಒಟ್ಟಿಗೇ ನೋಡಿದ್ದೆವು. ಸಮೀಪ ನಿಂತ ರವ್ಯಾನ ಕೈಯನ್ನು ಹಿಡಿದ ಬಾಬಾನ ಮನಸ್ಸಲ್ಲಿ ಈ ಟಾಕೀಸಿನಲ್ಲಿ ನೋಡಿದ ಚಿತ್ರಗಳೆಲ್ಲವೂ ಮೂಡಿ ಮೂಡಿ ಮರೆಯಾಗುತ್ತಿದ್ದವು. ಸಾಂಗ್ಲಿಯ ಚಿತ್ರಗಳು ಅದರಲ್ಲಿ ಮಿಕ್ಸ್ ಆಗತೊಡಗಿದವು. ಸಾಂಗ್ಲಿಯ ಬಡಪಾಯಿ ಸಹೋದ್ಯೋಗಿಗಳು ನೆನಪಾದರು. ಹೀಗಾಗಬಾರದಿತ್ತು ಎನ್ನುವಂತೆ ಬಾಬಾ ತನ್ನಷ್ಟಕ್ಕೇ ತಲೆಕೊಡವಿಕೊಳ್ಳುತ್ತಿದ್ದ ಒಬ್ಬನೇ. ಎದುರು ನಡೀತಿರುವ ಈ ದೃಶ್ಯಕ್ಕೆ ಬಾಬಾನ ಮನಸ್ಸು ತನ್ನದೇ ಹಿನ್ನೆಲೆ ಸಂಗೀತವನ್ನು ಕಲ್ಪಿಸುತ್ತ ಆಳವಾಗಿ ಅನುಭವಿಸುತ್ತಿತ್ತು. ಒಂದು ಟಾಕೀಸಿನ ನಿಜವಾದ ಕ್ಲೈಮಾಕ್ಸ್ ದೃಶ್ಯ ಅದಾಗಿತ್ತು. ರವ್ಯಾಗೆ ಮಾತು ಹೊರಡಲಿಲ್ಲ. ಆಪ್ತನೊಬ್ಬನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ನಿಂತಿರುವ ಬಾಬಾನನ್ನು ಯಾವ ನೆಪದಲ್ಲೂ ಇಲ್ಲಿಂದ ಕದಲಿಸುವುದು ತಪ್ಪು ಅನಿಸತೊಡಗಿತು. “ಜಲ್ದೀ ಬಾ ಮನಿಗೆ” ಎಂದವನೆ, ಮನೆಯ ಕಡೆ ಬೈಕು ಓಡಿಸಿದ. ಮನೆಯಲ್ಲಿ ಅವ್ವ ಒಬ್ಬಳೇ ಚಾ ಮಾಡಿಕೊಂಡು ಕುಡಿಯುತ್ತಿದ್ದಳು. ಎದುರಿನ ಹೊಸ್ತಿಲಿನ ಆಚೆಯ ಬಿಸಿಲಿನ ಮೇಲೆ ಅವಳ ನಜರು ನೆಟ್ಟಿತ್ತು. ಅವಳ ಏಕಾಗ್ರತೆಯನ್ನು ಭಂಗಗೊಳಿಸದೆ ರವ್ಯಾ ಮುಖ ತೊಳೆದು, ಸದ್ದು ಮಾಡದೆ ಕಪಾಟಿನಿಂದ ಹೊಸ ಪ್ಯಾಂಟು, ಶರ್ಟು ತೆಗೆದು ಹಾಕಿಕೊಂಡ. ಸೆಂಟು ಚಿಮ್ಮಿಸಿಕೊಂಡು “ಕರ್ಕೊಂಬರ್ತೀನಿ” ಎಂದು ಬೈಕ್‍ ಗೆ ಕಿಕ್‍ ಕೊಟ್ಟ.

ಬೈಕಿನ ಸದ್ದು ಮರೆಯಾದ ತಕ್ಷಣ ಅವ್ವಗೆ ಸಾಧನಕೇರಿ ಪದ್ಮಕ್ಕನ ಮನೆ ತುಳಸೀ ಕಟ್ಟೆ ನೆನಪಾಯಿತು. ಬೇಂದ್ರೆ ಅಜ್ಜಾರ ಮನಿ ಅದು. ಪದ್ಮಕ್ಕ ಬೇಂದ್ರೆ ಅಜ್ಜಾರ ಸೊಸಿ. ಬೇಂದ್ರೆ ಅಜ್ಜನ ತಾಯಿ, ಮನಿ ಹಿಂದಿನ ತುಳಸೀಕಟ್ಟೆ ಎದುರು ಕೂತು ಪ್ರತೀ ಸಂಜೆ ಅದರ ಜೊತಿ ಸುಖದುಃಖ ಮಾತಾಡಿಕೋತಿದ್ಲಂತೆ. ಪದ್ಮಕ್ಕ ಪದೇಪದೇ ಹೇಳೋರು. ಆ ಮಹಾತಾಯಿಯ ಎಷ್ಟೊಂದು ಸೊಲ್ಲುಗಳನ್ನು ಆ ತುಳಸಿಕಟ್ಟೆ ಆಲಿಸಿರಬೇಕು. ಅವ್ವಗೆ ಈಗ್ಯಾಕೋ ಆ ತುಳಸಿಕಟ್ಟೆ ಹತ್ತಿರ ಸ್ವಲ್ಪು ಕೂತು ಬರಬೇಕು ಅನಿಸಿತು. ಸರಸರ ಮುಖ ತೊಳೆದು, ಬಾಗಿಲನ್ನು ತೆರೆದೇ ಇಟ್ಟು, ಪಕ್ಕದ ಮನೆಯಾಕೆಗೆ `ನಾ ಸಾಧನಕೇರಿಗೆ ಹೋಗಿ ಬರ್ತೀನ್ರಿ ಲಗೂನ’ ಅಂತ ಹೇಳಿ ಸಟಸಟ ರಸ್ತೆಯ ಕಡೆ ನಡೆಯತೊಡಗಿದಳು. ಹೊರಗಿನ ಗೇಟು ಸಪ್ಪಳಾಗದಂತೆ ತಳ್ಳಿ ಒಳಬಂದು ಪದ್ಮಕ್ಕನನ್ನೂ ಕೂಗದೆ ಪ್ರಶಾಂತಿಯ ತವರುಮನೆಯಂತೆ ನಿಂತಿದ್ದ ಆ ಕಟಾಂಜನದ ಮನೆಯ ಹಿಂಭಾಗಕ್ಕೆ ಹೋಗಿ ತನಗಾಗಿಯೇ ಕಾಯುತ್ತ ಕೂತಂತಿದ್ದ ಪರಮಾಪ್ತವಾದ ತುಳಸಿಕಟ್ಟೆಯ ಮುಂದೆ ಕೂತಳು. ಅಲ್ಲೊಂದು ಮೃದುವಾದ ಬೆಳಕು ಇತ್ತು. ತುಳಸೀಕಟ್ಟೆ ತನ್ನನ್ನು “ಸತ್ಯಭಾಮಾ ಬಾ” ಎಂದು ಮದುವೆ ಮುಂಚಿನ ಹೆಸರಿನಿಂದ ಕರೆದಂತೆನಿಸಿತು.