ಒಂದು ರೀತಿಯಲ್ಲಿ ಗಾಂಧಿವಾದಿಯಾಗಿರುವ ನಾಯಕರು ಸರಳ ಜೀವನದ ಜತೆಗೆ ಹಣಕಾಸಿನ ವಿಚಾರದಲ್ಲೂ ಪಾರದರ್ಶಕವಾಗಿರಬೇಕೆನ್ನುವವರು. ಮೀರಕ್ಕ ಕೂಡ ಯಾವಾಗಲೂ ನೂಲಿನ ಸೀರೆ ಧರಿಸುವವರು. ನಾವು ಎಂಎ ಓದುತ್ತಿದ್ದಾಗ ಮಾನಸಗಂಗೋತ್ರಿಯ ಬಯಲು ರಂಗಮಂದಿರದ ಆವರಣದಲ್ಲಿ ನಡೆದ ಯಾವುದೋ ಕಾರ್ಯಕ್ರಮ ನೋಡಲು ಮೀರಕ್ಕ, ಮಗಳು ಕೀರ್ತಿಯೊಡನೆ ಬಂದಿದ್ದರು. ಅವರುಟ್ಟ ರೇಷ್ಮೆ ಸೀರೆಯನ್ನು ಚೆನ್ನಾಗಿದೆಯೆಂದು ನಮ್ಮ ಗುಂಪಿನಲ್ಲಿದ್ದವರು ಯಾರೋ ಹೇಳಿದಾಗ ಕೀರ್ತಿ ತಕ್ಷಣ ಇದು ಅಮ್ಮನಿಗೆ ಯಾರೋ ಪ್ರಸೆಂಟ್ ಮಾಡಿದ್ದು ಅಪ್ಪ ಬರೀ ಕಾಟನ್ ಸೀರೆ ಕೊಡಿಸ್ತಾರೆ ಅಂತ ತಮಾಷೆಗೆಂಬಂತೆ ಹೇಳಿದಳು.
ನೆನ್ನೆಯಷ್ಟೇ ಅಗಲಿದ ಹಿರಿಯ ವಿಮರ್ಶಕ ಜಿ. ಎಚ್. ನಾಯಕರ ಕುರಿತು ಡಾ. ಎಲ್.ಸಿ. ಸುಮಿತ್ರಾ ಹಂಚಿಕೊಂಡಿದ್ದ ನೆನಪುಗಳು ನಿಮ್ಮ ಓದಿಗೆ

ಸಾಹಿತ್ಯದ ಪಾಠ ಮಾಡುವ ಅಧ್ಯಾಪಕರು ಸಹಜವಾಗಿಯೇ ಬೇರೆ ವಿಷಯಗಳ ಅಧ್ಯಾಪಕರಿಗಿಂತ ಹೆಚ್ಚು ತಮ್ಮ ವ್ಯಕ್ತಿತ್ವದ ಪ್ರಭಾವವನ್ನು ವಿದ್ಯಾರ್ಥಿಗಳ ಮೇಲೆ ಬೀರುತ್ತಾರೆ. ಇದು ಅವರ ಪ್ರಯತ್ನವಿಲ್ಲದೆ ನಡೆಯುವಂಥದು. ಹೀಗೆ ತಿರುಗಿ ನೋಡಿದಾಗ ನೆನಪಾಗುವವರು ಜಿ.ಎಚ್. ನಾಯಕ್. ನಮಗೆ ಸಾಹಿತ್ಯ ವಿಮರ್ಶೆಯನ್ನು ಕಲಿಸಿದ ಮೇಷ್ಟ್ರು ಕೆಲವು ಅಧ್ಯಾಪಕರು ವಿದ್ಯಾರ್ಥಿಗಳಿಗೆ ಹೀಗೆ ಮಾಡಿ ಎಂದು ಹೇಳುತ್ತಾರೆ. ಇನ್ನು ಕೆಲವರು ಮೌನವಾಗಿಯೇ ತಮ್ಮ ನಡವಳಿಕೆಯಿಂದಲೇ ಮಾರ್ಗದರ್ಶನ ಮಾಡುತ್ತಾರೆ. ಜಿ.ಎಚ್.ನಾಯಕ್ ಈ ಎರಡನೇ ಗುಂಪಿನವರು. ಚಿಕ್ಕ ವಿಷಯಗಳಿಗೂ ಗಮನ ಕೊಡುವುದು, ತಪ್ಪುಗಳಾಗದಂತೆ ಕಾಳಜಿ ವಹಿಸುವುದು, ಸ್ವಲ್ಪ ಹೆಚ್ಚೇ ಅನ್ನಿಸುವ ನೈತಿಕಕಾಳಜಿ, ತಮ್ಮ ಅಭಿಪ್ರಾಯಗಳನ್ನು ಹೇಳುವುದರಲ್ಲಿ ನಿಷ್ಠುರರಾದರೂ ಯಾರ ಮನಸ್ಸಿಗೂ ನೋವಾಗುವಂತೆ ಮಾತನಾಡಲಾರರು. ಇವು ಅವರ ವ್ಯಕ್ತಿತ್ವದ ಮಹತ್ವದ ಅಂಶಗಳು. ‘ಬಾಗಿಲಲ್ಲೇ ನಿಂತು ನಮ್ಮ ಡಿಪಾರ್ಟಮೆಂಟ್ ಗೆ ಬನ್ನಿ ಎಂದು ಕರೆಯುವ ಸಬ್ಜೆಕ್ಟ್ ಗಳಿರುವಾಗ ನೀವು ಕನ್ನಡ ಯಾಕೆ ತೆಗೆದುಕೊಂಡಿರಿ’, ಎಂದು ಕೇಳಿ ನಾವೆಲ್ಲ ಸಾಹಿತ್ಯಾಸಕ್ತರು ಎಂದು ಖಚಿತಪಡಿಸಿಕೊಂಡರು. ಪ್ರತಿಯೊಂದು ವಿಚಾರವನ್ನೂ ಬಹಳ ಕಾಳಜಿಯಿಂದ ಗಮನಿಸುವುದೂ ಮತ್ತು ಕಾಳಜಿ ಎಂಬ ಪದವನ್ನು ತಾವೇ ತಮ್ಮ ಮಾತಿನಲ್ಲಿ ತುಂಬಾ ಉಪಯೋಗಿಸುವುದನ್ನು ಗಮನಿಸಿ ನಾವು ಅವರನು ‘ಚಿರಂತನ ಕಾಳಜಿಯ ನಾಯಕರು’ ಎಂದು ಪ್ರೀತಿಯಿಂದ ಕರೆಯುತ್ತಿದ್ದೆವು.

ಮಾನಸಗಂಗೋತ್ರಿಯಲ್ಲಿ ಎಂಎ, ಓದುತ್ತಿದ್ದ ಸಂದರ್ಭ. ತೀರ್ಥಹಳ್ಳಿಯ ಕಾಲೇಜ್ ನಿಂದ ಮೈಸೂರಿನ ಮಾನಸ ಗಂಗೋತ್ರಿಗೆ ಹೋದ ಸಂತೋಷದಲ್ಲಿ ಮೊದಲನೇ ಟೆಸ್ಟ್ ಬಂದಿದ್ದೇ ತಿಳಿಯಲಿಲ್ಲ. ಮೊದಲನೇ ಸೆಮ್ ನ ಮೊದಲ ಇಂಟರ್ನಲ್ ಟೆಸ್ಟ್ ಮುಗಿದಿತ್ತು. ಹತ್ತು ಅಂಕಗಳ ಉತ್ತರ ಪತ್ರಿಕೆ ಮೌಲ್ಯಮಾಪನವಾಗಿ ನಮ್ಮ ಕೈಲಿತ್ತು. ನೋಡಿಕೊಂಡೆವು. ಹತ್ತಕ್ಕೆ ಏಳು ಅಂಕ ಅತಿಹೆಚ್ಚು. ಎರಡನೆಯವರಿಗೆ ಆರೂಮುಕ್ಕಾಲು, ಮತ್ತೊಬ್ಬರಿಗೆ ಆರೂವರೆ, ಆರೂಕಾಲು. ಅದುವರೆಗೆ ನಮಗೆ ಅರ್ಧ ಮಾರ್ಕ್ಸ್ ಕೊಡುವುದು ತಿಳಿದಿತ್ತೇ ಹೊರತು ಕಾಲು, ಮುಕ್ಕಾಲು ಅಂಕಗಳನ್ನು ಕೊಡಬಹುದೆಂಬ ಊಹೆಯೂ ಇರಲಿಲ್ಲ. ನಾವು ಆಶ್ಚರ್ಯದಿಂದ ನಮ್ಮ ಉತ್ತರಪತ್ರಿಕೆಗಳ ತುಲನೆ ಮಾಡಿಕೊಳ್ಳುವಾಗ ಜಿಎಚ್‌ಎನ್. ಮೇಷ್ಟ್ರು ಅರ್ಧ ಮಾರ್ಕ್ಸ್ ಹೆಚ್ಚು ಕಡಿಮೆ ಯಾಕೆಂದು ವಿವರಣೆ ನೀಡುತ್ತಿದರು. ಚೆನ್ನಾಗಿ ಬರೆದ ಉತ್ತರಗಳಲ್ಲೂ ಕಿಂಚಿತ್ ವ್ಯತ್ಯಾಸ ಇರುವುದನ್ನು ಈ ಅಂಕಗಳು ಸೂಚಿಸುತ್ತಿದ್ದವು. ಅದು ಜಿಎಚ್ ನಾಯಕರ ನಿಷ್ಪಕ್ಷಪಾತ ಮೌಲ್ಯಮಾಪನದ ರೀತಿ.

ಎಂಎ ತರಗತಿಗಳ ಮೊದಲ ದಿನ ಅಧ್ಯಾಪಕರ ಪರಿಚಯ ಮತ್ತು ಸೆಮೆಸ್ಟರ್ ಪದ್ಧತಿಯ ನಿಯಮಗಳನ್ನು ಹೇಳಲು ಅಧ್ಯಯನ ಸಂಸ್ಥೆಯ ಎರಡನೇ ಮಹಡಿಯ ಸಭಾಂಗಣದಲ್ಲಿ ಕಾರ್ಯಕ್ರಮವೊಂದನ್ನೇರ್ಪಡಿಸಿದ್ದರು. ನಮ್ಮೆದುರಿಗೆ ಮರದ ಕುರ್ಚಿಗಳಲ್ಲಿ ಸಾಲಾಗಿ ಸಿಪಿಕೆ, ಜಿಎಚ್ ನಾಯಕ್, ಎಚ್‌ಎಂ ಚನ್ನಯ್ಯ, ಎಲ್.ಬಸವರಾಜು, ಡಿ. ವಿಜಯ, ವೆಂಕಟಾಚಲ ಶಾಸ್ತ್ರಿ, ರಾಗೌ, ಡಿಕೆ ರಾಜೇಂದ್ರ ಇನ್ನೂ ಕೆಲವರು ಕುಳಿತಿದ್ದರು. ಅಧ್ಯಾಪಕರು ವಿದ್ಯಾರ್ಥಿಗಳ ಪರಸ್ಪರ ಪರಿಚಯ ಆಯಿತು. ಹಾಮಾ ನಾಯಕರು ಆಗ ಅಧ್ಯಯನ ಸಂಸ್ಥೆಯ ನಿರ್ದೇಶಕರು. ಅವರ ಬಿಗುವಿನ ನಡತೆ ನಮಗೆ ಭಯ ಹುಟ್ಟಿಸುವಂತಿದ್ದರೆ ಜಿಎಚ್‌ಎನ್ ಮತ್ತು ವಿಜಯಾ ದಬ್ಬೆ ಭರವಸೆ ಹುಟ್ಟಿಸುವಂತೆ ಸೌಮ್ಯವಾಗಿ ಕಂಡರು. ಸೆಮೆಸ್ಟರ್ ಪದ್ಧತಿ ಅದೇ ಮೊದಲನೇ ಸಲ ಪ್ರಾರಂಭವಾಗಿತ್ತು.

ನಾನಂತೂ ಮೈಸೂರಿನಲ್ಲಿ ಕನ್ನಡ ಎಂಎ ಓದಬೇಕೆಂದು ಹೈಸ್ಕೂಲಿನಲ್ಲೇ ಕನಸು ಕಂಡವಳು. ಅದಕ್ಕೆ ಕಾರಣ ಬೇಸಿಗೆರಜೆಯಲ್ಲಿ ಅಜ್ಜಿಯ ಮನೆಗೆ ಹೋದಾಗ ಅಲ್ಲಿ ನನ್ನ ತಾಯಿಯ ಸೋದರಸಂಬಂಧಿಗಳು ಭೇಟಿಯಾಗುತ್ತಿದ್ದರು. ಯಾವಾಗಲು ಕಾದಂಬರಿಯಲ್ಲಿ ತಲೆ ಹುದುಗಿಸಿಕೊಂಡಿರುತ್ತಿದ್ದ ನನಗೆ ಕನ್ನಡ ಎಂಎ ಓದುವ ಸಲಹೆ ಕೊಟ್ಟವರು ಆಗ ಮಾನಸಗಂಗೋತ್ರಿಯಲ್ಲಿ ಜಿಯಾಲಜಿ ಎಂಎಸ್ಸಿ ಓದುತ್ತಿದ್ದ ನನ್ನ ಸೋದರ ಸಂಬಂಧಿ. ಫಸ್ಟ್ ಇಯರ್ ಪಿಯೂಗೆ ಮುಲ್ಕಿ ವಿಜಯಾ ಕಾಲೇಜ್ ಹಾಸ್ಟೆಲ್ ನಲ್ಲಿದ್ದುಕೊಂಡು ಸೈನ್ಸ್ ಓದುವ ವ್ಯವಸ್ಥೆ ಮಾಡಿದ್ದ ಅಪ್ಪನ ಆಸೆಗೆ ವಿರುದ್ಧವಾಗಿ ನಾನು ಆರ್ಟ್ಸ್ ಗೆ ಬದಲಾಯಿಸಿಕೊಂಡು ತೀರ್ಥಹಳ್ಳಿಯಲ್ಲಿ ಪದವಿ ಮುಗಿಸಿ ಮೈಸೂರಿಗೆ ಕನ್ನಡ ಎಂಎ ಓದಲು ಬಂದು ಹಾಸ್ಟೆಲ್ ನಲ್ಲಿದ್ದ ಎರಡನೆ ದಿನವೆ ಮುಲ್ಕಿ ಕಾಲೇಜಿನಲ್ಲಿ ನನ್ನ ತರಗತಿಯಲ್ಲಿದ್ದ ಹುಡುಗಿಯೊಬ್ಬಳು ನನ್ನ ಗುರುತು ಹಿಡಿದು ಮಾತಾಡ್ಸಿದಳು. ಅವಳು ವೀಣಾ ಸುವರ್ಣ ಎಂಎಸ್ಸಿ ಜ಼ೂಆಲಜಿಗೆ ಸೇರಿದ್ದಳು.

ಜಿಎಚ್ಎನ್, ಜಿಎಸ್ಎಸ್ಅಧ್ಯಾಪಕರ ಗುಂಪಿನಲ್ಲಿ ಜಿಎಚ್ ನಾಯಕರು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿದ್ದರು. ಅವರ ಮಾತಿನ ರೀತಿ, ಚಿಂತನೆಗಳೂ ಭಿನ್ನವಾಗಿದ್ದವು. ಕೆಲವು ಅಧ್ಯಾಪಕರು ಮಾಡುತ್ತಿದ್ದಂತೆ ಮಾತಿನ ನಡುವೆ ಜಾತಿಯನ್ನು ಎಳೆದುತರುತ್ತಿರಲಿಲ್ಲ. ‘ವಿನಯ ವಿಮರ್ಶೆ’ಯನ್ನು ಬರೆದಂತೆಯೇ ಬದುಕಿದವರೂ ಕೂಡ. ಅವರು ಸ್ಕೂಟರ್ ಮೇಲೆ ಕುಳಿತು ಹೋಗುವಾಗಲೂ ತಲೆಯನ್ನು ಪಕ್ಕಕ್ಕೆ ವಾಲಿಸಿಕೊಂಡು ಸಂಕೋಚದಿಂದೆಂಬತೆ ಕುಳಿತಿರುತ್ತಿದ್ದರು. ಹಾ.ಮಾ. ನಾಯಕರು ಇದಕ್ಕೆ ತದ್ವಿರುದ್ಧ. ಸಂಜೆ ಏನಾದರೂ ಸಿಟಿ ಕಡೆ ಹೋಗಲು ನಾವು ಬಸ್ ಸ್ಟಾಪ್ ನಲ್ಲಿ ಬಸ್ ಗಾಗಿ ಕಾಯುತ್ತಾ ಕುಳಿತಿರುವಾಗ ಐದೂವರೆಗೆ ಮನೆಗೆ ಹೊರಟ ಹಾ.ಮಾ. ನಾಯಕರ ಫಿಯೆಟ್ ಕಾರು ಅಧ್ಯಯನ ಸಂಸ್ಥೆಯ ಹಿಂಭಾಗದಿಂದ ಕೆಂಬಣ್ಣದ ಮಣ್ಣಿನ ರಸ್ತೆಯಲ್ಲಿ ದೂಳೆಬ್ಬಿಸಿಕೊಂಡು ವೇಗವಾಗಿ ಬಂದು ಬಸ್ ಸ್ಟಾಪ್ ಬಳಿ ತಿರುಗುವಾಗ ನಾವು ಲೈಬ್ರರಿಯಲ್ಲಿರಬೇಕಾದ ಸಮಯದಲ್ಲಿ ಇಲ್ಲಿರುವುದನ್ನು ಅವರು ಗಮನಿಸಿದರೆ ಎಂದು ಭಯವಾಗುತ್ತಿತ್ತು.

ಮೊದಲನೇ ಸೆಮೆಸ್ಟರ್ ನಲ್ಲಿ ಜಿ.ಎಚ್. ನಾಯಕರು ಹರಿಶ್ಚಂದ್ರ ಕಾವ್ಯ ಪಾಠ ಮಾಡುವಾಗ ಆ ಕಾವ್ಯದ ಪ್ರತಿಯೊಂದು ಮಗ್ಗುಲನ್ನೂ ವಿಶ್ಲೇಷಿಸಿದ ರೀತಿ ದಶಕಗಳ ನಂತರವೂ ನೆನಪಿನಲ್ಲಿ ಉಳಿದಿದೆ. ಈಗ ನಾನು ಪಾಠ ಮಾಡುವಾಗಲೂ ಆ ವಿಚಾರಗಳ ನೆರಳು ಇರುತ್ತದೆ. ಕೆಲವೊಮ್ಮೆ ಅವರ ಅಭಿಪ್ರಾಯಗಳ ಜತೆ ಮುಖಾಮುಖಿಯಾಗಿ ಹೊಸ ವಿಚಾರಗಳೂ ಹೊಳೆಯುತ್ತವೆ. ಜಿ.ಎಚ್.ಎನ್ ಪಾಠದ ಜತೆ ಅವರ ವ್ಯಕ್ತಿತ್ವವೊ ನಮ್ಮನ್ನು ಆಕರ್ಷಿಸುತ್ತಿತು. ಪ್ರತೀ ಕ್ಲಾಸೂ ಮೊದಲನೇ ತರಗತಿಯೆಂಬಂತೆ ಅವರು ಅಧ್ಯಯನ ಮಾಡಿಕೊಂಡು ಬರುತ್ತಿದ್ದುದು ತಿಳಿಯುತ್ತಿತ್ತು.

ಐಚ್ಛಿಕ ವಿಮರ್ಶೆಯ ತರಗತಿಗಳಲ್ಲಿ ಅವರು ಬೋಧಿಸುತ್ತಿದ್ದ ಎಲಿಯಟ್ ನ ‘ಪರಂಪರೆ ಮತ್ತು ವ್ಯಕ್ತಿಪ್ರತಿಭೆ’, ಐ.ಎ.ರಿಚರ್ಡ್ಸ್ ನ ‘ಸಂವಹನ ಸಿದ್ಧಾಂತ ಮತ್ತು ಮೌಲ್ಯ ಸಿದ್ಧಾಂತಗಳು’ ನಿನ್ನೆ ಕೇಳಿದಂತೆನಿಸುತ್ತವೆ. ತುಂಬಾ ಜನ ‘ಫೋಕ್ ಲೋರ್’  ಆಯ್ಕೆ ಮಾಡಿಕೊಂಡು ನಾವು ಆರು ಜನ ಮಾತ್ರ ವಿಮರ್ಶೆ ಕ್ಲಾಸಿನಲಿದ್ದೆವು. ‘ವಿಮರ್ಶೆ ಓದದೆ ಸಾಹಿತ್ಯದ ಓದು ಪೂರ್ಣವಲ್ಲ’ ಎಂದು ನಾಯಕರು ನಮಗೆ ಹೇಳುತ್ತಿದ್ದರು. ಬೇಂದ್ರೆಯವರ ನಾದಲೀಲೆ’, ಕುವೆಂಪು ಆಯ್ದ ಕವಿತೆಗಳು, ಅಡಿಗರ ಭೂಮಿಗೀತಗಳನ್ನು ಅವರು ಪಾಠ ಹೇಳುತ್ತ್ತಿದ್ದ ಬಗೆ, ಕವಿತೆಯೊಂದರ ಹೃದಯ ಪ್ರವೇಶಿಸುವುದು ಹೇಗೆಂದು ತಿಳಿಸಿಕೊಟ್ಟಿತು.

ಶಿಷ್ಟವಾದ ಭಾಷೆ ಬಳಸುತ್ತಿದ್ದ ಅವರು ಸದಭಿರುಚಿಗೆ ಮೀರಿದ ವಿಷಯಗಳು ಏನಾದರು ಟೆಕ್ಸ್ಟ್ ನಲ್ಲಿ ಬಂದರೆ ಕೆಂಪಾಗಿಬಿಡುತ್ತಿದ್ದರು. ಬರವಣಿಗೆ ಮತ್ತು ಮಾತಿನಲ್ಲಿ ತಾರ್ಕಿಕರಂತೆ ಕಂಡರೂ ಅಂತರಂಗದಲ್ಲಿ ಮೃದು, ಭಾವುಕ ಹೃದಯಿ. ಅವರ ಎರಡನೆಯ ಮಗು ಪ್ರೀತಿಯ ಅಕಾಲಿಕ ಅಗಲಿಕೆಯಿಂದಾದ ಆಘಾತದಿಂದ ಹೊರಬರಲು ಅವರಿಗೆ ದಶಕಗಳೇ ಬೇಕಾದವು.

ಕವಿತೆಯ ‘ಗೇಯಗುಣ’ ಅರ್ಥಕ್ಕೆ ಪೂರಕವಾಗಿರದೆ ತಾನೇ ವಿಜೃಂಭಿಸಿದರೆ ಕವಿತೆಯ ಪರಿಣಾಮ ಕಡಿಮೆಯಾಗುತ್ತದೆ ಎಂದು ಉದಾಹರಣೆಗೆ ತಾವೇ ಕವಿತೆಯೊಂದನ್ನು ಹಾಡಿ ತೋರಿಸಿದ್ದರು. ಬೇಂದ್ರೆಯವರ ಕುರುಡುಕಾಂಚಾಣ ಎಂದು ನೆನಪು. ಅವರು ಅಷ್ಟು ಚೆನ್ನಾಗಿ ಹಾಡುತ್ತಾರೆಂದು ಅವತ್ತೇ ನಮಗೆ ತಿಳಿದಿದ್ದು. ತರಗತಿಯ ಹೊರಗೆ ಅವರು ಆಗ ವಿದ್ಯಾರ್ಥಿಗಳ ಜತೆ ಮಾತನಾಡುತ್ತಿದ್ದುದೇ ಕಡಿಮೆ.

ಅರ್ಧದಲ್ಲಿ ನಿಂತಿದ್ದ ನನ್ನ ಸಂಶೋಧನೆ ಮುಂದುವರೆಯಲು ಕಾರಣ ನಾಯಕರೇ. ‘ಕುವೆಂಪು ೯೦’ ಕಾರ್ಯಕ್ರಮಕ್ಕಾಗಿ ಕುಪ್ಪಳಿಗೆ ಬಂದಿದ್ದ ಅವರು ಕುವೆಂಪು ಮತ್ತು ಕಾರಂತರ ಕಾದಂಬರಿಗಳ ತೌಲನಿಕ ಅಧ್ಯಯನ ಮಾಡುವಂತೆ ಸೂಚಿಸಿದರು.

ಒಂದು ರೀತಿಯಲ್ಲಿ ಗಾಂಧಿವಾದಿಯಾಗಿರುವ ನಾಯಕರು ಸರಳ ಜೀವನದ ಜತೆಗೆ ಹಣಕಾಸಿನ ವಿಚಾರದಲ್ಲೂ ಪಾರದರ್ಶಕವಾಗಿರಬೇಕೆನ್ನುವವರು. ಮನೆ, ಉಡುಗೆ ತೊಡಿಗೆ ಎಲ್ಲವೂ ಸರಳ. ಮೀರಕ್ಕ ಕೂಡ ಯಾವಾಗಲೂ ನೂಲಿನ ಸೀರೆ ಧರಿಸುವವರು. ನಾವು ಎಂಎ ಓದುತ್ತಿದ್ದಾಗ ಮಾನಸಗಂಗೋತ್ರಿಯ ಬಯಲು ರಂಗಮಂದಿರದ ಆವರಣದಲ್ಲಿ ನಡೆದ ಯಾವುದೋ ಕಾರ್ಯಕ್ರಮ ನೋಡಲು ಮೀರಕ್ಕ, ಮಗಳು ಕೀರ್ತಿಯೊಡನೆ ಬಂದಿದ್ದರು. ಅವರುಟ್ಟ ರೇಷ್ಮೆ ಸೀರೆಯನ್ನು ಚೆನ್ನಾಗಿದೆಯೆಂದು ನಮ್ಮ ಗುಂಪಿನಲ್ಲಿದ್ದವರು ಯಾರೋ ಹೇಳಿದಾಗ ಕೀರ್ತಿ ತಕ್ಷಣ ಇದು ಅಮ್ಮನಿಗೆ ಯಾರೋ ಪ್ರಸೆಂಟ್ ಮಾಡಿದ್ದು ಅಪ್ಪ ಬರೀ ಕಾಟನ್ ಸೀರೆ ಕೊಡಿಸ್ತಾರೆ ಅಂತ ತಮಾಷೆಗೆಂಬಂತೆ ಹೇಳಿದಳು. ಆದರೆ ಅದು ಅವರಿಬ್ಬರ ಸರಳತೆಯನ್ನು ಹೇಳುತ್ತಿತ್ತು. ತಮಗೆ ಸಂಬಂಧವಿಲ್ಲದ ವಿಷಯಗಳನ್ನು ಕುರಿತು ಅವರು ಟೀಕೆ ಟಿಪ್ಪಣಿ ಮಾಡುತ್ತಿರಲಿಲ್ಲ, ಒಬ್ಬ ಮಾದರಿ ಅಧ್ಯಾಪಕನಿಗಿರಬೇಕಾದ ಎಲ್ಲ ಗುಣಗಳು ನಾಯಕರಲ್ಲಿದ್ದವು.

ಅನಂತಮೂರ್ತಿ, ನಾಯಕ್ವಿದ್ಯಾರ್ಥಿಗಳ ಜತೆ ಒಂದು ಅಂತರವನ್ನು ಕಾಪಾಡಿಕೊಳ್ಳುತ್ತಿದ್ದ ಮೇಷ್ಟ್ರು ನಾಯಕರು. ನಮ್ಮದು ಸೆಮೆಸ್ಟರ್ ಪದ್ಧತಿಯಾಗಿದ್ದುದೂ ಅದಕ್ಕೆ ಕಾರಣವಾಗಿರಬೇಕು. ನಾನು ಮೊದಲನೇ ಸಲ ಅವರ ಮನೆಗೆ ಹೋಗಿದ್ದು ತೀರ್ಥಹಳ್ಳಿಯಲ್ಲಿ ನಾನು ಅಧ್ಯಾಪಕಿಯಾದ ಮೇಲೆ. ನನ್ನ ಗೆಳತಿಯೊಬ್ಬಳು ಅವರ ಫ್ಯಾಮಿಲಿ ಫ್ರೆಂಡ್ ಆಗಿದ್ದು ಹೊಸದಾಗಿ ಮದುವೆಯಾದ ಅವಳನ್ನು ಮೀರಾನಾಯಕ ಊಟಕ್ಕೆ ಕರೆದಿದ್ದರು. ಏನೋ ಕಾರಣಕ್ಕೆ ಮೈಸೂರಿಗೆ ಹೋಗಿದ್ದ ನನ್ನನ್ನೂ ಆಹ್ವಾನಿಸಿದ್ದರು. ಕನ್ನಡ ಅಧ್ಯಯನ ಸಂಸ್ಥೆಗೆ ಹೋಗಿ ವಿಜಯಾ ದಬ್ಬೆಯವರನ್ನು ಭೇಟಿಯಾಗಿ ಆಮೇಲೆ ನಾಯಕರ ಮನೆಗೆ ನಡೆದೇ ಹೋದೆ. ಅವರಾಗ ಮಾನಸಗಂಗೋತ್ರಿಯ ಅಧ್ಯಾಪಕರ ವಸತಿಗೃಹದಲ್ಲಿದ್ದರು. ಅಧ್ಯಯನ ಸಂಸ್ಥೆಯ ಕಾರಿಡಾರ್ ನಲ್ಲಿ ನಾವು ಕೆಲವು ಗೆಳತಿಯರು ವಿಜಯಾ ದಬ್ಬೆಯವರ ಜತೆ ಮಾತಾಡ್ತಾ ನಿಂತಿದ್ದಾಗ ನಮ್ಮ ಕಡೆಗೆ ನೋಡದೆ ಜಿಎಚ್‌ಎನ್ ಅವರ ಕ್ಲಾಸ್ ಮುಗಿಸಿಕೊಂಡು ಮನೆಗೆ ಹೋದರು. ನಾನು ಅವರ ಮನೆಗೆ ಹೋದ ಮೇಲೆ ಮೀರಕ್ಕನವರ ಬಳಿ ‘ನಾನು ಕನ್ನಡ ಅಧ್ಯಯನ ಸಂಸ್ಥೆಗೆ ಹೋಗಿ ಬಂದೆ’ ಎಂದು ಹೇಳುತ್ತಿದ್ದಾಗ ನಾಯಕರು ಅಲ್ಲಿ ನಿಂತಿದ್ದ ಹುಡುಗಿಯರ ಗುಂಪಿನಲ್ಲಿ ನೀವೂ ಇದ್ದಿರಾ? ಅಂತ ಕೇಳಿದರು. ಸಾಮಾನ್ಯವಾಗಿ ಅವರು ತರಗತಿಯ ಹೊರಗೆ ವಿದ್ಯಾರ್ಥಿನಿಯರ ಕಡೆಗೆ ನೋಡುತ್ತಿರಲಿಲ್ಲ. ನವ್ಯ ಕಾವ್ಯದ ಪ್ರಭಾವ ಇನ್ನೂ ತೀವ್ರವಾಗಿದ್ದ ಆ ಸಮಯದಲ್ಲಿ ನಾಯಕರ ಬದುಕು ಬರಹಗಳ ಸಂಯಮ ಎದ್ದು ತೋರುವಂತಿತ್ತು.

ಈಗ ಎಪ್ಪತ್ತೈದು ದಾಟಿದ ನಂತರ ನಾಲ್ಕೈದು ಸಲ ಬೇರೆ ಬೇರೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ದೈಹಿಕವಾಗಿ ಕುಗ್ಗಿದ್ದರೂ ತಮ್ಮ ಎಂದಿನ ಜೀವನೋತ್ಸಾಹವನ್ನು ಉಳಿಸಿಕೊಂಡಿದ್ದಾರೆ. ಮೈಸೂರಿಗೆ ಹೋದಾಗ ಅವರ ಮನೆಗೆ ನಾವು ಹೋಗದೇ ಬರುವುದಿಲ್ಲ. ಹೊಸದಾಗಿ ಪ್ರಕಟವಾದ ಅವರ ಪುಸ್ತಕಗಳನ್ನು ಶುಭಾಶಯದ ಹಸ್ತಾಕ್ಷರಗಳ ಜೊತೆಗೆ ಅವರು ಕೊಡದೇ ಇರುವುದಿಲ್ಲ.

(ಫೋಟೋ ಕೃಪೆ:ಪಂಡಿತಾರಾಧ್ಯ)