ಕನ್ನಡ ವಿಜ್ಞಾನ ವಾಙ್ಞಯ ಲೋಕದ ತಾರೆ  ಜಿ.ಟಿ. ನಾರಾಯಣ ರಾವ್, ಇಹದ ಬದುಕಿಗೆ ವಿದಾಯ ಹೇಳಿ (೨೭.೬.೨೦೦೮) ವರ್ಷವೊಂದು ಸಂದಿದೆ.

ಈ ಒಂದು ವರ್ಷದಲ್ಲಿ ಎಷ್ಟೊಂದು ರಾಜಕೀಯ ಸ್ಥಿತ್ಯಂತರಗಳಾಗಿಲ್ಲ! ಅವೆಲ್ಲವನ್ನು ನೆನಪು ಮಾಡುವುದು ಅವರಿಗೆ ಇಷ್ಟವಾಗದು. ಏಕೆಂದರೆ ರಾಜಕೀಯದಿಂದ ಅವರಿದ್ದರು ಮಾರು ದೂರ. ಅವರದೇನಿದ್ದರೂ ಗಣಿತ, ಖಭೌತ ವಿಜ್ಞಾನ ಮತ್ತು ಸಂಗೀತದಲ್ಲಿ ಆಸಕ್ತಿ.

ಜಿಟಿಎನ್ ಇರುತ್ತಿದ್ದರೆ ಈ ಬಾರಿ ಅವರ ಸಂಭ್ರಮಕ್ಕೆ ಎಣೆ ಇರುತ್ತಿರಲಿಲ್ಲ. ಏಕೆಂದರೆ ೨೦೦೯ನ್ನು ಜಾಗತಿಕ ಖಗೋಳ ವಿಜ್ಞಾನ ವರ್ಷವಾಗಿ ಆಚರಿಸಲಾಗುತ್ತಿದೆ – ನಾನೂರು ವರ್ಷಗಳ ಹಿಂದೆ ಗೆಲಿಲಿಯೋ ಗೆಲಿಲಿ ದೂರದರ್ಶಕವೆಂಬ ಹೊಸದೊಂದು ಉಪಕರಣವನ್ನು ನಿರ್ಮಿಸಿ, ಅದರಿಂದ ಆಕಾಶದ ಅಂತರಾಳವನ್ನು ಶೋಧಿಸುತ್ತ ಆಧುನಿಕ ಖಗೋಳ ವಿಜ್ಞಾನಕ್ಕೆ ನಾಂದಿ ಹಾಡಿದ ಸಾಧನೆಯ ನೆನಪಿಗಾಗಿ.

ಖಗೋಳ ವಿಜ್ಞಾನ ಜಿಟಿಎನ್ ಅವರ ಅತ್ಯಂತ ಆಪ್ತ ಕ್ಷೇತ್ರವಾಗಿತ್ತು. ಹಾಗೆ ನೋಡಿದರೆ ಇವರು ಕೂಡ ಒಂದು ಬಗೆಯಲ್ಲಿ ಗೆಲಿಲಿಯೋನ ಹಾಗೆಯೇ ಬಾಳಿದವರು. ವೈಚಾರಿಕತೆ ಅವರ ಜೀವನದ ಭಾಗವಾಗಿತ್ತು. ಆಷಾಢಭೂತಿಗಳನ್ನು ಕಂಡರೆ ಕೆಂಡದಂಥ ಕೋಪ. ಎಂದೇ ಅವರಿರುತ್ತಿದ್ದರೆ ಗೆಲಿಲಿಯೋನ ಬಗ್ಗೆ, ಖಗೋಳ ವಿಜ್ಞಾನ ಸಾಗಿ ಬಂದ ಹಾದಿಯ ಬಗ್ಗೆ, ಆಧುನಿಕ ಖಗೋಳ ವಿಜ್ಞಾನದ ಮುನ್ನಲೆಯ ಬಗ್ಗೆ ಖಂಡಿತವಾಗಿಯೂ ಬರೆಯುತ್ತಿದ್ದರು; ಉಪನ್ಯಾಸ ನೀಡುತ್ತಿದ್ದರು. ಒಟ್ಟು ಉತ್ಸವಕ್ಕೆ ಇನ್ನಷ್ಟು ಕಳೆ ಬರುತ್ತಿತ್ತು.

ನೋಡು ಬಾ ಆಕಾಶ

ಇಂದು ಇರುಳ ಬಾನಿನ ತಾರಾಮಂಡಲಗಳನ್ನು ನೋಡಿದಾಗಲೆಲ್ಲ ಅಯಾಚಿತವಾಗಿ ಮತ್ತೆ ಮತ್ತೆ ಜಿಟಿಎನ್ ನೆನಪಾಗುತ್ತಾರೆ. ಸಂಜೆಯಾಗುತ್ತಲೇ ತನ್ನ ಸುತ್ತ ಸುತ್ತಿಕೊಂಡ ಹಿರಿ ಕಿರಿಯರಿಗೆ ಆಕಾಶದ ನಕ್ಷತ್ರ ಚಿತ್ತಾರವನ್ನು ತೋರಿಸುತ್ತ ವಿವರಿಸದೇ ಹೋದರೆ ಸಮಾಧಾನವಾಗುತ್ತಿರಲಿಲ್ಲ ಅವರಿಗೆ. ನಮ್ಮೂರಿನ ಮಲಾರು ಗುಡ್ಡೆಯ ಮೇಲೆ ಎಳೆಯರಾದ ನಮ್ಮನ್ನು ಕರೆದುಕೊಂಡು ಹೋಗಿ ಬಾನಾಂಗಣದ ನಕ್ಷತ್ರಗಳನ್ನು ತೋರಿಸಿದ್ದು ನೆನಪಾಗುತ್ತಿದೆ. ಆ ಸಂದರ್ಭದಲ್ಲಿ ಅವರ ಹೇಳುತ್ತಿದ್ದ ಪುರಾಣ ಕಥೆಗಳು ಎಳೆಯರಾದ ನಮ್ಮಲ್ಲಿ ಇನ್ನಷ್ಟು ವಿಸ್ಮಯ ಉಂಟುಮಾಡುತ್ತಿದ್ದುವು. ಹಾಗಾಗಿಯೇ ನಾವೆಲ್ಲ ಅವರ ಬರವಿಗೆ ಕಾತರದಿಂದ ಕಾಯುತ್ತಿದ್ದೆವು.

ಸುಮಾರು ಇಪ್ಪತ್ತೈದು ವರ್ಷಗಳಷ್ಟು ಹಿಂದೆ. ರಾತ್ರೆ ಒಂಬತ್ತರ ಇಂಗ್ಲೀಷ್ ಸಮಾಚಾರದ ನಂತರ ಬೆಂಗಳೂರು ಆಕಾಶವಾಣಿ ಕೇಂದ್ರದಿಂದ ಮತ್ತು ಇತರ ಬಾನುಲಿ ಕೇಂದ್ರಗಳಿಂದ ಏಕಕಾಲದಲ್ಲಿ ಜಿಟಿಎನ್ ಅವರ ನಕ್ಷತ್ರಗಳ ವೀಕ್ಷಣೆಯ ವೀಕ್ಷಕ ವಿವರಣೆ ಆಗಾಗ ಪ್ರಸಾರವಾಗುತ್ತಿತ್ತು.

ಆ ಹೊತ್ತು ನಮ್ಮ ಕಿವಿ ರೇಡಿಯೋದಲ್ಲಿ ಮತ್ತು ದೃಷ್ಟಿ ಆಕಾಶದಲ್ಲಿ ಇರುತ್ತಿತ್ತು. ಅವರ ಅಸ್ಖಲಿತ ಕನ್ನಡ, ಕಂಚಿನ ಕಂಠ, ನಕ್ಷತ್ರ ಮಂಡಲಗಳಿಗೆ ಬೆಸೆದುಕೊಂಡ ಪುರಾಣದ ಕಥೆಗಳನ್ನು ಬಣ್ಣಿಸುತ್ತಿದ್ದ ಬಗೆ, ಒಂದರ ಹಿಂದೆ ಇನ್ನೊಂದರಂತೆ ಬರುತ್ತಿದ್ದ ಕನ್ನಡ ಕಾವ್ಯದ ಸಾಲುಗಳು,  ನಡು ನಡುವೆ ನುಸುಳುತ್ತಿದ್ದ ಹಾಸ್ಯ ಚಟಾಕಿಗಳು. ಅದೊಂದು ಅವರ್ಚನೀಯ ಅನುಭವ.

ನಾಡಿನಾದ್ಯಂತ ಶಾಲೆ ಕಾಲೇಜುಗಳಲ್ಲಿ ಇವರು ನಡೆಸಿದ ನಕ್ಷತ್ರ ವೀಕ್ಷಣೆ ಕಾರ್ಯಕ್ರಮಗಳು ಅವೆಷ್ಟೋ. ಇಂಥ ಕೆಲವು ಕಾರ್ಯಕ್ರಮಗಳಲ್ಲಿ ನಾನೂ ಭಾಗಿಯಾಗಿದ್ದೆ ಕಿರಿಯ ಹೈದನಾಗಿ. ಇವ್ಯಾವುವೂ ಇಂದು ಇಲ್ಲ ಎನ್ನುವಾಗ ಮನ ಭಾರವಾಗುತ್ತದೆ.

ಆದರೆ ಈ ಎಲ್ಲವನ್ನು ಘನೀಕರಿಸಿಕೊಂಡ ಅವರ ಕೃತಿಗಳು – ನಕ್ಷತ್ರ ವೀಕ್ಷಣೆ ನಕ್ಷತ್ರ ಸಾಮ್ರಾಜ್ಯ, ನೋಡೋಣು ಬಾರ ನಕ್ಷತ್ರ  ನಮಗಾಗಿ ಇಲ್ಲಿಯೇ ಇವೆ ಎನ್ನುವುದೊಂದು ಸಮಾಧಾನ. ಈ ಕೃತಿಗಳನ್ನು ಪ್ರತಿಯೊಬ್ಬ ಖಗೋಳ ವೀಕ್ಷಕ ಗಮನಿಸಲೇಬೇಕು.

ನೋಡೋಣು ಬಾರಾ ನಕ್ಷತ್ರ ದ ಬೆನ್ನುಡಿಯಲ್ಲಿ ಜಿ.ಟಿ.ಎನ್ ಬರೆದಿದ್ದಾರೆ
“ಗಗನವನ್ನು ಏಕೆ ನೋಡಬೇಕು? ಅದು ಅಲ್ಲಿ ಇರುವುದರಿಂದ! ಅದು ನಮಗೆ ಎಟುಕದಿರುವುದರಿಂದ! ಅದು ಬೃಹತ್ ಪ್ರಶ್ನೆಯಾಗಿ ನಮ್ಮನ್ನು ಸದಾ ಕಾಡುವುದರಿಂದ! ಇರುವುದೆಲ್ಲವ ಬಿಟ್ಟು  ಇರದುದರೆಡೆಗೆ ತುಡಿವಿದೇ ಜೀವನ? ಆಗಿರುವುದರಿಂದ!”

ಸೃಜನಶೀಲ ಮನಸು

ನಾವಿಂದು ಸಾಹಿತ್ಯ ಬರಹಗಳನ್ನು ಸೃಜನಶೀಲ ಮತ್ತು ಸೃಜನೇತರ ಎಂದು ವರ್ಗೀಕರಿಸುವುದುಂಟು. ಇದಕ್ಕೆ ಯಾವುದು ಅಳತೆಗೋಲು? ಕಥೆ, ಕಾದಂಬರಿ, ಕಾವ್ಯಗಳೆಲ್ಲವನ್ನು ಸಾರಾಸಗಟಾಗಿ ಸೃಜನಶೀಲ ಎನ್ನುವುದು ಸರಿಯೇ? ಹಾಗಿದ್ದರೆ ವಿಜ್ಞಾನ ಬರಹ? ಇವು ಎಷ್ಟು ಸೃಜನಶೀಲವೋ ಅದಕ್ಕೆ ಸರಿ ಮಿಗಿಲಾಗಿ ವಿಜ್ಞಾನ ಬರಹಗಳು ಕೂಡ ಅಷ್ಟೇ ಸೃಜನಶೀಲವೆಂದು ನನ್ನ ದೃಢವಾದ ನಂಬುಗೆ.

ವಿಜ್ಞಾನದ ಯಾವುದೋ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ, ಪರಿಕಲ್ಪನೆಗಳಿಗೆ ಚ್ಯುತಿಯಾಗದಂತೆ ವಿವರಿಸುವಲ್ಲಿ ಸೃಜನಶೀಲತೆ ಮುಖ್ಯ ಪಾತ್ರ ವಹಿಸುತ್ತದೆ. ಇಂಗ್ಲೀಷಿನಲ್ಲಿ ಜೇಮ್ಸ್ ಜೀನ್ಸ್, ಜಾರ್ಜ ಗ್ಯಾಮೋ, ಐಸಾಕ್ ಅಸಿಮೊ, ಕಾರ್ಲ್ ಸಾಗನ್ ಮೊದಲಾದವರ ಕೃತಿಗಳು ಜನಪ್ರಿಯ ವಿಜ್ಞಾನ ಕೃತಿಗಳು ಹೇಗಿರಬೇಕು ಎನ್ನುವುದಕ್ಕೆ ಅತ್ಯುತ್ತಮ ನಿದರ್ಶನಗಳಾಗಿವೆ. ಜಿಟಿಎನ್, ತೇಜಸ್ವಿ, ಟಿ.ಆರ್. ಅನಂತರಾಮು, ನಾಗೇಶ ಹೆಗ್ಡೆ ಮೊದಲಾದವರ ವಿಜ್ಞಾನ ಬರಹಗಳು ಈ ಬಗೆಯವು.

ಕನ್ನಡದಲ್ಲಿ ಜನಪ್ರಿಯ ವಿಜ್ಞಾನ, ಅದರಲ್ಲೂ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ಜಿಟಿಎನ್ ರಚಿಸಿದ ಕೃತಿಗಳು ಸುಮಾರು ನೂರರ ಹತ್ತಿರ. ಐದು ದಶಕಗಳಿಗೂ ಮಿಕ್ಕಿ ನಾಡಿನ ಎಲ್ಲ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗುತ್ತ ಅಸಂಖ್ಯಾತ ಎಳೆಯ ಕನ್ನಡ ಮನಸ್ಸಿನಲ್ಲಿ ಗಾಢ ಪ್ರಭಾವ ಬೀರಿದ್ದನ್ನು ಗಮನಿಸಬಹುದು. ಕೃಷ್ಣ ವಿವರಗಳು, ಸೂಪರ್ನೋವಾ, ಮಾನವ ಚಂದ್ರನ ಮೇಲೆ , ನೋಡೋಣು ಬಾರಾ ನಕ್ಷತ್ರ, ನಕ್ಷತ್ರ ಸಾಮ್ರಾಜ್ಯ, ಸೂರ್ಯನ ಸಂಸಾರ, ವಿಶ್ವದ ಕಥೆ, ಧೂಮಕೇತು, ಭವಿಷ್ಯ ವಿಜ್ಞಾನ, ಕಾಲ, ಬಲವಿಜ್ಞಾನದ ತತ್ವಗಳು, ವಿಶ್ವಯಾನ, ಕೋಪರ್ನಿಕಸ್ ಕ್ರಾಂತಿ, ಇನ್ನೊಂದು ಆಯಾಮ, ಗಣಿತ ಗಗನ ಗಮನ, ಫರ್ಮಾ ಯಕ್ಷ ಪ್ರಶ್ನೆ, ಋಷಿವಾಕ್ಯ ವಿಜ್ಞಾನ ಕಲೆ, ವಿಜ್ಞಾನ ನಿರ್ಮಾಪಕರು…….

೧೯೭೯ರಲ್ಲಿ ಐನ್‌ಸ್ಟೈನರ (೧೮೭೯-೧೯೫೫) ಜನ್ಮ ಶತಾಬ್ದಿಯನ್ನು ಪ್ರಪಂಚ ಆಚರಿಸಿತು. ಆ ಸಂದರ್ಭದಲ್ಲಿ ಐವತ್ತಮೂರು ವರ್ಷದ ಜಿ.ಟಿ.ಎನ್ ಅವರಿಗೆ ಆಲ್ಬರ್ಟ್‌ ಐನ್‌ಸ್ಟೈನರ ಜೀವನ ಮತ್ತು ಸಾಧನೆಯನ್ನು ಕನ್ನಡಿಗರಿಗೆ ತಲುಪಿಸಬೇಕೆನ್ನುವ ಅತ್ಯುತ್ಸಾಹ. ವಿಜ್ಞಾನ ಪ್ರಪಂಚ ಕಂಡ ಪರಮೋತ್ಕೃಷ್ಟ ವಿಜ್ಞಾನಿಯ ಭವ್ಯ ಬದುಕು ಮತ್ತು ಮೇರು ಸಾಧನೆಯನ್ನು ಚಿತ್ರಿಸುವುದು ಸುಲಭ ಸಾಧ್ಯವಲ್ಲ. ಆದರೆ ಜಿ.ಟಿ.ಎನ್ ಒಮ್ಮೆ ಮನಸ್ಸು ಮಾಡಿದರೆ ಗುರಿ ತಲುಪುವ ತನಕ ನಿಲ್ಲಲಾರರು. ದಾರಿ ಇರುವುದಿಲ್ಲ. ನಡೆದಾಗಲಷ್ಟೆ ದಾರಿ ಚಿತ್ತೈಸುತ್ತದೆ ಇದು ಜಿಟಿಎನ್ ನಂಬುಗೆ.

ಆ ದಿನಗಳಲ್ಲಿ ಐನ್‌ಸ್ಟೈನರನ್ನು ಜಿಟಿಎನ್ ಸಂಪೂರ್ಣ ಆವಾಹಿಸಿಕೊಂಡಂತಿದ್ದರು. ನಿಂತಲ್ಲಿ ಕುಂತಲ್ಲಿ ಅವರದೇ ಧ್ಯಾನ. ಅಂಥ ತಾದಾತ್ಮ್ಯತೆ. ಹಾಗಾಗಿಯೇ ಒಂದು ಪರಿಪೂರ್ಣ ಕೃತಿಯಾಗಿ ೪೦೦ ಪುಟಗಳ ಆಲ್ಬರ್ಟ್ ಐನ್‌ಸ್ಟೈನ್ ರೂಪುಗೊಂಡಿತು. ಕನ್ನಡ ವಿಜ್ಞಾನ ವಾಜ್ಞಯಲೋಕವನ್ನು ಅಗಾಧವಾಗಿ ಪ್ರಭಾವಿಸಿದ ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಅರಸಿಕೊಂಡು ಬಂದಿತು.

ಇಪ್ಪತ್ತನೇ ಶತಮಾನದ ಶ್ರೇಷ್ಟ ಖಗೋಳವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ (೧೯೧೦-೧೯೯೫) ಅವರಿಗೆ ೧೯೮೩ರಲ್ಲಿ ನೊಬೆಲ್ ಪಾರಿತೋಷಿಕ ಲಭಿಸಿದ ಸಂದರ್ಭ. ಜಿಟಿಎನ್ ಪ್ರಜಾವಾಣಿಯಲ್ಲಿ ದೀರ್ಘ ಲೇಖನ ಪ್ರಕಟಿಸಿದರು. ಆದರೆ ಇಷ್ಟಕ್ಕೇ ತೃಪ್ತರಾಗಲಿಲ್ಲ. ಚಂದ್ರಶೇಖರ್ ಅವರ ಜೀವನವನ್ನು ಕನ್ನಡಿಗರಿಗೆ ದರ್ಶನ ಮಾಡಿಸಲೇಬೇಕೆಂಬ ಉತ್ಸಾಹ ಸುಬ್ರಹ್ಮಣ್ಯನ್ ಚಂದ್ರಶೇಖರ್ ಕೃತಿ ರಚನೆಗೆ ಕಾರಣವಾಯಿತು. ನಕ್ಷತ್ರಗಳ ವಿಕಾಸದ ಬಗ್ಗೆ ಪಾಶಾತ್ಯ ವಿಜ್ಞಾನಿಗಳು ಮಂಡಿಸಿದ್ದ ಮತ್ತು ಬಹು ಜನರು ಒಪ್ಪಿಕೊಂಡ ಸಿದ್ಧಾಂತವನ್ನು ಪ್ರಶ್ನಿಸಿ ತನ್ನ ಹೊಸ ಸಿದ್ಧಾಂತವನ್ನು ಪ್ರವರ್ತಿಸುವಲ್ಲಿ ಎದುರಾದ ಅಡೆತಡೆಗಳನ್ನು ಮೀರಿ ಬೆರಗು ಹುಟ್ಟಿಸುವ ಎತ್ತರಕ್ಕೇರಿದ ಚಂದ್ರಶೇಖರರ ಜೀವನ ಮತ್ತು ಸಾಧನೆಯ ಚಿತ್ರವನ್ನು ಈ ಕೃತಿ ಓದುಗನಿಗೆ ನೀಡುತ್ತದೆ.

ಆದರೆ ಜಿಟಿಎನ್ ಇಂಥ ವಿಷಯಗಳಲ್ಲಿ ಅಲ್ಪ ತೃಪ್ತರಲ್ಲ. ಅವರ ಮಗ ಆನಂದ ವರ್ಧನ ಇರುವುದು ಅಮೆರಿಕಾದ ಪೋರ್ಟ್‌ಲ್ಯಾಂಡಿನಲ್ಲಿ. ಮಗ, ಸೊಸೆ ಮತ್ತು ಒಲವಿನ ಮೊಮ್ಮಕ್ಕಳಿಂದ ಅಮೆರಿಕಾಕ್ಕೆ ಬರಲೇಬೇಕೆಂಬ ಒತ್ತಾಯದ ಕರೆ. ಜಿಟಿಎನ್ ಆಶ್ಚರ್ಯವೋ ಎಂಬಂತೆ ಒಪ್ಪಿದರು, ಆದರೆ ಒಂದು ಶರತ್ತಿನ ಮೇರೆಗೆ –  ಚಂದ್ರಶೇಖರ್ ಭೇಟಿಯ ಸಂದರ್ಭ ಒದಗಿದರೆ ತಾನು ಅಮೆರಿಕಾಕ್ಕೆ ಬರುತ್ತೇನೆ, ಇಲ್ಲದಿದ್ದರೆ ಇಲ್ಲ ಅವರ ಮತ್ತು ಮಗನ ಭಗೀರಥ ಪ್ರಯತ್ನ ಸಫಲವಾಗಿ ಕನಸು ನನಸಾಯಿತು.

ಜಿಟಿಎನ್ ಸಪ್ತಸಾಗರದಾಚೆಯ ಅಮೆರಿಕಾಕ್ಕೆ ತೆರಳಿ, ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಚಂದ್ರಶೇಖರ್ ಅವರನ್ನು ಕೇವಲ ಭೇಟಿ ಮಾಡಿದ್ದಷ್ಟೇ ಅಲ್ಲ, ಒಂದು ದಿನಗಳ ಕಾಲ ಅವರೊಂದಿಗೆ ಕಳೆದರು. ಈ ಎಲ್ಲ ವಿವರಗಳನ್ನು ಸಪ್ತಸಾಗರದಾಚೆಯೆಲ್ಲೋ ಎಂಬ ಕೃತಿಯಲ್ಲಿ ಅತ್ಯಂತ ಆಪ್ತವಾಗಿ ಚಿತ್ರಿಸಿದ್ದಾರೆ. ಚಂದ್ರಶೇಖರ್, ರಾಮನ್ ಅವರಂಥ ನೊಬೆಲ್ ವಿಜ್ಞಾನಿಗಳೊಡನೆ ಸಂವಾದ ಅಂದರೆ ಅದು ಎಲ್ಲರಿಂದ ಸಾಧ್ಯವಾಗದು. ಸರಕಿದ್ದವನಿಗಷ್ಟೇ ಸಾಧ್ಯ. ಆ ಸರಕು ಜಿಟಿಎನ್ ಅವರಲ್ಲಿ ಇತ್ತು.

ಜೀವನದಲ್ಲಿ ಯಾವುದನ್ನೂ ಪ್ರಶ್ನಿಸದೇ ಒಪ್ಪಬೇಡ – ಸ್ವಯಂ ದೇವರು ಪ್ರತ್ಯಕ್ಷನಾಗಿ ಅಪ್ಪಣೆ ಕೊಡಿಸಿದರೂ ಕೂಡ ಎನ್ನುವುದು ಜಿಟಿಎನ್ ನಿಲುವು. ವಿಜ್ಞಾನದ ಜೀವಾಳವಿದು. ಇದುವೇ ವೈಜ್ಞಾನಿಕ ಮನೋಧರ್ಮ (Scientific Temper). ವೈಜ್ಞಾನಿಕ ಮನೋಧರ್ಮ ಎನ್ನುವ ತಮ್ಮ ಕೃತಿಯಲ್ಲಿ ಸ್ವಸ್ಥ ಸಮಾಜಕ್ಕೆ ಅತ್ಯಂತ ಅಗತ್ಯವಾದ ಈ ಮನೋಧರ್ಮದ ಬಗ್ಗೆ ಜಿ.ಟಿ.ಎನ್ ವಿವರವಾಗಿ ವಿಶ್ಲೇಷಿಸುತ್ತಾರೆ. ಭವಿಷ್ಯವಾಚನ, ಜಾತಕ ಮತ್ತು ಭವಿಷ್ಯ ಮೊದಲಾದವು ವೈಜ್ಞಾನಿಕ ಮನೋಧರ್ಮವನ್ನು ಇನ್ನಷ್ಟು ಸ್ಪಷ್ಟೀಕರಿಸುವ ಕೃತಿಗಳು.

ವೈಜ್ಞಾನಿಕ ಮನೋಧರ್ಮ ಕೃತಿಯ ಬಗ್ಗೆ ಕುಶಿ ಹರಿದಾಸ ಭಟ್ಟರು ತಮ್ಮ ಲೋಕಾಭಿರಾಮದಲ್ಲಿ ಬರೆದಿದ್ದಾರೆ:

“ವಿಜ್ಞಾನ ಲೇಖಕರು ಸಪ್ಪೆಯಾಗಿ ಬರೆಯುವುದು ನಮ್ಮಲ್ಲಿ ರೂಢಿ ತಾನೇ. ಜಿಟಿನಾ ಇದಕ್ಕೆ ಅಪವಾದವಿದ್ದಂತೆ. ಏಕೆಂದರೆ ಅವರೊಬ್ಬ ವಿಜ್ಞಾನದ ಮಿಶನರಿ. ವಿಜ್ಞಾನದ ಸಂಗತಿಗಳು ಮನೋಹರವಾದ ವರ್ಣನೆಗೋ ಮಹಾಕವಿಯ ವಾಕ್ಯ ಸ್ಮರಣೆಗೋ ಭಾವಾವೇಶ ಪ್ರಕಟಣೆಗೋ ವರ್ಜ್ಯವೆಂದು ಅವರು ಎಣಿಸುವುದಿಲ್ಲ. ಬೇಂದ್ರೆ, ಕುವೆಂಪು, ಉಪನಿಷತ್ಕಾರರು, ಡಿವಿಜಿ ಎಲ್ಲರೂ ಸಕಾಲಕ್ಕೆ ಅವರ ಬರಹಗಳ ಪುಟಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಹೇಳುವಂಥ ಕಡಲೆಗಳು ಹುರಿಗಾಳಿನಂತೆ ಸೇವ್ಯವಾಗಲು ಏನೇನು ಶಾಬ್ದಿಕ ಕಸರತ್ತುಗಳು, ಸಂದರ್ಶನದ ಬಿಂಬಗಳು, ಲಘುಹಾಸ್ಯದ ಲಹರಿಗಳು ಬೇಕೋ ಅವನ್ನೆಲ್ಲ ಜಿಟಿನಾ ಹಿತಮಿತವಾಗಿ ಬಳಸಿಕೊಳ್ಳುತ್ತಾರೆ. ಪ್ರತಿವಾದಿಗಳ ವಾದದ ತಿರುಳನ್ನು ಸುಡುವ ಅಗತ್ಯ ಬಿದ್ದಾಗ ಸಂಸ್ಕೃತ ಭಾಷೆಯ ಭಾರ ಜಲವನ್ನು ಬಳಸಿ ವಿಜ್ಞಾನ ಲೇಖಕನೊಬ್ಬನ ಅರಿಭಯಂಕರ ಗುಣವನ್ನು ಪ್ರಕಟಿಸುತ್ತಾರೆ. ಸ್ವತ: ಗಣಿತವಿಜ್ಞಾನಿಯಾಗಿ, ಅದರ ಪಾಠ ಹೇಳಿದವರಾಗಿ, ತರುವಾಯ ವಿಶ್ವಕೋಶದ ವಿಜ್ಞಾನ ವಿಭಾಗದಲ್ಲಿ ಎರಡು ದಶಕಗಳಷ್ಟು ಸುದೀರ್ಘಕಾಲ ಹೆಣಗಾಡಿ, ವಿಜ್ಞಾನದ ಬಗ್ಗೆ ಮುಖ್ಯವಾಗಿ ಖಭೌತ ವಿಜ್ಞಾನದ ಬಗ್ಗೆ ಸುಂದರವಾಗಿಯೂ ಖಚಿತವಾಗಿಯೂ ವೈಜ್ಞಾನಿಕವಾಗಿ ಮಾತನಾಡಬಲ್ಲ ಕನ್ನಡದಲ್ಲೂ ಹೌದು ಸ್ವಾಮೀ, ಕನ್ನಡದಲ್ಲೂ ವಿಜ್ಞಾನವನ್ನು ಹೇಳಲು ಬರುತ್ತದೆ. ಜಿಟಿನಾರಾಯಣರಾಯರು ನಿವೃತ್ತರಾಗಿ ಒಂದೆರಡು ವರ್ಷಗಳಾದುವಷ್ಟೇ. ಈಗ ಅವರು ತಮ್ಮ ಬದುಕಿನ ಒಂದು ಮುಖ್ಯ ಘಟ್ಟ ತಲುಪಿದಂತೆ ಕಾಣುತ್ತದೆ  ಅರ್ಥಾತ್ ಪೂರ್ಣಕಾಲದ ಬರಹಗಾರ. ಈ ಸ್ಥಿತಿಯಲ್ಲಿ ಅವರು ಕನ್ನಡ ಲೋಕದ ಮೇಲೆ ನಿರ್ದಾಕ್ಷಿಣ್ಯವಾಗಿ ಎಸೆಯುತ್ತಿದ್ದಾರೆ ಬಾಣಗಳನ್ನು ಅಜ್ಞಾನ ತಿಮರಭೇದಕ ಜ್ಞಾನ ವರ್ಧಕವೂ ಆದ ಗ್ರಂಥ ರೂಪದಲ್ಲಿ.”

ಎನ್.ಸಿ.ಸಿಯ ದಿನಗಳು, ಶ್ರುತಗಾನ (ಸಂಗೀತ ವಿಮರ್ಶೆ), ಕೊಡಗಿನ ಸುಮಗಳು( ಕಥಾ ಸಂಕಲನ), ಇವರ ವಿಜ್ಞಾನೇತರ ಮಾನವಿಕ ಕೃತಿಗಳು. ಇವಲ್ಲದೇ ಇಂಗ್ಲೀಷಿನಲ್ಲೂ ಇವರು ಗ್ರಂಥ ರಚಿಸಿದ್ದಾರೆ. ಕನ್ನಡದಲ್ಲಿ ಹೇಗೋ, ಇಂಗ್ಲೀಷಿನಲ್ಲಿಯೂ ಹಾಗೆಯೇ ಅಗಾಧ ಪ್ರಭುತ್ವ. ಇದಕ್ಕೆ ನಿದರ್ಶನ – ಪ್ರತಿ ಶುಕ್ರವಾರದಂದು ‘The Hindu’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಸಂಗೀತ-ಕಲೆಗಳ ವಿಮರ್ಶಾ ಬರಹಗಳು; ‘Star of Mysore’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳು.

ವೃತ್ತಿ ಜೀವನದಲ್ಲಿ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿ (೧೯೬೯-೧೯೮೬) ಜಿಟಿಎನ್ ಸಲ್ಲಿಸಿದ ಸೇವೆ ಅನುಪಮವಾದದ್ದು. ಪ್ರತಿಯೊಂದು ಸಂಪುಟದ ವಿಜ್ಞಾನ ಲೇಖನಗಳನ್ನು ಗಮನಿಸಿ. ಜಿಟಿಯವರ ಛಾಪನ್ನು ಸ್ಪಷ್ಟವಾಗಿ ಗುರುತಿಸಬಹುದು. ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ ವಿಜ್ಞಾನ ಪದವಿವರ ಕೋಶದ ಪ್ರಧಾನ ಸಂಪಾದಕರು ಜಿಟಿಎನ್.

ಜಿಟಿಎನ್ ಜನಿಸಿದ್ದು ದಕ್ಷಿಣ ಕನ್ನಡದ ಪುತ್ತೂರಿನ ಮರಿಕೆ ಎಂಬಲ್ಲಿ (೧೯೨೬). ಕೊಡಗಿನ ಕೂಸು ಮಡಿಕೇರಿ, ಮಂಗಳೂರು ಮತ್ತು ಮದ್ರಾಸಿನಲ್ಲಿ ಶಿಕ್ಷಣ ಪೂರೈಸಿ, ಮುಂದೆ ಗಣಿತ ಉಪನ್ಯಾಸಕನಾಗಿ (೧೯೪೭-೬೯), ಎನ್.ಸಿ.ಸಿ.ಅಧಿಕಾರಿಯಾಗಿ, ವಿಶ್ವಕೋಶದ ವಿಜ್ಞಾನ ವಿಭಾಗದ ಸಂಪಾದಕನಾಗಿ (೧೯೬೯-೧೯೮೬), ವಿಜ್ಞಾನ ಬರಹಗಾರನಾಗಿ, ಸಂಗೀತ ವಿಮರ್ಶಕನಾಗಿ, ನೈತಿಕತೆ – ಪ್ರಾಮಾಣಿಕತೆ ಮತ್ತು ಶಿಸ್ತಿನ ಮೂರ್ತಸ್ವರೂಪನಾಗಿ ಬೆಳೆದು ಸಾವಿರಾರು ಎಳೆಯ ಮನಸ್ಸುಗಳನ್ನು ಗಾಢವಾಗಿ ಪ್ರಭಾವಿಸಿದ ಬಗೆಯ ಬಗ್ಗೆ ಒಳ ನೋಟ ನೀಡುವ ಮುಗಿಯದ ಪಯಣ ಜಿಟಿಯವರ ಆತ್ಮವೃತ್ತಾಂತ.

ಇವರ ಬರವಣಿಗೆ ಸರಳವಲ್ಲ, ಜನಸಾಮಾನ್ಯನಿಗೆ ತಟ್ಟುವುದಿಲ್ಲ ಎಂಬ ಅಪವಾದವಿದೆ. ಆದರೆ ಈ ಸರಳ ಎನ್ನುವುದು ಹಲವು ಬಾರಿ ತೀರ ಸಾಪೇಕ್ಷವಾದದ್ದು ಎನ್ನುವುದನ್ನು ಮರೆಯಬಾರದು. ಸರಳತೆಯ ಹೆಸರಿನಲ್ಲಿ ವಿಜ್ಞಾನವನ್ನು ತಪ್ಪು ತಪ್ಪಾಗಿ, ಒಡ್ಡೊಡ್ಡಾಗಿ ಬರೆದು ಅಧ್ವಾನ ಮಾಡುವ ಅಪಾಯಗಳುಂಟು. ಜನಸಾಮಾನ್ಯ ಅಂದರೆ ಯಾರು? ಆರ್.ಕೆ.ಲಕ್ಷ್ಮಣ್ ರೂಪಿಸಿದಾತನೇ? ಅವನು ಕೂಡ ಬದಲಾಗಿದ್ದಾನೆ  ಕಾಲಕ್ಕೆ ಸರಿಯಾಗಿ. ಇಂದಿನ ಜನಸಾಮಾನ್ಯ ಹಿಂದಿನ ಜನಸಾಮಾನ್ಯನಿಗಿಂತ ಸುಲಭದಲ್ಲಿ ವಿಜ್ಞಾನದ ಪರಿಕಲ್ಪನೆಯನ್ನು ಅರ್ಥೈಸಿಕೊಂಡರೆ ಅಚ್ಚರಿ ಇಲ್ಲ.

ನಿಜ, ಜಿಟಿಎನ್ ಬರಹ ಒಮ್ಮೆಲೇ ಓದಿಸಿಕೊಂಡು ಹೋಗಲಾರವು. ಹಾಗೆಯೇ ಆಗಬೇಕೆಂದು ನಾವಾದರೂ ಏಕೆ ನಿರೀಕ್ಷಿಸಬೇಕು? ಹಾಗೆ ನೋಡಿದರೆ ಕಾರಂತ, ಭೈರಪ್ಪ, ಕುಂವೀ, ಚಿತ್ತಾಲ, ಅನಂತಮೂರ್ತಿ, ವೈದೇಹೀ ಮೊದಲಾದವರ ಕಥೆ ಕಾದಂಬರಿಗಳು, ಅಡಿಗ, ಕಣವಿ ಬೇಂದ್ರೆಯವರ ಕವನಗಳು ಕೂಡ ಥಟ್ಟನೆ ಓದುಗನನ್ನು ಸೆಳೆಯಲಾರವು. ಹೆಬ್ಬಾರರ ಚಿತ್ರ ಅಥವಾ ಭೀಮಸೇನ ಜೋಷಿಯವರ ಸಂಗೀತವೂ ಕೂಡ.

ಜಿಟಿಎನ್ಇವೆಲ್ಲವುಗಳಿಗೆ ಅವುಗಳದ್ದೇ ಆದ ರಚನೆಯ ಬಂಧ ಇರುತ್ತದೆ; ಓಘ ಇರುತ್ತದೆ. ಓದುಗ (ಶ್ರೋತೃ) ಆ ಬಂಧದೊಂದಿಗೆ ಅನುಸಂಧಾನ ನಡೆಸಲು ತುಸು ಸಮಯ ಮತ್ತು ಸಂಯಮ ಬೇಕಾಗುತ್ತದೆ. ಜಿಟಿಎನ್ ಬರವಣಿಗೆ (ಎಲ್ಲ ಸೃಜನಶೀಲ ಬರವಣಿಗೆ) ಇಂಥ ಸಹನೆ, ಸಂಯಮವನ್ನು ಬೇಡುವಂಥದ್ದು. ಅಂತಿಮವಾಗಿ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನ ಅಥವಾ ಪುಸ್ತಕದಲ್ಲಿ ರಂಜನೆ ಅಥವಾ ತಮಾಷೆಗಿಂತ ಹೆಚ್ಚಾಗಿ ವಿಜ್ಞಾನ ಎಷ್ಟು ಬಂದಿದೆ ಮತ್ತು ಯಾವ ಬಗೆಯಲ್ಲಿ ಬಂದಿದೆ ಎನ್ನುವುದೇ ಮುಖ್ಯ. ವೈಜ್ಞಾನಿಕ ಬರವಣಿಗೆಯ ಸ್ವರೂಪ ಮತ್ತು ಸವಾಲುಗಳು ಎಂಬ ತಮ್ಮ ಲೇಖನದಲ್ಲಿ ಜಿಟಿಎನ್ ಸ್ಪಷ್ಟೀಕರಿಸುತ್ತಾರೆ

“ನನ್ನ ಶೈಲಿ ಬಗ್ಗೆ ನಾನು ಪದೇ ಪದೇ ಎದುರಿಸುತ್ತಿರುವ ಟೀಕೆಗಳ ಎರಡು ತುಣುಕುಗಳಿವು: ಶೈಲಿ ಬಲು ಕ್ಲಿಷ್ಟ. ವಿಷಯಗ್ರಹಣಕ್ಕೆ ಅಡ್ಡ ಬರುತ್ತದೆ. ಸಂಸ್ಕೃತ ಪದಗಳ ಅರ್ಭಟೆಯಲ್ಲಿ ವಸ್ತು ಮರೆಯಾಗಿದೆ. ಒಬ್ಬ ಬದ್ಧ ಲೇಖಕನಾಗಿ ನನ್ನ ಏಕೈಕ ಲಕ್ಷ್ಯ ವಿಜ್ಞಾನದ ಸಂಕೀರ್ಣ ಮತ್ತು ಕನ್ನಡಕ್ಕೆ ವಿನೂತವಾದ ಪರಿಕಲ್ಪನೆಗಳನ್ನು ಸ್ಪಷ್ಟವಾಗಿಯೂ ಶುದ್ಧವಾಗಿಯೂ ಆಕರ್ಷಕವಾಗಿಯೂ ನಿರೂಪಿಸುವುದರತ್ತ ಮಾತ್ರ ಇರುವುದೇ ವಿನಾ ಸರಳತೆಯ ಸೋಗಿನಲ್ಲಿ ಜಾಳು ಜಾಳು ಶೈಲಿಯನ್ನು ಅನುಸರಿಸುವುದರತ್ತ ಅಲ್ಲ. ಯಾವುದೇ ರಂಗದಲ್ಲಿ ಯಾವುದೇ ಹೊಸ ಪ್ರಯೋಗ ಅಥವಾ ಸುಧಾರಣೆ ಬಂದಾಗ ಸಮಕಾಲೀನ ವಾಚಕರು ಬಹುತೇಕ ಅದನ್ನು ನಿರಾಕರಿಸುವುದೇ ವಾಡಿಕೆ. ಆದರೆ ಅದರೊಂದಿಗೆ ಹುಟ್ಟಿ ಬೆಳೆಯುವ ಹೊಸ ಪೀಳಿಗೆ ಅದನ್ನು ತೀರ ಸಹಜವಾಗಿ ಅಂಗೀಕರಿಸುವುದರಿಂದ ಅದು ಭಾಷೆಯ ಅವಿಭಾಜ್ಯ ಅಂಗವಾಗಿ ಸೇರಿಕೊಳ್ಳುತ್ತದೆ. ಆದ್ದರಿಂದ ಕುವೆಂಪು ಅಪೇಕ್ಷಿಸಿರುವಂತೆ ಜಗ್ಗದೆಯೆ, ಕುಗ್ಗದೆಯೆ ಹಿಗ್ಗೆ ನಡೆ ಮುಂದೆ!”

ವಿಜ್ಞಾನದ ಭಾಷೆ ಎಂಬ ಲೇಖನದಲ್ಲಿ ಜಿಟಿಎನ್ ಬರೆಯುತ್ತಾರೆ:

“ವಿಜ್ಞಾನಕ್ಕೆ ಒಂದು ಭಾಷೆ ಇದೆ. ವಾಸ್ತವಿಕತೆಗೆ ಬರೆದ ಭಾಷ್ಯ ಇದು. ಇದರ ಮೂಲ ಇಟ್ಟಿಗೆಗಳು ಪಾರಿಭಾಷಿಕ ಪದಗಳು. ತಳಹದಿ ಆದ್ಯುಕ್ತಿಗಳು. ಗಾರೆ ಪ್ರತೀಕಗಳು. ಆಲೇಖ್ಯ ಆಧಾರ ಭಾವನೆಗಳು. ಸೌಧ ಸಿದ್ಧಾಂತ. ಇದು ತಾರ್ಕಿಕವಾಗಿ ಸಮಂಜಸವಾಗಿರಬೇಕು ಮತ್ತು ಸಾಹಿತ್ಯ ಸೌಂದರ್ಯ ಪೂರಿತವಾಗಿರಬೇಕು. ಇಂಥ ಭಾಷೆ ಒಬ್ಬ ಗಣಿತದ ವಿದ್ಯಾರ್ಥಿ ಇದ್ದಾನೆ. ವೈದ್ಯ ವಿಜ್ಞಾನದಲ್ಲಿ ಆತನ ಪ್ರವೇಶ ಕೇವಲ ಹೊರ ವಲಯದ್ದು. ಅದರ ಒಂದು ಉತ್ಕೃಷ್ಟ ಗ್ರಂಥದ ಒಂದೇ ವಾಕ್ಯವೂ ಆತನಿಗೆ ಅರ್ಥವಾಗದಿದ್ದರೆ ಕೊರತೆ ಆತನದ್ದೇ ವಿನಾ ಗ್ರಂಥದ್ದಲ್ಲ.

ಪ್ರತಿಯೊಂದು ವಿಜ್ಞಾನಗ್ರಂಥವೂ ಸಾಮಾನ್ಯವಾಗಿ ಎಲ್ಲರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿರಬೇಕು ಎನ್ನುವ ಘನೋದ್ಧೇಶವನ್ನು ಪ್ರಾಯೋಗಿಕವಾಗಿಸಲು ಪ್ರಯತ್ನಿಸುವಾಗ ಎದುರಾಗುವ ತೊಡಕನ್ನು ಜಾರ್ಜ್‌ಗಾಮೋ ‘One, Two, Three .. Infinity’ ಗ್ರಂಥದ ಮುನ್ನುಡಿಯಲ್ಲಿ ವಿವರಿಸಿದ್ದಾರೆ … “Above all my thanks are due to my young friends Marina Von Neumann who claims that she knows everything better than her famous father does, except, of course, mathematics which she says she knows only equally well. After she had read in manuscript some of the chapters of the book and told me about numerous things in it which she could not understand, I finally decided that this book is not for children as I had originally intended it to be”

ಇನ್ನೊಂದೆಡೆ ಜಿಟಿಎನ್ ಹೇಳುತ್ತಾರೆ:

“ವಿಜ್ಞಾನದ ಭಾಷೆ ಬಲು ಬಿಗಿ ಘನ ವಸ್ತುವಿನಲ್ಲಿ ಪರಮಾಣುಗಳಿರುವಂತೆ ಇಲ್ಲಿ ಶಬ್ದಗಳು ಸಂತುಲಿತವಾಗಿರುವುವು. ಈ ಭಾಷೆಯಲ್ಲಿ ಉತ್ಪ್ರೇಕ್ಷೆ ಉದ್ಗಾರಗಳಿಗೆ ಅವಕಾಶ ಕಡಿಮೆ. ನಿಸರ್ಗದಂತೆ ಇದೂ ಕಡು ಕೃಪಣ. ಒಂದು ಹೆಚ್ಚಿನ ಪದ ಅಥವಾ ಪ್ರತ್ಯಯ ಪ್ರಯೋಗವನ್ನು ಇದು ಸಹಿಸದು. ಈ ಕಾರಣಗಳಿಂದಲೇ ಪ್ರತೀಕರೂಪದೆಡೆಗೆ ವಿಜ್ಞಾನಿಗಳ ಒಲವು ಹೆಚ್ಚು. ಅದು ವಿಜ್ಞಾನದ ಭಾಷೆಯ ಆದರ್ಶ.

ಜನಪ್ರಿಯ ವಿಜ್ಞಾನ ವಾಜ್ಞಯ ರಚನೆಯಲ್ಲಿ ಸಾಹಿತ್ಯದ ಪಾತ್ರ ಎಂಬ ಲೇಖನದಲ್ಲಿ ವಿಜ್ಞಾನ ಬರಹವನ್ನು ಸಾಹಿತ್ಯ ಹೇಗೆ ಹೆಚ್ಚು ಆಕರ್ಷಣೀಯವೂ ಸತ್ವಯುತವಾಗಿಯೂ ಮಾಡುತ್ತದೆಂದು ಜಿಟಿಎನ್ ವಿವರಿಸುವುದು ಹೀಗೆ:

“ವಿಜ್ಞಾನದ ಜಟಿಲ ಪರಿಕಲ್ಪನೆಗಳನ್ನು ಜನಪ್ರಿಯ ಶೈಲಿಯಲ್ಲಿ ನಿರೂಪಿಸಲು ಒಬ್ಬ ಲೇಖಕನಿಗೆ ಸಾಹಿತ್ಯ ಕುರಿತಂತೆ ಸೃಜನಶೀಲ ಪ್ರಭುತ್ವ ಅಗತ್ಯ. ನಿಜಕ್ಕೂ ಒಬ್ಬ ಸಾಹಿತಿಗಿಂತ ಹೆಚ್ಚಿನದು ಇದಾಗಿರಬೇಕು. ಸೂತ್ರರೂಪದಲ್ಲಿ ಹೇಳುವುದಾದರೆ, ಒಬ್ಬ ಜನಪ್ರಿಯ ವಿಜ್ಞಾನ ಲೇಖಕ ಚತುರ್ಥಾಂಶಗಳ ಸಂಕೀರ್ಣ ಸಂಯುಕ್ತವಾಗಿರಬೇಕು: ೧. ವಿಷಯ ಪ್ರಾವಿಣ್ಯ-ಆತ ತಾಕತ್ತಿನ ತಾಣದಿಂದ ಬರೆಯತಕ್ಕದ್ದು. ೨. ಭಾಷಾಪ್ರಭುತ್ವ – ಭಾಷೆಯ ಸಾಧ್ಯತೆ ಸೀಮಿತತೆಗಳನ್ನು ನಿರಪೇಕ್ಷವಾಗಿ ಗ್ರಹಿಸಿ ಅದರ ಜಾಯಮಾನಕ್ಕೆ ಒಪ್ಪುವಂತೆ ಹೊಸ ಪ್ರಯೋಗಗಳನ್ನು ಮಾಡಲು ಮತ್ತು ಭಾಷೆಗೆ ಹೊಸ ಆಯಾಮ ನೀಡಲು ಆತ ಶಕ್ತನಾಗಿರತಕ್ಕದ್ದು. ೩. ಪರಿಪೂರ್ಣ ನಿಷ್ಠೆ – ತಾನು ಕೈಗೊಂಡ ಕರ್ತವ್ಯ ಕುರಿತು ಉತ್ಸಾಹ ಉಲ್ಲಾಸಗಳ ಸಾಕಾರ ಮೂರ್ತಿ ಆತನಾಗಿರತಕ್ಕದ್ದು. ೪. ಸಮಕಾಲೀನ ಪ್ರಜ್ಞೆ -ಆತನಿಗೆ ವರ್ತಮಾನ ವಿಜ್ಞಾನದ ಸ್ಥಿತಿ ಗತಿ ಬಗ್ಗೆ ಅರಿವು ಇರತಕ್ಕದ್ದು. ಈ ಯಾವುದೇ ಒಂದರಲ್ಲಿ ಭರವಸೆ ಇಲ್ಲದಾತ ಜನಪ್ರಿಯ ವಿಜ್ಞಾನ ನಿರ್ಮಾಣ ಕಾರ್ಯದಿಂದ ದೂರವಿರುವುದು ಸರ್ವಕ್ಷೇಮ. ಆದರೆ ವಾಸ್ತವದಲ್ಲಿ ಹೀಗಾಗುತ್ತಿಲ್ಲ.”

ಇದು ಜಿಟಿಎನ್ ವಹಿಸಿದ ಎಚ್ಚರಿಕೆ, ಕಾಳಜಿ. ತಮ್ಮ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ಇಂಥ ಬಿಗುಮಾನವನ್ನು ಅವರು ಅನುಸರಿಸಿದ ಕಾರಣದಿಂದಲೇ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ಮಾನ ಸಂದಿದೆ. ಹೊಸ ಹಾದಿ ಗೋಚರಿಸಿದೆ ಅಂದರೆ ಉತ್ಪ್ರೇಕ್ಷೆಯಾಗದು.

ಜಿಟಿಎನ್ ರಚಿತ ‘ವಿಶ್ವದ ಕಥೆ’ ಎಂಬ ಪುಸ್ತಕದ ಮುನ್ನುಡಿಯಲ್ಲಿ ಮಾನ್ಯ ಜವರೇಗೌಡರು ಬರೆದಿದ್ದಾರೆ

“ಪ್ರಸ್ತುತ ಕಾಲದ ಮಹತ್ವದ ವಿಜ್ಞಾನ ಬರಹ ಸೃಷ್ಟಿಕಾರರಲ್ಲಿ ಅಗ್ರ ಪೂಜೆಗೆ ಅರ್ಹರಾದವರು ಶ್ರೀ.ಜಿ.ಟಿ.ನಾರಾಯಣರಾಯರು. ವಿದ್ವತ್ತಿಗೆ, ಶಿಸ್ತಿಗೆ, ಸಾಹಸಕ್ಕೆ, ನಿಯತ್ತಿಗೆ, ರುಚಿಶುಚಿ ಶುದ್ಧಿಗೆ, ಜೀವನೋತ್ಸಾಹಕ್ಕೆ, ಸತ್ಕಾರ್ಯ ಸಾಧನಾ ಛಲಕ್ಕೆ ವೈಜ್ಞಾನಿಕ ಮನೋಧರ್ಮಕ್ಕೆ, ವಿಜ್ಞಾನ ಪ್ರಸಾರ ಸಮರ್ಪಣಾ ಮನೋಧರ್ಮಕ್ಕೆ, ಸರಳ ಸಜ್ಜನಿಕೆಗೆ ಮತ್ತೊಂದು ಹೆಸರು ಜಿ.ಟಿ.ಎನ್…

ಶಸ್ತಿಗಳು ಬರಲಿ, ಬರದಿರಲಿ, ವಿಜ್ಞಾನ ಸಾಹಿತ್ಯ ನಿರ್ಮಾಣ ಮತ್ತು ಕನ್ನಡ ಭಾಷಾ ಸೇವೆ ತಮ್ಮ ಜೀವನ ಧರ್ಮವೆಂದು ತಿಳಿದು, ಅದೇ ಕಾಯಕ, ಸತ್ಯ ಮುಕ್ತಿ ಎಲ್ಲವೂ ಎಂದು ಭಾವಿಸಿ ಅನಿವೃತ್ತರಂತೆ ಏಕೋಭಾವದಿಂದ ಶ್ರದ್ಧಾನಿಷ್ಠೆಗಳಿಂದ ದುಡಿಯುತ್ತಿದ್ದಾರೆ. ಆದ್ದರಿಂದಲೇ ಅವರು ಈಗಾಗಲೇ ಅವರು ೬೮ ಗ್ರಂಥಗಳನ್ನು ರಚಿಸಿ, ಕನ್ನಡ ವಿಜ್ಞಾನದ ಸಶಕ್ತ ಮಾಧ್ಯಮವೆಂದು ತೋರಿಸಿಕೊಟ್ಟಿದ್ದಾರೆ. ಆಕಾಶದ ಅದ್ಭುತಗಳು, ಧೂಮ ದೈತ್ಯ, ಕಾಲ, ನಕ್ಷತ್ರ ಜಾಲ, ಭವಿಷ್ಯ ವಿಜ್ಞಾನ, ಗಣಿತ ಗಗನ ಗಮನ, ಗ್ರಹಣಗಳು, ಕೃಷ್ಣ ವಿವರಗಳು, ವೈಜ್ಞಾನಿಕ ಮನೋಧರ್ಮ  ಇವು ಅವರ ಕೆಲವು ಗ್ರಂಥಗಳು ಮಾತ್ರ. ಇವುಗಳ ಹೆಸರುಗಳನ್ನು ಓದಿದಾಗಲೇ ಅವರ ವೈವಿಧ್ಯಮಯ ವೈದುಷ್ಯದ ಆಳ ಅಗಲ ವಿಸ್ತಾರಗಳು ಪರಿಚಯವಾಗುತ್ತವೆ.

ಕೋಪರ್ನಿಕಸ್, ಐನ್‌ಸ್ಟೈನ್, ಶ್ರೀನಿವಾಸ ರಾಮಾನುಜನ್, ಸುಬಹ್ಮಣ್ಯನ್ ಚಂದ್ರಶೇಖರ್, ವಿಜ್ಞಾನ ನಿರ್ಮಾಪಕರು, ಮೊದಲಾದ ಜೀವನ ಚರಿತ್ರೆ  ಚಿತ್ರಗಳು ಕನ್ನಡಿಗರಿಗೆ ದಾರಿದೀಪ ಧೈರ್ಯನಚಿಕೇತಗಳಾಗಿರುವುದಲ್ಲದೇ ಆ ಸಾಹಿತ್ಯ ಪ್ರಕಾರಕ್ಕೆ ಮಾದರಿಗಳಾಗಿ ವಿಜೃಂಭಿಸುತ್ತವಲ್ಲದೆ, ಜೀವನ ಚರಿತ್ರೆಯ ಕ್ಷೇತ್ರವನ್ನು ವಿಶಿಷ್ಟ ರೀತಿಯಲ್ಲಿ ಸಮೃದ್ಧಗೊಳಿಸಿವೆ.”

ಉತ್ತೇಜಿಸುವ ಹಿರಿಯ

ನಾನಾಗ ಹತ್ತನೇ ತರಗತಿಯಲ್ಲಿದ್ದೆ (೧೯೭೯). ಭಾರತೀಯ ವೈಮಾಂತರಿಕ್ಷ ಪ್ರಯೋಗಶಾಲೆ (NAL) ಪ್ರಪ್ರಥಮ ಬಾರಿಗೆ ಕನ್ನಡ ವಿಜ್ಞಾನ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ ಸುದ್ದಿ ಪತ್ರಿಕೆಯಲ್ಲಿ ಕಂಡ ನನಗೆ ಭಾಗವಹಿಸುವ ಉತ್ಸಾಹ. ಉತ್ಸಾಹವೇನೋ ನಿಜ. ಆದರೆ ಯಾವ ವಿಷಯದ ಬಗ್ಗೆ ಬರೆಯಲಿ? ಹೆದರುತ್ತ ಹೆದರುತ್ತ ಜಿಟಿಎನ್ ಅವರಿಗೆ ಪತ್ರ ಬರೆದೆ

ಇನ್ಲೆಂಡ್ ಲೆಟರಿನಲ್ಲಿ ಮುದ್ದಾದ ಅಕ್ಷರಗಳೊಂದಿಗೆ ಅವರಿಂದ ಉತ್ತರ ಬಂತು. ‘ಪ್ರಿಯ ರಾಧಾಕೃಷ್ಣ, ನೀನು ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹ ತೋರಿದ್ದು ಸರಿಯಾಗಿದೆ. ಈ ಕೆಳಗಿನ ವಿಷಯಗಳಲ್ಲಿ ಒಂದನ್ನು ಆಯ್ದುಕೊಳ್ಳಬಹುದು – ಗುರುತ್ವ ಲೋಕ, ಕೃಷ್ಣ ವಿವರಗಳು, ನಕ್ಷತ್ರದ ಶಕ್ತಿ ರಹಸ್ಯ, ಚಕ್ರದ ಇತಿಹಾಸ, ಶಕ್ತಿ ಸಮಸ್ಯೆ, ಕಾಂತತ್ವ, ಅರೋರಾ ಎಂಬ ವಿಸ್ಮಯ…’

ವಾಸ್ತವವಾಗಿ ಅವರು ಇಪ್ಪತ್ತಕ್ಕೂ ಹೆಚ್ಚು ವಿಷಯ ನೀಡಿದ್ದರು. ಅವುಗಳಲ್ಲಿ ಶಕ್ತಿ ಸಮಸ್ಯೆಯ ಬಗೆಗಿನ ನನ್ನ ಬರಹಕ್ಕೆ ಬಹುಮಾನ ಬಂತು. ಬಹುಮಾನ ಬಂದದ್ದು ದೊಡ್ದ ವಿಷಯವಲ್ಲ ಹಿರಿಯರಾಗಿ ಅವರು ತೋರಿಸಿದ ಆಸ್ಥೆ, ಕಾಳಜಿ ಇದೆಯಲ್ಲ, ಅದು ದೊಡ್ಡದು. ಇಂಥ ಉತ್ತೇಜನದಿಂದ ಒಂದಿಷ್ಟು ವಿಜ್ಞಾನ ಬರವಣಿಗೆಯಲ್ಲಿ ನಾನು ತೊಡಗಿದ್ದಂತೂ ಸತ್ಯ.

ಮೈಸೂರು ವಿವಿಯ ವಯಸ್ಕರ ಶಿಕ್ಷಣ ಸಂಸ್ಥೆ ಪುಸ್ತಕ ಪ್ರಪಂಚವೆಂಬ ಮಾಸ ಪತ್ರಿಕೆ ಪ್ರಕಟಿಸುತ್ತಿತ್ತು. ಸುಪ್ರಸಿದ್ಧ ಆಂಗ್ಲ ಪತ್ರಿಕೆ ರೀಡರ್ಸ್ ಡೈಜೆಸ್ಟ್, ಹಿಂದೀಯ ನವನೀತ ಪತ್ರಿಕೆಗಳ ಲೇಖನಗಳ ಕನ್ನಡ ಅನುವಾದಕ್ಕೆ ಅಲ್ಲಿ ಅವಕಾಶವಿತ್ತು. ಅದೊಂದು ದಿನ ಜಿಟಿಎನ್ ಅವರಿಂದ ಬಂದ  ಹುಕುಮು ರೀಡರ್ಸ್ ಡೈಜೆಸ್ಟ್ ಪತ್ರಿಕೆಯಲ್ಲಿ ಪ್ರಕಟವಾಗುವ ವಿಜ್ಞಾನ ಲೇಖನಗಳನ್ನು ಅನುವಾದಿಸಿ ಕಳುಹಿಸು, ಸರಿಯಾದರೆ ಪ್ರಕಟಿಸಲಾಗುತ್ತದೆ. ಅಶೋಕ್ ಮಹದೇವನ್ ಬರೆದ Filth in our River ಎಂಬ ಲೇಖನವನ್ನು ನದಿಗಳಲ್ಲಿ ಹೊಲಸು ಎಂಬ ಶೀರ್ಷಿಕೆಯಲ್ಲಿ  ಅನುವಾದಿಸಿ ಸಂಕೋಚದಿಂದ ಕಳುಹಿಸಿದೆ. ಕೆಲವೇ ದಿನಗಳಲ್ಲಿ ಪತ್ರ ಬಂತು ಸರಿದಾರಿಯಲ್ಲಿದ್ದಿ, ನಡೆ ಮುಂದೆ ಎನ್ನುವ ಅಭಯದೊಂದಿಗೆ ಅನುವಾದವನ್ನು ಹೇಗೆ ಇನ್ನಷ್ಟು ಪರಿಷ್ಕರಿಸಬಹುದೆಂದು ಸೂಚಿಸಿದರು. ಮುಂದಿನ ದಿನಗಳಲ್ಲಿ ಇನ್ನೂ ಹಲವು ಲೇಖನಗಳನ್ನು ಅನುವಾದಿಸುತ್ತ ಹೋದಂತೆ ಸಾಹಿತ್ಯದ ಓದು ಬರವಣಿಗೆಯಲ್ಲಿ ಆಸಕ್ತಿ ಇನ್ನಷ್ಟು ಹೆಚ್ಚಿತು.

ಕಾಲೇಜು ದಿನಗಳಲ್ಲಿ ವಿಜ್ಞಾನ ಬರಹದ ಕಮ್ಮಟಗಳಲ್ಲಿ ಭಾಗಿಯಾದಾಗ ನಮ್ಮ ಬರಹಗಳನ್ನು ನಿರ್ದಾಕ್ಷಿಣ್ಯದಿಂದ ವಿಮರ್ಶಿಸಿ ಸರಿ ದಾರಿ ತೋರಿ, ಇನ್ನಷ್ಟು ಬರೆಯಲು ಪ್ರೋತ್ಸಾಹಿಸುತ್ತಿದ್ದದ್ದು ನೆನಪಾಗುತ್ತದೆ. ಪತ್ರಿಕೆಯಲ್ಲಿ ಲೇಖನ ಪ್ರಕಟವಾದಾಗಲೆಲ್ಲ ಕರಾರುವಾಕ್ಕಾಗಿ ಅವರಿಂದ ಪತ್ರ ಬರುತ್ತಿತ್ತು. ಅದರಲ್ಲಿ ಟೀಕೆ ಇರುತ್ತಿತ್ತು, ಮೆಚ್ಚಿಗೆ ಇರುತ್ತಿತ್ತು, ಸರಿಯಾದ ದಾರಿ ಹೀಗೆ ಎನ್ನುವ ಮಾರ್ಗದರ್ಶನವಿರುತ್ತಿತ್ತು. ಆ ಒಂದು ಪತ್ರ ನಿಜವಾಗಿಯೂ ಬರಡು ನೆಲದ ಓಯಸಿಸ್‌ನಂತಿರುತ್ತಿತ್ತು, ಉತ್ಸಾಹವನ್ನು ಉಜ್ಜೀವಿಸುತ್ತಿತ್ತು.

ವಾಸ್ತವವಾಗಿ ಅವರು ಎಳೆಯರಿಂದ ತುಂಬ ನಿರೀಕ್ಷಿಸುತಿದ್ದರು. ಅವರ ನಿರೀಕ್ಷೆಯ ಮಟ್ಟಕ್ಕೆ ಏರಲಾಗದೇ ನಾವು ತೊಳಲಾಡುತ್ತಿದ್ದುದುಂಟು. ಅವರನ್ನು ತಪ್ಪಿಸಿ ಓಡಾಡಿದ್ದುಂಟು. ಈಗ ಅನ್ನಿಸುತ್ತದೆ ಅವರಿದ್ದಾಗ ಇನ್ನೂ ಹೆಚ್ಚು ಪಡೆಯಬಹುದಾಗಿತ್ತು. ಸಾಗರ ಇರುತ್ತದೆ. ದಕ್ಕುವುದು ತಂಬಿಗೆಯ ಗಾತ್ರಕ್ಕೆ ಅನುಗುಣವಾಗಿ ತಾನೇ. ಬದುಕೇ ಹೀಗೆ  ಇರುವ ವಸ್ತುವಿನ ಬೆಲೆಯ ಅರಿವಾಗುವುದು ಅದನ್ನು ಕಳೆದುಕೊಂಡ ಮೇಲೆ!

ಇದು ನನ್ನೊಬ್ಬನ ಅನುಭವವಲ್ಲ. ಹೆಚ್ಚನ್ನು ಅವರಿಂದ ಉತ್ತೇಜನವನ್ನು ಪಡೆದವರು, ಬದುಕಿನ ದಾರಿಯನ್ನು ಕಂಡವರು, ವೈಚಾರಿಕ ಪ್ರಜ್ಞೆಯನ್ನು ಸ್ವಾಂಗೀಕರಿಸಿಕೊಂಡವರು, ನೈತಿಕ ಪರಿಶುದ್ಧತೆ ಮತ್ತು ಶಿಸ್ತಿನ ಜೀವನವನ್ನು ಸ್ವೀಕರಿಸಿದವರು ಹಲವರು. ದೊಡ್ದವರು ಉಪದೇಶ  ಮಾಡುವುದಿಲ್ಲ. ಆಚರಿಸಿ ತೋರಿಸುತ್ತಾರೆ. ಜಿಟಿಎನ್ ಇಂಥವರು.

ವಿಜ್ಞಾನ ಉಪನ್ಯಾಸಕ

೨೦೦೫ನ್ನು ಪ್ರಪಂಚ ಜಾಗತಿಕ ಭೌತವಿಜ್ಞಾನ ವರ್ಷವೆಂದು ಸಂಭ್ರಮದಿಂದ ಆಚರಿಸಿತು – ನೂರು ವರ್ಷಗಳ ಹಿಂದೆ (೧೯೦೫) ತರುಣ ಆಲ್ಬರ್ಟ್ ಐನ್‌ಸ್ಟೈನ್ ಯುಗಪ್ರವರ್ತಕ ಸಿದ್ಧಾಂತಗಳನ್ನು ಮಂಡಿಸಿದ ಐತಿಹಾಸಿಕ ಸಾಧನೆಯ ನೆನಪಿಗಾಗಿ.

ಯಮ ಸದನದ ಕದ ತಟ್ಟಿ ಬಂದು ಚೇತರಿಸಿಕೊಳ್ಳುತ್ತಿದ್ದ ಜಿಟಿಎನ್ ಅವರಿಗೆ ಎಲ್ಲಿಲ್ಲದ ಉತ್ಸಾಹ. ಐನ್‌ಸ್ಟೈನ್ ಎಂದರೆ ಮತ್ತೆ ಕೇಳಬೇಕೇ? ಆ ಕುರಿತ ಸುದೀರ್ಘ ಲೇಖನವೊಂದರ ಕೊನೆಯಲ್ಲಿ ಜಿಟಿಎನ್ ಬರೆದ ಕಗ್ಗ ಹೀಗಿದೆ

ಶತಮಾನದ ಸಂಭ್ರಮದಲಿ ಸಾಪೇಕ್ಷತೆ ಮೆರೆಯುತ್ತಿರೆ
ಜಗವೆಲ್ಲವು ಐನ್‌ಸ್ಟೈನರ ದಿವ್ಯಾತ್ಮವ ನುತಿಸುತ್ತಿರೆ
ಅವರೆಲ್ಲಿಹರೆಂಬುದನರಿಯಲು ದೇಶವ ತಡಕಾಡಿದೆ
ಹಿರೋಶಿಮದ ಬೆಂಕಿಯ ನಂದಿಸುತಿರ್ದುದ ಕಂಡೆ

ಮಂಗಳೂರು ವಿಶ್ವವಿದ್ಯಾಲಯದ ಭೌತ ವಿಜ್ಞಾನ ಶಿಕ್ಷಕರ ಸಂಘ ಆ ವರ್ಷದುದ್ದಕ್ಕೂ ಹಮ್ಮಿಕೊಂಡ ಕಾರ್ಯಕ್ರಮಗಳು ಹಲವು. ಭೌತ ವಿಜ್ಞಾನ ವರ್ಷಾಚರಣೆಯ ಸಮಾರೋಪ ಸಮಾರಂಭ ನಡೆದದ್ದು ಪುತ್ತೂರಿನಲ್ಲಿರುವ ನಮ್ಮ ವಿವೇಕಾನಂದ ಕಾಲೇಜಿನಲ್ಲಿ. ಮುಖ್ಯ ಅತಿಥಿಗಳಾಗಿ ಜಿಟಿಎನ್ ಬಂದರು. ಅವರು ಕೇವಲ ಬಂದದ್ದಲ್ಲ, ಮೋಡಿ ಮಾಡಿ ಹೋದರು. ಅಂದು ಅವರದು ಎರಡೂವರೆ ಗಂಟೆಗಳ ಸುದೀರ್ಘ ಉಪನ್ಯಾಸ. ತುಂಬಿದ ಸಭಾಸದರಿಗೆ ಅವಿಸ್ಮರಣೀಯ ಅನುಭವ.

ನಿಸ್ಸಂಶಯವಾಗಿಯೂ ಜಿಟಿಎನ್ ನಮ್ಮ ಕಾಲದ ಉತ್ಕೃಷ್ಟ ವಿಜ್ಞಾನ ಉಪನ್ಯಾಸಕರಲ್ಲೊಬ್ಬರು. ದಕ್ಷಿಣಕನ್ನಡದ ಕಾಲೇಜುಗಳಲ್ಲಿ ಪ್ರತಿವರ್ಷ ಅವರ ತಿರುಗಾಟವಿರುತ್ತಿತ್ತು. ಇಂದಿನ ಎಲ್‌ಸಿಡಿಯ ಜಂಜಾಟವಿಲ್ಲದೇ ಕರಿಹಲಗೆ ಮೇಲೆ ಗಣಿತ ಸಮೀಕರಣ, ಅಗತ್ಯ ಚಿತ್ರಗಳನ್ನು ಬರೆಯುತ್ತ ಮಾತಿನ ಮೋಡಿಯಲ್ಲಿ ಸಭೆಯನ್ನು ಹಿಡಿದಿಡುತ್ತಿದ್ದ ಬಗೆಯೇ ಅದ್ಭುತ.

ವಿದ್ಯಾರ್ಥಿ ಸಮುದಾಯವನ್ನು ಹೆಚ್ಚಾಗಿ ಅವರು ಸಂಬೋಧಿಸುತ್ತಿದ್ದುದು ವಿಕಿರಣಪಟು ವಜ್ರದೇಹೀಗಳೇ .. ಮಕ್ಕಳಿಗೋ ಗಡಿಬಿಡಿ. ಅಪ್ಪಟ ಕನ್ನಡದಲ್ಲಿ  ಅದೂ ವಿಜ್ಞಾನವನ್ನು  ಈ ಬಗೆಯಲ್ಲಿ ಸುಂದರವಾಗಿ ಹೇಳುವುದಕ್ಕೆ ಬರುತ್ತದೆಯೇ!

ಕನ್ನಡ ಯಾವುದಕ್ಕೂ ಬಿಟ್ಟಿಲ್ಲ. ನಮಗೆ ಮಾತ್ರ ಬಳಸುವುದಕ್ಕೆ ಗೊತ್ತಿಲ್ಲ ಇದು ಜಿಟಿಎನ್ ನಿರೂಪಿಸಿದ ಸತ್ಯವಾಗಿತ್ತು.

ಒಮ್ಮೆ ನಮ್ಮ ಕಾಲೇಜಿನಲ್ಲಿ ಅವರು ಉಪನ್ಯಾಸ ನೀಡಿ ಹೊರಗೆ ಬಯಲಿಗೆ ಬಂದಾಗ ಎನ್‌ಸಿಸಿ ಸಮವಸ್ತ್ರದಲ್ಲಿದ್ದ ವಿದ್ಯಾರ್ಥಿಯೊಬ್ಬ ಎದುರಾದ. ಒಂದು ಕಾಲದಲ್ಲಿ ಸ್ವತ: ಎನ್‌ಸಿಸಿ ಅಧಿಕಾರಿ  ಮೇಜರ್ – ಆಗಿದ್ದ ಜಿಟಿಎನ್ ಜಾಗೃತರಾದರು. ಕಾಲು ಜೋಡಿಸಿ, ಎದೆಯುಬ್ಬಿಸಿ ಸೆಲ್ಯೂಟ್ ಹೊಡೆದೇ ಬಿಟ್ಟರು. ಅವನಿಗೋ ಕಕ್ಕಾಬಿಕ್ಕಿ. ಸಾವರಿಸಿಕೊಂಡು ಅಷ್ಟೇ ವೇಗದಲ್ಲಿ ಸೆಲ್ಯೂಟ್ ಹೊಡೆದು ಭೇಷ್ ಗಿಟ್ಟಿಸಿಕೊಂಡ. ಈ ಬಗೆಯ ರಸ ಸನ್ನಿವೇಶಗಳು ಹಲವು.

ಇಂಥ ಜಿಟಿಎನ್ ಅವರನ್ನು ಇತ್ತೀಚೆಗೆ ಮತ್ತೆ ಕಂಡ೦ತಾಯಿತು. ಅದು ನಡೆದದ್ದು ಹೀಗೆ.

ಕೆಲವು ದಿನಗಳ ಹಿಂದೆ ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಏರ್ಪಡಿಸಿದ ಪ್ರಾಯೋಗಿಕ ಭೌತ ವಿಜ್ಞಾನ ಕಾರ್ಯಾಗಾರದಲ್ಲಿ ನಾವು ಹಲವರು ಭಾಗಿಯಾಗಿದ್ದೆವು. ನಮಗೆ ತರಬೇತಿ ನೀಡಿದ ತಂಡದ ನಿರ್ದೇಶಕರಾಗಿದ್ದವರು ಪ್ರೊಫೆಸರ್. ಆರ್.ಶ್ರೀನಿವಾಸನ್, ೭೮ರ ಹರೆಯದ ಹಿರಿಯ ವಿಜ್ಞಾನಿ, ಚೆನ್ನೈ IIT ಯ ನಿವೃತ್ತ ನಿರ್ದೇಶಕರು. ಸದ್ಯ ಮೈಸೂರಿನಲ್ಲಿ ಅವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಜಿಟಿಎನ್ ಜತೆ ಶ್ರೀನಿವಾಸನ್ ಮನೆಗೆ ನಾನು ಹೋಗಿದ್ದೆ. ವಿಜ್ಞಾನ, ಸಂಗೀತಗಳ ಸುತ್ತ ಆ ಹಿರಿಯರಿಬ್ಬರ ಸಂಭಾಷಣೆ ಸುತ್ತುತ್ತಿದ್ದಾಗ ನಾನು ಮೂಕ ಪ್ರೇಕ್ಷಕನಾಗಿದ್ದೆ.

ಜಿಟಿಎನ್ ಬಗ್ಗೆ ಕೇಳಿದಾಗ, ಶ್ರೀನಿವಾಸನ್ ಹೇಳಿದರು ಅವರೊಬ್ಬ ಸಜ್ಜನ ಹಿರಿಯ ಚೇತನ.

ಶ್ರೀನಿವಾಸನ್ ಅವರಿಗೂ ಜಿಟಿಎನ್ ಅವರಂತೆ ಅಗಾಧ ನೆನಪಿನ ಶಕ್ತಿ. ಭೌತ ವಿಜ್ಞಾನದ ಯಾವುದೇ ವಿಭಾಗದ ಕ್ಲಿಷ್ಟ ಪರಿಕಲ್ಪನೆಗಳ ತಳವನ್ನು ಮುಟ್ಟಿ ವಿವರಿಸುವ ಬಗೆ ಒಂದು ಬೆರಗಿನ ಅನುಭವ. ಅವರೊಬ್ಬ ಆದರ್ಶ ಪ್ರಾಧ್ಯಾಪಕ. ಆ ಹಿರಿಯ ಚೇತನದ ಅಗಾಧ ಜೀವನೋತ್ಸಾಹ ಕಂಡ ನಮಗೆ ಅಚ್ಚರಿ. ನಿಮ್ಮ ಆರೋಗ್ಯದ ಗುಟ್ಟೇನು? ಎಂಬ ಪ್ರಶ್ನೆಗೆ, ಅವರು ಉತ್ತರಿಸಿದರು- ಹಿತಮಿತ ಆಹಾರ. ಸದಾ ಬೌದ್ಧಿಕ ಕೆಲಸಗಳಲ್ಲಿ ತೊಡಗುವುದು. ಸೋಮಾರಿಯ ಮನ ದೆವ್ವದ ಮನೆ! ಆ ಹಿರಿಯರಲ್ಲಿ ಮರೆಯಾದ ಜಿಟಿಎನ್ ಅವರನ್ನು ಮತ್ತೆ ಕಂಡತಾಯಿತು.

ಜಿಟಿಎನ್ ಇಂದು ಇಲ್ಲ. ಆದರೆ ಅವರ ನೆನಪು ಹಸಿರಾಗಿರಲಿ;  ನಮ್ಮ ಬದುಕಿಗೆ ನಿಜ ಮೌಲ್ಯದ ದಾರಿ ತೋರಲಿ.